Tag: Gautam Gambhir

  • ಅಫ್ರಿದಿ ಬೇಗ ಚೇತರಿಸಿಕೊಳ್ಳಲಿ- ಗಂಭೀರ್

    ಅಫ್ರಿದಿ ಬೇಗ ಚೇತರಿಸಿಕೊಳ್ಳಲಿ- ಗಂಭೀರ್

    – ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ನಡೆಗೆ ಮೆಚ್ಚುಗೆ

    ನವದೆಹಲಿ: ಕ್ರಿಕೆಟ್ ಮೈದಾನದ ಒಳಗೆ ಹಾಗೂ ಹೊರಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ ಬದ್ಧ ವೈರಿಗಳು. ಆದರೆ ಅಫ್ರಿದಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಪ್ರತಿಕ್ರಿಯಿಸಿದ ಗಂಭೀರ್, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    ಗೌತಮ್ ಗಂಭೀರ್ ಅವರ ಮಾನವೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರ ಸಾವು, ನೋವಿಗೆ ಖುಷಿಪಡುವ ಸಂಸ್ಕೃತಿ ಭಾರತೀಯರಿಗೆ ಇಲ್ಲ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಹಿದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

    “ಶಾಹಿದ್ ಆಫ್ರಿದಿ ಅಷ್ಟೇ ಅಲ್ಲ ಯಾರೂ ಕೊರೊನಾ ವೈರಸ್‍ಗೆ ಒಳಗಾಗಬಾರದು. ಶಾಹಿದ್ ಅಫ್ರಿದಿ ಅವರೊಂದಿಗೆ ನನಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ದೇಶದ ಪ್ರತಿಯೊಬ್ಬ ಕೊರೊನಾ ಸೋಂಕಿತ ಆದಷ್ಟು ಬೇಗ ಗುಣಮುಖರಾಗಬೇಕು” ಎಂದು ಗಂಭೀರ್ ಹೇಳಿದ್ದಾರೆ.

    “ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ದೇಶದ ಜನರ ಬಗ್ಗೆ ಚಿಂತಿಸಬೇಕಾಗಿದೆ. ಪಾಕಿಸ್ತಾನವು ಭಾರತಕ್ಕೆ ಸಹಾಯ ಮಾಡಲು ಮುಂದಾಗಿತ್ತು. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆದರೆ ಅವರು ಮೊದಲು ತಮ್ಮ ದೇಶದ ಜನರಿಗೆ ಸಹಾಯ ಮಾಡುವುದು ಅಗತ್ಯವಿದೆ. ಅಷ್ಟೇ ಅಲ್ಲದೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿ” ಎಂದು ತಿಳಿಸಿದರು.

    ಪಾಕಿಸ್ತಾನದಲ್ಲಿ ಈವರೆಗೂ 1.30 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 50 ಸಾವಿರಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದರೆ, ಸುಮಾರು 2,500 ರೋಗಿಗಳು ಮೃತಪಟ್ಟಿದ್ದಾರೆ.

  • ಸಂಸದ ಗೌತಮ್ ಗಂಭೀರ್ ತಂದೆಯ ಎಸ್‍ಯುವಿ ಕಾರು ಕಳವು

    ಸಂಸದ ಗೌತಮ್ ಗಂಭೀರ್ ತಂದೆಯ ಎಸ್‍ಯುವಿ ಕಾರು ಕಳವು

    ನವದೆಹಲಿ: ಬಿಜೆಪಿ ಸಂಸದ, ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರ ತಂದೆ ದೀಪಕ್ ಗಂಭೀರ್ ಅವರ ಎಸ್‍ಯುವಿ ಕಾರನ್ನು ಕಳ್ಳತನ ಮಾಡಲಾಗಿದೆ.

    ಗಂಭೀರ್ ನಿವಾಸ ಎದುರು ನಿಲ್ಲಿಸಿದ್ದ ಕಾರನ್ನು ಗುರುವಾರ ಮುಂಜಾನೆ ವೇಳೆಯಲ್ಲಿ ಕಳವು ಮಾಡಲಾಗಿದೆ. ಘಟನೆ ಕುರಿತು ಗಂಭೀರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಸೆಂಟ್ರಲ್ ಡಿಸಿಪಿ, ರಾಜೇಂದ್ರನಗರದ ಗಂಭೀರ್ ನಿವಾಸದ ಎದುರು ನಿಲ್ಲಿಸಲಾಗಿದ್ದ ಕಾರನ್ನು ಕಳ್ಳತನ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಶುರು ಮಾಡಿದ್ದೆವೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

    ಗಂಭೀರ್ ದೆಹಲಿಯ ರಾಜೇಂದ್ರನಗರದಲ್ಲಿ ತಂದೆಯೊಂದಿಗೆ ವಾಸಿಸುತ್ತಿದ್ದಾರೆ. ಬುಧವಾರ ಸಂಜೆ 3.30ರ ವೇಳೆಯಲ್ಲಿ ಮನೆಯ ಎದುರು ಕಾರು ನಿಲ್ಲಿಸಿದ್ದರು. ಗುರುವಾರ ಬೆಳಗ್ಗೆ ಕಾರು ಇಲ್ಲದಿರುವುದನ್ನು ಗಮನಿಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

  • ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ

    ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ

    ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿ ಟಾಪ್ ಸ್ಥಾನವನ್ನು ಪಡೆದುಕೊಂಡಿತ್ತು. ಐಸಿಸಿಯ ಸದಸ್ಯ ರಾಷ್ಟ್ರಗಳ ತಂಡಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ಮೊದಲ ಸ್ಥಾನ ಪಡೆದಿತ್ತು. ಪರಿಣಾಮ 2016 ಅಕ್ಟೋಬರ್ ನಿಂದ ಸತತ 42 ತಿಂಗಳು ನಂ.1 ಟೆಸ್ಟ್ ಶ್ರೇಯಾಂಕ ಸ್ಥಾನದಲ್ಲಿದ್ದ ಟೀಂ ಇಂಡಿಯಾ ತನ್ನ ರ‍್ಯಾಂಕಿಂಗ್ ಕಳೆದುಕೊಂಡಿತ್ತು. ಅಲ್ಲದೇ ಮೂರನೇ ಸ್ಥಾನಕ್ಕೆ ಇಳಿದಿತ್ತು.

    ಈ ಕುರಿತಂತೆ ಟೀಂ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಾವ ಆಧಾರದ ಮೇಲೆ ಆಸ್ಟ್ರೇಲಿಯಾ ತಂಡಕ್ಕೆ ನಂ.1 ಸ್ಥಾನ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿ ಶ್ರೇಯಾಂಕ ಪಟ್ಟಿಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಾಕಷ್ಟು ಸಮಯದಿಂದ ಟೀಂ ಇಂಡಿಯಾ ನಿರಂತರವಾಗಿ ವಿಜಯಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಆಸೀಸ್ ಟಾಪ್ ಪಟ್ಟವನ್ನು ಹೇಗೆ ಪಡೆಯಿತು ಎಂದು ಅರ್ಥವಾಗುತ್ತಿಲ್ಲ. ಅಲ್ಲದೇ ಟೀಂ ಇಂಡಿಯಾ 3ನೇ ಸ್ಥಾನಕ್ಕೆ ಇಳಿದಿರುವುದು ಅಚ್ಚರಿ ತಂದಿದೆ. ಐಸಿಸಿ ನೀಡುವ ಅಂಕಗಳು, ಶ್ರೇಯಾಂಕ ವಿಧಾನ ಸರಿ ಇಲ್ಲ. ಪ್ರದರ್ಶನ ಆಧಾರದ ಮೇಲೆ ನೋಡುವುದಾದರೆ ಟೀಂ ಇಂಡಿಯಾ ಇಂದಿಗೂ ಮೊದಲ ಸ್ಥಾನದಲ್ಲಿರಬೇಕಾಗಿತ್ತು. ಟೆಸ್ಟ್ ಚಾಂಪಿಯನ್‍ಶಿಪ್ ಆರಂಭವಾದ ಬಳಿಕ ತವರು ನೆಲದಲ್ಲಿ ಹಾಗೂ ವಿದೇಶಿ ನೆಲದಲ್ಲಿ ಪಂದ್ಯ ಗೆದ್ದರು ಒಂದೇ ಅಂಕಗಳನ್ನು ನೀಡುವುದು ಸರಿಯಲ್ಲ. ವಿದೇಶದಲ್ಲಿ ಹಾಗೂ ತವರು ನೆಲದಲ್ಲಿಯೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ ಎಂದು ಗಂಭೀರ್ ಹೇಳಿದ್ದಾರೆ. ಇದನ್ನು ಓದಿ: ಐಸಿಸಿ ರ‍್ಯಾಂಕಿಂಗ್ – ಪಂದ್ಯ ಆಡದೇ ಇದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ಇಳಿದ ಭಾರತ

    ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಿದ್ದ ಐಸಿಸಿ ಶ್ರೇಯಾಂಕ ಪಟ್ಟಿಯ ಅನ್ವಯ 116 ಅಂಕ ಪಡೆದಿದ್ದ ಆಸ್ಟ್ರೇಲಿಯಾ ತಂಡ ಮೊದಲ ಪಡೆದಿತ್ತು. ಆ ಬಳಿಕ 115 ಅಂಕ ಪಡೆದಿದ್ದ ನ್ಯೂಜಿಲೆಂಡ್, 114 ಅಂಕ ಪಡೆದಿದ್ದ ಟೀಂ ಇಂಡಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. 2003 ರಲ್ಲಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಆರಂಭಿಸಿದ ಬಳಿಕ ಮೊದಲ ಬಾರಿಗೆ ಕಡಿಮೆ ಅಂತರದಲ್ಲಿ ಟಾಪ್ ಮೂರು ತಂಡಗಳು ಸ್ಥಾನ ಪಡೆದಿವೆ. ಕೊಹ್ಲಿ ನಾಯಕತ್ವದ ತಂಡದ 2016-17ರಿಂದ ಉತ್ತಮ ಪ್ರದರ್ಶನ ನೀಡಿತ್ತಾ ನಂ.1 ಸ್ಥಾನದಲ್ಲಿ ಮುಂದುವರಿದಿತ್ತು. ಐಸಿಸಿ ನಿಯಮಗಳ ಅನ್ವಯ ಮೇ 2009 ರಿಂದ ಲಭಿಸಿದ ಫಲಿತಾಂಶಗಳ ಅನ್ವಯ ಆಸೀಸ್ ನಂ.1 ಪಟ್ಟ ಪಡೆದುಕೊಂಡಿದೆ. ಉಳಿದಂತೆ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

  • ‘ಕುಂಬ್ಳೆಗಾಗಿ ನನ್ನ ಜೀವವನ್ನೇ ಕೊಡುತ್ತೇನೆ’: ಗೌತಮ್ ಗಂಭೀರ್

    ‘ಕುಂಬ್ಳೆಗಾಗಿ ನನ್ನ ಜೀವವನ್ನೇ ಕೊಡುತ್ತೇನೆ’: ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಕುಂಬ್ಳೆ ಮೇಲೆ ತಾವು ಇಟ್ಟಿರುವ ಅಭಿಮಾನವನ್ನು ಮತ್ತೊಮ್ಮೆ ಗೌತಮ್ ಗಂಭೀರ್ ಹೇಳಿದ್ದಾರೆ. ಕುಂಬ್ಳೆಗಾಗಿ ತಮ್ಮ ಜೀವವನ್ನೇ ನೀಡೋದಾಗಿ ಗಂಭೀರ್ ತಿಳಿಸಿದ್ದಾರೆ.

    ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಆಡಿದ ಅನುಭವ ಕುರಿತು ಮಾತನಾಡಿರುವ ಗಂಭೀರ್, ಭಾರತ ಕ್ರಿಕೆಟ್‍ಗೆ ದೊರೆತ ಮಹತ್ವದ ಆಟಗಾರ ಅನಿಲ್ ಕುಂಬ್ಳೆ. ಅವರು ಆಡುತ್ತಿದ್ದ ಸಂದರ್ಭದಲ್ಲಿ ಡಿಆರ್‍ಎಸ್ ಮನವಿ ಇದ್ದಿದ್ದರೆ 900 ವಿಕೆಟ್ ದಾಖಲೆ ಬರೆಯುತ್ತಿದ್ದರು. ತಂಡದಲ್ಲಿ ನನ್ನ ಬಗ್ಗೆ ಭರವಸೆ ಇಟ್ಟಿದ್ದ ಆಟಗಾರ ಅನಿಲ್ ಬಾಯ್ ಮಾತ್ರ ಎಂದು ಗಂಭೀರ್ ತಮ್ಮ ಆಲ್‍ಟೈಮ್ ಇಲೆವೆನ್ ತಂಡದ ನಾಯಕರಾಗಿ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ಸುನಿಲ್ ಗವಾಸ್ಕರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.

    2008ರಲ್ಲಿ ಆಸೀಸ್ ಟೆಸ್ಟ್ ಟೂರ್ನಿಗೂ ಮುನ್ನ ನಡೆದ ಘಟನೆಗಳನ್ನು ಬಿಚ್ಚಿಟ್ಟಿರುವ ಗಂಭೀರ್, ನಾನು, ಸೆಹ್ವಾಗ್ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕುಂಬ್ಳೆ ನಮ್ಮ ಬಳಿಗೆ ಬಂದಿದ್ದರು. ಏನು ನಡೆದರು ಈ ಟೂರ್ನಿಯಲ್ಲಿ ನೀವೇ ಆರಂಭಿಕ ಆಟಗಾರರು. ನೀವು 8 ಬಾರಿ ಶೂನ್ಯಕ್ಕೆ ಔಟಾದರೂ ನಿಮ್ಮನ್ನೇ ಆರಂಭಿಕರನ್ನಾಗಿ ಕಣಕ್ಕೆ ಇಳಿಸುತ್ತೇನೆ ಎಂದಿದ್ದರು. ನಾನು ಯಾರಿಗಾದರೂ ನನ್ನ ಜೀವ ನೀಡಬೇಕು ಎಂದರೇ ಕುಂಬ್ಳೆ ಅವರಿಗೆ ನೀಡುತ್ತೇನೆ. ಅವರು ಅಂದು ಹೇಳಿದ್ದ ಮಾತುಗಳು ಇಂದಿಗೂ ನನ್ನ ಮನಸ್ಸಿನಲ್ಲಿದೆ ಎಂದು ಗಂಭೀರ್ ವಿವರಿಸಿದ್ದಾರೆ.

    ಸೌರವ್ ಗಂಗೂಲಿ, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಂತೆ ಅನಿಲ್ ಕುಂಬ್ಳೆ ಕೂಡ ಟೀಂ ಇಂಡಿಯಾ ತಂಡಕ್ಕೆ ದೀರ್ಘಾವಧಿ ನಾಯಕರಾಗಬೇಕಿತ್ತು. ಮತ್ತಷ್ಟು ಸಮಯ ಅವರು ತಂಡದ ನಾಯಕರಾಗಿದ್ದರೆ ಹಲವು ದಾಖಲೆಗಳು ನಿರ್ಮಿಸುತ್ತಿದ್ದರು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

    ಗಂಭೀರ್ ಆಯ್ಕೆಯ ಆಲ್‍ಟೈಮ್ ಇಲೆವೆನ್ ಟೆಸ್ಟ್ ತಂಡ: ಅನಿಲ್ ಕುಂಬ್ಳೆ (ನಾಯಕ), ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್.

  • ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

    ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

    ಇಸ್ಲಾಮಾಬಾದ್: ಭಾರತ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು ಎಂದು ಪಾಕಿಸ್ತಾನ ಅನುಭವಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

    ಶ್ರೀಲಂಕಾದಲ್ಲಿ 2010ರಲ್ಲಿ ನಡೆದಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಪರಸ್ಪರ ಮುಖಾಮಖಿಯಾಗಿ ಅಕ್ಮಲ್, ಗಂಭೀರ್ ಜಗಳವಾಡಿದ್ದ ಘಟನೆ ಸಾಕಷ್ಟು ಮಂದಿಗೆ ನೆನಪಿರುತ್ತದೆ. ಅಂದು ಗಂಭೀರ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಅಕ್ಮಲ್ ಅನಗತ್ಯವಾಗಿ ಅಂಪೈರ್ ಗೆ ಮನವಿ ಮಾಡುತ್ತಿದ್ದರು. ಪರಿಣಾಮ ತಾಳ್ಮೆ ಕಳೆದುಕೊಂಡ ಗಂಭೀರ್ ಅಕ್ಮಲ್‍ಗೆ ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಅಕ್ಮಲ್ ಕೂಡ ಕೋಪಗೊಂಡ ಹಿನ್ನೆಲೆಯಲ್ಲಿ ಆನ್‍ಫೀಲ್ಡ್ ನಲ್ಲೇ ಜಗಳ ವಾಡಿದ್ದರು. ಇದೇ ಪಂದ್ಯದಲ್ಲಿ ಡ್ರಿಂಕ್ಸ್ ವೇಳೆ ಮತ್ತೊಮ್ಮೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇತ್ತ ಮತ್ತೊಂದು ಬದಿಯಲ್ಲಿದ್ದ ನಾಯಕ ಧೋನಿ, ಗಂಭೀರ್ ಅವರಿಗೆ ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಗಮನರ್ಹವಾಗಿ ಎಲ್ಲರ ನೆನಪಿನಲ್ಲಿದೆ.

    ಬಳಿಕ 2012-13ರ ಭಾರತ, ಪಾಕ್ ನಡುವೆ ಬೆಂಗಳೂರಿನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಇಶಾಂತ್ ಶರ್ಮಾ, ಕಮ್ರಾನ್ ಅಕ್ಮಲ್ ವಾಗ್ವಾದ ನಡೆಸಿದ್ದರು. ಈ ಎರಡು ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮ್ರಾನ್ ಅಕ್ಮಲ್, ಈ ಘಟನೆಗಳನ್ನು ಕ್ರೀಡಾಂಗಣದಲ್ಲೇ ಮರೆತು ಹೋಗಿದ್ದೇನೆ. ನನ್ನ ಹಾಗೂ ಗಂಭೀರ್, ಇಶಾಂತ್ ನಡುವೆ ಉತ್ತಮ ಸ್ನೇಹವಿದೆ. ಪಂದ್ಯದ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಕಾರಣದಿಂದ ಜಗಳ ನಡೆದಿತ್ತು. ಗಂಭೀರ್ ನನಗೆ ಕ್ರೀಡಾಂಗಣದಲ್ಲಿ ಏನು ಹೇಳಿದರು ಎಂಬುವುದು ಅರ್ಥವಾಗದ ಕಾರಣ ಜಗಳ ನಡೆದಿತ್ತು. ಗಂಭೀರ್ ನಾನು ಉತ್ತಮ ಸ್ನೇಹಿತರಾದ ಕಾರಣ ಕ್ರಿಕೆಟ್ ಟೂರ್ನಿಗಳ ವೇಳೆ ಭೇಟಿ ಮಾಡಿ ಒಟ್ಟಿಗೆ ಊಟ ಮಾಡುತ್ತಿದ್ದೆವು. ಇಶಾಂತ್ ಜೊತೆಗಿನ ಘಟನೆಯೂ ಕೂಡ ಇಂತಹದ್ದೆ. ಇಂದಿಗೂ ನಾವು ಪರಸ್ಪರ ಗೌರವದಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

    ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಪರ 53 ಟೆಸ್ಟ್, 157 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದು, ಇತ್ತೀಚೆಗೆ ಕಮ್ರಾನ್ ಅಕ್ಮಲ್ ಸಹೋದರ ಉಮರ್ ಅಕ್ಮಲ್ ವಿರುದ್ಧ ಪಿಸಿಬಿ ಮೂರು ವರ್ಷ ನಿಷೇಧ ವಿಧಿಸಿತ್ತು. ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಸಂಪರ್ಕ ನಡೆಸಿದ ವಿಚಾರವನ್ನು ಕ್ರಿಕೆಟ್ ಬೋರ್ಡಿಗೆ ತಿಳಿಸದ ಕಾರಣ ಪಿಸಿಬಿ ನಿಷೇಧ ವಿಧಿಸಿತ್ತು.

  • ಐಪಿಎಲ್‍ನಲ್ಲಿ ಕೊಹ್ಲಿಗಿಂತ ಧೋನಿಗೆ ಹೆಚ್ಚು ಸೋಲು

    ಐಪಿಎಲ್‍ನಲ್ಲಿ ಕೊಹ್ಲಿಗಿಂತ ಧೋನಿಗೆ ಹೆಚ್ಚು ಸೋಲು

    ನವದೆಹಲಿ: ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನಾ ಟಿ20 ವಿಶ್ವಕಪ್ ಆವೃತ್ತಿಯನ್ನು ಗೆದ್ದ ಬೀಗಿತ್ತು. ಈ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿ ಕ್ರಿಕೆಟ್ ಅಭಿಮಾನಿಗಳಿಗಳಿಗೆ ಮತ್ತಷ್ಟು ರಂಗು ನೀಡಿತು. ಐಪಿಎಲ್ ದೇಶ ಅಷ್ಟೇ ಅಲ್ಲದೆ ವಿದೇಶದಲ್ಲೂ ಹೆಚ್ಚು ಜನಪ್ರಿಯವಾಗಿದೆ.

    ಹಣದ ಮಳೆಯನ್ನೇ ಸುರಿಸುವ ಐಪಿಎಲ್‍ನ ಟೂರ್ನಿ 12 ಆವೃತ್ತಿಗಳು ಕಳೆದಿವೆ. ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಐಪಿಎಲ್ ನಾಯಕರಾಗಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. ಎಂಎಸ್‍ಡಿ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‍ಜೈಂಟ್ ತಂಡದ ನಾಯಕರಾಗಿ ಆಡಿದ್ದಾರೆ. ಆದರೆ ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಸೋಲು ಅನುಭವಿಸಿದ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ.

    ಐಪಿಎಲ್‍ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ನಾಯಕ ಎಂಬ ಹೆಗ್ಗಳಿಕೆ ಎಂ.ಎಸ್.ಧೋನಿ ಅವರಿಗೆ ಇದೆ. ಅತಿ ಹೆಚ್ಚು 69 ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿದ ಕೆಟ್ಟ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಇದ್ದಾರೆ. ಅವರ ನಾಯಕತ್ವದ ತಂಡವು 57 ಬಾರಿ ಸೋಲು ಕಂಡಿದೆ. ಟೀಂ ಇಂಡಿಯಾ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಅವರ ಖಾತೆಯಲ್ಲಿ 55 ಸೋಲುಗಳು ಸೇರಿಕೊಂಡಿವೆ.

    ಯಾರಿಗೆ ಎಷ್ಟು ಸೋಲು?:
    ಎಂ.ಎಸ್.ಧೋನಿ – 69
    ಗೌತಮ್ ಗಂಭೀರ್- 57
    ವಿರಾಟ್ ಕೊಹ್ಲಿ- 55
    ರೋಹಿತ್ ಶರ್ಮಾ- 42
    ಆಡಮ್ ಗಿಲ್‍ಕ್ರಿಸ್ಟ್- 39

    ಐಪಿಎಲ್‍ನಲ್ಲಿ ನಾಯಕ ಹೆಚ್ಚು ಪಂದ್ಯಗಳನ್ನು ಆಡಿದ ಪಟ್ಟಿಯಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಅವರು 179 ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗೌತಮ್ ಗಂಭೀರ್ 134 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿದ್ದರು.

    ಐಪಿಎಲ್‍ನಲ್ಲಿ ಯಶಸ್ವಿ ನಾಯಕರ ಪಟ್ಟಿಯಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಅವರು ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ)ಗೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಚಾಂಪಿಯನ್ ಆಗಿದೆ.

  • ಮನೆ ಕೆಲಸದಾಕೆಯ ಅಂತ್ಯಕ್ರಿಯೆ ನೆರವೇರಿಸಿದ ಗಂಭೀರ್

    ಮನೆ ಕೆಲಸದಾಕೆಯ ಅಂತ್ಯಕ್ರಿಯೆ ನೆರವೇರಿಸಿದ ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಮನೆ ಕೆಲಸದ ಮಹಿಳೆ ಸರಸ್ವತಿ ಪತ್ರ (49) ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ಒರಿಸ್ಸಾ ನಿವಾಸಿ ಸರಸ್ವತಿ ಏಪ್ರಿಲ್ 21ರಂದು ಮೃತಪಟ್ಟಿದ್ದರು. ಅವರು ಸುಮಾರು ದಿನಗಳಿಂದ ಸಕ್ಕರೆ ಮತ್ತು ರಕ್ತದೊತ್ತಡ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರು. ಗಂಭೀರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಸರಸ್ವತಿ ಅವರನ್ನು ಕುಟುಂಬದ ಸದಸ್ಯ ಎಂದು ಬಣ್ಣಿಸಿದ್ದಾರೆ.

    ಬಿಜೆಪಿ ಸಂಸದ ಗಂಭೀರ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ಗಂಭೀರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ”ನನ್ನ ಮಕ್ಕಳ ಬಗ್ಗೆ ಯಾರು ವಿಶೇಷ ಕಾಳಜಿ ವಹಿಸುತ್ತಾರೆ? ಅವರು ಎಂದಿಗೂ ಮನೆಯ ಕೆಲಸದವರಾಗಿ ಇರಲು ಸಾಧ್ಯವಿಲ್ಲ. ಸರಸ್ವತಿ ಅವರು ಕುಟುಂಬದ ಸದಸ್ಯರಾಗಿದ್ದರು. ಅವರ ಕೊನೆಯ ವಿಧಿ ವಿಧಾನಗಳನ್ನು ನೆರವೇರಿಸುವುದು ನನ್ನ ಕರ್ತವ್ಯವಾಗಿತ್ತು. ಜಾತಿ, ಧರ್ಮ, ಪಂಥ ಮತ್ತು ಸಮಾಜಕ್ಕಿಂತ ನಾನು ಮಾನವೀಯತೆಯನ್ನು ಹೆಚ್ಚು ನಂಬುತ್ತೇನೆ. ಉತ್ತಮ ಸಮಾಜವನ್ನು ಸೃಷ್ಟಿಸುವ ದಾರಿ ಇದು. ಭಾರತಕ್ಕೂ ನನಗೂ ಅದೇ ಆಲೋಚನೆಗಳು.. ಓಂ ಶಾಂತಿ” ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

    ಧರ್ಮೇಂದ್ರ ಪ್ರಧಾನ್ ಅವರು ಟ್ವೀಟ್ ಮಾಡಿ, ”ಗಂಭೀರ್ ಅವರ ಕೆಲಸವು ದೂರದಿಂದ ಅನೇಕ ಮನೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಬಡ ಜನರ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ. ಈ ಕಾರ್ಯವು ಬಡವರಿಗೆ ಗೌರವವನ್ನು ಹೆಚ್ಚಿಸುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸರಸ್ವತಿ ಒಡಿಶಾದ ಜಾಜ್ಪುರ ಜಿಲ್ಲೆಯ ನಿವಾಸಿದ್ದು, ಕಳೆದ 6 ವರ್ಷಗಳಿಂದ ಗಂಭೀರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸಕ್ಕರೆ ಮತ್ತು ರಕ್ತದೊತ್ತಡದಿಂದ ಹೋರಾಡುತ್ತಿದ್ದ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಏಪ್ರಿಲ್ 21ರಂದು ಸಾವನ್ನಪ್ಪಿದ್ದರು.

  • ಧೋನಿಯನ್ನ ಮತ್ತೆ ಕುಟುಕಿ, ಕುಂಬ್ಳೆಯನ್ನು ಹೊಗಳಿದ ಗಂಭೀರ್

    ಧೋನಿಯನ್ನ ಮತ್ತೆ ಕುಟುಕಿ, ಕುಂಬ್ಳೆಯನ್ನು ಹೊಗಳಿದ ಗಂಭೀರ್

    ನವದೆಹಲಿ: ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅನೇಕರು ತಮ್ಮ ನೆಚ್ಚಿನ ನಾಯಕ ಯಾರು ಎಂದು ರಿವೀಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಬಣ್ಣಿಸಿದರೆ, ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ನೆಚ್ಚಿನ ನಾಯಕ ಎಂದು ಹೊಗಳಿದ್ದರು. ಈಗ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಅನಿಲ್ ಕುಂಬ್ಳೆ ಅವರನ್ನು ಭಾರತದ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್, ”ದಾಖಲೆಗಳ ವಿಷಯದಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ನನ್ನ ಪ್ರಕಾರ ಕನ್ನಡಿಗ ಅನಿಲ್ ಕುಂಬ್ಳೆ ಒಬ್ಬ ಮಹಾನ್ ನಾಯಕ” ಎಂದು ಹೊಗಳಿದ್ದಾರೆ.

    ”ಅನಿಲ್ ಕುಂಬ್ಳೆ ಅವರು ದೀರ್ಘಕಾಲ ನಾಯಕತ್ವ ವಹಿಸಿದ್ದರೆ ಎಲ್ಲಾ ದಾಖಲೆಗಳನ್ನು ಮುರಿಯಬಹುದಿತ್ತು. ಸೌರವ್ ಗಂಗೂಲಿ ಅವರು ನಿಜವಾಗಿಯೂ ಉತ್ತಮ ನಾಯಕತ್ವ ವಹಿಸಿದ್ದರು. ಆದರೆ ಕುಂಬ್ಳೆ ಅವರು ದೀರ್ಘಕಾಲದವರೆಗೆ ನಾಯಕನಾಗಿರಬೇಕಿತ್ತು. ಕುಂಬ್ಳೆ ನಾಯಕತ್ವದಲ್ಲಿ ನಾನು 6 ಟೆಸ್ಟ್ ಪಂದ್ಯ ಆಡಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನಾಯಕರ ಅಡಿಯಲ್ಲಿ ಆಡಿದ್ದೇನೆ. ಅವರಲ್ಲಿ ಕುಂಬ್ಳೆ ಅತ್ಯಂತ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದು ಹೇಳಿದರು.

    ರಾಹುಲ್ ದ್ರಾವಿಡ್ ನಾಯಕತ್ವವನ್ನು ತ್ಯಜಿಸಿದ ಬಳಿಕ ಅನಿಲ್ ಕುಂಬ್ಳೆ 2007ರ ನವೆಂಬರ್ ನಲ್ಲಿ ಭಾರತೀಯ ತಂಡದ ಕ್ಯಾಪ್ಟನ್ ಜವಾಬ್ದಾರಿ ವಹಿಸಿಕೊಂಡರು. ಆಗ ಕುಂಬ್ಳೆ ಕ್ರಿಕೆಟಿಂಗ್ ವೃತ್ತಿಜೀವನದ 17ನೇ ವರ್ಷದಲ್ಲಿದ್ದರು. ಅದೇ ಸಮಯದಲ್ಲಿ, ಗಂಭೀರ್ ಐಪಿಎಲ್‍ನ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದರು. ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಅನಿಲ್ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದಿದ್ದಾರೆ.

    ಗಂಭೀರ್ ಗಂಗೂಲಿ ನಾಯಕತ್ವದಲ್ಲಿ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆನಂತರ ಗಂಭೀರ್ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಧೋನಿ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಗಂಭೀರ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗಿದ್ದಾರೆ. 2011ರ ವಿಶ್ವಕಪ್ ಫೈನಲ್‍ನಲ್ಲಿ ಅವರು ಶ್ರೀಲಂಕಾ ವಿರುದ್ಧ 97 ರನ್ ಚಚ್ಚುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತವು ಟಿ20 ಹಾಗೂ ಏಕದಿನ ವಿಶ್ವಕಪ್‍ಗಳನ್ನು ಗೆದ್ದುಕೊಂಡಿತ್ತು.

    ಗೌತಮ್ ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 4,154 ರನ್, 147 ಏಕದಿನ ಪಂದ್ಯಗಳಲ್ಲಿ 5,238 ರನ್ ಮತ್ತು 37 ಟಿ20 ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿದ್ದ ಗಂಭೀರ್, `ಕೇವಲ ಒಂದು ಜ್ಞಾಪನೆ: ವಿಶ್ವಕಪ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಮತ್ತು ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿ ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿ ಬರೆದುಕೊಂಡಿದ್ದರು.

  • ಆಸ್ಪತ್ರೆ ಸಿಬ್ಬಂದಿಗೆ 1 ಸಾವಿರ ಪಿಪಿಇ ಕಿಟ್ ನೀಡಿದ ಗಂಭೀರ್

    ಆಸ್ಪತ್ರೆ ಸಿಬ್ಬಂದಿಗೆ 1 ಸಾವಿರ ಪಿಪಿಇ ಕಿಟ್ ನೀಡಿದ ಗಂಭೀರ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಸರ್ಕಾರಕ್ಕೆ ದೇಣಿಗೆ ನೀಡಿದ್ದಾರೆ. ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್, ಬಿಜೆಪಿ ಸಂಸದ ಗೌತಮ್ ಗಂಭೀರ್ ನಮ್ಮ ದಾನವನ್ನು ಮುಂದುವರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಗೌತಮ್ ಗಂಭೀರ್ ಅವರು ಕಳೆದ ತಿಂಗಳು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂ. ಜಮಾ ಮಾಡಿದ್ದರು. ಜೊತೆಗೆ ಅವರು ತಮ್ಮ ಒಂದು ತಿಂಗಳ ವೇತನವನ್ನು ಸಹ ದಾನ ಮಾಡಿದ್ದರು. ಅಷ್ಟೇ ಅಲ್ಲದೆ ಗಂಭೀರ್ ಅವರು ನಡೆಸುತ್ತಿರುವ ಎನ್‍ಜಿಒ ಬಡವರಿಗೆ ಉಚಿತವಾಗಿ ಆಹಾರವನ್ನು ನೀಡುವ ಕೆಲ ಮಾಡುತ್ತಿದೆ. ಹೀಗೆ ಅನೇಕ ರೀತಿಯಲ್ಲಿ ಸಹಾಯ ಹಾಗೂ ದಾನವನ್ನು ಕೈಕೊಂಡಿರುವ ಗಂಭೀರ್ ಸದ್ಯ ವೈದ್ಯರ ನೆರವಿಗೆ ನಿಂತಿದ್ದಾರೆ. ಇದನ್ನೂ ಓದಿ: ಧೋನಿ ಸಿಕ್ಸ್ ಫೋಟೋ ನೋಡಿ ಗಂಭೀರ್ ಕೆಂಡಾಮಂಡಲ

    ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಗಂಭೀರ್, ನಮ್ಮ ಎನ್‍ಜಿಒ 1,000 ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‍ಗಳನ್ನು ಎಲ್‍ಎನ್‍ಜೆಪಿ ಆಸ್ಪತ್ರೆಗೆ ಕಳುಹಿಸುತ್ತಿದೆ. ಯಮುನಾ ಸ್ಪೋಟ್ರ್ಸ್ ಕಾಂಪ್ಲೆಕ್ಸ್‌ನಲ್ಲಿ ಸ್ಥಾಪಿಸಲಾದ ಆಶ್ರಯ ಮನೆಯಲ್ಲಿ ಸಂಪೂರ್ಣ ನೈರ್ಮಲ್ಯವನ್ನು ನಿರ್ವಹಿಸಲಾಗುತ್ತಿದೆ. ಹೆಚ್ಚಿನ ಕೊರೊನಾ ಪರೀಕ್ಷೆಗಳನ್ನು ನಡೆಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ 3 ಕೋಟಿ ರೂ., ರೋಹಿತ್ ಶರ್ಮಾ 80 ಲಕ್ಷ ರೂ., ರೈನಾ 52 ಲಕ್ಷ ರೂ., ಸಚಿನ್ ತೆಂಡೂಲ್ಕರ್ 50 ಲಕ್ಷ ರೂ., ರಹಾನೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಇತ್ತ ಚೇತೇಶ್ವರ ಪೂಜಾರ ಕೂಡ ದೇಣಿಗೆ ನೀಡಿದ್ದು, ಆದರೆ ಎಷ್ಟು ಮೊತ್ತವನ್ನು ನೀಡಿದ್ದಾರೆ ಎಂದು ಮಾತ್ರ ತಿಳಿಸಿಲ್ಲ.

    ಸುನಿಲ್ ಗವಾಸ್ಕರ್ ಅವರು 35 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಹಾಗೂ ಉಳಿದ 24 ಲಕ್ಷ ರೂ.ಗಳನ್ನು ಪ್ರಧಾನಿಗಳ ನಿಧಿಗೆ ನೀಡಿದ್ದಾರೆ. ಭಾರತದ ಪರ 1971ರಿಂದ 1987ರವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದ ಗವಾಸ್ಕರ್ 35 ಶತಕ ಸಿಡಿಸಿದ್ದರು. ಅಲ್ಲದೇ ಮುಂಬೈ ಪರ ಆಡಿದ್ದ ಪಂದ್ಯಗಳಲ್ಲಿ 24 ಶತಕಗಳನ್ನು ಗವಾಸ್ಕರ್ ಸಿಡಿಸಿದ್ದರು. ಪರಿಣಾಮ ಈ ಶತಕಗಳ ಅನ್ವಯ ಗವಾಸ್ಕರ್ ಅವರು 59 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

  • ಧೋನಿ ಸಿಕ್ಸ್ ಫೋಟೋ ನೋಡಿ ಗಂಭೀರ್ ಕೆಂಡಾಮಂಡಲ

    ಧೋನಿ ಸಿಕ್ಸ್ ಫೋಟೋ ನೋಡಿ ಗಂಭೀರ್ ಕೆಂಡಾಮಂಡಲ

    ನವದೆಹಲಿ: ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್, ಎಂ.ಎಸ್.ಧೋನಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಏಪ್ರಿಲ್ 2 ಮೈಲಿಗಲ್ಲು, ಅಚ್ಚಳಿಯದ ನೆನಪಾಗಿ ಉಳಿದಿದೆ. ಇದೇ ದಿನ ಭಾರತವು 28 ವರ್ಷಗಳ ನಂತರ ವಿಶ್ವಕಪ್ ಗೆದ್ದಿತು. ಎಂ.ಎಸ್.ಧೋನಿ ಮತ್ತು ಗೌತಮ್ ಗಂಭೀರ್ ಅವರು 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ದೇಶವು ಗುರುವಾರ ಐತಿಹಾಸಿಕ ದಿನದ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಭಾರತೀಯ ಕ್ರಿಕೆಟ್‍ನ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದೆ.

    ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಲು ಯುವರಾಜ್ ಸಿಂಗ್ ಬದಲು ಐದನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಇಳಿದರು. ಧೋನಿ ಈ ನಿರ್ಧಾರವನ್ನು ಈಗಲೂ ಅನೇಕರು ಶ್ಲಾಘಿಸುತ್ತಾರೆ. ಫೈನಲ್ ಪಂದ್ಯದಲ್ಲಿ ಎಂ.ಎಸ್.ಧೋನಿ ಅಜೇಯ 91 ರನ್ ಚಚ್ಚಿದ್ದರು. ಕೊನೆಗೆ ಸಿಕ್ಸ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇತ್ತ ಗೌತಮ್ ಗಂಭೀರ್ ಕೂಡ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಅವರ ಆರಂಭಿಕ ಸೋಲಿನ ನಂತರ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದರು. ಈ ವೇಳೆ ಗಂಭೀರ್ 97 ರನ್ ಗಳಿಸಿದ್ದರು.

    ಟೂರ್ನಿಯುದ್ದಕ್ಕೂ ಹಾಗೂ ಫೈನಲ್ ಪಂದ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ನಿರ್ಣಾಯಕವಾಗಿದ್ದರೂ ಎಂ.ಎಸ್.ಧೋನಿ ಅವರ ಫಿನಿಶಿಂಗ್ ಸಿಕ್ಸ್ ಹೆಚ್ಚು ಮೆಚ್ಚುಗೆ ಗಳಿಸಿಕೊಂಡಿತ್ತು. ಇದೇ ವಿಚಾರವಾಗಿ ಗಂಭೀರ್ ಕೆಂಡಾಮಂಡಲವಾಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ‘ಕೇವಲ ಒಂದು ಜ್ಞಾಪನೆ: ವಿಶ್ವಪಕ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಮತ್ತು ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿ ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿ ಬರೆದು ಟ್ವೀಟ್ ಮಾಡಿದ್ದಾರೆ.