Tag: General Elections 2024

  • ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಅಶೋಕ್ ಪರೋಕ್ಷ ವಿರೋಧ

    ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಅಶೋಕ್ ಪರೋಕ್ಷ ವಿರೋಧ

    ಬೆಂಗಳೂರು: ನಗರದ ಉತ್ತರ ಕ್ಷೇತ್ರದಿಂದ (Bengaluru North) ಶೋಭಾ ಕರಂದ್ಲಾಜೆ (Shobha Karandlaje) ಸ್ಪರ್ಧೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ನಾವು ಹೇಳಿದ್ದು ನಿಜ. ಅವರನ್ನ ಭೇಟಿಯಾಗಿ, ನೀವೇ ನಿಂತುಕೊಳ್ಳಬೇಕು ಎಂದು ಕೇಳಿದ್ದೇವೆ. ಈಗಲೂ ನಾವು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದೇವೆ. ಉಳಿದದ್ದು ಕೇಂದ್ರ ಹಾಗೂ ದೇವರಿಗೆ ಬಿಟ್ಟಿದ್ದು. ಈಗಲೂ ನಾವು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದೇವೆ. ನಾವು ಕೇಂದ್ರದ ನಾಯಕರ ಜೊತೆ ಮಾತಾಡ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರು ಕೋಮುಭಾವನೆ ಸೃಷ್ಟಿಸೋಕೆ ಸಿಎಎ ವಿರೋಧ ಮಾಡ್ತಿದ್ದಾರೆ: ಆರ್.ಅಶೋಕ್

    ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಬರುವ ವಿಚಾರಕ್ಕೆ ಸ್ಥಳೀಯ ಶಾಸಕರ ವಿರೋಧ ಇದೆ. ಹೊರಗಿನವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಬೆಂಗಳೂರು ಉತ್ತರದ ಶಾಸಕರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಅದನ್ನು ಹೇಳ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.

    ಸೋಮಣ್ಣ, ರೇಣುಕಾಚಾರ್ಯ, ಪ್ರತಾಪ್ ಸಿಂಹ ಹೇಳಿಕೆ ವಿಚಾರ ಮತ್ತು ಟಿಕೆಟ್ ತಪ್ಪಿದರೆ ಬಿಜೆಪಿಗೆ ಒಳ ಏಟು ಆಗುತ್ತಾ? ಎಂಬ ಪ್ರಶ್ನೆಗೆ, ಮೋದಿ ಅಲೆಯಲ್ಲಿ, ಬಿಜೆಪಿ ಅಲೆಯಲ್ಲಿ ಯಾವುದೇ ಒಳ ಏಟು ವರ್ಕ್ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

  • ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್: ಬಿಎಸ್‍ವೈ

    ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್: ಬಿಎಸ್‍ವೈ

    ಬೆಂಗಳೂರು: ದೆಹಲಿಯಲ್ಲಿ ಇಂದು ಕರ್ನಾಟಕ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ ಎಂದು ಬಿಜೆಪಿ (BJP) ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ.

    ದೆಹಲಿಗೆ ತೆರಳುವ ಮುನ್ನ ಡಾಲರ್ಸ್ ಕಾಲೋನಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ದೆಹಲಿಯಲ್ಲೇ ಇದ್ದಾರೆ. ಇವತ್ತು ಚರ್ಚೆ ಮಾಡಿ, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ. 28ಕ್ಕೆ 28 ಸ್ಥಾನ ಗೆಲ್ಲುವ ಗುರಿ ಇದೆ. 25 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಚ ಗ್ಯಾರಂಟಿ ಕುರಿತು ‘ಭಾಗ್ಯರಾಜ ನಮ್ಮ ಮುಖ್ಯಮಂತ್ರಿ’ ಸಾಂಗ್ ರಿಲೀಸ್

    ಇದೇ ವೇಳೆ, ಮೈಸೂರು ಲೋಕಸಭಾ ಅಭ್ಯರ್ಥಿ ವಿಚಾರದಲ್ಲಿ ಯದುವೀರ್ ಸಂಪರ್ಕ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆ ರೀತಿಯ ವಿಚಾರ ಇದ್ದರೆ, ನಾನು ಇಲ್ಲಿ ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ.

    ಹಾಲಿ ಎಂಪಿಗಳಿಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಆ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಇನ್ನೊಂದೆಡೆ ಮೋದಿ (Narendra Modi) ಅವರ ರಾಜ್ಯ ಪ್ರವಾಸವೂ ಫಿಕ್ಸ್ ಆಗಿದೆ. ಶಿವಮೊಗ್ಗಕ್ಕೂ ಅವರು ಬರಲಿದ್ದಾರೆ. ಎಲ್ಲ ಕಡೆ ಹೆಚ್ಚು ಜನ ಸೇರಿಸಬೇಕು, ಸೇರಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ, ಯದುವೀರ್ ಜೊತೆಗೆ ಮೂರನೇ ಎಂಟ್ರಿಗೆ ಬಿಜೆಪಿ ಹೈಕಮಾಂಡ್ ಸರ್ವೇ!

  • ಸಂವಿಧಾನ ಬದಲಾವಣೆ ಮಾಡಿದ್ರೆ ದೇಶದಲ್ಲಿ ರಕ್ತಪಾತವಾಗುತ್ತದೆ: ಸಿಎಂ ಎಚ್ಚರಿಕೆ

    ಸಂವಿಧಾನ ಬದಲಾವಣೆ ಮಾಡಿದ್ರೆ ದೇಶದಲ್ಲಿ ರಕ್ತಪಾತವಾಗುತ್ತದೆ: ಸಿಎಂ ಎಚ್ಚರಿಕೆ

    ಬೆಂಗಳೂರು: ಸಂವಿಧಾನ (Constitution of India) ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅನಂತ್ ಕುಮಾರ್ ಹೆಗಡೆಯವರ (Anantkumar Hegde) ಸಂವಿಧಾನ ತಿದ್ದುಪಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆ ಮೊದಲ ಬಾರಿಯಲ್ಲ. ಈ ಹಿಂದೆ ಮಂತ್ರಿಯಾಗಿದ್ದಾಗಲೂ ಇದನ್ನೇ ಹೇಳಿದ್ದರು. ಮೋದಿ ಪ್ರಧಾನಿಯಾಗಿದ್ದಾಗಲೇ ಅವರು ಹೇಳಿದ್ದರು. ಮೋದಿಯವರು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿಲ್ಲ. ಇದು ಬಿಜೆಪಿಯವರ ಹಿಡನ್ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: SBIಗೆ ಹಿನ್ನಡೆ- ನಾಳೆಯೊಳಗೆ ಚುನಾವಣಾ ಬಾಂಡ್ ಮಾಹಿತಿ ನೀಡಲು ಸುಪ್ರೀಂ ಸೂಚನೆ

    ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವುದು ಬಿಜೆಪಿಗರ ಹಿಡನ್ ಅಜೆಂಡಾ. ಸಂವಿಧಾನಕ್ಕೆ ಅನಗತ್ಯ ವಿಚಾರಗಳನ್ನ ಸೇರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಸಂವಿಧಾನ ಬದಲಾವಣೆ ಮಾಡಬೇಕು, ಇದಕ್ಕಾಗಿ 2/3 ಬಹುಮತ ಬೇಕು ಎಂದಿದ್ದಾರೆ. ದೇಶ ಉದ್ದಾರಕ್ಕೆ, ಬಡವರ ಉದ್ದಾರಕ್ಕೆ ಅಲ್ಲ. ಸಂವಿಧಾನ ಬದಲಾವಣೆಗಾಗಿ 2/3 ಬಹುಮತ ಕೇಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

    ಮನುವಾದವನ್ನು ಸಮರ್ಥನೆ ಮಾಡಿಕೊಳ್ಳೋದು, ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎನ್ನುವುದು ಇವರ ಹಿಡನ್ ಅಜೆಂಡಾ. ಅದಕ್ಕೆ ಇಡೀ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಎಲ್ಲರೂ ಇದನ್ನ ವಿರೋಧ ಮಾಡ್ತಾರೆ. ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ಹೆಗಡೆ ಮೂಲಕ ಇದನ್ನು ಹೇಳಿಸುತ್ತಿದ್ದಾರೆ. ಒಂದು ವೇಳೆ ಸಂವಿಧಾನ ಬದಲಾವಣೆಯ ಕೆಲಸವಾದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

    ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಎಂಬ ಬಿಜೆಪಿ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂತ್ರಿ ಮಂಡಲದಲ್ಲಿದ್ದುಕೊಂಡು ಅದು ವೈಯಕ್ತಿಕ ಹೇಳಿಕೆ ಆಗುತ್ತಾ? ಸರ್ಕಾರ ಎಂದರೆ ಅದು ಪಕ್ಷದ ಹೇಳಿಕೆ. ಈಗ ಸಿಟ್ಟಿಂಗ್ ಎಂಪಿ, ಅವರು ಸ್ಟೇಟ್ಮೆಂಟ್ ಕೊಡ್ತಾರೆ ಅಂದ್ರೆ ಏನು? ಅವರು ಸಿನೀಯರ್ ಸಂಸದರು. ನಮ್ಗೂ ಅದಕ್ಕೂ ಸಂಬಂಧವಿಲ್ಲ ಅಂದ್ರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

    ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ. ಸರ್ವಾಧಿಕಾರಿ ವ್ಯವಸ್ಥೆ ತರಬೇಕು ಎನ್ನುವುದು ಅವರ ಉದ್ದೇಶ. ಸಂವಿಧಾನ ಸಮಸಮಾಜವನ್ನು ಬಯಸುತ್ತದೆ. ಅವಕಾಶ ವಂಚಿತರಿಗೆ ನ್ಯಾಯ ಒದಗಿಸುತ್ತೆ. ನಮ್ಮ ಸಂವಿಧಾನಲ್ಲಿ ಸಮಾನತೆ, ಸ್ವಾತಂತ್ರ್ಯ, ಭ್ರ್ರಾತೃತ್ವ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 28ಕ್ಕೆ 28 ಗೆಲ್ಲುವ ಗುರಿ ಇದ್ದು 28ಕ್ಕೆ 25 ಗೆದ್ದೇ ಗೆಲ್ತೀವಿ: ಬಿಎಸ್‍ವೈ

  • ಮೋದಿ ಕರ್ನಾಟಕ ಪ್ರವಾಸಕ್ಕೆ ಡೇಟ್ ಫಿಕ್ಸ್ – ಈ 12 ಕ್ಷೇತ್ರಗಳೇ ಟಾರ್ಗೆಟ್

    ಮೋದಿ ಕರ್ನಾಟಕ ಪ್ರವಾಸಕ್ಕೆ ಡೇಟ್ ಫಿಕ್ಸ್ – ಈ 12 ಕ್ಷೇತ್ರಗಳೇ ಟಾರ್ಗೆಟ್

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Elections 2024) ಅಭ್ಯರ್ಥಿಗಳ ಪಟ್ಟಿ (Lok Sabha Candidates) ಪ್ರಕಟ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡನೇ ಹಂತದ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಕರ್ನಾಟಕ ಸೇರಿದಂತೆ ದಕ್ಷಿಣದ ಪಂಚ ರಾಜ್ಯಗಳಲ್ಲಿ ಪ್ರಧಾನಿ ಪ್ರವಾಸ ಕೈಗೊಳ್ಳಲಿದ್ದಾರೆ.

    ಮಾರ್ಚ್ 15 ರಿಂದ 19 ರವರೆಗೆ ದಕ್ಷಿಣದ 5 ರಾಜ್ಯಗಳಲ್ಲಿ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರವಾಸ ನಡೆಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಲು ಮೋದಿ ತಂತ್ರ ಹೆಣೆದಿದ್ದಾರೆ. ಇದನ್ನೂ ಓದಿ: 28ಕ್ಕೆ 28 ಗೆಲ್ಲುವ ಗುರಿ ಇದ್ದು 28ಕ್ಕೆ 25 ಗೆದ್ದೇ ಗೆಲ್ತೀವಿ: ಬಿಎಸ್‍ವೈ

    ಮಾ.15 ರಂದು ಕೋಲಾರಕ್ಕೆ ಭೇಟಿ ನೀಡಲಿದ್ದು ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಫೋಕಸ್ ಮಾಡಲಿದ್ದಾರೆ. ಮಾ.17 ರಂದು ಶಿವಮೊಗ್ಗ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಬಗ್ಗೆ ವಿಶೇಷ ಗಮನ ನೀಡಲಿದ್ದಾರೆ. ಮಾ.18 ರಂದು ಬೀದರ್ ಹಾಗೂ ಕಲಬುರಗಿ ಮತ್ತು ಮಾ.19 ರಂದು ಧಾರವಾಡಕ್ಕೆ ಭೇಟಿ ನೀಡಲಿದ್ದು, ಬೆಳಗಾವಿ, ಹಾವೇರಿ ಜಿಲ್ಲೆಗಳ ಮೇಲೆ ಫೋಕಸ್ ಮಾಡಲಿದ್ದಾರೆ. ಈ ವೇಳೆ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಅರುಣ್ ಗೋಯೆಲ್ ದಿಢೀರ್‌ ರಾಜೀನಾಮೆಗೆ ಕಾರಣವೇನು?

  • ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ

    ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ

    – ಮಾಧುಸ್ವಾಮಿ ಅಭಿಮಾನಿಯಿಂದ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ

    ತುಮಕೂರು: ಮಾಜಿ ಸಚಿವ ವಿ.ಸೋಮಣ್ಣಗೆ (V.Somanna) ಟಿಕೆಟ್ ಕೊಡದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಬಿಜೆಪಿ (BJP) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

    ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್‍ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತುಮಕೂರು ಜಿಲ್ಲೆಗೆ ವಿ.ಸೋಮಣ್ಣಗೆ ಕೊಡುಗೆ ಏನೂ ಇಲ್ಲ. ಇದೇ ಕಾರಣಕ್ಕೆ ಸೋಮಣ್ಣಗೆ ಟಿಕೆಟ್ ಕೊಡಬಾರದು. ಸೋಮಣ್ಣ ಬದಲು ಜೆ.ಸಿ ಮಾಧುಸ್ವಾಮಿಗೆ (J.C. Madhu Swamy) ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿ ರಸ್ತೆ ತಡೆದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ: ಟಿಎಂಸಿ ನಾಯಕ ಟೀಕೆ

    ಕ್ಷೇತ್ರಕ್ಕೆ ವಲಸೆ ಬರುವ ವಿ.ಸೋಮಣ್ಣಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಅವರು ಬಂದರೆ ತುಮಕೂರು ಜಿಲ್ಲೆಗೆ ಗ್ರಹಣ ಹಿಡಿಯುತ್ತದೆ. ಸೋಮಣ್ಣ ರಾಜಕೀಯ ಆಕ್ರಮಣ ಮಾಡುತ್ತಾರೆ. ಇದರಿಂದ ಜಿಲ್ಲೆಯ ಜನ ವನವಾಸ ಬೀಳಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಸಂಸದ ಜಿ.ಎಸ್ ಬಸವರಾಜು ಅವರಿಗೆ ಧಿಕ್ಕಾರ ಕೂಗಿ, ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗಿದ್ದಾರೆ. ಕೆ.ಬಿ.ಕ್ರಾಸ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸೋಮಣ್ಣ ಅವರಿಗೆ ಟಿಕೆಟ್ ಕೊಡದಂತೆ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ಮಾಧುಸ್ವಾಮಿ ಅಭಿಮಾನಿಯೊಬ್ಬ, ಅವರಿಗೆ ಟಿಕೆಟ್ ಕೊಡುವಂತೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ ಸೃಷ್ಟಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ; ಕ್ಷೇತ್ರಕ್ಕೆ ಬನ್ನಿ ಎಂಬ ಒತ್ತಾಯ ತಿರಸ್ಕರಿಸಿದ ಹೆಚ್ಡಿಕೆ, ನಿಖಿಲ್

  • ಸುಧಾಕರ್, ರಕ್ಷಾರಾಮಯ್ಯ ಚಿಕ್ಕಬಳ್ಳಾಪುರದ ಎಂಪಿ ಆಗಲಿ- ಅಭಿಮಾನಿಗಳಿಂದ ಹರಕೆ

    ಸುಧಾಕರ್, ರಕ್ಷಾರಾಮಯ್ಯ ಚಿಕ್ಕಬಳ್ಳಾಪುರದ ಎಂಪಿ ಆಗಲಿ- ಅಭಿಮಾನಿಗಳಿಂದ ಹರಕೆ

    ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ.ಸುಧಾಕರ್ (K. Sudhakar) ಚಿಕ್ಕಬಳ್ಳಾಪುರ (Chikkaballapur) ಕ್ಷೇತ್ರದ ಸಂಸದರಾಗಲಿ ಎಂದು ಭೋಗನಂದೀಶ್ವರ ರಥೋತ್ಸವದಲ್ಲಿ ಅಭಿಮಾನಿಯೊಬ್ಬರು ಹರಕೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ರಕ್ಷಾರಾಮಯ್ಯ (Raksha Ramaiah) ಕ್ಷೇತ್ರದ ಎಂಪಿಯಾಗಲಿ ಎಂದು ಅವರ ಅಭಿಮಾನಿ ಸಹ ಹರಕೆ ಮಾಡಿಕೊಂಡಿದ್ದಾರೆ.

    &

    nbsp;

    ರಥೋತ್ಸವದಲ್ಲಿ ತೇರಿಗೆ ಸಮರ್ಪಿಸುವ ಬಾಳೆಹಣ್ಣಿನ ಮೇಲೆ ಡಾ.ಕೆ.ಸುಧಾಕರ್ ಎಂಪಿಯಾಗಲಿ ಎಂದು ಬರೆದು ರಥಕ್ಕೆ ಅರ್ಪಣೆ ಮಾಡಲಾಗಿದೆ. ಸುಧಾಕರ್ ಈ ಬಾರಿ ಬಿಜೆಪಿಯಿಂದ (BJP) ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೂ ತೇರಿಗೆ ಬಾಳೆಹಣ್ಣು ಸಮರ್ಪಣೆಯಲ್ಲಿ ಸುಧಾಕರ್ ಹಾಗೂ ರಕ್ಷಾರಾಮಯ್ಯ ಅಭಿಮಾನಿಗಳ ನಡುವೆ ಪೈಪೋಟಿ ನಡೆದಿದೆ.

    ಇತ್ತ ರಕ್ಷಾರಾಮಯ್ಯ ಅಭಿಮಾನಿಯಿಂದಲೂ ಹರಕೆ ಮಾಡಲಾಗಿದ್ದು, ಬಾಳೆಹಣ್ಣಿನ ಮೇಲೆ ರಕ್ಷಾರಾಮಯ್ಯ ಚಿಕ್ಕಬಳ್ಳಾಪುರ ಎಂಪಿ ಆಗಲಿ ಎಂದು ಬರೆದು ಸಮರ್ಪಣೆ ಮಾಡಿದ್ದಾರೆ. ರಕ್ಷಾರಾಮಯ್ಯ ಕಾಂಗ್ರೆಸ್ (Congress) ಪಕ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

  • ಟಿಕೆಟ್ ಘೋಷಣೆ ಆದಾಗ ಕ್ಷೇತ್ರದಲ್ಲಿ ಅಸಮಾಧಾನ ಸಹಜ: ಪರಮೇಶ್ವರ್

    ಟಿಕೆಟ್ ಘೋಷಣೆ ಆದಾಗ ಕ್ಷೇತ್ರದಲ್ಲಿ ಅಸಮಾಧಾನ ಸಹಜ: ಪರಮೇಶ್ವರ್

    – ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ

    ಬೆಂಗಳೂರು: 7 ಲೋಕಸಭಾ ಕ್ಷೇತ್ರಗಳಿಗೆ ಪಕ್ಷದಿಂದ (Congress) ಟಿಕೆಟ್ ಘೋಷಣೆ ಮಾಡಿರುವುದರಿಂದ ಕೆಲವು ಕಡೆ ಅಸಮಾಧಾನ ಸಹಜ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ತುಮಕೂರು (Tumakuru) ಗೆಲ್ಲೋ ಕ್ಷೇತ್ರ, ಗೆಲ್ಲುವ ಸಾಧ್ಯತೆ ಇದೆ. ಎಲ್ಲರೂ ಪ್ರಯತ್ನ ಮಾಡಬೇಕು. ಕೆಲವರು ನಮಗೆ ಬೇಕು ಎಂದು ಕೇಳಿದ್ದಾರೆ. ಕೆಲವರಲ್ಲಿ ಸ್ವಲ್ಪ ಅಸಮಾಧಾನ ಇರುತ್ತೆ. ಅದನ್ನೆಲ್ಲಾ ಸರಿಮಾಡಿಕೊಂಡು ಹೋಗಬೇಕು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮಾನ-ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಟೀಕೆ

    ಬಾಕಿ ಉಳಿದ ಕ್ಷೇತ್ರಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದೇ 11ಕ್ಕೆ ಎಲ್ಲಾ ಬಗೆಹರಿಸುತ್ತೇವೆ ಎಂದು ಅಧ್ಯಕ್ಷರೇ ಹೇಳಿದ್ದಾರೆ. ಅಸಮಾಧಾನಿತರನ್ನ ಕೂರಿಸಿಕೊಂಡು ಮನವೊಲಿಸುವ ಕೆಲಸ ಮಾಡುತ್ತೇವೆ. ಬಹಳ ಜನ ಆಕಾಂಕ್ಷಿಗಳಿದ್ದು, ಸ್ಕ್ರೀನಿಂಗ್ ಮಾಡಿ ಲಿಸ್ಟ್ ತೆಗೆದುಕೊಂಡು ಹೋಗಿದ್ದರು. ಹೈಕಮಾಂಡ್ ರೆಕಮಂಡ್ ಮಾಡಿ ಟಿಕೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆಯವರ ಸ್ಪರ್ಧೆ ವಿಚಾರ ನನಗೆ ಗೊತ್ತಿಲ್ಲ. ಅಂತಿಮವಾಗಿ ಅವರೇ ತೀರ್ಮಾನ ಮಾಡಬೇಕು. ಅವರು ಎಐಸಿಸಿ ಅಧ್ಯಕ್ಷರಿದ್ದಾರೆ, ತೀರ್ಮಾನ ಮಾಡ್ತಾರೆ. ಅವರ ಸ್ಪರ್ಧೆ ಬಗ್ಗೆ ನಾವು ಹೇಳೋಕೆ ಆಗಲ್ಲ. ದಲಿತ ಸಮುದಾಯಕ್ಕೆ ಬೇರೆ ಕ್ಷೇತ್ರ ಕೇಳಿರೋದು ಗೊತ್ತಿಲ್ಲ. ಆ ರೀತಿಯ ಪ್ರಪೋಸಲ್‌ ಇಲ್ಲ ಎಂದಿದ್ದಾರೆ.

    ಇನ್ನೂ ಜಾತಿ ಜನಗಣತಿ ಬಿಡುಗಡೆ ಆಗಿಲ್ಲ. ಈಗ ಸ್ಥಿರವಾದ ಸರ್ಕಾರವಿದೆ. ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ದಲಿತ ಸಿಎಂ ಅಪ್ರಸ್ತುತ ವಿಚಾರವಾಗಿದೆ. ಸದ್ಯಕ್ಕೆ ಇದರ ಬಗ್ಗೆ ಚರ್ಚೆ ಮಾಡದೇ ಇರೋದೇ ಸೂಕ್ತ. ಹೆಚ್ಚಿನ ಸೀಟು ಗೆಲ್ಲೋಕೆ ನಾವು ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟು ಬರಲಿದೆ. ಆಡಳಿತ ನಡೆಸಲು ಸುಗಮವಾಗಲಿದೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ. ಮತ ಹಾಕಿಸಿಕೊಳ್ಳಲು ಮನವೊಲಿಕೆ ಮಾಡ್ತಾರೆ ಅಂತಾ ಒಬ್ರು ಹೇಳ್ತಾರೆ. ಇನ್ನೊಬ್ರು ಈಗ್ಯಾಕೆ ಅದೆಲ್ಲಾ ಅಂತಾರೆ. ಚರ್ಚೆಗೆ ಬಿಟ್ಟರೆ ಒಬ್ಬೊಬ್ಬರು ಒಂದೊಂದು ಹೇಳ್ತಾರೆ. ಈಗ ದಲಿತ ಸಿಎಂ ಅಪ್ರಸ್ತುತ ಅನ್ನೋದು ನನ್ನ ಅನಿಸಿಕೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೇವರ ಹುಂಡಿಗೆ ಹಣ ಹಾಕುವುದು ಅಸಹ್ಯಕರ: ಸಾಹಿತಿ ಕುಂ.ವೀರಭದ್ರಪ್ಪ

  • ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ವಿಜಯೇಂದ್ರ

    ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ವಿಜಯೇಂದ್ರ

    ಬೆಂಗಳೂರು: ರಾಜ್ಯದಲ್ಲಿ ಈಗ ಎಲ್ಲಾ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ವಾತಾವರಣ ಇದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra) ಹೇಳಿದ್ದಾರೆ.

    ನಗರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯೇ ಉತ್ತಮ ಮತ್ತು ನರೇಂದ್ರ ಮೋದಿಯವರ ಸರ್ಕಾರ ಬೇಕೆಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆ ಎಂದರು. ಇದನ್ನೂ ಓದಿ: ಹಾಲಿ ಸಂಸದರಿಗೆ ಟಿಕೆಟ್ ಇಲ್ಲವೆಂದು ಮೋದಿ, ಅಮಿತ್ ಶಾ ಹೇಳಿಲ್ಲ: ಶೋಭಾ ಕರಂದ್ಲಾಜೆ

    28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಅಭ್ಯರ್ಥಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಇವತ್ತು, ನಾಳೆಯೊಳಗೆ ಎಲ್ಲವೂ ಅಂತಿಮವಾಗಲಿದೆ. 22, 23, 24 ಕ್ಷೇತ್ರ ಗೆಲುವಿನ ಪ್ರಶ್ನೆ ಅಲ್ಲ. ಹೊಸ ಇತಿಹಾಸವನ್ನು ಬಿಜೆಪಿ ರಾಜ್ಯದಲ್ಲಿ ಸೃಷ್ಟಿಸಲಿದೆ ಎಂದು ರಾಜ್ಯಾಧ್ಯಕ್ಷನಾಗಿ ವಿಶ್ವಾಸ ಹೊಂದಿದ್ದೇನೆ. ಹಿಂದೆ ಬಾರದಂಥ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಅವರು ಹೇಳಿದ್ದಾರೆ.

    ಅಭ್ಯರ್ಥಿಗಳ ವಿಚಾರ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲಾ ವಿವರ ಲಭಿಸಲಿದೆ. ಬಹುತೇಕ 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಎಲ್ಲರ ಪ್ರಶ್ನೆಗಳಿಗೆ ಮೂರ್ನಾಲ್ಕು ದಿನಗಳಲ್ಲಿ ಉತ್ತರ ಲಭಿಸಲಿದೆ ಎಂದಿದ್ದಾರೆ.

    ಡಿ.ಕೆ ಶಿವಕುಮಾರ್ (D.K Shivakumar) ನಡವಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಬೆಂಗಳೂರಿನಲ್ಲಿ 15- 20 ದಿನಗಳಿಂದ ನೀರಿನ ತೀವ್ರ ಸಮಸ್ಯೆ ಇದೆ. ಇದರ ನಡುವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ 14ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅದರ ಅರ್ಥ ಏನು? ಬೆಂಗಳೂರಿನಲ್ಲಿ ಮನುಷ್ಯರೇ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

  • ಹಾಲಿ ಸಂಸದರಿಗೆ ಟಿಕೆಟ್ ಇಲ್ಲವೆಂದು ಮೋದಿ, ಅಮಿತ್ ಶಾ ಹೇಳಿಲ್ಲ: ಶೋಭಾ ಕರಂದ್ಲಾಜೆ

    ಹಾಲಿ ಸಂಸದರಿಗೆ ಟಿಕೆಟ್ ಇಲ್ಲವೆಂದು ಮೋದಿ, ಅಮಿತ್ ಶಾ ಹೇಳಿಲ್ಲ: ಶೋಭಾ ಕರಂದ್ಲಾಜೆ

    -ನಮ್ಮವರು ವಿರೋಧ ಮಾಡಿದ್ದು ನನಗೆ ಅನುಕೂಲವಾಗಿದೆ

    ಬೆಳಗಾವಿ: ಯಾರಿಗೆ ಟಿಕೆಟ್ ಸಿಗುತ್ತೆ, ಸಿಗಲ್ಲ ಎಂಬುದು ನನಗೆ ಗೊತ್ತಿಲ್ಲ. ಈಗ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಲಿದೆ ಎಂದು ಪ್ರಧಾನಿ ಮೋದಿ (Narendra Modi), ಜೆ.ಪಿ ನಡ್ಡಾ ಹಾಗೂ ಅಮಿತ್ ಶಾ ಎಲ್ಲಿಯೂ ಹೇಳಿಲ್ಲ. ಈ ಸುದ್ದಿಗಳು ಊಹಾಪೋಹ ಎನಿಸುತ್ತದೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದ್ದು, ಆಗ ಸತ್ಯ ಹೊರಬರುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಗೆಲ್ಲುವ ಪಕ್ಷಕ್ಕೆ ಬಹಳಷ್ಟು ಜನರು ಟಿಕೆಟ್ ಕೇಳುವುದು ಸಹಜ. ಟಿಕೆಟ್ ಕೇಳುವುದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ. ನಮ್ಮ ಕೇಂದ್ರ ಚುನಾವಣಾ ಮಂಡಳಿಯಿದೆ. ಯಾರಿಗೆ ಎಲ್ಲಿಂದ ಟಿಕೆಟ್ ಕೊಡಬೇಕು? ಏಕೆ ಕೊಡಬೇಕು? ಅದರಿಂದಾಗುವ ಲಾಭಗಳ ಆಧಾರದ ಮೇಲೆ ಖಂಡಿತವಾಗಿ ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

    ಟಿಕೆಟ್ ತಪ್ಪಿಸಲು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೀತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ, ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲವಾಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ಹೇಳ್ತಾರೆ. ಶೋಭಾಗೆ ಏಕೆ ವಿರೋಧ ಮಾಡ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕ್ತಿದ್ದಾರೆ. ಆಗಲೇ ಸತ್ಯ ಗೊತ್ತಾಗೋದು, ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಗೊತ್ತಾಗುತ್ತವೆ. ನಾವೇನು ಮಾಡಿಲ್ಲ, ಏನನ್ನು ಮಾಡಬಾರದು ಎಂಬುದು ಇಂಥ ವರದಿ ಪಡೆಯುವುದರಿಂದ ಗೊತ್ತಾಗುತ್ತದೆ ಎಂದಿದ್ದಾರೆ.

    ಚುನಾವಣಾ (General Elections 2024 )ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗುವುದಿಲ್ಲ. ನಮ್ಮ ಹೈಕಮಾಂಡ್ ಬಗ್ಗೆ ನನಗೆ ನಂಬಿಕೆಯಿದೆ. ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ – ಕಲಬುರಗಿಗೆ ಆಗಮಿಸಿದ ಎನ್‌ಐಎ ತಂಡ

  • ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

    ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

    – ಸಿದ್ದರಾಮಯ್ಯ ಸರ್ಕಾರ ಭಯೋತ್ಪಾದಕರನ್ನು ರಕ್ಷಿಸುವ ಸರ್ಕಾರ

    ಬೆಳಗಾವಿ: ಬಿಜೆಪಿಗೆ (BJP) ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ (Shobha Karandlaje) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆದ ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು, ಇದು ನಮ್ಮ ಶಕ್ತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಮೋದಿಗಿರುವ ದೂರದೃಷ್ಟಿ, ವಿದೇಶದಲ್ಲಿರುವ ಭಾರತೀಯರಿಗೆ ಸಿಗುವ ಗೌರವದ ದೂರದೃಷ್ಟಿ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‍ಗೆ ಶಾಕ್ – ಮಾಜಿ ಕೇಂದ್ರ ಸಚಿವ ಸೇರಿ ಹಲವು ನಾಯಕರು ಬಿಜೆಪಿಗೆ

    ಈರುಳ್ಳಿ, ಟೊಮೆಟೊ ಸಲುವಾಗಿ ಸರ್ಕಾರ ಬಿದ್ದ ಉದಾಹರಣೆಗಳಿವೆ. ಅದಕ್ಕೆ ಖಾದ್ಯ ತೈಲ ಕಾಳು ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಸಬ್ಸಿಡಿ ಆಧಾರದ ಮೇಲೆ ರೈತರಿಗೆ ಬೀಜ, ಟೆಕ್ನಾಲಜಿ ನೀಡುತ್ತಿದ್ದೇವೆ. ಯುಪಿಎ ಸಮಯದಲ್ಲಿನ ಲೋಪಗಳ ಗುಂಡಿ ಮುಚ್ಚಿ, ಮೇಲೆದ್ದು ಬರಲು ನಮಗೆ ಸಮಯ ಬೇಕು. ಎಲ್ಲಾ ವಿಚಾರಗಳಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿ ಕಾರ್ಯ ಪ್ರವೃತ್ತರಾಗುತ್ತಿದ್ದಾರೆ. ಈ ಮೊದಲು ನಾವು ಡಿಫೆನ್ಸ್‍ನಲ್ಲಿ ಸ್ವಾವಲಂಬಿಗಳಾಗಿರಲಿಲ್ಲ. ಮದ್ದುಗುಂಡುಗಳು ಆಚೆಯಿಂದ ಬರುತ್ತಿತ್ತು. ಇವತ್ತು ಭಾರತ ಸ್ವಾವಲಂಬನೆ ಕಡೆಗೆ ದಾಪುಗಾಲಿಡುತ್ತಿದೆ. ಈಗ ನಾವು ಬೇರೆ ದೇಶಕ್ಕೆ ರಪ್ತು ಮಾಡಲು ಯೋಚನೆ ಮಾಡಿದ್ದೇವೆ ಎಂದಿದ್ದಾರೆ.

    ಚುನಾವಣೆ (General Elections 2024) ಸಂದರ್ಭದಲ್ಲಿ ಸಿಲಿಂಡರ್, ಪೆಟ್ರೊಲ್ ಬೆಲೆ ಇಳಿಕೆ ಮಾಡಿರುವ ಬಗ್ಗೆ ಮಾತನಾಡಿದ ಅವರು, ಬೆಲೆ ಇಳಿಕೆ ಹಾಗೂ ಚುನಾವಣೆಗೂ ಸಂಬಂಧವಿಲ್ಲ, ಗ್ಯಾಸ್, ಪೆಟ್ರೋಲ್‍ನಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿಯವರು ಯೋಜನೆ ರೂಪಿಸುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ಎಲ್ಲವನ್ನೂ ನಾವು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ವಿದೇಶಿ ಮಾರುಕಟ್ಟೆ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತದೆ ಎಂದಿದ್ದಾರೆ.

    ರಾಜ್ಯ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಸರ್ಕಾರವಾಗಿದೆ. ನಿಷೇಧಿತ ಸಂಘಟನೆ ಮುಖಂಡರೆಲ್ಲಾ ಮುಖ್ಯಮಂತ್ರಿ (Siddaramaiah) ಮತ್ತು ಗೃಹ ಸಚಿವರ ಮನೆಯಲ್ಲೇ ಇರುತ್ತಾರೆ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಕೂಡ ಪೊಲೀಸ್ ಇಲಾಖೆಗೆ ಸವಾಲಾಗಿದೆ. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಬೆಂಗಳೂರಿನ ಕ್ಯಾಂಟಿನ್‍ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳೇ ಇದಕ್ಕೆಲ್ಲಾ ಸಾಕ್ಷಿ. ಆದ್ದರಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ರಕ್ಷಣೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್‌ ಚೀನಾಗೆ ಠಕ್ಕರ್‌ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