Tag: Ganesh Festival

  • ಹುಣಸೆ ಮರದಲ್ಲಿ ಗಣೇಶನ ಮೂರ್ತಿ- ಭಕ್ತರಲ್ಲಿ ಅಚ್ಚರಿ!

    ಹುಣಸೆ ಮರದಲ್ಲಿ ಗಣೇಶನ ಮೂರ್ತಿ- ಭಕ್ತರಲ್ಲಿ ಅಚ್ಚರಿ!

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ವೆಂಕಟಪ್ಪನಪಾಳ್ಯದ ಜಮೀನಿನಲ್ಲಿರುವ ಹುಣಸೆಮರದಲ್ಲಿ ಗಣೇಶನ ಮೂರ್ತಿ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

    ಇಂದು ದೇಶದ್ಯಾಂತ ಸಡಗರ ಸಂಭ್ರಮದಿಂದ ವಿಘ್ನ ನಿವಾರಕ ಗಣೇಶನ ಹಬ್ಬವನ್ನ ಆಚರಿಸುತ್ತಾರೆ. ಗಣಪನಿಗೆ ವಿವಿಧ ರೀತಿಯ ಕಲ್ಪನೆ ವಿವಿಧ ಭಂಗಿಯ ಆಕೃತಿಯನ್ನು ಕಾಣುತ್ತೇವೆ. ಹಾಗೆಯೇ ನಗರದ ಹೊರವಲಯದಲ್ಲಿ ಸುಮಾರು 80 ವರ್ಷದ ಈ ಹುಣಸೆಮರದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ಗಣೇಶನ ಆಕಾರದಂತೆ ಪ್ರಾರಂಭವಾಗಿ ಇದೀಗ ಸುಂದರ ಮೂರ್ತಿ ರೂಪ ಪಡೆದಿದೆ.

    ಇದನ್ನು ಕಂಡ ಸುತ್ತ ಮುತ್ತಲಿನ ಗ್ರಾಮಸ್ಥರು ಇಲ್ಲಿಗೆ ಬಂದು ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಈ ಹುಣಸೆ ಗಣೇಶ ನಾನಾ ಪವಾಡಗಳಿಗೆ ಸಾಕ್ಷಿಯಾಗಿದ್ದು, ನಂಬಿದ ಭಕ್ತರಿಗೆ ಒಳಿತು ನೀಡುವ ಅಗಾಧವಾದ ನಂಬಿಕೆ ಇಲ್ಲಿಯದ್ದಾಗಿದೆ.

    ಇದೇ ಜಮೀನಿನಲ್ಲಿ ಇರುವ ಬೋರ್‌ವೆಲ್‌ನಲ್ಲಿ ನೀರು ದೊರೆತಿರಲಿಲ್ಲವಂತೆ. ಈ ಗಣೇಶನ ಮೂರ್ತಿ ಮೂಡಿದ ನಂತರ ನಮಗೆ ಬೋರ್‌ವೆಲ್‌ನಲ್ಲಿ ನೀರು ದೊರಕಿ ಈ ತೋಟವು ಸುಂದರವಾಗಿ ರೈತನಿಗೆ ನೆರವಾಗಿದೆ. ಹೀಗಾಗಿ ನಾನಾ ಪವಾಡಗಳಿಗೆ ಈ ಗಣೇಶ ಸಾಕ್ಷಿಯಾಗಿದ್ದು, ಇಂದು ಗಣೇಶನ ಹಬ್ಬದ ದಿವಸ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಬೆಂಗಳೂರು: ಗಣೇಶ ಹಬ್ಬಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿಯವರು ಹೆಚ್ಚಳ ಮಾಡುವ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳಿಗೆ ಹೆಚ್ಚು ಬಸ್ ಸೇವೆ ಒದಗಿಸಿ ಅಂತ ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಜಿಲ್ಲೆಗಳಿಗೆ ಸರ್ಕಾರದಿಂದಲೇ ಹೆಚ್ಚು ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುತ್ತದೆ ಎಂದರು.

     

    40 ಸ್ಲೀಪರ್ ಕೋಚ್ ಬಸ್: ನೂತನವಾಗಿ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ ಎಂದು ತಮ್ಮಣ್ಣ ತಿಳಿಸಿದರು. ಖಾಸಗಿಯವರು ಸ್ಲೀಪರ್ ಕೋಚ್ ನಲ್ಲಿ ಹೆಚ್ಚು ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬರ್ತಿವೆ. ಹೀಗಾಗಿ ನಾವೇ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. ಅಗತ್ಯ ಇರುವ ಬೆಂಗಳೂರಿನ ಕಡೆ ಸ್ಲೀಪರ್ ಕೋಚ್ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.

    ಎಲೆಕ್ಟ್ರಿಕಲ್ ಬಸ್ ಸಂಬಂಧ ಇನ್ನು ಯಾವುದೇ ನಿರ್ಧಾರವಾಗಿಲ್ಲ. 80 ಬಸ್ ಖರೀದಿ ವಿಚಾರ ಪರಿಶೀಲನೆ ಹಂತದಲ್ಲಿದೆ. ಖಾಸಗಿ ಅವರಿಗೆ ನೀಡಬೇಕಾ ಅಥವಾ ಏನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಬೇಕಿದೆ. ಖಾಸಗಿ ಅವರಿಗೆ ಕೊಡಬೇಕು ಅನ್ನೋದು ಹಿಂದಿನ ಸರ್ಕಾರದ ನಿರ್ಧಾರ. ಈ ಬಗ್ಗೆ ಸೂಕ್ತವಾದ ಅಧ್ಯಯನ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

    ಅಗತ್ಯ ಇಲ್ಲದ ಕಡೆ ಇರೋ ಬಸ್ ಗಳನ್ನ ಕಡಿತ ಮಾಡಿ ಅಗತ್ಯ ಇರೋ ಕಡೆ ಬಸ್ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳಿಗೆ ಈ ಸಂಬಂಧ ವರದಿ ನೀಡಲು ಸೂಚಿಸಿದ್ದೇನೆ. ಒಂದೇ ರೂಟ್ ನಲ್ಲಿ ಎರಡೆರಡು ಬಸ್ ಅವಶ್ಯಕತೆ ಇಲ್ಲದೆ ಇದ್ದರೂ ಓಡಾಡುತ್ತಿವೆ. ಹೀಗಾಗಿ ಅಂತಹ ಕಡೆ ಬಸ್ ಕಡಿಮೆ ಮಾಡಿ ಅವಶ್ಯಕತೆ ಇರೋ ಕಡೆ ಬಸ್ ಸೇವೆ ಒದಗಿಸುತ್ತೇವೆ. ಎಲ್ಲಾ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಕ್ರಮವಹಿಸಿ ಬಸ್ ಸೇವೇ ಒದಗಿಸುತ್ತೇವೆ ಅಂತ ಸಚಿವರು ತಿಳಿಸಿದರು.

    ಬಸ್ ಪಾಸ್ ಚರ್ಚೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಜೊತೆ ಮಾತನಾಡಲಾಗಿದೆ. ಎಸ್ ಸಿ/ಎಸ್ ಟಿ ಇಲಾಖೆಯ ಹಣದಲ್ಲಿ 25% ಹಣವನ್ನು ಬಳಕೆ ಮಾಡುವ ಕುರಿತು ಚರ್ಚೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಇದಕ್ಕೆ ಒಪ್ಪಿದ್ದಾರೆ. ಸಿಎಂ ಜೊತೆ ಚರ್ಚೆ ಮಾಡಿ ಇನ್ನೊಂದು ವಾರದಲ್ಲಿ ಪಾಸ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವರು ಹೇಳಿದರು.

    ಖಾಸಗಿ ಬಸ್ ಮಾಫಿಯಾ ಲಾಬಿ ತಡೆಯಲು 70 ವರ್ಷಗಳಿಂದ ಸಾಧ್ಯವಾಗಿಲ್ಲ. ಮೂರು ತಿಂಗಳಿಗೆ ಮಾಫಿಯಾ ನಿಯಂತ್ರಣ ಸಾಧ್ಯವಿಲ್ಲ. ದರ ಕಡಿಮೆಗೊಳಿಸಿ ಖಾಸಗಿಯವರಿಗೆ ಪೈಪೋಟಿ ನೀಡುವ ಪ್ಲಾನ್ ಸರ್ಕಾರದ್ದು. ಖಾಸಗಿ ಬಸ್ ಸ್ಥಳಾಂತರ ವಿಚಾರ ಸರ್ಕಾರದ ಮುಂದಿದೆ. ಪೀಣ್ಯದಲ್ಲಿರುವ ಖಾಸಗಿ ಬಸ್ ನಿಲ್ದಾಣ ಬದಲಾವಣೆ ಬಗ್ಗೆ ಮಾಲೀಕರ ಜತೆ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಮ್ಮಣ್ಣ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ರೂಲ್ಸ್!

    ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ರೂಲ್ಸ್!

    ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಣೇಶ ವಿಗ್ರಹ ಸ್ಥಾಪಿಸಿ, ಸಂಗೀತ, ಲೈಟಿಂಗ್ ನೀಡಿ ಭರ್ಜರಿಯಾಗಿ ಹಬ್ಬ ಸಂಭ್ರಮಾಚರಣೆ ಮಾಡುವ ಉದ್ದೇಶ ಹೊಂದಿದ್ದ ಮಂದಿಗೆ ಬೆಸ್ಕಾಂ ಶಾಕ್ ನೀಡಲು ಸಿದ್ಧತೆ ನಡೆಸಿದೆ.

    ಗಣೇಶನ ಹಬ್ಬ ಬಂದರೆ ನಗರದ ಬೀದಿಗಳಲ್ಲಿ ಗಣೇಶ್ ವಿಗ್ರಹ ಸ್ಥಾಪಿಸಿ ಬಣ್ಣಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡುವ ಹಲವು ಮಂದಿ ಅನಧಿಕೃತವಾಗಿ ವಿದ್ಯುತ್ ಪಡೆಯುವುದಕ್ಕೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗಿದೆ. ಗಣೇಶ ವಿಗ್ರಹ ಸ್ಥಾಪನೆ ಮಾಡುವ ಮುನ್ನ ಬೆಸ್ಕಾಂಗೆ ಮಾಹಿತಿ ಸಂಪರ್ಕ ಪಡೆಯವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದೇ ವಿದ್ಯುತ್ ಪಡೆದರೆ ದಂಡ ವಿಧಿಸುವ ಕುರಿತು ಬೆಸ್ಕಾಂ ಚಿಂತನೆ ನಡೆಸಿದೆ. ಈ ನಿಯಮ ಉಲ್ಲಂಘಿಸಿದರೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.

    ಸಂಪರ್ಕ ಪಡೆಯುವುದು ಹೇಗೆ?
    ನಗರದಲ್ಲಿ ಗಣೇಶ ವಿಗ್ರಹ ಮೂರ್ತಿ ಸ್ಥಾಪಿಸಲು ಇಚ್ಛಿಸುವವರು ವಿದ್ಯುತ್ ಸಂಪರ್ಕ ಪಡೆಯಲು ಸ್ಥಳೀಯ ಬೆಸ್ಕಾಂ ಉಪವಿಭಾಗಕ್ಕೆ ಪತ್ರ ಬರೆದು ನಿಗದಿ ಪಡಿಸಿದ ಹಣ ಪಾವತಿ ಮಾಡಬೇಕು. ಬಳಿಕ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ತಾತ್ಕಾಲಿಕ ಸಂಪರ್ಕ ನೀಡಲಿದ್ದಾರೆ ಎಂದು ಪ್ರಧಾನ ವ್ಯವಸ್ಥಾಪಕರಾದ ಜಯಂತಿ ತಿಳಿಸಿದ್ದಾರೆ.

    ದೇಶಾದ್ಯಂತ ಗಣೇಶನ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸುವ ಸಂಸ್ಕೃತಿ ಇದ್ದು, ಈ ವೇಳೆ ಕಾನೂನು ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ಹಬ್ಬಕ್ಕೆ ಬಲವಂತವಾಗಿ ಚಂದಾ ವಸೂಲಿ ಮಾಡಿದ್ರೆ ಎಚ್ಚರ – ಜಿಲ್ಲಾಧಿಕಾರಿ ವಾರ್ನಿಂಗ್

    ಗಣೇಶ ಹಬ್ಬಕ್ಕೆ ಬಲವಂತವಾಗಿ ಚಂದಾ ವಸೂಲಿ ಮಾಡಿದ್ರೆ ಎಚ್ಚರ – ಜಿಲ್ಲಾಧಿಕಾರಿ ವಾರ್ನಿಂಗ್

    ಚಿಕ್ಕಬಳ್ಳಾಪುರ: ಮುಂದಿನ ತಿಂಗಳು ಬರುವ ಗಣೇಶ ಹಬ್ಬಕ್ಕಾಗಿ ಬಲವಂತವಾಗಿ ಜನರ ಬಳಿ ಚಂದಾ ವಸೂಲಿ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿರುದ್ಧ್ ಶ್ರವಣ್ , ಗಣೇಶ ಹಬ್ಬದಲ್ಲಿ, ಪಟಾಕಿ ಸಿಡಿಸಿ, ಡಿಜೆ ಸೌಂಡ್ ಸಿಸ್ಟಮ್ ಗಳನ್ನ ಅಳವಡಿಸಿ ಪರಿಸರ ಮಾಲಿನ್ಯ ಮಾಡುವಂತೆ ಯಾವ ಶಾಸ್ತ್ರ ಸಂಪ್ರದಾಯದಲ್ಲೂ ಹೇಳಿಲ್ಲ. ಗಣೇಶ ಪ್ರತಿಷ್ಠಾಪನೆ ಹೆಸರಿನಲ್ಲಿ ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಒಂದು ವೇಳೆ ಜನರೇ ಚಂದಾ ಕೊಡಲು ಇಷ್ಟ ಪಟ್ಟರೆ ವಿಶ್ವಾಸವಿರುವ ಸಂಘ ಸಂಸ್ಥೆಗಳಿಗೆ ಮಾತ್ರ ನಿಮ್ಮ ಹಣವನ್ನು ನೀಡಬಹುದು. ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸಂಘ ಅಥವಾ ವ್ಯಕ್ತಿ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಬೇಕಿದೆ. ಇದೇ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಆಚರಣೆ ಹತ್ತಿಕ್ಕುವ ಕೆಲಸ: ಮುತಾಲಿಕ್

    ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಆಚರಣೆ ಹತ್ತಿಕ್ಕುವ ಕೆಲಸ: ಮುತಾಲಿಕ್

    ದಾವಣಗೆರೆ: ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹಾಕುವುದು ಸರಿಯಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಆದರೆ ಗಣಪತಿ ಹಬ್ಬ ಆಚರಿಸಲು 10 ಲಕ್ಷ ಬಾಂಡ್ ಇಡಬೇಕು ಮತ್ತು ವಾದ್ಯಗೋಷ್ಠಿಗಳು ಇರಬಾರದು ಎನ್ನುವ ನಿರ್ಬಂಧಗಳನ್ನು ಹಾಕಿದ್ದಾರೆ. ಇವರು ಸರ್ವಾಧಿಕಾರಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.

    ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧಗಳಿವೆ. ಆದರೆ ಮುಸ್ಲಿಂ ಹಬ್ಬಕ್ಕೆ ಯಾಕೆ ನಿರ್ಬಂಧ ಇಲ್ಲ. ಮಸೀದಿಯಲ್ಲಿ ಬೆಳಗಿನ ಜಾವ ಶಬ್ಧವನ್ನು ಏಕೆ ಹತ್ತಿಕ್ಕುತ್ತಿಲ್ಲ. ಗಣೇಶ ಹಬ್ಬದಲ್ಲಿ ಗಲಾಟೆಯಾಗದಂತೆ ಹಿಂದೂ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಗಣಪತಿ ಹಬ್ಬಕ್ಕೆ ಹಾಕಿದ ನಿರ್ಬಂಧಗಳನ್ನು ತೆಗೆಯದಿದ್ದರೆ ಇದೇ ತಿಂಗಳ 18 ರಂದು ರಾಜ್ಯಾದ್ಯಂತ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ನಟ ಉಪೇಂದ್ರ ರಾಜಕೀಯ ಪ್ರವೇಶ ವಿಚಾರ ಸ್ವಾಗತಾರ್ಹ. ಶ್ರೀರಾಮಸೇನೆ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಮೋದ್ ಮುತಾಲಿಕ್ ಭರವಸೆ ನೀಡಿದರು. ಕುಲಗೆಟ್ಟ ರಾಜಕಾರಣವನ್ನ ಸರಿ ಮಾಡಲು ಉಪೇಂದ್ರ ಅವರು ರಾಜಕಾರಣಕ್ಕೆ ಬರಬೇಕು. ಸ್ವಾರ್ಥ, ಗೂಂಡಾಗಿರಿ, ಜಾತಿ ತುಂಬಿಕೊಂಡಿರುವ ಈ ರಾಜಕಾರಣವನ್ನ ಸರಿಮಾಡಲು ಹೊಸಬರು ಬರಲಿ ಎಂದು ಹೇಳಿದರು.

    ಉಪೇಂದ್ರ ಅವರ ನಿಲುವುಗಳು ಉತ್ಕೃಷ್ಟವಾಗಿದ್ದು ಹೊಸ ನಾಯಕರನ್ನು ಹುಟ್ಟು ಹಾಕಲಿ. ಇದಕ್ಕೆ ನಮ್ಮ ಬೆಂಬಲ ಇದೆ ಎಂದರು.