Tag: gdp

  • ದೇಶದ ಪ್ರಗತಿ-ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತೆ: ಸಿದ್ದರಾಮಯ್ಯ

    ದೇಶದ ಪ್ರಗತಿ-ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತೆ: ಸಿದ್ದರಾಮಯ್ಯ

    – ಇದು ಮೇಕಿನ್ ಇಂಡಿಯಾ ಅಲ್ಲ ಮಾರಾಟವಾಗುತ್ತಿರುವ ಇಂಡಿಯಾ

    ಬೆಂಗಳೂರು: ಸದ್ಯ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತೆರಿಗೆ ನೀತಿ ದೇಶದ ಮಧ್ಯಮ ಮತ್ತು ದುಡಿಯುವ ವರ್ಗಗಳ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳ ಕುರಿತು ಮಾನ್ಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ, `ರಾಜನು ತೋಟವನ್ನು ಕಾಯುವ ಮಾಲಿಯಂತಿರಬೇಕೆ ಹೊರತು ಇದ್ದಿಲನ್ನು ಮಾರುವವನಂತಾಗಬಾರದು. ಹಣ್ಣಿನ ಮರಗಳನ್ನು ಕಡಿದು ಇದ್ದಿಲು ಮಾರುವಂತಹ ಸ್ವಭಾವದ ರಾಜನು ಜನಪೀಡಕನಾಗಿರುತ್ತಾನೆ. ಆಕಳನ್ನು ಪ್ರೀತಿಯಿಂದ ಸಾಕುವ ಗೋವಳಿಗನು ನವಿರಾಗಿ ಹಾಲು ಕರೆದುಕೊಳ್ಳುವಂತೆ ತೆರಿಗೆ ಇರಬೇಕು. ಹಾಲು ಕರೆಯುವ ನೆಪದಲ್ಲಿ ರಕ್ತ ಹೀರಿಕೊಂಡರೆ ಹಸು ಮತ್ತು ಕರುಗಳೆರಡೂ ಮರಣ ಹೊಂದುತ್ತವೆ. ಕರುವಿಗೂ ಹಾಲು ಸಿಗುವಂತಾದರೆ ಅದು ಮುಂದೆ ಎತ್ತಾಗಿ ಅಥವಾ ಹಸುವಾಗಿ ರಾಜ್ಯದ ಸಂಪತ್ತನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ತೆರಿಗೆ ಮೂಲಗಳೆಲ್ಲ ಬತ್ತಿ ಹೋಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ತೆರಿಗೆಯು, ದುಂಬಿಯು ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರಬೇಕು. ಇದರಿಂದ ಹೂವು ಫಲ ಕಟ್ಟುತ್ತದೆ ಜೇನು ಸಂತತಿಯನ್ನೂ ಹೆಚ್ಚಿಸಿಕೊಳ್ಳುತ್ತದೆ’ ಎಂದು ತೆರಿಗೆ ನೀತಿಯನ್ನು ಬೋಧಿಸುತ್ತಾನೆ.

    ಮಾತೆತ್ತಿದರೆ ರಾಮಾಯಣ, ಮಹಾಭಾರತದ ಹೆಸರುಗಳನ್ನು ಪ್ರಸ್ತಾಪಿಸುವ ಮೋದಿಯವರಿಗೆ ಯಾರಾದರೂ ಭೀಷ್ಮರ ಈ ಮಾತುಗಳನ್ನು ಓದಿ ಹೇಳಬೇಕು. ಮನಮೋಹನ್‍ಸಿಂಗ್ ರವರು ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5 ನೇ ಸ್ಥಾನದಲ್ಲಿತ್ತು. ಆದರೆ 2020 ರ ಜಿ.ಡಿ.ಪಿ. ಬೆಳವಣಿಗೆಯನ್ನು ಆಧರಿಸಿ ಕೌಶಿಕ್ ಬಸು ಮುಂತಾದ ಅರ್ಥಶಾಸ್ತ್ರಜ್ಞರು ವಿಶ್ವದ 193 ದೇಶಗಳಲ್ಲಿ ಭಾರತ 164 ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಂದಾಜು ಮಾಡಿದ್ದಾರೆ. ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾದೇಶದ ತಲಾವಾರು ಜಿ.ಡಿ.ಪಿ. ಶೇ. 4 ರಷ್ಟು ಬೆಳವಣಿಗೆ ಹೊಂದಿದೆ. ಬಾಂಗ್ಲಾದಲ್ಲಿ ತಲಾವಾರು ಜಿ.ಡಿ.ಪಿ. 1888 ಡಾಲರ್ ಇದೆ. 2020 ರಲ್ಲಿ ಭಾರತದ ತಲಾವಾರು ಜಿ.ಡಿ.ಪಿ. 1877 ಡಾಲರ್‍ಗೆ ಕುಸಿದಿದೆ. 2014 ರಲ್ಲಿ ಬಾಂಗ್ಲಾದೇಶಕ್ಕಿಂತ ಸುಮಾರು 40 ಪಟ್ಟು ಮುಂದೆ ಇದ್ದ ದೇಶದ ಆರ್ಥಿಕತೆ ನರೇಂದ್ರ ಮೋದಿಯವರ ಅಪಕ್ವ, ಕಾರ್ಪೊರೇಟ್ ಪರ ಆರ್ಥಿಕ ನೀತಿಗಳಿಂದಾಗಿ ನೆಲ ಕಚ್ಚುವಂತಾಗಿದೆ.

    2004 ರಲ್ಲಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಶೇ.72 ರಷ್ಟು ಮತ್ತು ಕಾರ್ಪೊರೇಟ್ ಬಂಡವಾಳಿಗರಿಂದ ಶೇ.28 ರಷ್ಟು ತೆರಿಗೆಯನ್ನು ಸಂಗ್ರಹಿಸುತಿತ್ತು. ಆದರೆ 2010 ಕ್ಕೆ ಬರುವ ವೇಳೆಗೆ ಮನಮೋಹನಸಿಂಗ್ ಅವರು ಜನರಿಂದ ಸಂಗ್ರಹಿಸುವ ತೆರಿಗೆಯನ್ನು ಶೇ.58 ಕ್ಕೆ ಇಳಿಸಿದರು. ಕಾರ್ಪೊರೇಟ್ ಕಂಪೆನಿಗಳಿಂದ ಸಂಗ್ರಹಿಸುವ ತೆರಿಗೆಯನ್ನು ಶೇ 28 ರಿಂದ ಶೇ.40 ಕ್ಕೆ ಹೆಚ್ಚಿಸಿದರು. ಅವರು ಅಧಿಕಾರದಿಂದ ಇಳಿದಾಗಲೂ ತೆರಿಗೆ ಸಂಗ್ರಹಣೆಯಲ್ಲಿ ಪರೋಕ್ಷ ತೆರಿಗೆ ಶೇ.63 ಮತ್ತು ಪ್ರತ್ಯಕ್ಷ ತೆರಿಗೆ ಶೇ.37 ರಷ್ಟು ಇತ್ತು.

    ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ. ಆದರೆ ಮೋದಿಯವರ ಸರ್ಕಾರದ ನೀತಿಗಳಿಂದಾಗಿ ಜನರ ಮೇಲಿನ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ಎಂದರೆ, 15 ನೇ ಹಣಕಾಸು ಆಯೋಗವು ಅಂದಾಜು ಮಾಡಿರುವಂತೆ 2024-25 ಕ್ಕೆ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ ಕೇವಲ ಶೇ. 34.75 ರಷ್ಟು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಜನರು ಪಾವತಿಸುವ ಜಿ.ಎಸ್‍ಟಿ ಯು ಶೇ.45.48 ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ವಿಧಿಸುತ್ತಿರುವ ಸುಂಕಗಳು ಶೇ. 62 ರಷ್ಟು ಹೆಚ್ಚಾಗುತ್ತವೆ ಎಂದಿದೆ. ಅಂದರೆ ಜನರು ಇನ್ನಷ್ಟು ಅನುಭವಿಸಬೇಕಾಗಿದೆ ಎಂದು ಅರ್ಥವಾಗುತ್ತದೆ.

    ಏಕೆ ಈ ಮಟ್ಟದ ತೆರಿಗೆ ಸುಲಿಗೆ ಎಂದರೆ ಮೋದಿ ಸಮರ್ಥಕರು, ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲದ ಬಡ್ಡಿ ತೀರಿಸಲು ಮೋದಿ ಅವರು ತೆರಿಗೆ ವಸೂಲಿ ಮಾಡಿದ್ದಾರೆ ಎನ್ನುವ ಹಾಸ್ಯಾಸ್ಪದ ಕಾರಣ ನೀಡುತ್ತಿದ್ದಾರೆ.

    ವಾಸ್ತವ ಏನೆಂದರೆ, ದೇಶಕ್ಕೆ ಸ್ವಾತಂತ್ರಯ ಬಂದಾಗಿನಿಂದ 2014 ರ ಮಾರ್ಚ್ ವರೆಗೆ 67 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಸಾಲ 53.11 ಲಕ್ಷ ಕೋಟಿ ರೂ.ಗಳು. ಆದರೆ 2014 ರ ಜೂನ್ ನಿಂದ 2021 ರ ವೇಳೆಗೆ 7 ವರ್ಷದಲ್ಲಿ ಮಾಡಿರುವ ಸಾಲ 82.7 ಲಕ್ಷ ಕೋಟಿ ರೂಪಾಯಿ. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ 135.87 ಲಕ್ಷ ಕೋಟಿಗಳಾಗುತ್ತವೆ. ಮತ್ತೊಂದು ಕಡೆ ಅದಾನಿ ಮುಂತಾದ ಕೆಲ ಮೋದಿ ಪರಮಾಪ್ತ ಕಾರ್ಪೊರೇಟ್ ಬಂಡವಾಳಿಗರ ಸುಮಾರು 11 ಲಕ್ಷ ಕೋಟಿಗಳಷ್ಟು ಸಾಲವನ್ನು ಎನ್‍ಪಿಎ (ವಸೂಲಾಗದ ಸಾಲ) ಎಂದು ಘೋಷಿಸಲಾಗಿದೆ. 2018 ರಿಂದ ಈಚೆಗೆ ಕಳೆದ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ರೈಟ್ ಆಫ್ [ಮನ್ನಾ] ಮಾಡಲಾಗಿದೆ.

    ಭಾರತ ಮತ್ತು ಇತರೆ ದೇಶಗಳ ತೆರಿಗೆ ಪದ್ಧತಿ:
    ಟೇಬಲ್ 1
    ಜಗತ್ತಿನ ಮುಂದುವರಿದ ದೇಶಗಳು ಮತ್ತು ನಮ್ಮ ಅಕ್ಕ ಪಕ್ಕದ ದೇಶಗಳ ತೆರಿಗೆ ವ್ಯವಸ್ಥೆ ಹೇಗಿದೆ ಎಂಬುದರ ಮಾಹಿತಿ ಇದು. ಈ ದೇಶಗಳು ಹೇಗೆ ಮುಂದುವರೆದಿವೆ? ಏಕೆ ಮುಂದುವರೆದಿವೆ? ಎಂಬುದು ಈ ಮೇಲಿನ ಪಟ್ಟಿಯನ್ನು ನೋಡಿದರೆ ಅರ್ಥವಾಗುತ್ತದೆ. ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ವಿಧಿಸುತ್ತಿರುವ ದೇಶ ಭಾರತ. ಹಾಗೆಯೇ ಕೋಟ್ಯಾಂತರ ಆದಾಯವಿರುವವರಿಗೂ ಸಹ ಅತ್ಯಂತ ಕಡಿಮೆ ಆದಾಯ ತೆರಿಗೆ ವಿಧಿಸುತ್ತಿರುವುದೂ ಸಹ ಭಾರತದಲ್ಲೆ. ಆದರೆ ಇದೇ ಸಂದರ್ಭದಲ್ಲಿ ಕಡಿಮೆ ಆದಾಯದವರಿಗೆ 5-10% ತೆರಿಗೆ ಇದೆ. ಅಂದರೆ 10 ಲಕ್ಷ ದುಡಿಯುವವರು ಶೇ. 20 ರಷ್ಟು ತೆರಿಗೆ ಕಟ್ಟಬೇಕು. 15 ಲಕ್ಷದ ಒಂದು ರೂಪಾಯಿ ದುಡಿಯುವವರು ಶೇ.30 ರಷ್ಟು ತೆರಿಗೆ ಕಟ್ಟಬೇಕು. ಅದೇ ಸಂದರ್ಭದಲ್ಲಿ ಸಾವಿರಾರು ಕೋಟಿ ಆದಾಯ ಇರುವವರೂ ಶೇ.30 ಕಟ್ಟಬೇಕು. ನಮ್ಮ ದೇಶದಲ್ಲಿ ಅತಿ ಹೆಚ್ಚು ಆದಾಯವಿರುವವರು ಮತ್ತು ಕಾರ್ಪೊರೇಟ್ ಬಂಡವಾಳಿಗರು ಕಡಿಮೆ ತೆರಿಗೆ ಕಟ್ಟುತ್ತಾರೆ. ಅದೆ ಸಂದರ್ಭದಲ್ಲಿ ಪರೋಕ್ಷ ತೆರಿಗೆ ಕಟ್ಟುವ ನಮ್ಮ ದೇಶದ ಜನರು ಅಮೆರಿಕ, ಚೀನಾ, ಇಂಗ್ಲೆಂಡ್ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಜನರಿಗಿಂತಲೂ ಹೆಚ್ಚು ತೆರಿಗೆಯನ್ನು ಪಾವತಿಸುತ್ತಾರೆ.

    ದೇಶದ ದೊಡ್ಡ ಸಂಖ್ಯೆಯ ಯುವಕರು ಮೋದಿಯವರನ್ನು ನಂಬಿ ಕಣ್ಣು ಮುಚ್ಚಿಕೊಂಡು ಆಯ್ಕೆ ಮಾಡಿದರು. ಈಗ ಅವರೆಲ್ಲಾ ಕಣ್ ಕಣ್ ಬಿಡುತ್ತಿದ್ದಾರೆ. 2014 ರಲ್ಲಿ 20 ವರ್ಷದ ಯುವಕನಿಗೆ 2024 ರ ವೇಳೆಗೆ 30 ವರ್ಷ ವಯಸ್ಸಾಗುತ್ತದೆ. 30 ವರ್ಷದವರಿಗೆ 40 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ. ದೇಶವೊಂದರ ದೊಡ್ಡ ಸಂಪತ್ತುಗಳಲ್ಲಿ ಮಾನವ ಸಂಪತ್ತೂ ಒಂದು. ಯಾವ ದೇಶ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತದೊ ಅಂಥಹ ದೇಶದ ಅಭಿವೃದ್ಧಿ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಆ ದೇಶದ ಆರ್ಥಿಕತೆ ವಿನಾಶದ ಹಾದಿ ಹಿಡಿಯುತ್ತದೆ. ಇದು ಮೇಕಿನ್ ಇಂಡಿಯಾ ಅಲ್ಲ ಮಾರಾಟವಾಗುತ್ತಿರುವ ಇಂಡಿಯಾ
    (ಡಾಲರ್ ಎದುರಿಗಿನ ಇಂದಿನ ರೂಪಾಯಿ ಮೌಲ್ಯದಲ್ಲಿ)

    ಟೇಬಲ್ 2
    ಯಾವುದೇ ದೇಶ ಸ್ವಾವಲಂಭಿಯಾಗುವುದು ಎಂದರೆ ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು. ಹಾಗಾಗಬೇಕಾದರೆ ಆಮದು ಶುಲ್ಕವನ್ನು ಅಂದರೆ ಕಸ್ಟಮ್ಸ್ ತೆರಿಗೆಗಳನ್ನು ಹೆಚ್ಚಿಸಬೇಕು. ಆದರೆ ಮೇಕ್ ಇನ್ ಇಂಡಿಯಾ ಎಂದು ಘೋಷಣೆ ಮಾಡಿದ ಭಾರತದಲ್ಲಿ ಇಂದು ಆಗುತ್ತಿರುವುದೇನು? 2013-14 ರಲ್ಲಿ ರೂ.32.20 ಲಕ್ಷ ಕೋಟಿ ಮೌಲ್ಯದಷ್ಟು ಆಮದು ಮಾಡುತ್ತಿದ್ದರೆ, 2019-20 ರಲ್ಲಿ ಅದು ಇನ್ನಷ್ಟು ಹೆಚ್ಚಾಗಿ ಹತ್ತತ್ತಿರ ರೂ.35 ಲಕ್ಷ ಕೋಟಿ ಮೌಲ್ಯದಷ್ಟು ವಸ್ತುಗಳ ಆಮದನ್ನು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಘೋಷಣೆ ನಿಜವೇ ಆಗಿದ್ದರೆ, ರಫ್ತಿನ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಬೇಕಾಗಿತ್ತು. ಆದರೆ ಇಲ್ಲಿ ಸುಮಾರು ರೂ.1.25 ಲಕ್ಷ ಕೋಟಿ ಮೌಲ್ಯದಷ್ಟು 2013-14ಕ್ಕೆ ಹೋಲಿಸಿದರೆ ಕಡಿಮೆ ರಫ್ತು ಮಾಡುತ್ತಿದ್ದೇವೆ.

