Tag: Garbage Dump

  • ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಚೆನ್ನೈ: ಹೆಣ್ಣುಮಗುವನ್ನು ಕಸದ ತೊಟ್ಟಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪೋಷಕರು ಬಿಟ್ಟು ಹೋಗಿರುವ ಘಟನೆ ವೆಲ್ಲೂರಿನಲ್ಲಿ ನಡೆದಿದೆ.

    ಮಗು ಅಳುತ್ತಿರುವ ಶಬ್ದವನ್ನು ಕೇಳಿ ಸ್ಥಳೀಯರು ಕಸದ ತೊಟ್ಟಿಯನ್ನು ಪರಿಶೀಲಿಸಿದಾಗ ಕಸದ ರಾಶಿಯ ಮಧ್ಯೆ ಮಗು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ವೆಲ್ಲೂರು ಉತ್ತರ ಠಾಣೆಯ ಪೊಲೀಸರಿಗೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಗು ಪತ್ತೆಯಾದ ಸ್ಥಳದ ಪಕ್ಕದಲ್ಲಿ ಬಟ್ಟೆಗಳಿರುವ ಸಣ್ಣ ಬ್ಯಾಗ್ ಕಂಡು ಬಂದಿದೆ. ಇದೀಗ ಮಗುವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಸದ್ಯ ಘಟನೆ ಕುರಿತಂತೆ ಪ್ರಾಥಮಿಕ ತನಿಖೆ ವೇಳೆ ಮಗುವಿಗೆ ಕೇವಲ ಎರಡ್ಮೂರು ದಿನವಾಗಿರಬಹುದು ಎಂದು ಶಂಕಿಸಲಾಗಿದ್ದು, ಇದೀಗ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದದ್ದಾರೆ ಹಾಗೂ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    POLICE JEEP

    ಇದೇ ರೀತಿ ಇತ್ತೀಚೆಗಷ್ಟೇ ನವಜಾತ ಶಿಶುವೊಂದನ್ನು ವಿಮಾನದ ಟಾಯ್ಲೆಟ್‍ನಲ್ಲಿ ಪೇಪರ್‌ನಿಂದ ಸುತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಎಸೆದು ಹೋದ ಘಟನೆ ಮಾರಿಷಸ್‍ನಲ್ಲಿ ನಡೆದಿತ್ತು. ಏರ್‍ಮರಿಷಸ್ ಏರ್‌ಬಸ್ 330-900 ವಿಮಾನವನ್ನು ತಪಾಸಣೆ ನಡೆಸುವ ವೇಳೆ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಆ ಬಳಿಕ ಈ ಸಂಬಂಧ ಮಡಗಾಸ್ಕರ್‌ನ ಮಹಿಳೆಯನ್ನು(20) ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದನ್ನೂ ಓದಿ: ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ

    ಬಂಧಿತ ಮಹಿಳೆ ನಾನು ಆ ಮಗವಿಗೆ ಜನ್ಮನೀಡಿಲ್ಲ ಎಂದು ವಾದಿಸುತ್ತಿದ್ದು, ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆ ಮಾಡಲು ಮುಂದಾಗಿದ್ದರು. ಅಂತರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮದ ಪ್ರಕಾರ 28 ವಾರದ ಬಳಿಕ ಗರ್ಭಿಣಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲದ ಕಾರಣ ಮಹಿಳೆ ಸುಳ್ಳು ಹೇಳಿರುವುದಾಗಿ ತಿಳಿಸಿ ಮಗು ತನ್ನದೇ ಎಂದು ಒಪ್ಪಿಕೊಂಡಳು. ನಂತ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

  • ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ಬುಟ್ಟಿಯಲ್ಲಿ 8ರ ಬಾಲಕಿ ಪತ್ತೆ- ಅತ್ಯಾಚಾರ ನಡೆದಿರುವ ಶಂಕೆ

    ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ಬುಟ್ಟಿಯಲ್ಲಿ 8ರ ಬಾಲಕಿ ಪತ್ತೆ- ಅತ್ಯಾಚಾರ ನಡೆದಿರುವ ಶಂಕೆ

    ಭುವನೇಶ್ವರ: 8 ವರ್ಷದ ಬಾಲಕಿಯೊಬ್ಬಳು ಕಸದ ಬುಟ್ಟಿಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ದುಷ್ಕರ್ಮಿಗಳು ಅತ್ಯಾಚಾರಗೈದು ಈ ರೀತಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿ ಕಸದ ರಾಶಿಯ ಮೇಲೆ ಪತ್ತೆಯಾಗಿದ್ದಾಳೆ. ಬಾಲಕಿ ದೇಹದ ಮೇಲೆ ಹಲವು ಗಾಯಗಳಾಗಿದ್ದು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ.

    ಕಸದ ರಾಶಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯನ್ನು ಅಪಹರಿಸಿ ನಂತರ ಅತ್ಯಾಚಾರವೆಸಗಿ ಕಸದ ಬುಟ್ಟಿಗೆ ಎಸೆದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ ಎಂದು ಶಂಕಿಸಲಾಗಿದೆ. ಈಗಾಗಲೇ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಬಾಲಕಿ ಕುಟುಂಬದವರ ಜೊತೆ ಮನೆಯಲ್ಲಿ ಮಲಗಿದ್ದಳು. ಆದರೆ ಸ್ಪಲ್ಪ ಹೊತ್ತಿನ ಬಳಿಕ ಆಕೆ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿ, ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಮರುದಿನ ಆಕೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ರಾಶಿಯಲ್ಲಿ ಪತ್ತೆಯಾಗಿದ್ದಾಳೆ.

    ಪೊಲೀಸರು ಪ್ರಾಥಮಿಕ ಹಂತದ ತನಿಖೆ ನಡೆಸಿದ್ದು, ಹಲವು ವಿಚಾರದ ಬಗ್ಗೆ ತಿಳಿದು ಬಂದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವೈದ್ಯಕೀಯ ವರದಿ ಬಂದ ಬಳಿಕ ಶಂಕೆ ನಿಜವಾದಲ್ಲಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಾಲಕಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನಾವು ವಿಧಿವಿಜ್ಞಾನ ತಂಡವನ್ನು ಘಟನಾ ಸ್ಥಳಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಅಳುವಿನಿಂದ ಬೇಸತ್ತು 25 ದಿನಗಳ ಹಸುಗೂಸನ್ನ ಕಸದ ತೊಟ್ಟಿಗೆ ಎಸೆದಳು ನಿರ್ದಯಿ ತಾಯಿ

    ಅಳುವಿನಿಂದ ಬೇಸತ್ತು 25 ದಿನಗಳ ಹಸುಗೂಸನ್ನ ಕಸದ ತೊಟ್ಟಿಗೆ ಎಸೆದಳು ನಿರ್ದಯಿ ತಾಯಿ

    ನವದೆಹಲಿ: ನವಜಾತ ಮಗು ನಿರಂತರವಾಗಿ ಅಳುತ್ತಿದ್ದುದನ್ನು ಕೇಳಲಾಗದೆ ತಾಯಿಯೊಬ್ಬಳು ಕಂದಮ್ಮನನ್ನು ಕಸದ ತೊಟ್ಟಿಗೆ ಎಸೆದ ಅಮಾವನೀಯ ಘಟನೆ ದೆಹಲಿಯಲ್ಲಿ ನಡೆದಿದೆ.

    ಆರೋಪಿ ತಾಯಿ ನೇಹಾಳನ್ನು ಶನಿವಾರದಂದು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಗುವನ್ನ ನೋಡಿಕೊಳ್ಳಲು ಬೇಸತ್ತು ಕೋಪದಿಂದ ಈ ರೀತಿ ಮಾಡಿದ್ದಾಗಿ ಆಕೆ ಪೊಲೀಸರಿಗೆ ಹೇಳಿದ್ದಾಳೆ. ಕಸದ ತೊಟ್ಟಿಗೆ ಎಸೆಯಲ್ಪಟ್ಟಿದ್ದ 25 ದಿನಗಳ ಹಸುಗೂಸನ್ನ ರಕ್ಷಣೆ ಮಾಡಲಾಯಿತಾದರೂ ಮಗು ಸಾವನ್ನಪ್ಪಿದೆ.

    ದೆಹಲಿಯ ವಿನೋದ್‍ಪುರ್‍ನಲ್ಲಿ ಮಗು ಕಾಣೆಯಾದ ಬಗ್ಗೆ ಕುಟುಂಬಸ್ಥರು ಶುಕ್ರವಾರದಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದರು.

    ಮಗುವನ್ನು ಹುಡುಕುವ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು, ಮಹಿಳೆ ಕಸದ ತೊಟ್ಟಿಯಲ್ಲಿ ಏನನ್ನೋ ಎಸೆಯುತ್ತಿದ್ದುದನ್ನು ನೋಡಿದ್ದೆವು ಎಂದು ಹೇಳಿದ ಬಳಿಕ ನೇಹಾ ಮೇಲೆ ಅನುಮಾನ ಮೂಡಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಂತರ ವಿಚಾರಣೆ ನಡೆಸಿದಾಗ ಆರೋಪಿ ನೇಹಾ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಮಗುವನ್ನ ಎಸೆದ ಸ್ಥಳದ ಬಗ್ಗೆ ಬಹಿರಂಗಪಡಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಜೀವಂತವಾಗಿ ಪತ್ತೆಯಾಗಿತ್ತು. ಕೂಡಲೇ ಕಂದಮ್ಮನನ್ನು ಜಿಟಿಬಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.