Tag: ganesha festival

  • ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

    ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

    ಶಿವಮೊಗ್ಗ: ನಾಡಿನಲ್ಲೆಡೆ ಶನಿವಾರ ಸಂಭ್ರಮದಿಂದ ಗಣಪತಿ ಹಬ್ಬ (Ganesha festival) ಆಚರಿಸಲಾಗುತ್ತಿದೆ. ಆದರೆ ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ ವೇಳೆಯೇ ಗಲಾಟೆ ನಡೆದಿದೆ.

    ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರುವ ವೇಳೆ ಡೊಳ್ಳು ಬಾರಿಸಲು ಎರಡು ಸಮುದಾಯದವರು ಒಂದೇ ತಂಡಕ್ಕೆ ಡೊಳ್ಳು ಬಾರಿಸಲು ಆರ್ಡರ್ ಕೊಟ್ಟಿದ್ದರು. ಆದರೆ ಎರಡು ಸಮುದಾಯದವರು ಒಂದೇ ಸಮಯದಲ್ಲಿ ಗಣಪತಿ ತರುತ್ತಿದ್ದರು. ಈ ವೇಳೆ ನಮ್ಮ ಸಮುದಾಯದ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸುವವರು ಹಣ ಪಡೆದು ಬಂದಿಲ್ಲ ಎಂದು ಗಲಾಟೆ ನಡೆದಿದೆ. ಡೊಳ್ಳುನವರ ಮೇಲೆ ಕಲ್ಲು ತೂರಾಟ ನಡೆಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಅತ್ಯಾಚಾರ ಕೇಸ್ – ವಿಡಿಯೋ ಮಾಡಿ ಹರಿಬಿಟ್ಟಿದ್ದ ಆಟೋ ಚಾಲಕ ಅರೆಸ್ಟ್

    ಈ ವೇಳೆ ಮೆರವಣಿಗೆಯಲ್ಲಿದ್ದ ಗ್ರಾಮಸ್ಥರಿಗೂ ಗಾಯವಾಗಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನವರು ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ 8-10 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಅನರ್ಹ ಕುರಿತು ಟೀಕೆ – ದೇವರೇ ನಿಮಗೆ ಶಿಕ್ಷೆ ಕೊಟ್ಟಿದ್ದಾನೆ ಎಂದ ಬ್ರಿಜ್‌ ಭೂಷಣ್‌

    ಇನ್ನೂ ಘಟನೆ ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲಾ ಗಣೇಶ ಮೂರ್ತಿಯನ್ನು ಇಂದೇ ವಿಸರ್ಜನೆ ಮಾಡುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತಿಯುತವಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿದಂತೆ 2 ಗುಂಪಿನ 22 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಹಲ್ಲೆ ನಡೆಸಲು ಪವಿತ್ರಾಗೆ ದರ್ಶನ್ ಪ್ರಚೋದನೆ – ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕರಗದ ನಟಿ; ಚಾರ್ಜ್‌ಶೀಟ್‌ನಲ್ಲಿ ರಹಸ್ಯ ಸ್ಫೋಟ

  • ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!

    ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!

    ಮಡಿಕೇರಿ: ಸಾರ್ವಜನಿಕವಾಗಿ ಅಥವಾ ಬಲವಂತವಾಗಿ ಹಣ ಸಂಗ್ರಹಿಸದೇ, ಕೇವಲ ಸಮಿತಿ ಸದಸ್ಯರು, ಸ್ನೇಹಿತರು, ಹಿತೈಷಿಗಳು, ದಾನಿಗಳ ನೆರವಿನಿಂದ ಮಾತ್ರ ಪ್ರತಿಷ್ಠಾಪಿಸಲ್ಪಡುವ ಮಡಿಕೇರಿಯ (Madikeri) ಕೊಹಿನೂರು ರಸ್ತೆಯ ಹಿಂದೂ ಯುವ ಶಕ್ತಿಯ ಗಣಪ ಜಿಲ್ಲೆಯಲ್ಲೇ ಶ್ರೀಮಂತ ಗಣಪತಿ ಎಂದು ಪ್ರಸಿದ್ಧಿ ಪಡೆದಿದೆ.

    ಶ್ರೀಮಂತ ಗಣಪತಿ ಈ ಬಾರಿ ಇನ್ನಷ್ಟು ಸಿರಿವಂತನಾಗುತ್ತಿದ್ದಾನೆ. ಬೆಳ್ಳಿಯ ಕಿರೀಟ, ಕೊಡೆ, ಮೋದಕ, ಪಾಳ, ಅಂಕುಶ, ಹಣೆಮಾಲೆ, ಚಿನ್ನದ ಪದಕ, ಬಳೆಗಳು ಸೇರಿದಂತೆ ಅಂದಾಜು 15 ಲಕ್ಷ ರೂ. ಮೌಲ್ಯದ ಆಭರಣಗಳನ್ನು ತೊಡಿಸಿ ಈ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದನ್ನೂ ಓದಿ: ಸಹಾಯ ಕೇಳಿ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಕಾನ್ಸ್‌ಟೇಬಲ್ ಅರೆಸ್ಟ್

    ವರ್ಷದಿಂದ ವರ್ಷಕ್ಕೆ ಬೆಳ್ಳಿಯ ವಿವಿಧ ಬಗೆಯ ಪ್ರಭಾವಳಿಗಳನ್ನು ಸಂಘದ ಸದಸ್ಯರು ನೀಡುತ್ತಿದ್ದಾರೆ. ಗಣಪನ ಮೂರ್ತಿ ಹಳೆಯ ಆಭರಣಗಳೊಂದಿಗೆ ಲಕ್ಷ ಲಕ್ಷ ಮೌಲ್ಯದ ಬೆಳ್ಳಿಯ ಪ್ರಭಾವಳಿಯೊಂದಿಗೆ ಗಮನ ಸೆಳೆಯುತ್ತಿದೆ.

    ಇದರೊಂದಿಗೆ ಭಕ್ತಾದಿಯೊಬ್ಬರು 15 ಸಾವಿರ ರೂ. ಮೌಲ್ಯದ ಚಿನ್ನದ ಹಣೆಯ ತ್ರಿಶೂಲವನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ವಿಶೇಷವಾಗಿ ಪೂಜೆ ನೇರವೇರಿಸಿದ ಬಳಿಕ ಶನಿವಾರ ಸಂಜೆ ವೇಳೆಗೆ ಗಣಪತಿ ಮೂರ್ತಿಯನ್ನು ಗೌರಿ ಕೇರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ಕಾರು – 10 ಮೀಟರ್ ಎಳೆದೊಯ್ದು ಚಾಲಕ ಎಸ್ಕೇಪ್!

  • ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ

    ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ

    ಕೊಪ್ಪಳ: ರಾಜ್ಯದಲ್ಲಿ ಗಣೇಶ ಹಬ್ಬದ (Ganesha Festival) ಸಂಭ್ರಮ ಮನೆ ಮಾಡಿದೆ. ಈ ನಡುವೆ ಕೊಪ್ಪಳದಲ್ಲಿ ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರು ಭಾವೈಕ್ಯತೆ ಸಂದೇಶ ಸಾರಿದ್ದಾರೆ.

    ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು (Hindu Muslim) ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಇದನ್ನೂ ಓದಿ: Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು

    ಕಳೆದ ಮೂರು ವರ್ಷಗಳಿಂದ ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನ ಒಟ್ಟಿಗೆ ಸೇರಿ ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಾ ಬರುತ್ತಿದ್ದಾರೆ. ಮುಸ್ಲಿಂ ಬಾಂಧವರೇ 5 ದಿನಗಳ ಕಾಲ ಪೂಜಾ ಕೈಂಕರ್ಯವನ್ನು ನೆರವೇರಿಸಲಿದ್ದಾರೆ. ಗಣೇಶ ವಿಸರ್ಜನೆಗೂ ಮುನ್ನಾ ದಿನ ಅನ್ನಸಂತರ್ಪಣೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

    ಬೆಳಗಾವಿ: 2.21 ಲಕ್ಷ ಹುಣಸೆ ಬೀಜ ಬಳಸಿ ಮೂರ್ತಿ ತಯಾರು
    ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಬೆಳಗಾವಿ ಹಳೇ ಗಾಂಧಿನಗರದ ಸೃಜನಶೀಲ ಶಿಲ್ಪಿ ಸುನೀಲ್ ಸಿದ್ದಪ್ಪ ಆನಂದಚೆ ಈ ವರ್ಷ 2,21,111 ಹುಣಸೆ ಬೀಜಗಳನ್ನು ಬಳಸಿ ಭವ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚಿಸಿದ್ದು ವಿಶೇಷ ಆಕರ್ಷಣೆಗೆ ಕಾರಣವಾಗಿದೆ. ಸುನೀಲ್‌, ಕಳೆದ ಅನೇಕ ವರ್ಷಗಳಿಂದ ಜೇಡಿ ಮಣ್ಣು, ಹುಲ್ಲಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ವರ್ಷ ಮತ್ತೊಂದು ಹೆಜ್ಜೆ ಮುಂದಿಟ್ಟು ಮರುಬಳಕೆಯ ದಿನಪತ್ರಿಕೆಗಳು ಮತ್ತು ಕಾರ್ಡ್ಬೋರ್ಡ್, ಹುಲ್ಲಿನ ಸಹಾಯದಿಂದ ಹೆರಳವಾದ ಹುಣಸೆ ಬೀಜಗಳನ್ನು ಉಪಯೋಗಿಸಿ 8 ಅಡಿ ಎತ್ತರದ ಗಣೇಶ ಮುರ್ತಿ ನಿರ್ಮಿಸಿದ್ದಾರೆ.

    ದಿನ ನಿತ್ಯದ ತನ್ನ ಇತರೆ ಕೆಲಸಗಳ ಮಧ್ಯ ಒಂದೆರಡು ಗಂಟೆ ಬಿಡುವ ಮಾಡಿಕೊಂಡು ಮನೆಯವರ ಹಾಗೂ ಇತರರ ಸಹಕಾರಿಂದ ಒಂದು ತಿಂಗಳು ಕಾಲಾವಧಿಯಲ್ಲಿ ಸಾರ್ವಜನಿಕ ವೇದಿಕೆಯ ಭವ್ಯ ಮೂರ್ತಿ‌ ನಿರ್ಮಿಸಿದ್ದಾರೆ. ಇಂತಹ ಮೂರ್ತಿಗಳ ಬೇಡಿಕೆ ಹೆಚ್ಚಿದ್ದರೂ ಬಿಡುವಿಲ್ಲದ ಕಾರಣ ಪ್ರತಿವರ್ಷ ಒಂದು ಮಾತ್ರ ಮೂರ್ತಿ ರಚಿಸುತ್ತಿದ್ದಾರೆ. ಪರಿಸರ ಸ್ನೇಹಿ ಈ ವರ್ಷದ ಸುಂದರ ಮೂರ್ತಿಯನ್ನು ಬೆಳಗಾವಿ ಮಾಳಿಗಲ್ಲಿ ಪರಿಸರ ಸ್ನೇಹಿ ಯುವಕರು ಸೇರಿ ತಮ್ಮ ಓಣಿಯಲ್ಲಿ ಪ್ರತಿಷ್ಠಾಣೆ ಮಾಡಿ ಪರಿಸರ ಕಾಳಜಿ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ

  • ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ

    ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ

    – ಗಜಪಡೆಗೆ 21 ಬಗೆಯ ಸಿಹಿತಿನಿಸು

    ಮೈಸೂರು: ಎಲ್ಲೆಡೆ ಗಣೇಶ ಹಬ್ಬವನ್ನು (Ganesh Chaturthi) ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಅರಮನೆ ನಗರ ಮೈಸೂರಿನಲ್ಲಿ (Mysuru) ದಸರಾ ಆನೆಗಳಿಗೂ (Dasara Elephant) ಪೂಜೆ ನೆರವೇರಿಸಲಾಯಿತು. ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಮೈಸೂರಿಗೆ ಬಂದಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ನೆರವೇರಿಸಲಾಯಿತು.

    ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ನೆರವೇರಿಸಲಾಗಿದೆ. ಮಳೆಯ ನಡುವೆಯೇ ಗಣಪತಿಗೇ ಇಷ್ಟವಾದ ಮೋದಕ, ಬೆಲ್ಲ, ಕಬ್ಬು ಹೀಗೆ ಅನೇಕ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಿಸಿಎಫ್ ಮಾಲತಿ ಪ್ರಿಯಾ, ಡಿಸಿಎಫ್ ಡಾ.ಪ್ರಭುಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸುಗ್ರೀವ, ಮಹೇಂದ್ರ, ಗೋಪಿ, ಭೀಮ, ಲಕ್ಷ್ಮಿ, ವರಲಕ್ಷ್ಮಿ ಸೇರಿದಂತೆ ಎಲ್ಲ 14 ಆನೆಗಳೂ ಪಾಲ್ಗೊಂಡಿದ್ದವು. ಇದನ್ನೂ ಓದಿ: ಕಲಬುರಗಿಯಲ್ಲಿ ಹನಿಟ್ರ್ಯಾಪ್‌ ಗ್ಯಾಂಗ್‌ ಸಕ್ರಿಯ – ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳೇ ಟಾರ್ಗೆಟ್

    ಗಣೇಶ ಹಬ್ಬದ ದಿನ ದಸರಾ ಆನೆಗಳಿಗೆ ಪೂಜೆ ಸಲ್ಲಿಸೋದು ವಾಡಿಕೆ. ಹಬ್ಬದ ದಿನ ಅಧಿಕಾರಿಗಳು ಕುಟುಂಬ ಸಮೇತರಾಗಿ ಪೂಜೆಯಲ್ಲಿ ಪಾಲ್ಗೊಂಡರು. ಆನೆಗಳಿಗೆ 21 ಬಗೆಯ ನೈವೇದ್ಯ ರೂಪದ ತಿನಿಸುಗಳನ್ನು ನೀಡಲಾಯಿತು. ಇದನ್ನೂ ಓದಿ: ರಸ್ತೆ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರ ಜಗಳ; ಮನನೊಂದು ಬಾಲಕ ಆತ್ಮಹತ್ಯೆ

  • ವಿಘ್ನ ನಿವಾರಕನ ವಿಸರ್ಜನೆ ಯಾಕೆ? 

    ವಿಘ್ನ ನಿವಾರಕನ ವಿಸರ್ಜನೆ ಯಾಕೆ? 

    ಯಾವುದೇ ಸಂಕಷ್ಟದ ಸಂದರ್ಭದಲ್ಲಿ ಎಲ್ಲರಿಗೂ ಮೊದಲು ನೆನಪಾಗುವುದೇ ವಿಘ್ನ ನಿವಾರಕ ವಿನಾಯಕ. ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಗಣಪತಿಗೆ  ಅಗ್ರ ಸ್ಥಾನವಿದೆ. ಆದ ಕಾರಣ ವಿಘ್ನ ವಿನಾಯಕನಿಗೆ ಯಾವುದೇ ಸಂದರ್ಭದಲ್ಲೂ ಮೊದಲ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನದಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

    ಗಣೇಶ ಹಬ್ಬ ಬಂದರೆ ಎಲ್ಲರಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಗಣೇಶನನ್ನು ಕೂರಿಸುವಾಗ ಮನೆಗೆ ಅತಿಥಿಯ ಆಗಮನ ಹೇಗಿರುತ್ತದೆಯೋ ಹಾಗೆಯೆ ಭಾಸವಾಗುತ್ತದೆ. ಗಣೇಶನ ವಿರ್ಸಜನೆಯು ಅತಿಥಿಗಳ ನಿರ್ಗಮನದ ಹಾಗೇ ನೋವನ್ನು ಕೂಡ ನೀಡುತ್ತದೆ.

    ಪ್ರತಿ ವರ್ಷದ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಸಾಧಾರಣವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶನ ಹಬ್ಬ ಬರುತ್ತಿರುತ್ತದೆ.

    ಕೆಲವರು 3, 5, 7, 11 ದಿನಗಳ ಕಾಲ ಗಣಪತಿ ಪೂಜಿಸುತ್ತಾರೆ. ಗಣೇಶನ ಜನನ ಕುರಿತು ಪುರಾಣ, ಮಹಾಕಾವ್ಯಗಳು ವಿವಿಧ ರೀತಿಯ ಕಥೆಯನ್ನು ತಿಳಿಸುತ್ತದೆ. ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಎಂಬ ಕಥೆಯಿದೆ.

    ಗಣೇಶನನ್ನು ವಿಸರ್ಜನೆ ಮಾಡುವಾಗ ಅವನ ನಿರ್ಗಮನವು ದುಃಖವನ್ನು ತರುತ್ತದೆ. ಆದರೆ ವರ್ಷಕ್ಕೊಮ್ಮೆ ಭೇಟಿ ನೀಡುವ ಕುಟುಂಬದ ಸದಸ್ಯ ಎಂದು ಪರಿಗಣಿಸಿ ಕಳುಹಿಸಿಕೊಡಲಾಗುತ್ತದೆ

    ಗಣೇಶನ ವಿಸರ್ಜನೆ ಎನ್ನುವುದು ಗಣೇಶನ ವಿಗ್ರಹವನ್ನು ನದಿ, ಸಮುದ್ರ ಅಥವಾ ಯಾವುದೇ ಜಲಧಾರೆಯಲ್ಲಿ ಮುಳುಗಿಸುವ ಆಚರಣೆಯಾಗಿದೆ. ಈ ಮೂಲಕ ಕೈಲಾಸ ಪರ್ವತದಲ್ಲಿರುವ ತನ್ನ ಮನೆಗೆ ಗಣೇಶ ಮರಳಿ  ಶಿವ ಮತ್ತು ಪಾರ್ವತಿಯನ್ನು ಮತ್ತೆ  ಸೇರುತ್ತಾನೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಗೌರಿ ವಿಸರ್ಜನೆಯನ್ನು, ಗಣೇಶ ವಿಸರ್ಜನೆಯೊಂದಿಗೆ ಮಾಡಲಾಗುತ್ತದೆ.

    ಗಣೇಶ ವಿಸರ್ಜನೆಯು ಜನನ ಮತ್ತು ಮರಣದ ಚಕ್ರದ ಸಂಕೇತವಾಗಿದೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ ಮತ್ತು ಬದಲಾವಣೆಯಲ್ಲಿಯೂ ನಾವೆಲ್ಲರೂ ಬದುಕಬೇಕು. ಈ ಭೂಮಿಯ ಮೇಲೆ ಜನಿಸಿದವರಿಗೆ ಸಾವು ನಿಶ್ಚಿತ ಎಂದು ಹಲವು ವಿದ್ವಾಂಸರು  ವ್ಯಾಖ್ಯಾನಗಳನ್ನು ನೀಡಿದ್ದಾರೆ.

  • ಟಾಟಾ ಏಸ್ ಪಲ್ಟಿ – ಗಣಪತಿ ತರಲು ಹೋಗುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು

    ಟಾಟಾ ಏಸ್ ಪಲ್ಟಿ – ಗಣಪತಿ ತರಲು ಹೋಗುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು: ಗಣಪತಿ ತರಲು ಹೋಗುತ್ತಿದ್ದಾಗ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ (Tarikere) ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ.

    ಲಿಂಗದಹಳ್ಳಿ ನಿವಾಸಿಗಳಾದ ಶ್ರೀಧರ್ (20) ಹಾಗೂ ಧನುಷ್ (20) ಮೃತ ಯುವಕರು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ಕೊನೆಗೂ ಸಿಕ್ತು ಟಿವಿ ಭಾಗ್ಯ

    ಲಿಂಗನಹಳ್ಳಿ ಪಟ್ಟಣದ 9 ಜನ ಯುವಕರು ಬೆಳಗ್ಗೆ ಏಳು ಗಂಟೆಗೆ ಗಣಪತಿ ತರಲೆಂದು 15 ಕಿ.ಮೀ. ದೂರದ ತರೀಕೆರೆ ಪಟ್ಟಣಕ್ಕೆ ಟಾಟಾ ಏಸ್ ಲಾಗೇಜ್ ಆಟೋದಲ್ಲಿ ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.

    ಟಾಟಾ ಏಸ್ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ (Mcgann) ಆಸ್ಪತ್ರೆಗೆ ರವಾನಿಸಲಾಗಿದೆ. ಆಟೋದಲ್ಲಿದ್ದ ಇನ್ನಿತರ ಮೂರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು

    ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರವಾದ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಶ್ರೀರಾಮನಿಂದ ಎರಡು ಬಾರಿ ಪೂಜಿಸಲ್ಪಟ್ಟ ಗಣೇಶ ನೆಲೆಸಿದ್ದಾನೆ ಕರ್ನಾಟಕದ ಈ ಪುಣ್ಯ ನೆಲದಲ್ಲಿ!

    ಶ್ರೀರಾಮನಿಂದ ಎರಡು ಬಾರಿ ಪೂಜಿಸಲ್ಪಟ್ಟ ಗಣೇಶ ನೆಲೆಸಿದ್ದಾನೆ ಕರ್ನಾಟಕದ ಈ ಪುಣ್ಯ ನೆಲದಲ್ಲಿ!

    ರ್ನಾಟಕದ ಪ್ರತಿ ಸ್ಥಳಕ್ಕೂ ರಾಮಾಯಣಕ್ಕೂ ಒಂದಲ್ಲ ಒಂದು ರೀತಿಯ ಸಂಬಂಧವಿದೆ. ಅದೇ ರೀತಿ ರಾಮಾಯಣದ ಕಾಲದಲ್ಲಿ ಕರ್ನಾಟಕದ ಹಲವೆಡೆ ಬಂದಿರುವ ಬಗ್ಗೆ ಪುರಾಣದಲ್ಲಿ, ಜನಪದದಲ್ಲಿ ಅನೇಕ ಉಲ್ಲೇಖಗಳಿವೆ.  ಅದೇ ರೀತಿ ಶಿವಮೊಗ್ಗದ ಹೊಸನಗರ ತಾಲೂಕಿನ ಕಾರಣಗಿರಿಯಲ್ಲಿ (Karanagiri) ಶ್ರೀರಾಮ ಸೀತೆಯನ್ನು ರಾವಣನ ಸೆರೆಯಿಂದ ಕರೆತರುವ ಮುನ್ನ ಹಾಗೂ ಕರೆದು ಮರಳುವಾಗ ಪೂಜಿಸಿದ್ದ ಎಂಬ ಕಥೆ ಸಹ ಇದೆ. 

    ಪುರಾಣ ಕಾಲದಲ್ಲಿ ಅಗಸ್ತ್ಯ ಮಹರ್ಷಿಗಳು ಕಾರಣಗಿರಿಯಲ್ಲಿ ಬಹುಕಾಲ ನೆಲೆನಿಂತು ಈಗಿನ ದೇಗುಲದ ಎದುರಿನ ಪುಷ್ಕರಣಿಯಲ್ಲಿ ವರಸಿದ್ಧಿವಿನಾಯಕ ಸ್ವಾಮಿಯ ವಿಗ್ರಹವನ್ನಿಟ್ಟು ಆರಾಧಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಹಲವು ವರ್ಷಗಳ ನಂತರ ಪುಷ್ಕರಣಿಯಿಂದ ಮೇಲ್ಭಾಗಕ್ಕೆ ತಂದು ಈಗಿರುವ ದೇವಾಲಯದ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ನಾಂದಿ ಹಾಕಿಕೊಟ್ಟರಂತೆ.

    ರಾಮಾಯಣ ಕಾಲದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದನಂತೆ. ಈ ವೇಳೆ ಸೀತೆಯೊಂದಿಗೆ ಹಿಂತಿರುಗಿ ಬರುವಾಗ ಮತ್ತೊಮ್ಮೆ ಬಂದು ಪೂಜಿಸಿ ಹೋಗುವಂತೆ ಅಗಸ್ತ್ಯರು ಶ್ರೀರಾಮನಿಗೆ ಸೂಚಿಸಿದರಂತೆ. ರಾವಣಾದಿಗಳನ್ನು ಮರ್ದಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುವ ಸಂತಸದಲ್ಲಿ ಇದೇ ದಾರಿಯಲ್ಲಿ ಹಿಂತಿರುಗುತ್ತಿದ್ದ ಶ್ರೀರಾಮ ಅಗಸ್ತ್ಯರ ಮಾತನ್ನು ಮರೆತನು. ಮುಂದಕ್ಕೆ ಪ್ರಯಾಣಿಸುತ್ತಿದ್ದಂತೆ ಶ್ರೀರಾಮ ಸಂಚರಿಸುತ್ತಿದ್ದ ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಬೆಟ್ಟ(ಗಿರಿ)ಅಡ್ಡ ನಿಂತಿತು. ಆಗ ಶ್ರೀರಾಮನು ಕಿಂ ಕಾರಣಂ ಗಿರಿಃ (ಈ ಬೆಟ್ಟ ಅಡ್ಡವೇಕೆ) ಎಂದನಂತೆ. ಇದೇ ಕಾರಣಕ್ಕೆ ಈ ಸ್ಥಳಕ್ಕೆ ಕಾರಣಗಿರಿ ಎಂಬ ಹೆಸರು ಬಂದಿದೆ. 

    ಬಳಿಕ ಜೊತೆಗಿದ್ದ ಲಕ್ಷ್ಮಣ ಅಗಸ್ತ್ಯರ ಮಾತನ್ನು ರಾಮನಿಗೆ ನೆನಪಿಸಿ ಸಿದ್ಧಿವಿನಾಯಕನನ್ನು ಪೂಜಿಸಲು ತಿಳಿಸಿದನಂತೆ. ನಂತರ ಶ್ರೀರಾಮ ಸೀತಾ ಸಹಿತನಾಗಿ ಬಂದು ಈ ದೇವರಿಗೆ ಪೂಜೆ ಸಲ್ಲಿಸಿ ಮುಂದೆ ಪ್ರಯಾಣ ಬೆಳೆಸಿ 2 ಕಿ.ಮೀ.ದೂರದ ಸ್ಥಳದಲ್ಲಿ ಶ್ರೀರಾಮಚಂದ್ರಾಪುರದಲ್ಲಿ ವಿಶ್ರಾಂತಿಗೆ ಉಳಿದನು. ಆತ ತಂಗಿದ್ದ ಆ ಸ್ಥಳ ಶ್ರೀರಾಮಚಂದ್ರಾಪುರ ಎಂದು ಪ್ರಸಿದ್ಧವಾಯಿತು. ಶಂಕಾರಾಚಾರ್ಯರ ಶಿಷ್ಯರಿಂದ ಈ ಸ್ಥಳದಲ್ಲಿ ಮಠ ಸ್ಥಾಪನೆಯಾಗಿ ಈಗ ಶ್ರೀರಾಮಚಂದ್ರಾಪುರ ಮಠ ಎಂದು ಪ್ರಸಿದ್ಧಿಯಾಗಿದೆ.

    ಪ್ರತಿ ವರ್ಷ ರಾಮ ನವಮಿಯಂದು ರಾಮಚಂದ್ರಾಪುರ ಮಠದಲ್ಲಿ ಮಹಾರಥೋತ್ಸವ ಜರುಗುತ್ತದೆ. ರಥೋತ್ಸವದ ಹಿಂದಿನ ದಿನ ಶ್ರೀರಾಮ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿ 2 ಕಿ.ಮೀ.ದೂರದ ಈ ದೇಗುಲಕ್ಕೆ ಆಗಮಿಸಿ ಪೂಜೆ ನಡೆಯುತ್ತದೆ. ಇದು ಶ್ರೀರಾಮನಿಗೂ ಇಲ್ಲಿನ ವಿನಾಯಕನಿಗೂ ಇರುವ ಸಂಬಂಧದ ಕುರುಹಾಗಿದೆ.

    ಇತ್ತೀಚೆಗೆ ವರ್ಷಾನುವರ್ಷ ಸತತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಈ ದೇಗುಲ ದಿನಂಪ್ರತಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ಪ್ರತಿ ಸಂಕಷ್ಠಿಯಂದು 48 ಕಾಯಿಗಳಿಗೆ ಕಡಿಮೆಯಿಲ್ಲದಷ್ಟು ಸಾಮೂಹಿಕ ಗಣ ಹೋಮ ನಡೆಯುತ್ತದೆ. ದೇಗುಲದ ಆವರಣದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವಿದ್ದು ಹಲವು ಶುಭ ಸಮಾರಂಭಗಳು ಜುರುಗುತ್ತಿರುತ್ತವೆ. 

    ಇಲ್ಲಿನ ಸಿದ್ಧಿವಿನಾಯಕ ಭಕ್ತರ ಅಭೀಷ್ಠಗಳನ್ನು ಸಿದ್ಧಿಸುತ್ತಾನೆಂಬ ಬಲವಾದ ನಂಬಿಕೆಯಿದೆ. ಹಲವು ಭಕ್ತರು ತಮ್ಮ ಕೋರಿಕೆ ಈಡೇರಿದ್ದಕ್ಕಾಗಿ ಹರಕೆ ಒಪ್ಪಿಸುತ್ತಿರುತ್ತಾರೆ. 

  • ಶ್ರೀಮಂತ ಗಣಪನಿಗೆ ಈ ಬಾರಿ 400 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

    ಶ್ರೀಮಂತ ಗಣಪನಿಗೆ ಈ ಬಾರಿ 400 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

    ದೇಶಾದ್ಯಂತ ಗಣೇಶ ಹಬ್ಬದ (Ganesh Chaturthi 2024) ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನ ಕೂರಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.

    ಗಣೇಶ ಚತುರ್ಥಿ ಹಬ್ಬ ಆಚರಣೆಗೆಂದೇ ದೇಶಾದ್ಯಂತ ನಾನಾ ಕಡೆ ಗಣೇಶ ಮೂರ್ತಿಗಳ (Ganesha Idol) ಮಾರಾಟ ನಡೆಯುತ್ತಿದೆ. ಗಲ್ಲಿ-ಗಲ್ಲಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನಡೆಯುತ್ತದೆ. ಬಳಿಕ ವಿಸರ್ಜನೆಯೂ ಅಷ್ಟೇ ವಿಜ್ರಂಭಣೆಯಿಂದ ಆಗುತ್ತದೆ. ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರೀ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ (GSB Seva Mandal) ಕೂಡ ಒಂದು. ಪ್ರತಿ ಬಾರಿಯೂ ಗಣೇಶ್‌ ಮೂರ್ತಿ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಲೇ ಗಮನ ಸೆಳೆಯುವ ಮಂಡಲ್‌ ಈ ಬಾರಿಯೂ ವಿಶ್ವದ ಶ್ರೀಮಂತ ಗಣಪನನ್ನು ಕೂರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್‌ಬಿ ಗಣಪನಿಗೆ ಈ ಬಾರಿ ದಾಖಲೆಯ 400.58 ಕೋಟಿ ರೂ. ವಿಮೆ ಮಾಡಲಾಗಿದೆ. ಆದ್ರೆ ಈ ಗಣೇಶ ಮೂರ್ತಿಯ ಅಧಿಕೃತ ಬೆಲೆ ಎಷ್ಟು ಎಂದು ಮಂಡಲ್‌ ಸುಳಿವು ಬಿಟ್ಟುಕೊಟ್ಟಿಲ್ಲ.

    ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಈ ಬಾರಿ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಸೆಪ್ಟೆಂಬರ್ 7 ರಿಂದ 11ರ ವರೆಗೆ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್‌ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಸೆಪ್ಟೆಂಬರ್ 5 ರಂದು ಜಿಎಸ್‌ಬಿ ಸೇವಾ ಮಂಡಲ ಮಾಡಲಿದೆ. ಜಿಎಸ್‌ಬಿ ಸೇವಾ ಮಂಡಲ್‌ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ.

    ಜಿಎಸ್‌ಬಿ ಮಂಡಲ್‌ ಈ ಬಾರಿ ಗಣೇಶಮೂರ್ತಿಗೆ ಬರೋಬ್ಬರಿ 66 ಕೆಜಿ ಚಿನ್ನ, 325 ಕೆಜಿ ಬೆಳ್ಳಿ ಹಾಗೂ ಇತರ ಅತ್ಯಮೂಲ್ಯ ಚಿನ್ನಾಭರಣಗಳನ್ನು ತೊಡಿಸಲಾಗುತ್ತದೆ. ಹೀಗಾಗಿ ಇದಕ್ಕೆ ಅಷ್ಟೇ ದುಬಾರಿ ಮೊತ್ತದ ವಿಮೆ ಮಾಡಿಸಲಾಗಿದೆ. 400.58 ಕೋಟಿ ರೂ. ವಿಮೆ ಮೊತ್ತಕ್ಕೆ ಪ್ರಿಮಿಯಂ ಎಷ್ಟು ಪಾವತಿ ಮಾಡಲಾಗಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದನ್ನೂ ಓದಿ: ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ಪ್ರತೀ ವರ್ಷದಂತೆ ಈ ವರ್ಷವೂ 5 ದಿನಗಳ ಗಣೇಶೋತ್ಸವ ಆಚರಿಸಲಾಗುತ್ತಿದೆ. ಎಂದಿನಂತೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಸೇರಿದಂತೆ ಯಾವುದೇ ಹಾನಿಕಾರ ವಸ್ತುಗಳ ಬಳಕೆ ಮಾಡಿಲ್ಲ. ಪೂರ್ತಿಯಾಗಿ ಮಣ್ಣಿನ ಗಣಪನನ್ನ ಕೂರಿಸಿ ಪೂಜೆ ಮಾಡಲಾಗುತ್ತದೆ ಎಂದು ಜಿಎಸ್‌ಬಿ ಸೇವಾ ಮಂಡಲ್ ಮುಖ್ಯಸ್ಥ ಅಮಿತ್ ದಿನೇಶ್ ಪೈ ಹೇಳಿದ್ದಾರೆ. ಇದನ್ನೂ ಓದಿ: ಗಣಪನಿಗಾಗಿ ವಿಭಿನ್ನ ಬಗೆಯ ಮೋದಕ ಹೀಗೆ ಮಾಡಿ!

    ಕಳೆದ ವರ್ಷ ಇದೇ ರೀ ವೈಭವೋಪೇತ ಗಣೇಶಮೂರ್ತಿಯೊಂದನ್ನ ಸೇವಾ ಮಂಡಲ ಪ್ರತಿಷ್ಠಾಪಿಸಿತ್ತು. ಈ ಗಣೇಶನ ಮೂರ್ತಿಯ ಅಲಂಕಾರಕ್ಕೆ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಕೆ ಮಾಡಲಾಗಿತ್ತು. ಕಳೆದ ವರ್ಷ 360.40 ಕೋಟಿ ರೂ. ವಿಮೆ ಮಾಡಲಾಗಿತ್ತು. ಈ ಬಾರಿ ಈ ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಸ್ವಯಂ ಸೇವಕರು, ಕಾರ್ಯಕರ್ತರು ಎಲ್ಲರು ಸಜ್ಜಾಗಿದ್ದಾರೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಳ್ಮೆಯಿಂದ ದರ್ಶನ ಮಾಡಬೇಕು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲ . ಇದನ್ನೂ ಓದಿ: ಗುಡಿ ಗೋಪುರವಿಲ್ಲದ ʼಸೌತಡ್ಕ ಮಹಾಗಣಪತಿʼಗೆ ಬಯಲೇ ಆಲಯ!

    5 ದಿನ, 24 ಗಂಟೆಯೂ ಪೂಜೆ:
    ದಕ್ಷಿಣ ಭಾರತೀಯ ಶೈಲಿಯ ಈ ವಿಗ್ರಹವನ್ನು ಜೇಡಿಮಣ್ಣು ಮತ್ತು ಹುಲ್ಲಿನಿಂದ ತಯಾರಿಸಲಾಗಿದೆ. ವಿಘ್ನೇಶ್ವರನನ್ನು ಕೂರಿಸಿದ ದಿನದಿಂದ ದಿನದ 5 ದಿನಗಳ ವರೆಗೆ ದಿನದ 24 ಗಂಟೆಯೂ ಪೂಜಾ ಕೈಂಕರ್ಯಗಳು ನೆರವೇರಲಿದೆ. ಪ್ರತಿದಿನ ದಿನಕ್ಕೆ 20 ಸಾವಿರದಂತೆ 5 ದಿನಗಳಲ್ಲಿ 1 ಲಕ್ಷ ಭಕ್ತರಿಗೆ ಅನ್ನದಾನ ಮತ್ತು ದೇವರ ಸೇವೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಪ್ರದರ್ಶನಗಳು ಇರಲಿವೆ. 5 ದಿನಗಳಲ್ಲಿ ಒಟ್ಟು 60,000 ಪೂಜೆಗಳನ್ನು ನೆರವೇರಿಸಲಾಗುತ್ತದೆ. ಈ ಬಾರಿ ಸುಮಾರು 5 ಲಕ್ಷ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ಸಾಧ್ಯೆಯಿದೆ ಎಂದು ಮಂಡಲದ ಭಕ್ತರು ತಿಳಿಸಿದ್ದಾರೆ.

  • ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ಯಾವುದೇ ಶುಭ ಕಾರ್ಯಗಳು ನಿರ್ವಿಘ್ನವಾಗಿ ಆಚರಣೆ ಮಾಡುವುದಕ್ಕಾಗಿಯೇ ಮೊದಲು ವಿಘ್ನೇಶ್ವರನ್ನು (Ganesha) ಪೂಜಿಸುತ್ತಾರೆ. ಆದ್ರೆ ಪೂಜಾ ಸಂದರ್ಭದಲ್ಲಿ ಗೋವಿನ ಸಗಣಿಯೊಂದಿಗೆ ಒಂದೆರಡು ಗರಿಕೆಗಳನ್ನೂ ಇಡುತ್ತಾರೆ. ಈ ಗರಿಕೆಯನ್ನು ಪೂಜಾ  ಕೈಂಕರ್ಯಕ್ಕೆ (Pooja Perfam) ಬಳಸುವುದಕ್ಕೂ ಒಂದು ಕಾರಣವಿದೆ. ಅದೇನು ಎಂದು ತಿಳಿಯಬೇಕೇ ಹಾಗಿದ್ದರೆ ಮುಂದೆ ಓದಿ…

    ಒಂದು ಸಾರಿ ಯಮಲೋಕದಲ್ಲಿ ಉತ್ಸವ ನಡೆದಿತ್ತು. ಉತ್ಸವದಲ್ಲಿ ಅಪ್ಸರೆಯರು ಮತ್ತು ನರ್ತಕಿಯರು ನೃತ್ಯ ಮಾಡುತ್ತಿದ್ದರು. ತಿಲೋತ್ತೆಮೆ ನೃತ್ಯ ಕಂಡ ಯಮ ಮೋಹಿತನಾದನು. ಯಮ ಅನುರಕ್ತನಾದ ಪರಿಣಾಮ ತಿಲೋತ್ತಮೆಯ ಗರ್ಭದಲ್ಲಿ ಭಯಂಕರ, ಕ್ರೂರ ಮತ್ತು ವಿಕಾರವಾದ ಅನಲಾಸುರ ಎಂಬ ರಾಕ್ಷಸ ಹುಟ್ಟಿಕೊಂಡನು. ಅನಲಾಸುರ ಹೋದ ಸ್ಥಳದಲ್ಲಿ ಅಗ್ನಿ ನಿರ್ಮಾಣವಾಗಿ ಎಲ್ಲವೂ ಭಸ್ಮವಾಗುತಿತ್ತು. ಇಂತಹ ಭಯಂಕರ ರಾಕ್ಷಸ ದೇವತೆಗಳನ್ನು ಬೆನ್ನಟ್ಟಲು ಆರಂಭಿಸಿದನು.

    ಅನಲಾಸುರನಿಂದ ಭಯಭೀತರಾದ ದೇವತೆಗಳು ಗಜಾನನ್ನು ಪ್ರಾರ್ಥಿಸಲು ಆರಂಭಿಸಿದರು. ಆಗ ಗಜಾನನ ಬಾಲ ರೂಪದಲ್ಲಿ ದೇವತೆಗಳ ಮುಂದೆ ಪ್ರತ್ಯಕ್ಷನಾಗಿ ಅನಲಾಸುರನನ್ನು ವಧೆ ಮಾಡಲಾಗುವುದು ಎಂದು ಭರವಸೆ ನೀಡಿದನು. ಅಷ್ಟರಲ್ಲಿ ದಶ ದಿಕ್ಕುಗಳನ್ನು ಭಸ್ಮ ಮಾಡುತ್ತ ಅನಲಾಸುರ ದೇವತೆಗಳ ಬಳಿ ಬಂದನು. ಎಲ್ಲ ದೇವತೆಗಳು ಭಯಗೊಂಡು ಅತ್ತಿತ್ತ ಓಡಾಡ ತೊಡಗಿದರು.

    ಬಾಲಗಣೇಶ ಮಾತ್ರ ನಿಂತಲ್ಲಿಯೇ ನಿಂತಿದ್ದನು. ಗಜಾನನ ಬಳಿ ಬಂದ ಅನಲಾಸುರ ಬಾಲಗಣೇಶನನ್ನು ನುಂಗಲು ಮುಂದೆ ಬಂದನು. ಅಷ್ಟರಲ್ಲಿಯೇ ಬಾಲ ಗಣೇಶ ದೈತ್ಯ ರೂಪ ತಾಳಿ ಅನಲಾಸುರನ್ನು ನುಂಗಿ ಬಿಟ್ಟನು. ಸಾಕ್ಷಾತ್ ಅಗ್ನಿ ಸ್ವರೂಪನಾದ ಅನಲಾಸುರನನ್ನು ನುಂಗಿದ್ದರಿಂದ ಗಜಾನನ ಶರೀರದಲ್ಲಿ ದಾಹ ಉದ್ಭವಿಸಿತು.

    ಗಣೇಶನ ಬಳಿ ಬಂದ ಸರ್ವ ದೇವತೆಗಳು ಆತನ ದಾಹವನ್ನು ಉಪಶಮನಿಸಲು ವಿವಿಧ ಉಪಾಯಗಳನ್ನು ಮಾಡಿದರು. ಇಂದ್ರದೇವ ಶೀತಲ ಚಂದ್ರ ಮತ್ತು ಅಮೃತವನ್ನು ಗಜಾನನ ತಲೆಯ ಮೇಲಿಟ್ಟರೂ ದಾಹ ಕಡಿಮೆಯಾಗಲಿಲ್ಲ. ಬ್ರಹ್ಮ ಸಿದ್ಧಿ ಮತ್ತು ಬುದ್ಧಿ ಎಂಬ ಮಾನಸ ಕನ್ಯೆಗಳನ್ನು ನೀಡಿದರೆ, ವಿಷ್ಣು ತನ್ನ ಕೈಯಲ್ಲಿದ್ದ ತಂಪಾದ ಕಮಲ ನೀಡಿದ. ವರುಣ ದೇವ ತಂಪಾದ ಜಲಾಭಿಷೇಕ ಮಾಡಿದ. ಪರಮೇಶ್ವರ ತನ್ನ ಶೇಷನಾಗನನ್ನು ಗಣೇಶನ ಹೊಟ್ಟೆಯ ಮೇಲೆ ಸುತ್ತಿದ. ದೇವತೆಗಳು ಎಲ್ಲಾ ರೀತಿಯಿಂದಲೂ ಉಪಾಯ ಮಾಡಿದರೂ ಗಜಾನನ ದಾಹ ಮಾತ್ರ ಕಡಿಮೆಯಾಗಲಿಲ್ಲ.

    ಕೊನೆಗೆ 88 ಸಹಸ್ರ ಮುನಿಗಳು 21 ಹಚ್ಚ ಹಸಿರಾದ ದ್ರುವ (ಗರಿಕೆ) ಗಣೇಶನ ಮಸ್ತಕದ ಮೇಲೆ ಸುರಿದರು. ಆಗ ಗಜಾನನ ದಾಹ ಕಡಿಮೆ ಆಯ್ತು. ಇದರಿಂದ ಗಣೇಶ ಪ್ರಸನ್ನಗೊಂಡು, ಅನೇಕ ಉಪಾಯದಿಂದ ನನ್ನ ಅಂಗದ ದಾಹ ಕಡಿಮೆ ಆಗಲಿಲ್ಲ. ದ್ರುವದಿಂದ ಮಾತ್ರ ನನ್ನ ಅಂಗದ ದಾಹ ಕಡಿಮೆ ಆಯ್ತು. ಇನ್ನ್ಮುಂದೆ ನನಗೆ ದ್ರುವ ಅರ್ಪಣೆ ಮಾಡುವವರಿಗೆ ಸಾವಿರಾರು ಯಜ್ಞ, ವ್ರತ, ತೀರ್ಥಯಾತ್ರೆ ಮತ್ತು ದಾನ ಮಾಡಿದ ಪುಣ್ಯ ಲಭಿಸಲಿದೆ ಎಂದು ಹೇಳಿದ. ಹೀಗಾಗಿ ಈಗಲೂ ಗಣಪತಿಗೆ ಗರಿಕೆಯನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದ್ರೆ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.

  • ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರು: ಗೌರಿ-ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸಮಯದಲ್ಲಿ ಆಯೋಜಕರು ಜಿಲ್ಲಾಧಿಕಾರಿಗಳ (Tumkur DC) ಆದೇಶದಂತೆ ಪ್ರಸಾದ ವಿತರಿಸಲು ಕಡ್ಡಾಯವಾಗಿ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಪಟೂರು ತಾಲೂಕು ದಂಡಾಧಿಕಾರಿ ಪವನ್‌ಕುಮಾ‌ರ್ ತಿಳಿಸಿದ್ದಾರೆ.

    ತಾಲ್ಲೂಕು ಆಡಳಿತ ಸೌಧದಲ್ಲಿ ಗೌರಿ-ಗಣೇಶ ಮೂರ್ತಿ (Gowri Ganesha Idol) ಪ್ರತಿಷ್ಠಾಪನೆಗೆ ಸಂಬಧಿಸಿದಂತೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನೆಡಸಿ ವಿವಿಧ ಇಲಾಖೆಗಳ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ-ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಏಕ ಗವಾಕ್ಷಿ ತಂತ್ರಾಶಗಳ ಮೂಲಕ ಅನುಮತಿ ಪಡೆಯಬೇಕು ಎಂದು ದಂಡಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    ಏನು ಆ 33 ಷರತ್ತುಗಳು?
    ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಗಣೇಶ ಮೂರ್ತಿ ಪ್ರತಿಷ್ಟಾಪನೆ ಸಂದರ್ಭದಲ್ಲಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ಗಣೇಶ ಮಂಟಪದಲ್ಲಿ ನಿರ್ಮಿಸಬೇಕು. ಮಂಟಪದ ಹತ್ತಿರ ನೀರು, ಮರಳು ಸಂಗ್ರಹಿಸಬೇಕು. ಗಣೇಶ ಮಂಟಪದ ಹತ್ತಿರ ಬೆಳಕಿನ ವ್ಯವಸ್ಥೆ ಆಯೋಜನೆ, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ವಿದ್ಯುತ್ ಕಂಬ, ದೂರವಾಣಿ ಕಂಬಗಳಿಗೆ ಆಳವಡಿಸದಂತೆ ಎಚ್ಚರಿಕೆ ವಹಿಸಬೇಕು. ಜನಸಂದಣಿ ನಿಯಂತ್ರಿಸಲು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳಿರಬೇಕು. ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಉಪಯೋಗಿಸಬೇಕು.

    ಡಿಜೆ ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ಇರುವುದಿಲ್ಲ, ಮಂಟಪಗಳ ಹತ್ತಿರ ಆಕ್ರಮ ಮಧ್ಯ ಸೇವನೆ ಮಾಡುವುದನ್ನು ಕಡ್ಡಾಯವಾಗಿ ನಿಯಂತ್ರಿಸಲಾಗಿದೆ. ಗಣಪತಿ ಮಂಟಪದ ಹತ್ತಿರ ಪ್ರಥಮ ಚಿಕಿತ್ಸಾ ಪಟ್ಟಿಗೆ ಇಡುವುದು, ಪಿಒಪಿ ಮತ್ತು ಬಣ್ಣಲೇಪಿತ ಗಣೇಶಗಳನ್ನು ಹೊರತುಪಡಿಸಿ ಮಣ್ಣಿನಿಂದ ಮಾಡಿರುವ ಗಣಪತಿಯನ್ನು ಸ್ಥಾಪನೆಗೆ ಅವಕಾಶ ಮಾಡಿಕೊಡುವುದು. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಕಿರಿಕ್ – ಊಟ ನೀಡದ್ದಕ್ಕೆ ಡಾಬಾ ಮಾಲೀಕನಿಗೆ ಚಾಕು ಇರಿತ

    ನಗರ ಸಭೆಯಿಂದ ಸೂಚಿಸಿರುವ ಕೆರೆಯ ಆವರಣದ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಬೇಕು ಹಾಗೂ ಪಂಚಾಯಿತಿಯ ಪಿಡಿಒ ತಿಳಿಸಿರುವಂತೆ ಗಣಪತಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ಮಾಡಬೇಕು. ಪ್ರಸಾದ ವಿನಿಯೋಗ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಇಲಾಖೆ ವತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ 133 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

    ಸಭೆಯಲ್ಲಿ ನಗರಸಭೆ ಪೌರಯುಕ್ತ ವಿಶ್ವೇಶ್ವರಯ್ಯ ಬದರಗಡೆ, ತಾಪಂ ಇಒ ಸುದರ್ಶನ್, ನಗರ ಆರಕ್ಷಕ ಅಧಿಕಾರಿ ವೆಂಕಟೇಶ್, ಬೆಸ್ಕಾಂ ಎಇಇ ಮನೋಹರ್, ತೋಟಗಾರಿಕೆ ಅಧಿಕಾರಿ ಚಂದ್ರಶೇಖರ್, ಆರ್‌ಟಿಒ ಅಧಿಕಾರಿ ಭಗವಂತ್ ದಾಸ್, ತಾಲೂಕು ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ, ಅಗ್ನಿಶಾಮಕ ದಳದ ಭರತ್ ಹಾಜರಿದ್ದರು. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು