Tag: Geeta Mahadev Prasad

  • 1 ವಾರದಲ್ಲಿ ಗೀತಾ ಮಹಾದೇವಪ್ರಸಾದ್‍ರಿಂದ 60ಕ್ಕೂ ಹೆಚ್ಚು ಕಾಮಗಾರಿಗಳಿಗೆ ಗುದ್ದಲಿ ಪೂಜೆ!

    1 ವಾರದಲ್ಲಿ ಗೀತಾ ಮಹಾದೇವಪ್ರಸಾದ್‍ರಿಂದ 60ಕ್ಕೂ ಹೆಚ್ಚು ಕಾಮಗಾರಿಗಳಿಗೆ ಗುದ್ದಲಿ ಪೂಜೆ!

    ಚಾಮರಾಜನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕರುಗಳಿಗೆ ಹಾಗೂ ಸಚಿವರುಗಳಿಗೆ ತಮ್ಮ ಕ್ಷೇತ್ರದ ಮೇಲೆ ಎಲ್ಲಿಲ್ಲದ ಒಲವು ಬರುತ್ತಿದ್ದು, ಅನೇಕ ಕಾಮಗಾರಿಗಳಿಗೆ ಚಾಲನೆ ಸಿಗುತ್ತಿದೆ.

    ಗುಂಡ್ಲುಪೇಟೆ ಕ್ಷೇತ್ರದ ಶಾಸಕಿ, ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆಯ ಸಚಿವೆ ಗೀತಾ ಮಹದೇವಪ್ರಸಾದ್ ಅವರು ತಮ್ಮ ಕ್ಷೇತ್ರದ ಮೇಲೆ ಯಾವತ್ತೂ ಇರದ ಒಲವನ್ನು ಈಗ ತೋರಿಸುತ್ತಿದ್ದಾರೆ. ಕಳೆದ ಒಂದೇ ವಾರದಲ್ಲಿ ಸುಮಾರು 60ಕ್ಕೂ ಹೆಚ್ಚು ಗುದ್ದಲಿ ಪೂಜೆ ಮಾಡಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಕಾಮಗಾರಿಗಳಿಗೆ ಚಾಲನೆ ಸಿಕ್ಕಿರಲಿಲ್ಲ.

    ಗುಂಡ್ಲುಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಚರಂಡಿ, ರಸ್ತೆ, ಸಮುದಾಯ ಭವನ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಒಂದೇ ವಾರದಲ್ಲಿ 60 ಗುದ್ದಲಿ ಪೂಜೆ ನೇರವೇರಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ಸುಮಾರು 8 ತಿಂಗಳಾದರೂ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡದ ಗೀತಾ ಮಹದೇವ ಪ್ರಸಾದ್ ಈಗ ಚುನಾವಣೆ ಸಮೀಪಿಸಿದಂತೆ ಗ್ರಾಮಗಳಿಗೆ ಭೇಟಿ ನೀಡಿದ್ದಕ್ಕೆ ಜನರಿಂದ ಅಸಮಾಧಾನ ವ್ಯಕ್ತವಾಗಿದೆ.

    ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಆತುರಾತುರವಾಗಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಚಾಲನೆ ನೀಡಿರುವ ಈ ಕಾಮಗಾರಿಗಳು ಗುಣಮಟ್ಟ ಹೇಗಿರುತ್ತದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಜನರು ಪ್ರಶ್ನೆ ಕೇಳುತ್ತಿದ್ದಾರೆ.

  • ಸಿದ್ದು ಸಂಪುಟಕ್ಕೆ ಫೈನಲ್ ಸರ್ಜರಿ: ಮೂವರಿಗೆ ಸಚಿವ ಸ್ಥಾನ ಸಿಗೋದರ ಹಿಂದೆ ಇರೋ ಲೆಕ್ಕಾಚಾರ ಏನು?

    ಸಿದ್ದು ಸಂಪುಟಕ್ಕೆ ಫೈನಲ್ ಸರ್ಜರಿ: ಮೂವರಿಗೆ ಸಚಿವ ಸ್ಥಾನ ಸಿಗೋದರ ಹಿಂದೆ ಇರೋ ಲೆಕ್ಕಾಚಾರ ಏನು?

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ 6ನೇ ಸಂಪುಟ ವಿಸ್ತರಣೆಯಾಗಿದೆ. ಅಸಮಾಧಾನದ ನಡುವೆ ಸಿಎಂ ಅತ್ಯಾಪ್ತ ಎಚ್.ಎಂ.ರೇವಣ್ಣ, ಆರ್.ಬಿ. ತಿಮ್ಮಾಪೂರ್ ಅವರು ಸಂಪುಟ ದರ್ಜೆ ಮತ್ತು ಮಾಜಿ ಸಚಿವ ದಿವಂಗತ ಮಹದೇವ್ ಪ್ರಸಾದ್ ಪತ್ನಿ ಗೀತಾಪ್ರಸಾದ್ ಅವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

    ಯಾರಿಗೆ ಯಾವ ಖಾತೆ?
    ಎಚ್‍ಎಂ ರೇವಣ್ಣ ಅವರಿಗೆ ಸಾರಿಗೆ ಖಾತೆ ಸಿಕ್ಕಿದರೆ ರಾಮಲಿಂಗಾರೆಡ್ಡಿಗೆ ಗೃಹ ಖಾತೆಗೆ ಸಿಕ್ಕಿದೆ. ಆರ್.ಬಿ ತಿಮ್ಮಾಪುರ ಅವರಿಗೆ ಅಬಕಾರಿ ಸಿಕ್ಕಿದರೆ, ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಖಾತೆ ಗೀತಾ ಮಹದೇವ ಪ್ರಸಾದ್ ಅವರಿಗೆ ಸಿಕ್ಕಿದೆ.

    ರಮೇಶ್ ಜಾರಕಿಹೊಳಿಗೆ ಸಹಕಾರ, ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಜೊತೆಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಪ್ರಿಯಾಂಕ ಖರ್ಗೆ, ಪ್ರಮೋದ್ ಮದ್ವರಾಜ್, ಈಶ್ವರ್ ಖಂಡ್ರೆ, ರುದ್ರಪ್ಪ ಲಮಾಣಿ ಅವರು ರಾಜ್ಯ ಸಚಿವ ದರ್ಜೆಯಿಂದ ಸಂಪುಟ ದರ್ಜೆಗೆ ಬಡ್ತಿ ಪಡೆದಿದ್ದಾರೆ.

    ಮೂವರಿಗೆ ಮಂತ್ರಿ ಸ್ಥಾನ ಹಿಂದಿರೋ ರಾಜಕೀಯ ಏನು?
    ಮೇಲ್ಮನೆ ಸದಸ್ಯರಾಗಿರುವ ಆರ್.ಬಿ ತಿಮ್ಮಾಪುರ ಅವರು ಉತ್ತರ ಕರ್ನಾಟಕದ ದಲಿತ ಸಮುದಾಯದ ಹಿರಿಯ ನಾಯಕ. ನರೇಂದ್ರಸ್ವಾಮಿ ಪರ ಸಿಎಂ ಒಲವಿದ್ದರೂ ಜಾತಿ ಲೆಕ್ಕಾಚಾರದಲ್ಲಿ ಮಣೆ ಹಾಕಿ ಮಂತ್ರಿ ಸ್ಥಾನ ಸಿಕ್ಕಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಎಡಗೈ ಸಮುದಾಯದವರಿಗೆ ಆದ್ಯತೆ ನೀಡಲು ಸಚಿವ ಸ್ಥಾನ ನೀಡಲಾಗಿದೆ.

    ಮೇಲ್ಮನೆ ಸದಸ್ಯರಾಗಿರುವ ಎಚ್.ಎಂ. ರೇವಣ್ಣ ಕುರುಬ ಸಮುದಾಯದ ಸಂಘಟನೆಯಲ್ಲಿ ಹೆಚ್ಚಿನ ಪಾತ್ರವಿದೆ. ಎಚ್ ವೈ ಮೇಟಿಯಿಂದ ತೆರವಾದ ಸ್ಥಾನಕ್ಕೆ ರೇವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಎಚ್.ವಿಶ್ವನಾಥ್ ಪಕ್ಷ ತೊರೆದ ಮೇಲೆ ಸ್ವಸಮುದಾಯದವರಿಗೆ ಆದ್ಯತೆ ನೀಡಲು ಸಿಎಂ ಮಂತ್ರಿ ಸ್ಥಾನವನ್ನು ನೀಡಿದ್ದಾರೆ ಎನ್ನಲಾಗಿದೆ.

    ಗೀತಾ ಮಹದೇವಪ್ರಸಾದ್ ಗುಂಡ್ಲುಪೇಟೆ ಶಾಸಕಿ ಆಗಿದ್ದು, ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಲಿಂಗಾಯತ ಸಮುದಾಯದವರಿಗೆ ಆದ್ಯತೆ ಮತ್ತು ಚುನಾವಣೆ ದೃಷ್ಠಿಯಿಂದ ಹಳೆ ಮೈಸೂರು ಭಾಗಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದಾಗಿ ಸಿದ್ದರಾಮಯ್ಯ ಮಂತ್ರಿ ಭಾಗ್ಯವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

     

  • ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್

    ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್

    ಗುಂಡ್ಲುಪೇಟೆ: ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕೆಲಸಗಳಿಂದಾಗಿ ನಾನು ಜಯಗಳಿಸಿದ್ದೇನೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಹೇಳಿದ್ದಾರೆ.

    ನಾನು ಗೆಲುವನ್ನು ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಯಂತೆ ಜಯಗಳಿಸಿದ್ದೇನೆ. ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ನನ್ನ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯು ಸಹ ನನ್ನ ಜಯಕ್ಕೆ ಕಾರಣ ಎಂದು ತಿಳಿಸಿದರು.

    ಪ್ರತಾಪ್ ಸಿಂಹ ಅವರು ಒಬ್ಬ ಮಹಿಳೆಯ ಬಗ್ಗೆ ಈ ರೀತಿಯಾಗಿ ಮಾತಾಡಿದರೆ ಯಾರೂ ಕ್ಷಮಿಸುವುದಿಲ್ಲ. ಕೇವಲ ಮಹಿಳೆಯರಷ್ಟೇ ಅಲ್ಲದೇ ಪುರಷರು ಸಹ ಇದನ್ನು ಖಂಡಿಸುತ್ತಾರೆ. ಪ್ರತಾಪ್ ಸಿಂಹ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳುವ ಮೂಲಕ ಸಂಸದರಿಗೆ ಟಾಂಗ್ ನೀಡಿದರು.

    ಜನರು ನನ್ನ ಮೇಲೆ ನಂಬಿಕೆಯಿಟ್ಟು, ಗಲ್ಲಿಸಿದ್ದಾರೆ. ಮುಂದೆ ನಾನು ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ. ಪ್ರತಾಪ್ ಸಿಂಹ ತಮ್ಮ ಹೇಳಿಕೆಯಿಂದ ಸುಮಾರು 40 ಸಾವಿರ ಮತಗಳನ್ನು ಕಳೆದುಕೊಂಡಿದ್ದಾರೆ. ಜಯದ ಸಮಯದಲ್ಲಿ ಪ್ರತಾಪ್ ಸಿಂಹ ಅವರನ್ನು ಕ್ಷಮಿಸುತ್ತೇನೆ. ತಮ್ಮ ವಿವಾದಾತ್ಮಕ ಹೇಳಿಕೆ ನಂತ್ರ ನನ್ನ ಮಗನಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದರು. ಇಂದು ನಿಮ್ಮ ಮಾಧ್ಯಮಗಳ ಮುಖಾಂತರ ಅವರನ್ನು ಕ್ಷಮಿಸಿದ್ದೇನೆ ಎಂದು ತಿಳಿಸುತ್ತೇನೆ ಎಂದು ಹೇಳಿದರು.

    ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕ್ಷೇತ್ರದ ಎಲ್ಲ ಮಹಿಳೆಯರಿಗೆ, ಮತದಾರರಿಗೆ ಮತ್ತು ಕಾರ್ಯಕರ್ತರಿಗೂ ಗೀತಾ ಮಹಾದೇವಪ್ರಸಾದ್ ಧನ್ಯವಾದ ಸಲ್ಲಿಸಿದರು.