    2015 ರಲ್ಲಿ ಮನಮೋಹನ್ ಸಿಂಗ್‍ರವರು ಅಧಿಕಾರದಿಂದ ಇಳಿದ ನಂತರದ ವರ್ಷದಲ್ಲೆ ರಫ್ತಿನ ಪ್ರಮಾಣ ರೂ. 19 ಲಕ್ಷ ಕೋಟಿಗಳಿಗೆ ಇಳಿಯಿತು. 2016 ರಲ್ಲಿ ರೂ.19 ಲಕ್ಷ ಕೋಟಿಗಳಿಗಿಂತಲೂ ಕಡಿಮೆಯಾಗುತ್ತದೆ. ಇದೇ ಅವಧಿಯ ಕಸ್ಟಮ್ಸ್ ತೆರಿಗೆಯ ಸಂಗ್ರಹಣೆ ಕೂಡ ವೇಗವಾಗಿ ಕಡಿಮೆಯಾಗುತ್ತಿದೆ. ಅಂದರೆ ಆಮದು ವಸ್ತುಗಳ ಮೇಲೆ ಅತ್ಯಂತ ಕಡಿಮೆ ಮಟ್ಟದ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕಸ್ಟಮ್ಸ್ ತೆರಿಗೆ 1,72,085 ಕೋಟಿಗಳಿಂದ 1,09,282 ಕೋಟಿ ರೂಗಳಿಗೆ ಇಳಿಕೆಯಾಗಿದೆ. ಆಮದು ಶುಲ್ಕ ಕಡಿಮೆ ಮಾಡಿದರೆ ವಿದೇಶಿ ವಸ್ತುಗಳ ಬೆಲೆ ಕಡಿಮೆಯಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ ನಿಮ್ಮ ಮೇಕ್ ಇನ್ ಇಂಡಿಯಾ ಘೋಷಣೆ ಬರೀ ಬುರ್ನಾಸು ಎನ್ನಿಸಿಕೊಳ್ಳುವುದಿಲ್ಲವೆ?

    ಯಾವಾಗ ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು 2014 ರಲ್ಲಿ ಘೋಷಣೆ ಮಾಡಿದರೋ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಬಿಟ್ಟರು. ರೇಷ್ಮೆ ಮೇಲಿನ ಆಮದು ತೆರಿಗೆ ಶೇ. 30 ರಿಂದ ಶೇ.5 ಕ್ಕೆ ಇಳಿಯಿತು. ಅನೇಕ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಯಾಯಿತು. ಒಂದು ಕೆ.ಜಿ.ಗೆ 750/-ನಂತೆ ಮಾರಾಟವಾಗುತ್ತಿದ್ದ ಮೆಣಸು ಈಗ ರೂ.250/- ಕ್ಕೆ ಇಳಿದು ಬಿಟ್ಟಿದೆ. ರೇಷ್ಮೆ ಬೆಳೆಗಾರರು ಮತ್ತು ರೈತರ ಆತ್ಮಹತ್ಯೆಗಳು ಹೆಚ್ಚಾಗಲು ಇದು ಪ್ರಮುಖ ಕಾರಣ.

    ಇಂಥ ಹಲವಾರು ಕಾರಣಗಳಿಂದಾಗಿ, ಪ್ರಧಾನಿ ಮೋದಿಯವರು ಮಾಡಿದ ಘೋಷಣೆಗಳನ್ನು, ಮಾತುಗಳನ್ನು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅರ್ಥ ಮಾಡಿಕೊಂಡರೆ ಮಾತ್ರ ನಿಜ ಏನೆಂದು ಅರ್ಥವಾಗುತ್ತದೆ. ದೇಶವನ್ನು ಅಭಿವೃಧ್ಧಿ ಮಾಡುತ್ತಿದ್ದೇನೆ ಎಂದು ಅವರು ಘೋಷಣೆ ಕೂಗಿದರೆ ದೇಶವನ್ನು ಮಾರಾಟ ಮಾಡುತ್ತಿದ್ದೇನೆ ಎಂಬಂತೆ ಕೇಳಿಸುತ್ತದೆ.

  • ಡಿಜಿಟಲ್ ಆರ್ಥಿಕತೆಗೆ ಉತ್ತೇಜನ, ಬೆಂಗಳೂರು ವ್ಯಾಪ್ತಿಯಾಚೆಗೂ ಸಮತೋಲನ ಬೆಳವಣಿಗೆ: ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್

    ಡಿಜಿಟಲ್ ಆರ್ಥಿಕತೆಗೆ ಉತ್ತೇಜನ, ಬೆಂಗಳೂರು ವ್ಯಾಪ್ತಿಯಾಚೆಗೂ ಸಮತೋಲನ ಬೆಳವಣಿಗೆ: ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್

    ಬೆಂಗಳೂರು: ಕರ್ನಾಟಕದ ಒಟ್ಟಾರೆ ಉತ್ಪಾದನೆಯಲ್ಲಿ (ಎಸ್.ಡಿ.ಜಿ.ಪಿ.) ಡಿಜಿಟಲ್ ಆರ್ಥಿಕತೆಯ ಕೊಡುಗೆಯನ್ನು ಮುಂದಿನ ಐದು ವರ್ಷಗಳಲ್ಲಿ ಶೇ.30 ರಷ್ಟು ಹೆಚ್ಚಿಸುವ ಗುರಿ ಹೊಂದಿರುವ ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ (ಕೆಡಿಇಎಂ) ಉದ್ಘಾಟನೆ ಹಾಗೂ ಇದಕ್ಕೆ ಪೂರಕವಾದ ‘ಬೆಂಗಳೂರು ವ್ಯಾಪ್ತಿಯಾಚೆ’ (ಬಿಯಾಂಡ್ ಬೆಂಗಳೂರು) ವರದಿಯ ಅನಾವರಣ ಮಾಡಿದ ಡಿಸಿಎಂ ಆಶ್ವಥ್ ನಾರಾಯನ್ ಡಿಜಿಟಲ್ ಆರ್ಥಿಕತೆಯಲ್ಲಿ ಬೆಂಗಳೂರು ವ್ಯಾಪ್ತಿಯಾಚೆಗೂ ಸಮತೋಲನ ಬೆಳವಣಿಗೆ ಕಾಣಲಿ ಎಂದರು.

    ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಿಸಿಎಂ, ಕೆಡಿಇಎಂ ಹೆಚ್ಚು ಉದ್ಯಮಸ್ನೇಹಿ ಆಗಿರಬೇಕೆಂಬ ಸರ್ಕಾರ ಇದರಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು (ಶೇ.51ರಷ್ಟು) ಉದ್ಯಮ ಸಂಘಟನೆಗಳಿಗೇ ಬಿಟ್ಟುಕೊಟ್ಟಿದೆ. ಸೌಕರ್ಯ ಒದಗಿಸುವ ಪಾತ್ರ ನಿರ್ವಹಿಸಲು ಒತ್ತು ಕೊಡಲಿರುವ ಸರ್ಕಾರವು ಇದರಲ್ಲಿ ಶೇ.49ರಷ್ಟು ಪಾಲನ್ನು ಮಾತ್ರ ತಾನು ಇರಿಸಿಕೊಂಡಿದೆ ಎಂದು ಹೇಳಿದರು.

    ಡಿಜಿಟಲ್ ಆರ್ಥಿಕತೆಯನ್ನು ಸದೃಢಗೊಳಿಸುವುದಕ್ಕಾಗಿ ಕುಗ್ರಾಮಗಳಲ್ಲೂ ಸಂಪರ್ಕ ಜಾಲ ಉತ್ತಮಗೊಳಿಸುವ, ದಿನದ 24 ಗಂಟೆಯೂ ವಿದ್ಯುತ್ ಸೌಲಭ್ಯ ಒದಗಿಸುವಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರ ಗಮನ ಕೇಂದ್ರೀಕರಿಸುತ್ತದೆ. ಜೊತೆಗೆ ಗ್ರಾಮೀಣ- ನಗರ ಪ್ರದೇಶಗಳ ನಡುವಿನ ಅಂತರವನ್ನು ನಿವಾರಿಸಲು ಒತ್ತು ಕೊಡಲಾಗುತ್ತಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಉದ್ಯಮಗಳು ವಿದ್ಯಾರ್ಥಿ ಅವಧಿಯ ಇಂಟರ್ನ್ಷಿಪ್ ಗೆ ಉತ್ತೇಜನ ನೀಡುವ ಪ್ರವೃತ್ತಿ ಬೆಳೆಸುವ ಅಗತ್ಯವಿದೆ. ಪ್ರಸ್ತುತ ಇದಕ್ಕೆ ಸಂಬಂಧಿಸಿದಂತೆ ಉದ್ಯಮಗಳು ನಿರಾಸಕ್ತಿ ತಾಳಿವೆ. ಆದರೆ ಯುವಪೀಳಿಗೆಯೇ ಮುಂದಿನ ಭವಿಷ್ಯವಾದ್ದರಿಂದ ಅವರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಿಗೆ ಹೂಡಿಕೆಗಳನ್ನು ಆಕರ್ಷಿಸಿ 2025ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೆಡಿಇಎಂ ಹೊಂದಿದೆ. ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಅಭಿವೃದ್ಧಿ ಮತ್ತು ಸೇವೆಗಳನ್ನು ಒದಗಿಸುವುದು, ಆವಿಷ್ಕಾರಗಳು ಮತ್ತು ನವೋದ್ಯಮಗಳು, ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ.ಎಸ್.ಡಿ.ಎಂ.), `ಬೆಂಗಳೂರು ವ್ಯಾಪ್ತಿಯಾಚೆ’ (ಬಿಯಾಂಡ್ ಬೆಂಗಳೂರು) ಮತ್ತು ಪ್ರತಿಭಾ ಸಂವರ್ಧನೆ (ಟ್ಯಾಲೆಂಟ್ ಆಕ್ಸಲರೇಟರ್) ಈ ಐದು ವಲಯಗಳನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಲಿದೆ. ಕರ್ನಾಟಕದ ಮಾಹಿತಿ ತಂತ್ರಜ್ಞಾನ ರಫ್ತು ಮೊತ್ತವು 2025ರ ವೇಳೆಗೆ 150 ಶತಕೋಟಿ ಯು.ಎಸ್.ಡಾಲರ್ ಗಳ ಗುರಿ ಮುಟ್ಟಲು ಹಾಗೂ ರಾಜ್ಯದ ಆರ್ಥಿಕತೆಯು 300 ಶತಕೋಟಿ ಡಾಲರ್ ಗಳ ಗುರಿ ಸಾಧಿಸಲು ಕೆಡಿಇಎಂ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಡಾ.ಇ.ವಿ.ರಮಣರೆಡ್ಡಿ ಅವರು ಮಾತನಾಡಿ, ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿಗೆ ಮಾಹಿತಿ ತಂತ್ರಜ್ಞಾನ ವಲಯದ ಕೊಡುಗೆ ಶೇ.25ರಷ್ಟು ಇದ್ದು, ಇದರಲ್ಲಿ ಬೆಂಗಳೂರಿನ ಕೊಡುಗೆಯೇ ಶೇ.98ರಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಾಚೆಗಿನ ಪಾಲು ಹೆಚ್ಚಿಸುವ ಸಲುವಾಗಿ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಲಾಗಿದೆ. ದೇಶವು ಮುಂದಿನ ಐದು ವರ್ಷಗಳಲ್ಲಿ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಡಾಲರ್ ಆರ್ಥಿಕತೆಯಾಗುವ ವೇಳೆಗೆ ‘ಬೆಂಗಳೂರು ವ್ಯಾಪ್ತಿಯಾಚೆ’ಗಿನ ಐಟಿ ವಲಯದ ಪಾಲು ರಾಜ್ಯ ಜಿಡಿಪಿಗೆ ಶೇ 10ರಷ್ಟು ಇರಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.

    ನವೋದ್ಯಮ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ಉದ್ಯಮ-ಶೈಕ್ಷಣಿಕ ವಲಯ- ಸರ್ಕಾರ, ಇವುಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಡಿಇಎಂ ಕೆಲಸ ಮಾಡಲಿದೆ. ಸೂಕ್ತ ಕಾರ್ಯನೀತಿ ರೂಪಿಸಲು, ಕಾರ್ಯತಂತ್ರ ಅಳವಡಿಸಿಕೊಳ್ಳಲು, ರಾಜ್ಯವನ್ನು ಡಿಜಿಟಲ್ ಸಂಶೋಧನಾ ನೆಲೆಯನ್ನಾಗಿಸಲು ಕೆಡಿಇಎಂ ಪ್ರಯತ್ನ ನಿರತವಾಗಲಿದೆ ಎಂದರು.

    ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡ ಅವರು ಮಾತನಾಡಿ, ಮೈಸೂರು, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರ್ಗಿ, ಶಿವಮೊಗ್ಗ, ತುಮಕೂರು ಈ ಆರು ಕ್ಲಸ್ಟರ್ ಗಳಲ್ಲಿ ಡಿಟಿಜಲ್ ಆರ್ಥಿಕತೆ ಕೊಡುಗೆ ಹೆಚ್ಚಿಸಲು ಅವಕಾಶಗಳಿವೆ ಎಂದರು.

    ನ್ಯಾಸ್ ಕಾಂ, ಅಸೋಚಾಮ್, ಭಾರತೀಯ ವಿದ್ಯುನ್ಮಾನ ಮತ್ತು ಅರೆವಾಹಕ ಉದ್ಯಮಗಳ ಸಂಘಟನೆ (ಐಇಎಸ್‍ಎ) ಮತ್ತು ನವೋದ್ಯಮಗಳ ದೂರದರ್ಶಿತ್ವ ಸಮಿತಿಗಳು ಕೆಡಿಇಎಂ ನಲ್ಲಿ ಶೇ.51ರಷ್ಟು ಪಾಲುದಾರಿಕೆ ಹೊಂದಿವೆ. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನ್ಯಾಸ್ ಕಾಂ ಉಪಾಧ್ಯಕ್ಷ ವಿಶ್ವನಾಥ್, ಕೆಡಿಇಎಂ ಸದಸ್ಯ ನಾಗೇಶ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ/ಬಿಟಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೀನಾ ನಾಗರಾಜ್ ಕಾರ್ಯಕ್ರಮದಲ್ಲಿ ಮತ್ತಿತರರು ಉಪಸ್ಥಿತರಿದ್ದರು.

  • ಅನ್‌ಲಾಕ್‌ ಬಳಿಕ ಜಿಡಿಪಿ ಅಲ್ಪ ಚೇತರಿಕೆ – ಕಳೆದ ಬಾರಿ ಯಾವುದು ಎಷ್ಟಿತ್ತು?

    ಅನ್‌ಲಾಕ್‌ ಬಳಿಕ ಜಿಡಿಪಿ ಅಲ್ಪ ಚೇತರಿಕೆ – ಕಳೆದ ಬಾರಿ ಯಾವುದು ಎಷ್ಟಿತ್ತು?

    ನವದೆಹಲಿ: ಅನ್‍ಲಾಕ್ ಬಳಿಕ ದೇಶದ ಆರ್ಥಿಕತೆಯ ಚೇತರಿಕೆಯ ಸುಳಿವು ಸಿಕ್ಕಿದೆ. ಜುಲೈ-ಸೆಪ್ಟೆಂಬರ್ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ -7.5%ಕ್ಕೆ ಬಂದು ನಿಂತಿದೆ.

    ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ -23.9%ರಷ್ಟು ಕುಸಿತ ಕಂಡು ಇತಿಹಾಸ ಸೃಷ್ಟಿಸಿತ್ತು. ಇದು ಕಳೆದ 40 ವರ್ಷಗಳಲ್ಲೇ ಅತ್ಯಂತ ದೊಡ್ಡ ಕುಸಿತವಾಗಿತ್ತು. ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದ್ದ ಜಿಡಿಪಿ ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

    2019-2020ರ ಎರಡನೇ ತ್ರೈಮಾಸಿಕ  Vs 2020- 21 ಎರಡನೇ ತ್ರೈಮಾಸಿಕ

     

    ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಜಿಡಿಪಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, 2020-21ರ ಎರಡನೇ ತ್ರೈಮಾಸಿಕದಲ್ಲಿ ದೇಶದ ಒಟ್ಟು ಒಟ್ಟು ಮೌಲ್ಯವರ್ಧನೆ(ಜಿವಿಎ) 30.49 ಲಕ್ಷ ಕೋಟಿ ರೂ. ಆಗಿದೆ. 2019-20ರ ಎರಡನೇ ತ್ರೈಮಾಸಿಕದಲ್ಲಿನ 32.78 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ 7.5%ರಷ್ಟು ಕುಸಿತವಾಗಿದೆ ಎಂದು ತಿಳಿಸಿದೆ.

     

    ಯಾವುದು ಎಷ್ಟಿದೆ?
    ಉತ್ಪದನಾ ವಲಯ ಮೊದಲ ತ್ರೈಮಾಸಿಕದಲ್ಲಿ -39.3% ಕುಸಿತಗೊಂಡಿದ್ದರೆ ಎರಡನೇ ತ್ರೈಮಾಸಿಕದಲ್ಲಿ 0.6ಕ್ಕೆ ಏರಿಕೆಯಾಗಿದೆ.

    ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಸೇವೆ ಮೊದಲ ತ್ರೈಮಾಸಿಕದಲ್ಲಿ -47.4% ಕುಸಿದಿದ್ದರೆ ಈ ಬಾರಿ -10.3% ರಷ್ಟು ಏರಿಕೆಯಾಗಿದೆ.

     

    ಕೃಷಿ, ಅರಣ್ಯ, ಮೀನುಗಾರಿಕೆ ಮೊದಲ ತ್ರೈಮಾಸಿಕದಲ್ಲಿ 5.7%ರಷ್ಟು ಬೆಳವಣಿಗೆ ಸಾಧಿಸಿದ್ದರೆ ಈ ಬಾರಿ ಇದು 7.7%ಕ್ಕೆ ಏರಿಕೆಯಾಗಿದೆ.

    ಮೊದಲ ತ್ರೈಮಾಸಿಕದಲ್ಲಿ ರಫ್ತಿನ ಪ್ರಮಾಣ 21.1% ಇದ್ದರೆ ಈ ತ್ರೈಮಾಸಿಕದಲ್ಲಿ ಇದು 20.9%ಕ್ಕೆ ಕುಸಿತಗೊಂಡಿದೆ. ಮೊದಲ ತ್ರೈಮಾಸಿಕದಲ್ಲಿ ಆಮದು ಪ್ರಮಾಣ 18.3% ಇದ್ದರೆ ಎರಡನೇ ತ್ರೈಮಾಸಿಕದಲ್ಲಿ ಇದು 19.5%ಕ್ಕೆ ಏರಿಕೆಯಾಗಿದೆ.

     

  • ವಿಶ್ವಕ್ಕೆ ಕೊರೊನಾ ಹಬ್ಬಿಸಿದ್ದ ಚೀನಾದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

    ವಿಶ್ವಕ್ಕೆ ಕೊರೊನಾ ಹಬ್ಬಿಸಿದ್ದ ಚೀನಾದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

    ಬೀಜಿಂಗ್‌: ಇಡೀ ವಿಶ್ವಕ್ಕೆ ಕೊರೊನಾ ವೈರಸ್‌ ಹರಡಿಸಿದ್ದ ಚೀನಾದಲ್ಲಿ ಈಗ ಭರ್ಜರಿ ಆರ್ಥಿಕ ಪ್ರಗತಿಯಾಗಿದೆ.

    ಜನವರಿಯಿಂದ ಹಣಕಾಸು ವರ್ಷ ಹೊಂದಿರುವ ಚೀನಾದ ಮೂರನೇ ತ್ರೈಮಾಸಿಕ ವರದಿ ಪ್ರಕಟಗೊಂಡಿದ್ದು, ಜಿಡಿಪಿ ದರ ಶೇ.4.9 ರಷ್ಟು ಪ್ರಗತಿ ಕಂಡಿದೆ. ಕೋವಿಡ್‌ 19 ನಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಮೈನಸ್‌ ಶೇ. 6.8ರಷ್ಟು ಕುಸಿತ ಕಂಡಿತ್ತು. ಇದು ಕಳೆದ 44 ವರ್ಷದಲ್ಲಿ ಅತ್ಯಂತ ಕಳಪೆ ಸಾಧನೆಯಾಗಿತ್ತು.

    ಬಳಿಕ ಸರ್ಕಾರ ಆರ್ಥಿಕತೆ ಚೇತರಿಕೆಗೆ ಕೈಗೊಂಡ ಕ್ರಮಗಳಿಂದಾಗಿ 2ನೇ ತ್ರೈಮಾಸಿಕದಲ್ಲಿ ಶೇ.3.2ರಷ್ಟು ಏರಿಕೆ ಕಂಡಿತ್ತು. ಈಗ ಈ ಚೇತರಿಕೆ ಪ್ರಮಾಣ ಶೇ.4.9ಕ್ಕೆ ಏರಿಕೆಯಾಗಿದೆ.

    ಬೇಡಿಕೆ ಮತ್ತು ಖರೀದಿ ಹೆಚ್ಚಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಆರ್ಥಿಕತೆ ಏರಿಕೆಯಾಗುತ್ತಿದೆ. ಆರ್ಥಿಕ ಕುಸಿತದಿಂದ ಪಾರಾಗಲು ಚೀನಾ ಸರ್ಕಾರ ತೆರಿಗೆ ರಿಯಾಯಿತಿ ಪ್ರಕಟಿಸಿತ್ತು. ಸಾಲದ ಮೇಲಿನ ಬಡ್ಡಿ ದರ ವನ್ನು ಇಳಿಕೆ ಮಾಡಿತ್ತು.

    ಐಎಂಎಫ್‌ ಏನು ಹೇಳಿದೆ?
    ಕೋವಿಡ್‌ ಬಿಕ್ಕಟ್ಟಿನಿಂದ ಭಾರತದ ಜಿಡಿಪಿ ಮೈನಸ್‌ ಶೇ.10.5ಕ್ಕೆ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಅಂದಾಜು ಮಾಡಿದೆ. 2019ರಲ್ಲಿ ಭಾರತದ ಜಿಡಿಪಿ ಶೇ.4.2ರಷ್ಟಿತ್ತು. ಕೋವಿಡ್‌ ಮತ್ತು ಕೆಲವು ಕಾರಣಗಳಿಂದಾಗಿ ಭಾರತದ ಜಿಡಿಪಿ ಸದ್ಯಕ್ಕೆ ಪಾತಾಳಕ್ಕೆ ಬಿದ್ದಿದೆ.

    2020ರಲ್ಲಿ ಅಮೆರಿಕ ಜಿಡಿಪಿ ಮೈನಸ್‌ ಶೇ.10.3 ಆಗಿದ್ದರೆ ಜಾಗತಿಕ ಜಿಡಿಪಿ ಮೈನಸ್‌ ಶೇ. 4.4 ಆಗಲಿದೆ. 2021ರಲ್ಲಿ ಭಾರತದ ಜಿಡಿಪಿ ಶೇ. 8.8, ಅಮೆರಿಕ ಶೇ.3.9, ಜಾಗತಿಕ ಜಿಡಿಪಿ ಶೇ.5.5ರಷ್ಟು ಪ್ರಗತಿ ಕಾಣಲಿದೆ ಎಂದು ಐಎಂಎಫ್‌ ಅಂದಾಜಿಸಿದೆ.

  • 2021-22ರಲ್ಲಿ ಭಾರತದ ಜಿಡಿಪಿ ಶೇ.9ರಷ್ಟು ದಾಖಲು – ಎಡಿಬಿ

    2021-22ರಲ್ಲಿ ಭಾರತದ ಜಿಡಿಪಿ ಶೇ.9ರಷ್ಟು ದಾಖಲು – ಎಡಿಬಿ

    ಮನೀಲಾ: ಕೋವಿಡ್‌ 19ನಿಂದಾಗಿ ಭಾರತದ ಆಂತರಿಕ ಉತ್ಪಾದನೆ(ಜಿಡಿಪಿ) ಈ ಹಣಕಾಸು ವರ್ಷದಲ್ಲಿ ಕುಸಿತ ಕಂಡರೂ 2021-22ರ ಹಣಕಾಸು ವರ್ಷದಲ್ಲಿ ಶೇ.9ರಷ್ಟು ಜಿಡಿಪಿ ದಾಖಲಿಸಲಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌(ಎಡಿಬಿ) ಅಂದಾಜಿಸಿದೆ.

    ಭಾರತ ಬಹಳ ಕಠಿಣವಾದ ಲಾಕ್‌ಡೌನ್‌ ಜಾರಿ ಮಾಡಿದೆ. ಪರಿಣಾಮ ಹಲವು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಈ ಬಾರಿಯ ಜಿಡಿಪಿಯ ಮೇಲೆ ಹೊಡೆತ ಬಿದ್ದಿದೆ. ಆದರೆ ಕೊರೊನಾ ಲಾಕ್‌ಡೌನ್‌ ತೆರೆದ ಬಳಿಕ ವ್ಯವಹಾರಗಳು ಆರಂಭವಾಗಿದೆ ಎಂದು ಹೇಳಿದೆ.

    ಕೊರೊನಾದಿಂದ ಹೊಡೆತ ತಿಂದಿರುವ ಉದ್ಯಮಗಳ ಚೇತರಿಕೆ ಸರ್ಕಾರ ಕೆಲ ಆರ್ಥಿಕ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗುತ್ತಿದೆ. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ನಿಧಾನವಾಗಿ ಪ್ರಗತಿ ಕಾಣಬಹುದು ಎಂದು ತಿಳಿಸಿದೆ.

    ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಹೂಡಿಕೆಗಳು ಆಗುತ್ತಿದೆ. ಉತ್ಪದನಾ ಮತ್ತು ಮೂಲಸೌಕರ್ಯ ಕ್ಷೇತ್ರದ ಹಬ್‌ ಆಗಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದಾಗಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಹೇಳಿದೆ.

    ಜಿಡಿಪಿ ಕುಸಿತ:
    ಕೋವಿಡ್‌ 19 ನಿಯಂತ್ರಣ ಸಂಬಂಧ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಮೊದಲ ಏಪ್ರಿಲ್ ನಿಂದ ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಬೆಳವಣಿಗೆ ದರ ಶೇ. 23.9 ಕ್ಕೆ ಕುಸಿದಿದೆ. ಮುಂದುವರಿದ ರಾಷ್ಟ್ರಗಳ ಪೈಕಿ ಅಮೆರಿಕದ ಜಿಡಿಪಿ ಶೇ.12.4ರಷ್ಟು, ಇಟಲಿಯ ಜಿಡಿಪಿ ಶೇ.9.5ರಷ್ಟು ಕುಸಿತ ಕಂಡಿದೆ.

     

    2019-20ರ ಮೊದಲ ತ್ರೈಮಾಸಿಕದಲ್ಲಿ ಶೇ 5.2ರಷ್ಟು ಬೆಳವಣಿಗೆ ದಾಖಲಿಸಲಾಗಿತ್ತು. 2020-21ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 26.90 ಲಕ್ಷ ಕೋಟಿ ರೂ. ಆಗಿದೆ. 2019-20ರ ಮೊದಲ ತ್ರೈಮಾಸಿಕದಲ್ಲಿನ 35.35 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇ. 23.9ರಷ್ಟು ಕುಸಿತವಾಗಿದೆ ಎಂದು ತಿಳಿಸಿದೆ.

    ಲಾಕ್‍ಡೌನ್ ಕಾರಣದಿಂದ ಉತ್ಪಾದನೆ ಸಂಪೂರ್ಣ ನಿಂತು ಹೋಗಿ, ಮೊದಲ ತ್ರೈಮಾಸಿಕದಲ್ಲಿ ಕೇಂದ್ರದ ಬೊಕ್ಕಸಕ್ಕೆ ಬರೋಬ್ಬರಿ 13 ಲಕ್ಷ ಕೋಟಿ ನಷ್ಟ ಆಗಿದೆ. ಉತ್ಪಾದನೆ ಮತ್ತು ನಿರ್ಮಾಣವಲಯದಲ್ಲಿ ಅನುಕ್ರಮವಾಗಿ ಶೇ. 39.3 ಮತ್ತು ಶೇ. 50.3 ರಷ್ಟು ಕುಸಿದಿದೆ. ಉಳಿದ ಕ್ಷೇತ್ರಗಳಿಗೆ ಹಿನ್ನಡೆಯಾಗಿದ್ದರೆ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯಾಗಿದೆ. ಈ ಅವಧಿಯಲ್ಲಿ ಶೇ.3.4ರಷ್ಟು ಪ್ರಗತಿಯಾಗಿದ್ದರೆ 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ.3 ರಷ್ಟು ಬೆಳವಣಿಗೆ ಸಾಧಿಸಿತ್ತು.

  • ಕೋವಿಡ್‌ 19 ಲಾಕ್‌ಡೌನ್‌ನಿಂದ ಶೇ.23.9ಕ್ಕೆ ಕುಸಿದ ಜಿಡಿಪಿ

    ಕೋವಿಡ್‌ 19 ಲಾಕ್‌ಡೌನ್‌ನಿಂದ ಶೇ.23.9ಕ್ಕೆ ಕುಸಿದ ಜಿಡಿಪಿ

    40 ವರ್ಷಗಳಲ್ಲಿ ಅತ್ಯಂತ ದೊಡ್ಡ ಕುಸಿತ

    ನವದೆಹಲಿ: ಕೋವಿಡ್‌ 19 ನಿಯಂತ್ರಣ ಸಂಬಂಧ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಮೊದಲ ಏಪ್ರಿಲ್ ನಿಂದ ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಬೆಳವಣಿಗೆ ದರ ಶೇ. 23.9 ಕ್ಕೆ ಕುಸಿದಿದೆ.

    ಇದು ಕಳೆದ 40 ವರ್ಷಗಳಲ್ಲೇ ಅತ್ಯಂತ ದೊಡ್ಡ ಕುಸಿತವಾಗಿದೆ. ಇದರಿಂದ ಹಣದುಬ್ಬರ ಮತ್ತಷ್ಟು ಹೆಚ್ಚುವ ಆತಂಕವನ್ನು ಆರ್ಥಿಕ ತಜ್ಞರು ಹೊರಹಾಕಿದ್ದಾರೆ. 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ 5.2ರಷ್ಟು ಬೆಳವಣಿಗೆ ದಾಖಲಿಸಲಾಗಿತ್ತು.

    ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ದಾಖಲೆಗಳನ್ನು ಬಿಡುಗಡೆ ಮಾಡಿದ್ದು, 2020-21ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 26.90 ಲಕ್ಷ ಕೋಟಿ ರೂ. ಆಗಿದೆ. 2019-20ರ ಮೊದಲ ತ್ರೈಮಾಸಿಕದಲ್ಲಿನ 35.35 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇ. 23.9ರಷ್ಟು ಕುಸಿತವಾಗಿದೆ ಎಂದು ತಿಳಿಸಿದೆ.

    ಲಾಕ್‍ಡೌನ್ ಕಾರಣದಿಂದ ಉತ್ಪಾದನೆ ಸಂಪೂರ್ಣ ನಿಂತು ಹೋಗಿ, ಮೊದಲ ತ್ರೈಮಾಸಿಕದಲ್ಲಿ ಕೇಂದ್ರದ ಬೊಕ್ಕಸಕ್ಕೆ ಬರೋಬ್ಬರಿ 13 ಲಕ್ಷ ಕೋಟಿ ನಷ್ಟ ಆಗಿದೆ. ಉತ್ಪಾದನೆ ಮತ್ತು ನಿರ್ಮಾಣವಲಯದಲ್ಲಿ ಅನುಕ್ರಮವಾಗಿ ಶೇ. 39.3 ಮತ್ತು ಶೇ. 50.3 ರಷ್ಟು ಕುಸಿದಿದೆ.

    ಉಳಿದ ಕ್ಷೇತ್ರಗಳಿಗೆ ಹಿನ್ನಡೆಯಾಗಿದ್ದರೆ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯಾಗಿದೆ. ಈ ಅವಧಿಯಲ್ಲಿ ಶೇ.3.4ರಷ್ಟು ಪ್ರಗತಿಯಾಗಿದ್ದರೆ 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ.3 ರಷ್ಟು ಬೆಳವಣಿಗೆ ಸಾಧಿಸಿತ್ತು.

  • ಕೊರೊನಾ ವಿಚಾರದಲ್ಲಿ ಬಿಜೆಪಿ ಸುಳ್ಳನ್ನೇ ಸತ್ಯವಾಗಿಸುತ್ತಿದೆ: ರಾಹುಲ್ ಗಾಂಧಿ

    ಕೊರೊನಾ ವಿಚಾರದಲ್ಲಿ ಬಿಜೆಪಿ ಸುಳ್ಳನ್ನೇ ಸತ್ಯವಾಗಿಸುತ್ತಿದೆ: ರಾಹುಲ್ ಗಾಂಧಿ

    – ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದೆ
    – ಹೆಚ್ಚು ಪರೀಕ್ಷೆ ನಡೆಸುತ್ತಿಲ್ಲ, ಸಾವಿನ ಸಂಖ್ಯೆ ಸಹ ಸುಳ್ಳು

    ನವದೆಹಲಿ: ಕೊರೊನಾ ವೈರಸ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು, ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಬಿಜೆಪಿ ಸುಳ್ಳನ್ನು ಸತ್ಯವೆಂದು ಹೇಳುತ್ತಿದೆ. ಈ ಭ್ರಮೆ ಶೀಘ್ರದಲ್ಲೇ ಬಯಲಾಗಲಿದ್ದು, ಭಾರತ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಮೂರು ವಿಷಯಗಳ ಕುರಿತು ಗಮನ ಸೆಳೆದಿರುವ ರಾಹುಲ್ ಗಾಂಧಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕುರಿತು ಬಿಜೆಪಿ ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದೆ. ಪರೀಕ್ಷೆಗಳನ್ನು ಹೆಚ್ಚು ನಡೆಸುತ್ತಿಲ್ಲ. ಅಲ್ಲದೆ ಸಾವಿನ ಸಂಖ್ಯೆಯ ವರದಿಯನ್ನು ಸಹ ತಪ್ಪಾಗಿ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

    ಭಾರತದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಇದನ್ನು ರಾಹುಲ್ ಗಾಂಧಿ ಅವರು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಗಮನಕ್ಕೆ ಬರುತ್ತಿಲ್ಲ. ಅಲ್ಲದೆ ಸಾವನ್ನಪ್ಪಿದ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿಲ್ಲ ಎಂದು ಇಂಗ್ಲಿಷ್ ಮಾಧ್ಯಮ ವರದಿ ಮಾಡಿದೆ. ಈ ಲಿಂಕ್ ಶೇರ್ ಮಾಡಿ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ ಇರುವ ಕುರಿತು ಮಾಹಿತಿ ನೀಡಿತ್ತು. ಪ್ರತಿ ಮಿಲಿಯನ್ ಜನರಲ್ಲಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪುವವರ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಇದೆ ಎಂದು ಹೇಳಿಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಕೊರೊನಾ ಸ್ಥಿತಿಗತಿ ವರದಿ-168 ಆಧರಿಸಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಪ್ರಮಾಣ ಪ್ರತಿ ಮಿಲಿಯನ್ ಜನರಲ್ಲಿ 505.37 ಇದೆ. ವಿಶ್ವದಲ್ಲಿ ಇದು 1,453.25 ಇದೆ ಎಂದು ಡಬ್ಲ್ಯುಎಚ್‍ಒ ವರದಿಯಲ್ಲಿ ಹೇಳಲಾಗಿದೆ.

    ಜಿಡಿಪಿ ಲೆಕ್ಕಾಚಾರದ ಕುರಿತು ಸಹ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಹೊಸ ಲೆಕ್ಕಾಚಾರ ವಿಧಾನದ ಮೂಲಕ ಜಿಡಿಪಿಯಲ್ಲಿ ಸಹ ಬಿಜೆಪಿ ಸುಳ್ಳನ್ನು ಸತ್ಯವೆಂದು ಹೇಳುತ್ತಿದೆ. ಇದೇ ವರ್ಷ ಜನವರಿಯಲ್ಲಿ ಇಂಟರ್‍ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್) ತನ್ನ ವಾರ್ಷಿಕ ಸಿಬ್ಬಂದಿ ವರದಿಯಲ್ಲಿ ಜಿಡಿಪಿಯನ್ನು ‘ಸಂಕೀರ್ಣ’ ವಾಗಿ ಲೆಕ್ಕ ಹಾಕಲು ತಿಳಿಸಿದೆ. ಅಲ್ಲದೆ ಜಿಡಿಪಿ ಲೆಕ್ಕಾಚಾರದ ವಿಧಾನದ ಕುರಿತು ಸ್ಪಷ್ಟತೆ ನೀಡುವಂತೆ ಭಾರತ ರಿಸರ್ವ್ ಬ್ಯಾಂಕ್‍ನ ಮಾಜಿ ಗವರ್ನರ್ ಸಿ.ರಂಗರಾಜನ್ ಕಳೆದ ತಿಂಗಳು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವನ್ನು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ.

    ಅಲ್ಲದೆ ಮಾಧ್ಯಮಗಳನ್ನು ಹೆದರಿಸುವ ಮೂಲಕ ಚೀನಾದ ಆಕ್ರಮಣಶೀಲತೆ ಬಗ್ಗೆ ಬಿಜೆಪಿ ಸುಳ್ಳುಗಳನ್ನು ಸತ್ಯವೆಂದು ಬಿಂಬಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

  • ಕೊರೊನಾ ಲಾಕ್‍ಡೌನ್ ದೇಶದ ಆರ್ಥಿಕತೆಗೆ 30 ಲಕ್ಷ ಕೋಟಿ ರೂ. ನಷ್ಟ- ಎಸ್‍ಬಿಐ

    ಕೊರೊನಾ ಲಾಕ್‍ಡೌನ್ ದೇಶದ ಆರ್ಥಿಕತೆಗೆ 30 ಲಕ್ಷ ಕೋಟಿ ರೂ. ನಷ್ಟ- ಎಸ್‍ಬಿಐ

    ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಈವರೆಗೂ ಭಾರತದ ಆರ್ಥಿಕತೆಗೆ 30 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಸಂಶೋಧನಾ ವರದಿಯ ಪ್ರಕಾರ, ರಾಷ್ಟ್ರೀಯ ಅಂಕಿ ಅಂಶಗಳ ಸಂಘಟನೆ (ಎನ್‍ಎಸ್‍ಒ) ಮೇ 29 ರಂದು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿ ಬಿಡುಗಡೆಗೊಳಿಸಲಿದೆ. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.7ರಷ್ಟಿತ್ತು. ಆದರೆ ಕೊರೊನಾ ಹೊಡೆತದಿಂದ ಜಿಡಿಪಿ ಮತ್ತೆ ಕುಸಿತ ಕಾಣಲಿದೆ ಎನ್ನಲಾಗುತ್ತಿದೆ.

    ಕೊರೊನಾ ಲಾಕ್‍ಡೌನ್‍ನಿಂದ ಮಹಾರಾಷ್ಟ್ರಕ್ಕೆ ಶೇಕಡಾ 11.6ರಷ್ಟು ನಷ್ಟವಾಗಿದ್ದರೆ, ತಮಿಳುನಾಡಿಗೆ ಶೇ.9.4ರಷ್ಟು, ಗುಜರಾತ್ ಶೇ.8.6ರಷ್ಟು, ಉತ್ತರಪ್ರದೇಶಕ್ಕೆ ಶೇ.8.3ರಷ್ಟು ಮತ್ತು ಕರ್ನಾಟಕಕ್ಕೆ ಶೇ.6.7ರಷ್ಟು ನಷ್ಟವಾಗಿದೆ. ಈ ಐದು ರಾಜ್ಯಗಳಿಗೆ ಆಗಿರುವ ನಷ್ಟವೇ 11 ಲಕ್ಷ ಕೋಟಿ ರೂಪಾಯಿಯಷ್ಟು. ಅಂದರೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಪ್ಯಾಕೇಜ್‍ನ ಶೇಕಡಾ 40ರಷ್ಟು ಈ ಮೊತ್ತವಾಗಿದೆ. ಮುಂದಿನ ವರ್ಷದ ಮಾರ್ಚ್ 31ರ ವೇಳೆಗೆ 10.4 ಲಕ್ಷ ಕೋಟಿ ರೂಪಾಯಿಯಷ್ಟು ನೇರ ತೆರಿಗೆ ಆದಾಯ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.

    ಭಾರತವು ಸ್ವಾತಂತ್ರ್ಯಾನಂತರ ಮೂರು ಆರ್ಥಿಕ ಹಿಂಜರಿತಗಳನ್ನು ಎದುರಿಸಿದ್ದು, ನಾಲ್ಕನೆಯ ಹಿಂಜರಿತ ಸಮೀಪಿಸಿದೆ ಎಂದು ‘ಕ್ರಿಸಿಲ್’ ಎಚ್ಚರಿಸಿದೆ. ಕಳೆದ 69 ವರ್ಷಗಳಲ್ಲಿ ಭಾರತ ಕೇವಲ 3 ಸಲ ಮಾತ್ರ ಆರ್ಥಿಕ ಹಿಂಜರಿತ ಎದುರಿಸಿದೆ. 1958, 1966 ಮತ್ತು 1980ರಲ್ಲಿ ಹಿಂಜರಿತವಾಗಿದೆ ಎಂದು ತಿಳಿಸಿದೆ.

  • 3ನೇ ತ್ರೈಮಾಸಿಕ ಜಿಡಿಪಿ ಸ್ವಲ್ಪ ಏರಿಕೆ

    3ನೇ ತ್ರೈಮಾಸಿಕ ಜಿಡಿಪಿ ಸ್ವಲ್ಪ ಏರಿಕೆ

    ನವದೆಹಲಿ: ದೇಶದ ಜಿಡಿಪಿ ದರ ನಿಧಾನವಾಗಿ ಚೇತರಿಸಿಕೊಳ್ತಿದೆ. 3ನೇ ತ್ರೈಮಾಸಿಕ ವರದಿಯಲ್ಲಿ ಶೇ. 4.5 ರಿಂದ 4.7ಕ್ಕೆ ಏರಿಕೆ ಕಂಡಿದೆ. ಆದರೆ, ಉತ್ಪಾದನಾ ವಲಯ ಪಾತಾಳಕ್ಕೆ ಕುಸಿದಿದೆ.

    ಕಳೆದ ಬಾರಿ ಇದೇ ಅವಧಿಗೆ ಶೇ. 5.6ರಷ್ಟಿದ್ದ ಉತ್ಪಾದನಾ ವಲಯದ ದರ ಈಗ 0.2ಕ್ಕೆ ಕುಸಿದಿದೆ. ಇನ್ನು, ನೋಟ್‍ಬ್ಯಾನ್ ದಿನ ರಾತ್ರಿ 11.55ರವರೆಗೆ ಭರ್ಜರಿ ವ್ಯಾಪಾರ ನಡೆಸಿದ್ದ ಚಿನ್ನದಂಗಡಿ ಮಾಲೀಕರು ಹಾಗೂ ಮಿಡ್‍ನೈಟ್ ಗೋಲ್ಡ್ ಬೇಟೆ ನಡೆಸಿ ಕೆಜಿಗಟ್ಲೆ ಚಿನ್ನ ಖರೀದಿಸಿದ್ದವರಿಗೆ ಈಗ ನಡುಕ ಶುರುವಾಗಿದೆ.

    ಅಂದು ಬೆಂಗಳೂರಿನಲ್ಲಿ ಮಿಡ್‍ನೈಟ್‍ವರೆಗೆ ಬ್ಯುಸಿನೆಸ್ ನಡೆಸಿದ್ದ ಬೆಂಗಳೂರಿನ ಚಿನ್ನದ ವ್ಯಾಪಾರಿಗಳ ಮೇಲೆ ಐಟಿ ಹದ್ದಿನಗಣ್ಣಿಟ್ಟಿದೆ. ಅಂದಿನ ವ್ಯಾಪಾರದ ಸಂಪೂರ್ಣ ಮಾಹಿತಿ ನೀಡುವಂತೆ ಕೆಲ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ.

    ನೋಟ್ ಬ್ಯಾನ್ ದಿನ ಬೆಂಗಳೂರಿನ ಚಿನ್ನದ ಮಳಿಗೆಗಳಲ್ಲಿ ಜನಸಾಗರವೇ ನೆರೆದಿತ್ತು. ರಾತ್ರಿ 11.55 ರವರೆಗೆ ನಡೆದಿತ್ತು ಭರ್ಜರಿ ವ್ಯಾಪಾರ ನಡೆದಿತ್ತು.

  • ಶೇ.8ರಿಂದ 4.5ಕ್ಕೆ ಜಿಡಿಪಿ ಇಳಿಕೆ, ಇದೇನಾ ಅಚ್ಛೇ ದಿನ್: ಚಿದಂಬರಂ ಪ್ರಶ್ನೆ

    ಶೇ.8ರಿಂದ 4.5ಕ್ಕೆ ಜಿಡಿಪಿ ಇಳಿಕೆ, ಇದೇನಾ ಅಚ್ಛೇ ದಿನ್: ಚಿದಂಬರಂ ಪ್ರಶ್ನೆ

    ನವದೆಹಲಿ: ದೇಶದ ಜಿಡಿಪಿ ಶೇ.8ರಿಂದ ಶೇ.4.5ಕ್ಕೆ ಇಳಿಕೆಯಾಗಿದ್ದು, ಇದೇನಾ ಅಚ್ಛೇ ದಿನ್ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಬರಂ ಪ್ರಶ್ನೆ ಮಾಡಿದ್ದಾರೆ.

    ಬುಧವಾರ ತಿಹಾರ್ ಜೈಲಿನಿಂದ ಹೊರ ಬಂದಿರುವ ಪಿ.ಚಿದಂಬರಂ ಇಂದು ಸುದ್ದಿಗೋಷ್ಠಿ ನಡೆಸಿ, ಮೋದಿ ಸರ್ಕಾರದ ಮೇಲೆ ಜಿಡಿಪಿ ಅಸ್ತ್ರವನ್ನ ಪ್ರಯೋಗಿಸಿದರು. ಕಳೆದ ಆರು ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.8ರಿಂದ ಶೇ.4.5ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

    ಇದೇನಾ ಅಚ್ಛೇ ದಿನ್?: ದೇಶದ ಆರ್ಥಿಕ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಅರ್ಥವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಯಾವುದೇ ಉಪಾಯಗಳನ್ನು ಮಾಡುವಲ್ಲಿ ವಿಫಲವಾಗಿದೆ. ನೋಟ್ ಬ್ಯಾನ್, ಜಿಎಸ್‍ಟಿ ಮತ್ತು ಟ್ಯಾಕ್ಸ್ ಟೆರರಿಸಮ್ ಅರ್ಥವ್ಯವಸ್ಥೆಯ ಮೇಲೆ ನೇರ ಪರಿಣಾಮಗಳನ್ನು ಬೀರಿವೆ. ಬೇಕಾದ್ರೆ ನಾನು ನಿಮಗೆ ಕಳೆದ 6 ತ್ರೈಮಾಸಿಕದ ಅಂಕಿಅಂಶಗಳ ಮೂಲಕ ಸಾಬೀತು ಮಾಡುತ್ತೇನೆ. ಜಿಡಿಪಿ 8ರಿಂದ 7, 6.6, 5.5, 5 ಮತ್ತು 4.5ಕ್ಕೆ ಬಂದು ತಲುಪಿದೆ. ಇದೇನಾ ಎನ್‍ಡಿಎ ಸರ್ಕಾರ ಹೇಳಿರುವ ಅಚ್ಛೇ ದಿನ್ ಎಂದು ಪ್ರಶ್ನೆ ಮಾಡಿದರು.

    ಯಾರು ಹೊಣೆ?: ಈ ವರ್ಷದ ಅಂತ್ಯದೊಳಗೆ ಜಿಡಿಪಿ ದರ ಶೇ.5ಕ್ಕೆ ತಲುಪಿದ್ರೆ ನಿಮ್ಮನ್ನು ಅದೃಷ್ಟವಂತರು ಎನ್ನಬಹುದು. ಜಿಡಿಪಿ ಶೇ.5ಕ್ಕೆ ತಲುಪಿದಾಗ ಹಿರಿಯ ಅರ್ಥಶಾಸ್ತ್ರಜ್ಞರಾದ ಡಾ.ಅರವಿಂದ್ ಸುಬ್ರಮಣಿಯನ್ ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದ್ದರು. ಆದ್ರೆ ಇಂದಿನ ಸ್ಥಿತಿ ಅದಕ್ಕಿಂತ ಕೆಟ್ಟದಾಗಿದೆ. ಎಂದಿನಂತೆ ಜಿಡಿಪಿ ವಿಷಯದಲ್ಲಿ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಈ ಸಂಬಂಧ ಸುಳ್ಳು ಮಾತನಾಡಲು ತಮ್ಮ ಮಂತ್ರಿಗಳನ್ನು ಬಿಟ್ಟಿದ್ದಾರೆ. ಸರ್ಕಾರ ಅರ್ಥವ್ಯವಸ್ಥೆ ನಿರ್ವಹಣೆಯಲ್ಲಿ ಎಡವಿದ್ದು, ಅದರ ಹೊಣೆಯನ್ನು ಹೊರಬೇಕಿದೆ ಎಂದರು.

    ವಿತ್ತಮಂತ್ರಿ ಈರುಳ್ಳಿ ತಿನ್ನಲ್ಲ: ಜಗತ್ತಿನ ಎಲ್ಲ ಉದ್ಯಮಿದಾರರು ವ್ಯವಹಾರದ ದೃಷ್ಟಿಯಿಂದ ಅಂತರಾಷ್ಟ್ರೀಯ ಪತ್ರಿಕೆಗಳನ್ನು ಓದುತ್ತಿರುತ್ತಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಿ ಅಂಶಗಳನ್ನು ಗಮನಿಸಿ ದೇಶದ ಆರ್ಥಿಕತೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಕೈಗಾರಿಕೆಗಳ ಸ್ಥಿತಿ ಕೆಟ್ಟದಾಗಿದ್ದು, ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಈರುಳ್ಳಿ ಬೆಲೆ ಕೆಜಿಗೆ 100 ರೂ.ಗಿಂತ ಹೆಚ್ಚಾಗಿದೆ. ಬಹುಶಃ ಹಣಕಾಸಿನ ಮಂತ್ರಿಗಳು ಈರುಳ್ಳಿ ತಿನ್ನದಿರಬಹುದು. ಹಾಗಾಗಿ ಪರಿಸ್ಥಿತಿಯ ಬಗ್ಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

    ಕಾಶ್ಮೀರ ನಾಯಕರ ಬಗ್ಗೆ ಚಿಂತೆ: ಬುಧವಾರ ರಾತ್ರಿ 8 ಗಂಟೆಗೆ ತಿಹಾರ್ ಜೈಲಿನಿಂದ ಹೊರ ಬಂದು ಸ್ವತಂತ್ರದ ಉಸಿರು ತೆಗೆದುಕೊಂಡಿದ್ದೇನೆ. ಆದ್ರೆ ಆಗಸ್ಟ್ 4ರಿಂದ ಕಾಶ್ಮೀರದ 75 ಲಕ್ಷ ಜನರಿಗೆ ಸ್ವತಂತ್ರ ಸಿಕ್ಕಿಲ್ಲ. ಯಾವುದೇ ಆರೋಪಗಳಿಲ್ಲದೇ ಅನಾವಶ್ಯಕವಾಗಿ ಕಾಶ್ಮೀರದ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ. ನಮ್ಮ ಸ್ವಾತಂತ್ರದ ಬಗ್ಗೆ ಹೇಗೆ ಮಾತನಾಡುತ್ತವೆ. ಹಾಗೆಯೇ ಬೇರೆಯವರ ಸ್ವಾತಂತ್ರತೆ ಬಗ್ಗೆ ಹೋರಾಡಬೇಕಿದೆ ಎಂದರು.

    ಮಂತ್ರಿಯಾಗಿ ನನ್ನ ರೆಕಾರ್ಡ್ ಕ್ಲೀನ್ ಆಗಿದೆ. ನನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳು ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಪ್ರಕರಣ ಏನು ಎಂಬುವುದು ಎಲ್ಲ ಪತ್ರಕರ್ತರಿಗೂ ಗೊತ್ತಿದೆ. ನನ್ನ ಪ್ರಕರಣಕ್ಕೆ ಸಂಬಂಧಿಸಿದ ಏನೇ ಪ್ರಶ್ನೆಗಳಿದ್ದರೂ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸಂಪೂರ್ಣವಾಗಿ ಓದಿ. ಅಲ್ಲಿ ನಿಮಗೆ ಎಲ್ಲ ವಿಷಯಗಳು ಅರ್ಥವಾಗಲಿವೆ ಎಂದು ಪತ್ರಕರ್ತ ಪ್ರಶ್ನೆಗಳಿಗೆ ಉತ್ತರಿಸಿದರು.