ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಗಂಧದ ಗುಡಿಯಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar) ಬೆಳ್ಳಿ ತೆರೆ ಮೇಲೆ ರಾರಾಜಿಸಲಿದ್ದಾರೆ. ಕನ್ನಡನಾಡು ಮಾತ್ರ ಅಲ್ಲ, ದೇಶದ ಜನರು ಅಷ್ಟೇ ಅಲ್ಲ. ಇಡೀ ವಿಶ್ವವೇ ಪುನೀತ್ ರಾಜಕುಮಾರ್ ಕೊನೇ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದೆ. ಆ ಚಿತ್ರವನ್ನು ಬರ ಮಾಡಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿಮಾಗಳ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ಕೈ ಜೋಡಿಸಿದ್ದಾರೆ. ಅಪ್ಪು ಕಡೇ ಚಿತ್ರವನ್ನು ಎಲ್ಲರಿಗೂ ತಲುಪಿಸುವುದು ಮಾತ್ರ ಅಲ್ಲ, ಎಲ್ಲರಿಗೂ ಹೊಸ ಸಂದೇಶವನ್ನು ಈ ಮೂಲಕ ನೀಡಲು ರೆಡಿಯಾಗಿದ್ದಾರೆ. ಇದೇ 21ರಂದು ಅದ್ದೂರಿ ಪ್ರಿ ಇವೆಂಟ್ ರಿಲೀಸ್ ಕಾರ್ಯಕ್ರಮ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.

ಗಂಧದಗುಡಿ (Gandhad Gudi) ಬಿಡುಗಡೆ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತದ ಸಿನಿ ದಿಗ್ಗಜರು ಹಾಜರಾಗಲಿದ್ದಾರೆ. ಎಲ್ಲ ಭಾಷೆಯ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಯಾರೆಲ್ಲ ಬರುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಜೊತೆಗೆ ಅಪ್ಪು (Appu) ಬಳಗ ಎಲ್ಲ ಕಾರ್ಯಗಳನ್ನು ನಿಯತ್ತಾಗಿ ಮಾಡುತ್ತಿದೆ. ಇದೇ ಪ್ರಿ ಇವೆಂಟ್ ಕಾರ್ಯಕ್ರಮ ನಡೆದ ಮರುದಿನ, ಅಂದರೆ ಅಕ್ಟೋಬರ್ 22 ಹಾಗೂ 23 ರಂದು ಬೆಂಗಳೂರಿನಲ್ಲಿ ಪುನೀತ್ ಫುಡ್ ಫೆಸ್ಟ್ (Food Fest) ಅದ್ದೂರಿಯಾಗಿ ನಡೆಯಲಿದೆ. ಅಪ್ಪುಗೆ ಇಷ್ಟವಾದ ನಾನ್ ವೆಜ್ ತಿನಿಸುಗಳನ್ನು ಕೆಲವು ಹೋಟೆಲ್‌ಗಳಲ್ಲಿ ಮಾಡಲಾಗುತ್ತದೆ. ಅದರಲ್ಲಿ ಮೋದಿ ಆಸ್ಪತ್ರೆ ಬಳಿಯ ಡಾ.ರಾಜ್ ದೊನ್ನೆ ಬಿರಿಯಾನಿ ಮನೆ ಕೂಡ ಒಂದು. ಖ್ಯಾತ ನಿರೂಪಕಿ ಅನುಶ್ರೀ (Anushree) ಹೋಟೆಲ್ ಉದ್ಘಾಟಿಸಿದರು.

ಈ ಹೋಟೆಲ್‌ನಲ್ಲಿ ಅಪ್ಪುಗೆ ಬಲು ಇಷ್ಟವಾದ ಮಟನ್ ಚಾಪ್ಸ್ ಸೇರಿದಂತೆ ಮತ್ತಿತರ ತಿನಿಸುಗಳನ್ನು ಮಾಡಲಾಗುತ್ತದೆ. ಅಪ್ಪು ಅಬಿಮಾನಿಗಳು ಇದನ್ನು ಸವಿಯಬಹುದು. ಬರೀ ಇಲ್ಲಷ್ಟೇ ಅಲ್ಲ, ಬೆಂಗಳೂರಿನ ಅನೇಕ ಹೋಟೆಲ್‌ಗಳು ಈ ಫುಡ್‌ಫೆಸ್ಟ್ನಲ್ಲಿ ಭಾಗವಹಿಸಲಿವೆ. ವೆರೈಟಿ ವೆರೈಟಿ ಅಪ್ಪುಗೆ ಇಷ್ಟವಾದ ನಾನ್‌ವೆಜ್ ಐಟಂ ಮಾಡಲಾಗುತ್ತದೆ. ಹೋಟೆಲ್‌ನಲ್ಲೂ ಇದನ್ನು ತಿನ್ನಬಹುದು. ಅಥವಾ ಆರ್ಡರ್ ಕೂಡ ಮಾಡಬಹುದು. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

ಅಪ್ಪು ಅಗಲಿ ಇದೇ ಅಕ್ಟೋಬರ್ ಕೊನೆಯ ವಾರಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯ ತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪ್ಪು ಕುಟುಂಬ ಮತ್ತು ಅಭಿಮಾನಿಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಅಪ್ಪು ಅವರ ಕನಸುಗಳಲ್ಲಿ ಒಂದಾಗಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಕೂಡ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳು ಕೂಡ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.















