Tag: gdp

  • ನಿರ್ಮಲಾ ಸೀತಾರಾಮನ್, ನಿರ್ಬಲ ಆಗಿದ್ದಾರೆ- ಕಾಂಗ್ರೆಸ್ ವಾಗ್ದಾಳಿ

    ನಿರ್ಮಲಾ ಸೀತಾರಾಮನ್, ನಿರ್ಬಲ ಆಗಿದ್ದಾರೆ- ಕಾಂಗ್ರೆಸ್ ವಾಗ್ದಾಳಿ

    ನವದೆಹಲಿ: ಜಿಡಿಪಿ ಕಡಿಮೆಯಾದ ಹಿನ್ನೆಲೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿರ್ಮಲಾ ಸೀತಾರಾಮನ್ ವಿರುದ್ಧ ಹರಿಹಾಯ್ದಿದ್ದು, ನಿರ್ಬಲ(ಬಲಹೀನ) ಸೀತಾರಾಮನ್ ಎಂದು ಕರೆಯುವ ಮೂಲಕ ಲೇವಡಿ ಮಾಡಿದ್ದಾರೆ.

    ಸೋಮವಾರ ಮಧ್ಯಾಹ್ನ ಲೋಕಸಭೆಯಲ್ಲಿ 2019ರ ತೆರಿಗೆ ಕಾನೂನು(ತಿದ್ದುಪಡಿ) ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಅಧಿರ್ ರಂಜನ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹಲವು ದೂರದರ್ಶಿ ಯೋಜನೆಗಳು ಆರ್ಥಿಕತೆಯ ನಿಧಾನಗತಿಗೆ ಕಾರಣವಾಗಿವೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಿರ್ಬಲ ಸೀತಾರಾಮನ್ ಎಂದು ಕರೆಯದೇ ಬೇರೆ ದಾರಿಯಿಲ್ಲ ಎಂದು ಹರಿಹಾಯ್ದಿದ್ದಾರೆ.

    ಭಾರತದ ಆರ್ಥಿಕತೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ವಂತ ನಿರ್ಧಾರ ಕೈಗೊಳ್ಳಲು ಬಿಜೆಪಿಯವರು ಬಿಡುತ್ತಿಲ್ಲ. ನಾವು ನಿಮಗೆ ಅತೀವ ಗೌರವವನ್ನು ನೀಡುತ್ತೇವೆ. ಆಶ್ಚರ್ಯವೆಂಬಂತೆ ಕೆಲವು ಬಾರಿ ನಿಮ್ಮನ್ನು ನಿರ್ಬಲ ಸೀತಾರಾಮನ್ ಎಂದು ಕರೆಯಬೇಕಾಗುತ್ತದೆ ಎಂದರು.

    ನೀವು ಹಣಕಾಸು ಸಚಿವಾಲಯದ ಮುಖ್ಯಸ್ಥರಾಗಿದ್ದೀರಿ. ಆದರೆ ಯಾವಾಗ ನಿಮ್ಮ ಸ್ವಂತ ವಿಚಾರಗಳನ್ನಿಟ್ಟುಕೊಂಡು ನೀವು ದೇಶದ ಆರ್ಥಿಕತೆ ಬಗ್ಗೆ ಮಾತನಾಡುತ್ತೀರೋ ತಿಳಿಯುತ್ತಿಲ್ಲ ಎಂದು ಅಧಿರ್ ರಂಜನ್ ಹರಿಹಾಯ್ದಿದ್ದಾರೆ.

    ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್)ಜಿಡಿಪಿಯ ಅಂಕಿ ಸಂಖ್ಯೆಯ ಅಧಿಕೃತ ವರದಿ ಕಳೆದ ತಿಂಗಳು ಬಿಡುಗಡೆಯಾಗಿದೆ. ಇದರಲ್ಲಿ ಜಿಡಿಪಿ ಶೇ.4.5ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಜಿಡಿಪಿಯಾಗಿದೆ. ಅಲ್ಲದೆ ಆರ್ಥಿಕ ಬೆಳವಣಿಗೆಯಲ್ಲಿಯೂ ಸಹ ದೇಶ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಅಧಿರ್ ರಂಜನ್ ಅವರು ವಾಗ್ದಾಳಿ ನಡೆಸಿ ನಿರ್ಬಲ ಸೀತಾರಾಮನ್ ಎಂದು ಕರೆದಿದ್ದಾರೆ.

  • ಜಿಡಿಪಿ ದರ ಶೇ.4.5ಕ್ಕೆ ಕುಸಿತ- 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸು ಕಂಡ ಮೋದಿ ಸರ್ಕಾರಕ್ಕೆ ಶಾಕ್

    ಜಿಡಿಪಿ ದರ ಶೇ.4.5ಕ್ಕೆ ಕುಸಿತ- 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸು ಕಂಡ ಮೋದಿ ಸರ್ಕಾರಕ್ಕೆ ಶಾಕ್

    ನವದೆಹಲಿ: 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುತ್ತೇವೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಇವತ್ತು ಪ್ರಕಟವಾಗಿರುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಜುಲೈ-ಸೆಪ್ಟೆಂಬರ್‍ನ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಶೇ.4.5ಕ್ಕೆ ಕುಸಿದಿದೆ.

    ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.4.5 ನಷ್ಟಿದೆ. ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.5ರಷ್ಟಿತ್ತು. ಆದರೆ, ಈ ತ್ರೈಮಾಸಿಕದಲ್ಲಿ ಶೇ.0.5ರಷ್ಟು ಜಿಡಿಪಿ ಕುಸಿದಿದೆ. ಕಳೆದ 6 ವರ್ಷಗಳಲ್ಲೇ ಅತ್ಯಂತ ಗಂಭೀರವಾಗಿ ಪಾತಾಳಕ್ಕಿಳಿದಿದ್ದು ಆತಂಕ ಹೆಚ್ಚಿಸಿದೆ.

    ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7ರಷ್ಟು ಜಿಡಿಪಿ ದರ ದಾಖಲಾಗಿತ್ತು. ಕಲ್ಲಿದ್ದಲು, ಗಣಿ, ವಿದ್ಯುತ್, ಸಿಮೆಂಟ್, ಸೇವಾ ವಲಯದಲ್ಲಿ ಕ್ಷೇತ್ರಗಳು ಗರಿಷ್ಠ ಇಳಿಮುಖವಾಗಿವೆ. ಕಳೆದ 2 ವರ್ಷಗಳಿಂದ ಸತತವಾಗಿಯೇ ಜಿಡಿಪಿ ದರ ಕುಸಿಯುತ್ತಲೇ ಇದೆ. ದೇಶದ ಆರ್ಥಿಕತೆ ಶೇ.5ಕ್ಕಿಂತ ಕುಸಿದಿರುವುದು 2013ರ ಜನವರಿ-ಮಾಚ್ ನಂತರ ಇದೇ ಮೊದಲು.

    2013ರ ಜನವರಿಯಿಂದ ಮಾರ್ಚ್ ಅವಧಿಯ ತೃತೀಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.3ರಷ್ಟಿತ್ತು. ಕೇಂದ್ರದಲ್ಲಿ ಎರಡನೇ ಅವರಿಗೆ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲ ಸೂತ್ರಗಳನ್ನು ಪ್ರಕಟಿಸಿದ್ದರು. ಆದರೂ ಆರ್ಥಿಕತೆ ಕುಗ್ಗುತ್ತಲೇ ಹೋಗುತ್ತಿದೆ. ಮೊನ್ನೆಯಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ನಿಜ. ಆದರೆ ಆರ್ಥಿಕ ಹಿಂಜರಿತವಾಗಿಲ್ಲ ಎಂದಿದ್ದರು.

    ಜಿಡಿಪಿ ಕುಸಿತದ ಬಗ್ಗೆ ಅನೇಕ ಅರ್ಥಶಾಸ್ತ್ರಜ್ಞರು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಜಿಡಿಪಿ ವರದಿ ಪ್ರಕಟವಾಗುತ್ತಿದ್ದಂತೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ವಾರ್ಷಿಕ ಜಿಡಿಪಿ ದರ ಎಷ್ಟಿತ್ತು?
    2014-15 – 7.4 %
    2015-16 – 8 %
    2016-17 – 8.1 %
    2017-18 – 7.2 %
    2018-19 – 6.9 %
    2019-20 – 5 %(ಮೊದಲ ತ್ರೈಮಾಸಿಕ)
    2019-20 – 4.5% (ಎರಡನೇ ತ್ರೈಮಾಸಿಕ)

    https://twitter.com/AtharSky92/status/1200397500059803650

  • ಹೆದರಿಕೆ ಆಗುತ್ತಿದೆ, ಕೇಂದ್ರದ ಕೆಟ್ಟ ನೀತಿಯಿಂದಲೇ ಆರ್ಥಿಕತೆ ಕುಸಿದಿದೆ- ಮನಮೋಹನ್ ಸಿಂಗ್

    ಹೆದರಿಕೆ ಆಗುತ್ತಿದೆ, ಕೇಂದ್ರದ ಕೆಟ್ಟ ನೀತಿಯಿಂದಲೇ ಆರ್ಥಿಕತೆ ಕುಸಿದಿದೆ- ಮನಮೋಹನ್ ಸಿಂಗ್

    ನವದೆಹಲಿ: ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದೇ ದೇಶದ ಆರ್ಥಿಕತೆ ಕುಸಿದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

    ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಆರ್ಥಿಕತೆಯನ್ನು ನೋಡಿದಾಗ ಹೆದರಿಕೆ ಆಗುತ್ತಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.5ಕ್ಕೆ ಕುಸಿದಿದೆ. ಇದು ದೇಶದ ಆರ್ಥಿಕತೆ ಕುಸಿಯುತ್ತಿರುವುದರ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟರು.

    ಮಾನವ ನಿರ್ಮಿತ ಪ್ರಮಾದ ನೋಟು ನಿಷೇಧ ಮತ್ತು ಸರಿಯಾದ ರೀತಿಯಲ್ಲಿ ಜಿಎಸ್‍ಟಿಯನ್ನು ಅನುಷ್ಠಾನಕ್ಕೆ ತರದ ಕಾರಣ ನಮ್ಮ ಆರ್ಥಿಕತೆ ಚೇತರಿಕೆ ಕಾಣುತ್ತಿಲ್ಲ. ಹೂಡಿಕೆದಾರರು ಭಯದಲ್ಲಿದ್ದಾರೆ. ತನ್ನ ಎದುರಾಳಿಗಳ ವಿರುದ್ಧ ರಾಜಕೀಯ ದ್ವೇಷ ಮಾಡುವುದನ್ನು ಬಿಟ್ಟು ಸರ್ಕಾರ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

    ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏಪ್ರಿಲ್‍ನಿಂದ ಜೂನ್ ವರೆಗಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಕುಸಿದಿದೆ. ಕಳೆದ ಆರುವರೆ ವರ್ಷಗಳಲ್ಲಿ ಅತ್ಯಂತ ಮಂದಗತಿಯ ಬೆಳವಣಿಗೆ ಇದಾಗಿದ್ದು, ಕೃಷಿ ಮತ್ತು ತಯಾರಿಕಾ ವಲಯದ ಕಳಪೆ ನಿರ್ವಹಣೆಯಿಂದ ಜಿಡಿಪಿ ಕಡಿಮೆ ದಾಖಲಾಗಿದೆ. ಮೇ ಅಂತ್ಯಕ್ಕೆ ಕೊನೆಗೊಂಡ ಕೊನೆಯ ತ್ರೈಮಾಸಿಕದಲ್ಲಿ ಶೇ.5.8 ಜಿಡಿಪಿ ದಾಖಲಾಗಿತ್ತು.

    2018-19ರ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯ ಶೇ.12.1 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.0.6 ಬೆಳವಣಿಗೆ ಸಾಧಿಸಿದೆ. ಕೃಷಿ, ಅರಣ್ಯ, ಮೀನುಗಾರಿಗೆ ಕ್ಷೇತ್ರ ಶೇ.2 ರಷ್ಟು ಬೆಳವಣಿಗೆ ಸಾಧಿಸಿದರೆ ಕಳೆದ ಬಾರಿ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿತ್ತು. ನಿರ್ಮಾಣ ವಲಯ 2018-19 ಮೊದಲ ತ್ರೈಮಾಸಿಕದಲ್ಲಿ ಶೇ.9.6 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.5.7ಕ್ಕೆ ಕುಸಿದಿದೆ.

    ಕೈಗಾರಿಕಾ ಉತ್ಪಾದನ ಭಾರೀ ಇಳಿಕೆಯಾಗಿದೆ. ಈ ಹಿಂದೆ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿದರೆ ಈ ಬಾರಿ ಶೇ.3.6ಕ್ಕೆ ಇಳಿಕೆಯಾಗಿದೆ. ಕಳೆದ 19 ವರ್ಷದಲ್ಲಿ ಪ್ರಯಾಣಿಕ ವಾಹನ ಕೈಗಾರಿಕೆ ವಲಯದ ಪ್ರಗತಿ ಇಳಿಕೆಯಾಗಿದ್ದು ಜುಲೈ ತಿಂಗಳಿನಲ್ಲಿ ಶೇ.31 ರಷ್ಟು ಮಾರಾಟದಲ್ಲಿ ಇಳಿಕೆಯಾಗಿತ್ತು.

    ವಾರ್ಷಿಕ ಜಿಡಿಪಿ ದರ ಎಷ್ಟಿತ್ತು?
    2014-15 – 7.4 %
    2015-16 – 8 %
    2016-17 – 8.1 %
    2017-18 – 7.2 %
    2018-19 – 6.9 %
    2019-20 – 5 %(ಮೊದಲ ತ್ರೈಮಾಸಿಕ)

  • ಜಿಡಿಪಿ ದರ ಶೇ.5ಕ್ಕೆ ಕುಸಿತ

    ಜಿಡಿಪಿ ದರ ಶೇ.5ಕ್ಕೆ ಕುಸಿತ

    ನವದೆಹಲಿ: ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏಪ್ರಿಲ್‍ನಿಂದ ಜೂನ್ ವರೆಗಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಕುಸಿದಿದೆ.

    ಕಳೆದ ಆರುವರೆ ವರ್ಷಗಳಲ್ಲಿ ಅತ್ಯಂತ ಮಂದಗತಿಯ ಬೆಳವಣಿಗೆ ಇದಾಗಿದ್ದು, ಕೃಷಿ ಮತ್ತು ತಯಾರಿಕಾ ವಲಯದ ಕಳಪೆ ನಿರ್ವಹಣೆಯ ಜಿಡಿಪಿ ಕಡಿಮೆ ದಾಖಲಾಗಿದೆ. ಮೇ ಅಂತ್ಯಕ್ಕೆ ಕೊನೆಗೊಂಡ ಕೊನೆಯ ತ್ರೈಮಾಸಿಕದಲ್ಲಿ ಶೇ.5.8 ಜಿಡಿಪಿ ದಾಖಲಾಗಿತ್ತು.

    ಇಳಿಕೆಗೆ ಕಾರಣ ಏನು?
    2018-19ರ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯ ಶೇ.12.1 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.0.6 ಬೆಳವಣಿಗೆ ಸಾಧಿಸಿದೆ. ಕೃಷಿ, ಅರಣ್ಯ, ಮೀನುಗಾರಿಗೆ ಕ್ಷೇತ್ರ ಶೇ.2 ರಷ್ಟು ಬೆಳವಣಿಗೆ ಸಾಧಿಸಿದರೆ ಕಳೆದ ಬಾರಿ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿತ್ತು. ನಿರ್ಮಾಣ ವಲಯ 2018-19 ಮೊದಲ ತ್ರೈಮಾಸಿಕದಲ್ಲಿ ಶೇ.9.6 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.5.7ಕ್ಕೆ ಕುಸಿದಿದೆ.

    ಕೈಗಾರಿಕಾ ಉತ್ಪಾದನ ಭಾರೀ ಇಳಿಕೆಯಾಗಿದೆ. ಈ ಹಿಂದೆ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿದರೆ ಈ ಬಾರಿ ಶೇ.3.6ಕ್ಕೆ ಇಳಿಕೆಯಾಗಿದೆ. ಕಳೆದ 19 ವರ್ಷದಲ್ಲಿ ಪ್ರಯಾಣಿಕ ವಾಹನ ಕೈಗಾರಿಕೆ ವಲಯದ ಪ್ರಗತಿ ಇಳಿಕೆಯಾಗಿದ್ದು ಜುಲೈ ತಿಂಗಳಿನಲ್ಲಿ ಶೇ.31 ರಷ್ಟು ಮಾರಾಟದಲ್ಲಿ ಇಳಿಕೆಯಾಗಿತ್ತು.

    ವಾರ್ಷಿಕ ಜಿಡಿಪಿ ದರ ಎಷ್ಟಿತ್ತು?
    2014-15 – 7.4 %
    2015-16 – 8 %
    2016-17 – 8.1 %
    2017-18 – 7.2 %
    2018-19 – 6.9 %
    2019-20 – 5 %(ಮೊದಲ ತ್ರೈಮಾಸಿಕ)

  • ವಿದೇಶಿ ಹೂಡಿಕೆದಾರರ ಮೇಲಿನ ಹೆಚ್ಚುವರಿ ಶುಲ್ಕ ರದ್ದು- ಆರ್ಥಿಕತೆ ಸುಧಾರಿಸಲು ಸರ್ಕಾರದ ಟಾನಿಕ್

    ವಿದೇಶಿ ಹೂಡಿಕೆದಾರರ ಮೇಲಿನ ಹೆಚ್ಚುವರಿ ಶುಲ್ಕ ರದ್ದು- ಆರ್ಥಿಕತೆ ಸುಧಾರಿಸಲು ಸರ್ಕಾರದ ಟಾನಿಕ್

    – ಏಂಜಲ್ ಟ್ಯಾಕ್ಸ್ ರದ್ದು
    – ವಿಜಯ ದಶಮಿಯಿಂದ ಮತ್ತಷ್ಟು ಸುಧಾರಣಾ ಕ್ರಮ

    ನವದೆಹಲಿ: ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಉತ್ತಮವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಭಾರತದ ಆರ್ಥಿಕತೆ ಕುಸಿಯುತ್ತಿದ್ದು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಟೀಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದರು.

    ಬಜೆಟ್ ನಲ್ಲಿ ವಿದೇಶಿ ಹೂಡಿಕೆದಾರರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗಿತ್ತು. ಸರ್ಕಾರದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಪರಿಣಾಮ ಹೂಡಿಕೆದಾರರು ನಷ್ಟ ಅನುಭವಿಸಿದ್ದರು. ಈಗ  ಈ ಶುಲ್ಕವನ್ನು ರದ್ದು ಪಡಿಸಿದೆ.

    ಈ ಬಾರಿಯ ವಿಜಯದಶಮಿಯ ದಿನದಿಂದ ಹಲವಾರು ಸುಧಾರಣೆ ಕ್ರಮಗಳನ್ನು ಜಾರಿಗೆ ತರಲಾಗುವುದು. ಉದ್ಯಮಿಗಳಿಗೆ, ತೆರಿಗೆದಾರರಿಗೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಲಾಗುವುದು. ಬ್ಯಾಂಕ್‍ಗಳಿಗೆ 70 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗುವುದು. ಇದರಿಂದಾಗಿ ಬ್ಯಾಂಕ್ ಗಳ ಬಡ್ಡಿದರ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

    ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಂಬಂಧ 2020 ಮಾರ್ಚ್ 31ರ ಒಳಗಡೆ ಖರೀದಿಸಿದ ಬಿಎಸ್ 4(ಭಾರತ್ ಸ್ಟೇಜ್ 4)ವಾಹನಗಳು ನೊಂದಣಿ ದಿನಾಂಕದಿಂದ ಆ ವಾಹನದ ಅವಧಿ ಪೂರ್ಣ ಆಗುವರೆಗೂ ಓಡಿಸಬಹುದು. ಹೊಸ ವಾಹನ ಖರೀದಿಗೆ ಸರ್ಕಾರದ ಇಲಾಖೆಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗ ಹಳೆಯ ವಾಹನದ ಬದಲಿಗೆ ಹೊಸ ವಾಹನ ಖರೀದಿಸಬಹುದು ಎಂದು ಮಾಹಿತಿ ನೀಡಿದರು.

    ಕೈಗಾರಿಕೆಗಳು ಮತ್ತು ಉದ್ಯಮಗಳು ತಮ್ಮ ಸಿಎಸ್‍ಆರ್(ಸಾಮಾಜಿಕ ಜವಬ್ದಾರಿ ನಿಧಿ) ಅನುದಾನವನ್ನು ಬಳಕೆ ಮಾಡದೇ ಇದ್ದರೆ ಅವರನ್ನು ಕ್ರಿಮಿನಲ್‍ಗಳು ಎಂದು ಪರಿಗಣಿಸುವುದಿಲ್ಲ ಇದರ ಜೊತೆಗೆ ನೊಂದಣಿಯಾಗಿದ್ದ ಸ್ಟಾರ್ಟಪ್‍ಗಳಿಗೆ ವಿಧಿಸಿದ್ದ ಏಂಜಲ್ ತೆರಿಗೆಯನ್ನು ರದ್ದು ಮಾಡಿದ್ದೇವೆ. 30 ದಿನಗಳ ಒಳಗಡೆ ಜಿಎಸ್‍ಟಿ ರಿಫಂಡ್ ಪೂರ್ಣವಾಗುವಂತೆ ಕ್ರಮ ಕೈಗೊಳ್ಳಲಾಗಿದ್ದೇವೆ ಎಂದು ತಿಳಿಸಿದರು.

    ಜಾಗತಿಕ ಆರ್ಥಿಕತೆ ಕುಸಿಯುತ್ತಿರುವ ವಿಚಾರ ಎಲ್ಲರಿಗೆ ತಿಳಿದಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸಮಸ್ಯೆಯಾಗಿದೆ. ಇದರಿಂದಾಗಿ ಭಾರತಕ್ಕೂ ಸಮಸ್ಯೆಯಾಗಿದ್ದು, ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಿದೆ. ಆದರೆ ಭಾರತ ಜಿಡಿಪಿಯಲ್ಲಿ ಅಮೆರಿಕ ಮತ್ತು ಚೀನಾಕ್ಕಿಂತ ಮುಂದಿದೆ. ಆರ್ಥಿಕತೆಯಲ್ಲಿ ಏರಿಳಿತ ನಡೆಯುತ್ತಲೇ ಇರುತ್ತದೆ. ಕುಸಿಯುತ್ತಿದೆ ಎನ್ನುವ ಕಾರಣಕ್ಕೆ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ ಎಂದು ವದಂತಿ ಹಬ್ಬಿಸುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

  • ಜಿಡಿಪಿ ಕುಸಿತ, 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ

    ಜಿಡಿಪಿ ಕುಸಿತ, 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ

    ನವದೆಹಲಿ: ಅಧಿಕಾರ ವಹಿಸಿಕೊಂಡ ಮೋದಿ ಅವರಿಗೆ ಆರಂಭದಲ್ಲೇ ಕಹಿ ಸುದ್ದಿ ಸಿಕ್ಕಿದೆ. ದೇಶ ಜಿಡಿಪಿ ಕುಸಿತಗೊಂಡಿದ್ದು, 2017-18 ರಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ.6.1 ಕ್ಕೆ ತಲುಪಿದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ತಿಳಿಸಿದೆ.

    1972-73 ರ ಬಳಿಕ ದಾಖಲಾದ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ಇದಾಗಿದೆ. 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣದ ಜೊತೆಗೆ ಜನವರಿ ಮಾರ್ಚ್ ತಿಂಗಳ ಅವಧಿಯಲ್ಲಿನ ಜಿಡಿಪಿ ಬೆಳವಣಿಗೆ ದರ ಶೇ.5.8 ರಷ್ಟು ದಾಖಲಿಸಿದೆ.

    ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.7.8 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.5.3 ರಷ್ಟಿದೆ. ಶೇ.6.2 ರಷ್ಟು ಪುರುಷರು, ಶೇ.5.7 ರಷ್ಟು ಮಹಿಳೆಯರು ಉದ್ಯೋಗದಿಂದ ವಂಚಿತರಾಗಿದ್ದರೆ.

    ದೇಶದ ಜಿಡಿಪಿ ಬೆಳವಣಿಗೆ ದರವೂ 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತವಾಗಿದ್ದು, 2018-19ರ ವರ್ಷದಲ್ಲಿ ಶೇ.5.8 ರಷ್ಟು ದಾಖಲಾಗಿದೆ. ದೇಶದ ಪ್ರಮುಖ ವಲಯಗಳಾದ ಕೃಷಿ, ಕೈಗಾರಿಕೆ ಮತ್ತು ತಯಾರಿಕ ವಲಯದಲ್ಲಿನ ಉತ್ಪಾದನೆ ಕುಸಿತಗೊಂಡಿದ್ದರಿಂದ ಜಿಡಿಪಿ ಕುಸಿತಗೊಂಡಿದೆ ಎಂದು ತಿಳಿಸಿದೆ.

    ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.6.6 ರಷ್ಟಿದ್ದ ಜಿಡಿಪಿ ದರ ಜನವರಿಯಿಂದ ಮಾರ್ಚ್ ಅವಧಿಯ 4ನೇ ತ್ರೈಮಾಸಿಕದಲ್ಲಿ ಶೇ.5.8ಕ್ಕೆ ಕುಸಿತ ಕಂಡಿದೆ. 2013-14 ರಲ್ಲಿ ಜಿಡಿಪಿ ದರ ಶೇ.6.4 ರಷ್ಟು ದಾಖಲಾಗಿತ್ತು.

    ಜಿಡಿಪಿ ದರದ ಕುಸಿತದ ಪರಿಣಾಮವಾಗಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶ ಎಂಬ ಪಟ್ಟವನ್ನು ಭಾರತ ಕಳೆದುಕೊಂಡಿದ್ದು, ಚೀನಾ ಶೇ.6.4 ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಈ ಬಾರಿ ಶೇ.6.8 ರಷ್ಟು ಜಿಡಿಪಿ ದಾಖಲಾಗಲಿದೆ ಎಂದು ಅಂದಾಜಿಸಿತ್ತು.

  • ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ನವದೆಹಲಿ: ಕೇಂದ್ರ ಎನ್‍ಡಿಎ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಜೂನ್ ಅಂತ್ಯಕ್ಕೆ ಮುಕ್ತಾಯವಾದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಶೇ. 8.2 ಪ್ರಗತಿ ದಾಖಲಿಸಿದೆ.

    ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 5.59 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ ಅಂತಿಮ ತ್ರೈಮಾಸಿಕದ ವೇಳೆಗೆ ಶೇ.7.7 ಕ್ಕೆ ಏರಿಕೆ ಆಗಿತ್ತು. ಎನ್‍ಡಿಎ ಸರ್ಕಾರ ಕೈಗೊಂಡ ಆರ್ಥಿಕ ಕ್ರಮಗಳ ಬಳಿಕ ಕುಸಿತಗೊಂಡಿದ್ದ ದೇಶದ ಜಿಡಿಪಿ ದರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಭಾರೀ ಏರಿಕೆ ಆಗಿದ್ದು, ಕೇಂದ್ರ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.

    ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉಂಟಾಗಿರುವ ಪ್ರಗತಿಯ ಕಾರಣ ಜಿಡಿಪಿ ದರ ಏರಿಕೆ ಆಗಿದ್ದು, ಪ್ರಮುಖವಾಗಿ ಉತ್ಪಾದನಾ ಕ್ಷೇತ್ರದಲ್ಲಿ 13.5% ಬೆಳವಣಿಗೆ ದಾಖಲಾಗಿದೆ. ಈ ಹಿಂದಿನ ವರ್ಷದ ಈ ತ್ರೈಮಾಸಿಕದ ಅವಧಿ ವೇಳೆ ಈ ಕ್ಷೇತ್ರದಲ್ಲಿ ಶೇ.1.8 ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಾಗಿತ್ತು.

    ಯಾವ ಅವಧಿಯಲ್ಲಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.6%
    ಸೆಪ್ಟೆಂಬರ್ 2017 – 6.3%
    ಡಿಸೆಂಬರ್ 2017 – 7.0%
    ಮಾರ್ಚ್ 2018 – 7.7%
    ಜೂನ್ 2018 – 8.2%

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫ್ರಾನ್ಸ್ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದ ಭಾರತ!

    ಫ್ರಾನ್ಸ್ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದ ಭಾರತ!

    ಪ್ಯಾರಿಸ್: ಫ್ರಾನ್ಸ್ ಹಿಂದಿಕ್ಕಿ ವಿಶ್ವದಲ್ಲೇ ಭಾರತ 6ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ.

    2017ರ ವಿಶ್ವಬ್ಯಾಂಕ್ ವರದಿ ಪ್ರಕಟಗೊಂಡಿದ್ದು ಒಟ್ಟು ರಾಷ್ಟ್ರೀಯ ಉತ್ಪನ್ನ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತ ಫ್ರಾನ್ಸ್ ದೇಶವನ್ನು 7ನೇ ಸ್ಥಾನಕ್ಕೆ ತಳ್ಳಿದೆ. ಭಾರತದ ಜಿಡಿಪಿ 2.59 ಲಕ್ಷ ಕೋಟಿ ಡಾಲರ್ ಗಳಿಗೆ ಏರಿದರೆ ಫ್ರಾನ್ಸ್ ಜಿಡಿಪಿ 2.582 ಲಕ್ಷ ಕೋಟಿ ಡಾಲರ್‍ಗಳಾಗಿವೆ ವರದಿ ತಿಳಿಸಿದೆ.

    ಭಾರತದ ಜನಸಂಖ್ಯೆ 134 ಕೋಟಿ ಇದ್ದರೆ, ಫ್ರಾನ್ಸ್ ಜನಸಂಖ್ಯೆ ಕೇವಲ 6.7 ಕೋಟಿ ಇದೆ. ಹೀಗಾಗಿ ಭಾರತದ ತಲಾ ಆದಾಯವನ್ನು ಜಿಡಿಪಿಗೆ ಹೋಲಿಸಿದರೆ ಫ್ರಾನ್ಸ್‍ನ ತಲಾ ಆದಾಯದ 20 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ. ಫ್ರಾನ್ಸ್ ನಲ್ಲಿ 6.78 ಕೋಟಿ ಜನಸಂಖ್ಯೆಯಿದೆ.

    ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯಾದ ಬಳಿಕ ಭಾರತದ ಆರ್ಥಿಕತೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಏಷ್ಯಾದಲ್ಲಿ ಚೀನಾದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದರೆ ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ ಎಂದು ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದೆ.

    ವಿಶ್ವದ ಐದು ದೊಡ್ಡ ಅರ್ಥವ್ಯವಸ್ಥೆಯ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನದಲ್ಲಿ ಅನುಕ್ರಮವಾಗಿ ಇಂಗ್ಲೆಂಡ್, ಚೀನಾ, ಜಪಾನ್, ಜರ್ಮನಿ ಪಡೆದುಕೊಂಡಿವೆ.

    ಈ ಹಿಂದೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಕಾರ 2019 ರ ಭಾರತ ಆರ್ಥಿಕ ಪ್ರಗತಿ 7.8% ಗೆ ಹೆಚ್ಚಳವಾಗಲಿದೆ ಎಂದು ತಿಳಿಸಿತ್ತು. 2018 ರಲ್ಲಿ ವರ್ಷದಲ್ಲಿ ಭಾರತದ ಜಿಡಿಪಿ ದರ 7.4% ಕ್ಕೆ ಏರಿಕೆ ಆಗಲಿದ್ದು, ಈ ವೇಳೆ ಚೀನಾ 6.8% ರಷ್ಟು ಹೊಂದಿರಲಿದೆ ಎಂದು ಐಎಂಎಫ್ ಹೇಳಿದೆ.

    ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ಈ ವರ್ಷವೇ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಮೀರಿಸಲಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2032ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಲಂಡನ್ ಮೂಲದ ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರೀಸರ್ಚ್ ಈ ಹಿಂದೆ ಭವಿಷ್ಯ ನುಡಿದಿತ್ತು.

    ಯಾವ ಅವಧಿಯಲ್ಲಿ ಭಾರತದ ಜಿಡಿಪಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.7%
    ಸೆಪ್ಟೆಂಬರ್ 2017 – 6.5%
    ಡಿಸೆಂಬರ್ 2017 – 7.2%

  • ಜಿಡಿಪಿ ಬೆಳವಣಿಗೆ – ಚೀನಾ ಹಿಂದಿಕ್ಕಿ ಆಗ್ರಸ್ಥಾನ ಕಾಯ್ದುಕೊಂಡ ಭಾರತ

    ಜಿಡಿಪಿ ಬೆಳವಣಿಗೆ – ಚೀನಾ ಹಿಂದಿಕ್ಕಿ ಆಗ್ರಸ್ಥಾನ ಕಾಯ್ದುಕೊಂಡ ಭಾರತ

    ನವದೆಹಲಿ: ಕೇಂದ್ರ ಎನ್‍ಡಿಎ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾದ ನಾಲ್ಕನೇಯ ತ್ರೈಮಾಸಿಕದಲ್ಲಿ ಶೇ. 7.7 ರಷ್ಟು ಏರಿಕೆ ಆಗಿದ್ದು, ಚೀನಾವನ್ನು ಹಿಂದಿಕ್ಕಿದೆ. ಈ ಅವಧಿಯಲ್ಲಿ ಚೀನಾ 6.8% ಪ್ರಗತಿ ಸಾಧಿಸಿದೆ.

    ಭಾರತದ ಜಿಡಿಪಿ ಬೆಳವಣಿಗೆಗೆ ಪ್ರಮುಖ 7 ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ವೇಗದ ಪ್ರಗತಿ ಕಾರಣವಾಗಿದ್ದು, ಪ್ರಮುಖವಾಗಿ ಕೃಷಿ (4.5%), ಉತ್ಪಾದನೆ (9.1%) ಮತ್ತು ನಿರ್ಮಾಣ ಕ್ಷೇತ್ರದಲ್ಲಿ (11.5%) ತಮ್ಮ ಪಾಲುದಾರಿಕೆಯನ್ನು ನೀಡಿದೆ. ಭಾರತ ಏಷ್ಯಾ ರಾಷ್ಟ್ರಗಳಲ್ಲಿ ಮೂರನೇ ಅತೀದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.

    ಪ್ರಸಕ್ತ 2017-2018 ವರ್ಷದ ನಾಲ್ಕು ತ್ರೈಮಾಸಿಕಗಳಲ್ಲಿ ಕ್ರಮವಾಗಿ 5.6%, 6.3%, 7% ಮತ್ತು 7.7% ಬೆಳವಣಿಗೆಯನ್ನು ದಾಖಲಿಸಿದೆ. ಈ ಅಂಕಿ ಅಂಶಗಳು ಕೇಂದ್ರ ಸರ್ಕಾರ ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳಿಗೆ ಸಾಕ್ಷಿಯಾಗಿದೆ. ಪ್ರಮುಖವಾಗಿ ದೇಶದ ಉತ್ಪಾದನಾ ಕ್ಷೇತ್ರದಲ್ಲಿ 2017 -2018 ರ ಎರಡು ತ್ರೈಮಾಸಿಕದಲ್ಲಿ ಕ್ರಮವಾಗಿ 8.5% ಹಾಗೂ 9.1% ರಷ್ಟು ಹೆಚ್ಚಳವಾಗಿದೆ. ಅಲ್ಲದೇ ಕೇಂದ್ರ ಜಾರಿಗೆ ತಂದ ಜಿಎಸ್‍ಟಿ ಕ್ರಮಗಳು ಕೈಗಾರಿಕಾ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಆರ್ಥಿಕ ತಜ್ಞರದ ತುಷಾರ ಆರೋರ ಅವರು, ಜಿಡಿಪಿ ಬೆಳವಣಿಗೆ ದರದ ಅಂದಾಜು ಮಟ್ಟವನ್ನು ದಾಟಿ ಆರ್ಥಿಕ ಪ್ರಗತಿ ಕಂಡಿದೆ. ಅದರಲ್ಲೂ ಜಿಎಸ್‍ಟಿ ಜಾರಿಗೆಯಿಂದ ಉಂಟಾದ ತೊಂದರೆ ಸಾಮರ್ಥವಾಗಿ ನಿಭಾಸಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಜಿಡಿಪಿ ಬೆಳವಣಿಗೆ ಮಾರ್ಚ್ ಅಂತ್ಯದ ವೇಳೆಗೆ ಶೇ. 7% ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಅಂದಾಜು ಮಾಡಿದ್ದರು.

    ಪ್ರಸ್ತುತ ದೇಶದ ಅರ್ಥಿಕ ದರ ಬೆಳವಣಿಕೆ ಏರಿಕೆ ಆಗಿರುವುದನ್ನು ಗಮನಿಸಿದ ಆರ್ಥಿಕ ತಜ್ಞರು ಮುಂದಿನ 2018 – 2019 ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖವಾಗಿ ಮುಂದಿನ ಆರ್ಥಿಕ ತ್ರೈಮಾಸಿಕದಲ್ಲಿ ಮನ್ಸೂನ್ ಮಳೆ ಆಧಾರಿಸಿ ಕೃಷಿಯಲ್ಲಿ ಹೆಚ್ಚಿನ ಬೆಳವಣಿಗೆ ಉಂಟಾಗುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಯಾವ ಅವಧಿಯಲ್ಲಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.7%
    ಸೆಪ್ಟೆಂಬರ್ 2017 – 6.5%
    ಡಿಸೆಂಬರ್ 2017 – 7.2%
    ಮಾರ್ಚ್ 2018 – 7.7%

  • ಜಿಡಿಪಿ ದರ 7.2%ಕ್ಕೆ ಏರಿಕೆ- ಚೀನಾವನ್ನು ಹಿಂದಿಕ್ಕಿದ ಭಾರತ

    ಜಿಡಿಪಿ ದರ 7.2%ಕ್ಕೆ ಏರಿಕೆ- ಚೀನಾವನ್ನು ಹಿಂದಿಕ್ಕಿದ ಭಾರತ

    ನವದೆಹಲಿ: ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ನಂತರ ತೀವ್ರವಾಗಿ ಕುಸಿತಗೊಂಡಿದ್ದ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾದ ಮೂರನೇ ತ್ರೈಮಾಸಿಕದಲ್ಲಿ ಏರಿಕೆ ಆಗಿದೆ.

    ಆಕ್ಟೋಬರ್, ನವೆಂಬರ್, ಡಿಸೆಂಬರ್ ಅವಧಿಯ ಜಿಡಿಪಿ ದರ 7.2% ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಕಳೆದ ವರ್ಷದ ಅರಂಭದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಅತ್ಯಂತ ಕನಿಷ್ಠ ಮಟ್ಟ 5.7% ದಾಖಲಿಸುವ ಮೂಲಕ ಕುಸಿದಿತ್ತು. ಅಲ್ಲದೇ ನೋಟು ರದ್ದತಿಯ ಬಳಿಕ ಜಿಡಿಪಿ ಪ್ರಗತಿ ಶೇ 1.3 ರಷ್ಟು ಇಳಿಕೆ ಕಂಡಿತ್ತು.

    ದೇಶದ ಜಿಡಿಪಿ ಬೆಳವಣಿಗೆ ದರ ಕುರಿತಂತೆ ಹಲವು ಆರ್ಥಿಕ ಸಮೀಕ್ಷೆಗಳು ನೀಡಿದ್ದ ಜಿಡಿಪಿ ಬೆಳವಣಿಗೆ ದರದ ಅಂದಾಜು ಮಟ್ಟವನ್ನು ದಾಟಿ ಆರ್ಥಿಕ ಪ್ರಗತಿ ಕಂಡಿದೆ. ಅದರಲ್ಲೂ ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿದೆ. ದೇಶದ ಪ್ರಮುಖ 35 ಆರ್ಥಿಕ ಸಮೀಕ್ಷೆಗಳು ಆಕ್ಟೋಬರ್- ಡಿಸೆಂಬರ್ ನಡುವಿನ ತ್ರೈಮಾಸಿಕದ ಬೆಳವಣಿಗೆ 6.9% ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು.

    ಮಾರ್ಚ್ 31 2018 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಹಿಂದೆ ಹೊಂದಿದ್ದ ಅರ್ಥಿಕ ಬೆಳವಣಿಗೆ ದರ 6.5% ಕ್ಕಿಂತ 6.6% ಕ್ಕೆ ಹೆಚ್ಚಳಗೊಂಡಿದೆ. ಇದರೊಂದಿಗೆ ವಿಶ್ವ ಮಟ್ಟದಲ್ಲಿ ಚೀನಾ ನಂತದ ಅತ್ಯಂತ ಹೆಚ್ಚು ಆರ್ಥಿಕ ಬೆಳವಣಿಗೆ ದರ ಹೊಂದಿರುವ ದೇಶವಾಗಿದೆ. ಡಿಸೆಂಬರ್ ಗೆ ಮುಕ್ತಾಯಗೊಂಡ ಅವಧಿಯಲ್ಲಿ ಚೀನಾ ದರ 6.8% ರಷ್ಟಿತ್ತು.

    ಪ್ರಸ್ತುತ ದೇಶದ ಅರ್ಥಿಕ ದರ ಬೆಳವಣಿಕೆ ಏರಿಕೆ ಆಗಿರುವುದನ್ನು ಗಮನಿಸಿದ ಆರ್ಥಿಕ ತಜ್ಞರು ಮುಂದಿನ 2018 ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜಿಎಸ್‍ಟಿ ಜಾರಿಗೆ ಆದ ಬಳಿಕ ಕಡಿಮೆ ಆಗಿದ್ದ ಜಿಡಿಪಿ ದರ ಮುಂದಿನ ಆರ್ಥಿಕ ತ್ರೈಮಾಸಿಕದಲ್ಲಿ 7.6% ರಷ್ಟು ಹೆಚ್ಚಳವಾಗಲಿದೆ ಎಂದು ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ ನ ನಿರ್ದೇಶಕರಾದ ಅನಿತಾ ಗಾಂಧಿ ಹೇಳಿದ್ದಾರೆ. ಅಲ್ಲದೇ ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಕಾರ 2019 ರ ಭಾರತ ಆರ್ಥಿಕ ಪ್ರಗತಿ 7.8% ಗೆ ಹೆಚ್ಚಳವಾಗಲಿದ ಎಂದು ತಿಳಿಸಿದೆ. 2018 ರಲ್ಲಿ ವರ್ಷದಲ್ಲಿ ಭಾರತದ ಜಿಡಿಪಿ ದರ 7.4% ಕ್ಕೆ ಏರಿಕೆ ಆಗಲಿದ್ದು, ಈ ವೇಳೆ ಚೀನಾ 6.8% ರಷ್ಟು ಹೊಂದಿರಲಿದೆ ಎಂದು ಐಎಂಎಫ್ ಹೇಳಿದೆ.

    ಯಾವ ಅವಧಿಯಲ್ಲಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.7%
    ಸೆಪ್ಟೆಂಬರ್ 2017 – 6.5%
    ಡಿಸೆಂಬರ್ 2017 -7.2%