Tag: Gandhiji

  • ಮುಂದೆ ಯಾರು ಇಂತಹ ಹೇಳಿಕೆ ಕೊಡಬಾರದು ಅಂತಹ ಕ್ರಮ ಆಗಬೇಕು: ದೇಶಪಾಂಡೆ

    ಮುಂದೆ ಯಾರು ಇಂತಹ ಹೇಳಿಕೆ ಕೊಡಬಾರದು ಅಂತಹ ಕ್ರಮ ಆಗಬೇಕು: ದೇಶಪಾಂಡೆ

    ಬೆಂಗಳೂರು: ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಅನಂತ್ ಕುಮಾರ್ ಹೆಗ್ಡೆ ಬೇಷರತ್ ದೇಶದ ಜನರ ಕ್ಷಮೆ ಕೇಳಬೇಕು. ಹೆಗ್ಡೆ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ತಗೆದುಕೊಳ್ಳಬೇಕು. ಕ್ರಮ ಹೇಗಿರಬೇಕು ಎಂದರೆ ಮುಂದೆ ಯಾರು ಇಂತಹ ಮಾತಬಾಡಬಾರದು ಅಂತಹ ಕ್ರಮ ತಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.

    ಸಂಸದ ಅನಂತ್ ಕುಮಾರ್ ಹೆಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಗೆ ಅವಮಾನ ಮಾಡಿದ್ದಾರೆ. ಇದು ಬರೀ ಗಾಂಧೀಜಿ ಅವರಿಗೆ ಮಾಡಿದ ಅವಮಾನ ಅಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲರಿಗೂ ಮಾಡಿದ ಅವಮಾನ. ಸಂವಿಧಾನಕ್ಕೂ ಅಪಚಾರ ಮಾಡಿದ್ದಾರೆ. ಹೆಗ್ಡೆ ಇಡೀ ದೇಶದ ಜನ, ಸ್ವಾತಂತ್ರ್ಯ ಹೋರಾಟಗಾರರಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ಇಂತಹ ಬೇಜವಬ್ದಾರಿ ಹೇಳಿಕೆಗಳನ್ನು ಯಾವ ಭಾರತೀಯನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಹೆಗ್ಡೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಗಡೆ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಸ್ವಾತಂತ್ರ್ಯ ತಂದುಕೊಟ್ಟವರನ್ನ ಅವಮಾನಿಸಿದ್ದಾರೆ. ಅವರು ಉತ್ತರ ಕನ್ನಡದಿಂದ ಸಂಸದರಾಗಿದ್ದಾರೆ. ಅಂಕೋಲಾ, ಶಿರಸಿ, ಸಿದ್ದಾಪುರ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು ಎಂದರು.

    ಮೊದಲು ರಾಷ್ಟ್ರದ ಜನರ ಕ್ಷಮೆಯಾಚಿಸಬೇಕು. ಬಿಜೆಪಿ ರಾಷ್ಟ್ರೀಯ ನಾಯಕರು ಕ್ರಮ ತೆಗೆದುಕೊಳ್ಳಬೇಕು. ಆರು ಬಾರಿ ಸಂಸದರಾಗಿ ಆರಿಸಿ ಬಂದಿದ್ದಾರೆ. ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ನಾನೊಬ್ಬ ಶಾಸಕ ನಾನು ತಪ್ಪು ಮಾಡಿದರೆ ನನ್ನ ಮೇಲೂ ನಮ್ಮ ಸ್ಪೀಕರ್ ಕ್ರಮ ತೆಗೆದುಕೊಳ್ಳಬಹುದು. ಹಾಗೆಯೇ ಹೆಗ್ಡೆ ವಿರುದ್ಧ ಗಂಭೀರ ಆರೋಪವಿದೆ ಸ್ಪೀಕರ್ ಕ್ರಮ ತಗೆದುಕೊಳ್ಳಬೇಕು ಎಂದು ದೇಶಪಾಂಡೆ ಆಗ್ರಹಿಸಿದರು.

  • ಗಾಂಧೀಜಿ ಹುತಾತ್ಮ ದಿನ – ಚಿತಾಭಸ್ಮಕ್ಕೆ ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಅರ್ಪಣೆ

    ಗಾಂಧೀಜಿ ಹುತಾತ್ಮ ದಿನ – ಚಿತಾಭಸ್ಮಕ್ಕೆ ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಅರ್ಪಣೆ

    ಮಡಿಕೇರಿ: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ಹುತಾತ್ಮ ದಿನವನ್ನು ಮಡಿಕೇರಿ ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

    ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವವನ್ನು ಅರ್ಪಿಸಲಾಗಿದೆ. ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್, ಗೈಡ್ಸ್, ಎನ್‍ಸಿಸಿ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಯಲ್ಲಿ ಗಾಂಧೀಜಿ ಹುತಾತ್ಮ ದಿನವನ್ನು ಆಚರಿಸಲಾಯಿತು.

    ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮುಖ್ಯರಸ್ತೆ ಮೂಲಕ ಗಾಂಧೀಜಿ ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿದ್ದು, ಗಾಂಧಿ ಮಂಟಪದಲ್ಲಿರಿಸಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಮರ್ಪಿಸಲಾಯಿತು. ಇದೇ ವೇಳೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತನಿಗೆ ಪೊಲೀಸ್ ಗೌರವ ಸಲ್ಲಿಸಲಾಯಿತು.

    ಗಾಂಧಿಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನ ಕಾರ್ಯಕ್ರಮವನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸರ್ವಧರ್ಮ ಗುರುಗಳಿಂದ ಭಗವದ್ಗೀತೆ, ಬೈಬಲ್, ಕುರಾನ್ ಸಂದೇಶಗಳ ಪಠಣ ಮಾಡಲಾಯಿತು. ಜಿಲ್ಲಾಧಿಕಾರಿ ಅನಿಸ್ ಜಾಯ್, ಮಾಜಿ ಸಚಿವ ಎಂ.ಸಿ.ನಾಣಯ್ಯ ಮತ್ತು ಜಿಲ್ಲೆಯ ವಿವಿಧ ಇಲಾಖೆ ಅದಿಕಾರಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ‘ಗಾಂಧೀಜಿ ತಪ್ಪಿನಿಂದ ಅಯೋಗ್ಯ ನೆಹರು ಪ್ರಧಾನಿಯಾದ’- ಮತ್ತೆ ವಿವಾದದಲ್ಲಿ ಯತ್ನಾಳ್

    ‘ಗಾಂಧೀಜಿ ತಪ್ಪಿನಿಂದ ಅಯೋಗ್ಯ ನೆಹರು ಪ್ರಧಾನಿಯಾದ’- ಮತ್ತೆ ವಿವಾದದಲ್ಲಿ ಯತ್ನಾಳ್

    ಬಾಗಲಕೋಟೆ: ವಲ್ಲಬಾಯಿ ಪಟೇಲ್ ಅವರಿಗೆ ಅಂದು ಬಹುಮತವಿತ್ತು. ಆದರೂ ಮಹಾತ್ಮ ಗಾಂಧಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಮಹಾತ್ಮ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಒಬ್ಬ ಅಯೋಗ್ಯ ಪ್ರಧಾನಿಯಾದ ಎಂದು ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇಂದು ಬಾಗಲಕೋಟೆ ಜಿಲ್ಲೆ ತೇರದಾಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ತಪ್ಪಿನಿಂದ ವಿಲಾಸಿ ಜೀವನ ಮಾಡುತ್ತಿದ್ದ ನೆಹರು ಪ್ರಧಾನಿಯಾದ. ಅವನಿಗೆ ಸಿಗರೇಟ್ ಲಂಡನ್‍ನಿಂದ ಬರುತ್ತಿತ್ತು. ಬಟ್ಟೆ ದೋಬಿಗೆ (ಕ್ಲೀನಿಂಗ್) ಲಂಡನ್‍ಗೆ ಹೋಗುತ್ತಿದ್ದವು. ಇವರು ಬಡವರ ಬಗ್ಗೆ ಮಾತನಾಡುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹೇಗೆ ಸತ್ತರು ಇಂದಿಗೂ ಯಾರೂ ಹೇಳುತ್ತಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ಮಾಡಿದರು.

    ಸದ್ಯ ಎಲ್ಲಿಯಾದರೂ ಕಾಶ್ಮೀರದಲ್ಲಿ ಗುಂಡು, ಬಾಂಬ್ ಹಾರಿದ್ದು ಕೇಳಿದ್ದೀರಾ? ಭಯೋತ್ಪಾದಕರ ಕಾಟ ಎಲ್ಲ ಬಂದ್ ಆಗಿದೆ. ನಮ್ಮ ರಾಜಕಾರಣಿಗಳೇ ಸೈನಿಕರ ಬಗ್ಗೆ ಪೊಲೀಸರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ತಿನ್ನೋಕೆ ಕೂಳಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಒಬ್ಬ ನಮ್ಮ ಅಯೋಗ್ಯ ರಾಜಕಾರಣಿ ಹೇಳುತ್ತಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಯತ್ನಾಳ್, ಸಿಎಎಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ತೊಂದರೆಯಿಲ್ಲ. ಖುರ್ಚಿಗಾಗಿ ರಾಜಕಾರಣ ಮಾಡುವವರಿಗೆ ಇದು ತೊಂದರೆಯಾಗಿದೆ ಎಂದು ಹೇಳಿದರು.

    ರೋಹಿಂಗ್ಯಾ ಜನಾಂಗ ನಮ್ಮ ದೇಶದಲ್ಲೇನಿದೆ ಅದು ಬಹಳ ಮಾರಕ. ರೋಹಿಂಗ್ಯಾ ಪರವಾಗಿ ಕಪಿಲ್ ಸಿಬಲ್‍ನಂತವರು ವಾದ ಮಾಡುತ್ತಾರೆ. ಮಂಗಳೂರಿನಲ್ಲಿ ಸತ್ತವರಿಗೆ ಮಮತಾ ಬ್ಯಾನರ್ಜಿ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾಳೆ. ಅಕೆಗೂ ನಮ್ಮ ಕರ್ನಾಟಕದ ಹುಡುಗನಿಗೂ ಏನು ಸಂಬಂಧ. ಕೋಲ್ಕತ್ತಾ ಜನರ ವೋಟ್‍ಗಾಗಿ ನಮ್ಮ ರಾಜ್ಯದವರಿಗೆ ಪರಿಹಾರ ಘೋಷಣೆ ಮಾಡಿದ್ದಾಳೆ ಎಂದು ಮಮತಾ ಬ್ಯಾನರ್ಜಿ ಮೇಲೆಯೂ ಏಕವಚನದಲ್ಲೇ ದಾಳಿ ಮಾಡಿದರು.

    ಇದೇ ಸಮಯದಲ್ಲಿ ಸಿದ್ದರಾಮಯ್ಯನ ವಿರುದ್ಧ ಗುಡುಗಿದ ಯತ್ನಾಳ್, ಸಿದ್ದರಾಮಯ್ಯ ಪ್ರಾಣ ಹೋದರೂ ಪರವಾಗಿಲ್ಲ ಮಂಗಳೂರಿಗೆ ಹೋಗುತ್ತೇನೆ ಅಂದ. ಪ್ರವಾಹ ಬಂದಾಗ ಬಾದಾಮಿಗೆ ಬರಬೇಕಿತ್ತು ಎಲ್ಲಿ ಮಲಗಿದ್ದೆ ಎಂದು ಮಾಜಿ ಸಿಎಂ ಸಿದ್ದುಗೆ ಏಕವಚನದಲ್ಲಿ ಪ್ರಹಾರ ಮಾಡಿದರು. ಪ್ರವಾಹವಾದಾಗ ಕಣ್ಣು ಆಪರೇಷನ್ ಆಗಿದೆ ಅಂದ ಎಂದು ಅಣಕ ಮಾಡಿ ತೋರಿಸಿದ ಯತ್ನಾಳ್, ಮಂಗಳೂರಿಗೆ ಹೋಗುವಾಗ ಎದೆ ಆಪರೇಷನ್ ಆಗಿತ್ತಲ್ಲ ಎಂದು ವ್ಯಂಗ್ಯವಾಡಿದರು.

  • ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    – ರಾಹುಲ್ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಹೇಳಿ ವಿವಾದ ಸೃಷ್ಟಿ ಮಾಡಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ.

    ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಧ್ವಿ ಪ್ರಜ್ಞಾ ಟೆರರಿಸ್ಟ್ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದರು.

    ಈ ಹೇಳಿಕೆ ವಿಚಾರವಾಗಿ ಸ್ವಪಕ್ಷ ಬಿಜೆಪಿ ಕೂಡ ಸಾಧ್ವಿ ಪ್ರಜ್ಞಾಗೆ ತಪರಾಕಿ ಹಾಕಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ರೂಪ ನೀಡಿದ್ದಾರೆ. ನಾನು ಗಾಂಧೀಜಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಸಂಸತ್ತಿನ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಅದು ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪಗಳು ಸಾಬೀತಾಗದೆ ಇದ್ದರೂ ಅವರು ಹೀಗೆ ಹೇಳಿರುವುದು ಒಬ್ಬ ಮಹಿಳಾ ಸಂಸದೆ ಮತ್ತು ಸನ್ಯಾಸಿಗೆ ಮಾಡಿರುವ ಅವಮಾನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದರು.

    ಇದರ ಜೊತೆಗೆ ಸಾಧ್ವಿ ಪ್ರಜ್ಞಾ ಅವರು ಈ ರಾಷ್ಟ್ರಕ್ಕಾಗಿ ಗಾಂಧೀಜಿ ಅವರ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಒಂದು ಪಕ್ಷ ನನ್ನನ್ನು ಗುರಿಯಾಗಿಸಿಕೊಂಡು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದರು.

    ಈ ಆರೋಪದ ನಂತರ ಲೋಕಸಭೆಯಲ್ಲಿ ಕೆಲಕಾಲ ಕಾಂಗ್ರೆಸ್ ಸಂಸದರು ಸಾಧ್ವಿ ಪ್ರಜ್ಞಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಸಂಸದ ನಿಷ್ಕಾಂತ್ ದುಬೆ, ಈಗ ಸಾಧ್ವಿ ಪ್ರಜ್ಞಾ ಅವರು ಕ್ಷಮೆ ಕೇಳಿದ್ದಾರೆ. ಆದರೆ ಒಬ್ಬ ಸಂಸದೆಯನ್ನು ಟೆರರಿಸ್ಟ್ ಎಂದು ಹೇಳಿದ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ಸ್ಪೀಕರ್ ಅವರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

    ಏನಿದು ವಿವಾದ?
    ಬುಧವಾರ ಸಂಸತಿನಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದರು.

    ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದರು. ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು.

  • ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಗಾಂಧೀಜಿಗೆ ಅವಮಾನ – ಸಿದ್ದರಾಮಯ್ಯ

    ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಗಾಂಧೀಜಿಗೆ ಅವಮಾನ – ಸಿದ್ದರಾಮಯ್ಯ

    – ಮೋದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಬಗ್ಗೆ ಗೊತ್ತೇ ಇಲ್ಲ

    ಬೆಂಗಳೂರು: ಅಮೆರಿಕಾದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ನಡೆದ ಜವಾಹರಲಾಲ್ ನೆಹರು ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಇಡೀ ಬದುಕನ್ನೇ ದೇಶಕ್ಕೆ ಅರ್ಪಿಸಿದ್ದಾರೆ. ದೇಶ ಕಟ್ಟಲು ದೇಹವನ್ನೇ ಸವೆಸಿದ ವ್ಯಕ್ತಿಯನ್ನು ಕೆಟ್ಟದಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಒಬ್ಬರೆ ರಾಷ್ಟ್ರಪಿತ ಇರೋದು ಅದು ಗಾಂಧಿ ಮಾತ್ರ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಟ್ರಂಪ್ ಮೋದಿ ಅವರನ್ನು ಫಾದರ್ ಆಫ್ ದಿ ನೇಷನ್ ಅಂತಾರೆ. ಟ್ರಂಪ್‍ಗೆ ಜ್ಞಾನದ ಕೊರತೆ ಇತ್ತು. ಆದರೆ ಮೋದಿ ನಾನಲ್ಲ ರಾಷ್ಟ್ರಪಿತ ಗಾಂಧೀಜಿ ಎಂದು ಹೇಳಬಹುದಿತ್ತು. ಆದರೆ ಪ್ರಧಾನಿ ಮೋದಿ ಆ ರೀತಿ ಹೇಳಿಲ್ಲ. ಮೋದಿ ಸ್ವಾತಂತ್ರ ಬಂದ ಬಳಿಕ ಹುಟ್ಟಿದವರು. ಅವರಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಬಗ್ಗೆ ಗೊತ್ತೇ ಇಲ್ಲ. ಆದರೆ ರಾಷ್ಟ್ರ ಭಕ್ತ, ರಾಷ್ಟ್ರ ಹರಿಕಾರ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಅವರೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಾರೆ ಎಂದು ಮೋದಿ ಮೇಲೆ ಕಿಡಿಕಾರಿದರು.

    ಮೋದಿಯ ಆರ್ಥಿಕ ಆಡಳಿತ ಹೇಗಿದೆ ಎಂದರೆ ಜಿಡಿಪಿ ಶೇ.4.2 ಗೆ ಕುಸಿಯುತ್ತೆ ಅಂತ ವರದಿ ಬಂದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಯುವಕ ಯುವತಿಯರೆಲ್ಲಾ ನಮ್ಮನ್ನು ನೋಡಿ ಮೋದಿ ಮೋದಿ ಅಂತಾರೆ. ಪಾಪ ಈಗ ಅವರೆಲ್ಲರೂ ಕೆಲಸ ಕೇಳಿದರೆ ಪಕೋಡ ಮಾರಿ ಎನ್ನುತ್ತಾರೆ. ಈ ಮಟ್ಟಿಗೆ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

    ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋಗ್ತಿದೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡ್ಕೊಂಡಿದ್ದಾರೆ. ಇಡಿ ಐಟಿ, ಸಿಬಿಐ ಎಲ್ಲಾ ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

    ಇದೇ ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಹೆಸರು ಬದಲಾವಣೆಯಿಂದ ಏನೂ ಆಗುವುದಿಲ್ಲ. ಮೊದಲು ಅನುದಾನ ಬಿಡುಗಡೆ ಮಾಡಲಿ. ನಂತರ ಕ್ವಾಲಿಟಿ ಕೊಡಲಿ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಉಪಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಈ ವೇಳೆ ತಿಳಿಸಿದರು.

  • ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

    ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

    ನವದೆಹಲಿ: ಮಹಾತ್ಮಾ ಗಾಂಧೀಜಿ ಅವರ ಆದರ್ಶಗಳನ್ನು ಚಲನಚಿತ್ರೋದ್ಯಮದ ಮೂಲಕ ಜನಪ್ರಿಯಗೊಳಿಸಲು ಪ್ರಧಾನಿ ಮೋದಿ ಅವರು ಬಾಲಿವುಡ್ ನಟ-ನಟಿಯರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.

    ಗಾಂಧೀಜಿ ಅವರ 150 ನೇ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟಿ-ನಟಿಯರು ಭಾಗವಹಿಸಿ ಮೋದಿ ಅವರ ಜೊತೆ ಸಂವಾದ ನಡೆಸಿದರು. ಇದೇ ವೇಳೆ ಬಾಲಿವುಡ್ ನಟರಾದ ಅಮೀರ್ ಖಾನ್ ಮತ್ತು ಶಾರೂಖ್ ಖಾನ್ ಮೋದಿ ಅವರ ಈ ಯೋಜನೆಯನ್ನು ಶ್ಲಾಘಿಸಿದರು.

    ಬಾಲಿವುಡ್ ನ ಬಹುತೇಕ ನಟ-ನಟಿಯರು ಭಾಗವಸಿದ್ದ ಈ ಕಾರ್ಯಕ್ರಮದಲ್ಲಿ ಅಮೀರ್, ಶಾರೂಖ್, ರಾಜ್‍ಕುಮಾರ್ ಹಿರಾನಿ, ಕಂಗನಾ ರನೌತ್, ಆನಂದ್ ಎಲ್ ರೈ, ಎಸ್‍ಪಿ ಬಾಲಸುಬ್ರಹ್ಮಣ್ಯಂ, ಸೋನಮ್ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಸದಸ್ಯರು ಉಪಸ್ಥಿತರಿದ್ದರು.

    ಈ ಕಾರ್ಯಕ್ರಮ ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ಶನಿವಾರ ಸಂಜೆ 7 ಕ್ಕೆ ಆಯೋಜಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂಬಂಧಿಸಿದ ನಾಲ್ಕು ಸಾಂಸ್ಕೃತಿಕ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಚಿತ್ರೋದ್ಯಮದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಜನಪ್ರಿಯಗೊಳಿಸುವ ವಿಷಯದಲ್ಲಿ ಮನರಂಜನಾ ಉದ್ಯಮದಲ್ಲಿ ಹಲವಾರು ಜನರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಚಿತ್ರೋದ್ಯಮ ಸಾಮಾನ್ಯ ನಾಗರಿಕರನ್ನು ಮನರಂಜನೆಯ ಜೊತೆಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಸಮಾಜವನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡುವ ಸಮಾಥ್ರ್ಯ ಸಿನಿಮಾ ಮಂದಿಗೆ ಇದೆ ಎಂದು ಹೇಳಿದರು. ಗಾಂಧೀಜಿ ಅವರು ಸರಳತೆಗೆ ಸಮಾನಾರ್ಥಕವಾದವರು. ಒಂದು ಆಲೋಚನೆಯಿಂದ ಒಬ್ಬ ವ್ಯಕ್ತಿ, ಪ್ರಪಂಚದಾದ್ಯಂತ ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಬಲ್ಲವರು ಎಂದರೆ ಅದು ಗಾಂಧೀಜಿಯವರು ಮಾತ್ರ ಎಂದು ತಿಳಿಸಿದರು.

    ಈ ವಿಚಾರದ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್, ಮೊದಲಿಗೆ ಗಾಂಧೀಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ಸಿನಿಮಾ ರಂಗದವರಾಗಿ, ಸೆಲಿಬ್ರಿಟಿಗಳಾಗಿ ನಾವು ಮಾಡಬಹುದಾದದ್ದು ತುಂಬಾ ಇದೆ ಮತ್ತು ನಾವು ಇನ್ನು ಮುಂದೆ ಅದನ್ನು ಮಾಡುತ್ತೇವೆ ಎಂದು ನಾನು ಪ್ರಧಾನ ಮಂತ್ರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

    ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಕ್ಕಾಗಿ ಪಿಎಂ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೂ ಸಹ ಈ ಮಹಾತ್ಮ ಗಾಂಧಿಯಂತಹ ಉತ್ತಮ ಕಾರಣಕ್ಕಾಗಿ ನಾವು ಸೇರಿದ್ದು ಖುಷಿಯಾಗಿದೆ. ನಾವು ಗಾಂಧೀಜಿಯನ್ನು ಭಾರತ ಮತ್ತು ಜಗತ್ತಿಗೆ ಮತ್ತೆ ಪರಿಚಯಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟ ಶಾರೂಖ್ ಖಾನ್ ಹೇಳಿದ್ದಾರೆ.

  • ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

    ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

    ಗಾಂಧಿನಗರ: ಶಾಲೆಯ ಪರೀಕ್ಷೆಯಲ್ಲಿ ಮಹಾತ್ಮ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕಂಡು ಗುಜರಾತ್ ಶಿಕ್ಷಣಾಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ.

    ಗಾಂಧಿನಗರದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆ ‘ಸುಫಲಾಂ ಶಾಲಾ ವಿಕಾಸ ಸಂಕುಲ’ದ ಅಧೀನದಲ್ಲಿನ ಶಾಲೆಯಲ್ಲಿ ಗುಜರಾತಿ ಭಾಷೆಯ 9ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. ಇಂಟರ್ನಲ್ ಅಸಿಸ್ಮೆಂಟ್ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದ್ದು, ಈ ಪ್ರಶ್ನೆಯನ್ನು ನೋಡಿ ಕೆಲ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ತಬ್ಬಿಬ್ಬಾಗಿ ಹೋಗಿದ್ದಾರೆ.

    12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಪತ್ರಿಕೆಯಲ್ಲಿ ಅನಧಿಕೃತ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಸೇವನೆ ಕುರಿತು ಪ್ರಶ್ನೆ ಕೇಳಲಾಗಿದ್ದು, ನಿಮ್ಮ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಳ ಸಂಬಂಧ ದೂರು ನೀಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆಯಿರಿ ಎಂದು ಕೇಳಲಾಗಿದೆ.

    ಖಾಸಗಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳು ಆಕ್ಷೇಪಾರ್ಹವಾಗಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಜಿಲ್ಲೆಯ ಶಿಕ್ಷಣಾಧಿಕಾರಿ ಭರತ್ ವಾಧರ್ ತಿಳಿಸಿದ್ದಾರೆ.

    ಸುಫಲಾಂ ಶಾಲಾ ವಿಕಾಸ ಸಂಕುಲ ಎಂಬುದು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಶಿಕ್ಷಣ ಇಲಾಖೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ.

  • ಗಾಂಧೀಜಿಯನ್ನು ಹತ್ಯೆಗೈದವರು ಈಗ ಭಗವದ್ಗೀತೆ ಬೋಧಿಸುತ್ತಿದ್ದಾರೆ – ಶಿವಶಂಕರ್ ರೆಡ್ಡಿ ಕಿಡಿ

    ಗಾಂಧೀಜಿಯನ್ನು ಹತ್ಯೆಗೈದವರು ಈಗ ಭಗವದ್ಗೀತೆ ಬೋಧಿಸುತ್ತಿದ್ದಾರೆ – ಶಿವಶಂಕರ್ ರೆಡ್ಡಿ ಕಿಡಿ

    ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದವರು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

    ನಗರದ ಹೊರವಲಯದ ಹಾರೋಬಂಡೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕೊಂದಂತಹ ಕೋಮುವಾದಿ ಶಕ್ತಿಗಳು ಗಾಂಧೀಜಿಯವರ 150ನೇ ಜಯಂತಿ ಆಚರಿಸುತ್ತಿವೆ. ಮಹಾತ್ಮ ಗಾಂಧೀಜಿ ಬಗ್ಗೆ ಅವರಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕೇವಲ ತೋರಿಕೆಗಾಗಿ ಗಾಂಧಿ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಗಾಂಧಿ ಕೊಂದ ಹಂತಕನಿಗೆ ವಿಗ್ರಹ ಸ್ಥಾಪಿಸಿ ದೇವಾಲಯ ಕಟ್ಟುವುದು ವಿಪರ್ಯಾಸದ ಸಂಗತಿ. ಬಿಜೆಪಿಯವರಿಂದ ದೇಶ ಪ್ರೇಮ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು.

    ದೇಶದಲ್ಲಿ ಗಾಂಧೀಜಿ ನೆನಪಿಸಿಕೊಳ್ಳದೆ ಏನೂ ಮಾಡಲಾಗುವುದಿಲ್ಲ. ಆದರೆ ಬ್ರಾಂಡಿಂಗ್ ಹಾಗೂ ಪ್ರಚಾರಕ್ಕಾಗಿ ಗಾಂಧಿ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗಾಂಧೀಜಿಯ ತತ್ವಾದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಈಗ ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದಾರೆ. ಗಾಂಧೀಜಿಯವರ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವವಾಗಿದೆ. ಅವರ ತತ್ವಗಳನ್ನು ಕೊಂದವರು ಬಿಜೆಪಿಯವರು ನಾವು ಈಗಲೂ ತತ್ವಪಾಲನೆ ಮಾಡುತ್ತಿದ್ದೇವೆ ಎಂದು ಗಾಂಧಿ ತತ್ವದೆಡೆಗೆ ನಮ್ಮ ನಡಿಗೆ ಎಂಬ ಬಿಜೆಪಿ ಪಾದಯಾತ್ರೆ ಕುರಿತು ಶಿವಶಂಕರರೆಡ್ಡಿ ಲೇವಡಿ ಮಾಡಿದರು.

    ವಿಪಕ್ಷ ನಾಯಕರಾಗಲು ಸಿದ್ದರಾಮಯ್ಯನವರೇ ಸಮರ್ಥರು. ಈ ಕುರಿತು ಬಹಳಷ್ಟು ಶಾಸಕರು ವಿಧಾನ ಪರಿಷತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಚ್.ಕೆ.ಪಾಟೀಲ್ ಅವರಿಗೂ ಜವಾಬ್ದಾರಿಯುತ ಸ್ಥಾನಮಾನ ಕೊಡುತ್ತಾರೆ. ವಿಧಾನಸಭೆ ಹೊರಗೆ ಹಾಗೂ ಒಳಗೆ ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯ ಸಿದ್ದರಾಮಯ್ಯನವರಿಗಿದೆ. ಜನರಲ್ಲೂ ಸಹ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಸಿಎಂ ಆಗಿದ್ದಾಗ ಓಳ್ಳೆಯ ಕೆಲಸ ಮಾಡಿದ ಕಾರಣ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರು.

    ಎಚ್.ಕೆ.ಪಾಟೀಲ್ ಸಮರ್ಥರಲ್ಲ ಎಂಬ ಅರ್ಥ ಬೇಡ. ಪರಮೇಶ್ವರ್ ರವರಿಗೂ ಸಾಮಥ್ರ್ಯ ಇಲ್ಲ ಅಂತ ಅಲ್ಲ. ಸಾಮೂಹಿಕ ನಾಯಕತ್ವದಡಿಯಲ್ಲಿ ಎಲ್ಲರ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಪಕ್ಷಕ್ಕೆ ಎಲ್ಲ ನಾಯಕರೂ ಮುಖ್ಯ ಎಂದು ಶಿವಶಂಕರ್ ರೆಡ್ಡಿ ಅಭಿಪ್ರಾಯಪಟ್ಟರು.

  • ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ, ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವವನ್ನ: ಸಿ.ಟಿ.ರವಿ

    ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ, ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವವನ್ನ: ಸಿ.ಟಿ.ರವಿ

    ಚಿಕ್ಕಬಳ್ಳಾಪುರ: ಗಾಂಧೀಜಿಯವರ ಟೋಪಿಯನ್ನು ಹಾಕಿಕೊಂಡ ಕಾಂಗ್ರೆಸ್ ಪಕ್ಷ ಉಳಿದವರಿಗೆ ಟೋಪಿ ಹಾಕುವ ಕೆಲಸ ಮಾಡಿತು. ಗಾಂಧಿ ತತ್ವವನ್ನ ಬಿಟ್ಟು ಬಿಡ್ತು. ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ ಮಾತ್ರ. ಆದರೆ ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವಗಳನ್ನು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಜಿಲ್ಲೆಯ ಗೌರಿಬಿದನೂರು ವಿದುರಾಶ್ವತ್ಥ ಗ್ರಾಮದಲ್ಲಿ ಮಾತನಾಡಿದ ಸಿ.ಟಿ.ರವಿ, ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸವಿ ನೆನೆಪಿನಾರ್ಥಕವಾಗಿ ‘ಗಾಂಧಿ ತತ್ವದ ಎಡೆಗೆ, ನಮ್ಮ ನಡಿಗೆ’ ಅನ್ನೋ ಜನಜಾಗೃತಿ ಪಾದಯಾತ್ರೆ ನಡೆಸಿದ್ದೇವೆ. ಸ್ವತಂತ್ರ ಹೋರಾಟದ ತಪೋಭೂಮಿಯಾದ ವಿದುರಾಶ್ವತ್ಥ ಗ್ರಾಮದಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ನಮ್ಮ ನಡಿಗೆ ಗಾಂಧಿ ತತ್ವಗಳ ಕಡೆಗೆ ಎಂದು ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕನ ಆಯ್ಕೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ರವಿ ಅವರು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನ ಒಗ್ಗೂಡಿಸುವಂತಹ ನಾಯಕರೂ ಯಾರೂ ಇಲ್ಲ. ಸಿದ್ದರಾಮಯ್ಯ ಸಹ ಕೇವಲ ಒಂದು ಗುಂಪಿನ ನಾಯಕರಷ್ಟೇ. ಹೀಗೆ ಕಾಂಗ್ರೆಸ್‍ನಲ್ಲಿ ಹಲವು ಗುಂಪುಗಳಿದ್ದು. ಹಲವು ಮಂದಿ ನಾಯಕರಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುವಂತಹ ಏಕೈಕ ನಾಯಕ ಸದ್ಯಕ್ಕೆ ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.

  • ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿ: ಮಹಾತ್ಮ ಗಾಂಧಿ ಹೆಸರಿನ ವೃತ್ತಗಳು, ಭವನಗಳು, ರಸ್ತೆಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಗ್ರಾಮದಲ್ಲಿ ಜನ ಮಹಾತ್ಮ ಗಾಂಧಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ್ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ದೇವಸ್ಥಾನವಿದೆ. ಕೇವಲ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮಾತ್ರವಲ್ಲ, ದಿನ ನಿತ್ಯ ಬಾಪೂಜಿಗೆ ಗ್ರಾಮಸ್ಥರು ಪೂಜೆ ಮಾಡಿ ಮಹಾತ್ಮನನ್ನು ಸ್ಮರಿಸುತ್ತಾರೆ.

    ಬಲಶೆಟ್ಟಿಹಾಳ ಗ್ರಾಮಸ್ಥರು ಗಾಂಧೀಜಿ ಮೇಲಿನ ಅಭಿಮಾನದಿಂದ ಸ್ವಾತಂತ್ರ್ಯಾನಂತರ 1948ರಲ್ಲಿ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿನ ಆದರ್ಶ ಶಿಕ್ಷಕ ದಿ.ಹಂಪಣ್ಣ ಸಾಹುಕಾರ್ ಎನ್ನುವವರು, ಸ್ವತಃ ಗಾಂಧೀಜಿ ಅವರ ಪುತ್ಥಳಿ ತಯಾರಿಸಿ, ದೇವಸ್ಥಾನ ನಿರ್ಮಿಸಿದ್ದಾರಂತೆ. ಅಂದಿನಿಂದ ಇಂದಿನವರೆಗೆ ಇಲ್ಲಿನ ಗ್ರಾಮಸ್ಥರು ಗಾಂಧೀಜಿಯವರ ಈ ಪುತ್ಥಳಿಗೆ ದೇವತಾ ಸ್ಥಾನಮಾನ ನೀಡಿ, ಇತರೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಈ ದೇವಸ್ಥಾನದಲ್ಲೂ ಸುಮಾರು 70 ವರ್ಷಗಳಿಂದ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ.

    ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿಯೇ ಗಾಂಧಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶಾಲಾ ಮಕ್ಕಳು ದಿನ ಮಹಾತ್ಮ ಗಾಂಧಿಜೀಯವರ ಮೂರ್ತಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ಪುಷ್ಪಾಲಂಕಾರಗಳಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ. ಅಲ್ಲದೆ ಈ ಗ್ರಾಮದ ಯಾವುದೇ ಸಮಸ್ಯೆಗಳನ್ನು ಮತ್ತು ನ್ಯಾಯ ಪಂಚಾಯತಿಗಳನ್ನು, ಇದೇ ಗಾಂಧಿ ದೇವಸ್ಥಾನದ ಕಟ್ಟೆಯಲ್ಲೇ ಇಲ್ಲಿನ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತಾರೆ. ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ಇಲ್ಲಿ ನಡೆಯುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಅಹಿಂಸೆಯ ಮೂಲಕ ರಕ್ಷಿಸಿದ ಮಹಾತ್ಮ ಗಾಂಧೀಜಿಯವರನ್ನು ದೇವರ ಸ್ಥಾನದಲ್ಲಿಟ್ಟು, ದೇವಾಲಯ ಕಟ್ಟಿ ಎಲ್ಲ ದೇವರಿಗೆ ಪೂಜಿಸುವಂತೆ, ನಿತ್ಯ ಪೂಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.