Tag: Gautam Gambhir

  • ಮೋದಿ ಚಿಂತನೆಯಿಂದ ಸ್ಫೂರ್ತಿಯಾಗಿ ಬಿಜೆಪಿ ಸೇರಿದ್ದೇನೆ: ಗೌತಮ್ ಗಂಭೀರ್

    ಮೋದಿ ಚಿಂತನೆಯಿಂದ ಸ್ಫೂರ್ತಿಯಾಗಿ ಬಿಜೆಪಿ ಸೇರಿದ್ದೇನೆ: ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಬಿಜೆಪಿಯ ದೆಹಲಿ ಕಚೇರಿಯಲ್ಲಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಹಾಗೂ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಗೌತಮ್ ಗಂಭೀರ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೌತಮ್ ಗಂಭೀರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

    ಬಳಿಕ ಮಾತನಾಡಿದ ಗೌತಮ್ ಗಂಭೀರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆಗಳಿಗೆ ನಾನು ಸ್ಫೂರ್ತಿಗೊಂಡಿರುವೆ. ಪಕ್ಷಕ್ಕೆ ಸೇರಲು ಅವಕಾಶ ನೀಡಿದಕ್ಕೆ ನಾನು ಧನ್ಯವಾದಗಳು ಎಂದು ಹೇಳಿದರು.

    ಈ ಮೂಲಕ 37 ವರ್ಷದ ಗೌತಮ್ ಗಂಭೀರ್ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಗೌತಮ್ ಗಂಭೀರ್ ಅವರು ದೆಹಲಿಯ ರಾಜಿಂದರ್ ನಗರದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರೆ, ಹಾಲಿ ಸಂಸದೆ ಮೀನಾಕ್ಷಿ ಲೇಖಿ ಅವರ ನವದೆಹಲಿ ಕ್ಷೇತ್ರವನ್ನು ಗೌತಮ್ ಗಂಭೀರ್ ಅವರಿಗೆ ಬಿಟ್ಟುಕೊಡಲು ಹೈಕಮಾಂಡ್ ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಛತ್ತೀಸ್‍ಗಢ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್ ಸೇರಿದಂತೆ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಗುರುವಾರ ಪ್ರಕಟಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗಾಂಧಿನಗರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸುತ್ತಿದ್ದು, ಗೌತಮ್ ಗಂಭೀರ್ ಅವರಿಗೆ ಅವಕಾಶ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

    ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಲೋಕಸಭಾ ಚುನಾವಣೆ ಸ್ಪರ್ಧೆಗೆ ನಿರಾಕರಿಸಿದ್ದಾರೆ. ಬಿಜೆಪಿ ಸಂಸದ ಪರ್ವೇಶ್ ವರ್ಮ ಅವರ ಕ್ಷೇತ್ರವಾದ ಪಶ್ಚಿಮ ದೆಹಯಿಂದ ವೀರೇಂದ್ರ ಸೆಹ್ವಾಗ್ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿತ್ತು. ಆದರೆ ಸೆಹ್ವಾಗ್ ಟಿಕೆಟ್ ನಿರಾಕರಿಸಿದ್ದಾರೆ. ಇತ್ತ ಗೌತಮ್ ಗಂಭೀರ್ ಅವರು ಪಕ್ಷ ಸೇರಲು, ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಇತ್ತೀಚೆಗಷ್ಟೆ ದೆಹಲಿ ಬಿಜೆಪಿ ಮುಖಂಡರು ಮಾಧ್ಯಮಗಳಿಗೆ ತಿಳಿಸಿದ್ದರು.

  • ಕೋಚ್ ರವಿಶಾಸ್ತ್ರಿ ಸಾಧನೆ ಪ್ರಶ್ನಿಸಿದ ಗೌತಮ್ ಗಂಭೀರ್

    ಕೋಚ್ ರವಿಶಾಸ್ತ್ರಿ ಸಾಧನೆ ಪ್ರಶ್ನಿಸಿದ ಗೌತಮ್ ಗಂಭೀರ್

    ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ತಮ್ಮ ವೃತ್ತಿ ಜೀವನದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದು ಮಾತ್ರ ತಿಳಿದಿಲ್ಲ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಗೌತಮ್ ಗಂಭೀರ್ ಅವರು ರವಿಶಾಸ್ತ್ರಿ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಈ ವರ್ಷ ಯಾವುದೇ ಟೆಸ್ಟ್ ಟೂರ್ನಿಯನ್ನು ಗೆದ್ದಿಲ್ಲ. ಆದ್ರೂ ಕೋಚ್ ತಮ್ಮ ತಂಡ ಈ ಹಿಂದಿನ ತಂಡಗಳಿಗಿಂತಲೂ ಉತ್ತಮ ಎಂದು ಸಮರ್ಥಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ರವಿಶಾಸ್ತ್ರಿ ಬಗ್ಗೆ ಮಾತನಾಡಲು ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಅಲ್ಲದೇ ತಂಡದ ಕೋಚ್ ಆಗಿಯೂ ಅವರ ಸಾಧನೆ ಕಳಪೆ ಆಗಿದೆ ಎಂದರು.

    ಇದೇ ವೇಳೆ ತಂಡದ ಸಾಧನೆಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮಾತ್ರ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್, ತಂಡದಲ್ಲಿ ರಹಾನೆ, ಪೂಜಾರ, ರೋಹಿತ ಶರ್ಮಾ ರಂತಹ ಆಟಗಾರರಿದ್ದಾರೆ. ಇದೇ ಪ್ರವೃತ್ತಿ ಮುಂದುವರಿದರೆ ಅದು ತಂಡಕ್ಕೆ ಅಪಾಯಕಾರಿಯಾದ ಬೆಳವಣಿಗೆ. ಇದು ಇತರೆ ಆಟಗಾರರ ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಯಾವುದೇ ಒಬ್ಬ ಆಟಗಾರನ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಅಷ್ಟೇ ಮುಖ್ಯ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮವಾಗಿತ್ತು. ಅವರು ತಮ್ಮ ವೃತ್ತಿಗೆ ನೀಡುವ ಪ್ರಮುಖ್ಯತೆ ನಾನು ಬೇರೆ ಯಾವ ಆಟಗಾರರಲ್ಲೂ ನೋಡಿಲ್ಲ. ಆದರೆ ಅವರು ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು ಅಸಮಾಧಾನವಿದೆ. ಬಿಸಿಸಿಐ ಕೂಡ ಅವರ ರಾಜೀನಾಮೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ತಿಳಿಸಿದರು.

    ಟೀಂ ಇಂಡಿಯಾಗೆ ಆಸೀಸ್ ಟೂರ್ನಿ ವಿದೇಶದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಉತ್ತಮ ಅವಕಾಶ ಪಡೆದಿದೆ ಎಂದು ಗಂಭೀರ್ ವೃತ್ತಿ ಬದುಕಿನ ವಿದಾಯ ಬಳಿಕ ಮುಂದಿನ ದಿನಗಳಲ್ಲಿ ತಂಡದ ಮೆಂಟರ್ ಆಗುವ ಉದ್ದೇಶವೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2012ರ ಆಸೀಸ್ ಪ್ರವಾಸದ ವೇಳ ಧೋನಿ ನಿರ್ಧಾರದಿಂದ ಶಾಕ್ ಆಗಿತ್ತು: ಗೌತಮ್ ಗಂಭೀರ್

    2012ರ ಆಸೀಸ್ ಪ್ರವಾಸದ ವೇಳ ಧೋನಿ ನಿರ್ಧಾರದಿಂದ ಶಾಕ್ ಆಗಿತ್ತು: ಗೌತಮ್ ಗಂಭೀರ್

    ನವದೆಹಲಿ: ಕೆಲ ದಿನಗಳ ಹಿಂದೆ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಟೀಂ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ವಿಫಲತೆ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಗಂಭೀರ್, 2012ರ ಆಸ್ಟ್ರೇಲಿಯಾದಲ್ಲಿ ಕಾಮನ್‍ವೆಲ್ತ್ ಬ್ಯಾಂಕ್(ಸಿಬಿ) ಸರಣಿಯ ಆಟಗಾರರ ಆಯ್ಕೆ ವೇಳೆ ಧೋನಿ ಅನುಸರಿಸಿದ ನೀತಿಯ ಕುರಿತು ಟೀಕೆ ಮಾಡಿದ್ದಾರೆ.

    ಸರಣಿಯಲ್ಲಿ ಸೆಹ್ವಾಗ್ ಹಾಗೂ ಸಚಿನ್‍ರೊಂದಿಗೆ ನನ್ನನ್ನು ಆಡಿಸಲು ಆಗುವುದಿಲ್ಲ ಎಂದು ಅಂದು ತಂಡದ ನಾಯಕತ್ವ ವಹಿಸಿದ್ದ ಎಂಎಸ್ ಧೋನಿ ಹೇಳಿದ್ದರು ಎಂಬ ಸಂಗತಿಯನ್ನು ರಿವೀಲ್ ಮಾಡಿರುವ ಗಂಭೀರ್, 2015ರ ವಿಶ್ವಕಪ್‍ಗೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಧೋನಿ ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ. ಆದರೆ ಸರಣಿಯಲ್ಲಿ ಗೆಲುವು ಪಡೆಯಲು ತಂಡ ಹೆಣಗಾಡಿದ ಬಳಿಕ ಧೋನಿ ಈ ತೀರ್ಮಾನದಿಂದ ಹಿಂದೆ ಸರಿದರು. ಈ ವೇಳೆ ನನಗೆ ಒನ್ ಡೌನ್ ಬ್ಯಾಟ್ಸ್ ಮನ್ ಆಗಿ ಆಡಲು ಅವಕಾಶ ನೀಡಿದ್ದರು ಎಂದು ಧೋನಿಯ ನಾಯಕತ್ವದ ನಿರ್ಧಾರದ ಬಗ್ಗೆ ಟೀಕೆ ಮಾಡಿದ್ದಾರೆ.

    ಧೋನಿ ತಮ್ಮ ತಪ್ಪಿನ ಅರಿವಾದ ಬಳಿಕ ತೀರ್ಮಾನ ಬದಲಿಸಿದ್ದರು. ಆದರೆ ಯಾವುದೇ ಒಂದು ವಿಷಯದಲ್ಲಿ ನಿರ್ಧಾರ ಕೈಗೊಂಡ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿಯಬಾರದು. ಆದರೆ ಅಂದು ಧೋನಿ ಕೈಗೊಂಡ ನಿರ್ಧಾರ ನನಗೆ ದೊಡ್ಡ ಶಾಕ್ ಆಗಿತ್ತು. ಏಕೆಂದರೆ 2012ರಲ್ಲೇ 2015 ವಿಶ್ವಕಪ್ ಕಾರಣ ಹೇಳಿ ನನಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದ್ದರು ಎಂದು ಅಂದಿನ ಡ್ರೆಸ್ಸಿಂಗ್ ರೂಂ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

    ಯಾವುದೇ ಒಬ್ಬ ಆಟಗಾರನಿಗೆ ಮೈದಾನದಲ್ಲಿ ರನ್ ಗಳಿಸುವ ಕೌಶಲ್ಯವಿದ್ದರೆ ಆತ ಬಯಸಿದಂತೆ ಆಟವನ್ನು ಮುಂದುವರಿಸಬಹುದು. ಇದನ್ನೇ ನಾವು ಆಸ್ಟ್ರೇಲಿಯಾ ಸರಣಿಯಲ್ಲಿ ತಿಳಿಸಿಕೊಂಡೆವು. ನಾನು ಸೇರಿದಂತೆ ಮೂವರು ಆಟಗಾರರು ಒಟ್ಟಿಗೆ ಆಡಬೇಕಿತ್ತು. ಅಂದು ಧೋನಿ ರೊಟೇಷನ್ ಕಾರಣ ನೀಡಿ ನನಗೆ ಅವಕಾಶ ನೀಡಲಿಲ್ಲ. ಆ ಬಳಿಕ ನಡೆದ ಪಂದ್ಯದಲ್ಲಿ ಸಚಿನ್ ಹಾಗೂ ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ ಇಳಿದರೆ, ನಾನು 3 ಹಾಗೂ ಕೊಹ್ಲಿ 4ನೇ ಕ್ರಮಾಂಕದಲ್ಲಿ ಅಡಿದೆವು. ಈ ಪಂದ್ಯದಲ್ಲಿ ಟೀಂ ಇಂಡಿಯಾ 37 ಓವರ್ ಗಳಲ್ಲೇ ಜಯ ಪಡೆದಿತ್ತು ಎಂದು ಉದಾಹಣೆ ಕೂಡ ನೀಡಿದ್ದಾರೆ.

