Tag: Ganesh chaturti

  • ಗಣಪತಿ ವಿಸರ್ಜನೆ ವೇಳೆ 13ರ ಬಾಲಕ ಕೆರೆಗೆ ಬಿದ್ದು ದುರ್ಮರಣ

    ಗಣಪತಿ ವಿಸರ್ಜನೆ ವೇಳೆ 13ರ ಬಾಲಕ ಕೆರೆಗೆ ಬಿದ್ದು ದುರ್ಮರಣ

    – ದಾವಣಗೆರೆಯಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಸಾವು

    ಮಡಿಕೇರಿ/ದಾವಣಗೆರೆ: ಗಣಪತಿ ವಿಸರ್ಜನೆ ಕೆರೆಗೆ ಹೋಗಿದ್ದ 13 ವರ್ಷದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದೆ.

    ಅನಂತಕುಮಾರ್ ಹಾಗೂ ಪದ್ಮ ದಂಪತಿಯ ಎರಡನೇ ಪುತ್ರ ಹೇಮಂತ್ (13) ಮೃತ ಬಾಲಕ. ಹೇಮಂತ್ ಸಿದ್ಧಲಿಂಗಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು 12 ಜನ ಬಾಲಕರ ತಂಡವು ಗಣಪತಿ ವಿಸರ್ಜನೆಗೆ ಕೆರೆಗೆ ತೆರಳಿದ್ದರು. ವಿಸರ್ಜನೆ ವೇಳೆ ಹೇಮಂತ್ ನೀರು ಪಾಲಾಗಿದ್ದಾನೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದ ವ್ಯಕ್ತಿಯೊಬ್ಬರು ಪೆಂಡಾಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಿಪ್ಪೇಸ್ವಾಮಿ (26) ಮೃತ ದುರ್ದೈವಿ. ಮೃತ ತಿಪ್ಪೇಸ್ವಾಮಿ ಮುಸ್ಟೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪತಿ ಮಂಟಪ ಅಲಂಕರಿಸುತ್ತಿದ್ದರು. ಆಗ ಪೆಂಡಾಲ್ ಗೆ ಸೀರಿಯಲ್ ಸೆಟ್ ಹಾಕುವಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣಪತಿಯ ಆಕಾರದಲ್ಲಿದೆ ಅದ್ಭುತ ಕಲ್ಪನೆ! – ದೇಹ ಯಾವ ಸಂಕೇತಕ್ಕೆ ಸೂಚಕವಾಗಿದೆ?

    ಗಣಪತಿಯ ಆಕಾರದಲ್ಲಿದೆ ಅದ್ಭುತ ಕಲ್ಪನೆ! – ದೇಹ ಯಾವ ಸಂಕೇತಕ್ಕೆ ಸೂಚಕವಾಗಿದೆ?

    ಗಣಪತಿ ಆಕಾರದಲ್ಲಿ ಅನೇಕ ಅದ್ಭುತ ಕಲ್ಪನೆ ಅಡಗಿಕೊಂಡಿವೆ. ಅವನ ಮುಖ, ದೇಹ, ಆಕೃತಿ ಹಾಗೂ ವಾಹನ ವಿಶೇಷ ನಾಮಗಳನ್ನು ತಂದುಕೊಟ್ಟಿದೆ. ಅಲ್ಲದೆ ಅವು ಅನೇಕ ಸಂಕೇತಗಳ ಸೂಚಕವಾಗಿವೆ. ಅವನ ದೇಹವನ್ನು ಏಕದಂತ, ವಕ್ರತುಂಡ, ಶೂರ್ಪಕರ್ಣ, ಮಹಾಕಾಯ, ಮೊದಕ ಎನ್ನುವ ಹೆಸರುಗಳಿಂದ ಕರೆಯಲಾಗುತ್ತದೆ.

    ದೊಡ್ಡ ತಲೆಯುಳ್ಳ ಗಣಪತಿಯನ್ನು ಪೂಜಿಸುವವರು ಬುದ್ಧಿವಂತರಾಗುತ್ತಾರೆ. ಆನೆಯ ತಲೆಯಲ್ಲಿ ಜ್ಞಾನೇಂದ್ರಿಯಗಳ ಜೊತೆಗೆ ಕರ್ಮೇಂದ್ರಿಯ ಸೂಚಿಸುವ ಸೊಂಡಿಲು ಕೂಡಾ ಇದೆ. ಗಣಪತಿಯ ಏಕದಂತವು ಏಕಾಗ್ರತೆಯ ಹಾಗೂ ಅದ್ವೈತದ ಸಂಕೇತವಾಗಿದೆ. ಆನೆಯ ಮುಖವಿರುವ ಗಣಪತಿ, ಡೊಂಕಾದ ಸೊಂಡಿಲನ್ನು ಹೊಂದಿದ್ದಾನೆ. ಇದು ಓಂಕಾರ ಪ್ರತೀಕವಾಗಿದ್ದು, ಅವನಿಗೆ `ವಕ್ರತುಂಡ’ ಎನ್ನುವ ಹೆಸರು ಬಂದಿದೆ. ಜೊತೆಗೆ ಆನೆಯ ಕಿವಿಗಳನ್ನು ಗಣಪತಿ ಹೊಂದಿದ್ದು ಹೀಗಾಗಿ `ಶೂರ್ಪಕರ್ಣ’ ಎನ್ನಲಾಗುತ್ತದೆ. ಶೂರ್ಪಕರ್ಣ ಎಂದರೆ ಮೊರದಂತಹಾ ಕಿವಿ ಹೊಂದಿರುವವ. ಇವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಆದರೆ ಅದರಲ್ಲಿರು ಸತ್ಯಾಂಶವನ್ನು ಮಾತ್ರ ಗ್ರಹಿಸುತ್ತಾರೆ. ಹೀಗೆ ಪ್ರತಿಯೊಬ್ಬರು ಇರಬೇಕು ಎನ್ನುವುದು ಗಣಪನ ಕಿವಿಗಳು ಸೂಚಿಸುತ್ತವೆ.

    ಸಮಾಜದ ಆಗು ಹೋಗುಗಳನ್ನು ನಾವು ಸೂಕ್ಷ್ಮ ಗಮನಿಸಬೇಕು. ಬಳಿಕ ಅದನ್ನು ಪರಿಶೀಲಿಸಿ ಮುಂದುವರಿಯಬೇಕು ಎಂಬುದನ್ನು ಗಣಪತಿಯ ಚಿಕ್ಕಕಣ್ಣು ತಿಳಿ ಹೇಳುತ್ತವೆ. `ಮಹಾಕಾಯ’ ಅಂದರೆ ದೊಡ್ಡ ಹೊಟ್ಟೆಯವ. ಗಣಪತಿಯ ದೊಡ್ಡ ಹೊಟ್ಟೆ ಬ್ರಹ್ಮಾಂಡ ಸಂಕೇತ. ಇನ್ನು ಅವನ ಹೊಟ್ಟೆಗೆ ಸುತ್ತಿಕೊಂಡಿರುವ ಸರ್ಪವು ಬ್ರಹ್ಮಾಂಡವನ್ನು ಹೊತ್ತಿರುವ ಆದಿಶೇಷ, ಅಲ್ಲದೇ ಇದನ್ನು ಕುಂಡಲಿನಿ ಶಕ್ತಿಯ ಎಂತಲೂ ಕರೆಯುತ್ತಾರೆ. ಗಣಪತಿ ಕೈಯಲ್ಲಿರುವ ಪಾಶ, ಅಂಕುಶಗಳು ಮನುಷ್ಯನ ರಾಗ ದ್ವೇಷಗಳನ್ನು ನಿಯಂತ್ರಿಸುವ ಸಾಧನಗಳೆಂದು ಪುರಾಣದಲ್ಲಿ ತಿಳಿಸಲಾಗಿದೆ.

    ಗಣಪತಿಗೆ ಮೋದಕ ಪ್ರಿಯ ಭಕ್ಷ, ಮೋದ, ಪ್ರಮೋದ ಹಾಗೂ ಆನಂದ ಇವು ಪರ್ಯಾಯ ಪದಗಳು. ಅವನ ವಾಹನವಾದ ಇಲಿಯು ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳ ಸಂಕೇತವಾಗಿದೆ. ಇವುಗಳ ಮೇಲೆ ಹಿಡಿತ ಸಾಧಿಸಿದ್ದೇನೆ ಎಂದು ಇಲಿಯನ್ನು ಏರಿ ಕುಳಿತಿರುತ್ತಾನೆ. ಇನ್ನು ಗಣಪತಿಗೆ ಸಿದ್ಧಿ-ಬುದ್ಧಿ ಎಂಬವರು ಪತ್ನಿಯರು. ಇನ್ನು ಲಾಭ, ಕ್ಷೇಮ ಮಕ್ಕಳು. ಬುದ್ಧಿ ಸರಿಯಾಗಿದ್ದರೆ ಎಲ್ಲ ಕ್ಷೇತ್ರದಲ್ಲೂ ಸಿದ್ಧಿ ಖಚಿತ ಎಂದು ಸಿದ್ಧಿ ವಿನಾಯಕ ತಿಳಿಸುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv