Tag: ganesha festival

  • ಚಂದ್ರಯಾನ ವಿಶೇಷ – ಗಣೇಶನಾದ ಇಸ್ರೋ ಅಧ್ಯಕ್ಷ ಕೆ. ಶಿವನ್

    ಚಂದ್ರಯಾನ ವಿಶೇಷ – ಗಣೇಶನಾದ ಇಸ್ರೋ ಅಧ್ಯಕ್ಷ ಕೆ. ಶಿವನ್

    ಬೆಂಗಳೂರು: ನಾಡಿನೆಲ್ಲೆಡೆ ವಿಘ್ನ ವಿನಾಶಕ ವಿಘ್ನೇಶ್ವರನ ಆರಾಧನೆ ಜೋರಾಗಿ ನಡೆಯುತ್ತಿದೆ. ನಗರದಲ್ಲಿ ಒಂದಕ್ಕಿಂತ ಒಂದು ವಿಶೇಷ, ವಿಭಿನ್ನವಾದ ಗಣೇಶಗಳು ಕಣ್ಮನ ಸೆಳೆಯುತ್ತಿವೆ.

    ಅದರಲ್ಲೂ ಬೆಂಗಳೂರಿನ ಕಬ್ಬನ್ ಪೇಟೆಯ ಲಕ್ಕಿ ಬಾಯ್ಸ್ ಗಣೇಶೋತ್ಸವ ಮಂಡಳಿ ವತಿಯಿಂದ ವಿಶೇಷವಾದ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನದ ಪ್ರತಿರೂಪವಾದ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

    ಇಸ್ರೋ ಅಧ್ಯಕ್ಷ ಕೆ.ಶಿವನ್ ಗಣೇಶನ ರೂಪದಲ್ಲಿ ಕಂಗೊಳಿಸುತ್ತಿದ್ದಾರೆ. ಜೊತೆಗೆ ಚಂದ್ರನತ್ತ ಧಾವಿಸಿರುವ ಉಪಗ್ರಹವನ್ನು ಇಡಲಾಗಿದೆ. ಇದರ ಸುತ್ತ ಚಂದ್ರಯಾನದ ವಿವಿಧ ಹಂತಗಳನ್ನು ಫೋಟೋಗಳ ಮೂಲಕ ಸೆರೆ ಹಿಡಿಯಲಾಗಿದೆ. ಚಂದ್ರಯಾನಕ್ಕೆ ಯಾವುದೇ ವಿಘ್ನಗಳು ಬಾರದೇ, ಯಶಸ್ವಿಯಾಗಲೆಂದು ಗಣೇಶನ ಮೂಲಕ ಶುಭ ಹಾರೈಸುತ್ತೇವೆ ಎನ್ನುತ್ತಾರೆ ಆಯೋಜಕರು.

  • ಹುಲಿವೇಷಧಾರಿಗಳ ಟೆಂಪೋ ಪಲ್ಟಿ – ಓರ್ವ ಸಾವು, ಮೂವರಿಗೆ ಗಾಯ

    ಹುಲಿವೇಷಧಾರಿಗಳ ಟೆಂಪೋ ಪಲ್ಟಿ – ಓರ್ವ ಸಾವು, ಮೂವರಿಗೆ ಗಾಯ

    ಉಡುಪಿ: ಹುಲಿವೇಷಧಾರಿಗಳ ಟೆಂಪೋ ಪಲ್ಟಿಯಾಗಿ ಓರ್ವ ವೇಷಧಾರಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಉಡುಪಿ ಸಂತೆಕಟ್ಟೆ ಸಮೀಪದ ನೇಜಾರಿನಲ್ಲಿ ನಡೆದಿದೆ.

    ಘಟನೆಯಲ್ಲಿ ಸಾವನ್ನಪ್ಪಿದ ಹುಲಿವೇಷಧಾರಿಯನ್ನು 22 ವರ್ಷದ ಸುಮಂತ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮೂವರು ವೇಷಧಾರಿಗಳನ್ನು ಹತ್ತಿರದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಗಣೇಶ ಚತುರ್ಥಿ ಪ್ರಯುಕ್ತ ಹುಲಿವೇಷ ಹಾಕಿದ್ದ ತಂಡದಲ್ಲಿ ಸ್ಥಳೀಯ ಯುವಕರು ಮತ್ತು ಮಕ್ಕಳು ಕೂಡ ತಂಡದಲ್ಲಿದ್ದರು. ಈ ವೇಳೆ ನೇಜಾರು ಮಾರ್ಗದಲ್ಲಿ ಹೋಗುವಾಗ ಟೆಂಪೋ ಆಯತಪ್ಪಿ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಸಂಬಂಧ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಸಲ್ಮಾನ್ ಖಾನ್ ಮಸ್ತ್ ಡ್ಯಾನ್ಸ್: ವಿಡಿಯೋ

    ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಸಲ್ಮಾನ್ ಖಾನ್ ಮಸ್ತ್ ಡ್ಯಾನ್ಸ್: ವಿಡಿಯೋ

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

    ಸಲ್ಮಾನ್ ಖಾನ್ ಅವರು ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಗಣೇಶ ವಿಸರ್ಜನೆ ಸಮಯದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಸಲ್ಮಾನ್ ಅವರಿಗೆ ನಟಿಯರು ಸಾಥ್ ನೀಡಿದ್ದರು.

    ನಟಿಯರಾದ ಸ್ವರಾ ಭಾಸ್ಕರ್ ಹಾಗೂ ಡೇಸಿ ಶಾ ಅವರು ಸಲ್ಮಾನ್ ಖಾನ್ ಅವರ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅರ್ಪಿತಾ ಅವರ ಮನೆಯ ಗಣೇಶ ಪೂಜೆಯಲ್ಲಿ ಇಡೀ ಖಾನ್ ಕುಟುಂಬಸ್ಥರು ಭಾಗವಹಿಸಿದ್ದರು. ಖಾನ್ ಕುಟುಂಬಸ್ಥರು ಹೊರತಾಗಿ ನಟಿ ಸೋನಾಕ್ಷಿ ಸಿನ್ಹಾ, ಸ್ವರಾ ಭಾಸ್ಕರ್, ಡೇಸಿ ಶಾ, ಅಂಗದ್ ಬೇಡಿ ಹಾಗೂ ಅವರ ಪತ್ನಿ ನೇಹಾ ದುಪಿಯಾ ಸೇರಿದಂತೆ ಹಲವು ಕಲಾವಿದರು ಅರ್ಪಿತಾ ಅವರ ಮನೆಯಲ್ಲಿ ಉಪಸ್ಥಿತರಿದ್ದರು.

    ಅರ್ಪಿತಾ ಅವರ ಮನೆಯಲ್ಲಿ ನಡೆದ ಪೂಜೆಯ ಫೋಟೋ ಹಾಗೂ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋವೊಂದರಲ್ಲಿ ನಟಿ ನೇಹಾ ದುಪಿಯಾ ಹಾಗೂ ಅವರ ಪತಿ ಅಂಗದ್ ಬೇಡಿ ಪೂಜೆ ಮಾಡಿದ್ದಾರೆ. ಅಲ್ಲದೆ ಮತ್ತೊಂದು ವಿಡಿಯೋದಲ್ಲಿ ಸಲ್ಮಾನ್ ಡೈಸಿ ಶಾ ಹಾಗೂ ಸ್ವರಾ ಭಾಸ್ಕರ್ ಅವರ ಜೊತೆ ಡೋಲು ಸದ್ದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    Swara Bhaskar killing it with @shahdaisy and @beingsalmankhan at ganpati

    A post shared by Ashley Rebello (@ashley_rebello) on

  • ಕುಡಿದ ಮತ್ತಲ್ಲಿ ಗಣೇಶನ ಮೂರ್ತಿ ಧ್ವಂಸ – ಪ್ರಶ್ನಿಸಿದವರಿಗೆ ಅವಾಜ್

    ಕುಡಿದ ಮತ್ತಲ್ಲಿ ಗಣೇಶನ ಮೂರ್ತಿ ಧ್ವಂಸ – ಪ್ರಶ್ನಿಸಿದವರಿಗೆ ಅವಾಜ್

    ಹಾಸನ: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ಮೂರ್ತಿಯನ್ನು ಧ್ವಂಸಗೊಳಿಸಿ ದುಷ್ಟತನ ಮೆರೆದಿದ್ದಾರೆ.

    ಜಿಲ್ಲೆಯ ಆಲೂರು ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳ್ಳಿಕೊಪ್ಪಲು ಗ್ರಾಮದ ನಿವಾಸಿಗಳಾದ ಹರೀಶ ಮತ್ತು ಸಚಿನ್ ಈ ಕೃತ್ಯವೆಸೆಗಿದ್ದಾರೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಗಣೇಶನನ್ನು ಕೂರಿಸಲಾಗಿದೆ ಎಂಬ ಕಾರಣಕ್ಕೆ ಇಬ್ಬರೂ ಕೋಪಗೊಂಡಿದ್ದರು. ಆದ್ದರಿಂದ ಸೋಮವಾರ ರಾತ್ರಿ ಕುಡಿದು ಬಂದು ಗಣಪನ ಮೂರ್ತಿಯನ್ನು ಒಡೆದು ಹಾಕಿದ್ದಾರೆ.

    ಈ ವೇಳೆ ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಅವರಿಗೂ ಯುವಕರು ಅವಾಜ್ ಹಾಕಿದ್ದಾರೆ. ತಮ್ಮ ಮಾತಿಗೆ ಬೆಲೆಕೊಡದ ಗ್ರಾಮಸ್ಥರ ಮಾತು ಏಕೆ ಕೇಳಬೇಕು ಎನ್ನುವ ರೀತಿ ಇಬ್ಬರು ವರ್ತಿಸಿದ್ದಾರೆ. ಎಲ್ಲೆಡೆ ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರೆ, ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾತ್ರ ಯುವಕರ ಕೋಪಕ್ಕೆ ಗಣೇಶ ಮೂರ್ತಿ ಚೂರು ಚೂರಾಗಿದೆ.

  • ಗಣೇಶ ಹಬ್ಬದಿಂದ ದೂರ ಉಳಿದ ರಾಯಚೂರು ಗ್ರಾಮಸ್ಥರು

    ಗಣೇಶ ಹಬ್ಬದಿಂದ ದೂರ ಉಳಿದ ರಾಯಚೂರು ಗ್ರಾಮಸ್ಥರು

    ರಾಯಚೂರು: ದೇಶಾದ್ಯಂತ ಈಗ ವಿಘ್ನನಿವಾರಕ ಗಣೇಶನದ್ದೇ ಹವಾ, ಎಲ್ಲಿ ನೋಡಿದ್ರೂ ಗಣೇಶನ ಪ್ರತಿಷ್ಠಾಪನೆ, ವಿಸರ್ಜನೆಯದ್ದೇ ಸಂಭ್ರಮ. ಆದರೆ ವರುಣನ ಕೋಪಕ್ಕೆ ತುಂಬಿ ಹರಿದ ಕೃಷ್ಣೆಯ ಪ್ರವಾಹದಿಂದ ಸಂತ್ರಸ್ತರಾದ ನೆರೆಪೀಡಿತ ಜನ ಗಣೇಶ ಹಬ್ಬವನ್ನು ಆಚರಿಸುವ ಸ್ಥಿತಿಯಲ್ಲಿಲ್ಲ. ರಾಯಚೂರಿನ ಗುರ್ಜಾಪುರ ಗ್ರಾಮಸ್ಥರು ಮನೆಮಠ ಕಳೆದುಕೊಂಡು ಹಬ್ಬಹುಣ್ಣಿಮೆಗಳನ್ನೇ ಮರೆತಿದ್ದಾರೆ.

    ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿರುವ ರಾಯಚೂರಿನ ಗುರ್ಜಾಪುರ ಗ್ರಾಮದಲ್ಲಿ ಈ ವರ್ಷ ಗಣೇಶ ಹಬ್ಬವನ್ನೇ ಆಚರಿಸುತ್ತಿಲ್ಲ. ಕಳೆದ 25 ವರ್ಷಗಳಿಂದ ವಿಜೃಂಭಣೆಯಿಂದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದ ಗ್ರಾಮದ ಜನ ಈಗ ಮನೆಯಲ್ಲೂ ಹಬ್ಬ ಆಚರಿಸುವ ಸ್ಥಿತಿಯಲ್ಲಿಲ್ಲ. ಕೃಷ್ಣಾ ನದಿ ತುಂಬಿ ಹರಿದು ಜಮೀನುಗಳು ಹಾಗೂ ಬೆಳೆ ಹಾಳಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಬರಗಾಲ. ಮಳೆಯಿಲ್ಲದೆ ಬೆಳೆಯಿಲ್ಲ ಎನ್ನುವ ಕೊರಗಿನ ಮಧ್ಯೆ ಹಾಗೋ ಹೀಗೋ ಬೆಳೆದು ನಿಂತ ಬೆಳೆಯೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ವಸ್ತುಗಳೆಲ್ಲಾ ಕೃಷ್ಣೆ ಪಾಲಾಗಿವೆ. ದಾನಿಗಳು ಕೊಟ್ಟ ದವಸಧಾನ್ಯ, ವಸ್ತುಗಳಲ್ಲೇ ಎಷ್ಟೋ ಜನ ಬದುಕುತ್ತಿದ್ದಾರೆ. ಹೀಗಾಗಿ ಈ ವರ್ಷ ಗಣೇಶ ಹಬ್ಬದಿಂದ ಗ್ರಾಮಸ್ಥರು ದೂರ ಉಳಿದಿದ್ದಾರೆ.

    ಪ್ರವಾಹದಿಂದಾಗಿ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ. ಈಗಲೂ ಜನ ಮನೆಯಲ್ಲಿ ತುಂಬಿದ ಕೆಸರನ್ನು ತೆಗೆಯುತ್ತಲೇ ಇದ್ದಾರೆ. ಮನೆ ಕಳೆದುಕೊಂಡು ನಿರಾಶ್ರಿತರಾದವರು ಇದ್ದಾರೆ. ಮನೆ ಸ್ವಚ್ಛ ಮಾಡಿಕೊಳ್ಳುವುದು ಸೇರಿ ಸಂತ್ರಸ್ತರಿಗೆ ಸರ್ಕಾರ 10 ಸಾವಿರ ರೂ. ನೀಡುತ್ತಿದೆ. ಆದರೆ ಸಂತ್ರಸ್ತರು ಪುನಃ ಬದುಕು ಕಟ್ಟಿಕೊಳ್ಳಲು ಈ ಅಲ್ಪ ಸಹಾಯ ಸಾಕಾಗುವುದಿಲ್ಲ. ಹೀಗಾಗಿ ಗ್ರಾಮವನ್ನು ಸ್ಥಳಾಂತರ ಮಾಡಿ ಹೊಸ ಬದುಕು ನೀಡಲು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಕಷ್ಟಗಳ ಮಧ್ಯೆ ಗಣೇಶ ಹಬ್ಬವನ್ನೇ ಮರೆತುಹೋಗಿದ್ದಾರೆ.

  • ಹಿಂದೂ ಮುಸ್ಲಿಂ ಗೆಳೆಯರಿಂದ ಅದ್ಧೂರಿಯಾಗಿ ಗಣೇಶ ಪ್ರತಿಷ್ಠಾಪನೆ

    ಹಿಂದೂ ಮುಸ್ಲಿಂ ಗೆಳೆಯರಿಂದ ಅದ್ಧೂರಿಯಾಗಿ ಗಣೇಶ ಪ್ರತಿಷ್ಠಾಪನೆ

    ದಾವಣಗೆರೆ: ಇಂದು ದೇಶದೆಲ್ಲಡೆ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಪೂಜೆ ಮಾಡುತ್ತಿದ್ದು, ಆದರಲ್ಲೂ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾಂದವರು ಕೂಡಿ ಭಾವೈಕ್ಯತೆಯಿಂದ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

    ದಾವಣಗೆರೆಯ ವಿನೋಭಾನಗರದ 7ನೇ ಕ್ರಾಸ್ ನಲ್ಲಿ ಹ್ಯಾಪಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸರ್ವಧರ್ಮ ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು. ಕೇವಲ ಹಿಂದೂಗಳೇ ಆರಾಧಿಸುವ ಗಣೇಶೋತ್ಸವವನ್ನು ಹಿಂದೂ-ಮುಸ್ಲಿಂಮರು ಸೇರಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಿದರು.

    ಪ್ರತಿ ವರ್ಷವೂ ಕೂಡ ಹಿಂದೂ ಮುಸ್ಲಿಂ ಬಾಂಧವರು ಸೇರಿ ಭಾವೈಕ್ಯತೆಯಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡುತ್ತಿದ್ದು, ಇದು ಇತರರಿಗೂ ಮಾರ್ಗದರ್ಶನವಾಗಲಿ ಎನ್ನುವುದು ನಮ್ಮ ಕಳಕಳಿಯಾಗಿದೆ ಎನ್ನುತ್ತಾರೆ ಹಿಂದೂ ಮುಸ್ಲಿಂ ಗೆಳಯರು. ಅಲ್ಲದೇ ಡೊಳ್ಳು ಬಾರಿಸುತ್ತ ಹಿಂದೂ ಮುಸ್ಲಿಂ ಬಾಂಧವರು ಸೇರಿ ಹೆಜ್ಜೆ ಹಾಕುತ್ತ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು.

  • ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಬೆಂಗಳೂರು: ದೇಶದ್ಯಾಂತ ಆಚರಿಸುವ ಗೌರಿ ಗಣೇಶ ಹಬ್ಬಕ್ಕೆ ಒಡೆಯ ಪೋಸ್ಟರ್ ಹಾಕುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಸಮಸ್ತ ಜನತೆಗೆ ಶುಭಕೋರಿದ್ದಾರೆ.

    ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ದರ್ಶನ್ ಅವರು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು, ನಿಮ್ಮ ಎಲ್ಲ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ನಲ್ಲಿ ಸಂದೇಶ್ ಪ್ರೊಡಕ್ಷನ್‍ನಲ್ಲಿ ಎಂ.ಡಿ ಶ್ರೀಧರ್ ಅವರು ನಿರ್ದೇಶನ ಮಾಡುತ್ತಿರುವ ಒಡೆಯ ಸಿನಿಮಾದ ಪೋಸ್ಟರ್ ಹಾಕಿದ್ದಾರೆ. ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಹಬ್ಬಕ್ಕೆ ಶುಭಕೋರಿದ್ದು, ಅವರ ಅಭಿನಯದ ಗೀತಾ ಚಿತ್ರದ ಪೋಸ್ಟರ್ ಹಾಕಿ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • ಗಣೇಶ ಹಬ್ಬಕ್ಕೆ ಫಟಾಫಟ್ ಮಾಡಿ ಚೂರ್ಮಾ ಲಡ್ಡು

    ಗಣೇಶ ಹಬ್ಬಕ್ಕೆ ಫಟಾಫಟ್ ಮಾಡಿ ಚೂರ್ಮಾ ಲಡ್ಡು

    ಲ್ಲರ ಮನೆಗಳಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ನಡೆಯುತ್ತಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರಸಾದಕ್ಕೆ ಏನು ಮಾಡಬೇಕು ಗೊಂದಲದಲ್ಲಿಯೇ ಮುಳುಗಿರುತ್ತಾರೆ. ಸಾಮಾನ್ಯವಾಗಿ ಗಣೇಶನ ಹಬ್ಬಕ್ಕೆ ಮೋದಕ, ಸಿಹಿ ಕಡಬು ಮಾಡುತ್ತಾರೆ. ಈ ವರ್ಷ ಸ್ವಲ್ಪ ವಿಭಿನ್ನವಾಗಿ ಚೂರ್ಮಾ ಲಡ್ಡು ಮಾಡಿ. ಚೂರ್ಮಾ ಲಡ್ಡು ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಚೂರ್ಮ(ರವೆ) – 2 ಕಪ್
    2. ತುಪ್ಪ – ಅರ್ಧ ಕಪ್
    3. ಬೆಲ್ಲ – ಒಂದುವರೆ ಕಪ್
    4. ಏಲಕ್ಕಿ ಪುಡಿ – 1/4 ಚಮಚ
    5. ಒಣಗಿದ ತೆಂಗಿನ ತುರಿ -2 ಚಮಚ
    6. ಬಾದಾಮಿ, ಗೋಡಂಬಿ – ಅರ್ಧ ಕಪ್
    7. ಒಣದ್ರಾಕ್ಷಿ -2 ಚಮಚ
    8. ಗಸೆಗಸೆ – 1/2 ಚಮಚ

    ಮಾಡುವ ವಿಧಾನ
    * ಒಂದು ಬೌಲ್‍ಗೆ ರವಾ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು (ಅರ್ಧ ಕಪ್) ಹಾಕಿ ಊರ್ಣದ ರೀತಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಪ್ಲೇಟ್ ಮುಚ್ಚಿಟ್ಟು 30 ನಿಮಿಷ ಹಾಗೆ ಬಿಡಿ.
    * ಈಗ ಮಿಕ್ಸ್ ಮಾಡಿದ್ದ ಊರ್ಣವನ್ನು ಸಣ್ಣಗೆ ಉಂಡೆ ಮಾಡಿ, ವಡೆ ರೀತಿ ಸ್ವಲ್ಪ ತಟ್ಟಿ ಒಂದು ಪ್ಲೇಟಿನಲ್ಲಿ ಇಟ್ಟುಕೊಳ್ಳಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಉಂಡೆ ಮಾಡಿಟ್ಟಿದ್ದನ್ನು ಹಾಕಿ 12-13 ನಿಮಿಷ ಬೇಯಿಸಿ.
    * ಈಗ ಒಂದು ಬೌಲ್‍ಗೆ ಹಾಕಿ ಸಣ್ಣ ಸಣ್ಣಗೆ ಕಟ್ ಮಾಡಿ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
    * ಒಂದು ಪ್ಯಾನ್‍ಗೆ ಎರಡು ಚಮಚ ತುಪ್ಪ ಹಾಕಿ, ಅದಕ್ಕೆ ಪೀಸ್ ಪೀಸ್ ಮಾಡಿದ್ದ ಬೆಲ್ಲವನ್ನು ಹಾಕಿ. (ಸಿಹಿ ಬೇಕಾದಲ್ಲಿ ಇನ್ನೂ ಹಾಕಬಹುದು)
    * ಬೆಲ್ಲ ಕರಗಿದ ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
    * ಈಗ ಒಂದು ಬೌಲ್‍ಗೆ ರುಬ್ಬಿದ ಪುಡಿ, ಬೆಲ್ಲದ ಪಾಕ, ತೆಂಗಿನ ತುರಿ, ಸಣ್ಣಗೆ ಪೀಸ್ ಮಾಡಿರುವ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಗಸಗಸೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಕೈಯಲ್ಲಿ ಲಡ್ಡು ಆಕಾರಕ್ಕೆ ಉಂಡೆ ಮಾಡಿ ಒಂದು ಪ್ಲೇಟ್‍ಗೆ ಹಾಕಿ 2-3 ಗಂಟೆ ಒಣಗಲು ಬಿಡಿ. ನಂತರ ಗಣೇಶನಿಗಾಗಿ ಚೂರ್ಮ ಲಡ್ಡು ಸಿದ್ಧ. ಮೋಲ್ಡ್ ಬಳಸಿ ಬೇಕಾದ ಆಕಾರದಲ್ಲಿ ಲಡ್ಡುಗಳನ್ನು ಮಾಡಬಹುದು.

    ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಇದನ್ನೂ ಓದಿ: ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

  • ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಗಣಪನಿಗೆ ಇಷ್ಟವಾಗುವ ತಿಂಡಿಗಳಲ್ಲಿ ಮೋದಕವೂ ಒಂದು. ಗಣೇಶನನ್ನು ಮೋದಕ ಪ್ರಿಯ ಎಂದು ಕೂಡ ಕರೆಯುತ್ತಾರೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ ಹಿಟ್ಟು – 1 ಕಪ್
    2. ಚಿರೋಟಿ ರವೆ – 1/4 ಕಪ್
    3. ಉಪ್ಪು – ಚಿಟಿಕೆ
    4. ಬೆಲ್ಲ – 1 ಅಚ್ಚು
    5. ಕೊಬ್ಬರಿ ತುರಿ – 1 ಕಪ್
    6. ಏಲಕ್ಕಿ ಪುಡಿ
    7. ಗಸಗಸೆ – 1 ಚಮಚ
    8. ಎಳ್ಳು -ಸ್ವಲ್ಪ
    9. ಗೋಡಂಬಿ, ಬಾದಾಮಿ – 3-4 ಚಮಚ
    1. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಊರ್ಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಊರ್ಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಊರ್ಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

  • ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ: ಯತ್ನಾಳ್ ಮನವಿ

    ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ: ಯತ್ನಾಳ್ ಮನವಿ

    ಬೆಂಗಳೂರು: ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.

    ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಯತ್ನಾಳ್ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲು ಅವಕಾಶ ಮಾಡಿಕೊಡಿ. ಎಲ್ಲದಕ್ಕೂ ನಿರ್ಬಂಧ ಹಾಕಿದರೆ ಹಬ್ಬ ಆಚರಣೆ ಮಾಡಲು ಆಗುವುದಿಲ್ಲ ಎಂದು ಮನವಿ ಮಾಡಿದರು.

    ಹಬ್ಬದಲ್ಲಿ ಡಿಜೆ ಹಾಕೋಕು ಅನುಮತಿ ಪಡೆಯಬೇಕು. ಹೀಗಾಗಿ ಧರ್ಮದ ಹಿರಿಯರು, ಸಂಘ ಸಂಸ್ಥೆಗಳು ನನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಸರ್ಕಾರದ ಹಬ್ಬ ಆಚರಣೆ ಮಾಡಲು ಅನುಮತಿ ಪಡೆಯುವ ನಿಯಮವನ್ನು ರದ್ದುಗೊಳಿಸಬೇಕು. ಹಿಂದೂಗಳು ನಿರ್ಭೀತಿ ಇಂದ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಚಳುವಳಿ ಮಾಡುತ್ತೇವೆ ಎಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ನಾನು ಇಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.