Tag: garlic

  • ವೆರೈಟಿಯಾಗಿ ಮಾಡಿ ಗಾರ್ಲಿಕ್‌ ಚಿಕನ್‌, ಆರೋಗ್ಯಕ್ಕೂ ಒಳ್ಳೇದು..

    ವೆರೈಟಿಯಾಗಿ ಮಾಡಿ ಗಾರ್ಲಿಕ್‌ ಚಿಕನ್‌, ಆರೋಗ್ಯಕ್ಕೂ ಒಳ್ಳೇದು..

    ಸಾಮಾನ್ಯವಾಗಿ ಚಿಕನ್‌ ಅನ್ನು ಕಬಾಬ್, ಚಿಕನ್ ಪೆಪ್ಪರ್, ಚಿಕನ್ ಬಿರಿಯಾನಿ ಹೀಗೆ ವಿವಿಧ ರೀತಿಯಲ್ಲಿ ಮಾಡುತ್ತಾರೆ. ಜೊತೆಗೆ ಗಾರ್ಲಿಕ್ ಚಿಕನ್ ಕೂಡ ಮಾಡುತ್ತಾರೆ. ಆದ್ರೆ ಈ ಗಾರ್ಲಿಕ್ ಚಿಕನ್ ಮಾಡೋಕು ಸುಲಭ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.               

    ಬೇಕಾಗುವ ಸಾಮಾಗ್ರಿಗಳು:
    – ಚಿಕನ್
    * ಬೆಳ್ಳುಳ್ಳಿ
    * ಈರುಳ್ಳಿ
    * ಹಸಿಮೆಣಸಿನಕಾಯಿ
    * ಶುಂಠಿ
    * ಕರಿ ಮೆಣಸು
    * ಅರಿಶಿನ ಪುಡಿ
    * ಉಪ್ಪು
    * ಎಣ್ಣೆ
    * ಕೊತ್ತಂಬರಿ ಎಲೆ
    * ನಿಂಬೆ ರಸ

    ತಯಾರಿಸುವ ವಿಧಾನ:
    – ಮಾಂಸ ಮ್ಯಾರಿನೇಟ್ ಮಾಡುವುದು:
    ಸಣ್ಣದಾಗಿ ಕತ್ತರಿಸಿದ ಚಿಕನ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಬೇಕು. ಅದಕ್ಕೆ ಉಪ್ಪು, ಅರಿಶಿನ, ಕಪ್ಪು ಮೆಣಸು ಪುಡಿ, ಚಿಕ್ಕದಾಗಿ ಕತ್ತರಿಸಿದ ಅರ್ಧ ಬೆಳ್ಳುಳ್ಳಿ, ಅರ್ಧ ಶುಂಠಿ ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷ ಬಿಡಿ.

    – ಎಣ್ಣೆ ಬಿಸಿ ಮಾಡುವುದು
    ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಮೊದಲಿಗೆ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ. ನಂತರ ಈರುಳ್ಳಿ ಮತ್ತು ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ. ಇದಕ್ಕೆ ಮ್ಯಾರಿನೆಟ್ ಮಾಡಿದ ಚಿಕನ್ ಸೇರಿಸಿ. ಬಣ್ಣ ಬದಲಾದ ನಂತರ ಸ್ವಲ್ಪ ನೀರು ಹಾಕಿ ಮುಚ್ಚಿ 10-15 ನಿಮಿಷ ಬೇಯಿಸಿ.

    – ಗಾರ್‍ಲಿಕ್ ಫ್ಲೇವರ್ ಮಾಡಿಕೊಳ್ಳುವುದು
    ಬೇಯಿಸಿದ ಮೇಲೆ ಕೊನೆಯಲ್ಲಿ ಮತ್ತಷ್ಟು ಬೆಳ್ಳುಳ್ಳಿ ಹಾಕಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸೇರಿಸಿ ಚೆನ್ನಾಗಿ ಹುರಿಯಿರಿ. ಇದು ಗಾರ್‍ಲಿಕ್ ರುಚಿಯನ್ನು ಹೆಚ್ಚಿಸುತ್ತದೆ. ಕೊನೆಗೆ ತಯಾರಾದ ಚಿಕನ್ ಮೇಲೆ ಕೊತ್ತಂಬರಿ ಎಲೆ ಹಾಕಿ ಅಲಂಕರಿಸಿ ಬಿಸಿ ಬಿಸಿ ಚಪಾತಿ, ಪರೋಟಾ ಅಥವಾ ಅನ್ನದ ಜೊತೆಗೆ ಸವಿಯಿರಿ.

    ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದಲ್ಲಿ ಪ್ರೋಟಿನ್ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ದೇಹದಲ್ಲಿ ಕೊಬ್ಬಿನಾಂಶವನ್ನು ನಿಯಂತ್ರಿಸುತ್ತದೆ

  • ಕೆ.ಜಿ ಬೆಳ್ಳುಳ್ಳಿಗೆ 500ರ ಗಡಿದಾಟಿದ ದರ!

    ಕೆ.ಜಿ ಬೆಳ್ಳುಳ್ಳಿಗೆ 500ರ ಗಡಿದಾಟಿದ ದರ!

    ಬೆಂಗಳೂರು: ಕೆಲ ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕ ಬಾರಿಸಿದ್ದವು. ಆದರೆ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿ ಶಾಕ್ ಎದುರಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ನೂರಲ್ಲ, ಇನ್ನೂರಲ್ಲ ಬರೋಬ್ಬರಿ ಅರ್ಧ ಸಾವಿರವಾಗಿದೆ.

    ರಸಂ, ಸಾಂಬರ್, ಗೋಬಿ, ನಾನ್‍ವೆಜ್ ಹೀಗೆ ಟೇಸ್ಟಿ ಟೇಸ್ಟಿಯಾದ ಅಡುಗೆ ಮಾಡಬೇಕಾದ್ರೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಹಾಕೋದ್ರಿಂದ ಈ ಅಡುಗೆಗಳ ಟೇಸ್ಟ್ ಹೆಚ್ಚಾಗುತ್ತೆ. ಮಾರ್ಕೆಟ್‍ನಲ್ಲಿ ಬೆಳ್ಳುಳ್ಳಿ ಸೌಂಡ್ ಮಾಡುತ್ತಿದೆ. ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ (Garlic Rate) ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ. ಬಿಡಿಸಿದ ಬೆಳ್ಳುಳ್ಳಿ 540 ರೂ. ಆಗಿದ್ರೆ, ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ. ಇದೆ.

    ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ವರ್ಷ ಸರಿಯಾದ ಮಳೆಯಾಗಿಲ್ಲ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಹೀಗಾಗಿ ಬೆಳ್ಳುಳ್ಳಿ ಒಗ್ಗರಣೆ ಘಾಟು ಜೋರಾಗಿದೆ. ಬೆಳ್ಳುಳ್ಳಿ ಹೊಸ ಬೆಳೆ ಬರೋವರೆಗೂ ರೇಟ್ ಕಡಿಮೆಯಾಗೋ ಸಾಧ್ಯತೆಯಿಲ್ಲ. ಇದ್ರಿಂದಾಗಿ ಗೃಹಿಣಿಯರು ಅರ್ಧ ಕೆ.ಜಿ, ಒಂದು ಕೆಜಿ ಕೊಳ್ಳೋ ಕಡೆ 100 ಗ್ರಾಂ, 200 ಗ್ರಾಂ ಕೊಳ್ಳೋ ಹಾಗೆ ಆಗಿದೆ. ಇದನ್ನೂ ಓದಿ: ಗಂಡನ ಮೇಲೆ ಜಪಾನ್ ಮಹಿಳೆ ಕೋಪ – ಗೋಕರ್ಣ ಪೊಲೀಸರಿಗೆ ಪಜೀತಿ!

  • ಕಳೆದ ವಾರ 12 ಸಾವಿರ, ಇಂದು 2,000ಕ್ಕೆ ಕುಸಿದ ಬೆಲೆ – ರಸ್ತೆಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

    ಕಳೆದ ವಾರ 12 ಸಾವಿರ, ಇಂದು 2,000ಕ್ಕೆ ಕುಸಿದ ಬೆಲೆ – ರಸ್ತೆಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

    ಹಾವೇರಿ: ದಿಢೀರ್ ಬೆಳ್ಳುಳ್ಳಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಸುರಿದು ರೈತರು ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಎಪಿಎಂಸಿಯಲ್ಲಿ ನಡೆದಿದೆ.

    ರಾಣೇಬೆನ್ನೂರು ನಗರದ ಎಪಿಎಂಸಿಯಲ್ಲಿ ಕಳೆದ ವಾರ ಕ್ವಿಂಟಲ್‍ಗೆ 12,000 ರೂಪಾಯಿ ಬೆಳ್ಳುಳ್ಳಿ ಮಾರಾಟವಾಗಿತ್ತು. ಇವತ್ತು ಕ್ವಿಂಟಲ್‍ಗೆ ಎರಡು ಸಾವಿರ ರೂಪಾಯಿಗೆ ದರ ಕುಸಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿ ಸುರಿದು ಪ್ರತಿಭಟನೆ ಮಾಡಿದರು.

    ಪ್ರತಿಭಟನೆ ವೇಳೆ ಬೆಳ್ಳುಳ್ಳಿ ಮಾರಾಟಕ್ಕೆ ಬಂದಿದ್ದ ರೈತನ ತಾಯಿ ನಾಗಮ್ಮ ಅಸ್ವಸ್ಥಗೊಂಡಿದ್ದರು. ತಕ್ಷಣ ಅಸ್ವಸ್ಥ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

    ಸೂಕ್ತ ದರ ನೀಡುವಂತೆ ರೈತರ ಪಟ್ಟು ಹಿಡಿದು ರಸ್ತೆ ತಡೆ ನಡೆಸಿದ್ದರು. ಆಗ ಮಾಹಿತಿ ತಿಳಿದು ಸ್ಥಳಕ್ಕೆ ರಾಣೇಬೆನ್ನೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಬೆಳ್ಳುಳ್ಳಿ ಕದಿಯುತ್ತಿದ್ದ ಕಳ್ಳರಿಬ್ಬರ ಬಂಧನ

    ಬೆಳ್ಳುಳ್ಳಿ ಕದಿಯುತ್ತಿದ್ದ ಕಳ್ಳರಿಬ್ಬರ ಬಂಧನ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನ ಅನ್ನದಾತರಿಗೆ ಕಳ್ಳರ ಕಾಟಕ್ಕೆ ರಾತ್ರಿಯಿಡೀ ದೊಣ್ಣೆ ಹಿಡಿದುಕೊಂಡು ಬೆಳ್ಳುಳ್ಳಿ ಕಾಯುವ ಪರಿಸ್ಥಿತಿ ಬಂದಿತ್ತು. ಈಗ ಹಲಗೇರಿ ಪಿಎಸ್‍ಐ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಇಬ್ಬರು ಬೆಳ್ಳುಳ್ಳಿ ಕಳ್ಳರ ಬಂಧಿಸಿದ್ದಾರೆ.

    ಬಂಧಿತ ದೇವಲಪ್ಪ ಚಿಕ್ಕಮಾಗಡಿ ಅಲಿಯಾಸ್ ಲಮಾಣಿ 50 ವರ್ಷ ಮತ್ತು ಕರಬಸಪ್ಪ ಚಿಕ್ಕಮಾಗಡಿ ಅಲಿಯಾಸ್ ಲಮಾಣಿ 40 ವರ್ಷ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಮತ್ತು ಕಳ್ಳತನಕ್ಕೆ ಬಳಸಿದ್ದ ಒಂದು ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು

    ಕಳೆದ ಹತ್ತು ದಿನಗಳ ಹಿಂದೆ ಮಣಕೂರ ಗ್ರಾಮದ ರೈತರ ಜಮೀನಿನಲ್ಲಿ ರಾಶಿ ಮಾಡಲು ಹಾಕಿದ್ದ ವೇಳೆ ಬೆಳ್ಳುಳ್ಳಿ ಖದೀಮರು ಕದ್ದುಕೊಂಡು ಹೋಗಿದ್ದರು. ಇದರಿಂದ ರೈತರು ಕಳ್ಳರಿಗೆ ಹೆದರಿ ದೊಣ್ಣೆ ಹಿಡಿದುಕೊಂಡು ರಾತ್ರಿಯಿಡೀ ಬೆಳ್ಳುಳ್ಳಿ ಕಾವಲು ಕಾಯುತ್ತಿದ್ದರು. ಪೊಲೀಸರು ಈಗ ಕಳ್ಳರನ್ನು ಬಂಧಿಸಿದ್ದಕ್ಕೆ ಅನ್ನದಾತರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ. ಪಿಎಸ್‍ಐ ಸಿದ್ಧರೂಢ ಬಡಿಗೇರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

    ಬೆಳ್ಳುಳ್ಳಿ ಕದಿಯುತ್ತಿದ್ದಿದ್ದು ಏಕೆ?
    ಬೆಳ್ಳುಳ್ಳಿಗೆ ಈಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಪ್ರತಿ ಕ್ವಿಂಟಾಲ್ ಬೆಳ್ಳುಳ್ಳಿ ಕನಿಷ್ಟ 10 ಸಾವಿರದಿಂದ ಗರಿಷ್ಠ 18 ಸಾವಿರದವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳುಳ್ಳಿ ಮೇಲೆ ಖದೀಮರ ಕಣ್ಣು ಬಿದ್ದಿತ್ತು. ರಾತ್ರೋರಾತ್ರಿ ರೈತರ ಜಮೀನುಗಳಿಗೆ ಎಂಟ್ರಿ ಕೊಟ್ಟು ಖದೀಮರು ಬೆಳ್ಳುಳ್ಳಿ ಕದ್ದುಕೊಂಡು ಹೋಗುತ್ತಿದ್ದರು. ಇದರಿಂದಾಗಿ ರೈತರು ಬೆಳ್ಳುಳ್ಳಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರು.

  • ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು

    ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು

    ಹಾವೇರಿ: ತಾವು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ರೈತರು ದೊಣ್ಣೆ ಹಿಡಿದುಕೊಂಡು ಕುಳಿತ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.

    ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ರಕ್ಷಿಸಿಕೊಳ್ಳಲು ದೊಣ್ಣೆ ಹಿಡಿದುಕೊಂಡು ಕುಳಿತಿದ್ದಾರೆ. ತಾಲೂಕಿನ ನೂರಾರು ಹೆಕ್ಟರ್ ಪ್ರದೇಶದಲ್ಲಿ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ. ನಿರಂತರ ಮಳೆ, ಅಕಾಲಿಕ ಮಳೆ ಅದು ಇದು ಎಂದು ಎಲ್ಲ ಸಮಸ್ಯೆಗಳ ನಡುವೆಯೂ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ.

    ಬೆಳ್ಳುಳ್ಳಿಗೆ ಈಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಪ್ರತಿ ಕ್ವಿಂಟಾಲ್ ಬೆಳ್ಳುಳ್ಳಿ ಕನಿಷ್ಟ 10 ಸಾವಿರದಿಂದ ಗರಿಷ್ಠ 18 ಸಾವಿರದವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳುಳ್ಳಿ ಮೇಲೆ ಖದೀಮರ ಕಣ್ಣು ಬಿದ್ದಿದೆ. ರಾತ್ರೋರಾತ್ರಿ ರೈತರ ಜಮೀನುಗಳಿಗೆ ಎಂಟ್ರಿ ಕೊಟ್ಟು ಖದೀಮರು ಬೆಳ್ಳುಳ್ಳಿ ಕದ್ದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ರೈತರು ಈಗ ಬೆಳ್ಳುಳ್ಳಿ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ.

    ಈಗಾಗಲೇ ತಾಲೂಕಿನ ಕೂನಬೇವು, ಎರೆಕುಪ್ಪಿ ಸೇರಿದಂತೆ ಕೆಲವು ಕಡೆಗಳಲ್ಲಿ ರೈತರ ಜಮೀನಿನಲ್ಲಿ ರಾಶಿ ಮಾಡಲು ಹಾಕಿದ್ದ ಬೆಳ್ಳುಳ್ಳಿಯನ್ನು ಖದೀಮರು ಕದ್ದುಕೊಂಡು ಹೋಗಿದ್ದಾರೆ. ಬೆಳ್ಳುಳ್ಳಿ ಕಳುವಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ದಾಖಲಿಸಿದ್ದಾರೆ. ಆದರೆ ಕೆಲವು ರೈತರು ಪೊಲೀಸ್ ಠಾಣೆಗೆ ಅಲೆದಾಡೋದು ಬೇಡಪ್ಪಾ ಎಂದು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದೆರಡು ಬೆಳ್ಳುಳ್ಳಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದಂತೆಯೇ ರೈತರು ಸಹ ಫುಲ್ ಅಲರ್ಟ್ ಆಗಿದ್ದಾರೆ.

    ರಾಶಿ ಮಾಡಲು ಹಾಕಿರುವ ಬೆಳ್ಳುಳ್ಳಿ ಬಣವೆಗಳ ಬಳಿ ಗುಡಿಸಲು ಹಾಕಿಕೊಂಡು, ದೊಣ್ಣೆ ಹಿಡಿದುಕೊಂಡು ಕಾದು ಕುಳಿತಿದ್ದಾರೆ. ರೈತರ ಕುಟುಂಬದ ಸದಸ್ಯರು ಹಗಲು, ರಾತ್ರಿ, ಮಳೆ, ಚಳಿ ಎನ್ನದೇ ಕಳ್ಳರಿಗಾಗಿ ಕಾದು ಕುಳಿತಿದ್ದಾರೆ. ಐದಾರು ತಿಂಗಳು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿ ಕಳ್ಳರ ಪಾಲಾಗದಂತೆ ಕಾಪಾಡಲು ರೈತರು ಟೆಂಟ್ ಹಾಕಿಕೊಂಡು ಬೆಳ್ಳುಳ್ಳಿ ಫಸಲು ಕಾಯುತ್ತಿದ್ದಾಎ. ಆದಷ್ಟು ಬೇಗ ರಾಶಿ ಮಾಡಿ ಮಾರಾಟ ಮಾಡಬೇಕು ಎಂದರೆ ಮಳೆರಾಯನೂ ರೈತರ ಬೆಳ್ಳುಳ್ಳಿ ಒಣಗಲು ಬಿಡುತ್ತಿಲ್ಲ. ಇದು ರೈತರಿಗೆ ದೊಡ್ಡ ತಲೆನೋವಾಗಿದ್ದು, ಬೆಳ್ಳುಳ್ಳಿ ಕಾಯುವುದೇ ರೈತರಿಗೆ ದೊಡ್ಡ ಸಾಹಸದ ಕೆಲಸವಾಗಿಬಿಟ್ಟಿದೆ.