Tag: Gandhiji

  • ಸಿಎಂ ಬಿಎಸ್‍ವೈಯನ್ನು ಹಾಡಿಹೊಗಳಿದ ಕಟೀಲ್

    ಸಿಎಂ ಬಿಎಸ್‍ವೈಯನ್ನು ಹಾಡಿಹೊಗಳಿದ ಕಟೀಲ್

    ಚಿಕ್ಕೋಡಿ(ಬೆಳಗಾವಿ) : ಸಿಎಂ ವಿರೋಧಿಗಳಿಗೆ ಮಣೆ ಹಾಕಿ ಬಿಎಸ್‍ವೈ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎನ್ನುವ ಆರೋಪ ಸ್ವಪಕ್ಷೀಯರಿಂದಲೇ ಕೇಳಿಬರುತ್ತಿದ್ದರೂ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಯಡಿಯೂರಪ್ಪನವರನ್ನು ಹಾಡಿ ಹೊಗಳಿದ್ದಾರೆ.

    ಗಾಂಧೀಜಿ ತತ್ವ ಸಿದ್ಧಾಂತ ಸಾರುವ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಎಸ್‍ವೈಯನ್ನು ಕಟೀಲ್ ಗುಣಗಾನ ಮಾಡಿದ್ದಾರೆ. ನಾನು ದಿನಕ್ಕೆ ಎರಡು ಬಾರಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಭಾರತೀಯ ಜನತಾ ಪಾರ್ಟಿಗೆ ಯಡಿಯೂರಪ್ಪ ಸುಪ್ರಿಂ ನಾಯಕ ಎಂದು ಬಣ್ಣಿಸಿದರು.

    ಯಾರು ಏನೇ ಬರೆದುಕೊಳ್ಳಲಿ ಅದು ನಮಗೆ ಬೇಕಾಗಿಲ್ಲ. ಪ್ರತಿಯೊಂದು ಹೆಜ್ಜೆಯಲ್ಲಿ ಟೀಕೆ, ಜಗಳ ಹಚ್ಚುವ ಕೆಲಸವಾಗುತ್ತಿದೆ. ಆದರೆ ಅವರ ಜತೆ ನಾನು ದಿನಕ್ಕೆ ಎರಡು ಬಾರಿ ಮಾತನಾಡಿ ನಾನು ಮಾರ್ಗದರ್ಶನ ಪಡೆಯುತ್ತೇನೆ. ರಾಷ್ಟ್ರದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಣೆ ಮಾಡಿದ್ದು ಯಡಿಯೂರಪ್ಪ ಎಂದು ಕೊಂಡಾಡಿದರು.

    ಕೇಂದ್ರದಿಂದ ಯಾವಾಗ ನೆರೆ ಪರಿಹಾರ ಸಿಗುತ್ತದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ಕೇಂದ್ರದಿಂದ ಪರಿಹಾರ ಬರುವುದಕ್ಕೆ ಮಾರ್ಗದರ್ಶನ ಸೂತ್ರವಿದೆ. ಸಮೀಕ್ಷೆ ನಡೆದು ಸಾವು ನೋವು ಹಾನಿಯ ಬಗ್ಗೆ ಖಚಿತ ಮಾಹಿತಿ ಸಿಗಬೇಕು. ಅದು ಕೇಂದ್ರ ಸರ್ಕಾರಕ್ಕೆ ಅದು ತಲುಪಬೇಕು ಆನಂತರ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

    ಈಗಾಗಲೇ ಯಡಿಯೂರಪ್ಪ ನರೇಂದ್ರ ಮೋದಿ ಜತೆ ಮಾತನಾಡಿದ್ದು ಅವರು ಸಹ ರಾಜ್ಯಕ್ಕೆ ಬೇಕಾದ ಅನುದಾನ ನೀಡಲು ಒಪ್ಪಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಬರಲಿದೆ ಯಾವುದೇ ಕಾಳಜಿ ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಬಾಯಿಗೆ ಬಂದಂತೆ ಯಾವುದೇ ವಿಷಯದ ಬಗ್ಗೆ ಮಾತನಾಡಬೇಡಿ ಎಂದು ಮುಖಂಡರಿಗೆ ನಳೀನ್ ಕುಮಾರ್ ಕಟೀಲ್ ಕಿವಿಮಾತು ಹೇಳಿದರು.

  • ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

    ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

    ಧಾರವಾಡ: ಬ್ರಿಟಿಷರಂತೆಯೇ ಕಾಂಗ್ರೆಸ್ ಕೂಡ ಮುಸ್ಲಿಂ ತುಷ್ಟೀಕರಣ ಮಾಡುತ್ತ ಒಡೆದು ಆಳುವ ನೀತಿ ಅನುಸರಿಸಿದೆ ಎಂದು ಸಂಶೋಧಕ, ಸಾಹಿತಿ ಎಸ್.ಎಲ್.ಭೈರಪ್ಪ ಅವರು ಕಾಂಗ್ರೆಸ್ ಹಾಗೂ ನೆಹರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಧಾರವಾಡದಲ್ಲಿ ನಡೆದ ಆವರಣ ಕೃತಿಯ 40ನೇ ಮುದ್ರಣದ ಸಂಭ್ರಮದಲ್ಲಿ ಮಾತನಾಡಿದ ಅವರು, ನೆಹರು ನೇರವಾಗಿಯೇ ಮುಸ್ಲಿಮರಿಗೆ ಧಮ್ಕಿ ಹಾಕಿ ನೀವು ನಮಗೆ ಮತ ಹಾಕಬೇಕು ಅಂದಿದ್ದರು. ಅದನ್ನೇ ಮಾದರಿಯಾಗಿ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಅದೇ ಕಾರಣಕ್ಕೆ ಇಂದು ರಾಹುಲ್‍ಗಾಂಧಿ 370ನೇ ವಿಧಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಇದನ್ನು ವಿರೋಧಿಸದೇ ಹೋದರೆ ನನ್ನ ಮುತ್ತಜ್ಜ ನೆಹರೂ ಮಾಡಿದ್ದೆಲ್ಲ ತಪ್ಪಾಗಿ ಬಿಡುತ್ತದೆ ಎನ್ನುವುದು ರಾಹುಲ್‍ಗೆ ಗೊತ್ತಿದೆ, ಹೀಗಾಗಿಯೇ ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೆಹರು ಕುಟಂಬಕ್ಕೆ ತುಂಬಾ ಸೊಕ್ಕು ಇತ್ತು. ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರು ಔರಂಗಜೇಬನ ಇತಿಹಾಸ ಮರೆಮಾಚಿದ್ದಾರೆ. ಔರಂಗಜೇಬ್ ಖುರಾನ್ ಪ್ರತಿಗಳನ್ನು ನಕಲು ಮಾಡಿ ಮಾರಿ ಆ ದುಡ್ಡಿನಲ್ಲಿ ಮಾತ್ರ ಊಟ ಮಾಡುತಿದ್ದ ಎಂದು ಬರೆದಿದ್ದಾರೆ. ಇಷ್ಟು ದೇವಸ್ಥಾನ ಒಡೆದ, ಇಷ್ಟು ಜನರನ್ನು ಮತಾಂತರ ಮಾಡಿಸಿದ ಎಂದು ಎಲ್ಲಿಯೂ ಬರೆದಿಲ್ಲ ಎಂದು ನೆಹರು ವಿರುದ್ಧ ಕಿಡಿಕಾರಿದರು.

    ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ದೇಶವನ್ನು ಯಾರ ಕೈಗೆ ಕೊಡಬೇಕೆಂದು ಕಾಂಗ್ರೆಸ್‍ಗೆ ಕೇಳಿದರು. ಆಗ ಕಾಂಗ್ರೆಸ್‍ನ 15 ಪ್ರಾದೇಶಿಕ ಕಮೀಟಿಗಳ ಪೈಕಿ ನೆಹರು ಹೆಸರನ್ನು ಒಬ್ಬರೂ ಹೇಳಿರಲಿಲ್ಲ. ಆದರೆ ಸರ್ದಾರ ವಲ್ಲಭಾಯ್ ಪಟೇಲ್‍ರ ಹೆಸರನ್ನು 12 ಕಮೀಟಿ ಹೇಳಿದ್ದವು. ನೆಹರು ನಾನು ಆದರೆ ಪ್ರಧಾನಿಯೇ ಆಗುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಆಗ ಗಾಂಧೀಜಿ ಸರ್ದಾರ್ ವಲ್ಲಭಾಯ್ ಪಟೇಲರಿಗೆ ಹಿಂದೆ ಸರಿಯುವಂತೆ ಸೂಚಿಸಿದರು ಎಂದು ವಿವರಿಸಿದರು.

    ಇದಕ್ಕೂ ಮೊದಲು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಭೂಗತರಾಗಬೇಕಾದಲ್ಲಿ ಗಾಂಧೀಜಿಯೆ ಕಾರಣವಾಗಿದ್ದರು. ಹಾಗೆಯೇ ನನ್ನ ಸ್ಥಿತಿಯೂ ಆಗದಿರಲಿ ಎಂದು ಸರ್ದಾರ್ ವಲ್ಲಭಾಯ್ ಪಟೇಲರು ಹಿಂದೆ ಸರಿದಿದ್ದರು ಎಂದು ತಿಳಿಸಿದರು.

  • ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ – ಸ್ಪೀಕರ್ ಮಾರ್ಮಿಕ ನುಡಿ

    ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ – ಸ್ಪೀಕರ್ ಮಾರ್ಮಿಕ ನುಡಿ

    ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡಲು ವಿಳಂಬ ನೀತಿ ಮಾಡುತ್ತಿದ್ದಾರೆ ಎಂಬ ಸ್ಪೀಕರ್ ಮೇಲಿನ ಆರೋಪಕ್ಕೆ ರಮೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ. ಹಾಗೆಯೇ ನನ್ನ ಬಗ್ಗೆ ಏನೂ ಬಿಡಿ ಎಂದು ಹೇಳಿದ್ದಾರೆ.

    ಸ್ಪೀಕರ್ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಸಂವಿಧಾನವಷ್ಟೇ ಮುಖ್ಯ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಎಲ್ಲಿಂದ ಒತ್ತಡ ಬಂದರೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇನ್ನು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶದ ಉಳಿವಿಗಾಗಿ ನ್ಯಾಯಾಂಗ ಮತ್ತು ಶಾಸಕಾಂಗ ಕಾರ್ಯ ನಿರ್ವಹಿಸುತ್ತಿದೆ. ನಿಯಮಗಳ ಅನ್ವಯವೇ ನಾನು ಕೂಡ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ ಎಂದರು.

    ಇದೇ ವೇಳೆ ವಿರೋಧ ಪಕ್ಷಗಳು ಸ್ಪೀಕರ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಗಾಂಧಿಜೀ ಅವರನ್ನು ಉದಾಹರಣೆ ಕೊಟ್ಟರು. ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ? ಹಾಗೆಯೇ ನನ್ನ ಬಗ್ಗೆ ಏನೂ ಬಿಡಿಯೆಂದು ಮಾರ್ಮಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು.

  • ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ನವದೆಹಲಿ: ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ.

    ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹೋಲುವ ಕಾರ್ಟೂನ್ ಚಿತ್ರ ಕೂಡ ಇತ್ತು.

    ಗಾಂಧೀಜಿ ಚಿತ್ರವಿರುವ ಬಿಯರ್ ಬಾಟಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಗಾಂಧೀಜಿಗೆ ಇಸ್ರೇಲ್ ಅವಮಾನ ಮಾಡಿದೆ ಎಂದು ರೊಚ್ಚಿಗೆದ್ದ ಭಾರತೀಯರು ಮಾಲ್ಕಾ ಬಿಯರ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ರಾಜ್ಯ ಸಭೆಯಲ್ಲೂ ಕೂಡ ಮಂಗಳವಾರ ಚರ್ಚೆ ನಡೆದಿತ್ತು. ಈ ವೇಳೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

    ಭಾರತದಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಕಂಪನಿ ಬ್ರಾಂಡ್ ಮ್ಯಾನೇಜರ್ ಭಾರತೀಯರಲ್ಲಿ ಹಾಗೂ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ. ಗಾಂಧೀಜಿ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿದ್ದು ತಪ್ಪಾಯಿತು. ಇದರಿಂದ ಭಾರತೀಯರ ಭಾವನೆಗಳಿಗೆ ದಕ್ಕೆ ಉಂಟಾಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಜಾಗತಿಕ ಮಟ್ಟದಲ್ಲಿ ಗೌರವಿಸಲಾಗುತ್ತದೆ. ನಾವು ನಮ್ಮ ಕಂಪನಿ ಬಿಯರ್ ಬಾಟಲಿಗಳ ಮೇಲೆ ಇರುವ ಗಾಂಧೀಜಿ ಅವರ ಚಿತ್ರವನ್ನು ತೆಗೆಯುತ್ತೇವೆ ಕ್ಷಮಿಸಿ ಎಂದಿದ್ದಾರೆ.

    ಅಚಾತುರ್ಯದಿಂದ ಬಾಟಲಿಗಳ ಮೇಲೆ ಅವರ ಚಿತ್ರ ಮುದ್ರಿತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಹಿನ್ನೆಲೆ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ಬಿಯರ್ ಬಾಟಲಿ ಮೇಲೆ ಅವರ ಚಿತ್ರ ಬಳಸಲಾಯಿತು. ಗಾಂಧೀಜಿ ಮಾತ್ರವಲ್ಲ ಬಾಟಲಿಯ ಮೇಲೆ ಇಸ್ರೇಲ್‍ನ ಮೂವರು ಮಾಜಿ ಪ್ರಧಾನಿಗಳ ಜತೆ ಚಿತ್ರವನ್ನೂ ಗೌರವ ಸಲ್ಲಿಸಲು ಬಳಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿರೋಧ ವ್ಯಕ್ತವಾದ ಬಳಿಕ ನಾವು ಗಾಂಧೀಜಿ ಚಿತ್ರ ಮುದ್ರಿತ ಬಿಯರ್ ಬಾಟಲಿಗಳ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಅಲ್ಲದೆ ಇದು ಲಿಮಿಟೆಡ್ ಎಡಿಷನ್ ಆಗಿದೆ. ಜೊತೆಗೆ ನಾವು ಮಾರುಕಟ್ಟೆಯಲ್ಲಿ ಈಗಾಗಲೇ ಹಂಚಿಕೆಯಾಗಿರುವ ಬಾಟಲಿಗಳ ಮಾರಟಕ್ಕೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

  • ಸ್ವಚ್ಛತೆ ವೇಳೆ ಸಿಕ್ಕ ಬಿಯರ್ ಬಾಟಲಿ ಹಿಡಿದು ಅಮ್ಮನ ಬಳಿ ಓಡಿ ಹೋದ ಬಾಲಕ!

    ಸ್ವಚ್ಛತೆ ವೇಳೆ ಸಿಕ್ಕ ಬಿಯರ್ ಬಾಟಲಿ ಹಿಡಿದು ಅಮ್ಮನ ಬಳಿ ಓಡಿ ಹೋದ ಬಾಲಕ!

    – ಉಡುಪಿಯಲ್ಲಿ ಗಾಂಧಿಜಯಂತಿಯಂದು ಬಾಲಕ ಕಕ್ಕಾಬಿಕ್ಕಿ

    ಉಡುಪಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಮಾತಾ ಅಮೃತಾನಂದಮಯಿ ಸಂಸ್ಥೆ ಸ್ವಚ್ಛತಾ ಅಭಿಯಾನ ಮಾಡಿದರು. ಈ ಸಂದರ್ಭದಲ್ಲಿ ಸಿಕ್ಕ ಬಿಯರ್ ಬಾಟಲಿ ಎತ್ತಿದ ಬಾಲಕ ಕಕ್ಕಾಬಿಕ್ಕಿಯಾಗಿದ್ದಾನೆ.

    ಗಾಂಧಿಜಯಂತಿ ಹಿನ್ನೆಲೆಯಲ್ಲಿ ಇಂದು ಎಲ್ಲೆಡೆ ವಿಭಿನ್ನ ರೀತಿಯಲ್ಲಿ ರಾಷ್ಟ್ರಪಿತನ ಹುಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಉಡುಪಿಯ ಮಾತಾ ಅಮೃತಾನಂದಮಯಿ ಸಂಸ್ಥೆಯ ನೂರಕ್ಕೂ ಹೆಚ್ಚು ಜನ ಉಡುಪಿ ನಗರದಾದ್ಯಂತ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಮಹಿಳೆಯರು-ಯುವಕರು, ಮಕ್ಕಳು-ವೃದ್ಧರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

    ಬೆಳಗ್ಗೆ 7 ಗಂಟೆಗೆ ಆರಂಭವಾದ ಸ್ವಚ್ಛತಾ ಅಭಿಯಾನ ಉಡುಪಿಯ ಕಲ್ಸಂಕಕ್ಕೆ ಬಂದಿತ್ತು. ವೈನ್ ಗೇಟ್ ಮುಂದೆ ಸ್ವಚ್ಛತಾ ಅಭಿಯಾನ ಮಾಡುವಾಗ ಪುಟ್ಟ ಬಾಲಕನಿಗೆ ಬಿಯರ್ ಬಾಟಲಿಯೊಂದು ಸಿಕ್ಕಿದೆ. ಬಿಯರ್ ಬಾಟಲಿ ಎತ್ತಿದ ಬಾಲಕ, ಬಿಯರ್ ಬಿಯರ್ ಅಂತ ಅಮ್ಮನ ಬಳಿ ಓಡಿ ಹೋಗಿದ್ದಾನೆ. ಅಮ್ಮ ಬಾಟಲಿ ಇಲ್ಲಿ ಹಾಕ್ಬೇಡ ಅಂತ ಹೇಳಿದ್ದಾರೆ.

    ಬಿಯರ್ ಬಾಟಲಿ ಬಿಸಾಕಲೂ ಆಗದೇ, ಅಲ್ಲೇ ಇಡಲೂ ಆಗದೇ ಕೊನೆಗೆ ಬಾಲಕ ಖಾಲಿ ಬಾಟಲಿಯನ್ನು ಕಸದ ಬುಟ್ಟಿಗೆ ತುಂಬಿದ್ದಾನೆ. ಸಾರಾಯಿ ವಿರುದ್ಧ ಸಮರ ಸಾರಿದ್ದ ಗಾಂಧೀಜಿ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಾದರು. ಈ ಮೂಲಕ ಮದ್ಯ ವಿರೋಧಿ ಅಭಿಯಾನಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂಬ ನೇರ ಸಂದೇಶವನ್ನು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾತ್ಮ ಗಾಂಧೀಜಿಯಿಂದಾಗಿ ಸ್ವಚ್ಛ ಭಾರತ, ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ

    ಮಹಾತ್ಮ ಗಾಂಧೀಜಿಯಿಂದಾಗಿ ಸ್ವಚ್ಛ ಭಾರತ, ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ

    ರಾಯಚೂರು: ಜಿಲ್ಲೆಯ ನಗರ ರೈಲ್ವೇ ನಿಲ್ದಾಣ ಅಂದ್ರೆ ಈ ಹಿಂದೆ ಮೂಗು ಮುರಿಯುವಂತಿತ್ತು. ಆದರೆ ಈಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಿಂದಾಗಿ ಇಡೀ ರೈಲ್ವೇ ನಿಲ್ದಾಣದಲ್ಲಿ ಹೊಸ ಲೋಕವೇ ಸೃಷ್ಟಿಯಾದಂತಾಗಿದೆ.

    ಈ ಹಿಂದೆ ಸ್ವಚ್ಛ ಭಾರತ ಅಭಿಯಾನದ ಸರ್ವೆಯಲ್ಲಿ ಕೆಳಗಡೆಯಿಂದ ನಾಲ್ಕನೇ ಸ್ಥಾನ ಪಡೆದು ಅಪಕೀರ್ತಿಗೆ ಒಳಗಾಗಿದ್ದ ರಾಯಚೂರು ರೈಲ್ವೇ ನಿಲ್ದಾಣ ಈಗ ಸಂಪೂರ್ಣ ಬದಲಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸೂಚನೆಯಂತೆ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ರಾಯಚೂರು ನಿಲ್ದಾಣ ದೇಶದ ನೂರು ಸ್ವಚ್ಛ ನಿಲ್ದಾಣಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದೆ.

    ಸ್ವಚ್ಛ ರೈಲು ಅಭಿಯಾನದಲ್ಲೂ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ, ಸ್ವಚ್ಛ ರೈಲು ಶೀರ್ಷಿಕೆಯಡಿ ಇಡೀ ರೈಲ್ವೇ ನಿಲ್ದಾಣ ಈಗ ಗಾಂಧೀಮಯವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ಅವರು ರಾಯಚೂರಿನಿಂದ ಮಹಾರಾಷ್ಟ್ರಕ್ಕೆ ತೆರಳಿದ್ದ ನೆನಪನ್ನ ಮರುಕಳಿಸುವಂತೆ ಸುಂದರವಾದ ಚಿತ್ರಗಳನ್ನ ಇಡೀ ರೈಲ್ವೇ ನಿಲ್ದಾಣದ ತುಂಬಾ ಬಿಡಿಸಲಾಗಿದೆ. ಗಾಂಧಿಜೀ ಅವರ 150ನೇ ಜಯಂತಿ ಹಿನ್ನೆಲೆ ರಾಯಚೂರು ನಿಲ್ದಾಣ ಈಗ ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ ಎಂದು ರೈಲ್ವೇ ಸಲಹಾ ಸಮಿತಿ ಮಾಜಿ ಸದಸ್ಯ ಜಗದೀಶ್ ಗುಪ್ತಾ ಹೇಳಿದ್ದಾರೆ.

    ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಕಲಾವಿದರು ಗಾಂಧೀಜಿ ರಾಯಚೂರಿಗೆ ಬಂದಿದ್ದ ಕ್ಷಣಗಳಿಗೆ ಮರುಜೀವ ನೀಡಿದ್ದಾರೆ. ಉಪ್ಪಿನ ಸತ್ಯಾಗ್ರಹ ಸೇರಿ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳನ್ನ ಸುಂದರವಾಗಿ ಚಿತ್ರಿಸಲಾಗಿದೆ. ಅಲ್ಲದೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗಿದೆ. ಗಾಂಧೀಜಿ ಅವರ 150ನೇ ಜನ್ಮದಿನದ ನೆನಪಿಗಾಗಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಬಾಪೂಜಿ ಪುತ್ಥಳಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ದೇಶದ 10 ಸ್ವಚ್ಛ ರೈಲ್ವೇ ನಿಲ್ದಾಣಗಳನ್ನ ಆಯ್ಕೆ ಮಾಡಿ ವಿಶೇಷ ಕಲಾಚಿತ್ರಗಳಿಂದ ಸುಂದರಗೊಳಿಲಾಗಿದೆ. ಜಾನಪದ ಚಿತ್ರಗಳಿಗೆ ಸಿಖಂದರಬಾದ್ ರೈಲ್ವೇ ನಿಲ್ದಾಣವನ್ನ ಆಯ್ಕೆ ಮಾಡಿದ್ರೆ, ಸ್ವಚ್ಛ ಭಾರತ ಹಾಗೂ ಸ್ವಚ್ಛ ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ ಮಾಡಲಾಗಿದೆ. ಈಗ ರಾಯಚೂರು ರೈಲ್ವೇ ನಿಲ್ದಾಣ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳಲ್ಲೇ ಸುಂದರ ನಿಲ್ದಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv