Tag: Gen. Manoj Mukund Naravane

  • ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ನವದೆಹಲಿ: ಸಂಸತ್ತಿನಿಂದ ಆದೇಶ ಕೊಟ್ಟರೆ ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಓಕೆ) ವಶಕ್ಕೆ ಪಡೆಯಲು ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಹೇಳಿದ್ದಾರೆ.

    ಆರ್ಮಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಿದೆ ಎಂಬುದು ಸಂಸತ್ತಿನ ನಿರ್ಣಯವಾಗಿದೆ. ಸಂಸತ್ತು ಬಯಸಿದರೆ ಆ ಪ್ರದೇಶವೂ (ಪಿಒಕೆ) ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ನಮ್ಮ ಸೈನ್ಯಕ್ಕೆ ಆದೇಶ ಸಿಕ್ಕರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಭಾರತೀಯ ಸೇನೆಯು ಮೊದಲಿಗಿಂತ ಈಗ ಉತ್ತಮವಾಗಿ ತಯಾರಾಗಿದೆ ಎಂದು ತಿಳಿಸಿದರು.

    ನಾವು ಭಾರತದ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡುತ್ತೇವೆ. ಸಂವಿಧಾನವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಹಾಗೂ ಎಲ್ಲಾ ಸಮಯದಲ್ಲೂ ಮಾರ್ಗದರ್ಶನ ನೀಡುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಿದಂತೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಅಧಿಕಾರಿಗಳಿಗೆ ಹಾಗೂ ಯೋಧರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

    ಭವಿಷ್ಯದ ಯುದ್ಧಗಳಿಗೆ ಸಶಸ್ತ್ರ ಪಡೆಗಳನ್ನು ಸಿದ್ಧಪಡಿಸುವುದು, ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ರಚಿಸುವುದನ್ನು ಸ್ವಾಗತಿಸುತ್ತೇನೆ ಎಂದ ಮನೋಜ್ ಮುಕುಂದ್ ನಾರವಾಣೆ ಅವರು, ಇದು ಏಕೀಕರಣದತ್ತ ಒಂದು ದೊಡ್ಡ ಹೆಜ್ಜೆ ಎಂದು ತಿಳಿಸಿದರು.

    ಚೀನಾ ಗಡಿಯಲ್ಲಿ ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಗಡಿಯಲ್ಲಿ ಸವಾಲುಗಳನ್ನು ಎದುರಿಸಲು ಸೈನ್ಯವು ಸಿದ್ಧವಾಗಿದೆ. ಸಿಯಾಚಿನ್ ನಮಗೆ ಬಹಳ ಮುಖ್ಯವಾಗಿದೆ. ಅಲ್ಲಿ ಒಂದು ತಂಡವು ಪಶ್ಚಿಮ ಮತ್ತು ಉತ್ತರ ಪ್ರದೇಶಗಳನ್ನು ನೋಡಿಕೊಳ್ಳುತ್ತದೆ. ಇದು ಆಯಕಟ್ಟಿನ ಮಹತ್ವದ್ದಾಗಿದೆ. ಅಲ್ಲಿಂದಲೇ ಒಡಂಬಡಿಕೆ ಸಂಭವಿಸಬಹುದು ಎಂದು ಹೇಳಿದರು.

    ಅಧಿಕಾರಿಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಜನರಲ್ ನಾರವಾಣೆ, ಅಧಿಕಾರಿಗಳ ಕೊರತೆ ಇದೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸುವ ಜನರ ಕೊರತೆ ಅಲ್ಲ. ನಾವು ಅಧಿಕಾರಿಗಳನ್ನು ಆಯ್ಕೆ ಮಾಡುವ ಮಾನದಂಡಗಳನ್ನು ಕಡಿಮೆ ಮಾಡಿಲ್ಲ ಎಂದರು.