Tag: Garuda

  • ಟ್ರೇಲರ್ ಮೂಲಕ ಗರಿಗೆದರಿದ ಗರುಡ : ಶಿವಣ್ಣ ಮೆಚ್ಚುಗೆ!

    ಟ್ರೇಲರ್ ಮೂಲಕ ಗರಿಗೆದರಿದ ಗರುಡ : ಶಿವಣ್ಣ ಮೆಚ್ಚುಗೆ!

    ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಸತತವಾಗಿ ಸಿದ್ಧಗೊಳ್ಳುತ್ತಿದ್ದ, ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಗರುಡ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಯಾಕೆ ಮೂರು ವರ್ಷ ಕಾಲಾವಧಿಯನ್ನು ಈ ಸಿನಿಮಾ ಪಡೆದುಕೊಂಡಿತು ಅನ್ನೋದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಗರುಡ ಚಿತ್ರದ ಟ್ರೇಲರ್ ನೋಡಿದವರಿಗೆ ‘ಇದೇನಿದು ಹಾಲಿವುಡ್ ರೇಂಜಿಗೆ ರೂಪಿಸಿದ್ದಾರಲ್ಲಾ?’ ಎನ್ನುವ ಭಾವನೆ ಮೂಡುತ್ತದೆ. ಅಷ್ಟೊಂದು ದೃಶ್ಯ ಶ್ರೀಮಂತಿಕೆ ಹೊಂದಿರುವ ಈ ಚಿತ್ರ ದೊಡ್ಡ ಬಜೆಟ್ಟು, ಹಿರಿದಾದ ಕಲಾವಿದ, ತಂತ್ರಜ್ಞರನ್ನು ಒಳಗೊಂಡು ತಯಾರಾಗಿದೆ. ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ, ಕಿಶೋರ್ ಎ ಅರ್ಪಿಸಿ, ಬಿ.ಕೆ. ರಾಜಾರೆಡ್ಡಿ ಮತ್ತು ಪ್ರಸಾದ್ ರೆಡ್ಡಿ ಎಸ್ ಅವರು ನಿರ್ಮಿಸುತ್ತಿರುವ ಚಿತ್ರ ‘ಗರುಡ’. ಈ ಹಿಂದೆ ‘ಸಿಪಾಯಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿದ್ಧಾರ್ಥ್ ಮಹೇಶ್ ಅವರ ಎರಡನೇ ಚಿತ್ರ ಇದಾಗಿದೆ.

    ಈ ಚಿತ್ರದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಈ ಚಿತ್ರತಂಡ ಶ್ರಮವನ್ನು ಕಂಡು ಬೆರಗಾಗಿದ್ದಾರೆ. ಟ್ರೇಲರನ್ನು ಅಪಾರವಾಗಿ ಮೆಚ್ಚಿರುವ ಶಿವಣ್ಣ ಸಿದ್ಧಾರ್ಥ್ ಮಹೇಶ್ ಸೇರಿದಂತೆ ಗರುಡ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ.

    ಕುಟುಂಬದಲ್ಲಿ ಒಂದು ಘಟನೆ ನಡೆಯುತ್ತದೆ. ಅದು ನಾಯಕನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಕೌಟುಂಬಿಕವಾಗಿ ಶುರುವಾಗುವ ಚಿತ್ರ ಎಲ್ಲೆಲ್ಲಿ ಸಾಗುತ್ತದೆ ಅನ್ನೋದು ಗರುಡ ಚಿತ್ರದ ಪ್ರಧಾನ ಅಂಶ. ಸಿದ್ಧಾಥ್ ಮಹೇಶ್ ಈ ಚಿತ್ರದಲ್ಲಿ ಆ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ನಟ ಶ್ರೀನಗರ ಕಿಟ್ಟಿ ಈ ವರೆಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಗರುಡ ಅವರ ವೃತ್ತಿ ಬದುಕಿಗೆ ಕಮರ್ಷಿಯಲ್ ಕಲರ್ ನೀಡಿ ನನ್ನ ಕೆರಿಯರ್‍ಗೆ ಬೇರೆ ದಾರಿ ನೀಡುತ್ತದೆ ಎನ್ನುವ ನಂಬಿಕೆ ಸ್ವತಃ ಕಿಟ್ಟಿ ಅವರದ್ದು. ಕಿಟ್ಟಿ ಮತ್ತು ರಂಗಾಯಣ ರಘು ಕಾಂಬಿನೇಷನ್ ಸಾಕಷ್ಟು ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ಈ ಚಿತ್ರದಲ್ಲೂ ಅದು ಮುಂದುವರೆಯಲಿದೆ. ಈ ಚಿತ್ರದಲ್ಲಿ ಕಿಟ್ಟಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ನಾಯಕನಟಿ ಆಶಿಕಾ ರಂಗನಾಥ್ ಅವರದ್ದು ಈ ಸಿನಿಮಾದಲ್ಲಿ ನನ್ನದು ಕಾಲೇಜ್ ಹುಡುಗಿ ಪಾತ್ರ. ಮನಸಲ್ಲಿ ಉಳಿಯೋ ಕ್ಯಾರೆಕ್ಟರ್ ಅಂತೆ. ಐಂದ್ರಿತಾ ರೇ ದೊಡ್ಡ ಗ್ಯಾಪ್ ನಂತ ನಬಟಿಸಿದ ಸಿನಿಮಾ ಗರುಡ. ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದಾಗ ಐಂದ್ರಿತಾ ತಮ್ಮ ಮದುವೆಯ ವಿಚಾರವನ್ನು ಅನೌನ್ಸ್ ಮಾಡಿದ್ದರು. ಗರುಡ ಚಿತ್ರದಿಂದ ಐಂದ್ರಿತಾ-ದಿಗಂತ್ ಮದುವೆ ಓಡಾಟಗಳಿಗೆ ಸ್ವಲ್ಪ ಅಡೆತಡೆಯಾಗಿತ್ತಂತೆ ಆದರೆ ಗರುಡ ಸಿನಿಮಾಗೆ ಮೊದಲ ಆದ್ಯತೆ ನೀಡಿದ್ದರಂತೆ!

    ನಟ ಆದಿ ಲೋಕೇಶ್ ಅವರಿಗಿದು ಪರ್ಸನಲ್ಲಾಗಿ, ಮನಸ್ಸಿಗೆ ತುಂಬಾ ಹತ್ರಿತವಾದ ಸಿನಿಮಾವಂತೆ. “ರಿಲೀಸ್ ಆದ ಮೇಲೆ ಹೆಣ್ಮಕ್ಕಳು ನನ್ನನ್ನು ನೋಡಿದರೆ ಚಪ್ಪಲಿ ತಗೊಂಡು ಹೊಡೀತಾರೆ” ಎಂದು ಸ್ವತಃ ಅವರೇ ಹೇಳಿಕೊಳ್ಳುವ ಮಟ್ಟಿಗೆ ಈ ಚಿತ್ರದ ಕಾಳಿಂಗನ ಪಾತ್ರ ಕ್ರೂರವಾಗಿದೆಯಂತೆ. ಗಾಯಕ ರಘು ದೀಕ್ಷಿತ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರೋದು ವಿಶೇಷ.

    ಕಳೆದ ಹನ್ನೆರಡು ವರ್ಷಗಳಿಂದ ಸ್ವತಂತ್ರ ನೃತ್ಯನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಧನಕುಮಾರ್ ‘ಗರುಡ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಗರುಡ ಚಿತ್ರದ ಟ್ರೇಲರ್ ಅನ್ನು ರಘು ದೀಕ್ಷಿತ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಗರುಡ ತೆರೆಗೆ ಬರುವ ಎಲ್ಲ ಯೋಜನೆ ರೂಪಿಸಿಕೊಂಡಿದೆ. ಧನಕುಮಾರ್ ನಿರ್ದೇಶನದ ಗರುಡ ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ದೀಪು ಎಸ್‍ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನದ ಈ ಚಿತ್ರದಲ್ಲಿಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಟ್ಮಲಾನಿ, ರಂಗಾಯಣ ರಘು, ಆದಿಲೋಕೇಶ್, ರಾಜೇಶ್‍ನಟರಂಗ, ರವಿಶಂಕರ್ ಗೌಡ, ರಘುದೀಕ್ಷಿತ್ ಮುಂತಾದವರ ತಾರಾಬಳಗವಿದೆ.

    https://www.youtube.com/watch?v=zbS1-dxwKe0

  • ಷಷ್ಠಿ ವೇಳೆ ಕೆಳಗೆ ಬಿತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರುಡ, ಕಿರುಘಂಟೆ!

    ಷಷ್ಠಿ ವೇಳೆ ಕೆಳಗೆ ಬಿತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರುಡ, ಕಿರುಘಂಟೆ!

    – ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅವಘಡ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯಲ್ಲಿ ಇತಿಹಾಸ ಪ್ರಸಿದ್ಧ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಉತ್ಸವದಲ್ಲಿ ಹಾರಿಸಿದ್ದ ಧ್ವಜವನ್ನು ಇಳಿಸುವ ವೇಳೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದೆ.

    ದೇವಾಲಯದಲ್ಲಿ ಷಷ್ಠಿ ಉತ್ಸವ ನಡೆದು ಧೂಮಾವತಿ ದೈವದ ನೇಮ ಜರಗಿತ್ತು. ನೇಮದ ಸಂದರ್ಭದಲ್ಲಿ ಧೂಮಾವತಿ ದೈವದ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ನುಡಿ ಹೇಳಿತ್ತು. ಆದರೆ ಗ್ರಾಮಸ್ಥರು ಬ್ರಹ್ಮಕಲಶ ಮಾಡಲು ನಿರಾಕರಿಸಿದ್ದರು.

    ಉತ್ಸವದ ಮರುದಿನ ಕಾಕತಾಳೀಯ ಎಂಬಂತೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರುಘಂಟೆಯನ್ನು ಇಳಿಸುವಾಗ ಹಗ್ಗ ತುಂಡಾಗಿ ಗರುಡ ಕೆಳಕ್ಕೆ ಬಿದ್ದಿದೆ. ಉತ್ಸವ ಸಂದರ್ಭದಲ್ಲಿ ಏರಿಸಲ್ಪಟ್ಟ ಗರುಡ ಕೆಳಕ್ಕೆ ಬಿದ್ದರೆ ಅನಾಹುತ ಸಂಭವಿಸುತ್ತದೆ ಎನ್ನುವ ನಂಬಿಕೆ ಕರಾವಳಿ ಭಾಗದಲ್ಲಿದೆ.

    ಧೂಮಾವತಿ ದೈವ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ಹೇಳಿದ್ದ ಮರುದಿನವೇ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

    19 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಬ್ರಹ್ಮಕಲಶ ನಡೆದಿದ್ದರೂ, ಈಗ ಶಿಥಿಲಾವಸ್ಥೆಗೆ ಬಂದಿತ್ತು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ದೈವದ ನುಡಿಯನ್ನು ಉಲ್ಲಂಘಿಸಿದ್ದೇ ಅನಾಹುತಕ್ಕೆ ಕಾರಣ. ಇದರಿಂದ ಮುಂದೆ ಅನಾಹುತ ಕಾದಿದೆ ಅನ್ನುವ ಮಾತು ಈಗ ಗ್ರಾಮಸ್ಥರ ಬಾಯಲ್ಲಿ ಹರಿದಾಡುತ್ತಿದೆ.

    ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸಂತೋಷ್ ಶೆಟ್ಟಿ, 13ರಂದು ಷಷ್ಠಿ ದಿವಸವಾಗಿತ್ತು. ಅಂದು ಧ್ವಜರೋಹಣ ಆಗಿದೆ. ಆಗ ಗರುಡ ಸಮೇತ ಧ್ವಜಸ್ತಂಭಕ್ಕೆ ಏರಿಸುವಾಗ ಹಗ್ಗದ ಗಂಟು ರಾಟೆಗೆ ಸಿಲುಕಿಕೊಂಡಿದೆ. ಆದರೆ ಅಂದಿನ ದಿನ ಯಾರು ಇದನ್ನು ಗಮನಿಸಿರಲಿಲ್ಲ. ನಾಲ್ಕು ದಿನಗಳ ಬಳಿಕ ಪೂಜೆ ಸಲ್ಲಿಸಿ ಗರುಡನನ್ನು ಕೆಳಗೆ ಇಳಿಸಬೇಕಿತ್ತು. ನಾವು ಗರುಡವನ್ನು ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದೆವು. ಆಗ ಅಕಸ್ಮಾತಾಗಿ ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.

    ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಆದರೂ ಯಾರಿಗೂ ತೊಂದರೆಯಾಗಬಾದರದು ಎಂದು ಕೆಳಗೆ ಬಿದ್ದ ತಕ್ಷಣ 48 ಕಳಸವಿಟ್ಟು ಪೂಜೆ ಸಲ್ಲಿಸಿದ್ದೇವೆ ಎಂದು ಸಂತೋಷ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv