Tag: Geeta Shivrajkumar

  • ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ

    ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ

    ಮಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೋಮವಾರ(ಇಂದು) ಮಂಗಳೂರಿಗೆ ಬಂದಿದ್ದರು. ದೇವಸ್ಥಾನವೊಂದರ ದರ್ಶನಕ್ಕೆ ಬಂದಿದ್ದ ಶಿವಣ್ಣ ಮಂಗಳೂರು ನಗರ ಪೊಲೀಸರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ನಗರದ ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿವಣ್ಣ ಎಂಟ್ರಿಯಾಗುತ್ತಿದ್ದಂತೆ ‘ಟಗರು’ ಸಿನಿಮಾದ ಹಾಡಿನ ಮೂಲಕ ಶಿವಣ್ಣ ಅವರನ್ನು ಮಂಗಳೂರು ಪೊಲೀಸರು ಸ್ವಾಗತಿಸಿದರು. ಶಿವಣ್ಣನಿಗೆ ಪತ್ನಿ ಗೀತಾ ಶಿವರಾಜ್‍ಕುಮಾರ್ ಸಾಥ್ ನೀಡಿದರು. ಸಂವಾದಕ್ಕೂ ಮೊದಲು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ಅಪ್ಪು ನೆನಪು ಮಾಡಿಕೊಂಡ ಶಿವಣ್ಣ ಭಾವುಕರಾದರು. ಬಳಿಕ ಪುನೀತ್ ಬಗ್ಗೆ ನೋವಿನ ನೆನಪು ಮಾಡಿಕೊಳ್ಳುವುದಕ್ಕಿಂತ ಅಪ್ಪುನ ಸೆಲೆಬ್ರೇಟ್ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ನೇತ್ರತ್ವದಲ್ಲಿ ಚುನಾವಣೆ: ನಳಿನ್ 

    ಬಳಿಕ ನಡೆದ ಸಂವಾದದಲ್ಲಿ ಪೊಲೀಸರ ಪ್ರಶ್ನೆಗಳಿಗೆ ಶಿವರಾಜ್‍ಕುಮಾರ್ ಉತ್ತರ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದಾಗ, ಪೊಲೀಸ್ ಪಾತ್ರದಲ್ಲಿ ‘ಟಗರು-2’ ಸಿನಿಮಾ ಮೂಲಕ ನಾನು ಕಾಣಿಸಿಕೊಳ್ಳಬಹುದು ಎಂದು ಹೇಳಿದರು. ಈ ಮೂಲಕ ಅಭಿಮಾನಿಗಳಿಗೆ ‘ಟಗರು-2’ ಸಿನಿಮಾ ಬರುವ ಸುಳಿವು ನೀಡಿದರು. ಕರಾವಳಿ ಜಿಲ್ಲೆಯ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ದಿನಗಳನ್ನು ಮೆಲುಕು ಹಾಕಿದ ಶಿವಣ್ಣ ಮಂಗಳೂರು ನನ್ನ ಫೇವರೇಟ್ ಸ್ಥಳಗಳಲ್ಲಿ ಒಂದು ಎಂದು ಹೇಳಿದರು.

    ಅಪ್ಪುವನ್ನು ನೆನೆದ ಶಿವರಾಜ್‍ಕುಮಾರ್ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡನ್ನು ಹಾಡಿದರು. ಈ ನಡುವೆ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಶಿವಣ್ಣ ಸಮ್ಮುಖದಲ್ಲಿ ‘ಟಗರು ಬಂತು ಟಗರು’ ಹಾಡನ್ನು ಎನರ್ಜಿಟಿಕ್ ಆಗಿ ಹಾಡಿದ್ರು. ಕಮೀಷನರ್ ಹಾಡು ಹಾಡುತ್ತಿದ್ದಂತೆ ಶಿವಣ್ಣ ಅದೇ ಹಾಡಿಗೆ ಸಖತ್ ಸ್ಟೆಪ್ ಸಹ ಹಾಕಿದರು. ಸಂವಾದದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಹ ಜೊತೆಯಾಗಿ ಸ್ಟೆಪ್ ಹಾಕಿದರು. ಇದನ್ನೂ ಓದಿ: ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ 

    ಹಾಡು ಹಾಡಿ, ಡ್ಯಾನ್ಸ್ ಮಾಡಿ ಶಿವಣ್ನ ಖಾಕಿಯನ್ನು ರಂಜಿಸಿದರು. ಒಟ್ಟಿನಲ್ಲಿ ಅಲ್ಪಾವಧಿಯಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಸಂಭ್ರಮ, ಭಾವುಕತೆಗೆ ಸಾಕ್ಷಿಯಾಯಿತು.

  • ಹಸಿದ ಹೊಟ್ಟೆಗೆ ಆಸರೆಯಾದ ಶಿವಣ್ಣ ದಂಪತಿ

    ಹಸಿದ ಹೊಟ್ಟೆಗೆ ಆಸರೆಯಾದ ಶಿವಣ್ಣ ದಂಪತಿ

    ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಇದನ್ನು ಮನಗಂಡು ನಟ ಶಿವರಾಜ್‍ಕುಮಾರ್, ಅಂತಹವರಿಗೆ ಊಟ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಶಿವರಾಜ್‍ಕುಮಾರ್ ಅವರು ಆಸರೆ ಎಂಬ ಹೆಸರಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಶಿವರಾಜ್‍ಕುಮಾರ್ ಅವರಿಗೆ ಪತ್ನಿ ಗೀತಾ ಶಿವರಾಜ್‍ಕುಮಾರ್ ಸಾಥ್ ನೀಡಿದ್ದಾರೆ. ನಾಗವಾರದಲ್ಲಿರುವ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾದಲ್ಲಿರುವ ನೂರಾರು ಜನರಿಗೆ ನಿತ್ಯವು ಆಹಾರ ಒದಗಿಸುವ ಕೆಲಸವನ್ನು ಶಿವರಾಜ್‍ಕುಮಾರ್-ಗೀತಾ ದಂಪತಿ ಮಾಡುತ್ತಿದ್ದಾರೆ.

    ಶಿವಣ್ಣ ಬಾಯ್ಸ್ ಹೆಸರಿನ ತಂಡವೊಂದು ಊಟವನ್ನು ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಮಾನ್ಯತಾ ಟೆಕ್‍ಪಾರ್ಕ್ ಬಳಿ ನಾಗವಾರದ ಏರಿಯಾದ ಸುತ್ತಮುತ್ತಲಿನ ಸುಮಾರು 500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಸುಮಾರು 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೆಲಸಕ್ಕಾಗಿಯೇ ಬೊಲೇರೋ ವಾಹನವನ್ನು ಶಿವಣ್ಣ ವ್ಯವಸ್ಥೆ ಮಾಡಿದ್ದು, ಆ ವಾಹನದ ಮೂಲಕವೇ ಅಗತ್ಯವಿರುವ ಜನರ ಬಳಿ ಹೋಗಿ ಊಟ ತಿಂಡಿ ಸರಬರಾಜು ಮಾಡಲಾಗುತ್ತಿದೆ. ಆಸರೆ ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮವು 10ದಿನದವರೆಗೂ ಮುಂದುವರೆಯಲಿದೆ.

    ಸುಮಾರು 1000 ಜನಕ್ಕೆ ಪ್ರತಿದಿನವೂ ಅನ್ನ ದಾಸೋಹ ಮಾಡುವುದಕ್ಕೆ ಶಿವಣ್ಣ, ಗೀತಾ ಶಿವರಾಜ್‍ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ತಂಡದ ಸದಸ್ಯರು ಯೋಜನೆ ರೂಪಿಸಿಕೊಂಡಿದ್ದಾರೆ. ನಟ ಶಿವರಾಜ್‍ಕುಮಾರ್ ಅವರು ಸದ್ಯ ಸದ್ದಿಲ್ಲದೇ ಮಾಡುತ್ತಿರುವ ಈ ಜನಸೇವೆಗೆ ಅನೇಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

  • ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್-ನಮಗೆ ಈಗ ರಾಜಕೀಯದ ಸಹವಾಸವೇ ಬೇಡ

    ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್-ನಮಗೆ ಈಗ ರಾಜಕೀಯದ ಸಹವಾಸವೇ ಬೇಡ

    ಬೆಂಗಳೂರು: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಕುರಿತು ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್.. ನಮಗೆ ಈಗ ರಾಜಕೀಯಸ ಸಹವಾಸವೇ ಬೇಡ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರಂತೆ.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಮೈತ್ರಿ ಸರ್ಕಾರದ ಒಪ್ಪಂದದಂತೆ ಜೆಡಿಎಸ್ ಗೆ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಕಳೆದ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್‍ಕುಮಾರ್ ಸ್ಪರ್ಧಿಸಿ ಯಡಿಯೂರಪ್ಪರ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಜೆಡಿಎಸ್ ನಿಂದ ಮತ್ತೊಮ್ಮೆ ಗೀತಾ ಅವರನ್ನೇ ಕಣಕ್ಕಿಳಿಸಲು ಮಾಜಿ ಪ್ರಧಾನಿ ದೇವೇಗೌಡರು ಪ್ಲಾನ್ ಮಾಡಿದ್ದರು.

    ಪತ್ನಿ ಗೀತಾ ಅವರನ್ನ ಉಪ ಚುನಾವಣೆಗೆ ನಿಲ್ಲಿಸಲು ಶಿವರಾಜ್‍ಕುಮಾರ್ ಹಿಂದೇಟು ಹಾಕುತ್ತಿದ್ದಾರಂತೆ. ಸಿಎಂ ಜೊತೆಗಿನ ಮಾತುಕತೆ ವೇಳೆ, ಯಾವುದೇ ಕಾರಣಕ್ಕೂ ಬೈ ಎಲೆಕ್ಷನ್ ಬೇಡ. ಈ ಮೊದಲೇ ನಾವು ಅನುಭವಿಸಿದ್ದು ಸಾಕು, ನಮಗೆ ಎಲೆಕ್ಷನ್ ಸಹವಾಸ ಬೇಡ. ಮಧು ಬಂಗಾರಪ್ಪ ಸ್ಪರ್ಧೆ ಮಾಡೋದಾದರೆ ನಾವು ಬಂದು ಪ್ರಚಾರ ಮಾಡುತ್ತೇವೆ. ಆದರೆ ಮಧು ಬಂಗಾರಪ್ಪ ಮನವೊಲಿಸೋದು ನಿಮಗೆ ಬಿಟ್ಟಿದ್ದು ಎಂದು ಶಿವರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸ್ಪರ್ಧೆಗೆ ಹಿಂದೇಟು ಯಾಕೆ?
    ಉಪ ಚುನಾವಣೆಯ ಅಧಿಕಾರವಧಿ ಕಡಿಮೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ಕುಟುಂಬ ಹಿಂದೇಟು ಹಾಕುತ್ತಿರಬಹುದು. 2019ರ ಚುನಾವಣೆಗೆ ಸಂಪನ್ಮೂಲ ಕ್ರೂಢೀಕರಣಕ್ಕೂ ತೊಂದರೆ ಆಗಬಹುದು. ಇನ್ನು ಮಧು ಬಂಗಾರಪ್ಪ ಇಷ್ಟು ಬೇಗ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಬೇಡ. ಸಮ್ಮಿಶ್ರ ಸರ್ಕಾರದಲ್ಲಿಯೇ ಅಧಿಕಾರಕ್ಕಾಗಿ ಒಲವು ತೋರಿಸುವ ಸಾಧ್ಯತೆಗಳಿವೆ. ಇತ್ತ ಗೀತಾ ಶಿವರಾಜ್‍ಕುಮಾರ್ ಕಳೆದ ಬಾರಿ ಸೋಲಿನ ಕಹಿಯನ್ನು ಮರೆತ ಹಾಗಿಲ್ಲ.

    ಚುನಾವಣೆ ಘೋಷಣೆಯೂ ಮುನ್ನವೇ ವಿದೇಶ ಪ್ರವಾಸಕ್ಕೆ ತೆರಳಿರುವ ಮಧು ಬಂಗಾರಪ್ಪ, ಅಕ್ಟೋಬರ್ 16ಕ್ಕೆ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ. ಆದ್ರೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕ. ಇತ್ತ ಬಿಜೆಪಿ ಬಿ.ವೈ.ರಾಘವೇಂದ್ರ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಯಡಿಯೂರಪ್ಪರನ್ನು ಸ್ವಕ್ಷೇತ್ರದಲ್ಲಿಯೇ ಕಟ್ಟಿ ಹಾಕಬೇಕು ಎಂದು ಪ್ಲಾನ್ ಮಾಡುತ್ತಿರುವ ದೇವೇಗೌಡರು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಒಂದು ವೇಳೆ ಸೂಕ್ತ ಅಭ್ಯರ್ಥಿ ಸಿಗದೇ ಪಕ್ಷದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಸಾಧ್ಯತೆ ಗಳು ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv