Tag: Garments

  • ಮಹಿಳಾ ಗಾರ್ಮೆಂಟ್ಸ್ ನೌಕರರಿಗೆ ಗುಡ್ ನ್ಯೂಸ್ – ಉಚಿತ ಬಸ್ ಪಾಸ್‌ಗೆ ಅರ್ಜಿ ಆಹ್ವಾನ

    ಮಹಿಳಾ ಗಾರ್ಮೆಂಟ್ಸ್ ನೌಕರರಿಗೆ ಗುಡ್ ನ್ಯೂಸ್ – ಉಚಿತ ಬಸ್ ಪಾಸ್‌ಗೆ ಅರ್ಜಿ ಆಹ್ವಾನ

    ಬೆಂಗಳೂರು: ಮಹಿಳಾ ಗಾರ್ಮೆಂಟ್ಸ್‌ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಕೆಲಸದ ಸ್ಥಳಗಳಿಗೆ ತೆರಳಲು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ.

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘೋಷಿಸಿದ್ದರು. ಯೋಜನೆಯನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾಕಾರಗೊಳಿಸುತ್ತಿದೆ. ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆಗಾಗಿ ಬಿಎಂಟಿಸಿ ಅರ್ಜಿಯನ್ನು ಆಹ್ವಾನಿಸಿದೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

    ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೆಂಗಳೂರು ನಗರದಲ್ಲಿ ಸುಮಾರು 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಸದರಿ ಗಾರ್ಮೆಂಟ್ಸ್‌ಗಳಲ್ಲಿ ಸುಮಾರು 3 ಲಕ್ಷಕ್ಕಿಂತಲೂ ಹೆಚ್ಚಿನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.80 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದರಿ ಮಹಿಳಾ ನೌಕರರು ನಿತ್ಯ ತಮ್ಮ ಕರ್ತವ್ಯ ಸ್ಥಳಕ್ಕೆ ಹೋಗಲು ಹಾಗೂ ವಾಸಸ್ಥಳಕ್ಕೆ ಹಿಂದಿರುಗಲು ಖಾಸಗಿ ಬಸ್ಸು, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಕಂಡುಬಂದಿರುತ್ತದೆ.

    ತತ್ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಹಾಗೂ ಆರ್ಥಿಕ ಸಹಾಯವನ್ನು ಮಾಡಲು ‘ವನಿತಾ ಸಂಗಾತಿ’ ಯೋಜನೆಯಡಿ ಉಚಿತವಾಗಿ ಮಾಸಿಕ ಬಸ್‌ ಪಾಸುಗಳನ್ನು ಜನವರಿ 22 ರಿಂದ ವಿತರಣೆ ಮಾಡಲು ಕ್ರಮ ಕೈಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

    ಪಾಸು ಪಡೆಯಲು ಅನುಸರಿಸಬೇಕಾದ ವಿಧಾನಗಳೇನು..?
    * ವನಿತಾ ಸಂಗಾತಿ ಪಾಸು ಪಡೆಯಲಿಚ್ಚಿಸುವ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರು, ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್‌ ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸುವುದು.

    * ಗಾರ್ಮೆಂಟ್ಸ್‌ ಮಾಲೀಕರು ಪಾಸು ಪಡೆಯಲಿಚ್ಚಿಸುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಇ-ಮೇಲ್‌ ವಿಳಾಸ welfarecommissioner123@gmail.com ಗೆ ಸಲ್ಲಿಸುವುದು.

    * ವನಿತಾ ಸಂಗಾತಿ ಪಾಸಿಗಾಗಿ ಗಾರ್ಮೆಂಟ್ಸ್‌ ಮಾಲೀಕರಿಂದ ಸ್ವೀಕರಿಸುವ ಕೋರಿಕೆಗಳನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯವರು ಪರಿಶೀಲಿಸಿ, ಅರ್ಹ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಬೆಂಗಳೂರು ಸಾರಿಗೆ ಸಂಸ್ಥೆಗೆ ಒದಗಿಸುವುದು.

    * ಬೆಂಗಳೂರು ನಗರ ಸಾರಿಗೆ ಸಂಸ್ಥೆಯು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ವೀಕರಿಸುವ ಪಟ್ಟಿಗನುಸಾರವಾಗಿ, ಗಾರ್ಮೆಂಟ್ಸ್‌ ಮಾಲೀಕರಿಂದ ದಾಖಲೆಗಳ ಪ್ರತಿಗಳನ್ನು (ಹಾರ್ಡ್‌ ಕಾಫಿ) ಹಾಗೂ ಗಾರ್ಮೆಂಟ್ಸ್‌ ಮಾಲೀಕರ ಪಾಲಿನ ಮೊತ್ತ ಶೇ.40 ರಷ್ಟನ್ನು ಪಡೆದು (ಆರ್‌.ಟಿ.ಜಿ.ಎಸ್‌/ ಎನ್.ಇ.ಎಫ್‌.ಟಿ ಮೂಲಕ), ವನಿತಾ ಸಂಗಾತಿ ಪಾಸುಗಳನ್ನು ಕೆಂಪೇಗೌಡ ಬಸ್‌ ನಿಲ್ದಾಣ ಪಾಸು ಕೌಂಟರ್‌ನಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಮತಾಂತರಗೊಂಡ ಹೆಣ್ಣುಮಕ್ಕಳ ಪರಿಸ್ಥಿತಿ ಗೊತ್ತಿಲ್ಲ: ಕೆ.ಎಸ್ ಈಶ್ವರಪ್ಪ

    * ವನಿತಾ ಸಂಗಾತಿ ಪಾಸುಗಳನ್ನು ಪಡೆಯುವ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರು ಬೆಂ.ಮ.ಸಾ.ಸಂಸ್ಥೆಯ ಮಾಸಿಕ ಪಾಸಿನ ಗುರುತಿನ ಚೀಟಿಯನ್ನು ಪಡೆಯುವುದು, ವನಿತಾ ಸಂಗಾತಿ ಪಾಸುಗಳನ್ನು ಪಡೆದ ಮಹಿಳಾ ಕಾರ್ಮಿಕರು ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

    * ಗಾರ್ಮೆಂಟ್ಸ್‌ ಮಾಲೀಕರು ಜನವರಿ 2022ರ ಮಾಹೆಗೆ ಅವಶ್ಯವಿರುವ ವನಿತಾ ಸಂಗಾತಿ ಪಾಸುಗಳ ಬೇಡಿಕೆಯನ್ನು ಇಂದಿನಿಂದ ಕಾರ್ಮಿಕ ಇಲಾಖೆಗೆ (welfarecommissioner123@gmail.com )ಸಲ್ಲಿಸಬಹುದಾಗಿದೆ.

  • ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ- ಖತರ್ನಾಕ್ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

    ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ- ಖತರ್ನಾಕ್ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

    ಕೋಲಾರ: ಖತರ್ನಾಕ್ ಕಳ್ಳನೊರ್ವ ಬನಿಯನ್ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಬಂದು ಥೇಟ್ ಸಿನಿಮಾ ಸ್ಟೈಲ್‍ನಲ್ಲಿ ಎರಡು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ. ಕತರ್ನಾಕ್ ಕಳ್ಳನ ಕೈಚಳಕ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಸಿ ಟಿವಿ ಆಧರಿಸಿ ಕಳ್ಳನ ಪತ್ತೆಗೆ ಕೋಲಾರ ನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ.

    ಹೌದು ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ಕಳ್ಳತನವಾಗಿದೆ. ಅಂಗಡಿಗಳ ಶಟರ್ ಮುರಿದು ಕಳ್ಳತನ ಮಾಡಿರುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಾಳಮ್ಮ ಗುಡಿಯಲ್ಲಿರುವ ಸೂರ್ಯ ಗಾಮೆರ್ಂಟ್ಸ್ ಹಾಗೂ ಮದೀನಾ ಹಾರ್ಡ್ ವೇರ್ ಶಾಪ್‍ನಲ್ಲಿ ಕಳವು ಮಾಡಿರುವ ಆರೋಪಿ, ಸೂರ್ಯ ಗಾಮೆರ್ಂಟ್ಸ್‍ನಲ್ಲಿ 17 ಸಾವಿರ ರೂಪಾಯಿ ನಗದು ಹಾಗೂ ಲಕ್ಷಾಂತರ ರೂಪಾಯಿ ಬೆಲೆಯ ಬಟ್ಟೆ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

    ಮದೀನಾ ಹಾರ್ಡ್‍ವೇರ್ ಶಾಪ್‍ನಲ್ಲಿ ಟೂಲ್ ಕಿಟ್‍ಗಳನ್ನ ತೆಗೆದುಕೊಂಡು ಹೋಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಗಲ್‍ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಮುನ್ನೆಚ್ಚರಿಕಾ ಕ್ರಮವಾಗಿ ಅರಸೀಕೆರೆಯಲ್ಲಿ ಗಾರ್ಮೆಂಟ್ಸ್‌ಗಳಿಗೆ ರಜೆ

    ಮುನ್ನೆಚ್ಚರಿಕಾ ಕ್ರಮವಾಗಿ ಅರಸೀಕೆರೆಯಲ್ಲಿ ಗಾರ್ಮೆಂಟ್ಸ್‌ಗಳಿಗೆ ರಜೆ

    ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಕೆಲವೊಂದು ಗಾರ್ಮೆಂಟ್ಸ್‌ನವರು ಇಂದಿನಿಂದ ತಮ್ಮ ನೌಕರರಿಗೆ ಕೆಲವು ದಿನಗಳ ಕಾಲ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ.

    ಅಷ್ಟೇ ಅಲ್ಲದೇ ಅರಸೀಕೆರೆ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಸೀಕೆರೆ ಡಿಪೋದಿಂದ ಸಂಚರಿಸುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಈ ಬಗ್ಗೆ ಶುಕ್ರವಾರ ರಾತ್ರಿಯಷ್ಟೇ ಸಭೆ ನಡೆಸಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೊರೊನಾ ವಿರುದ್ಧದ ಹೋರಾಟಕ್ಕೆ ಸ್ವಯಂಪ್ರೇರಿತವಾಗಿ ಸಹಕರಿಸುವಂತೆ ಮನವಿ ಮಾಡಿದ್ದರು. ಇದೀಗ ಕೆಲವು ಗಾರ್ಮೆಂಟ್ಸ್ ಮಾಲೀಕರು ಮತ್ತು ಅರಸೀಕೆರೆ ಡಿಪೋ ಅಧಿಕಾರಿಗಳು ಶಾಸಕರ ಮನವಿಗೆ ಸ್ಪಂದಿಸಿ ತಮ್ಮ ಕೆಲಸಗಾರರಿಗೆ ತಾತ್ಕಾಲಿಕವಾಗಿ ರಜೆ ನೀಡಿದ್ದಾರೆ.

  • ನಾಳೆಯಿಂದ ಗಾರ್ಮೆಂಟ್ಸ್ ಕಂಪನಿಗಳು ಬಂದ್ – ವೇತನ ಸಹಿತ ಕಾರ್ಮಿಕರಿಗೆ ರಜೆ

    ನಾಳೆಯಿಂದ ಗಾರ್ಮೆಂಟ್ಸ್ ಕಂಪನಿಗಳು ಬಂದ್ – ವೇತನ ಸಹಿತ ಕಾರ್ಮಿಕರಿಗೆ ರಜೆ

    ಬೆಂಗಳೂರು: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಭಯದಿಂದ ನಾಳೆಯಿಂದ ಅಂದರೆ ಮಂಗಳವಾರದಿಂದ ಮಾರ್ಚ್ 31ರವರೆಗೂ ಎಲ್ಲ ಗಾರ್ಮೆಂಟ್ಸ್ ಕಂಪನಿಗಳು ಬಂದ್ ಆಗಲಿವೆ.

    ನಾಳೆಯಿಂದ ಮಾಚ್9 31ರ ತನಕ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳು, ಸಂಸ್ಥೆಗಳು ಸಂಪೂರ್ಣವಾಗಿ ಬಂದ್ ಆಗಲಿವೆ ಅಂತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಿ.ಆರ್ ಜನಾರ್ಧನ್ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನ ಎಫ್‍ಕೆಸಿಸಿಐನ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ 4 ಸಾವಿರ ಗಾರ್ಮೆಂಟ್ಸ್ ಹಾಗೂ ರಾಜ್ಯದ 10 ಸಾವಿರಕ್ಕೂ ಹೆಚ್ಚು ಗಾರ್ಮೆಂಟ್ಸ್‌ಗಳು ನಾಳೆಯಿಂದ ಬಂದ್ ಆಗಲಿವೆ. ಇನ್ನೂ ವೇತನ ಸಹಿತ ಕಾರ್ಮಿಕರಿಗೆ ರಜೆಯನ್ನ ನೀಡಲಾಗುತ್ತದೆ. ಆದೇಶ ಉಲ್ಲಂಘಿಸಿ ಗಾರ್ಮೆಂಟ್ಸ್ ಕಂಪನಿಗಳು ಓಪನ್ ಮಾಡಿದರೆ ಆಯಾ ಕಂಪನಿಗಳ ಲೈಸೆನ್ಸ್ ನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

    ಬೆಂಗಳೂರಿನ ಸುಂಕದಕಟ್ಟೆ ಗಾರ್ಮೆಂಟ್ಸ್‌ನಲ್ಲಿ ಇವತ್ತು ಗಾರ್ಮೆಂಟ್ಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ರಜೆ ಸಹಿತ ವೇತನ ನೀಡಬೇಕು ಎಂದು ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದರು.

  • ಬೀದಿಗೆ ಬಿದ್ದ ಗಾರ್ಮೆಂಟ್ಸ್ ನೌಕರರು

    ಬೀದಿಗೆ ಬಿದ್ದ ಗಾರ್ಮೆಂಟ್ಸ್ ನೌಕರರು

    ಬೆಂಗಳೂರು: ವ್ಯವಹಾರದಲ್ಲಿ ನಷ್ಟದಲ್ಲಿದೆ ಅಂತಾ ಗಾರ್ಮೆಂಟ್ಸ್ ಗೆ ಬೀಗ ಹಾಕುಲು ಮಾಲೀಕರು ನಿರ್ಧಾರ ಮಾಡಿರುವ ಹಿನ್ನಲೆಯಲ್ಲಿ ಸಾವಿರಾರು ನೌಕರರು ಬೀದಿಗೆ ಬಂದಿದ್ದಾರೆ.

    ಬೆಂಗಳೂರಿನ ಗೋರಗುಂಟೆ ಪಾಳ್ಯದಲ್ಲಿರುವ ‘ಟೆಕ್ಸ್ ಪೋರ್ಟ್ ಓವರ್ಸಿಸಿ’ ಅನ್ನೋ ಗಾರ್ಮೆಂಟ್ಸ್ ಫ್ಯಾಕ್ಟರಿ ಏಕಾಎಕಿ ಮುಚ್ಚಲು ನಿರ್ಧಾರ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ನೌಕರರು ಕಳೆದ ಮೂರು ದಿನದಿಂದ ಕಂಪನಿಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.

    ಕಂಪನಿಯ ಮಾಲೀಕರು ಹೀಗೆ ಏಕಾಏಕಿಯಾಗಿ ಕಂಪನಿ ಕ್ಲೋಸ್ ಮಾಡಿದ್ರೇ ನಾವೂ ಹೇಗೆ ಜೀವನ ಮಾಡೋದು ಅಂತಾ ಪ್ರಶ್ನಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಮಹಿಳಾ ನೌಕರರು ಭಾಗಿಯಾಗಿದ್ದಾರೆ. ಕಂಪನಿ ಕ್ಲೋಸ್ ಮಾಡ್ತಿರೋದ್ರಿಂದ ಮೂರು ತಿಂಗಳ ವೇತನ ನೀಡಿ ಎಂದು ನೌಕರರು ಆಗ್ರಹಿಸಿದ್ದಾರೆ. ಆದರೆ ಮಾಲೀಕರು ಮಾತ್ರ ಕೇವಲ ಒಂದು ತಿಂಗಳ ಸಂಬಳ ನೀಡುತ್ತೇವೆ ಅಂತಾ ಪಟ್ಟು ಹಿಡಿದಿದ್ದಾರೆ.

  • ಬಸ್ ಪಲ್ಟಿ- 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ

    ಬಸ್ ಪಲ್ಟಿ- 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ

    ರಾಮನಗರ: ಚಾಲಕನ ಅಜಾಗರೂಕತೆಯಿಂದ ಗಾರ್ಮೆಂಟ್ಸ್ ಗೆ ಸೇರಿದ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯವಾಗಿರುವ ಘಟನೆ ರಾಮನಗರ ತಾಲೂಕಿನ ಜಯಪುರ ಗ್ರಾಮದ ಬಳಿ ನಡೆದಿದೆ.

    ರಾಮನಗರ ಹೊರವಲಯದ ಮಧುರಾ ಗಾರ್ಮೆಂಟ್ಸ್ ಗೆ ಈ ಬಸ್ ಸೇರಿದೆ. ಬಸ್ ಮಾಗಡಿ ರಸ್ತೆಯ ಅಕ್ಕೂರಿನಿಂದ ಬರುತ್ತಿತ್ತು. ಈ ವೇಳೆ ಚಾಲಕ ವೇಗವಾಗಿ ಬಸ್ ಚಲಾಯಿಸಿ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಸ್ ಪಲ್ಟಿ ಆಗಿದೆ.

    ಘಟನೆಯಲ್ಲಿ 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯವಾಗಿದೆ. ಸದ್ಯ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಿನಿಬಸ್ ಪಲ್ಟಿ- ಇಬ್ಬರ ಕಾಲು ಮುರಿತ, 20ಕ್ಕೂ ಹೆಚ್ಚು ಜನರಿಗೆ ಗಾಯ

    ಮಿನಿಬಸ್ ಪಲ್ಟಿ- ಇಬ್ಬರ ಕಾಲು ಮುರಿತ, 20ಕ್ಕೂ ಹೆಚ್ಚು ಜನರಿಗೆ ಗಾಯ

    ರಾಮನಗರ: ಗಾರ್ಮೆಂಟ್ಸ್ ನೌಕರರನ್ನು ಕರೆ ತರುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಇಬ್ಬರಿಗೆ ಕಾಲು ಮುರಿದು, 20ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದ ಬಳಿ ನಡೆದಿದೆ.

    ಕನಕಪುರ ಹೊರ ವಲಯದ ಶಿವನೇಗೌಡನದೊಡ್ಡಿ ಗ್ರಾಮದ ಬಳಿಯ ಲಗೂನಾ ಗಾರ್ಮೆಂಟ್ಸ್ ಗೆ ಇಂದು ಬೆಳಿಗ್ಗೆ ನೌಕರರನ್ನು ಮಿನಿ ಬಸ್‍ನಲ್ಲಿ ಕರೆತರಲಾಗುತ್ತಿತ್ತು. ಸುಮಾರು 30 ಜನರಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿ ಬಿದ್ದಿದೆ.

    ಚಾಲಕನ ಬದಲಿಗೆ ಗಾರ್ಮೆಂಟ್ಸ್ ನ ಟೈಲರ್ ಓರ್ವ ಮಿನಿಬಸ್ ಚಲಾಯಿಸಿದ್ದೆ ಈ ದುರ್ಘಟನೆಗೆ ಕಾರಣವಾಗಿದೆ. ಕಾಲು ಮುರಿತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗಳಗೆ ಒಳಗಾದವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗ್ರಾಮೀಣ ಜನರ ಗುಳೆಗೆ ನೊಂದಿತು ಮನ- ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ನೀಡಿದ್ರು ಹಾವೇರಿಯ ರಾಘವೇಂದ್ರ

    ಗ್ರಾಮೀಣ ಜನರ ಗುಳೆಗೆ ನೊಂದಿತು ಮನ- ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ನೀಡಿದ್ರು ಹಾವೇರಿಯ ರಾಘವೇಂದ್ರ

    ಹಾವೇರಿ: ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಹಲವರ ಸಾಧನೆಯನ್ನು ತೋರಿಸಿದ್ದೇವೆ. ಅದೇ ರೀತಿ ಇವತ್ತಿನ ಪಬ್ಲಿಕ್ ಹೀರೋ ರಾಘವೇಂದ್ರ ಅವರು ಹಾವೇರಿಯ ಶಿಗ್ಗಾಂವಿ ತಾಲೂಕಿನ ಇವರು ಗಾರ್ಮೆಂಟ್ಸ್ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.

    ಹೌದು. ಹಾವೇರಿಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿರೋ ಪ್ರಭಂಜನ್ ಗಾರ್ಮೆಂಟ್ಸ್ ಸ್ಥಾಪಕ ರಾಘವೇಂದ್ರ ಮೇಲಗೇರಿ ಅವರೇ ಇವತ್ತಿನ ಪಬ್ಲಿಕ್ ಹೀರೋ. ಬಿ.ಎ ಪದವೀಧರರಾಗಿರೋ ರಾಘವೇಂದ್ರ ಮೊದಲಿಗೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಶಿಗ್ಗಾಂವಿ ತಾಲೂಕಿನಲ್ಲಿ ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡ್ತಿದ್ರು. ಆದರೆ, ಉದ್ಯೋಗಕ್ಕಾಗಿ ಪಟ್ಟಣಕ್ಕೆ ಗುಳೆಹೋಗೋ ಗ್ರಾಮೀಣ ಜನತೆಯನ್ನು ನೋಡಿದ ರಾಘವೇಂದ್ರ ಅವರು ಗುತ್ತಿಗೆದಾರ ಕೆಲಸಕ್ಕೆ ಗುಡ್‍ಬೈ ಹೇಳಿದ್ರು. ಸ್ನೇಹಿತರ ಜೊತೆ ಸೇರಿ ಗಾರ್ಮೆಂಟ್ಸ್ ಓಪನ್ ಮಾಡಿದ್ರು.

    ಬಂಕಾಪುರ ಪಟ್ಟಣದಲ್ಲಿ ಕಳೆದ ಮಾರ್ಚ್ ನಲ್ಲಿ ಪ್ರಭಂಜನ್ ಇಂಡಸ್ಟ್ರೀಸ್ ಗಾರ್ಮೆಂಟ್ಸ್ ಸ್ಥಾಪನೆಯಾಗಿದ್ದು ಈಗ 380ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ವಿಕಲಚೇತನರಿಗೂ ಅವಕಾಶ ಕೊಟ್ಟಿದ್ದಾರೆ. ಇದರಿಂದ ಬೆಂಗಳೂರು, ಹುಬ್ಬಳ್ಳಿಗೆ ಗುಳೇಹೋಗೋದು ತಪ್ಪಿದೆ. ಸಂಬಳ, ಇಎಸ್‍ಐ, ಪಿಎಫ್ ಯಾವ ಸಮಸ್ಯೆಯೂ ಇಲ್ಲ ಅಂತ ಉದ್ಯೋಗಿ ಆಶಾ ಹೇಳಿದ್ದಾರೆ.

    ವಾರ್ಷಿಕ 40 ರಿಂದ 50 ಸಾವಿರ ಶರ್ಟ್ಸ್ ಸಿದ್ಧಪಡಿಸ್ತಿರೋ ಪ್ರಭಂಜನ್ ಗಾರ್ಮೆಂಟ್ಸ್, ಬೆಂಗಳೂರು, ಗುಜರಾತ್ ಸೇರಿದಂತೆ ವಿದೇಶಕ್ಕೂ ರಫ್ತು ಮಾಡ್ತಿದೆ.

  • ಕ್ಷುಲ್ಲಕ ಕಾರಣಕ್ಕೆ ಗಾರ್ಮೆಂಟ್ಸ್ ನಲ್ಲಿ ಮಹಿಳೆಯರಿಗೆ ಪ್ರತಿನಿತ್ಯ ಕಿರುಕುಳ!

    ಕ್ಷುಲ್ಲಕ ಕಾರಣಕ್ಕೆ ಗಾರ್ಮೆಂಟ್ಸ್ ನಲ್ಲಿ ಮಹಿಳೆಯರಿಗೆ ಪ್ರತಿನಿತ್ಯ ಕಿರುಕುಳ!

    ಚಾಮರಾಜನಗರ: ಗಾರ್ಮೆಂಟ್ಸ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿರುವ ಘಟನೆ ಚಾಮರಾಜನಗರದಲ್ಲಿ ಜರುಗಿದೆ.

    ಚಾಮರಾಜನಗರ ಹೊರವಲಯದಲ್ಲಿರುವ ಉತ್ತುವಳ್ಳಿ ಗಾರ್ಮೆಂಟ್ಸ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಗಲ ಗ್ರಾಮದ ಲಕ್ಷಮ್ಮ ಎಂಬ ಮಹಿಳೆಯ ಮೇಲೆ ಗಾರ್ಮೆಂಟ್ಸ್ ನ ಸೂಪರ್ ವೈಜರ್ ಹಲ್ಲೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಬಟ್ಟೆ ಐರನ್ ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಮೇಲೆ ಗಾಜಿನ ಫ್ಯಾಟ್ರಾನ್ ನಲ್ಲಿ ಹಲ್ಲೆ ಮಾಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಇದರಿಂದ ಮಹಿಳೆ ಕತ್ತಿಗೆ ಹಾಗೂ ಎದೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಗಾರ್ಮೆಂಟ್ಸ್ ನಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಮಹಿಳೆಯರ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪವನ್ನು ಸಹ ಮಾಡಲಾಗಿದೆ.

    ಸದ್ಯ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.