Tag: Gauri Lankesh murder case

  • ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

    ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

    ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೈಕ್ ಕಳ್ಳತನ ಆರೋಪದ ವಿಚಾರಣೆಗಾಗಿ ಪೊಲೀಸರು ಹುಬ್ಬಳ್ಳಿ 1ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

    ಆರೋಪಿಗಳನ್ನು ಮುಂಬೈ ಜೈಲಿನಿಂದ ಬಾಡಿ ವಾರಂಟ್ ಮೇಲೆ ಹುಬ್ಬಳ್ಳಿಗೆ ಕರೆ ತಂದಿದ್ದ ಗ್ರಾಮೀಣ ಠಾಣೆ ಪೊಲೀಸರು, ವಿಚಾರಣೆ ಮುಗಿದ ನಂತರ ಬೈಕ್ ಮಹಜರು ನಡೆಸಲು ಠಾಣೆಗೆ ಕರೆದೊಯ್ದರು. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

    ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್‌ ಬಳಸಲಾಗಿತ್ತು. ಆ ಬೈಕನ್ನು ಹುಬ್ಬಳ್ಳಿ ತಾಲೂಕಿನ ಮಾವನೂರಲ್ಲಿ ಕಳ್ಳತನ ಮಾಡಲಾಗಿತ್ತು. ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಿಸಲು ಸರ್ಕಾರವೊಂದಕ್ಕೇ ಸಾಧ್ಯವಿಲ್ಲ, ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು: ಡಾ.ಕೆ. ಸುಧಾಕರ್

    ಮಧ್ಯಾಹ್ನ 3 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಮುಂಬೈಗೆ ಕಳುಹಿಸಲಾಗುವುದು ಎಂದು ಗ್ರಾಮೀಣ ಠಾಣೆ ಸಿಪಿಐ ರಮೇಶ ತಿಳಿಸಿದ್ದಾರೆ.

  • ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

    ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಬಂಧನಕ್ಕೆ ಒಳಗಾಗಿರುವ ಶಂಕಿತ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಶೇಷ ತನಿಖಾ ತಂಡ ಮನವಿ ಮಾಡಿತ್ತು. ಮನವಿಯನ್ನು ಪುರಸ್ಕರಿಸಿದ ಮೂರನೇ ಎಸಿಎಂಎಂ ಕೋರ್ಟ್ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

    ವಿಚಾರಣೆ ವೇಳೆ ನ್ಯಾಯಾಧೀಶರು, ನಿನ್ನ ಮಂಪರು ಪರೀಕ್ಷೆಗೆ ಒಪ್ಪಿಗೆ ಇದ್ಯಾ ಎಂದು ನವೀನ್‍ಗೆ ಕೇಳಿದರು. ಇದಕ್ಕೆ ಒಪ್ಪಿಗೆ ಇದೆ ಆರೋಗ್ಯಕ್ಕೆ ಏನಾದ್ರೂ ಪರಿಣಾಮ ಬೀರುತ್ತಾ ಎಂದು ಪ್ರಶ್ನೆ ಮಾಡಿದ್ದಾನೆ. ಕೂಡಲೇ ಜಡ್ಜ್ ಅಂತಹ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದರು. ಕೂಡಲೇ ನವೀನ್, ಆರೋಗ್ಯದಲ್ಲಿ ತೊಂದರೆ ಆಗುವುದಿಲ್ಲ ಎಂದರೆ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡುತ್ತೇನೆ ಎಂದು ಹೇಳಿದ.

    ನವೀನ್ ಪರ ವಕೀಲರ ಸಮಕ್ಷಮದಲ್ಲಿ ಅಹಮದಾಬಾದ್ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಂಪರು ಪರೀಕ್ಷೆ ನಡೆಯಲಿದೆ.

    ಮಂಪರು ಪರೀಕ್ಷೆ ಹೇಗೆ ನಡೆಯುತ್ತೆ?
    ಯಾವುದೇ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಅನುಮತಿ ದೊರೆತ ಬಳಿಕ ಆರೋಪಿಗೆ ಕೇಳ ಬೇಕಾದ ಪ್ರಶ್ನೆಗಳ ಕುರಿತು ಪಟ್ಟಿ ಮಾಡಿಕೊಳ್ಳಲಾಗುತ್ತದೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಎರಡು ವಿಧಗಳಿದ್ದು ಮೊದಲಿಗೆ ಆತನ ಹೆಸರು, ಊರು ಎಂಬ ಸಾಮಾನ್ಯ ಮಾಹಿತಿ ಪಡೆಯಲಾಗುತ್ತದೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕುರಿತು ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತದೆ.

    ಮಂಪರು ಪರೀಕ್ಷೆಯನ್ನು ವೈದ್ಯರು, ಮನಶಾಸ್ತ್ರಜ್ಞರು ಸಮ್ಮುಖದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಇದಕ್ಕೂ ಮುನ್ನ ಆರೋಪಿಯ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಆತನ ದೇಹದ ಆರೋಗ್ಯದ ಸಾಮರ್ಥ್ಯದ ಮೇಲೆ ವೈದ್ಯರು ಸೋಡಿಯಂ ಪೆಂಟೋಥಲ್ ಇಂಜೆಕ್ಷನ್ ಮೂಲಕ ನೀಡುತ್ತಾರೆ. ಆರೋಪಿಯ ಲಿಂಗ, ವಯಸ್ಸು, ದೇಹ ಸಾಮರ್ಥ್ಯ, ಆರೋಗ್ಯ ಇವುಗಳನ್ನು ನೋಡಿಕೊಂಡು ನಿಗಧಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಸರಿಯಾಗಿ ಪರೀಕ್ಷೆ ನಡೆಸದೇ ಜಾಸ್ತಿ ಪ್ರಮಾಣದಲ್ಲಿ ಸೋಡಿಯಂ ಪೆಂಟೋಥಲ್ ನೀಡಿದರೆ ರೋಗಿ ಕೋಮಾಕ್ಕೆ ಜಾರುವ ಸಾಧ್ಯತೆ ಇರುತ್ತದೆ.

    ಈ ಡೋಸ್ ನೀಡಿದ ಬಳಿಕ ಆರೋಪಿ ನಿದ್ರಾವಸ್ಥೆಗೆ ಜಾರುವ ಹಂತದ ಮೊದಲಿನ ಹಂತಕ್ಕೆ ಬಂದಾಗ ನಿಧಾನವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾಧಾರಣವಾಗಿ ನಿದ್ದೆಯ ಮಂಪರಿನಲ್ಲಿದ್ದ ವ್ಯಕ್ತಿಗೆ ಏನು ಕೇಳಿದರೂ ಆತ ಸತ್ಯ ಹೇಳುತ್ತಾನೆ. ಹೀಗಾಗಿ ಈ ಹಂತದಲ್ಲಿದ್ದ ಆರೋಪಿ ನಿದ್ದೆಗೆ ಜಾರದಂತೆ ಮೊದಲೇ ನಿಗದಿ ಪಡಿಸಿದ ಪ್ರಮಾಣದಲ್ಲಿ ಸೋಡಿಯಂ ಪೆಂಟೋಥಲ್ ಡೋಸ್ ಅನ್ನು ನಿಮಿಷ, ನಿಮಿಷ ಗಳ ಅಂತರದಲ್ಲಿ ಸ್ವಲ್ಪ ಸ್ವಲ್ಪ ನೀಡಲಾಗುತ್ತದೆ.

    ಯಾರಿಗೆ ಮಾಡಬಹುದು?
    ಯಾವುದೇ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ಬಿಪಿ ಇರುವಂತಹ ವ್ಯಕ್ತಿಗಳಿಗೂ ಪರೀಕ್ಷೆ ನಡೆಸಬಹುದು. ಈ ವೇಳೆ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಪೂರ್ಣ ಮಾಹಿತಿಯನ್ನು ತಿಳಿಸುತ್ತಾನೆ. ಯಾವುದೇ ಮಾಹಿತಿಯನ್ನು ಹೇಳದಿರಲು ಈ ಸ್ಥಿತಿಯಲ್ಲಿ ಆತನಿಗೆ ಸಾಧ್ಯವಿರುವುದಿಲ್ಲ. ಆತನಿಂದ ಮಾಹಿತಿ ಪಡೆಯುವ ಪ್ರತಿಯೊಂದು ಅಂಶವನ್ನು ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುತ್ತದೆ.

    ಅಹಮದಬಾದ್ ನಲ್ಲಿ ಏಕೆ?
    ಈ ಹಿಂದೆ ಛಾಪಾ ಕಾಗದ ಹಗರಣದಲ್ಲಿ ಸಿಕ್ಕಿಬಿದ್ದ ಕರೀಂ ಲಾಲ್ ತೆಲಗಿ ಸೇರಿದಂತೆ 350 ಕ್ಕೂ ಹೆಚ್ಚು ಆರೋಪಿಗಳನ್ನು ಬೆಂಗಳೂರಿನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಗುಜರಾತ್ ವಿಧಿವಿಜ್ಞಾನ ವಿಶ್ವವಿದ್ಯಾಲಯ 2008ರಲ್ಲಿ ಆರಂಭಗೊಂಡಿದೆ. ವಿಧಿವಿಜ್ಞಾನ ಕ್ಷೇತ್ರದ ಅಧ್ಯಯನಕ್ಕೆ ಸಂಬಂಧಿಸಿದಂತೆ ಆರಂಭಗೊಂಡ ವಿಶ್ವದ ಮೊದಲ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

    https://www.youtube.com/watch?v=yGCm67SXFx8