    ಧೋನಿ ಮೊದಲು ನಮ್ಮ ಮೂವರು ಆಟಗಾರರೊಂದಿಗೆ ಒಟ್ಟಿಗೆ ಆಡದಿರಲು ನಿರ್ಧರಿಸಿದ್ದರು. ಅಂದು ಧೋನಿ ರೊಟೇಷನ್ ಕಾರಣ ನೀಡಿ ನನಗೆ ಅವಕಾಶ ನೀಡಲಿಲ್ಲ. ಬಳಿಕ ನಿರ್ಧಾರ ಬದಲಿಸಿದ್ದರು. ಇದರ ಅರ್ಥ ಮೊದಲು ತೆಗೆದುಕೊಂಡ ನಿರ್ಧಾರ ತಪ್ಪು ಎಂದು ಅಥವಾ 2ನೇ ನಿರ್ಧಾರ ತಪ್ಪು ಎಂದಾಗುತ್ತದೆ. ತಂಡದ ನಾಯಕರಾಗಿ ಧೋನಿ ಆ ನಿರ್ಧಾರ ಮಾಡಿದ್ದರು. ಇದು ನನಗೆ ಮಾತ್ರ ಅಲ್ಲ ಮೂವರು ಆಟಗಾರರಿಗೂ ಶಾಕ್ ಆಗಿತ್ತು ಎಂದರು.

    2012 ಟೂರ್ನಿಯಲ್ಲಿ ಟೀಂ ಇಂಡಿಯಾ 8 ಪಂದ್ಯಗಳನ್ನು ಆಡಿದ್ದರೆ ಅದರಲ್ಲಿ 3 ರಲ್ಲಿ ಗೆಲುವು ಹಾಗೂ ಒಂದು ಟೈ ಆಗಿತ್ತು. ಅಲ್ಲದೇ ಟೂರ್ನಿಯಲ್ಲಿ ಬೆಸ್ಟ್ 3 ಫೈನಲ್ ಪ್ರವೇಶಿಸಲು ಕೂಡ ತಂಡ ವಿಫಲವಾಗಿತ್ತು. ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸಿತ್ತು.

    ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 8 ಪಂದ್ಯಗಳಿಂದ 373 ರನ್ ಗಳಿಸಿ ಹೆಚ್ಚು ರನ್ ಹೊಡೆದಿದ್ದರೆ, ಗಂಭೀರ್ 7 ಪಂದ್ಯಗಳಿಂದ 44ರ ಸರಾಸರಿ 308 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದರು. ಉಳಿದಂತೆ 5 ಪಂದ್ಯಗಳಾಡಿದ್ದ ಸೆಹ್ವಾಗ್ ಕೇವಲ 65 ಹಾಗೂ 7 ಪಂದ್ಯಗಳಾಡಿದ್ದ ಸಚಿನ್ 143 ರನ್ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೋನಿ ನಡುವಿನ ಮನಸ್ತಾಪದ ಬಗ್ಗೆ ನಿವೃತ್ತಿ ಬಳಿಕ ಗೌತಮ್ ಗಂಭೀರ್ ಸ್ಪಷ್ಟನೆ

    ಧೋನಿ ನಡುವಿನ ಮನಸ್ತಾಪದ ಬಗ್ಗೆ ನಿವೃತ್ತಿ ಬಳಿಕ ಗೌತಮ್ ಗಂಭೀರ್ ಸ್ಪಷ್ಟನೆ

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜತೆ ಭಿನ್ನಾಭಿಪ್ರಾಯ ಇರಬಹುದೇ ಹೊರತು ವೈರತ್ವವಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

    ತಮ್ಮ ನಿವೃತ್ತಿಯ ಘೋಷಣೆ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಗಂಭೀರ್, ನನ್ನ ಮತ್ತು ಧೋನಿಯ ನಡುವೆ ಭಿನ್ನಾಭಿಪ್ರಾಯಗಳಿರಬಹುದೇ ಹೊರತು ವೈರತ್ವವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಯಾವುದೇ ಆಟಗಾರನಿಗೆ ವಿದಾಯದ ಪಂದ್ಯ ನಡೆಸಬೇಕೆಂದು ಇಲ್ಲ ಎಂದು ತಮ್ಮ ಅಂತಿಮ ಪಂದ್ಯವಾದ ಆಂಧ್ರಪ್ರದೇಶದ ವಿರುದ್ಧದ ರಣಜಿ ಕುರಿತ ಪ್ರಶ್ನೆಗೆ ಉತ್ತರಿಸಿದರು.

    ಇದೇ ವೇಳೆ 2015ರ ವಿಶ್ವಕಪ್ ಟೂರ್ನಿಯಲ್ಲಿ ತಮಗೇ ಅವಕಾಶ ನೀಡದ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್, ನನ್ನೊಂದಿಗೆ ಆಡಿದ ಎಲ್ಲಾ ಆಟಗಾರರಿಗೂ 2 ರಿಂದ ಮೂರು ವಿಶ್ವಕಪ್ ಆಡಿದ್ದಾರೆ. ಆದರೆ ನಾನು ಮಾತ್ರ ಆ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾನು ಆಡಿದ ವಿಶ್ವಕಪ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಬಗ್ಗೆ ನನಗೆ ತೃಪ್ತಿ ಇದೆ. ಯಾವುದೇ ಒಬ್ಬ ಆಟಗಾರ ತಂಡದ ಕೀ ಪ್ಲೇಯರ್ ಆಗಿರುವ ವೇಳೆ ಆತನಿಗೆ ಅವಕಾಶ ನೀಡಬೇಕು. ಆದರೆ 2015 ರಲ್ಲಿ ನನಗೆ ಅವಕಾಶ ನೀಡದಿರುವುದು ಬೇಸರದ ವಿಚಾರ ಎಂದರು.

    2011ರ ವಿಶ್ವಕಪ್ ಫೈನಲ್ ಗೆದ್ದ ಪಂದ್ಯದ ಹೀರೋ ಆಗಿದ್ದ ಗಂಭೀರ್, ಬಳಿಕ ನಡೆದ ಬೆಳವಣಿಗೆಗೆಗಳಲ್ಲಿ 2015ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಈ ವೇಳೆ ಗಂಭೀರ್ ಅವಕಾಶ ವಂಚಿತರಾಗಲು ತಂಡದ ನಾಯಕತ್ವ ವಹಿಸಿದ್ದ ಧೋನಿ ಕಾರಣ ಎಂಬ ಆರೋಪ ಮಾಡಲಾಗಿತ್ತು. ಉಳಿದಂತೆ ದೆಹಲಿ ಹಾಗು ಆಂಧ್ರಪ್ರದೇಶ ನಡುವಿನ ರಣಜಿ ಪಂದ್ಯ ಗಂಭೀರ್ ಅವರ ವೃತ್ತಿ ಜೀವನದ ಅಂತಿಮ ಪಂದ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಗಂಭೀರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. ಇದನ್ನು ಓದಿ : ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

    37 ವರ್ಷದ ಗೌತಮ್ ಗಂಭೀರ್ 2003ರ ಏಪ್ರಿಲ್ 11ರಂದು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ 149ನೇ ಆಟಗಾರನಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 2004ರ ನವೆಂಬರ್ 3ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ 249ನೇ ಆಟಗಾರನಾಗಿ ಆಡಿದ್ದರು. ಗೌತಮ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. ಕೊನೆಯದಾಗಿ 2013ರ ಜನವರಿ 27ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಟೆಸ್ಟ್ ನಲ್ಲಿ 58 ಪಂದ್ಯಗಳನ್ನು ಆಡಿರುವ ಗಂಭೀರ್, 41.95 ಸರಾಸರಿಯಲ್ಲಿ 4,154 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಟೆಸ್ಟ್ ನಲ್ಲಿ ಗರಿಷ್ಠ 206 ಹೊಡೆದಿದ್ದಾರೆ. ಅಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿ 27.41ರ ಸರಾಸರಿಯಲ್ಲಿ 932 ರನ್ ಗಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 408 ದಿನಗಳ ಬಳಿಕ ದೇಶಿಯ ಕ್ರಿಕೆಟಿಗೆ ಯುವಿ ಎಂಟ್ರಿ – ಮೊದ್ಲ ರನ್ನಿಗಾಗಿ 28 ಬಾಲ್ ಎದುರಿಸಿದ್ರು

    408 ದಿನಗಳ ಬಳಿಕ ದೇಶಿಯ ಕ್ರಿಕೆಟಿಗೆ ಯುವಿ ಎಂಟ್ರಿ – ಮೊದ್ಲ ರನ್ನಿಗಾಗಿ 28 ಬಾಲ್ ಎದುರಿಸಿದ್ರು

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ವೇಳೆಗೆ ಟೀಂ ಇಂಡಿಯಾ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಉದ್ದೇಶ ಹೊಂದಿರುವ ಯುವರಾಜ್ ಸಿಂಗ್ ಬರೋಬ್ಬರಿ 408 ದಿನಗಳ ಬಳಿಕ ಬ್ಯಾಟಿಂಗ್ ಗೆ ಇಳಿದಿದ್ದು, ಈ ವೇಳೆ ತಮ್ಮ ಮೊದಲ ರನ್ ಗಳಿಸಲು 28 ಎಸೆತಗಳನ್ನು ಎದುರಿಸಿದ್ದಾರೆ.

    ನವದೆಹಲಿಯ ಫಿರೋಜ್ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪಂಜಾಬ್ ತಂಡದ ಪರ 5ನೇ ಕ್ರಮಾಂಕದಲ್ಲಿ ಆಡುತ್ತಿರುವ ಯುವರಾಜ್, ಫಾರ್ಮ್ ಕಂಡುಕೊಳ್ಳಲು ಪರದಾಟ ನಡೆಸಿದರು. ಈ ಹಂತದಲ್ಲಿ 29ನೇ ಎಸೆತದಲ್ಲಿ ಯುವಿ ಮೊದಲ ರನ್ ಗಳಿಸಿ ಖಾತೆ ತೆರೆದರು. ಬುಧವಾರ ದಿನದಾಟದ ಅಂತ್ಯದ ವೇಳೆಗೆ ಯುವಿ 47 ಎಸೆತಗಳಲ್ಲಿ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡರು.

    ಇತ್ತ ಡೆಲ್ಲಿ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾ ಮತ್ತೋರ್ವ ಅನುಭವಿ ಆಟಗಾರ ಗೌತಮ್ ಗಂಭೀರ್ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ, 107 ರನ್ ಗಳಿಗೆ ಆಲೌಟಾಯಿತು. ಇತ್ತ 2019 ರ ಐಪಿಎಲ್ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 37 ವರ್ಷದ ಯುವಿರನ್ನು ಕೈಬಿಟ್ಟಿತ್ತು. ಇದಾದ ಬಳಿಕ ಪಂಜಾಬ್ ತಂಡದ ಯುವ ಆಟಗಾರ ಶುಬ್‍ಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧದ ಟೀಂ ಇಂಡಿಯಾ ಎ ತಂಡಕ್ಕೆ ಆಯ್ಕೆಯಾದ ಕಾರಣ ಪಂಜಾಬ್ ತಂಡದಲ್ಲಿ ಸ್ಥಾನ ಪಡೆದಿದ್ದರು.

    2017ರ ಅಕ್ಟೋಬರಿನಲ್ಲಿ ಯುವರಾಜ್ ಸಿಂಗ್, ವಿದರ್ಭ ತಂಡದ ವಿರುದ್ಧ ನಡೆದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಂಜಾಬ್ ತಂಡದ ಪರ ಆಡಿದ್ದರು. ಅಂದು ತಂಡದ ನಾಯಕತ್ವ ವಹಿಸಿದ್ದ ಯುವರಾಜ್ ಸಿಂಗ್ ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 20, 42 ರನ್ ಗಳಿಸಿದ್ದರು. ಇದೀಗ ಬಹುದಿನಗಳ ಬಳಿಕ ಯುವಿ ಮೈದಾನಕ್ಕೆ ಎಂಟ್ರಿ ಕೊಡುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದರು. ಯುವಿ ಪಂದ್ಯದಲ್ಲಿ ಆಡುತ್ತಾರೆಂಬ ಕಾರಣದಿಂದಲೇ ಶಾಲಾ ಕಾಲೇಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಕ್ಕಳಂತೆ ರನೌಟಾಗಿ, ತನ್ನನ್ನು ತಾನೇ ಟ್ರೋಲ್ ಮಾಡಿಕೊಂಡ್ರು ಗಂಭೀರ್

    ಮಕ್ಕಳಂತೆ ರನೌಟಾಗಿ, ತನ್ನನ್ನು ತಾನೇ ಟ್ರೋಲ್ ಮಾಡಿಕೊಂಡ್ರು ಗಂಭೀರ್

    ನವದೆಹಲಿ: ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡದ ಪರ ಆಡುತ್ತಿರುವ ಗೌತಮ್ ಗಂಭೀರ್ ಕ್ಷಣ ಕಾಲ ನಿರ್ಲಕ್ಷ್ಯ ವಹಿಸಿ ರನೌಟ್ ಆಗಿದ್ದು, ಬಳಿಕ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ.

    ಪಂದ್ಯದ 2ನೇ ಇನ್ನಿಂಗ್ಸ್‍ನಲ್ಲಿ 49 ರನ್ ಗಳಿಸಿ ಆಡುತ್ತಿದ್ದ ಗೌತಮ್ ಗಂಭೀರ್ ಅರ್ಧ ಶತಕ ಪೂರೈಸಲು ಅಂಚಿನಲ್ಲಿದ್ದರು. ಆದರೆ ಸ್ಟ್ರೈಕ್ ನಲ್ಲಿದ್ದ ರಿಷಿ ಧವನ್ 2 ಎರಡು ರನ್ ಕದಿಯುವ ಪ್ರಯತ್ನ ನಡೆಸಿದರು. ಆದರೆ ತಮ್ಮ ನಿರ್ಲಕ್ಷ್ಯದಿಂದ ಸುಲಭವಾಗಿ ಗಳಿಸಬೇಕಿದ್ದ ಸಮಯದಲ್ಲಿ ರನೌಟ್ ಆಗಿ ನಿರಾಸೆ ಮೂಡಿಸಿದ್ದರು.

    https://twitter.com/NaaginDance/status/1062598130577764352?

    ಆ ಬಳಿಕ ಟ್ವೀಟ್ ಮಾಡಿರುವ ಗಂಭೀರ್, ರಣಜಿ ಟ್ರೋಫಿ ಪಂದ್ಯದಲ್ಲಿ ಮಕ್ಕಳಂತೆ ಔಟಾಗುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿ ತಮ್ಮ ಕಾಲನು ತಾವೇ ಎಳೆದುಕೊಂಡಿದ್ದಾರೆ.

    ಇದಕ್ಕು ಮುನ್ನ ಪಂದ್ಯದ ಹರಿಯಾಣ ವಿರುದ್ಧ ಮೊದಲ ಇನ್ನಿಂಗ್ಸ್‍ನಲ್ಲಿ ಅಂಪೈರ್ ನೀಡಿದ ಕೆಟ್ಟ ತೀರ್ಪಿಗೆ 44 ರನ್ ಗಳಿಸಿದ್ದ ಗಂಭೀರ್ ಬಲಿಯಾಗಿದ್ದರು. ಇನ್ನಿಂಗ್ಸ್‍ನ 17 ಓವರ್ ವೇಳೆ ಘಟನೆ ನಡೆದಿದ್ದು, ಮಯಾಂಕ್ ದಗರ್ ಬೌಲಿಂಗ್ ನಲ್ಲಿ ಡಿಫೆಂಡ್ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಚೆಂಡು ಮೇಲಕ್ಕೆ ಚಿಮ್ಮಿ ಸಿಲ್ಲಿ ಪಾಯಿಂಟ್ ನಲ್ಲಿದ್ದ ಖಂಡೂರಿ ಕೈಸೇರಿತ್ತು. ಹರಿಯಾಣ ಆಟಗಾರರ ಔಟ್ ಮನವಿಗೆ ಸಲ್ಲಿಸಿದ ಮರುಕ್ಷಣ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಈ ವೇಳೆ ಗಂಭೀರ್ ಮೈದಾನದಲ್ಲೇ ಅಂಪೈರ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

    https://twitter.com/NaaginDance/status/1061857087758589952?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews 

  • ಅಂಪೈರ್ ವಿರುದ್ಧ ಗೌತಮ್ ಗಂಭೀರ್ ಗರಂ – ವಿಡಿಯೋ ನೋಡಿ

    ಅಂಪೈರ್ ವಿರುದ್ಧ ಗೌತಮ್ ಗಂಭೀರ್ ಗರಂ – ವಿಡಿಯೋ ನೋಡಿ

    ನವದೆಹಲಿ: ರಣಜಿ ಪಂದ್ಯದ ವೇಳೆ ದೆಹಲಿ ತಂಡದ ಆಟಗಾರ ಗೌತಮ್ ಗಂಭೀರ್ ಅಂಪೈರ್ ವಿರುದ್ಧ ಗರಂ ಆಗಿದ್ದಾರೆ.

    ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿದ್ದ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 44 ರನ್(50 ಎಸೆತ,7 8 ಬೌಂಡರಿ) ಹೊಡೆದು ಗಂಭೀರ್ ಚೆನ್ನಾಗಿ ಆಡುತ್ತಿದ್ದರು. ಮಯಾಂಕ್ ದಗರ್ ಎಸೆದ 17ನೇ ಓವರ್ ನ ಮೊದಲ ಎಸೆತವನ್ನು ಎಡಗಡೆ ಹೊಡೆಯಲು ಗಂಭೀರ್ ಪ್ರಯತ್ನ ಪಟ್ಟಾಗ ಬಾಲ್ ಮೇಲಕ್ಕೆ ಚಿಮ್ಮಿ ಸಿಲ್ಲಿ ಪಾಯಿಂಟ್ ನಲ್ಲಿದ್ದ ಖಂಡೂರಿ ಕೈಗೆ ಸಿಕ್ಕಿತ್ತು.

    ಬಾಲ್ ಹಿಡಿದ ಕೂಡಲೇ ಹಿಮಾಚಲ ಪ್ರದೇಶದ ಆಟಗಾರರು ಔಟ್‍ಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ಕೂಡಲೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಅಂಪೈರ್ ತೀರ್ಪು ನೀಡುತ್ತಿದ್ದಂತೆ ಗಂಭೀರ್ ಅಸಮಾಧಾನವನ್ನು ಹೊರ ಹಾಕುತ್ತಾ ಪೆವಿಲಿಯನ್ ಕಡೆ ನಡೆದರು. ಡ್ರೆಸ್ಸಿಂಗ್ ರೂಂ ತೆರಳಿದ ಬಳಿಕವೂ ಗಂಭೀರ್ ಸಿಟ್ಟು ಕಡಿಮೆಯಾಗಲಿಲ್ಲ. ಅಂಪೈರ್ ಅವರನ್ನು ಸಿಟ್ಟಿನಿಂದಲೇ ನೋಡುತ್ತಿದ್ದರು.

    ದೆಹಲಿ ತಂಡದ ನಾಯಕರಾಗಿದ್ದ ಗಂಭೀರ್ ತಮ್ಮ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ಸ್ಥಾನದಿಂದ ಹಿಂದಕ್ಕೆ ಸರಿದಿದ್ದರು. ಯುವ ಆಟಗಾರರಿಗೆ ನಾನು ನಾಯಕತ್ವವನ್ನು ಬಿಟ್ಟು ಕೊಡುತ್ತಿದ್ದೇನೆ. ಹೊಸ ನಾಯಕನ ಜೊತೆ ತಂಡ ಜಯಗಳಿಸಲು ಹಿಂದಿನಿಂದ ಕೆಲಸ ಮಾಡುತ್ತೇನೆ ಎಂದು ಗಂಭೀರ್ ಈ ಹಿಂದೆ ಹೇಳಿದ್ದರು. ಹೀಗಾಗಿ ಈ ಬಾರಿ ನಿತೀಶ್ ರಾಣಾ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    https://twitter.com/NaaginDance/status/1061857087758589952

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

     

  • ಧೋನಿ, ಗಂಭೀರ್ 2019ರ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!

    ಧೋನಿ, ಗಂಭೀರ್ 2019ರ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!

    ನವದೆಹಲಿ: 2019ರ ಲೋಕಸಭಾ ಚುನಾವಣೆಯ ವೇಳೆ ಟೀಂ ಇಂಡಿಯಾ ಹಿರಿಯ ಆಟಗಾರರಾಗಿರುವ ಗೌತಮ್ ಗಂಭೀರ್ ಹಾಗೂ ಎಂಎಸ್ ಧೋನಿ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಧೋನಿ, ಗಂಭೀರ್ ಜೊತೆಗೆ ಮಾಜಿ ಆಪ್ ಮುಖಂಡ ಕವಿ ಕುಮಾರ್ ವಿಶ್ವಾಸ್ ಕೂಡ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂದು ಸಂಡೇ ಗಾರ್ಡಿಯನ್ ವರದಿ ಮಾಡಿದೆ.

    ದೆಹಲಿಯ ಹಿರಿಯ ರಾಜಕಾರಣಿಯೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೆಹಲಿಯ ಸಂಸದೆ ಮೀನಾಕ್ಷಿ ಲೇಖಿ ಅವರ ವಿರುದ್ಧ ಕ್ಷೇತ್ರದಲ್ಲಿ ಅಸಮಾಧಾನವಿದ್ದು, ಅವರ ಸ್ಥಾನದಲ್ಲಿ ಗಂಭೀರ್ ಅವರಿಗೆ ಸ್ಥಾನ ನೀಡಲು ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ. ಗಂಭೀರ್ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿ ಹೊಂದಿದ್ದು, ಅವರು ಈ ಸ್ಥಾನಕ್ಕೆ ಆರ್ಹರು. ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾಗಿ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಉಳಿದಂತೆ ಇಬ್ಬರು ಆಟಗಾರರು ಈಗಾಗಲೇ ಪಕ್ಷದ ಪರ ಪ್ರಚಾರ ನಡೆಸಿದ್ದು, ಧೋನಿ ಅವರನ್ನು ಮನವೊಲಿಸಲು ಬಿಜೆಪಿ ಪಕ್ಷದ ಮುಖಂಡರು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಜಾರ್ಖಂಡ್ ನಿಂದ ಕಣಕ್ಕೆ ಇಳಿಸುವ ಪ್ಲಾನ್ ಬಿಜೆಪಿ ಮಾಡಿದೆ ಎನ್ನಲಾಗಿದೆ. ಈ ಮೂಲಕ ಇಬ್ಬರು ಆಟಗಾರರ ಮೂಲಕ 2019 ಚುನಾವಣೆಯಲ್ಲಿ ದೇಶಾದ್ಯಂತ ಪ್ರಭಾವ ಉಂಟು ಮಾಡಲು ಸಿದ್ಧತೆ ನಡೆಸಿದೆ.

