Tag: Ganesha viasarjan

  • ಗಣೇಶ ವಿಸರ್ಜನೆ ವೇಳೆ ದೋಣಿ ದುರಂತ – 11 ಮಂದಿ ದುರ್ಮರಣ

    ಗಣೇಶ ವಿಸರ್ಜನೆ ವೇಳೆ ದೋಣಿ ದುರಂತ – 11 ಮಂದಿ ದುರ್ಮರಣ

    ಭೋಪಾಲ್: ಇಂದು ಬೆಳಗ್ಗೆ ಗಣೇಶ ವಿಸರ್ಜನೆ ವೇಳೆಯಲ್ಲಿ ದೋಣಿ ದುರಂತ ನಡೆದು 11 ಮಂದಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಖಟ್ಲಾಪುರ ಘಾಟ್ ಬಳಿ ನಡೆದಿದೆ.

    ಮುಂಜಾನೆ 4.30ರ ಹೊತ್ತಿಗೆ ಖಟ್ಲಾಪುರ ಘಾಟ್ ಬಳಿಯ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು 16 ಮಂದಿ ದೋಣಿಯಲ್ಲಿ ತೆರಳಿದ್ದರು. ಆದರೆ ಆಕಸ್ಮಿಕವಾಗಿ ದೋಣಿ ಪಲ್ಟಿಯಾಗಿ ಅದರಲಿದ್ದವರು ನೀರಿಗೆ ಬಿದ್ದಿದ್ದಾರೆ. ಈ ಬಗ್ಗೆ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತಂಡ ಸ್ಥಳಕ್ಕೆ ಆಗಮಿಸಿ 16 ಮಂದಿಯಲ್ಲಿ ಐವರನ್ನು ರಕ್ಷಣೆ ಮಾಡಿದ್ದು, 11 ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಖಿಲ್ ಪಟೇಲ್ ಹೇಳಿದ್ದಾರೆ.

    ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡಾ ಘಟನಾ ಸ್ಥಳದಲ್ಲಿ ಇರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

    ಮಧ್ಯ ಪ್ರದೇಶ ಸಚಿವ ಪಿ. ಸಿ. ಶರ್ಮಾ ಅವರು ದೋಣಿ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದೊಂದು ದುರದೃಷ್ಟಕರ ಸಂಗತಿ, ಜಿಲ್ಲಾಧಿಕಾರಿಗಳಿಂದ ಪರಿಹಾರವನ್ನು ವಿತರಿಸಲಾಗುವುದು ಎಂದಿದ್ದಾರೆ. ಅಲ್ಲದೆ ಈ ದುರಂತ ಪ್ರಕರಣ ಸಂಬಂಧ ತನಿಖೆ ನಡೆಸಲು ಸಚಿವರು ಸೂಚಿಸಿದ್ದಾರೆ.