Tag: ganesha festival

  • ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯನ್ನು ಭಾವನಾತ್ಮಕ ವಿಷಯ ಮಾಡುವ ಅಗತ್ಯವಿಲ್ಲ: ಶೆಟ್ಟರ್

    ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯನ್ನು ಭಾವನಾತ್ಮಕ ವಿಷಯ ಮಾಡುವ ಅಗತ್ಯವಿಲ್ಲ: ಶೆಟ್ಟರ್

    ಧಾರವಾಡ: ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಿರ್ಬಂಧ ಖಂಡಿಸಿ ಕೆಲ ಸಂಘಟನೆಗಳು ವಿರೋಧ ಮಾಡಿದ್ದು, ಇದಕ್ಕೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಇದನ್ನು ಭಾವನಾತ್ಮಕ ವಿಷಯ ಮಾಡುವ ಅಗತ್ಯ ಇಲ್ಲ. ಹೆಚ್ಚು ಜನ ಸೇರುವ ಯಾವುದಕ್ಕೂ ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಕೊರೊನಾ ಪಿಡುಗು ಹೋಗಿಲ್ಲ. ಹೀಗಾಗಿ ಅವಾಕಾಶ ನೀಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನವೂ ಇದೆ. ಈಗಾಗಲೇ ಡಿಸಿಗಳಿಗೆ ಸುತ್ತೋಲೆಗಳು ಬಂದಿವೆ ಎಂದು ಹೇಳಿದರು.

    ಇಷ್ಟೆಲ್ಲ ಇದ್ದಾಗ ಏನೂ ಮಾಡಿದರೂ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ. ಜನರು ಸಂತೆಯಲ್ಲೇ ಸಾಮಾಜಿಕ ಅಂತರ ಕಾಯುತ್ತಿಲ್ಲ. ಹೀಗಾಗಿ ಗಣೇಶೋತ್ಸವ ನಿರ್ಬಂಧ ಆಗಿದೆ ಎಂದರು. ಇದೇ ವೇಳೆ ಮಹದಾಯಿ ಕಾಮಗಾರಿ ಆರಂಭ ವಿಚಾರವಾಗಿ ಮಾತನಾಡಿದ ಅವರು, ಪರಿಸರ ಮತ್ತು ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಬೇಕಾಗಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮಹದಾಯಿ ವಿಚಾರದಲ್ಲಿ ಯಾವುದೂ ನಿಂತಿಲ್ಲ ಎಂದು ಹೇಳಿದರು.

    ಟ್ರಿಬ್ಯುನಲ್‍ನಲ್ಲಿದ್ದಾಗ ಮೋದಿಯವರೇ ರಾಜಿ ಮಾಡಿಸಲಿ ಎಂದು ಬಹಳ ಜನ ಕೇಳುತ್ತಿದ್ದರು. ವಿವಾದ ಕೋರ್ಟ್‍ನಲ್ಲಿ ಇರುವಾಗ ರಾಜಿ ಮಾಡಿಸಲು ಬರುತ್ತಿರಲಿಲ್ಲ. ಹೀಗಾಗಿ ಕೊನೆಗೆ ಕೋರ್ಟ್‍ನಲ್ಲಿಯೇ ಇದು ನಿರ್ಧಾರ ಆಗಿದೆ. ಕೋರ್ಟ್‍ನಲ್ಲಿ ಬಗೆಹರಿದ ಬಳಿಕ ತಕ್ಷಣವೇ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ನಾವೇ ಮಾಡುತ್ತೇವೆ ಎಂದರು.

  • ಗಣೇಶ ಹಬ್ಬ ಆಚರಣೆ ತಡೆದ್ರೆ ಬಿಎಸ್‍ವೈ ಸರ್ಕಾರ ನಾಶವಾಗುತ್ತೆ: ಬೇಳೂರು ಗೊಪಾಲಕೃಷ್ಣ

    ಗಣೇಶ ಹಬ್ಬ ಆಚರಣೆ ತಡೆದ್ರೆ ಬಿಎಸ್‍ವೈ ಸರ್ಕಾರ ನಾಶವಾಗುತ್ತೆ: ಬೇಳೂರು ಗೊಪಾಲಕೃಷ್ಣ

    ಶಿವಮೊಗ್ಗ: ಹಿಂದೂಗಳ ಪವಿತ್ರ ಹಬ್ಬ ಗಣೇಶ ಹಬ್ಬ ಆಚರಣೆ. ಆದರೆ ಕೊರೊನಾ ಸೋಂಕು ಮುಂದಿಟ್ಟುಕೊಂಡು ಸರ್ಕಾರ ಗಣೇಶ ಹಬ್ಬ ಆಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಒಂದು ವೇಳೆ ಇಂತಹ ಸಾಹಸಕ್ಕೆ ಕೈ ಹಾಕಿದರೇ ಸಿಎಂ ಯಡಿಯೂರಪ್ಪ ಹಾಗೂ ಅವರ ಸರ್ಕಾರ ನಾಶವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ನೆಪವಿಟ್ಟುಕೊಂಡು ಗಣೇಶನ ಹಬ್ಬಕ್ಕೆ ಕಡಿವಾಣ ಹಾಕುವುದು ಎಷ್ಟು ಸರಿ? ನಾನಂತೂ ಗಣಪತಿ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಣೆ ಮಾಡುತ್ತೇನೆ. ಈ ಹಿಂದೆ ಮಾಡುತ್ತಿದ್ದ ಹಾಗೆ ಮೆರವಣಿಗೆ ಸಹ ನಡೆಸುತ್ತೇನೆ. ಅದು ಯಾರೂ ತಡೆಯುತ್ತಾರೋ ತಡೆಯಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ. ಕೊರೊನಾ ನಡುವೆಯೂ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ಪೂಜೆ ವೇಳೆ ಪ್ರಧಾನಿ ಮೋದಿಯವರೇ ಅದ್ಧೂರಿಯಾಗಿ ನಡೆಸಿದ್ದಾರೆ. ಹೀಗಿರುವಾಗ ಗಣಪತಿ ಹಬ್ಬ ಆಚರಣೆಗೆ ಹೇಗೆ ತೊಂದರೆಯಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕಾದರೆ 10 ಮಾರ್ಗಸೂಚಿಗಳನ್ನು ಪಾಲಿಸಿ

    ಗಣೇಶನನ್ನು ಶ್ರದ್ದಾ ಭಕ್ತಿಯಿಂದ ಪೂಜಿಸಿದರೇ ಎಲ್ಲಾ ವಿಘ್ನಗಳು ನಿವಾರಣೆ ಆಗಲಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರಿಯಾದ ಸಮಯದಲ್ಲಿ ಅಧಿಕಾರ ಸ್ವೀಕಾರ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸಿಎಂ ಬಿಎಸ್‍ವೈ ಅವರಿಗೂ ಸಹ ಇತ್ತೀಚೆಗೆ ನೆನಪಿನ ಶಕ್ತಿ ಕಡಿಮೆಯಾಗಿದ್ದು, ಅಕ್ಕಪಕ್ಕದವರ ಬಳಿ ಪದೇ ಪದೇ ಕೇಳಿ ತಿಳಿದುಕೊಳ್ಳುವಂತೆ ಆಗಿದೆ ಎಂದರು.

  • ಕೊರೊನಾ ಹಿನ್ನೆಲೆ ಕೋಲಾರದಲ್ಲಿ ಗಲ್ಲಿ ಗಣೇಶ ನಿಷೇಧ: ಡಿಸಿ ಸತ್ಯಭಾಮ

    ಕೊರೊನಾ ಹಿನ್ನೆಲೆ ಕೋಲಾರದಲ್ಲಿ ಗಲ್ಲಿ ಗಣೇಶ ನಿಷೇಧ: ಡಿಸಿ ಸತ್ಯಭಾಮ

    – ಮನೆಗಳಲ್ಲಿ ಅರಶಿಣ, ಗೋಧಿ ಹಿಟ್ಟಿನಿಂದ ಗಣೇಶ ತಯಾರಿಸಿ
    – ಸರಳ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ

    ಕೋಲಾರ: ಕೊರೊನಾ ಹಿನ್ನೆಲೆ ಈ ಬಾರಿ ಸಾರ್ವಜನಿಕವಾಗಿ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲು ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಹಿನ್ನೆಲೆ ಗಣೇಶ ಹಬ್ಬವನ್ನು ಆಡಂಬರದಿಂದ ಆಚರಣೆ ಮಾಡದೆ, ಸರಳವಾಗಿ ಮತ್ತು ಭಕ್ತಿ-ಭಾವದಿಂದ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.

    ಈ ಹಿಂದೆ ಗಣೇಶ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಟಾಪನೆ ಮಾಡುವ ಜೊತೆಗೆ ಸಾರ್ವಜನಿಕವಾಗಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಎಲ್ಲೆಡೆ ಜನರನ್ನು ಬೆಂಬಿಡದೆ ಕಾಡುತ್ತಿರುವುದರಿಂದ ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಟಾಪನೆ ಮಾಡಲು ಮತ್ತು ವಿಸರ್ಜನೆ ಮಾಡಲು ಅವಕಾಶವಿಲ್ಲ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಮಾಡಿಕೊಂಡು ಪೂಜೆ ಮಾಡಿ, ಬಳಿಕ ವಿಸರ್ಜನೆ ಮಾಡುವಂತೆ ಸೂಚಿಸಿದರು.

    ಮಾರುಕಟ್ಟೆಗಳಲ್ಲಿ ಪಿಒಪಿ ಗಣಪತಿಗಳ ಮಾರಾಟಕ್ಕೂ ಅವಕಾಶವಿಲ್ಲ, ಒಂದು ವೇಳೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಮನೆಗಳಲ್ಲಿ ಅರಿಶಿನ ಪುಡಿ ಮತ್ತು ಗೋದಿ ಹಿಟ್ಟಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸಿ ರೋಗಮುಕ್ತರಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ ರೆಡ್ಡಿ ಸೇರಿದಂತೆ ಪರಿಸರ ನಿಯಂತ್ರಣ ಅಧಿಕಾರಿಗಳು ಉಪಸ್ಥಿತರಿದ್ದರು.

  • ಹಬ್ಬಕ್ಕೆ ಗಣೇಶನ ಮೂಲಕ ವೈದ್ಯರಿಗೆ ಗೌರವ ಅರ್ಪಣೆ

    ಹಬ್ಬಕ್ಕೆ ಗಣೇಶನ ಮೂಲಕ ವೈದ್ಯರಿಗೆ ಗೌರವ ಅರ್ಪಣೆ

    – ಗಣೇಶ ಚತುರ್ಥಿಗೆ ವಿಶೇಷ ಮೂರ್ತಿ

    ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ವೈದ್ಯರು, ಆಶಾ ಕಾರ್ಯಕರ್ತೆಯರು ರಾತ್ರಿ-ಹಗಲು ಎನ್ನದೆ ಶ್ರಮ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿ ಗಣೇಶ ವೈದ್ಯರ ರೂಪ ತಾಳಿದ್ದಾನೆ.

    ಹೌದು. ಕೋವಿಡ್ 19 ಹೋಗಲಾಡಿಸಲು ಆಶಾ ಕಾರ್ಯಕರ್ತರು, ವೈದ್ಯರು ತಮ್ಮ ಜೀವವನ್ನು ಲೆಕ್ಕಿಸದೆ ನಮ್ಮನ್ನು ಸುರಕ್ಷಿತವಾಗಿಡಲು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಬೆಂಗಳೂರಿನ ಮೂರ್ತಿ ತಯಾರಕರೊಬ್ಬರು ಗಣೇಶ ಚತುರ್ಥಿ ಹಬ್ಬಕ್ಕೆ ಮುಂಚಿತವಾಗಿ ವಿಶೇಷವಾಗಿ ಅವರಿಗೆ ವಂದನೆ ಸಲ್ಲಿಸಿದ್ದಾರೆ.

    ವೈದ್ಯನಾದ ಗಣೇಶ:
    ಮೂರ್ತಿ ತಯಾರಕ ಶ್ರೀಧರ್ ಅವರು ಗಣೇಶನನ್ನು ವೈದ್ಯನನ್ನಾಗಿ ಮಾಡಿದ್ದಾರೆ. ಬೆಡ್‍ನಲ್ಲಿ ಮಲಗಿರುವ ಕೊರೊನಾ ರೋಗಿಯನ್ನು ಗಣೇಶ ಪರೀಕ್ಷೆ ಮಾಡುತ್ತಾನೆ. ಗಣೇಶನ ವಾಹನ ಇಲಿ, ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುವ ದಾದಿಯಂತೆ ಮಾಡಲಾಗಿದೆ. ಮತ್ತೊಂದು ಮೂರ್ತಿಯು ಕೊರೊನಾ ವೈರಸ್ ಆಕಾರದ ರಾಕ್ಷಸನನ್ನು ತೋರಿಸುತ್ತಿದ್ದು, ಗಣೇಶ ಅದನ್ನು ಕೆಡವುವಂತೆ ಬಿಂಬಿಸಲಾಗಿದೆ.

    ಈ ಬಗ್ಗೆ ಶ್ರೀಧರ್ ಮಾತನಾಡಿ, ಸದ್ಯ ನಾವು ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೇವೆ. ಈ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ಪರಿಸ್ಥಿತಿಯ ಸುಧಾರಣೆಗಾಗಿ ಗಣೇಶನನ್ನು ಪ್ರಾರ್ಥಿಸುವಂತೆ ನಾವು ಜನರಿಗೆ ಹೇಳಬೇಕಾಗಿದೆ. ಹೀಗಾಗಿ ಈ ರೀತಿಯ ಐಡಿಯಾ ಬಂತು ಎಂದು ಹೇಳಿದ್ದಾರೆ.

    ಈ ವರ್ಷ ಗಣೇಶ ಹಬ್ಬವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಪ್ರತಿವರ್ಷ ಬಹಳ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ 19 ನಿಂದಾಗಿ ತುಂಬ ಸರಳವಾಗಿ ಆಚರಿಸುವಂತಹ ಸಂದರ್ಭ ಎದುರಾಗಿದೆ.

  • ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ

    ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ

    ಬೆಂಗಳೂರು: ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಕೊರೊನಾನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಹಬ್ಬ ಮನೆಯಲ್ಲೇ ಮಾಡಿ. ಕೊರೊನಾ ವಿರುದ್ಧ ಹೋರಾಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಗಣಪತಿ ಕೂರಿಸಲು ಅವಕಾಶವೇ ಇಲ್ಲ. ಈ ಮೂಲಕ ಹಬ್ಬಗಳನ್ನ ಮನೆಯಲ್ಲಿ ಮಾಡಬೇಕು ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಹಬ್ಬದ ಶಾಪಿಂಗ್ ನೆಪದಲ್ಲಿ ನಿಯಮಗಳನ್ನು ಮೀರಿದರೆ ದಂಡ ವಿಧಿಸಲಾಗುತ್ತಿದೆ. ಎಲ್ಲ ವಿಚಾರಕ್ಕೂ ಮಾರ್ಗಸೂಚಿ ಮಾಡಲು ಆಗಲ್ಲ. ಆದರೆ ಕೊರೊನಾ ವಿಚಾರವಾಗಿ ನಿಯಮ ಮೀರಿದರೆ ದಂಡ ಪಕ್ಕಾ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತರೆ ಜೇಬಿಗೆ ಕತ್ತರಿ ಬೀಳುತ್ತದೆ. ಹಬ್ಬದ ಹಿಂದಿನ ದಿನ ಪೊಲೀಸ್ ಹಾಗೂ ಬಿಬಿಎಂಪಿ ದಂಡ ಹಾಕಲಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

    ಮಹಾಮಾರಿ ಕೊರೊನಾ ವೈರಸ್‍ನಿಂದ ಈ ವರ್ಷ ರಸ್ತೆಯಲ್ಲಿ ಗಣೇಶ ಕೂರಿಸಿ ಅದ್ಧೂರಿಯಾಗಿ ಹಬ್ಬ ಮಾಡಲು ಅವಕಾಶ ಇಲ್ಲದಂತಾಗಿದೆ. ಈ ಮೂಲಕ ಬೆಂಗಳೂರಿನ ರೋಡ್, ರೋಡಿನಲ್ಲಿ ಗಣೇಶ್ ಕೂರಿಸುತ್ತಿದ್ದವರಿಗೆ ಬೇಸರವಾಗಿದೆ. ಆದರೆ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಬಿಬಿಎಂಪಿ ಮುಂಜಾಗ್ರತೆಯಾಗಿ ಈ ಕ್ರಮವನ್ನು ಕೈಗೊಂಡಿದೆ.

    https://twitter.com/BBMPCOMM/status/1288012896060887041

  • ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಚಕ್ರವರ್ತಿ: ಅನಿಲ್ ಕಪೂರ್

    ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಚಕ್ರವರ್ತಿ: ಅನಿಲ್ ಕಪೂರ್

    ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರು ಭಾರತೀಯ ಚಿತ್ರರಂಗದ ಚಕ್ರವರ್ತಿ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಹೇಳಿದ್ದಾರೆ.

    ಬಸವನಗುಡಿಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅವರು, ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ. ರಾಜ್ ಕುಮಾರ್ ಅವರು ಕನ್ನಡಕ್ಕೆ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗದ ಹೆಮ್ಮೆ ಎಂದು ಶ್ಲಾಘಿಸಿದರು.

    ರಾಜ್ ಕುಮಾರ್ ಅವರು ಕೇವಲ ರಾಜ್ ಕುಮಾರ್ ಅಲ್ಲ ಅವರು ಚಕ್ರವರ್ತಿ ರಾಜ್ ಕುಮಾರ್, ಭಾರತೀಯ ಚಿತ್ರರಂಗದ ಎಲ್ಲಾ ನಟರಿಗೆ ಅವರು ಚಕ್ರವರ್ತಿ ಎಂದು ಹೇಳಿದ್ದಾರೆ. ಅವರು ಕೇವಲ ಕನ್ನಡ ಸಿನಿಮಾ ಜಗತ್ತಿಗೆ ಮಾತ್ರ ಸಿಮೀತ ಅಲ್ಲ ಅವರು ಇಡೀ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೊಗಳಿದರು.

    ಡಾ ರಾಜ್ ಕುಮಾರ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಒಂದು ದಂತಕಥೆಯಾಗಿ ಉಳಿದಿದ್ದಾರೆ. ಅವರು ನಟನೆಯ ನಿಧಿ ಮತ್ತು ಕನ್ನಡ ಸಿನಿಮಾಗಳ ಪ್ರೇಮಿ ಆಗಿದ್ದರು. ರಾಜ್ ಕುಮಾರ್ ಅವರು ಭಾರತೀಯ ಚಿತ್ರ ರಸಿಕರ ಮನದಲ್ಲಿ ಯಾವಾಗಲೂ ಇರುತ್ತಾರೆ ಎಂದು ಅನಿಲ್ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಅವರನ್ನು ಕುರಿತು ಮಾತನಾಡಿದ ಅನಿಲ್ ಕಪೂರ್ ಅವರು, ನಾನು ವಿಜಯ್ ಅವರ ಬಹುದೊಡ್ಡ ಅಭಿಮಾನಿ. ಅವರು ನನ್ನ ನಟನೆಯ ಎರಡು ಸಿನಿಮಾಗೆ ಹಾಡನ್ನು ಹಾಡಿದ್ದಾರೆ. ನಾನು ನಟಿಸಿದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದಲ್ಲಿ ಜೈ ಹೋ ಹಾಗೂ ಯುವರಾಜ ಚಿತ್ರದಲ್ಲಿ ಮನಮೋಹಿನಿ ಹಾಡುಗಳನ್ನು ವಿಜಯ್ ಹಾಡಿದ್ದಾರೆ. ಇನ್ನೊಂದು ಆಚ್ಚರಿಯ ಸಂಗತಿ ಎಂದರೆ ಎಆರ್ ರೆಹಮಾನ್ ಕೂಡ ವಿಜಯ್ ಅವರ ಅಭಿಮಾನಿ ಎಂದು ಅನಿಲ್ ಹೇಳಿದರು.

    ಈ ಎಲ್ಲ ವಿಚಾರಗಳ ಜೊತೆ ಕನ್ನಡದಲ್ಲಿ ತಮ್ಮ ನಟನೆಯ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ ಬಗ್ಗೆ ಮಾತನಾಡಿದ ಅನಿಲ್ ಕಪೂರ್, ನಾನು ಕನ್ನಡದಲ್ಲಿ ಮೊದಲು ನಟಿಸಿದ ಚಿತ್ರ ಪಲ್ಲವಿ ಅನುಪಲ್ಲವಿ ಇದು 1983 ರಲ್ಲಿ ಬಿಡುಗಡೆಯಾಗಿತ್ತು. ಇದರ ನಿರ್ದೇಶಕ ಮಣಿರತ್ನಂ ಅವರಿಗೂ ಕೂಡ ಇದು ಮೊದಲ ಚಿತ್ರ ಎಂದು ಹೇಳಿದ್ದಾರೆ. ಇದೇ ವೇಳೆ ಈ ಸಿನಿಮಾದ ನಗುವ ನಯನ ಮಧುರ ಮೌನ ಎಂಬ ಹಾಡನ್ನು ಹಾಡಿ ಜನರನ್ನು ರಂಜಿಸಿದರು.

    ಇತ್ತೀಚೆಗೆ ಮೃತ ಪಟ್ಟ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ನಟ ಗಿರೀಶ್ ಕರ್ನಾಡ್ ಅವರ ಬಗ್ಗೆ ಮಾತನಾಡಿದ ಕಪೂರ್, ನಾನು ಅವರ ಕಲೆಯ ಅಭಿಮಾನಿಯಾಗಿದ್ದೆ. ಅವರ ಜೊತೆ ಒಂದೆರಡು ಚಿತ್ರಗಳಲ್ಲಿ ನಟಿಸುವ ಅದೃಷ್ಟವು ನನಗೆ ಸಿಕ್ಕಿತ್ತು. ಇಂದು ಅವರ ನಮ್ಮ ಜೊತೆ ಇಲ್ಲ ಆದರೆ ಅವರು ಮಾಡಿರುವ ಕೆಲಸ ಮಾತ್ರ ನಮ್ಮ ಜೊತೆ ಶಾಶ್ವತವಾಗಿ ಉಳಿಯುತ್ತದೆ ಎಂದರು.

  • ಗಣಪತಿ ಕೂರಿಸಲು 500 ರೂ. ಒಂದು ಫುಲ್ ಬಾಟಲ್ ಕೊಡ್ಬೇಕು: ಪೊಲೀಸಪ್ಪನ ಬೇಡಿಕೆ

    ಗಣಪತಿ ಕೂರಿಸಲು 500 ರೂ. ಒಂದು ಫುಲ್ ಬಾಟಲ್ ಕೊಡ್ಬೇಕು: ಪೊಲೀಸಪ್ಪನ ಬೇಡಿಕೆ

    ಮಡಿಕೇರಿ: ನಿನ್ನೆಯಷ್ಟೇ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಹಾಡಿಗೆ ಸ್ಟೆಪ್ ಹಾಕಿದ್ದ ಹೆಡ್ ಕಾನ್‍ಸ್ಟೇಬಲ್ ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಅವರದ್ದೇ ಎನ್ನಲಾಗಿರುವ ಆಡಿಯೋ ಈಗ ವೈರಲ್ ಆಗಿದೆ.

    ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನನಗೆ 500 ರೂ. ಹಾಗೂ ಒಂದು ಫುಲ್ ಬಾಟಲ್ ಎಣ್ಣೆ ಕೊಡಬೇಕು ಎಂದು ಮೊಬೈಲ್‍ನಲ್ಲಿ ಸ್ಥಳೀಯ ಯುವಕರೊಂದಿಗೆ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ನೀವು ಗಣಪತಿ ಕೂರಿಸಲು ಮತ್ತು ವಿಸರ್ಜನೆ ಮಾಡಬೇಕು ಎಂದರೆ 500 ರೂ., ಒಂದು ಫುಲ್ ಬಾಟಲ್ ಮದ್ಯ ಕೊಡಬೇಕು ಎಂದು ಯುವಕರೊಂದಿಗೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರಂಗಿ ಔಟ್ ಪೋಸ್ಟ್ ಠಾಣೆ ಕಾನ್‍ಸ್ಟೇಬಲ್ ರಂಗೇಗೌಡರು ಮಾತನಾಡಿದ್ದಾರೆ.

    ಈ ಆಡಿಯೋದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ನಿವಾಸಿ ಕಿರಣ್ ಮತ್ತು ಸ್ನೇಹಿತರು ಹೆಡ್ ಕಾನ್‍ಸ್ಟೇಬಲ್ ರಂಗೇಗೌಡ ಎಂಬುವರ ಜೊತೆ ಮಾತನಾಡಿದ್ದು, ನಿನ್ನೆ ತಾನೆ ಒಂದು ಎಂ.ಹೆಚ್ ಕೊಟ್ಟಿದ್ದೇವೆ. ಅಲ್ಲದೆ ಕ್ಯಾಮೆರಾಕ್ಕೆ ಎಂದು 500 ತೆಗೆದುಕೊಂಡು ಹೋಗಿದ್ದೀರಾ. ಗಣಪತಿ ವಿಸರ್ಜನೆಗೆ ನಮಗೆ ಹಣವಿಲ್ಲ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಸರ್ ಎಂದು ಸಂಭಾಷಣೆ ನಡೆಸಿದ್ದಾರೆ. ಆಡಿಯೋ ಗಮನಿಸಿದರೆ ಯುವಕರು ಉದ್ದೇಶ ಪೂರ್ವಕವಾಗಿಯೇ ಸಿಬ್ಬಂದಿ ಜೊತೆ ಎಣ್ಣೆ ವಿಚಾರ ಮಾತನಾಡಿ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಯುವಕರಿಂದ ಆರಾಧನೆ

    ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಯುವಕರಿಂದ ಆರಾಧನೆ

    ಬೆಳಗಾವಿ: ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯಕ್ಕೆ ಎಂದು ಕಂಡರಿಯದ ಪ್ರವಾಹ ಪರಿಸ್ಥಿತಿ ಬಂದ್ರೂ ಮೋದಿ ಸರ್ಕಾರ ರಾಜ್ಯಕ್ಕೆ ಒಂದು ರೂ. ಸಹಾಯ ಮಾಡಿಲ್ಲ ಎಂದು ಮೋದಿ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಆದರೆ ಮೋದಿ ಹವಾ ಮಾತ್ರ ಬೆಳಗಾವಿಯಲ್ಲಿ ಇನ್ನೂ ಕಡಿಮೆಯಾಗಿಲ್ಲ.

    ವರ್ಷಕ್ಕೊಮ್ಮೆ ಆಚರಿಸುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಆರಾಧನೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಓಂ ಗಜಾನನ ಯುವಕ ಮಂಡಳ ವತಿಯಿಂದ 11 ದಿನಗಳ ಕಾಲ ಪ್ರಧಾನಿ ಮೋದಿ ಹಾಗೂ ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಇಟ್ಟು ಪೂಜೆ ಮಾಡಲಾಗುತ್ತಿದೆ.

    ಪ್ರಧಾನಿ ಮೋದಿ ಗಣೇಶನನ್ನು ಕಮಲದಲ್ಲಿ ಎತ್ತಿ ಹಿಡಿದಿರುವ ಮೂರ್ತಿಯನ್ನು ಪೂಜೆ ಮಾಡಲಾಗುತ್ತಿದೆ. ಅಲ್ಲದೆ ಇದರ ಜೊತೆಗೆ ಆರ್ಟಿಕಲ್ 370 ಜೆ ಕಾನೂನು ರದ್ದು ಹಾಗೂ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಯವರ ಸಾಧನೆಯನ್ನು ಬಿಂಬಿಸುವ ಫಲಕಗಳನ್ನು ನಿರ್ಮಾಣ ಮಾಡಿ ಜನರಲ್ಲಿ ಮೋದಿ ಸರ್ಕಾರದ ಸಾಧನೆಯನ್ನು ಬಿಂಬಿಸಲಾಗಿದೆ.

    11 ದಿನಗಳ ಕಾಲ ನರೇಂದ್ರ ಮೋದಿ ಅವರ ಮೂರ್ತಿ ಹಾಗೂ ಅವರ ಸಾಧನೆಗಳನ್ನು ಬಿಂಬಿಸುವ ಕಾರ್ಯವನ್ನು ಹುಕ್ಕೇರಿಯ ಯುವಕರು ಮಾಡಿದ್ದಾರೆ.

  • ಗಣೇಶ ಹಬ್ಬದಂದು ಕರ್ತವ್ಯ ನಿರ್ವಹಿಸದೇ ಮನೆಯಲ್ಲಿ ಮಲಗಿದ್ದ ಪಿಎಸ್‍ಐ ಅಮಾನತು

    ಗಣೇಶ ಹಬ್ಬದಂದು ಕರ್ತವ್ಯ ನಿರ್ವಹಿಸದೇ ಮನೆಯಲ್ಲಿ ಮಲಗಿದ್ದ ಪಿಎಸ್‍ಐ ಅಮಾನತು

    ಧಾರವಾಡ: ಗಣೇಶ ಹಬ್ಬದ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ನಿರ್ವಹಿಸದೇ ಮನೆಗೆ ಹೋಗಿ ಮಲಗಿ ಕರ್ತವ್ಯಲೋಪ ಎಸಗಿದ್ದ ಪಿಎಸ್‍ಐಯನ್ನು ಧಾರವಾಡ ಎಸ್‍ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಧಾರವಾಡ ಜಿಲ್ಲೆಯ ಗರಗ ಠಾಣೆಯ ಪಿಎಸ್‍ಐ ಸಮೀರ್ ಮುಲ್ಲಾ ಅಮಾನತಾಗಿದ್ದಾರೆ. ಗರಗ ಠಾಣಾ ವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆಯ ದಿನ ಮೆರವಣಿಗೆ ಸಾಗುವಾಗ ಸ್ವಲ್ಪ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಮಧ್ಯರಾತ್ರಿ 2 ಗಂಟೆಗೆ ಖುದ್ದು ಜಿಲ್ಲಾ ಮಹಿಳಾ ಎಸ್‍ಪಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

    ಈ ವೇಳೆ ಪಿಎಸ್‍ಐಗೆ ರಾತ್ರಿ ಗಸ್ತು ತಿರುಗುವಂತೆ ಸೂಚಿಸಿ ಹೋಗಿದ್ದರು. ಆದರೆ, ಪಿಎಸ್‍ಐ ಸಮೀರ್ ಮುಲ್ಲಾ ಎಸ್‍ಪಿ ಹೋಗುತ್ತಿದ್ದಂತೆ ಮನೆಗೆ ವಾಪಸ್ ತೆರಳಿದ್ದಾರೆ. ಎಸ್‍ಪಿ ಮತ್ತೆ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿ ಪಿಎಸ್‍ಐ ಸಮೀರ್ ಮುಲ್ಲಾ ಗಸ್ತು ನಿರ್ವಹಿಸದೇ ಮನೆಗೆ ಹೋಗಿದ್ದನ್ನು ಗಮನಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ವರ್ತಿಕಾ ಕಟಿಯಾರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಮೀರ್ ಮುಲ್ಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

  • ಗಣೇಶ ಪೂಜೆ ವೇಳೆ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ

    ಗಣೇಶ ಪೂಜೆ ವೇಳೆ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ

    ಭುವನೇಶ್ವರ: ಶಾಲೆಯಲ್ಲಿ ಗಣೇಶ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ 8ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಮುಖ್ಯ ಶಿಕ್ಷಕ ಕಿರುಕುಳ ನೀಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ.

    ಪರಾರಿಯಾಗಿರುವ ಆರೋಪಿ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶಾಲೆಯಲ್ಲಿ ಗಣೇಶ ಪೂಜೆಯನ್ನು ನೆರವೇರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 2ರಂದು ಮಧ್ಯಾಹ್ನ 2.30ರ ಸುಮಾರಿಗೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಗಣೇಶನ ಪೂಜೆ ನಡೆಯುತ್ತಿತ್ತು. ಪೂಜೆಯಲ್ಲಿ ಭಾಗವಹಿಸಿದ್ದ ಮುಖ್ಯ ಶಿಕ್ಷಕ 8ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮುಗ್ಧತೆಯನ್ನು ಬಳಸಿಕೊಂಡು ಕೆಟ್ಟದಾಗಿ ವರ್ತಿಸಿದ್ದಾನೆ. ಈ ಕುರಿತು ಗ್ರಾಮಸ್ಥರಿಗೆ ತಿಳಿಸಿದರೂ ಆರೋಪಿ ಪತ್ತೆಯಾಗಲಿಲ್ಲ. ಹೀಗಾಗಿ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ಮುಖ್ಯ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ ಎಂದು ಎಸ್‍ಡಿಪಿಓ ಎಸ್.ಟಿಗ್ಗಾ ತಿಳಿಸಿದ್ದಾರೆ.

    ಆರೋಪಿ ಪರಾರಿಯಾಗಿದ್ದು, ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಕ್ಸೊ ಕಾಯ್ದೆಯಲ್ಲದೆ, ಆರೋಪಿ ಮುಖ್ಯ ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಹಾಗೂ ಎಸ್‍ಸಿ, ಎಸ್‍ಟಿ ಕಾಯ್ದೆಯ ವಿಭಾಗಗಳಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.