    ಗಂಭೀರ್ ಸದ್ಯ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದರೂ ಕೂಡ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ವಿಫಲರಾಗಿದ್ದಾರೆ. ಅಲ್ಲದೇ ಕಳೆದ ಬಾರಿ ಐಪಿಎಲ್ ನಲ್ಲೂ ಟೂರ್ನಿಯ ನಡುವೆಯೇ ತಂಡದ ನಾಯಕತ್ವ ತೊರೆದಿದ್ದರು. ಅಂದಹಾಗೇ 2014 ರಲ್ಲಿ ಕಾಂಗ್ರೆಸ್ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ರನ್ನು ಉತ್ತರ ಪ್ರದೇಶದ ಫುಲ್‍ಪುರ್ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಆದರೆ ಈ ಕ್ಷೇತ್ರದಲ್ಲಿ ಹಾಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಕೇಶವ್ ಪ್ರಸಾದ್ ಮೌರ್ಯ ಅವರು 86 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.

    2014 ರಲ್ಲಿ ಟೀಂ ಇಂಡಿಯಾ ತಂಡವನ್ನು ಆಸೀಸ್ ವಿರುದ್ಧದ ಪ್ರವಾಸದ ಟೆಸ್ಟ್ ಟೂರ್ನಿಯಲ್ಲಿ ಮುನ್ನಡೆಸಿದ್ದ ಧೋನಿ ಏಕಾಏಕಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದು, ನಿವೃತ್ತಿ ಘೋಷಿಸಿದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಅಲ್ಲದೇ ಅದೇ ವೇಗದಲ್ಲಿ 2017 ರಲ್ಲಿ ಸಿಮೀತ ಓವರ್ ಕ್ರಿಕೆಟ್ ಪಂದ್ಯಗಳ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಹೀಗೆ ದಿಢೀರ್ ನಿರ್ಧಾರಗಳ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡುತ್ತಿರುವ ಧೋನಿ ಬ್ಯಾಟಿಂಗ್ ವಿರುದ್ಧ  ಈಗ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಹೀಗಾಗಿ 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಭಾಗವಹಿಸುತ್ತರಾ ಅಥವಾ ನಿವೃತ್ತಿ ಘೋಷಿಸಿ ಸಕ್ರೀಯ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

    ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಧೋನಿ ಇದುವರೆಗೂ ತನ್ನ ರಾಜಕೀಯ ನಡೆಯ ಬಗ್ಗೆ ಪ್ರಕಟವಾದ ಸುದ್ದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಓದಿ: ಧೋನಿಯನ್ನು ತಂಡದಿಂದ ಕೈಬಿಡಿ ಎಂದವರಿಗೆ ಎಬಿಡಿ ಖಡಕ್ ಮಾತು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಭೀರ್, ಧವನ್ ಟ್ವಿಟ್ಟರ್ ಖಾತೆ ಹ್ಯಾಕ್

    ಗಂಭೀರ್, ಧವನ್ ಟ್ವಿಟ್ಟರ್ ಖಾತೆ ಹ್ಯಾಕ್

    ನವದೆಹಲಿ: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಗೌತಮ್ ಗಂಭೀರ್ ಅವರ ಟ್ವಿಟ್ಟರ್ ಖಾತೆಗಳನ್ನು ಹ್ಯಾಕರ್ಸ್ ಹ್ಯಾಕ್ ಮಾಡಿದ್ದು, ಈ ಕುರಿತು ಇಬ್ಬರು ಆಟಗಾರರು ಖಚಿತಪಡಿಸಿ ಟ್ವೀಟ್ ಮಾಡಿದ್ದಾರೆ.

    ಗೌತಮ್ ಗಂಭೀರ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ ಬಾಲಿವುಟ್ ನಟಿ ಹಾಗೂ ಮಾಜಿ ಆಟಗಾರರಾದ ಮೈಕಲ್ ಕ್ಲಾಕ್, ಗಿಲ್‍ಕ್ರಿಸ್ಟ್, ಕುಮಾರ ಸಂಗಕರ ಅವರಿಗೆ ಟ್ವೀಟ್ ಮಾಡಿದ್ದರು. ಇದನ್ನು ಕಂಡು ಕೂಡಲೇ ಎಚ್ಚೆತ್ತುಕೊಂಡಿರುವ ಗಂಭೀರ್, ತಮ್ಮ ಖಾತೆಯಿಂದ ಬಂದಿರುವ ಸಂದೇಶಗಳನ್ನು ಕಡೆಗಣಿಸುವಂತೆ ಆಟಗಾರರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಈ ಕುರಿತು ಟ್ವಿಟ್ಟರ್ ಸಂಸ್ಥೆಗೂ ಮಾಹಿತಿ ನೀಡಿ ಹ್ಯಾಕರ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

    ಸದ್ಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪ್ರವಾಸದಲ್ಲಿರುವ ಶಿಖರ್ ಧವನ್ ಅವರ ಟ್ವಿಟ್ಟರ್ ಖಾತೆಯೂ ಹ್ಯಾಕ್ ಆಗಿದ್ದು, ಧವನ್ ಕೂಡ ಸ್ನೇಹಿತರಿಗೆ ತಮ್ಮ ಖಾತೆಯಿಂದ ಬರುವ ಟ್ವೀಟ್‍ಗಳನ್ನು ಕಡೆಗಣಿಸುವಂತೆ ಮನವಿ ಮಾಡಿದ್ದಾರೆ.

    ಟೀಂ ಇಂಡಿಯಾದಿಂದ ಹಲವು ಸಮಯದಿಂದ ದೂರವೇ ಇರುವ ಗೌತಮ್ ತಮ್ಮ ಸಾಮಾಜಿಕ ಕಾರ್ಯಗಳಿಂದ ಎಲ್ಲರ ಗಮನ ಸೆಳೆದಿದ್ದರು. ಕೆಲ ದಿನಗಳ ಹಿಂದೆ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದ ಗಂಭೀರ್ ಸ್ವತಃ ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟು ತೃತೀಯ ಲಿಂಗಿಗಳ ರೀತಿಯಲ್ಲಿ ಸಿಂಗಾರಗೊಂಡು ಅವರ ಹಬ್ಬದಲ್ಲಿ ಭಾಗವಹಿಸಿದ್ದರು.

    ಎಚ್‍ಐವಿ ಹಾಗೂ ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಂಸ್ಥೆಯೂ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಗೌತಮ್ ಗಂಭೀರ್ ಸಮುದಾಯದಲ್ಲಿ ಎಲ್ಲರನ್ನು ಸಾಮಾನವಾಗಿ ಕಾಣುವಂತೆ ಮನವಿ ಮಾಡಿದ್ದರು. ಗೌತಮ್ ಗಂಭೀರ್ ರ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಸದ್ಯ ಗೌತಮ್ ಗಂಭೀರ್ ವಿಜಯ್ ಹಾಜರೆ ಟ್ರೋಫಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಡೆಲ್ಲಿ ಡ್ಯಾಶರ್ ಗೌತಮ್ ಗಂಭೀರ್ ಕಮ್ ಬ್ಯಾಕ್

    ಡೆಲ್ಲಿ ಡ್ಯಾಶರ್ ಗೌತಮ್ ಗಂಭೀರ್ ಕಮ್ ಬ್ಯಾಕ್

    ನವದೆಹಲಿ: ಟೀಂ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ಡೆಲ್ಲಿ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದು, ಸೆಪ್ಟೆಂಬರ್ 19 ರಿಂದ ಆರಂಭವಾಗುವ ವಿಜಯ್ ಹಜಾರೆ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಲಿದ್ದಾರೆ.

    ದೆಹಲಿ ಕ್ರಿಕೆಟ್ ಸಂಸ್ಥೆ ಈ ಕುರಿತು ಖಚಿತ ಪಡಿಸಿದ್ದು, ಗಂಭೀರ್ ತಂಡ ನಾಯಕರಾಗಿ ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ. ದೆಹಲಿ ತಂಡದ ಇಶಾಂತ್ ಶರ್ಮಾ ಗಾಯಗೊಂಡಿದ್ದು, ರಿಷಭ್ ಪಂತ್ ಮತ್ತು ದ್ರುವ ಶೊರೆ ಸದ್ಯ ಟೀಂ ಇಂಡಿಯಾ ಹಾಗೂ ಇಂಡಿಯಾ ಎ ತಂಡದ ಪರ ಆಡುತ್ತಿದ್ದಾರೆ. ಅದ್ದರಿಂದ ಆಯ್ಕೆ ಸಮಿತಿ ಅನಿವಾರ್ಯವಾಗಿ ಗಂಭೀರ್ ಅವರಿಗೆ ಕರೆ ನೀಡಿದೆ. ಕಳೆದ ಟೂರ್ನಿಯ ವೇಳೆ ಗಂಭೀರ್ ನಾಯಕತ್ವದಿಂದ ಹಿಂದೆ ಸರಿದಿದ್ದರು. ಅಲ್ಲದೇ ಐಪಿಎಲ್ ನಲ್ಲೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಸತತವಾಗಿ ಐಪಿಎಲ್ ಟೂರ್ನಿಯಲ್ಲಿ ನಾಯಕರಾಗಿ ವಿಫಲರಾಗಿದ್ದು ಅವರ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಎನ್ನಲಾಗಿತ್ತು.

    ಒಂದು ವರ್ಷದ ಬಳಿಕ ಗಂಭಿರ್ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ರಿಷಭ್ ಪಂತ್ ದ್ರುವ ಸೊರೆ ಆಡುವುದು ಖಚಿತವಾಗಿದೆ. ಇನ್ನು ತಂಡದಲ್ಲಿ ಎಲ್ಲಾ ಯುವ ಆಟಗಾರರಿಗೆ ಕೂಡಿದ್ದು, ಗಂಭೀರ್ ನಾಯಕತ್ವದಲ್ಲಿ ಮುನ್ನಡೆಯಲಿದ್ದಾರೆ ಎಂದು ಡೆಲ್ಲಿ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

    ಡೆಲ್ಲಿ ತಂಡದಲ್ಲಿರುವ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾ ಪರ 4ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದರು. ಈ ಹಿಂದೆ ಎಂಎಸ್ ಧೋನಿ 2007 ರಲ್ಲಿ ಇಂಗ್ಲೆಂಡ್ ವಿರುದ್ಧ 76* ರನ್ ಸಿಡಿಸಿದ್ದರು. ಅಲ್ಲದೇ ಪಾರ್ಥಿವ್ ಪಾಟೇಲ್ 67* ರನ್ ನಂತರದ ಸ್ಥಾನದಲ್ಲಿದ್ದಾರೆ.

    ಉತ್ತರ ಪ್ರದೇಶ ತಂಡದ ನಾಯಕತ್ವ ಪಟ್ಟ ಸುರೇಶ್ ರೈನಾಗೆ ಒಲಿದು ಬಂದಿದ್ದು, ತಂಡದಲ್ಲಿ ರಿಂಕೂ ಸಿಂಗ್, ಅಂಕಿತ್ ರಾಜಪುತ್ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಸ್ಥಾನ ಪಡೆದಿದ್ದ ರೈನಾ ಬಳಿಕ ನಡೆದ ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಅಲ್ಲದೇ ಏಷ್ಯಾಕಪ್ ಟೂರ್ನಿಗೂ ರೈನಾರನ್ನು ಆಯ್ಕೆ ಸಮಿತಿ ಕೈಬಿಟ್ಟಿತ್ತು. ಸದ್ಯ ಉತ್ತರ ಪ್ರದೇಶ ತಂಡದ ನಾಯಕತ್ವ ಪಡೆದಿರುವ ರೈನಾಗೆ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಅವಕಾಶ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv