Tag: gas Leaks

  • ವಿಶಾಖಪಟ್ಟಣಂ ವಿಷಾನಿಲ ದುರಂತದ ಬೆನ್ನಲ್ಲೇ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್

    ವಿಶಾಖಪಟ್ಟಣಂ ವಿಷಾನಿಲ ದುರಂತದ ಬೆನ್ನಲ್ಲೇ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್

    – 7 ಮಂದಿ ಅಸ್ವಸ್ಥ, ಮೂವರ ಸ್ಥಿತಿ ಗಂಭೀರ

    ರಾಯಗಢ: ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಾಗಿ 11 ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಅಸ್ವಸ್ಥಗೊಂಡ ಬೆನ್ನಲ್ಲೇ ಇದೀಗ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್ ಆಗಿ 7 ಮಂದಿ ಅಸ್ವಸ್ಥಗೊಂಡಿರುವ ದುರ್ಘಟನೆ ನಡೆದಿದೆ.

    ಛತ್ತೀಸಗಢದ ರಾಯಗಢ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೇಪರ್ ಮಿಲ್ ಅನ್ನು ಶುದ್ಧಿಕರಿಸುತ್ತಿದ್ದ ವೇಳೆ ವಿಷಾನಿಲ ಸೋರಿಕೆಯಾಗಿ ಏಳು ಮಂದಿ ಕಾರ್ಮಿಕರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯ ಬಗ್ಗೆ ನಮಗೆ ಪೇಪರ್ ಮಿಲ್ ಕಡೆಯಿಂದ ಮಾಹಿತಿ ಸಿಕ್ಕಿಲ್ಲ. ಆದರೆ ಆಸ್ಪತ್ರೆಯಿಂದ ನಾವು ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ ಎಂದು ರಾಯಗಢದ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಇಷ್ಟು ದಿನ ಪೇಪರ್ ಮಿಲ್ ಅನ್ನು ಬಂದ್ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಸಡಿಲಗೊಂಡು ಕಾರ್ಖಾನೆ ತೆರೆಯಲು ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ಬುಧವಾರ ಸಂಜೆ ಮಿಲ್ ಅನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆಗ ರಾತ್ರಿ ವೇಳೆ ವಿಷಾನಿಲ ಸೋರಿಕೆ ಆಗಲು ಆರಂಭವಾಗಿತ್ತು.

    ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

    ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 11 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.