Tag: Gautam Gambhir

  • 1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    – ಅಜಿಂಕ್ಯ ರಹಾನೆಯಿಂದ 10 ಲಕ್ಷ ರೂ. ದೇಣಿಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಿನಿಮಾ ನಟ, ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು, ಕ್ರಿಕೆಟಿಗರು ಸಹಾಯ ನೀಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬಿಸಿಸಿಐ, ಸೌರವ್ ಗಂಗೂಲಿ, ಸುರೇಶ್ ರೈನಾ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಸದ ಗೌತಮ್ ಗಂಭೀರ್  1 ಕೋಟಿ ರೂ. ನೀಡಿದ್ದಾರೆ.

    ಬಿಜೆಪಿ ಸಂಸದ ಗಂಭೀರ್ ಅವರು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂ. ಜಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಜೊತೆಗೆ ಗಂಭೀರ್ ಅವರು ನಡೆಸುತ್ತಿರುವ ಎನ್‍ಜಿಒ ಬಡವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದೆ.

    ಕ್ರೀಡಾ ಸಚಿವ ರಿಜಿಜು ಅವರು ಟ್ವೀಟ್ ಮಾಡಿ, ನಾನು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿ (ಎಂಪಿಎಲ್‍ಡಿಎಸ್)ನಿಂದ ಒಂದು ಕೋಟಿ ರೂ. ಜಮಾ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಇತ್ತ ಟೀಂ ಇಂಡಿಯಾ ಕ್ರಿಕೆಟರ್ ಅಜಿಂಕ್ಯ ರಹಾನೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.

    ಕೊರೊನಾ ವೈರಸ್ ವಿಶ್ವಾದ್ಯಂತ 195 ದೇಶಗಳಿಗೆ ಹರಡಿದ್ದು, ತಮ್ಮ ದೇಶವನ್ನು ರಕ್ಷಿಸಲು ಅಲ್ಲಿಯ ಆಟಗಾರರು, ಸೆಲೆಬ್ರಿಟಿಗಳು, ಉದ್ಯಮಿಗಳು ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ. ಫುಟ್ಬಾಲ್ ಆಗದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ, ತರಬೇತುದಾರ ಮೌರಿಜಿಯೊ ಸಾರಿ. ಇಟಲಿಯನ್ ಫುಟ್ಬಾಲ್ ಕ್ಲಬ್ ಯುವೆಂಟಸ್ ಪರ ಆಡಿರುವ ಇತರ ಆಟಗಾರರು 100 ಮಿಲಿಯನ್ ಯುರೋಗಳನ್ನು (ಸುಮಾರು 753 ಕೋಟಿ ರೂ.) ದೇಣಿಗೆ ನೀಡಿದ್ದಾರೆ.

    ರೊನಾಲ್ಡೊ ಅವರು ಮೂರು ತಿಂಗಳ ಸಂಬಳ 10 ಮಿಲಿಯನ್ ಯುರೋಗಳಷ್ಟು (ಸುಮಾರು 84 ಕೋಟಿ ರೂ.)ವನ್ನು ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಡೇನಿಯಲ್ ರುಗಾನಿ, ಬ್ಲೇಸ್ ಮಾಟುಡಿ ಮತ್ತು ಪಾವೊಲೊ ದಿಬಾಲಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಪೈಕಿ ದಿಬಾಲಾ ಚೇತರಿಸಿಕೊಂಡಿದ್ದು, ಉಳಿದ ಇಬ್ಬರು ಆಟಗಾರರು ಹೋಮ್ ಕ್ವಾರೆಂಟೈನ್‍ನಲ್ಲಿ ಇದ್ದಾರೆ. ಇಟಲಿಯಲ್ಲಿ ಈವರೆಗೂ 10 ಸಾವಿರಕ್ಕೂ ಅಧಿಕ ಜನರು ಸೋಂಕಿತರು ಮೃತಪಟ್ಟಿದ್ದಾರೆ.

    ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಭಾನುವಾರ ಮಧ್ಯಾಹ್ನದ ವೇಳೆಗೆ 30,943 ಜನರು ಮೃತಪಟ್ಟಿದ್ದಾರೆ. ಜತ್ತಿನಾದ್ಯಂತ 666,013 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 497,002 ಜನರು ಚಿಕಿತ್ಸೆ ಪಡೆಯುತ್ತಿದ್ದು, 1,38,068 ಮಂದಿ ಗುಣಮುಖರಾಗಿದ್ದಾರೆ.

  • ವಿಶ್ವಕಪ್ ಫೈನಲಿನಲ್ಲಿ ಶತಕ ವಂಚಿತನಾಗಲು ಧೋನಿಯೇ ಕಾರಣ: ಸತ್ಯ ಬಿಚ್ಚಿಟ್ಟ ಗಂಭೀರ್

    ವಿಶ್ವಕಪ್ ಫೈನಲಿನಲ್ಲಿ ಶತಕ ವಂಚಿತನಾಗಲು ಧೋನಿಯೇ ಕಾರಣ: ಸತ್ಯ ಬಿಚ್ಚಿಟ್ಟ ಗಂಭೀರ್

    ನವದೆಹಲಿ: ನಾನು 2011ರ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶತಕ ವಂಚಿತನಾಗಲು ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

    ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2011ರ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 28 ವರ್ಷದ ನಂತರ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಈ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಶತಕ ವಂಚಿತರಾಗಿದ್ದ ಗೌತಮ್ ಗಂಭೀರ್ ಅವರು, ನಾನು ಶತಕ ವಂಚಿತನಾಗಲು ಅಂದಿನ ನಾಯಕ ಎಂ.ಎಸ್ ಧೋನಿ ಅವರು ಕಾರಣ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗಂಭೀರ್ ಅವರು, ನಾನು ಎಲ್ಲೇ ಹೋದರೂ ಯುವಕರು ಆ ದಿನ ನೀವು ಯಾಕೆ ಶತಕ ಹೊಡೆದಿಲ್ಲ ಎಂದು ಪ್ರಶ್ನಿಸುತ್ತಾರೆ. ನನಗೂ ಯಾವಗಲೂ ಅನ್ನಿಸುತ್ತದೆ. ಆ ಶತಕ ಸಿಡಿಸಿದ್ದರೆ ನನ್ನ ಕ್ರಿಕೆಟ್ ಜೀವನ ಇನ್ನೂ ಚೆನ್ನಾಗಿ ಇರುತಿತ್ತು. ಆದರೆ ನನ್ನ ವೈಯಕ್ತಿಕ ಸ್ಕೋರ್ ಅನ್ನು ಹಚ್ಚಿಸಿಕೊಳ್ಳುವ ಬರದಲ್ಲೇ ನಾನು ಅವತ್ತು ಶತಕ ವಂಚಿತನಾದೆ ಎಂದು ಹೇಳಿದ್ದಾರೆ.

    ಆ ಪಂದ್ಯದ ವೇಳೆ ನನಗೆ ನಾನು 97 ರನ್ ಹೊಡೆದಿದ್ದೇನೆ ಎಂಬ ಅರಿವೇ ಇರಲಿಲ್ಲ. ಕೇವಲ ನನ್ನ ಗುರಿ ಶ್ರೀಲಂಕಾ ನೀಡಿದ 275 ರನ್‍ಗಳನ್ನು ಬೆನ್ನಟ್ಟವುದು ಆಗಿತ್ತು. ಆದರೆ ಆ ಓವರಿನ ಮಧ್ಯದಲ್ಲಿ ನನ್ನ ಬಳಿಗೆ ಬಂದ ಧೋನಿ ಅವರು, ನೀನು ಈಗ 97 ರನ್ ಹೊಡೆದಿದ್ದಿ. ಇನ್ನು ಮೂರು ರನ್ ಹೊಡೆದರೆ ಶತಕ ಆಗುತ್ತದೆ ಎಂದು ಹೇಳಿ ನನ್ನ ಗಮನಕ್ಕೆ ತಂದರು. ಆಗ ನನಗೆ ನನ್ನ ವೈಯಕ್ತಿಕ ಸ್ಕೋರ್ ಮೇಲೆ ಗಮನ ಹೆಚ್ಚಾಯ್ತು. ಆದ್ದರಿಂದ ನಾನು ಅಂದು ಔಟ್ ಆದೆ. ಧೋನಿ ಅವರು ಅದನ್ನು ನೆನಪಿಸದೆ ಇದ್ದರೆ ಅವತ್ತು ನಾನು ಶತಕ ಸಿಡಿಸುತ್ತಿದ್ದೆ ಎಂದು ನೆನಪಿಸಿಕೊಂಡರು.

    2011 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 275 ರನ್‍ಗಳ ಮೊತ್ತವನ್ನು ಬೆನ್ನಟ್ಟಲು ಹೋಗಿ ಅಲ್ಪ ಮೊತ್ತಕ್ಕೆ ಮೊದಲ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ್ದ ಭಾರತವನ್ನು ಗೌತಮ್ ಗಂಭೀರ್ ಅವರ ತಾಳ್ಮೆಯ ಆಟವಾಡಿ 3 ರನ್ ಗಳಿಂದ ಶತಕದಿಂದ ವಂಚಿತರಾದರು. ಲಂಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ್ದ ಗೌತಮ್ 97 ರನ್(122 ಎಸೆತ, 9 ಬೌಂಡರಿ) ಹೊಡೆದು ಔಟಾದರು. ಶತಕಕ್ಕೆ ಮೂರು ರನ್‍ಗಳ ಅವಶ್ಯಕತೆ ಇದ್ದಾಗ ಥಿಸರಾ ಪೆರೆರಾ ಅವರಿಗೆ ಬೌಲ್ಡ್ ಆಗಿದ್ದರು.

    2011 ಏಪ್ರಿಲ್ 2 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 275 ರನ್ ಗಳ ಗುರಿ ಹೊಂದಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಮಾಲಿಂಗ ಅವರ ಬೌಲಿಂಗ್ ಗೆ ಬೇಗ ಔಟಾದರು. ಈ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಾಗಿ 83 ರನ್ ಗಳ ಕೊಡುಗೆ ನೀಡಿದ್ದರು. ಆದರೆ 22ನೇ ಓವರ್ ಬಳಿಕ ಶ್ರೀಲಂಕಾ ತಂಡ ಮೇಲುಗೈ ಸಾಧಿಸುತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಔಟಾಗುತ್ತಿದಂತೆ ಧೋನಿ ಬ್ಯಾಟಿಂಗ್ ಇಳಿದಿದ್ದರು.

    ಈ ವೇಳೆ ಗಂಭೀರ್ ಜೊತೆ ಉತ್ತಮ ಶತಕದ ಜೊತೆಯಾಟವಾಡಿದ ಧೋನಿ 4 ವಿಕೆಟಿಗೆ 109 ರನ್ ಗಳ ಜೊತೆಯಾಟವಾಡಿದರು. ಈ ಬಳಿಕ ಜೊತೆಯಾದ ಯುವರಾಜ್ ಸಿಂಗ್ ಮತ್ತು ಧೋನಿ ಮುರಿಯದ 5ನೇ ವಿಕೆಟಿಗೆ 54 ರನ್ ಜೊತೆಯಾಟವಾಡಿ 48.2 ಓವರ್ ಗಳಲ್ಲಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಧೋನಿ 79 ಎಸೆತಗಳಲ್ಲಿ 91 ರನ್ (8 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಗೆ ಸಿಕ್ಸರ್ ಸಿಡಿಸಿ ಭಾರತಕ್ಕೆ ಕಪ್ ಗೆದ್ದುಕೊಟ್ಟಿದ್ದರು.

  • ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಪಾಕ್ ಮಗುವಿಗೆ ವೀಸಾ ಕೊಡಿಸಿದ ಗಂಭೀರ್

    ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಪಾಕ್ ಮಗುವಿಗೆ ವೀಸಾ ಕೊಡಿಸಿದ ಗಂಭೀರ್

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಪಾಕಿಸ್ತಾನ ಮಗುವಿಗೆ ವೀಸಾ ಕೊಡಿಸಿದ್ದಾರೆ.

    ಪಾಕಿಸ್ತಾನದ ಒಮೈಮಾ ಅಲಿ ಎಂಬ ಪುಟ್ಟ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಪಾಕ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗದ ಕಾರಣ ಅವರು ಭಾರತಕ್ಕೆ ಬರಬೇಕಿತ್ತು. ಆದರೆ ಈಗ ನಡೆಯುತ್ತಿರುವ ಕೆಲ ವಿದ್ಯಮಾನಗಳಿಂದ ಭಾರತ ಸರ್ಕಾರ ಮಗು ಮತ್ತು ಆಕೆ ಪೋಷಕರಿಗೆ ವೀಸಾ ನೀಡಿರಲಿಲ್ಲ.

    ಈ ವಿಚಾರ ಗಂಭೀರ್ ಅವರಿಗೆ ಗೊತ್ತಾಗಿದೆ. ಅದ್ದರಿಂದ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮಗು ಒಮೈಮಾ ಅಲಿ ಮತ್ತು ಅವರ ಪೋಷಕರಿಗೆ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸಚಿವ ಜೈಶಂಕರ್ ಅವರು ಮಗು ಮತ್ತು ಪೋಷಕರು ಬರಲು ವೀಸಾ ನೀಡುವಂತೆ ಭಾರತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಈ ವಿಚಾರವಾಗಿ ಜೈಶಂಕರ್ ಅವರು ಭಾರತಕ್ಕೆ ಪ್ರಯಾಣಿಸಲು ಬಾಲಕಿ ಮತ್ತು ಆಕೆಯ ಪೋಷಕರಿಗೆ ವೀಸಾ ನೀಡುವಂತೆ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್‍ಗೆ ಸೂಚಿಸಿದ್ದು, ಅವರಿಗೆ ಇಸ್ಲಾಮಾಬಾದ್‍ನಲ್ಲಿ ವೀಸಾ ನೀಡಲಾಗಿದೆ ಎಂದು ಜೈಶಂಕರ್ ಗಂಭೀರ್‍ಗೆ ಬರೆದಿರುವ ಪತ್ರವನ್ನು ಗಂಭೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

    ಈ ಪತ್ರದ ಜೊತೆ ‘ಸೌಮ್ಯ ಹೃದಯವು ಇನ್ನೊಂದು ಕಡೆಯಿಂದ ನಮ್ಮನ್ನು ಸಂಪರ್ಕಿಸಿದಾಗ, ನಮ್ಮ ಹೃದಯವು ಎಲ್ಲಾ ಅಡೆತಡೆಗಳನ್ನು ಮತ್ತು ಗಡಿಗಳನ್ನು ಬದಿಗಿರಿಸುತ್ತದೆ. ಅವಳ ಸಣ್ಣ ಪಾದಗಳಿಂದ, ಅವಳು ನಮಗಾಗಿ ಸಿಹಿ ಗಾಳಿಯನ್ನು ಸಹ ತರುತ್ತಾಳೆ. ನನ್ನ ಮಗಳು ನನ್ನ ಮನೆಗೆ ಭೇಟಿ ನೀಡುತ್ತಿರುವಂತೆ ಅನಿಸುತ್ತಿದೆ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

    ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳು ಬಿಗಡಾಯಿಸಿದರೂ, ಭಾರತದಲ್ಲಿ ಪಾಕಿಸ್ತಾನದ ಜನರಿಗೆ ಮಾನವೀಯ ನೆಲೆಯಲ್ಲಿ ವೀಸಾ ನೀಡಲಾಗುತ್ತಿದೆ. ಭಾರತದಲ್ಲಿ ನಿರ್ಣಾಯಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಈ ಹಿಂದೆಯಿಂದಲೂ ಭಾರತ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡುತ್ತಾ ಬಂದಿದೆ.

  • ರೋಹಿತ್ ಶರ್ಮಾ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್: ಗಂಭೀರ್

    ರೋಹಿತ್ ಶರ್ಮಾ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್: ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್ ರೋಹಿತ್ ಶರ್ಮಾ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

    ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಇಲೆವೆನ್‍ನಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸುವ ಮೂಲಕ ಸಾಧನೆ ಮಾಡಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕೆ ಇಳಿದು ದಾಖಲೆ ಬರೆದಿದ್ದಾರೆ.

    ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಗೌತಮ್ ಗಂಭೀರ್, ಹಿಟ್ ಮ್ಯಾನ್ ರೋಹಿತ್ ಶರ್ಮಾ ಸದ್ಯದ ಅಪಾಯಕಾರಿ ಬ್ಯಾಟ್ಸ್‍ಮನ್ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ರೋಹಿತ್ ಸಹ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್‍ರಂತೆ ಟೆಸ್ಟ್ ಪಂದ್ಯದ ಚೇಸಿಂಗ್ ವೇಳೆ ನಿರ್ಣಾಯಕರಾಗಬಲ್ಲರು. ಆದರೆ ರೋಹಿತ್‍ರನ್ನ ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ತಂಡದ ಮೇಲಿದೆ ಎಂದು ಹೇಳಿದ್ದಾರೆ.

    ಸ್ಫೋಟಕ ಇನ್ನಿಂಗ್ಸ್ ಆಡುವುದು ರೋಹಿತ್ ಶರ್ಮಾ ಅವರಿಗೆ ಕರಗತವಾಗಿದೆ. ಟೆಸ್ಟ್ ಪಂದ್ಯದಲ್ಲೂ ಇದನ್ನೇ ಅನುಸರಿಸುವ ಸಾಧ್ಯತೆ ಇತ್ತು. ಆದರೆ ಟೆಸ್ಟ್ ಕ್ರಿಕೆಟ್‍ಗೆ ಅಗತ್ಯವಿರುವ ಅತ್ಯುತ್ತಮ ಆಟವನ್ನು ರೋಹಿತ್ ಆಡಿ ತೋರಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದ ಟೀ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಅಲ್ಲದೇ ವೃತ್ತಿ ಜೀವನದ ಶ್ರೇಷ್ಠ ಟೆಸ್ಟ್ ರ್ಯಾಂಕಿಂಗ್ ಸ್ಥಾನ ಪಡೆದ ಸಾಧನೆಯನ್ನು ಮಾಡಿದ್ದಾರೆ.

    ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ 36 ಸ್ಥಾನಗಳ ಜಿಗಿತ ಕಂಡ ರೋಹಿತ್ ಶರ್ಮಾ 17ನೇ ಸ್ಥಾನವನ್ನು ಪಡೆದಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 176 ಮತ್ತು 127 ರನ್ ಗಳೊಂದಿಗೆ ಶತಕ ಸಿಡಿಸಿದ್ದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

    ದಕ್ಷಿಣ ಆಫ್ರಿಕಾ ಪುಣೆಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಕೇವಲ 14 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ.

    ಸಿಕ್ಸರ್ ದಾಖಲೆ:
    ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ರೋಹಿತ್, 2ನೇ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಸಿಡಿಸಿದರು. ಆ ಮೂಲಕ 149 ಎಸೆತಗಳಲ್ಲಿ 85.23 ಸರಾಸರಿಯಲ್ಲಿ 127 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ನವಜೋತ್ ಸಿಂಗ್ ಸಿಧು ಅವರ ದಾಖಲೆಯನ್ನು ರೋಹಿತ್ ಮುರಿದರು. 1994ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಲಕ್ನೋ ಟೆಸ್ಟ್ ಪಂದ್ಯದಲ್ಲಿ ಸಿಧು 8 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಈ ಪಂದ್ಯದಲ್ಲಿ 13 ಸಿಕ್ಸರ್ ಸಿಡಿಸಿದ್ದಾರೆ.

    ಟೀಂ ಇಂಡಿಯಾ ಎಲ್ಲಾ ಮಾದರಿಗಳ ಕ್ರಿಕೆಟ್ ಪಂದ್ಯಗಳಲ್ಲಿ ರೋಹಿತ್ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, 2013ರಲ್ಲಿ ಆಸೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 16 ಸಿಕ್ಸರ್ ಸಿಡಿಸಿದ್ದರು. ಅಲ್ಲದೇ 2017 ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರಿನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ 10 ಸಿಕ್ಸರ್ ಸಿಡಿಸಿದ್ದರು.

  • ಪುತ್ರಿಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡ ಗೌತಮ್ ಗಂಭೀರ್

    ಪುತ್ರಿಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡ ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಪುತ್ರಿಯರ ಪಾದ ಪೂಜೆ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ.

    ನವರಾತ್ರಿ ಹಬ್ಬದಂದು ಕೆಲವು ಭಾಗಗಳಲ್ಲಿ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಈ ಮೂಲಕ 6ರಿಂದ 8 ವರ್ಷದ ಬಾಲಕಿಯರನ್ನು ಕನ್ಯಾ ಪೂಜೆಗೆ ಆಹ್ವಾನಿಸಲಾಗುತ್ತದೆ. ಆದರೆ ಗೌತಮ್ ಗಂಭೀರ್ ತಮ್ಮ ಇಬ್ಬರು ಪುತ್ರಿಯರ ಪಾದ ಪೂಜೆಯನ್ನು ಮಾಡಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ಈ ಕುರಿತು ಫೋಟೋ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ನಾನೊಬ್ಬ ಇಬ್ಬರು ಪುತ್ರಿಯರ ತಂದೆಯಾಗಿದ್ದೇನೆ. ಪಾದೋಪಚಾರ ಕೌಶಲ್ಯವನ್ನು ಉತ್ತಮಗೊಳಿಸಿಕೊಂಡಿರುವೆ. ಅಷ್ಟೇ ಅಲ್ಲದೆ ಅಷ್ಟಮಿ ಪ್ರಯುಕ್ತ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ಟ್ವೀಟ್ ಅನ್ನು ಪತ್ನಿ ನತಾಶಾ ಅವರಿಗೆ ಟ್ಯಾಗ್ ಮಾಡಿ, ನಾನು ಮಾಡಿದ ಕೆಲಸಕ್ಕೆ ಬಿಲ್ ಯಾರಿಗೆ ಕಳುಹಿಸ ಬೇಕು ಎಂದು ತಮಾಷೆ ಮಾಡಿದ್ದಾರೆ. ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಗಂಭೀರ್ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗೌತಮ್ ಗಂಭೀರ್ 2019ರ ಮಾರ್ಚ್ ತಿಂಗಳಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್‍ಗೆ ಆಯ್ಕೆಯಾಗಿದ್ದಾರೆ.

  • ನನ್ನಿಂದಾಗಿಯೇ ಗಂಭೀರ್ ಕ್ರಿಕೆಟ್ ಜೀವನ ಅಂತ್ಯವಾಯ್ತು: ಪಾಕ್ ಕ್ರಿಕೆಟಿಗ

    ನನ್ನಿಂದಾಗಿಯೇ ಗಂಭೀರ್ ಕ್ರಿಕೆಟ್ ಜೀವನ ಅಂತ್ಯವಾಯ್ತು: ಪಾಕ್ ಕ್ರಿಕೆಟಿಗ

    ಕರಾಚಿ: ನನ್ನಿಂದಾಗಿಯೇ ಗೌತಮ್ ಗಂಭೀರ್ ಕ್ರಿಕೆಟ್ ಜೀವನ ಅಂತ್ಯವಾಯ್ತು ಎಂದು ಪಾಕಿಸ್ತಾನ ಕ್ರಿಕೆಟಿಗ, ಬೌಲರ್ ಮೊಹಮ್ಮದ್ ಇರ್ಫಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    2012ರ ಸರಣಿ ಬಳಿಕ ಗೌತಮ್ ಗಂಭೀರ್ ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರ ಬಂದರು. ಅಂದಿನ ಕೆಲವು ನೆನಪುಗಳನ್ನು ಮೆಲಕು ಹಾಕಿಕೊಂಡರು. ಅಂದು ನಡೆದ ಪಂದ್ಯಗಳಲ್ಲಿ (ಟಿ20 & ಏಕದಿನ) ನಾನು ಗಂಭೀರ್ ಅವರನ್ನು ನಾಲ್ಕು ಬಾರಿ ಔಟ್ ಮಾಡಿದ್ದೆ. ಇದಾದ ಬಳಿಕ ಗಂಭೀರ್ ಕೇವಲ ಒಂದು ಸರಣಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು ಎಂದು ಮೊಹಮ್ಮದ್ ಇರ್ಫಾನ್ ಹೇಳಿದ್ದಾರೆ.

    7 ಅಡಿ ಎತ್ತರ ಬೌಲರ್ ಎಸೆದ ಚೆಂಡನ್ನು ಅರ್ಥ ಮಾಡಿಕೊಳ್ಳಲು ಗೌತಮ್ ಗಂಭೀರ್ ಆಗುತ್ತಿರಲಿಲ್ಲ. ಮೈದಾನದಲ್ಲಿ ನನ್ನನ್ನು ಎದುರಿಸಲು ಸಹ ಗಂಭೀರ್ ಕಷ್ಟಪಡುತ್ತಿದ್ದರು. ಪ್ರತಿಬಾರಿ ನನ್ನ ಎಸೆತಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನ ಗಂಭೀರ್ ಮಾಡುತ್ತಿದ್ದರು ಎಂಬುವುದು ನನ್ನ ವೈಯಕ್ತಿಯ ಅಭಿಪ್ರಾಯ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

  • ‘ಧೋನಿಗಿಂತ ದೇಶವೇ ಮುಖ್ಯ’: ಗಂಭೀರ್

    ‘ಧೋನಿಗಿಂತ ದೇಶವೇ ಮುಖ್ಯ’: ಗಂಭೀರ್

    ನವದೆಹಲಿ: ಟೀಂ ಇಂಡಿಯಾ ತಂಡದ ಪರ ಮತ್ತೆ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಸಾಧ್ಯವಾದಷ್ಟು ಬೇಗ ಧೋನಿರ ಅಭಿಪ್ರಾಯವನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

    ಧೋನಿ ನಿವೃತ್ತಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಗಂಭೀರ್, ನಿವೃತ್ತಿ ಎಂಬುವುದು ಯಾವುದೇ ಆಟಗಾರನ ವೈಯಕ್ತಿಕ ನಿರ್ಧಾರ. ಆದರೆ ಅಂತಿಮವಾಗಿ ತಂಡದ ಮುಂದಿನ ಭವಿಷ್ಯವನ್ನು ಗಮನಿಸಬೇಕಾಗುತ್ತದೆ. ಧೋನಿ ವಿಚಾರದಲ್ಲಿ ಆಯ್ಕೆ ಸಮಿತಿ ಏನು ಮಾಡುತ್ತಿದೆ. ಧೋನಿಗಿಂತ ದೇಶವೇ ಮುಖ್ಯ ಎಂಬ ವಿಚಾರ ತಿಳಿಯುವುದಿಲ್ಲವಾ. ಅವರು ನಿವೃತ್ತಿ ಹೇಳುತ್ತೇನೆ ಎಂದು ಬರುವವರೆಗೂ ನಿರೀಕ್ಷೆ ಮಾಡುತ್ತಲೇ ಕುಳಿತುಕೊಳ್ಳುತ್ತರಾ ಎಂದು ಪ್ರಶ್ನೆ ಮಾಡಿದ್ದಾರೆ.

    ಮುಂದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ತಂಡದಲ್ಲಿ ಧೋನಿರನ್ನು ನಾನು ನೋಡುತ್ತೇನೆ ಎನಿಸುತ್ತಿಲ್ಲ. ಆ ವೇಳೆಗೆ ತಂಡದ ನಾಯಕರಾಗಿ ಯಾರೇ ಇದ್ದರೂ ಕೂಡ ಅದು ನಡೆಯುವ ಕೆಲಸವಲ್ಲ. ವಿರಾಟ್ ಕೊಹ್ಲಿಯೇ ತಂಡದ ನಾಯಕರಾಗಿರುತ್ತಾರೆ ಎಂಬುವುದು ಖಚಿತವಲ್ಲ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ: ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ಮುಂದಿನ ವಿಶ್ವಕಪ್ ನಲ್ಲಿ ಧೋನಿ ಇರುವುದಿಲ್ಲ ಎಂದು ಹೇಳಲು ಯಾರೋ ಒಬ್ಬರು ಬರಬೇಕು. ಸದ್ಯ ಆಯ್ಕೆ ಸಮಿತಿ ಯುವ ಕ್ರಿಕೆಟಿಗರಿಗೆ ಪರೀಕ್ಷೆಗಳನ್ನು ನಡೆಸುತ್ತಿರುವುದು ಕೂಡ ದೇಶಕ್ಕಾಗಿಯೇ ವಿನಾಃ ಧೋನಿಗಾಗಿ ಅಲ್ಲ. ಆದರೆ ಯುವ ಆಟಗಾರರನ್ನು ಪರಿಕ್ಷೀಸಲು ಧೋನಿ ತಮಗೆ ಅವಕಾಶ ನೀಡಿದ್ದಾರೆ ಎಂದು ಹೇಳಿರುವುದು ನಂಬಿಕೆಗೆ ಅರ್ಹವಲ್ಲ. ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವು ಪಡೆಯಬೇಕಾದರೆ ಇಂದಿನಿಂದಲೇ ಸಿದ್ಧತೆ ನಡೆಸಬೇಕಾಗುತ್ತದೆ. ರಿಷಬ್ ಪಂತ್, ಸಂಜು ಸ್ಯಾಮ್ಸನ್ ರೊಂದಿಗೆ ಉಳಿದ ಯುವ ವಿಕೆಟ್ ಕೀಪರ್ ಆಟಗಾರರಿಗೂ ಅವಕಾಶ ನೀಡಬೇಕಿದೆ. ಟೀಂ ಇಂಡಿಯಾ ತಂಡ ಧೋನಿರನ್ನು ಹೊರತು ಪಡಿಸಿ ನೋಡುವ ಸಮಯ ಬಂದಿದೆ ಎಂದು ಗಂಭೀರ್ ಹೇಳಿದ್ದಾರೆ.

  • ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿರುವ ಯುವ ಆಟಗಾರ ರಿಷಬ್ ಪಂತ್‍ಗೆ ಗೌತಮ್ ಗಂಭೀರ್ ‘ಸೀರಿಯಸ್’ ವಾರ್ನಿಂಗ್ ನೀಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವ ರಿಷಬ್ ಪಂತ್ ಒಮ್ಮೆ ತನ್ನ ಪ್ರದರ್ಶನದ ಕುರಿತು ಪರಿಶೀಲನೆ ನಡೆಸಿಕೊಂಡರೆ ಒಳ್ಳೆಯದು ಎಂದು ಗೌತಮ್ ಗಂಭೀರ್ ಹೇಳಿದ್ದು, ಪಂತ್‍ಗೆ ಉತ್ತಮ ಸಾಮರ್ಥ್ಯವಿದ್ದು, ಈ ಕುರಿತು ಯಾವುದೇ ಸಂದೇಹವಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಯುವ ಆಟಗಾರ ಸಂಜು ಸ್ಯಾಮ್ಸನ್ ಸವಾಲು ನೀಡುತ್ತಿದ್ದಾರೆ. ನನ್ನ ನೆಚ್ಚಿನ ಆಟಗಾರ ಸ್ಯಾಮ್ಸನ್ ಖಂಡಿತ ರಿಷಬ್‍ಗೆ ಸವಾಲಾಗಲಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

    ಧೋನಿ ಸ್ಥಾನವನ್ನು ತುಂಬುವಂತಹ ಆಟಗಾರರ ಆಯ್ಕೆಯಲ್ಲಿ ಪಂತ್ ಅವರಿಗೆ ಆಯ್ಕೆ ಸಮಿತಿ ಮೊದಲ ಅವಕಾಶ ನೀಡಿದೆ, ಆದರೆ ಪಂತ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತ ಸ್ಯಾಮ್ಸನ್ ಐಪಿಎಲ್ ಹಾಗೂ ಟೀಂ ಇಂಡಿಯಾ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯವ ನಿರೀಕ್ಷೆಯಲ್ಲಿದ್ದಾರೆ.

    ಇದೇ ವೇಳೆ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಕುರಿತು ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಈ ಆಟಗಾರರಿಗೆ ಉತ್ತಮ ಪ್ರದರರ್ಶನ ನೀಡುವ ಅವಕಾಶವಿದೆ. ಸರಣಿಯಲ್ಲಿ ಟೀಂ ಇಂಡಿಯಾ ಫೇವರೆಟಾಗಿದ್ದು, ದಕ್ಷಿಣ ಆಫ್ರಿಕಾ ತಂಡ ಅನುಭವಿ ಆಟಗಾರರ ಕೊರತೆ ಎದುರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಟೀಕಿಸಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    ವಿಶ್ವಸಂಸ್ಥೆ ನಿರ್ಣಯದ ಪ್ರಕಾರ ಕಾಶ್ಮೀರಿಗಳಿಗೆ ಅವರ ಹಕ್ಕುಗಳನ್ನು ನೀಡಬೇಕು. ನಮ್ಮಲ್ಲೆರಂತೆಯೇ ಅವರಿಗೂ ಸ್ವಾತಂತ್ರ್ಯದ ಹಕ್ಕು ನೀಡಬೇಕು. ವಿಶ್ವಸಂಸ್ಥೆಯನ್ನು ರಚಿಸಿದ್ದು ಯಾಕೆ ಮತ್ತು ಅದು ಯಾಕೆ ನಿದ್ರಿಸುತ್ತಿದೆ? ಕಾಶ್ಮೀರದಲ್ಲಿ ಮಾನವೀಯತೆಯ ವಿರುದ್ಧ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣವನ್ನು ಗಮನಿಸಬೇಕು. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಬೇಕು ಎಂದು ಶಾಹೀದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರು ಗೌತಮ್ ಗಂಭೀರ್ ಅವರು, ಶಾಹೀದ್ ಆಫ್ರಿದಿ ಅವರು ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲಿ ಅಪ್ರಚೋದಿತ ಆಕ್ರಮಣ ಹಾಗೂ ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿದೆ. ಇದನ್ನು ಉಲ್ಲೇಖಿಸಿದ್ದಕ್ಕೆ ನಾವರನ್ನು ಶ್ಲಾಘಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇವೆಲ್ಲವೂ ನಡೆಯುತ್ತಿದೆ ಎಂದು ಹೇಳುವುದನ್ನು ಆಫ್ರಿದಿ ಮರೆತಿದ್ದಾರೆ. ಚಿಂತಿಸಬೇಡಿ, ನಾವು ಪಿಓಕೆ ಇತ್ಯರ್ಥಗೊಳಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

  • ಗೌತಮ್ ಗಂಭೀರ್ ಓರ್ವ ‘ಅವಿವೇಕಿ’: ಶಾಹಿದ್ ಅಫ್ರಿದಿ

    ಗೌತಮ್ ಗಂಭೀರ್ ಓರ್ವ ‘ಅವಿವೇಕಿ’: ಶಾಹಿದ್ ಅಫ್ರಿದಿ

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಭಾರೀ ಅಂತರದಲ್ಲಿ ಎದುರಾಳಿ ವಿರುದ್ಧ ಜಯ ಪಡೆದು ಸಂಸದರಾಗಿ ಆಯ್ಕೆ ಆಗಿದ್ದು, ಇದೇ ಸಂದರ್ಭದಲ್ಲಿ ಗಂಭೀರ್ ರನ್ನ ಒಬ್ಬ ಅವಿವೇಕಿ, ಆತನಿಗೆ ಪ್ರಜ್ಞೆ ಏನಾದರು ಇದೆಯಾ ಎಂದು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಟೀಕಿಸಿದ್ದಾರೆ.

    ಮಾಧ್ಯಮ ಪತ್ರಿಕಾಗೋಷ್ಠಿ ವೇಳೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಫ್ರಿದಿ, ಆತಗೇನಾದರೂ ಪ್ರಜ್ಞೆ ಇದೆಯಾ? ಗಂಭೀರ್ ಒಬ್ಬ ಅವಿವೇಕಿ, ವಿದ್ಯಾವಂತರು ಇಂತಹ ಮಾತುಗಳನ್ನ ಆಡುತ್ತರಾ? ಎಂದಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಆಡಬಾರದು ಎಂಬ ಗಂಭೀರ್ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಅಫ್ರಿದಿ ಪ್ರತಿಕ್ರಿಯೆ ನೀಡಿದ್ದಾರೆ. ಪುಲ್ವಾಮಾ ದಾಳಿ ಬಳಿಕ ದೇಶಾದ್ಯಂತ ಪಾಕಿಸ್ತಾನ ನಡುವೆ ಯಾವುದೇ ಕ್ರಿಕೆಟ್ ಸಂಬಂಧಗಳನ್ನು ಬೆಳೆಸುವುದು ಬೇಡ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲೂ ಟೀಂ ಇಂಡಿಯಾ, ಪಾಕ್ ವಿರುದ್ಧ ಆಡಬಾರದು ಎಂಬ ಮಾತು ಕೇಳಿ ಬಂದಿತ್ತು.

    ಈ ಹಿಂದೆಯೂ ಕೂಡ ಅಫ್ರಿದಿ ಹಾಗೂ ಗಂಭೀರ್ ನಡುವೆ ಟ್ವಿಟ್ಟರ್ ವಾರ್ ನಡೆದಿತ್ತು, ಅಫ್ರಿದಿ ತಮ್ಮ ಆಟೋಬಯೋಗ್ರಾಫಿಯಲ್ಲಿ ಗಂಭೀರ್ ವಿರುದ್ಧ ಕಿಡಿಕಾರಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ್ದ ಗಂಭೀರ್, ಅಫ್ರಿದಿ ನೀನೊಬ್ಬ ವಿಚಿತ್ರ ವ್ಯಕ್ತಿ. ವೈದ್ಯಕೀಯ ಕಾರಣಕ್ಕಾಗಿ ನಾವು ಈಗಲೂ ಪಾಕಿಸ್ತಾನಿಯರಿಗೆ ವೀಸಾ ನೀಡುತ್ತಿದ್ದೇವೆ. ನಿನ್ನನ್ನು ನಾನೇ ಸ್ವತಃ ಮನೋತಜ್ಞರ ಬಳಿ ಕರೆದ್ಯೊಯುತ್ತೇನೆ ಎಂದು ವ್ಯಂಗ್ಯವಾಡಿದ್ದರು. ಗಂಭೀರ್ ಹಾಗೂ ಅಫ್ರಿದಿ ನಡುವೆ ಹಲವು ಕಿತ್ತಾಟಗಳು ನಡೆದಿದ್ದು, ಕ್ರೀಡಾಂಗಣದ ಹೊರಗು, ಒಳಗೂ ಈ ಜಗಳಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.