Tag: ganesha festival

  • ಹಬ್ಬದ ದಿನವೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

    ಹಬ್ಬದ ದಿನವೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

    ಹಾಸನ: ಹಬ್ಬದ ದಿನವೇ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    17 ವರ್ಷದ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಗಣೇಶ ಹಬ್ಬದ ದಿನವೇ ಪ್ರಿಯಾಂಕಾ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

    ಮಾಹಿತಿ ತಿಳಿದು ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಈ ಕುರಿತು ಮೃತಳ ಸಂಬಂಧಿ ದೂರು ದಾಖಲಿಸಿದ್ದಾರೆ. ಹೀಗಾಗಿ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ಶಾಂತಿಗ್ರಾಮ ಹೋಬಳಿಯ ಅದ್ದಿಹಳ್ಳಿ ಗ್ರಾಮದ ನಿವಾಸಿ ರಾಮೇಗೌಡ ಜೊತೆ ದೂರದಾರರ ಸಂಬಂಧಿ ಕಾಮಾಕ್ಷಿ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು. ಆದರೆ 15 ವರ್ಷದ ಹಿಂದೆ ಕಾಮಾಕ್ಷಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ನಂತರ ರಾಮೇಗೌಡ ಎರಡನೇ ಮದುವೆಯಾದನು. ಆಕೆಗೂ ಒಂದು ಮಗುವಿದೆ. ಪ್ರಿಯಾಂಕಾ ತಂದೆ ಮತ್ತು ಮಲತಾಯಿಯ ಜೊತೆ ವಾಸಿಸುತ್ತಿದ್ದಳು. ಆದರೆ ತಂದೆಯ ಎರಡನೇ ಪತ್ನಿ ಬೇರೆ ಪುರುಷನ ಜೊತೆ ಓಡಿ ಹೋಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇದರಿಂದ ಮರ್ಯಾದೆ ಹಾಳಾಯಿತಲ್ಲಾ ಎಂದು ಪ್ರಿಯಾಂಕಾ ಯೋಚನೆ ಮಾಡುತ್ತಿದ್ದಳು. ಶನಿವಾರ ಯಾವುದೋ ವೈಯಕ್ತಿಯ ವಿಚಾರಕ್ಕೆ ಪ್ರಿಯಾಂಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೂ ನನಗೆ ಅನುಮಾನ ಇದೆ. ಹೀಗಾಗಿ ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಗಣಪನ ಅವತಾರದಲ್ಲಿ ಜೂ.ಯಶ್ ಮಿಂಚಿಂಗ್ – ನನ್ನ ಪುಟ್ಟ ಗಣೇಶ ಸೂಪರ್

    ಗಣಪನ ಅವತಾರದಲ್ಲಿ ಜೂ.ಯಶ್ ಮಿಂಚಿಂಗ್ – ನನ್ನ ಪುಟ್ಟ ಗಣೇಶ ಸೂಪರ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಐರಾ ಮತ್ತು ಜೂ.ಯಶ್ ಫೋಟೋಗಳನ್ನ ಶೇರ್ ಮಾಡಿದ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ಇದೀಗ ನಟ ಯಶ್ ಪುತ್ರ ಗಣಪನ ಅವತಾರದಲ್ಲಿ ಮಿಂಚಿದ್ದಾನೆ.

    ಇತ್ತೀಚಿಗೆ ಕೃಷ್ಣ ಜನ್ಮಾಷ್ಟಮಿ ದಿನ ಐರಾ ಮತ್ತು ಜೂನಿಯರ್ ಯಶ್‍ಗೆ ರಾಧೆ ಹಾಗೂ ಕೃಷ್ಣನ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜೂನಿಯರ್ ಯಶ್ ಗಣೇಶನ ಅವತಾರದಲ್ಲಿ ಮಿಂಚಿದ್ದಾನೆ.

    ಕೃಷ್ಣನ ಅವತಾರದಲ್ಲಿ ಕ್ಲಿಕ್ಕಿಸಿದ್ದ ಯಶ್ ಮಗನ ಫೋಟೋವನ್ನು ಗಣೇಶನ ರೀತಿ ಎಡಿಟ್ ಮಾಡಲಾಗಿದೆ. ಪಕ್ಕದಲ್ಲಿ ಮೂಷಿಕನನ್ನು ಕೂರಿಸಿಕೊಂಡು, ಕೈಯಲ್ಲಿ ಮೋದಕ ಹಿಡಿದು ಕುಳಿತಿರುವ ರೀತಿ ಫೋಟೋವನ್ನು ಎಡಿಲ್ ಮಾಡಲಾಗಿದೆ. ಪುಟ್ಟ ಗಣೇಶನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಫೋಟೋವನ್ನು ಸ್ವತಃ ಯಶ್ ಕೂಡ ತನ್ನ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಶೇರ್ ಮಾಡಿದ್ದು, ‘ಸೂಪರ್ ನನ್ನ ಪುಟ್ಟ ಗಣೇಶ’ ಎಂದು ಕ್ಯಾಪ್ಷನ್ ನೀಡಿದ್ದಾರೆ.

    “ಈ ಬಾರಿಯ ನಮ್ಮ ಆಚರಣೆಗಳು ಪ್ರತಿ ವರ್ಷದಂತೆ ಅದ್ಧೂರಿಯಾಗಿಲ್ಲ. ಆದರೆ ಈ ಬಾರಿಯ ಗೌರಿ ಗಣೇಶ ಚತುರ್ಥಿ ನಿಮ್ಮೆಲ್ಲರಿಗೆ ಸಂತೋಷ, ಉತ್ತಮ ಆರೋಗ್ಯ, ಸಮೃದ್ಧಿಯನ್ನು ತಂದುಕೊಡಲಿ. ಮೋದಕಗಳನ್ನು ಸವಿದು ಸಂಭ್ರಮದಿಂದ ಹಬ್ಬವನ್ನು ಆಚರಿಸಿ” ಎಂದು ನಟ ಯಶ್ ಹಬ್ಬಕ್ಕೆ ಶುಭ ಕೋರಿದ್ದರು.

  • ಕೊರೊನಾ ರೋಗಿಗಳಿಗೆ ತಾಲೂಕು ವೈದ್ಯಾಧಿಕಾರಿಗಳಿಂದ ಪಾಯಸದೂಟ

    ಕೊರೊನಾ ರೋಗಿಗಳಿಗೆ ತಾಲೂಕು ವೈದ್ಯಾಧಿಕಾರಿಗಳಿಂದ ಪಾಯಸದೂಟ

    – ಕೊರೊನಾ ಆಸ್ಪತ್ರೆಯಲ್ಲಿ ಗಣೇಶ ಚತುರ್ಥಿ ಆಚರಣೆ

    ಉಡುಪಿ: ಕೊರೊನಾ ಪಾಸಿಟಿವ್ ರೋಗಿಗಳಿಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಹಬ್ಬದೂಟ ಬಡಿಸಲಾಗಿದೆ. ಸ್ವತಃ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ್ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಗಣೇಶನ ಹಬ್ಬ ನಾಡಿನಾದ್ಯಂತ ಸರಳವಾಗಿ ಆಚರಿಸಲಾಗಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಬಂದವರಿಗೆ ಚೌತಿ ಆಚರಿಸುವ ಅವಕಾಶ ಸಿಗಲಿಲ್ಲ. ಉಡುಪಿಯ ಆರೋಗ್ಯ ಇಲಾಖೆ ಇಂದು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕುಂದಾಪುರದ ಕೋವಿಡ್ ಹೋಂ ಕೇರ್ ಸೆಂಟರ್ ನಲ್ಲಿ ಇಲಾಖೆಯಿಂದಲೇ ಸೋಂಕಿತರಿಗೆ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿತ್ತು.

    ದೈನಂದಿನ ಊಟಕ್ಕೆ ಬದಲಾಗಿ ಹಬ್ಬದ ಊಟದ ಪ್ಯಾಕೆಟ್ ಜೊತೆಗೆ ಸಿಹಿತಿಂಡಿಯನ್ನು ಕೂಡ ನೀಡಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರ ಈ ವಿಶೇಷ ಕಾಳಜಿಯ ಬಗ್ಗೆ ಸೋಂಕಿತರು ಮೆಚ್ಚುಗೆ ಮಾತನಾಡಿದ್ದಾರೆ. ಕೋವಿಡ್ ಸೋಂಕಿತರು ಬೇಸರದ ನೆಡುವೆ ನಕ್ಕಿದ್ದಾರೆ. ಮನೆಯಿಂದ, ಜನರ ಮನಸ್ಸಿಂದ ದೂರಾಗಿದ್ದೇವೆ ಎಂಬ ನೋವನ್ನು ಪಾಯಸದೂಟ ಮಾಡಿ ಕೆಲಕಾಲ ಮರೆತಿದ್ದಾರೆ.

    ವೈದ್ಯಾಧಿಕಾರಿಗಳು ಕೂಡ ಹಬ್ಬವನ್ನು ರೋಗಿಗಳ ಜೊತೆ ಆಚರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಷ್ಟದಲ್ಲಿ ಇರುವವರಲ್ಲಿ, ನೋವಿನಲ್ಲಿರುವವರಲ್ಲಿ ನಗು ಮೂಡಿಸುವುದೇ ಒಂದು ಹಬ್ಬ. ನೆಮ್ಮದಿ ಕೊಡುವ ಕೆಲಸ ಮಾಡಿದ್ದೇನೆ ಎಂದರು.

  • ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಬೆಂಗಳೂರು: ಕೊರೊನಾ ಮಧ್ಯೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಜೊತೆಗೆ ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನ ವಿಗ್ರಹ ಕೂರಿಸಿ ಪೂಜೆ ಮಾಡುತ್ತಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. “ಶ್ರೀ ಗೌರಿ ಸುತನಾದ ಶ್ರೀ ಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ” ಎಂದು ಹಬ್ಬಕ್ಕೆ ವಿಶ್ ಮಾಡಿದ್ದಾರೆ.

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಗಣೇಶ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅಲ್ಲದೇ ಪುತ್ರ ವಿನೀಶ್ ಜೊತೆ ಚಿಕ್ಕ ಗಣೇಶನ ವಿಗ್ರಹವನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮಿ ಪರಿಸರ ಸ್ನೇಹಿ ಗಣೇಶನ ಬಳಕೆಗೆ ಬೆಂಬಲ ಸೂಚಿಸಿದ್ದಾರೆ.

    ವಿಜಯಲಕ್ಷ್ಮಿ ಸ್ವತಃ ತಾವೇ ತಯಾರಿಸುವ ಗಣೇಶನನ್ನು ತಮ್ಮ ಮನೆಯಲ್ಲಿ ಕೂರಿಸಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. “ಸುಂದರವಾದ ಗಣೇಶ ಮೂರ್ತಿಯನ್ನು ತಯಾರಿಸಲು ಸುಲಭವಿದ್ದಾಗ ಏಕೆ ಖರೀದಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನಾಳಿನ ಆರೋಗ್ಯಕ್ಕಾಗಿ ಇಂದು ಪರಿಸರ ಸ್ನೇಹಿ ಗಣೇಶ ಬಳಸುವುದು ಉತ್ತಮ” ಎಂದು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

    ಫೋಟೋದಲ್ಲಿ ದರ್ಶನ್ ಪತ್ನಿ ಮತ್ತು ಮಗ ವಿನೀಶ್ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹ ತಯಾರಿಸಿದ್ದಾರೆ. ಈ ಎರಡರಲ್ಲಿ ಯಾವುದು ಚೆನ್ನಾಗಿದೆ ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ತಮಾಷೆಯಾಗಿ ಪ್ರಶ್ನೆ ಕೇಳಿದ್ದಾರೆ.

  • ಗಣೇಶನಿಂದ ಕೊರೊನಾ ಜಾಗೃತಿ- ಗಜಾನನ ವೇಷ ಧರಿಸಿ ವ್ಯಕ್ತಿಯಿಂದ ಅರಿವು

    ಗಣೇಶನಿಂದ ಕೊರೊನಾ ಜಾಗೃತಿ- ಗಜಾನನ ವೇಷ ಧರಿಸಿ ವ್ಯಕ್ತಿಯಿಂದ ಅರಿವು

    ಮೈಸೂರು: ಇತ್ತಿಚೆಗೆ ಕೊರೊನಾ ವಾರಿಯರ್ಸ್ ವೈದ್ಯರ ಅವತಾರ ತಾಳಿದ್ದ ಗಣೇಶ ಮೂರ್ತಿಯನ್ನು ನೋಡಿದ್ದೆವು. ಆದರೆ ಇಲ್ಲೊಬ್ಬರು ತಾವೇ ಗಣೇಶನ ವೇಷ ಧರಿಸಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಮೈಸೂರಿನ ಅಗ್ರಹಾರ ವೃತ್ತದಲ್ಲಿ ಸಾರ್ವಜನಿಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಲು ಪರಿಸರ ಸ್ನೇಹಿ ತಂಡದಿಂದ ಗಣೇಶನ ಹಬ್ಬಕ್ಕೂ ಮುನ್ನ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ವ್ಯಕ್ತಿಯೊಬ್ಬರು ಗಣೇಶನ ವೇಷ ಧರಿಸಿದ್ದು, ಮಾಸ್ಕ್ ಧರಿಸದವರಿಗೆ ಅವರೇ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿ ಹೇಳುವುದು ಸೇರಿದಂತೆ ಕೊರೊನಾ ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ, ಜನ ಮಾತ್ರ ಡೋಂಟ್ ಕೇರ್ ಎಂದು ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಸಂಚಿಸುತ್ತಿದ್ದಾರೆ.

    ಕೊರೊನಾದಿಂದಾಗಿ ಈ ಬಾರಿ ಗಣೇಶ ಹಬ್ಬವನ್ನು ಸಹ ಅದ್ಧೂರಿಯಾಗಿ ಆಚರಿಸಲು ಆಗಯತ್ತಿಲ್ಲ. ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಿದ್ದರೂ ಜನ ಮಾತ್ರ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಮೈ ಮರೆತಿದ್ದಾರೆ. ಇಂತಹವರಿಗೆ ಅರಿವು ಮೂಡಿಸಲು ವ್ಯಕ್ತಿಯೊಬ್ಬರು ಗಣೇಶನ ವೇಷ ಧರಿಸಿದ್ದಾರೆ. ಕೊರೊನಾ ನಿಯಮದ ಕುರಿತು ತಿಳಿ ಹೇಳುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಗೆ,ಸಾರ್ವಜನಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಗಣಪನ ವೇಷಧಾರಿ ಮಾಸ್ಕ್ ವಿತರಿಸಿದ್ದಾರೆ.

  • ಡ್ರೈ ಫ್ರೂಟ್ಸ್‌ನಲ್ಲಿ ಅರಳಿದ ಗಣಪ – ಕೊರೊನಾ ಸೋಂಕಿತರಿಗೆ ವಿತರಣೆ

    ಡ್ರೈ ಫ್ರೂಟ್ಸ್‌ನಲ್ಲಿ ಅರಳಿದ ಗಣಪ – ಕೊರೊನಾ ಸೋಂಕಿತರಿಗೆ ವಿತರಣೆ

    – ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯೆಯಿಂದ ಪ್ರತಿಷ್ಠಾಪನೆ

    ಗಾಂಧಿನಗರ: ಇಂದು ಗಣೇಶ ಚತುರ್ಥಿ ಹಿನ್ನೆಲೆ ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿ, ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಗುಜರಾತ್‍ನಲ್ಲಿ ವ್ಯದ್ಯೆಯೊಬ್ಬರು ಡ್ರೈ ಫ್ರೂಟ್ಸ್‌ನಿಂದ ಗಣಪನ ವಿಗ್ರಹ ಸಿದ್ಧ ಮಾಡಿದ್ದಾರೆ.

    ಗುಜರಾತ್‍ನ ಸೂರತ್ ನಿವಾಸಿ ಡಾ.ಅದಿತಿ ಮಿತ್ತಲ್ ಅವರು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಡ್ರೈ ಫ್ರೂಟ್ಸ್‌ನಿಂದ ಗಣಪತಿ ವಿಗ್ರಹವನ್ನು ತಯಾರಿಸಿದ್ದಾರೆ. ಈ ಪರಿಸರ ಸ್ನೇಹಿ ಗಣಪನ ವಿಗ್ರಹವು ಸುಮಾರು 20 ಇಂಚುಗಳಷ್ಟಿದೆ. ಇದನ್ನು ತಯಾರಿಸಲು ವಾಲ್‍ನಟ್ಸ್, ಕಡಲೆಕಾಯಿ, ಗೋಡಂಬಿ ಮತ್ತು ಬಾದಾಮಿ ಮುಂತಾದ ಡ್ರೈ ಫ್ರೂಟ್ಸ್ ಬಳಸಲಾಗಿದೆ. ಕಣ್ಣುಗಳನ್ನು ಗೋಡಂಬಿಯಿಂದ ತಯಾರಿಸಲಾಗಿದೆ.

    ಈ ವರ್ಷ ಕೊರೊನಾದಿಂದ ದೇಶದೆಲ್ಲೆಡೆ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಪರಿಸರ ಸ್ನೇಹಿ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಹೀಗಾಗಿ ಡಾ. ಮಿತ್ತಲ್ ಅವರು ಕೂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಿದ್ದರು. ಅದರಂತೆಯೇ ಆಸ್ಪತ್ರೆಯಲ್ಲಿ ಡ್ರೈ ಫ್ರೂಟ್ಸ್‌ನಿಂದ ವಿಗ್ರಹ ಸ್ಥಾಪಿಸಿ ಪೂಜೆ ಸಲ್ಲಿಸಿದ್ದಾರೆ.

    ನಾನು ಈ ವಿಗ್ರಹವನ್ನು ಒಣ ಹಣ್ಣುಗಳಿಂದ ತಯಾರಿಸಿದ್ದೇನೆ. ಅದನ್ನು ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪೂಜೆಯ ನಂತರ ಡ್ರೈ ಫ್ರೂಟ್ಸ್‌ಗಳನ್ನು ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿತರಿಸುವ ಮೂಲಕ ಸಾಂಪ್ರದಾಯಕವಾಗಿ ಗಣಪನ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು ಎಂದು ಡಾ.ಮಿತ್ತಲ್ ಹೇಳಿದ್ದಾರೆ.

  • ವಿಶೇಷ ಗೋಪಿಚಂದನ ಗಣಪನಿಗೆ ಡಿಮ್ಯಾಂಡ್ – ಪರಿಸರ ಸ್ನೇಹಿಗಳಿಂದ ಹೆಚ್ಚಿದ ಬೇಡಿಕೆ

    ವಿಶೇಷ ಗೋಪಿಚಂದನ ಗಣಪನಿಗೆ ಡಿಮ್ಯಾಂಡ್ – ಪರಿಸರ ಸ್ನೇಹಿಗಳಿಂದ ಹೆಚ್ಚಿದ ಬೇಡಿಕೆ

    – ಇದರ ವಿಶೇಷತೆ ಏನು?

    ರಾಯಚೂರು: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬ ಬಂದಿದೆ. ಆದರೆ ಈ ಬಾರಿ ಸಾರ್ವಜನಿಕವಾಗಿ ಅದ್ಧೂರಿ ಗಣೇಶೋತ್ಸವ ಆಚರಿಸುವುದಕ್ಕೆ ಅವಕಾಶ ಇಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆ ಬಹುತೇಕರು ಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸುತ್ತಾರೆ. ಹೀಗಾಗಿ ರಾಯಚೂರಿನ ಪರಿಸರ ಸ್ನೇಹಿ ಗೋಪಿಚಂದನದ ವಿಶೇಷ ಗಣೇಶ ಮೂರ್ತಿಗೆ ಈ ಬಾರಿ ಎಲ್ಲೆಡೆಯಿಂದ ಭಾರೀ ಬೇಡಿಕೆ ಬಂದಿದೆ.

    ನಗರದ ಜಯತೀರ್ಥದಾಸರ ಕುಟುಂಬ ಗೋಪಿ ಚಂದನದಿಂದ ಪರಿಸರ ಸ್ನೇಹಿ, ಸಾಂಪ್ರದಾಯಿಕ ಗಣೇಶನನ್ನ ಮಾಡಿ ಮಾರಾಟ ಮಾಡುತ್ತಿದ್ದಾರೆ. ಜಯತೀರ್ಥರ ಮಗ ರಘೋತ್ತಮದಾಸ್ ಇಂಟಿರಿಯರ್ ಡಿಸೈನ್ ಮಾಡುವ ಉದ್ಯೋಗ ಮಾಡುತ್ತಿದ್ದಾರೆ. ಆದರೆ ಗಣೇಶ ಮೂರ್ತಿ ತಯಾರಿಕೆಯಲ್ಲಿ ಆಸಕ್ತಿ ಬಂದು ಮೊದಲು ಮಣ್ಣಿನಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸೋಕೆ ಆರಂಭಿಸಿದರು. ಸಾಮಾನ್ಯವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನ ಎಲ್ಲರೂ ಮಾಡುತ್ತಾರೆ. ಆದರೆ ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಗೋಪಿ ಚಂದನದಲ್ಲಿ ಯಾಕೆ ಗಣಪನ ತಯಾರಿಸಬಾರದು ಅಂತ ಕಳೆದ ವರ್ಷದಿಂದ ಪವಿತ್ರವಾದ ಗೋಪಿ ಚಂದನದಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

    ಗೋಪಿ ಚಂದನವನ್ನ ಶ್ರೀಕೃಷ್ಣನಿಗೆ ಗೋಪಿಕೆಯರು ಹಚ್ಚಿದ್ದರು ಎಂಬ ಪ್ರತೀತಿ ಇದೆ. ಪುರಾಣದಲ್ಲಿ ವಿಶ್ವಂಬರವಾದ ಪರಮಾತ್ಮ ಗಣೇಶನನ್ನು ಗೋಪಿಚಂದನದಲ್ಲಿ ಮಾಡಿದ್ದ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋಪಿ ಚಂದನದಲ್ಲಿ ಗಣೇಶನನ್ನು ಪೂಜಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದೆ. ಕಳೆದ ವರ್ಷದಿಂದ ಗೋಪಿ ಚಂದನದಲ್ಲಿ ಗಣೇಶನ ತಯಾರಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿದೆ.

    ಈಗ ರಾಜ್ಯ ಹಾಗೂ ಹೊರರಾಜ್ಯದಲ್ಲಿ ಗೋಪಿಚಂದನ ಗಣಪನಿಗೆ ಬಹುಬೇಡಿಕೆ ಶುರುವಾಗಿದೆ. 350 ರೂ. ಹಾಗೂ 1,000 ರೂಪಾಯಿ ಬೆಲೆಯ ಎರಡು ಬಗೆಯ ಮೂರ್ತಿಗಳನ್ನ ಮಾರಾಟ ಮಾಡಲಾಗುತ್ತಿದೆ. ಈ ವರ್ಷ 300 ಗಣೇಶ ತಯಾರಿಸಿದ್ದು, ಗುಜರಾತ ಸೇರಿದಂತೆ ಹೊರರಾಜ್ಯದಿಂದ 2,000ಕ್ಕೂ ಅಧಿಕ ಮೂರ್ತಿಗಳ ಬೇಡಿಕೆ ಬಂದಿದೆಯಂತೆ. ಆದರೆ ಇಡೀ ಕುಟುಂಬ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದರೂ ಬೇಡಿಕೆ ಪೂರೈಸುವುದು ಸಾಧ್ಯವಾಗಿಲ್ಲ.

    ಈ ಬಾರಿ ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪಿಸಲು ಹೆಚ್ಚು ಜನರು ಮುಂದಾಗಿದ್ದಾರೆ. ಅದರಲ್ಲಿ ಗೋಪಿ ಚಂದನವು ಪಕ್ಕ ಪರಿಸರ ಸ್ನೇಹಿಯಾಗಿದ್ದು, ಗಣೇಶ ಮೂರ್ತಿಯನ್ನ ಬಕೆಟ್‍ನಲ್ಲೆ ವಿಸರ್ಜನೆ ಮಾಡಿ ನಂತರ ಗೋಪಿ ಚಂದನ ಬಳಕೆ ಮಾಡಬಹುದಾಗಿದೆ.

  • ಅದ್ಧೂರಿಯಲ್ಲದಿದ್ದರೂ, ಭರ್ಜರಿಯಾಗಿ ಗಣೇಶ ಹಬ್ಬ ಆಚರಿಸೋಣ – ರಾಖಿಭಾಯ್

    ಅದ್ಧೂರಿಯಲ್ಲದಿದ್ದರೂ, ಭರ್ಜರಿಯಾಗಿ ಗಣೇಶ ಹಬ್ಬ ಆಚರಿಸೋಣ – ರಾಖಿಭಾಯ್

    ಬೆಂಗಳೂರು: ಈ ಬಾರಿಯ ಗಣೇಶ ಹಬ್ಬವನ್ನು ಅಷ್ಟೇನು ಭವ್ಯವಾಗಿ ಆಚರಿಸದಿರಬಹುದು. ಆದರೆ ನಮ್ಮಲ್ಲಿನ ಆಚರಣೆ, ಭಕ್ತಿಗೆ ಅಡ್ಡಿಯಾಗುವುದಿಲ್ಲ. ನಮ್ಮ ಮನಗಳಲ್ಲೇ ಅದ್ಧೂರಿಯಾಗಿ ಹಬ್ಬ ಆಚರಿಸೋಣ ಎಂದು ಹೇಳುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಗಣೇಶ ಹಬ್ಬಕ್ಕೆ ಶುಭ ಕೋರಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಬಾರಿಯ ನಮ್ಮ ಆಚರಣೆಗಳು ಪ್ರತಿ ವರ್ಷದಂತೆ ಅದ್ಧೂರಿಯಾಗಿಲ್ಲ. ಆದರೆ ಈ ಬಾರಿಯ ಗೌರಿ ಗಣೇಶ ಚತುರ್ಥಿ ನಿಮ್ಮೆಲ್ಲರಿಗೆ ಸಂತೋಷ, ಉತ್ತಮ ಆರೋಗ್ಯ, ಸಮೃದ್ಧಿಯನ್ನು ತಂದುಕೊಡಲಿ. ಮೋದಕಗಳನ್ನು ಸವಿದು ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಎಂದು ಶುಭ ಕೋರಿದ್ದಾರೆ.

    ಕೊರೊನಾದಿಂದಾಗಿ ಲಾಕ್‍ಡೌನ್ ಆದಾಗಿನಿಂದ ಯಶ್ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. ಮಕ್ಕಳೊಂದಿಗೆ ಆಟವಾಡುತ್ತ ಸಮಯ ದೂಡುತ್ತಿದ್ದರು. ಸರ್ಕಾರ ಚಿತ್ರೀಕರಣಕ್ಕೆ ಅವಕಾಶ ನೀಡಿದರೂ ಕೆಜಿಎಫ್-2 ಸಿನಿಮಾ ಕೆಲಸಗಳನ್ನು ಆರಂಭಿಸಿರಲಿಲ್ಲ. ಆದರೆ ಆಗಸ್ಟ್ 20ರಿಂದ ಚಿತ್ರೀಕರಣ ಆರಂಭವಾದ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ಮೂಲಕ ಚಿತ್ರೀಕರಣ ಆರಂಭವಾಗಿರುವ ಸುಳಿವು ನೀಡಿದ್ದಾರೆ.

    ಶೂಟಿಂಗ್ ಆರಂಭವಾಗಿರುವ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ಲೆಟ್ಸ್ ಗೆಟ್ ಇಟ್ ಡನ್ ಎಂದು ಬರೆದು ಹ್ಯಾಶ್ ಟ್ಯಾಗ್‍ನೊಂದಿಗೆ ಕೆಜಿಎಫ್ ಚಾಪ್ಟರ್ 2 ಎಂದು ಹಾಕಿದ್ದಾರೆ. ಕೆಜಿಎಫ್-2 ಚಿತ್ರೀಕರಣ ಅಂತಿಮ ಹಂತ ತಲುಪಿದೆ ಎನ್ನಲಾಗಿದ್ದು, ಆದಷ್ಟು ಬೇಗ ತೆರೆಗೆ ಬರಲು ಸಿದ್ಧತೆ ನಡೆಸಲಾಗುತ್ತಿದೆ.

    ಕೆಜಿಎಫ್-1 ಧೂಳೆಬ್ಬಿಸಿದ ಬಳಿಕ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಮಂಡ್ಯದಲ್ಲಿ ಮನೆ ಬಾಗಿಲಿಗೆ ಬರಲಿದ್ದಾನೆ ಆಯುರ್ವೇದ ಗಣಪ

    ಮಂಡ್ಯದಲ್ಲಿ ಮನೆ ಬಾಗಿಲಿಗೆ ಬರಲಿದ್ದಾನೆ ಆಯುರ್ವೇದ ಗಣಪ

    – ಕೇವಲ 120 ರೂ.ಗೆ ಸಿಗಲಿದೆ ಆಯುರ್ವೇದ ಗಣೇಶ

    ಮಂಡ್ಯ: ಕೊರೊನಾ ಹಿನ್ನೆಲೆ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲು ಆಗುತ್ತಿಲ್ಲ. ಆದರೆ ಅರ್ಥಗರ್ಭಿತವಾಗಿ ಆಚರಿಸಬಹುದು ಎಂಬುದನ್ನು ಮಂಡ್ಯದ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ತೋರಿಸಿಕೊಟ್ಟಿದ್ದು, ಜೇಡಿ ಮಣ್ಣಿನ ಹಣಪನನ್ನು ಪರಿಚಯಿಸುತ್ತಿದ್ದಾರೆ.

    ನಾಳೆಯಿಂದ ಗಣೇಶ ಹಬ್ಬ ಆರಂಭವಾಗಲಿದ್ದು, ನಾಳೆ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಕೊರೊನಾ ನಡುವೆ ಹಬ್ಬವನ್ನು ಹೇಗೆ ಆಚರಿಸುವುದು ಎಂದು ತಲೆಕೆಡಿಸಿಕೋಳ್ಳುವವರಿಗೆ ಮಂಡ್ಯ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ಕುರಿತು ತಿಳಿಸಿವೆ.

    ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಖರೀದಿಸಿ, ಪೂಜಿಸಿ ಬಳಿಕ ಪಾಟ್‍ನಲ್ಲಿ ವಿಸರ್ಜಿಸುವುದು. ಮೂರ್ತಿ ಸಂಪೂರ್ಣ ಕರಗಿದ ಬಳಿಕ ಆಯುರ್ವೇದ ಗುಣಗಳುಳ್ಳ ಗಿಡಗಳ ಬೀಜವನ್ನು ಪಾಟ್‍ಗೆ ಹಾಕಿ ನೀರೆರೆಯಿರಿ. ಇದರಿಂದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಜೊತೆಗೆ ಔಷಧ ಗುಣಗಳುಳ್ಳ ಗಿಡವನ್ನು ಮನೆಯಲ್ಲೇ ಬೆಳೆದಂತಾಗುತ್ತದೆ ಎಂಬುದು ಜಿಲ್ಲಾಡಳಿತದ ಪ್ಲಾನ್.

    ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಐಡಿಯಾ ಚೆನ್ನಾಗಿದೆ ಆದರೆ ಜೇಡಿ ಮಣ್ಣು, ಆಯುರ್ವೇದ ಸಸಿ ಬೀಜಗಳನ್ನು ಎಲ್ಲಿಂದ ತರೋದು ಎಂದು ಚಿಂತಿಸುವವರಿಗೆ ಅದಕ್ಕೂ ಜಿಲ್ಲಾಡಳಿತ ಪರಿಹಾರ ನೀಡಿದೆ. ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವರೇಜ್ ನವರು ಜಿಲ್ಲಾಡಳಿತ ಪ್ಲಾನ್‍ಗೆ ಪೂರಕವಾಗಿ ಜೇಡಿ ಮಣ್ಣಿನ ಗಣಪನನ್ನು ಸಿದ್ಧಪಡಿಸಿದ್ದಾರೆ. ಮೂರ್ತಿ ಜೊತೆಗೆ ಪಾಟ್ ಮತ್ತು ಔಷಧಿ ಗುಣಗಳುಳ್ಳ ಗಿಡಗಳ ಬೀಜಗಳನ್ನ ನೀಡಲಿದ್ದಾರೆ. ಅತ್ಯಂತ ಕಡಿಮೆ ಬೆಲೆ ಅಂದ್ರೆ 120ರೂ.ಗೆ ಗೌರಿ-ಗಣೇಶ ಮೂರ್ತಿಗಳು ಸಿಗಲಿದ್ದು, ಇಂತಹ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಔಷಧೀಯ ಗುಣಗಳುಳ್ಳ ಗಿಡಗಳನ್ನು ಮನೆಯಲ್ಲೇ ಬೆಳೆಸಬಹುದಾಗಿದೆ.

    ಈ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಗಿದೆ. ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ, ಪರಿಸರ ಉಳಿಸಬೇಕು. ಪರಿಸರ ಅಸಮತೋಲನದಿಂದ ಸಾಕಷ್ಟು ಅನಾಹುತಗಳನ್ನು ನೋಡುತ್ತಿದ್ದೇವೆ. ಹೀಗಾಗಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಜೊತೆಗೆ ಪರಿಸರ ಉಳಿಸುವ ನೂತನ ಯೋಜನೆಯನ್ನು ಬೆಂಬಲಿಸಬೇಕಿದೆ ಎಂದು ಕರೆ ನೀಡಿದ್ದಾರೆ.

  • ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ – ಷರತ್ತುಗಳು ಅನ್ವಯ

    ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ – ಷರತ್ತುಗಳು ಅನ್ವಯ

    ಬೆಂಗಳೂರು: ಕರ್ನಾಟಕ ಸರ್ಕಾರ ಗಣೇಶೋತ್ಸವ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಆಗಸ್ಟ್ 14 ರಂದು ಬಿಡುಗಡೆ ಮಾಡಿದ್ದ ಮಾರ್ಗಸೂಚಿಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿರಲಿಲ್ಲ. ಆದರೆ ಈಗ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿಯನ್ನು ನೀಡಲಾಗಿದೆ.

    ಬದಲಾದ ಮಾರ್ಗಸೂಚಿಯಲ್ಲಿ ಏನಿದೆ?
    1. ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ಖಾಸಗಿ/ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು.
    2. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸುವುದು.
    3. ಪಾರಂಪರಿಕ ಗಣೇಶೋತ್ಸವಕ್ಕಾಗಿ, ಗಣೇಶೋತ್ಸವ ಸಮಿತಿಗಳು/ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೋರೇಷನ್/ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯಯನ್ನು ಪಡೆಯತಕ್ಕದ್ದು. ಒಂದು ವಾರ್ಡಿಗೆ/ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಪ್ರೋತ್ಸಾಹಿಸುವುದು.
    4. ಇಂತಹ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು. ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು.

    5. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ಸಾಂಸ್ಕೃತಿಕ/ಸಂಗೀತ/ನೃತ್ಯ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ.
    6. ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆ ಹೊರಡಿಸತಕ್ಕದ್ದಲ್ಲ/ ಮಾಡತಕ್ಕದಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.
    7. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು. ಸರ್ಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ/ಜಿಲ್ಲಾಡಳಿತ/ಹತ್ತಿರದ ಸ್ಥಳೀಯ ಸಂಸ್ಥೆಗಳ/ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕರ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವುದು.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, “ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ” ಎಂದು ವಿನಯಪೂರ್ವಕವಾಗಿ ವಿನಂತಿ ಮಾಡಿದ್ದಾರೆ.