Tag: Garbage Disposal

  • ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್

    ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್

    ಬೆಂಗಳೂರು: ಬೆಂಗಳೂರು (Bengaluru) ಕಸ ಅನ್ನೋದೇ ಒಂದು ಮಾಫಿಯಾ, ಶಾಸಕರೇ ನನಗೆ ಬ್ಲ್ಯಾಕ್‌ಮೇಲ್ ಮಾಡ್ತಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ (D.K Shivakumar) ವಿಧಾನ ಪರಿಷತ್‌ನಲ್ಲಿ ಆರೋಪಿಸಿದ್ದಾರೆ.

    ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ (Congress) ನಾಗರಾಜ್ ಯಾದವ್ ಬೆಂಗಳೂರು ಕಸದ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಡಿಸಿಎಂ, ಕಸ ಅನ್ನೋದು ಮಾಫಿಯಾ, ಕಸದ ವಿಚಾರವಾಗಿ ಬೆಂಗಳೂರು ಶಾಸಕರುಗಳೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ. ಎಲ್ಲಾ ಪಾರ್ಟಿಯವರು‌ ಇದ್ದಾರೆ. ಕಸ ವಿಲೇವಾರಿ (Garbage Disposal) 800 ಕೋಟಿ ರೂ. ಅಂತೆ. ನನಗೆ ಶಾಕ್ ಆಯ್ತು ಇದನ್ನು ಕೇಳಿ. ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಗಾಡಿ ಹಾಗೆ ನಿಂತಿದೆ ಎಂದು ತಿಳಿಸಿದರು.

    ಬೆಂಗಳೂರು ವ್ಯಾಪ್ತಿಯಿಂದಲೇ ಕಸ ಹೋಗಬೇಕು ಅನ್ನೋದು ನನ್ನ ಇಚ್ಚೆ. ಇದಕ್ಕಾಗಿ ಬೆಂಗಳೂರು ಹೊರಗೆ ಕಸ ಹಾಕಲು ಜಾಗ ಹುಡುಕುತ್ತಿದ್ದೇವೆ. ತಮಿಳುನಾಡು, ಅಂಧ್ರ ಪ್ರದೇಶ, ದೆಹಲಿಯಲ್ಲಿ ವ್ಯವಸ್ಥೆ ನೋಡಿದ್ದೇನೆ. ಕಸದ ಸಮಸ್ಯೆಗೆ ಪರಿಹಾರ ಮಾಡಲು ಕ್ರಮವಹಿಸುತ್ತೇನೆ ಎಂದರು. ಇದೇ ವೇಳೆ ಬಿಜೆಪಿ‌ ಶಾಸಕ ರಾಮಮೂರ್ತಿ ಹೇಳಿಕೆ ಪ್ರಸ್ತಾಪ ಮಾಡಿದ ಡಿಕೆಶಿ, ಯಾರೋ ಮಹಾನ್ ವ್ಯಕ್ತಿ ಟೆಂಡರ್ ಕರೆಯದೇ ಹೋದ್ರು ಡಿ.ಕೆ ಶಿವಕುಮಾರ್ 15 ಸಾವಿರ ಕೋಟಿ ಹೊಡೆದಿದ್ದಾನೆ ಎಂದು ಸುದ್ದಿಗೋಷ್ಟಿ ಮಾಡಿದ್ರು ಎಂದು ಶಾಸಕರ ವಿರುದ್ದ ಕಿಡಿಕಾರಿದ್ದಾರೆ.

  • ಗ್ರಾಮ ಪಂಚಾಯ್ತಿ ಎಡವಟ್ಟು – ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ

    ಗ್ರಾಮ ಪಂಚಾಯ್ತಿ ಎಡವಟ್ಟು – ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ

    ಮಡಿಕೇರಿ: ಹಿಂದೂ ಸಂಪ್ರದಾಯದ ಪ್ರಕಾರ ಯಾರೇ ಸತ್ತರೂ ಆ ಮೃತದೇಹಕ್ಕೆ ಒಮ್ಮೆ ಶವಸಂಸ್ಕಾರ ಮಾಡಿ ಮುಕ್ತಿ ಕಾಣಿಸಲಾಗುತ್ತೆ. ಆದರೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಮಾತ್ರ ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಹೌದು. ಇದನ್ನು ಬಗ್ಗೆ ತಿಳಿದರೆ ವಿಚಿತ್ರ ಅನಿಸುತ್ತೆ. ಎರಡೆರಡು ಬಾರಿ ಯಾಕೆ ಶವಸಂಸ್ಕಾರ ಮಾಡಿದರು ಎಂಬ ಪ್ರಶ್ನೆ ಕೂಡ ತಲೆಗೆ ಬರುತ್ತೆ. ಅಸಲಿಗೆ ಇದಕ್ಕೆ ಕಾರಣ ಗ್ರಾಮ ಪಂಚಾಯ್ತಿಯ ಎಡವಟ್ಟು. ಕಳೆದ ಗುರುವಾರವಷ್ಟೇ ನಾಪೋಕ್ಲು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಗ್ರಾಮದ ಕಸವಿಲೇವಾರಿ ಮಾಡುವುದಕ್ಕಾಗಿ ಹಿಂದೂ ರುದ್ರ ಭೂಮಿಯಲ್ಲಿ ಬೃಹತ್ ಗುಂಡಿ ತೆಗೆದಿತ್ತು. ಈ ವೇಳೆ ಭೂಮಿಯಲ್ಲಿ ಸಿಕ್ಕ ಶವಗಳನ್ನು ಗುಂಡಿತೆಗೆದ ಮಣ್ಣಿನಡಿಯಲ್ಲಿ ಹಾಕಿ ಮುಚ್ಚಲಾಗಿತ್ತು.

    ಪಂಚಾಯತ್ ವಿರುದ್ಧ ಪ್ರಕರಣ ದಾಖಲಾಗಿ ಆ ಗುಂಡಿಯನ್ನು ಪುನಃ ಮುಚ್ಚುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಒಂದು ಶವದ ಇಡೀ ಅಸ್ಥಿಪಂಜರ ದೊರೆತಿತ್ತು. ಹೀಗಾಗಿ ಆ ಅಸ್ಥಿಪಂಜರಕ್ಕೆ ಪುನಃ ಇಂದು ಹಿಂದೂ ಸಂಪ್ರದಾಯಂತೆ ಶವಸಂಸ್ಕಾರ ನೆರವೇರಿಸಲಾಯಿತು. ಆದರೆ ಒಂದೇ ಶವಕ್ಕೆ ಎರಡೆರಡು ಬಾರಿ ಸಂಸ್ಕಾರ ಮಾಡುವಂತೆ ಮಾಡಿದ ಪಂಚಾಯ್ತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ತಪ್ಪಿಗೆ ರುದ್ರ ಭೂಮಿಯಲ್ಲಿವ ಶವವನ್ನು ಹೊರತೆಗೆದರಲ್ಲ ಎಂದು ಕಿಡಿಕಾರಿದ್ದಾರೆ.

  • ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

    ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

    ಗದಗ: ಜಿಲ್ಲೆಯ ಸ್ವಚ್ಛತಾ ಯುವಸೇನೆ ತಂಡದ ಯುವಕರು ಪ್ರತಿ ರವಿವಾರ ಸ್ವಚ್ಛತಾ ಆಂದೋಲನಕ್ಕೆ ಮುಂದಾಗಿದ್ದಾರೆ.

    ಬೇರೆ ಬೇರೆ ಕಾಲೇಜಿನ ಸ್ನೇಹಿತರೆಲ್ಲ ಸೇರಿಕೊಂಡು ಈ ಒಂದು ಟೀಮ್ ಮಾಡಿಕೊಂಡಿದ್ದಾರೆ. ಗದಗ ಬೆಟಗೇರಿ ಅವಳಿ ನಗರದ ಸ್ವಚ್ಛ ಹಾಗೂ ಸೌಂದರ್ಯಕ್ಕಾಗಿ ಈ ಯುವಪಡೆ ಸುಂದರ ಕನಸು ಕಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ವಾರಗಳಿಂದ ನಗರದ ಪ್ರಮುಖ ಬೀದಿಗಳು, ಗಾರ್ಡ್‍ಗಳು ಮತ್ತು ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗುತ್ತಿದೆ.

    ಸುಮಾರು 30 ವಿದ್ಯಾರ್ಥಿಗಳು ನಿಸರ್ಗ ಯುವಪಡೆಯಲ್ಲಿ ಇದ್ದಾರೆ. ಪ್ರತಿ ರವಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸ್ವಚ್ಛತೆಯ ಶ್ರಮದಾನ ಮಾಡುತ್ತಿದ್ದಾರೆ. ಸಲಿಕೆ, ಬುಟ್ಟೆ, ಗುದ್ದಲಿ ಹಾಗೂ ಇತರೆ ಸಲಕರಣೆಗಳನ್ನು ಹಿಡಿದು ಕ್ಲೀನ್ ಮಾಡುವ ಮೂಲಕ ಕಸ ವಿಲೇವಾರಿ ಬಗ್ಗೆ ಸ್ಥಳೀಯರಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

    ಜನರು ಸ್ವಚ್ಛವಾಗಿ ಆರೋಗ್ಯವಾಗಿರಬೇಕು, ರೋಗರುಜಿನಗಳಿಂದ ದೂರವಿರಬೇಕು, ನಗರ ಸೌಂದರ್ಯ ಹೆಚ್ಚಿಸಬೇಕೆಂಬ ಉದ್ದೇಶ ನಮ್ಮದಾಗಿದೆ. ನಮ್ಮ ಜೊತೆ ಸ್ಥಳೀಯರು ಕೈಜೋಡಿಸಿ ಪ್ರೋತ್ಸಾಹಿಸಬೇಕು ಎಂದು ಸ್ವಚ್ಛತಾ ಯುವಪಡೆಯ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

  • ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು: ಬಿಬಿಎಂಪಿ ಬೆಂಗಳೂರಿಗರಿಗೆ ಶಾಕ್ ಕೊಟ್ಟಿದ್ದು, ನಗರದಲ್ಲಿ ಇನ್ಮುಂದೆ ಕಸ ವಿಲೇವಾರಿಗಾಗಿ ಶೇ. 15ರಷ್ಟು ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದೆ.

    ಹೌದು, ಮಹಾನಗರ ಜನರು ಮೇಲೆ ಬಿಬಿಎಂಪಿ ಕೌಸ್ಸಿಲ್ ಆಸ್ತಿಯ ವಿಸ್ತೀರ್ಣ ಆಧರಿಸಿ ತೆರಿಗೆ ಹೆಚ್ಚಳ ಮಾಡುತ್ತಿದೆ. ಕಳೆದ 7 ವರ್ಷಗಳಿಂದ ಘನ ತ್ಯಾಜ್ಯ ನಿರ್ವಹಣೆ ಮೇಲಿನ ತೆರಿಗೆ ಹೆಚ್ಚಳ ಮಾಡಿಲ್ಲ. ಲೆಕ್ಕ ಪರಿಶೋಧಕರ ಆಕ್ಷೇಪವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ಸ್ಥಾಯಿ ಸಮಿತಿ ಸಲಹೆ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳಲಿದೆ ಅಂತಾ ಪಾಲಿಕೆಯ ಅರೋಗ್ಯ ಮತ್ತು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ.

    ಇದುವರೆಗೆ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಸದ ಮೇಲೆ ತೆರಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಆಸ್ತಿ ವಿಸ್ತೀರ್ಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಈ ಕುರಿತು ಕೌನ್ಸಿಲ್ ನಲ್ಲಿ ಚರ್ಚೆ ನಡೆದು ಒಪ್ಪಿಗೆ ಪಡೆದರೆ ಸಾರ್ವಜನಿಕರು ಶೇ.15ರಷ್ಟು ಹೆಚ್ಚಿನ ಕಸದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ತೆರಿಗೆ ಹೆಚ್ಚಳಕ್ಕೆ ವಿರೋಧ: ಬಿಬಿಎಂಪಿ ತೆರಿಗೆ ಹೆಚ್ಚಳ ಪ್ರಸ್ತಾವನೆಗೆ ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆರಿಗೆ ಹೆಚ್ಚಳದಿಂದ ಶಾಲಾ ಕಾಲೇಜುಗಳು, ನರ್ಸಿಂಗ್ ಹೋಂಗಳು, ಕಲ್ಯಾಣ ಮಂಟಪಗಳು, ಕೈಗಾರಿಕೆಗಳು, ಟೆಕ್‍ಪಾರ್ಕ್‍ಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಿಬಿಎಂಪಿ ಈ ನಿರ್ಧಾರ ವಾಪಸ್ ಪಡೆಯದೆ ಹೋದರೆ ಅಹೋರಾತ್ರಿ ಧರಣಿಯ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಬಿಬಿಎಂಪಿ ಕಸ ವಿಲೇವಾರಿ ಮಾಡಲು ಅಧಿಕ ವೆಚ್ಚ ಮಾಡುತ್ತಿದ್ದು, ಪ್ರಸ್ತುತ ಸಾರ್ವಜನಿಕರ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಕಸ ನಿರ್ವಹಣೆ ಸಮಸ್ಯೆ ನಗರದಲ್ಲಿ ಪ್ರಮುಖ ಸಮಸ್ಯೆ ಆಗಿರುವುದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೇ ಇದುವರೆಗೆ ಬಿಬಿಎಂಪಿ ಬಾಡಿಗೆ ನೀಡಿದ ಕಟ್ಟಡಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹೊಸ ಪ್ರಸ್ತಾವನೆಯಲ್ಲಿ ರದ್ದು ಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ರಾಜಸ್ಥಾನ ಮಾದರಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಬಿಬಿಎಂಪಿ ತೆರಿಗೆ ಹೆಚ್ಚಳ ನಿರ್ಧಾರದಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಹೆಚ್ಚಳವಾಗಲಿದೆ. ಅಲ್ಲದೇ ನಗರದಲ್ಲಿ ವಾಸಿಸುತ್ತಿರುವ ಗಣ್ಯರಿಗೂ ತೆರಿಗೆ ಹೆಚ್ಚಳ ಬಿಸಿ ತಟ್ಟಲಿದೆ.