Tag: gaziyabad

  • ಕಿಡ್ನಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆಯಿಟ್ರು- ಸಿನಿಮೀಯ ರೀತಿಯಲ್ಲಿ ಟೆಕ್ಕಿಯನ್ನು ರಕ್ಷಿಸಿದ ಪೊಲೀಸರು!

    ಕಿಡ್ನಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆಯಿಟ್ರು- ಸಿನಿಮೀಯ ರೀತಿಯಲ್ಲಿ ಟೆಕ್ಕಿಯನ್ನು ರಕ್ಷಿಸಿದ ಪೊಲೀಸರು!

    ಗಾಜಿಯಾಬಾದ್: ವಾರಗಳ ಹಿಂದೆ ಅಪಹರಣವಾಗಿ ಬಂಧಿಯಾಗಿದ್ದ ಟೆಕ್ಕಿಯನ್ನು ಕೊನೆಗೂ ರಕ್ಷಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಜೀವ್ ಕುಮಾರ್ ಅಪಹರಣವಾಗಿರುವ ಟೆಕ್ಕಿಯಾಗಿದ್ದು, ಇವರು ನೊಯ್ಡಾದ ಎಚ್‍ಸಿಇಎಲ್ ಟೆಕ್ನಾಲಜಿಸ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.

    ಘಟನೆ ವಿವರ:
    ಕಳೆದ ಶುಕ್ರವಾರ ರಾಜೀವ್ ಅವರ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಅವರು ತನ್ನ ಹುಟ್ಟುಹಬ್ಬ ಆಚರಿಸಲೆಂದು ಗುರುವಾರ ಹರಿದ್ವಾರಕ್ಕೆ ತೆರಳುತ್ತಿದ್ದರು. ಆದ್ರೆ ಅವರು ದೆಹಲಿ ಸಮೀಪದ ಗಾಜಿಯಾಬಾದ್ ನ ರಾಜ್ ನಗರದಿಂದ ಕಾಣೆಯಾಗಿದ್ದರು.

    ಜನಸಂದಣಿ ಇರುವ ಪ್ರದೇಶದಲ್ಲಿ ಹರಿದ್ವಾರದ ಕಡೆ ತೆರಳುವ ಬಸ್ ಹತ್ತಲೆಂದು ರಾಜೀವ್ ಅವರು ಕ್ಯಾಬ್ ನಿಂದ ಇಳಿದ ವೇಳೆ ಅವರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಟೆಕ್ಕಿ ಪತ್ನಿಗೆ ಪತಿ ಮೊಬೈಲ್ ನಿಂದಲೇ ಮೆಸೇಜೊಂದು ಬಂದಿದೆ. ಅದರಲ್ಲಿ ರಾಜೀವ್ ನನ್ನು ಕಿಡ್ನಾಪ್ ಮಾಡಲಾಗಿದೆ. 15 ಲಕ್ಷ ರೂ. ಹಣ ನೀಡಿದ್ರೆ ಬಿಡುಗಡೆಗೊಳಿಸುವುದಾಗಿ ತಿಳಿಸಲಾಗಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ನಂತರ ಸುಮಾರು ಒಂದು ವಾರಗಳ ಕಾಲ ಪೊಲೀಸರು ರಾಜೀವ್ ಗಾಗಿ ಹುಡುಕಾಟ ನಡೆಸಿದ್ದರು. ಒಂದು ವಾರದ ಬಳಿಕ ರಾಜೀವ್ ಅವರು ಗಾಜಿಯಾಬಾದ್ ನ ಇಂದಿರಾಪುರಂ ಎಂಬ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಹಾಗೂ ನೊಯ್ಡಾ ಪೊಲೀಸರ ವಿಶೇಷ ತನಿಖಾ ತಂಡವೊಂದು ಧಾವಿಸಿ ರಾಜೀವ್ ಅವರನ್ನು ಅಪಹರಣಕಾರರಿಂದ ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಿದ್ದಾರೆ.

    ರಾಜೀವ್ ಅವರನ್ನು ರಕ್ಷಿಸುವ ಮೊದಲು ಅಪಹರಣಕಾರರು ಮತ್ತು ಪೊಲೀಸರ ಮಧ್ಯೆ ಎನ್ ಕೌಂಟರ್ ನಡೆದಿದೆ. ಘಟನೆಯಿಂದ ಇಬ್ಬರು ಕಿಡ್ನಾಪರ್ಸ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ಅಪಹರಣಕಾರರ ಗುಂಪು ವ್ಯಕ್ತಿಯನ್ನು ಕಿಡ್ನಾಪ್ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆಯೂ ಈ ಗುಂಪು ಹಲವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

  • ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಗಾಜಿಯಾಬಾದ್: ಗಂಡು ಮಗುವಿನ ಆಸೆ ಹೊಂದಿದ್ದ 22 ವರ್ಷದ ಮಹಿಳೆಯೊಬ್ಬರಿಗೆ ಹುಟ್ಟಿದ್ದು ಹೆಣ್ಣು ಮಗು. ಇದರಿಂದ ಬೇಸತ್ತ ಮಹಿಳೆ ಆ ಮಗುವನ್ನು ತನ್ನ ಕೈಯ್ಯಾರೇ ಕ್ರೂರವಾಗಿ ಕೊಲೆಗೈದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಗಾಜಿಯಾಬಾದ್ ನ ಪಟ್ಲ ನಗರದಲ್ಲಿ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ಆರತಿ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಗಂಡು ಮಗುವಿನ ಆಸೆ ಹೊಂದಿದ್ದ ಆರತಿಗೆ ಹೆಣ್ಣು ಮಗುವಾಗಿದ್ದರಿಂದ ನಿರಾಶೆಗೊಂಡು, ಆಕೆಯ ಮೇಲೆಯೇ ಆಕೆಗೆ ಸಿಟ್ಟು ಬಂದಿದ್ದರಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಹೀಗೆ ತನ್ನ ಮೇಲೆಯೇ ಸಿಟ್ಟುಗೊಂಡಿದ್ದ ಆಕೆ ಹೆಣ್ಣು ಮಗುವನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅಂತೆಯೇ ಭಾನುವಾರ ಮಗುವನ್ನು ದಿಂಬಿನಿಂದ ಮುಚ್ಚಿ ಬಳಿಕ ವಾಷಿಂಗ್ ಮೆಷಿನ್ ಗೆ ತುರುಕಿದ್ದಾಳೆ. ನಂತ್ರ ತನ್ನ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ ಅಂತ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಆರತಿಯನ್ನು ಪ್ರಶ್ನಿಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಅಂತ ಅವರು ವಿವರಿಸಿದ್ದಾರೆ.

    ಗಂಡು ಮಗು ಬೇಕು ಅಂತಾ ನಾವು ಆಕೆಗೆ ಕಿರುಕುಳ ಅಥವಾ ಬೆದರಿಕೆ ಹಾಕಿಲ್ಲ. ಬೇಕುಂತಲೇ ಮುದ್ದಾದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ ಅಂತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.