Tag: Gazipur

  • ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

    ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

    – ಎರಡೂ ಗುಂಪುಗಳ ನಡುವೆ ಹೊಡಿ ಬಡಿ

    ನವದೆಹಲಿ: ರಾಜಧಾನಿ ದೆಹಲಿ ಗಡಿಭಾಗದ ಗಾಜಿಪುರದಲ್ಲಿ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ನಡುವೆ ಸಂಘರ್ಷ ಏರ್ಪಟ್ಟಿದೆ. ಎರಡೂ ಗುಂಪುಗಳು ಕಲ್ಲು ಮತ್ತು ಲಾಠಿಗಳಿಂದ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

    ಗಡಿಯಲ್ಲಿ ಆಗಿದ್ದೇನು?:
    ಬಿಜೆಪಿಯ ನಾಯಕರ ಸ್ವಾಗತಕ್ಕಾಗಿ ಪಕ್ಷದ ಕಾರ್ಯಕರ್ತರು ಗಾಜಿಪುರ ಗಡಿಗೆ ಆಗಮಿಸಿದ್ದರು. ಈ ವೇಳೆ ಕೃಷಿ ಕಾನೂನು ವಿರೋಧಿಸಿ ಧರಣಿ ಕುಳಿತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿ, ಗಲಾಟೆ ವಿಕೋಪಕ್ಕೆ ತಿರುಗಿದೆ. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಬಿಜೆಪಿ ನಾಯಕನನ್ನು ಅಲ್ಲಿಂದ ಕಳುಹಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

    ರಾಕೇಶ್ ಟಿಕಾಯತ್ ಅವಾಜ್:
    ನಮ್ಮ ಸಂಘಟನೆಯ ವೇದಿಕೆ ರಸ್ತೆಯ ಮೇಲಿದೆ. ಹಾಗಂತ ಯಾರೂ ಬೇಕಾದ್ರೂ ವೇದಿಕೆಯನ್ನ ಬಳಸಿಕೊಳ್ಳುವಂತಿಲ್ಲ. ಒಂದು ವೇಳೆ ನಮ್ಮ ವೇದಿಕೆ ಮೇಲೆ ಬರುವದಿದ್ರೆ ಬಿಜೆಪಿ ತೊರೆದು ಬನ್ನಿ. ಸುಮ್ನೆ ನಮ್ಮ ವೇದಿಕೆ ಮೇಲೆ ಬಂದು ಬಿಜೆಪಿಯ ಧ್ವಜ ತೋರಿಸಿ, ಇಲ್ಲಿಯ ಸ್ಥಳವನ್ನು ವಶಕ್ಕೆ ಪಡೆದಿದ್ದೇವೆ ಎಂಬ ಸಂದೇಶ ರವಾನಿಸುವ ಕೆಲಸ ಮಾಡೋದು ಬೇಡ. ಇಂತಹವರನ್ನು ಹೇಳ ಹೆಸರಿಲ್ಲದಂತೆ ಮಾಡಲಾಗುವುದು. ಮತ್ತೆ ಯಾವುದೇ ಪ್ರದೇಶದಲ್ಲಿ ಈ ರೀತಿ ಮಾಡದ ಹಾಗೆ ಇರಬೇಕು ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಅವಾಜ್ ಹಾಕಿದ್ದಾರೆ.

    ಹೌದು, ನಾನು ಧಮ್ಕಿ ಹಾಕ್ತೀನಿ:
    ನಮ್ಮ ವೇದಿಕೆ ನಿಮ್ಮ ಧ್ವಜ ಹಾರಿಸಿದ್ರೆ ಅದಕ್ಕೆ ಪರಿಹಾರ ನಮ್ಮ ಬಳಿಯಲ್ಲಿದೆ. ಹೌದು ನಾನು ಧಮ್ಕಿ ನೀಡುತ್ತಿದ್ದೇನೆ. ಈ ಮಾತುಗಳನ್ನು ನೆನೆಪಿನಲ್ಲಿಟ್ಟುಕೊಳ್ಳಿ. ನಿಮಗೆ ಈ ವೇದಿಕೆ ಇಷ್ಟವಾಗಿದ್ರೆ, ನಮ್ಮ ಆಂದೋಲನದಲ್ಲಿ ಭಾಗಿಯಾಗಿ. ಈ ಕೆಟ್ಟ ಚಾಳಿ ಏಕೆ ಎಂದು ರಾಕೇಶ್ ಟಿಕಾಯತ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ

    ರೈತರ ಮೇಲೆ ಕೋಲುಗಳಿಂದ ಹಲ್ಲೆ:
    ಬಿಜೆಪಿಯ ಕಾರ್ಯಕರ್ತರು ಗಾಜಿಪುರದ ಗಡಿಯಲ್ಲಿ ಓರ್ವ ನಾಯಕನನ್ನು ಸ್ವಾಗತಿಸಲು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ವೇದಿಕೆ ಮತ್ತು ಮೇಲ್ಸೇತುವೆ ನಡುವಿನ ಇಕ್ಕಾಟದ ಜಾಗದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಇನ್ನೂ ಈ ಮೆರವಣಿಗೆಯಲ್ಲಿ ನಮ್ಮ ಆಂದೋಲನದ ವಿರುದ್ಧವಾಗಿ ಘೋಷಣೆ ಕೂಗಲಾಗುತ್ತಿತ್ತು. ಘೋಷಣೆ ಕೂಗದಂತೆ ರೈತರು ಮನವಿ ಮಾಡಿದಾಗ ಬಿಜೆಪಿ ಕಾರ್ಯಕರ್ತರು ಕೋಲುಗಳಿಂದ ಹಲ್ಲೆ ನಡೆಸಿದ್ದರಿಂದ ಗಲಾಟೆ ವಿಕೋಪಕ್ಕೆ ತಿರುಗಿತು ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ. ಇದನ್ನೂ ಓದಿ: ಕೃಷಿ ಕಾನೂನು ವಾಪಸ್ ಪಡೆಯಲ್ಲ: ಕೇಂದ್ರ ಕೃಷಿ ಸಚಿವ ತೋಮರ್

    ಬಿಜೆಪಿ ನಮ್ಮ ಆಂದೋಲನವನ್ನು ಹಿಂಸೆಯ ಮೂಲಕ ಕೊನೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕೆ ಇವತ್ತಿನ ಘಟನೆಯ ಉದಾಹರಣೆ. ಗಾಜಿಪುರ ಗಡಿಯಲ್ಲಿ ನಡೆದದ್ದು ಬಿಜೆಪಿ ಕಾರ್ಯಕರ್ತರಿಂದ ಉಂಟಾದ ಹಿಂಸೆ. ಯಾವುದೇ ಗಾಳಿಸುದ್ದಿ ಮತ್ತು ಅವರ ಮಾತಿಗೆ ಮರಳಾಗದೇ ನೀವು ಹೋರಾಟದಲ್ಲಿ ಮುಂದುವರಿಯಿರಿ ಎಂದು ಬಿಕೆಯು ಕರೆ ನೀಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಪೊಲೀಸರನ್ನು ಅಟ್ಟಾಡಿಸಿದ ಉದ್ರಿಕ್ತರು – 10 ಅಡಿ ಆಳದ ಕೋಟೆಯಿಂದ ಜಿಗಿದು ಬಚಾವ್