Tag: Ganesha idol

  • ಗಣೇಶ ವಿಗ್ರಹಕ್ಕೆ ಅಪಮಾನ – ಘಟನೆ ಖಂಡಿಸಿ ಇಂದು ಬೇಲೂರು ಬಂದ್

    ಗಣೇಶ ವಿಗ್ರಹಕ್ಕೆ ಅಪಮಾನ – ಘಟನೆ ಖಂಡಿಸಿ ಇಂದು ಬೇಲೂರು ಬಂದ್

    ಹಾಸನ: ಐತಿಹಾಸಿಕ ಬೇಲೂರಿನಲ್ಲಿ (Belur) ಗಣೇಶನ ವಿಗ್ರಹಕ್ಕೆ (Ganesha Idol) ಚಪ್ಪಲಿ (Slippers) ಹಾರ ಹಾಕಿ ಅಪಮಾನ ಮಾಡಿದ ಘಟನೆಯನ್ನು ಖಂಡಿಸಿ ಇಂದು ಬೇಲೂರು ಬಂದ್‌ಗೆ ಕರೆ ನೀಡಲಾಗಿದೆ.

    ಹಿಂದೂಪರ ಸಂಘಟನೆಗಳಿಂದ ಬೇಲೂರು ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಸೆ.20ರ ರಾತ್ರಿ ಅಸ್ವಸ್ಥ ಮಹಿಳೆ ದೇವಾಲಯದೊಳಗೆ ತೆರಳಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದಳು. ಹಾಸನ ನಗರದ ವಿಜಯನಗರ ಬಡಾವಣೆಯ ಮಹಿಳೆ ಲೀಲಮ್ಮ ಕೃತ್ಯವೆಸಗಿದ್ದಾಳೆ. ಈಗಾಗಲೇ ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಸ್ವಸ್ಥ ಮಹಿಳೆಯ ಕೃತ್ಯದ ಹಿಂದೆ ಯಾರಿದ್ದಾರೆಂದು ತನಿಖೆ ನಡೆಸುವಂತೆ ಒತ್ತಾಯಿಸಿ ಬಂದ್‌ಗೆ ಕರೆ ಕೊಡಲಾಗಿದೆ. ಇದನ್ನೂ ಓದಿ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ – ಮಹಿಳೆ ಪೊಲೀಸರ ವಶಕ್ಕೆ

    ಬಂದ್ ಹಿನ್ನೆಲೆ ಪಟ್ಟಣದಲ್ಲಿ ಬಹುತೇಕ ಬಂದ್ ವಾತಾವರಣ ನಿರ್ಮಾಣವಾಗಿದೆ. ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ 10:30ರ ಬಳಿಕ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

  • Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

    Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

    ಹಾಸನ: ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ (Ganesha Idol) ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ಹಾಸನ (Hassan) ಜಿಲ್ಲೆ, ಬೇಲೂರು (Belur) ಪಟ್ಟಣದಲ್ಲಿ ನಡೆದಿದೆ.

    ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳು ನಡೆಯುತ್ತದೆ. ಪ್ರತಿನಿತ್ಯ ವ್ಯಾಪಾರಿಗಳು ಬೆಳಗ್ಗೆ ಗಣೇಶಮೂರ್ತಿಗೆ ಕೈಮುಗಿದು ವ್ಯಾಪಾರ ಆರಂಭಿಸುತ್ತಾರೆ. ಶನಿವಾರ ರಾತ್ರಿ ಪುರಸಭೆ ಗೇಟ್‌ಗೆ ಬೀಗ ಹಾಕಿಕೊಂಡು ತೆರಳಿದ್ದರು. ಇಂದು ಬೆಳಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

    ಗೇಟ್ ತೆಗೆದು ದೇವರಿಗೆ ಚಪ್ಪಲಿ ಹಾರ ಹಾಕಿರುವ ದುರುಳರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಮು ಸೌಹಾರ್ದ ಕದಡಲು ಕೆಲವು ಕಿಡಿಗೇಡಿಗಳಿ ಇಂತಹ ದುಷ್ಕೃತ್ಯ ಎಸಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಘಟನೆ ನಡೆದಿದೆ. ಇದನ್ನೂ ಓದಿ: ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಕೆಶಿ

  • Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

    Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

    ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭ ಪ್ರಾರಂಭಿಸುವ ಮೊದಲು ಯಾವುದೇ ಅಡಚಣೆ ಅಥವಾ ತೊಂದರೆ ಆಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣೇಶನಿಗೆ ಹಲವು ನಾಮ. ಗಜಾನನ, ಗಣಪತಿ, ವಕ್ರತುಂಡ, ವಿನಾಯಕ, ಏಕದಂತ, ಗಣೇಶ ಹೀಗೆ ಹತ್ತು ಹಲವು ಹೆಸರುಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತದೆ. ಅವುಗಳಲ್ಲಿ ಏಕದಂತ ಎನ್ನುವ ಹೆಸರೂ ಒಂದು. ಗಣೇಶನ ಒಂದು ದಂತ ಮುರಿದಿರುವ ಕಾರಣ ಆತನನ್ನು ಏಕದಂತ ಎಂದು ಕರೆಯಲಾಗುತ್ತದೆ. ಗಣೇಶ ಏಕದಂತನಾಗಲು ಕಾರಣವೇನು? ಪುರಾಣದ ಕಥೆ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ:
    ಒಮ್ಮೆ ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ್‌ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

    ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ. ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವನ್ನು ನಾನು ಶೀಘ್ರವಾಗಿ ಭೇಟಿ ಆಗಲೇಬೇಕು ಎಂದು ಪರಶುರಾಮರು ಗಣೇಶನಿಗೆ ತಿಳಿಸಿದರು. ಆದರೆ ಗಣೇಶ ಅವರನ್ನು ಒಳಗೆ ಬಿಡುವುದಿಲ್ಲ.

    ಇದರಿಂದ ಕೋಪಗೊಂಡ ಪರಶುರಾಮರು ನನ್ನನ್ನು ಒಳಗೆ ಬಿಡದಿದ್ದರೆ ನನ್ನೊಂದಿಗೆ ಯುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ನಾನು ಗೆದ್ದರೆ ಶಿವನನ್ನು ಭೇಟಿಯಾಗಲು ನನ್ನನ್ನು ಒಳಗೆ ಬಿಡಬೇಕು ಎಂದು ಪರಶುರಾಮರು ಗಣೇಶನಿಗೆ ಸವಾಲೆಸೆದರು. ಗಣೇಶನು ಯುದ್ಧದ ಸವಾಲನ್ನು ಸ್ವೀಕರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದ ಸಮಯದಲ್ಲಿ, ಪರಶುರಾಮರು ತಮ್ಮ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದರು. ಇದನ್ನು ಎದುರಿಸಲು ಗಣೇಶ ತನ್ನ ಎಡಗಡೆಯ ದಂತವನ್ನು ಬಳಸಿದರು. ಇದರ ಪರಿಣಾಮವಾಗಿ ಗಣೇಶನ ದಂತ ಮುರಿಯುತ್ತದೆ. ಗಣೇಶನ ಒಂದು ಹಲ್ಲು ಮುರಿದ ಕಾರಣ ಆತನನ್ನು ಏಕದಂತ ಎಂದು ಕರೆಯುತ್ತಾರೆ.

    ಗಣೇಶನಷ್ಟೇ ಪರಶುರಾಮರು ಯುದ್ಧದಲ್ಲಿ ನಿಪುಣರಾಗಿರದ್ದರು. ಇವರಿಬ್ಬರ ನಡುವಿನ ಯುದ್ಧ ಎನ್ನುವಂತಹದ್ದು ಭಯಾನಕವಾಗಿದ್ದು, ಈ ಯುದ್ಧದಲ್ಲಿ ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ಗಣೇಶನು ಒಂದೇ ದಂತವನ್ನು ಹೊಂದಿದ್ದು, ಏಕದಂತ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾನೆ.

    ಮಹಾಭಾರತದ ಕಥೆ:
    ಮತ್ತೊಂದು ಕಥೆಯ ಪ್ರಕಾರ, ಮಹಾಭಾರತವನ್ನು ಗಣೇಶ ಮಹಾಭಾರತವನ್ನ ಬರೆಯುವ ಸಮಯದಲ್ಲಿ, ಮಹರ್ಷಿ ವೇದವ್ಯಾಸರು ಗಣೇಶ ನಾನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗಬೇಕು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿರುತ್ತಾರೆ. ಇದಕ್ಕೆ ಒಪ್ಪಿ ಗಣೇಶ ಬರೆಯುತ್ತಿರುತ್ತಾನೆ. ಆದರೆ ಬರೆಯುವಾಗ ಯಾವುದೋ ಸಮಸ್ಯೆ ಎದುರಾಗುತ್ತದೆ. ತಕ್ಷಣ ಗಣೇಶ ತನ್ನ ದಂತವನ್ನು ಮುರಿದು ಅದರಲ್ಲಿ ಬರೆಯಲು ಆರಂಭಿಸಿದ ಎನ್ನುವ ನಂಬಿಕೆ ಇದೆ.

  • ಈ ಗಣೇಶೋತ್ಸವಕ್ಕೆ ವಿಘ್ನ ವಿನಾಶಕನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ…

    ಈ ಗಣೇಶೋತ್ಸವಕ್ಕೆ ವಿಘ್ನ ವಿನಾಶಕನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ…

    ಳೆದ ಕೆಲವು ವರ್ಷಗಳಿಂದ ಗಣೇಶೋತ್ಸವಕ್ಕೆ ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಾರೆ. ಅದರಲ್ಲೂ ಕೆಲವರು ಪಿಒಪಿ ಬಳಸಿ ಬಳಸಿ ತಯಾರಿಸಿರುವ ಗಣೇಶನನ್ನು ಪೂಜಿಸುತ್ತಾರೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಮಣ್ಣಿನ ಗಣಪತಿಯನ್ನೇ ಪೂಜಿಸಬೇಕೆಂದು ಕಡ್ಡಾಯ ಸೂಚನೆಯೂ ಇದೆ.

    ಅದರಂತೆ ಬಾಲ್ಯದಲ್ಲಿ ಗಣೇಶನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸುವುದೆಂದರೆ ಒಂದು ಖುಷಿ. ಆದರೆ ಈಗ ಮಣ್ಣಿನ ಗಣೇಶನ್ ವಿಗ್ರಹವನ್ನು ದುಡ್ಡು ಕೊಟ್ಟು ತಂದು ನಾವೆಲ್ಲ ಪೂಜಿಸುತ್ತಿದ್ದೇವೆ. ತಪ್ಪೇನಿಲ್ಲ ಆದರೆ ಎಲ್ಲರಲ್ಲಿಯೂ ಒಂದು ಕಲೆ ಇರುತ್ತದೆ. ಅದಕ್ಕೆ ಈ ಬಾರಿ ಗಣೇಶೋತ್ಸವಕ್ಕೆ ನಿಮ್ಮ ಕೈಯಿಂದಲೇ ಗಣೇಶ ವಿಗ್ರಹವನ್ನು ಮಾಡಿ, ಪೂಜಿಸಿ ಮಾಡೋದು ಸುಲಭವೇನಲ್ಲ, ಆದರೆ ಪ್ರಯತ್ನ ಪಡಬಹುದು. ಅದಕ್ಕೆ ಇಲ್ಲಿ ಸರಳವಾಗಿ, ಸುಲಭವಾಗಿ ಗಣಪತಿ ವಿಗ್ರಹವನ್ನು ತಯಾರಿಸುವ ವಿಧಾನವನ್ನು ತಿಳಿಸಿಕೊಡಲಾಗುತ್ತಿದೆ.

    ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಗಣೇಶನ ಮೂರ್ತಿಯ ಅಳತೆಯನ್ನು ನಿರ್ಧರಿಸಿಕೊಳ್ಳಿ. ಇಲ್ಲಿ ಚಿಕ್ಕ ಗಣೇಶನ ಮೂರ್ತಿಯನ್ನು ಮಾಡುವ ವಿಧಾನವನ್ನು ವಿವರಿಸಲಾಗಿದೆ.

    ಮೊದಲಿಗೆ ಗಣೇಶನ ವಿಗ್ರಹವನ್ನು ತಯಾರಿಸಲು ಮಣ್ಣನ್ನು ತೆಗೆದುಕೊಳ್ಳಿ, ನೀರು ಹಾಗೂ ಒಂದು ರಟ್ಟಿನ ಬೋರ್ಡ್ ಅನ್ನು ತೆಗೆದುಕೊಳ್ಳಿ. ಮೂರ್ತಿ ಮಾಡುವ ಹದಕ್ಕೆ ತಕ್ಕಂತೆ ಮಣ್ಣನ್ನು ಚೆನ್ನಾಗಿ ಕಲಸಿಕೊಳ್ಳಿ.

    – ಪ್ರಾರಂಭದಲ್ಲಿ ಗಣೇಶನ ಕೆಳಗಡೆ ಆಧಾರಕ್ಕಾಗಿ ವೃತ್ತಾಕಾರದ ಒಂದು ಅಗಲವಾದ ತಟ್ಟೆಯ ರೀತಿಯಲ್ಲಿ ತಯಾರಿಸಿಕೊಳ್ಳಿ.

    – ಅದರ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಮಾಡಿಕೊಂಡು ತಯಾರಿಸಿದ ತಟ್ಟೆಯ ಮೇಲೆ ನಿಲ್ಲಿಸಿ. (ಚೂಪಾಕಾರದ ಕಂಬ ಎನ್ನಬಹುದು)

    – ಉದ್ದದ ಕೊಳವೆಯ ರೀತಿಯಲ್ಲಿ ಸೊಂಡಿಲಿನ ಆಕಾರಕ್ಕೆ ಬರುವಂತೆ ತಯಾರಿಸಿ. ಅದನ್ನು ಸೂಪರದ ಕಂಬಕ್ಕೆ ಮಧ್ಯಭಾಗದಲ್ಲಿ ಅಂಟಿಸಿಕೊಳ್ಳಿ. ನಂತರ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಕಿವಿಯ ರೀತಿಯಲ್ಲಿ ತಯಾರಿಸಿ ಎರಡು ಬದಿಗೆ ಅಂಟಿಸಿಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಮೂರ್ತಿಯನ್ನು ಸರಿಪಡಿಸಿಕೊಳ್ಳಿ.

    – ನಂತರ ಚಿಕ್ಕ ಚಿಕ್ಕ 4 ಕಡಲೆಕಾಳಿನಂತೆ ಅಥವಾ ಅದೇ ಆಕಾರದಲ್ಲಿ ದೊಡ್ಡ ಗಾತ್ರದಲ್ಲಿ ನಾಲ್ಕು ಬೇರೆಬೇರೆ ಭಾಗಗಳನ್ನು ತಯಾರಿಸಿ. ಅದನ್ನು ಚಿತ್ರದಲ್ಲಿ ತೋರಿಸುವಂತೆ ಅಂಟಿಸಿಕೊಳ್ಳಿ.

    – ಕೊನೆಗೆ ಟೂತ್ ಪಿಕ್ ನಿಂದ ಕಣ್ಣು, ಹುಬ್ಬು ಹಾಗೂ ಗಂಧವನ್ನು ಬರೆದುಕೊಳ್ಳಿ.

    ಇದೇ ರೀತಿ ಹಂತಗಳನ್ನು ಪಾಲಿಸಿ ನೀವು ವಿಭಿನ್ನ ರೀತಿಯಲ್ಲಿ ದೊಡ್ಡ ಗಣೇಶನ ವಿಗ್ರಹವನ್ನು ತಯಾರಿಸಬಹುದು. ಇದು ನಿಮಗ ಸ್ವಂತ ಕೈಯಿಂದಲೂ ತಯಾರಾಗಿರುತ್ತದೆ ಹಾಗೂ ಅಂಗಡಿ ಇಂದ ಖರೀದಿಸಿ ತಂದ ಗಣೇಶನ ವಿಗ್ರಹಕ್ಕೂ ವಿಭಿನ್ನವಾಗಿರುತ್ತದೆ. ಎಲ್ಲದಕ್ಕೂ ಮಿಗಿಲಾಗಿ ನಿಮ್ಮ ಪ್ರೀತಿ, ಭಕ್ತಿ ಭಾವದಿಂದ ಈ ಬಾರಿಯ ಗಣೇಶೋತ್ಸವ ಸಂಭ್ರಮದಲ್ಲಿರುತ್ತದೆ.

  • ನಾಗಮಂಗಲ ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಪರಿಹಾರ ವಿತರಣೆ

    ನಾಗಮಂಗಲ ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಪರಿಹಾರ ವಿತರಣೆ

    ಮಂಡ್ಯ: ನಾಗಮಂಗಲದಲ್ಲಿ (Nagamangala) ಗಣೇಶ ಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಕೊನೆಗೂ ಸರ್ಕಾರ ಪರಿಹಾರ ನೀಡಿದೆ.

    ನಾಗಮಂಗಲ ಗಲಭೆಯಲ್ಲಿ (Nagamangala Violence) ಹಲವು ಅಂಗಡಿ ಮುಂಗಟ್ಟುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕಾರಣ ಸುಮಾರು 22 ಮಂದಿ ವ್ಯಾಪಾರಸ್ಥರಿಗೆ ವೃತ್ತಿ ಜೀವನ ನಡೆಸಲು ತೊಂದರೆಯಾಗಿತ್ತು. ಇಂದು (ನ.22) ಸಚಿವ ಚಲುವರಾಯಸ್ವಾಮಿ ತೊಂದರೆಗೀಡಾಗಿದ್ದ ವ್ಯಾಪರಸ್ಥರು ಹಾಗೂ ಅಂಗಡಿ ಮಾಲೀಕರಿಗೆ ಸರ್ಕಾರದಿಂದ (Government) ನೀಡಿದ್ದ ಒಟ್ಟು 76,45,000 ರೂ. ಪರಿಹಾರ ಧನ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ

    ನಾಗಮಂಗಲ ತಾಲ್ಲೂಕು‌ ಕಚೇರಿಯಲ್ಲಿ 22 ಅಂಗಡಿ ಮಾಲೀಕರಿಗೆ 26,45,000 ರೂ. ಹಾಗೂ 22 ಸಣ್ಣಪುಟ್ಟ ವ್ಯಾಪಾರಿಗಳಿಗೆ 47,85,000 ರೂ. ಪರಿಹಾರ ಮಂಜೂರಾತಿ ಪತ್ರವನ್ನು ವಿತರಿಸಿದರು. ಇದನ್ನೂ ಓದಿ: ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್

    ಸರ್ಕಾರದಿಂದ ಇಂತಹ ಅವಘಡ ಪ್ರಕರಣಗಳಲ್ಲಿ ಸುಮಾರು 10,000 ರೂ. ಮಾತ್ರ ಪರಿಹಾರ ನೀಡಲಾಗುತ್ತಿತ್ತು, ಇದರಿಂದ ವೃತ್ತಿ ಜೀವನ‌ ಪುನಃ ಕಟ್ಟಿಕೊಳ್ಳಲು ಸಾಕಾಗುವುದಿಲ್ಲ ಎಂದು ವರ್ತಕರು ಮನವಿ ಮಾಡಿದ್ದರು. ವರ್ತಕರ ಮನವಿ ಪುರಸ್ಕರಿಸಿದ ಸರ್ಕಾರ ದೊಡ್ಡ ಮೊತ್ತದ ಪರಿಹಾರ ನೀಡಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಸಾಂಗ್ಲಿ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್: ಮೂವರ ಸಾವು, 9 ಮಂದಿ ಆಸ್ಪತ್ರೆಗೆ ದಾಖಲು

  • ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

    ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

    ಹುಬ್ಬಳ್ಳಿ: ಗಣೇಶ ಹಬ್ಬ (Ganesha Festival) ಮುಗಿದ ಮೇಲೆ ಹುಬ್ಬಳ್ಳಿಯಲ್ಲಿ (Hubballi) ವಿವಾದ ಕಿಡಿಯೊಂದು ಹೊತ್ತಿಕೊಂಡಿದೆ. ಹಿಂದೂಪರ ಸಂಘಟನೆಗಳ ಜೊತೆ ಸೇರಿ ಹಬ್ಬ ಮಾಡಿದ ಸರ್ಕಾರಿ ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹುಬ್ಬಳ್ಳಿ ಇಎಸ್‌ಐ ಆಸ್ಪತ್ರೆಯಲ್ಲಿ (ESI Hospital) ಗಣೇಶ ವಿವಾದದ ಹಿಂದೆ ಹಲವಾರು ಅನುಮಾನ ಹುಟ್ಟಿಕೊಳ್ಳುತ್ತಿವೆ. ಆಸ್ಪತ್ರೆ ಅಧೀಕ್ಷಕರ ನಡೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಬಾರಿ ರಾಜ್ಯದಲ್ಲಿ ವಿವಿಧ ಕಡೆ ಗಣೇಶ ಹಬ್ಬದಲ್ಲಿ ಗಲಾಟೆಯಾಗಿದೆ. ಕೆಲವು ಕಡೆ ವಿವಾದ ಸಹ ಆಗಿದೆ. ಆದರೆ ಹುಬ್ಬಳ್ಳಿ ಧಾರವಾಡದಲ್ಲಿ ಮಾತ್ರ ಅತ್ಯಂತ ಶಾಂತಿಯುತವಾಗಿ ಗಣೇಶ ಹಬ್ಬ ನಡೆದಿದೆ. ಈಗ ಹಬ್ಬ ಮುಗಿದ ಮೇಲೆ ಗಣೇಶ ವಿವಾದ ಕಿಡಿ ಎದ್ದಿದೆ. ಗಣೇಶ ಚತುರ್ಥಿಯಂದು ವಿವಾದ ಮೈಮೇಲೆ ಎಳೆದುಕೊಂಡಿದ್ದ ಹುಬ್ಬಳ್ಳಿ ಇಎಸ್‌ಐ ಆಸ್ಪತ್ರೆ ಆಡಳಿತ ಮಂಡಳಿ ಈಗ ಮತ್ತೆ ವಿವಾದಾತ್ಮಕ ನಡೆಯಿಂದ ಸುದ್ದಿಯಾಗಿದೆ. ಆಸ್ಪತ್ರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ

    ಹುಬ್ಬಳ್ಳಿ ಕಾರವಾರ ರಸ್ತೆಯ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿದ್ದ ಶಾಶ್ವತ ಮೂರ್ತಿಗೆ ಪೂಜೆ ನಡೆಸಲಾಗುತ್ತಿತ್ತು. ಇದಕ್ಕೆ ಆಸ್ಪತ್ರೆ ಮುಖ್ಯಸ್ಥ ಯೂನಿಸ್ ನಜ್ಮಿ ಕಾರಣ. ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ ಅಂತ ಆರೋಪ ಸಹ ಕೇಳಿ ಬಂದಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಬಿಜೆಪಿ ಸದಸ್ಯರು ಆಸ್ಪತ್ರೆಗೆ ನುಗ್ಗಿ ತಾವೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದರು. ಅಲ್ಲದೆ ಅಧೀಕ್ಷಕ ನಜ್ಮಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಇದಾದ ಬಳಿಕ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಆಸ್ಪತ್ರೆ ಅಧೀಕ್ಷಕ ನಜ್ಮಿ ಮತ್ತೊಂದು ವರ್ತನೆ ತೋರಿದ್ದಾರೆ. ಹಿಂದೂಪರ ಸಂಘಟನೆಗಳ ಜೊತೆ ಸೇರಿ ಹಬ್ಬ ಮಾಡಿರುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಇದು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯ

    ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಕೋಮು ಗಲಭೆಯ ಸೃಷ್ಟಿ ಪ್ರಯತ್ನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ಸಿಬ್ಬಂದಿಯಾಗಿ ಹಿಂದೂಪರ ಸಂಘಟನೆಗಳ ಜೊತೆಗೆ ಸೇರಿ ಗಣೇಶ ಮೂರ್ತಿ ಕೂರಿಸಿದ್ದೀರಿ. ನಿಮ್ಮ ಮೇಲೆ ಯಾಕೆ ಕ್ರಮ ಆಗಬಾರದು ಎಂದು ಶುಶ್ರೂಷಾಧಿಕಾರಿ ಜಗದೀಶ್ ಎನ್ನುವವರಿಗೆ ಕಳೆದ 20ರಂದು ನೋಟಿಸ್ ನೀಡಲಾಗಿದೆ. ಏಳು ದಿನ ಉತ್ತರ ನೀಡಲು ಅವಕಾಶ ನೀಡಲಾಗಿದೆ. ಇನ್ನೂ ಈ ವಿಷಯ ಹೊರಗಡೆ ಬಾರದಂತೆ ಎಚ್ಚರಿಕೆ ಸಹ ನೀಡಲಾಗಿದೆಯಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಧೀಕ್ಷಕ ನಜ್ಮಿ ಸಂಪರ್ಕಿಸಿದಾಗ, ಇದು ನಮ್ಮ ಆಡಳಿತಾತ್ಮಕ ವಿಷಯ, ನಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದೇ ನೋಟಿಸ್ ನೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಜ್‌ ಯಾತ್ರೆಯ ನೆಪದಲ್ಲಿ ಭಿಕ್ಷಕರನ್ನು ಕಳುಹಿಸಬೇಡಿ – ಪಾಕ್‌ಗೆ ಸೌದಿ ಎಚ್ಚರಿಕೆ

    ಒಟ್ಟಿನಲ್ಲಿ ಇಎಸ್‌ಐ ಆಸ್ಪತ್ರೆ ಅಧೀಕ್ಷಕ ನಜ್ಮಿ ನಡೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಹಬ್ಬದ ಆಚರಣೆ ಮಾಡಿದ ಸಿಬ್ಬಂದಿಗೆ ಧರ್ಮ ಸಂಕಟ ಎದುರಾಗಿದೆ. ಈ ನೋಟಿಸ್ ಮತ್ಯಾವ ರೂಪಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ತಿರುಮಲನ ಸನ್ನಿಧಿಗೆ 2 ಟ್ರಕ್‌ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜು

  • Mandya | ನಾಗಮಂಗಲದಲ್ಲಿ ಖಾಕಿ ಹೈ ಅಲರ್ಟ್ – ಈದ್ ಮಿಲಾದ್ ಹಿನ್ನೆಲೆ ಪೊಲೀಸ್ ಸರ್ಪಗಾವಲು

    Mandya | ನಾಗಮಂಗಲದಲ್ಲಿ ಖಾಕಿ ಹೈ ಅಲರ್ಟ್ – ಈದ್ ಮಿಲಾದ್ ಹಿನ್ನೆಲೆ ಪೊಲೀಸ್ ಸರ್ಪಗಾವಲು

    – ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಇಂದು ಗಣೇಶ ವಿಸರ್ಜನೆಗೆ ಬ್ರೇಕ್‌

    ಮಂಡ್ಯ: ನಾಗಮಂಗಲ ಕೋಮುಗಲಭೆ (Nagamangala Riots) ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸೋಮವಾರ (ಇಂದು) ನಾಗಮಂಗಲದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆ ಪೊಲೀಸ್‌ ಸರ್ಪಗಾವಲು ರಚಿಸಲಾಗಿದೆ.

    ನಾಗಮಂಗಲದಲ್ಲಿ ಮತ್ತೆ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಡದಂತೆ ಪೊಲೀಸರಿಗೆ ಸರ್ಕಾರ (Karnataka Government) ಖಡಕ್‌ ಸೂಚನೆ ನೀಡಿದೆ. ಭಾನುವಾರದಿಂದಲೇ ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ ಅವರು ನಾಗಮಂಗಲದಲ್ಲೇ ಮೊಕ್ಕಾಂ ಹೂಡಿದ್ದಾರೆ. ಭದ್ರತೆ ಹಾಗೂ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಗೃಹ ಇಲಾಖೆಗೆ ಗಂಟೆ ಗಂಟೆಗೂ ಮಾಹಿತಿ ನೀಡಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್‍ಗೆ ಟೀ, ಸಿಗರೇಟ್ ಕೊಟ್ಟಿದ್ಯಾರು? – ರಾಜಾತಿಥ್ಯ ಕೇಸ್ ಚಾರ್ಜ್‍ಶೀಟ್‍ಗೆ ಸಿದ್ಧತೆ

    ಪೊಲೀಸ್‌ ಸರ್ಪಗಾವಲು ಹೇಗಿದೆ?
    ಈದ್‌ ಮಿಲಾದ್‌ (Eid Milad) ಮೆರವಣಿಗೆ ಹಿನ್ನೆಲೆ ನಾಗಮಂಗಲದ ಗಲ್ಲಿಗಲ್ಲಿಗಳಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೊನ್ನೆ ಗಲಭೆಗೆ ಕಾರಣವಾದ ದರ್ಗಾ, ಮಸೀದಿ ಬಳಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಮಂಡ್ಯ ಸರ್ಕಲ್, ಈದ್ಗಾ ಮೈದಾನದ ಸುತ್ತಲೂ ಭಾರೀ ಬಂದೋ ಬಸ್ತ್ ಇದೆ. ಇದನ್ನೂ ಓದಿ: ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್‌, ದಾಳಿಕೋರ ಸಿಕ್ಕಿದ್ದು ಹೇಗೆ?

    2 ಎಸ್ಪಿ, 2 ಎಎಸ್ಪಿ, 4 ಡಿವೈಎಸ್ಪಿ, 20ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌, 20ಕ್ಕೂ ಹೆಚ್ಚು ಪಿಎಸ್‌ಐ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ತಲಾ 7 ಡಿಎಆರ್‌, ಕೆಎಸ್‌ಆರ್‌ಪಿ ಸೇರಿದಂತೆ 700ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ.

    ಮತ್ತೊಂದೆಡೆ ಇಂದು ಗಣೇಶ ವಿಸರ್ಜನೆಗೆ ಬ್ರೇಕ್ ಹಾಕಲಾಗಿದೆ. ಗಣಪತಿ ವಿಸರ್ಜನೆ, ಮೆರವಣಿಗೆಗೆ ಅನುಮತಿ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ – ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಭರ್ಜರಿ ಸಿದ್ಧತೆ!

  • ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ – ಕೇರಳ ಮುಸ್ಲಿಮರ ಕೈವಾಡ ಇದ್ಯಾ? – ವಿಶ್ವ ಹಿಂದೂ ಪರಿಷತ್‌ ಆರೋಪ ಏನು?

    ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ – ಕೇರಳ ಮುಸ್ಲಿಮರ ಕೈವಾಡ ಇದ್ಯಾ? – ವಿಶ್ವ ಹಿಂದೂ ಪರಿಷತ್‌ ಆರೋಪ ಏನು?

    – FIRನಲ್ಲಿರೋ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರು!

    ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ (Nagamangala Violence) ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ ಈಗ ಸಹಜ ಸ್ಥಿತಿಗೆ ಮರಳಿದೆ. ಸಚಿವ ಚಲುವನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ. ಅಲ್ಲದೇ ಭಾನುವಾರ (ಇಂದು) ನಿಷೇಧಾಜ್ಞೆ ತೆರವಾಗಿದೆ. ಈ ನಡುವೆ ಕೋಮು ಗಲಭೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬೆಳಿಗೆ ಬಂದಿದೆ.

    ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ (Kerala Link) ಇರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ನಿಷೇಧಿತ ಪಿಎಫ್‌ಐ (PFI) ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್‌ ಮಾಡಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಭಾನುವಾರದ ಬಾಡೂಟ; ಆಂಧ್ರ ಶೈಲಿಯ ತಲೆಮಾಂಸದ ಸಾಂಬಾರ್ ಮಾಡೋದು ಹೇಗೆ?

    ಈ ಅನುಮಾನಕ್ಕೆ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ ಆ ಎರಡು ಹೆಸರುಗಳು ಕಾರಣವಾಗಿದೆ. ಹೌದು. ಎಫ್‌ಐಆರ್‌ನಲ್ಲಿರುವ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರಾಗಿದ್ದಾರೆ. ಪ್ರಕರಣದ 44ನೇ ಆರೋಪಿ ಯೂಸೂಫ್‌, 61ನೇ ಆರೋಪಿ ನಾಸೀರ್‌ ಇಬ್ಬರೂ ಕೇರಳ ರಾಜ್ಯದ ಮಲ್ಲಪುರಂ ನಿವಾಸಿಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: Kolkata Horror | ಸಾಕ್ಷಿ ನಾಶ, FIR ದಾಖಲಿಸಲು ವಿಳಂಬ; ಸಂದೀಪ್‌ ಘೋಷ್‌ ಸೇರಿ ಸಿಬಿಐನಿಂದ ಇಬ್ಬರ ಬಂಧನ

    ಈ ನಡುವೆ ಆರೋಪಿಗಳಿಬ್ಬರೂ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆ ನಡೆಸಲು ಪೂರ್ವ ತಯಾರಿ ನಡೆದಿದೆ. ಗಲಾಟೆ ನಡೆದ ದಿನ ಮೆಡಿಕಲ್‌ನಲ್ಲಿ 200 ಮಾಸ್ಕ್ ಖರೀದಿ ಮಾಡಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನ ಎನ್‌ಐಎ ನಡೆಸಬೇಕು ಎಂದು ವಿಹೆಚ್‌ಪಿ ಆಗ್ರಹಿಸಿದೆ. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಬೆಂಬಲಿಸುವ ಆಫರ್‌ ಬಂದಿತ್ತು, ನಾನೇ ತಿರಸ್ಕರಿಸಿದೆ: ನಿತಿನ್‌ ಗಡ್ಕರಿ

  • ನಿಗಿ ನಿಗಿ ಕೆಂಡವಾಗಿದ್ದ ನಾಗಮಂಗಲ ಶಾಂತ – ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ಸಕ್ಸಸ್

    ನಿಗಿ ನಿಗಿ ಕೆಂಡವಾಗಿದ್ದ ನಾಗಮಂಗಲ ಶಾಂತ – ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ಸಕ್ಸಸ್

    – ನಿಷೇಧಾಜ್ಞೆ ತೆರವು, ಗಣೇಶ ವಿಸರ್ಜನೆಗೆ ಅವಕಾಶ

    ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ (Nagamangala Violence) ಈಗ ಸಹಜ ಸ್ಥಿತಿಗೆ ಮರಳಿದೆ. ಎರಡೂ ಸಮುದಾಯದ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವನಾರಾಯಣಸ್ವಾಮಿ (Chaluvarayaswamy) ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ. ಅಲ್ಲದೇ ಭಾನುವಾರ (ಇಂದು) ನಿಷೇಧಾಜ್ಞೆ ಮುಕ್ತಾಯವಾಗಲಿದ್ದು, ಇಂದಿನಿಂದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಅವಕಾಶ ನೀಡಲಾಗಿದೆ.

    ಬುಧವಾರ ರಾತ್ರಿ ನಾಗಮಂಗಲದಲ್ಲಿ ಗಣೇಶ ಮೂರ್ತಿ (Ganesha Idol) ವಿಸರ್ಜನೆ ವೇಳೆ ಕಲ್ಲು ತೂರಾಟದಿಂದಾಗಿ ಗಲಭೆ ಉಂಟಾಗಿ ಅಂದು ರಾತ್ರಿ ಜಾರಿಗೊಳಿಸಿದ್ದ ನಿಷೇಧಾಜ್ಞೆ ತೆರವಾಗಲಿದೆ. ನಿನ್ನೆ ನಾಗಮಂಗಲದ ಸಮುದಾಯ ಭವನದಲ್ಲಿ ಉಭಯ ಸಮುದಾಯದ ಮುಖಂಡರೊಂದಿಗೆ ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ನಡೆಸಿದ್ರು. ಘಟನೆಗೆ ಕಾರಣವಾದ ಕಿಡಿಗೇಡಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿದ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ರು. ಅಲ್ಲದೇ ನಾಗಮಂಗಲದ ಉಳಿದ ಗಣೇಶ್ ಮೂರ್ತಿಗಳನ್ನು ಶಾಂತಿಯುವಾಗಿ ವಿಸರ್ಜನೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದ್ರು.

    ಶಾಂತಿಸಭೆ ಯಶಸ್ವಿಯ ಬಳಿಕ ಇಂದಿನಿಂದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಅವಕಾಶ ನೀಡಲಾಯಿತು. ಎಂದಿನಂತೆ ಸಂಭ್ರಮದಿಂದ ಆಚರಣೆಗೆ ಅನುಮತಿ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ವೇಳೆ ಬಿಗಿ ಭದ್ರತೆಗೆ ಸೂಚಿಸಲಾಗಿದೆ. ಈ ಹಿಂದೆ ನಡೆಯುತ್ತಿದ್ದ ರಸ್ತೆಗಳಲ್ಲಿ 7 ಗಣಪತಿಗಳ ವಿಸರ್ಜನೆ ಮೆರವಣಿಗೆ ಅನುವು ಮಾಡಿಕೊಡಬೇಕೆಂದು ಎರಡು ಸಮುದಾಯದ ಮುಖಂಡರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಎಲ್ಲಾ ಮುಖಂಡರು ಸಮ್ಮತಿದ್ದಾರೆ.

    ಗಣೇಶ ವಿಸರ್ಜನೆ ಮೆರವಣಿಗೆ ಬಳಿಕ ಪ್ರತಿವರ್ಷದಂತೆ ಸೌಮ್ಯಕೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದ್ರೆ ನಾಳೆ ಈದ್ ಮಿಲಾದ್ ಹಬ್ಬ ಆಚರಣೆ ಇದ್ದ ಕಾರಣ ಅಂದು ಮಾತ್ರ ಗಣಪತಿ ವಿಸರ್ಜನೆ ಮಾಡಲು ಅನುಮತಿ ನೀಡಿಲ್ಲ. ಎರಡು ಕೋಮುಗಳ ಮಧ್ಯೆ ಮತ್ತೆ ಘರ್ಷಣೆ ಆಗೋ ಸಾಧ್ಯತೆ ಇರುತ್ತೆ ಅನ್ನೋ ಕಾರಣದಿಂದ ಶಾಂತಿ ಸುವ್ಯವಸ್ಥೆ ಕಾರಣಕ್ಕೆ ಅನುಮತಿ ಕೊಟ್ಟಿಲ್ಲ.

    ಒಟ್ಟಿನಲ್ಲಿ ಗಲಭೆಯಿಂದ ಸಹಜಸ್ಥಿತಿಯತ್ತ ಮರಳಿದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ಅವಘಡ ನಡೆಯದಂತೆ ಪೊಲೀಸರು ಮುನ್ನಚ್ಚೆರಿಕೆ ಬಿಗಿ ಭದ್ರತೆ ಮಾಡಿದ್ದಾರೆ.

  • ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

    ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

    ಶಿವಮೊಗ್ಗ: ನಾಡಿನಲ್ಲೆಡೆ ಶನಿವಾರ ಸಂಭ್ರಮದಿಂದ ಗಣಪತಿ ಹಬ್ಬ (Ganesha festival) ಆಚರಿಸಲಾಗುತ್ತಿದೆ. ಆದರೆ ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ ವೇಳೆಯೇ ಗಲಾಟೆ ನಡೆದಿದೆ.

    ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರುವ ವೇಳೆ ಡೊಳ್ಳು ಬಾರಿಸಲು ಎರಡು ಸಮುದಾಯದವರು ಒಂದೇ ತಂಡಕ್ಕೆ ಡೊಳ್ಳು ಬಾರಿಸಲು ಆರ್ಡರ್ ಕೊಟ್ಟಿದ್ದರು. ಆದರೆ ಎರಡು ಸಮುದಾಯದವರು ಒಂದೇ ಸಮಯದಲ್ಲಿ ಗಣಪತಿ ತರುತ್ತಿದ್ದರು. ಈ ವೇಳೆ ನಮ್ಮ ಸಮುದಾಯದ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸುವವರು ಹಣ ಪಡೆದು ಬಂದಿಲ್ಲ ಎಂದು ಗಲಾಟೆ ನಡೆದಿದೆ. ಡೊಳ್ಳುನವರ ಮೇಲೆ ಕಲ್ಲು ತೂರಾಟ ನಡೆಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಅತ್ಯಾಚಾರ ಕೇಸ್ – ವಿಡಿಯೋ ಮಾಡಿ ಹರಿಬಿಟ್ಟಿದ್ದ ಆಟೋ ಚಾಲಕ ಅರೆಸ್ಟ್

    ಈ ವೇಳೆ ಮೆರವಣಿಗೆಯಲ್ಲಿದ್ದ ಗ್ರಾಮಸ್ಥರಿಗೂ ಗಾಯವಾಗಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನವರು ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ 8-10 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಅನರ್ಹ ಕುರಿತು ಟೀಕೆ – ದೇವರೇ ನಿಮಗೆ ಶಿಕ್ಷೆ ಕೊಟ್ಟಿದ್ದಾನೆ ಎಂದ ಬ್ರಿಜ್‌ ಭೂಷಣ್‌

    ಇನ್ನೂ ಘಟನೆ ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲಾ ಗಣೇಶ ಮೂರ್ತಿಯನ್ನು ಇಂದೇ ವಿಸರ್ಜನೆ ಮಾಡುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತಿಯುತವಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿದಂತೆ 2 ಗುಂಪಿನ 22 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಹಲ್ಲೆ ನಡೆಸಲು ಪವಿತ್ರಾಗೆ ದರ್ಶನ್ ಪ್ರಚೋದನೆ – ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕರಗದ ನಟಿ; ಚಾರ್ಜ್‌ಶೀಟ್‌ನಲ್ಲಿ ರಹಸ್ಯ ಸ್ಫೋಟ