Tag: Ganapathy

  • ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

    ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

    ದಾವಣಗೆರೆ: ಶನಿವಾರ ದಾವಣಗೆರೆ ನಗರದಲ್ಲಿ ನಡೆದ ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿದ್ದ ಎಸ್‍ಐ ಒಬ್ಬರನ್ನ ಹೊತ್ತು ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದಾವಣಗೆರೆಯಲ್ಲಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಠಾಣೆಯ ಶೂಟೌಟ್ ಪ್ರಕರಣದಲ್ಲಿ ಹೆಸರು ಮಾಡಿದ್ದ ಎಸ್‍ಐ ಸಿದ್ದೇಶ್ ಹಾಗೂ ಬಡವಾಣೆ ಠಾಣೆಯ ಪೊಲೀಸ್ ವೀರ್ ಬಸಪ್ಪ ಕುಸ್ಲಾಪುರ್ ಅವರನ್ನು ಯುವಕರು ಹೊತ್ತು ಸ್ಟೆಪ್ ಹಾಕಿದ್ದಾರೆ.

    ಮಹಾನಗರ ಪಾಲಿಕೆ ಮುಂಭಾಗದಲ್ಲಿ ಗಣೇಶನ ಭಕ್ತರು ಪಿಎಸ್‍ಐ ಸಿದ್ದೇಶ್ ಅವರನ್ನ ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ. ಈ ದೃಶ್ಯವನ್ನು ಅಲ್ಲಿ ನೆರೆದಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಹೆಗಲ ಮೇಲೆ ಕೇಸರಿ ಶಾಲು ಹಾಕಿ ಸಂಭ್ರಮಿಸುತ್ತಿದ್ದ ಗಣೇಶ ಭಕ್ತರು ಅಲ್ಲೇ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎಸ್‍ಐ ಸಿದ್ದೇಶ್ ಅವರನ್ನು ಏಕಾಏಕಿ ಹೊತ್ತು ಕುಣಿದಿದ್ದಾರೆ. ಕೆಳಗಿಳಿಸುವಂತೆ ಯುವಕರನ್ನು ಕೇಳಿಕೊಂಡರೂ ಯಾರೊಬ್ಬರೂ ಕೆಳಗಿಳಿಸದೇ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಳಿಮರದಲ್ಲಿ ಮೂಡಿದ ಗಣೇಶ ಮೂರ್ತಿ – ಮೈಸೂರಲ್ಲೊಂದು ವಿಸ್ಮಯ!

    ಅರಳಿಮರದಲ್ಲಿ ಮೂಡಿದ ಗಣೇಶ ಮೂರ್ತಿ – ಮೈಸೂರಲ್ಲೊಂದು ವಿಸ್ಮಯ!

    ಮೈಸೂರು: ಆರು ವರ್ಷಗಳ ಹಿಂದೆ ಮಳೆ ಬಂದು ಊರೆಲ್ಲಾ ಜಲಾವೃತವಾಗಿ, ಊರಿನ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭಗುಡಿಯಲ್ಲಿದ್ದ ಗಣೇಶ ವಿಗ್ರಹಕ್ಕೆ ಮಾತ್ರ ಏನೂ ಆಗಿರಲಿಲ್ಲ. ಇಂತಹ ಅಚ್ಚರಿ ನಡೆದಿದ್ದ ದೇವಸ್ಥಾನದಲ್ಲಿ ಈಗ ಮತ್ತೊಂದು ಅಚ್ಚರಿ ನಡೆದಿದೆ. ಗಣೇಶ ದೇವಾಲಯದ ಹಿಂಬದಿಯ ಮರದಲ್ಲಿ ಗಣೇಶ ಮೂರ್ತಿ ಉದ್ಭವವಾಗಿದೆ.

    ನಗರದ ಕನಕಗಿರಿ ಬಡಾವಣೆಯಲ್ಲಿ ಒಂದು ಗಣಪತಿ ದೇವಾಲಯ ಇದೆ. ಅಲ್ಲಿ ಅರಳಿ ಮರದಲ್ಲಿ ಗಣೇಶನ ಮೂರ್ತಿ ಉದ್ಭವವಾಗಿದೆ. ಉದ್ಭವ ಮೂರ್ತಿಯನ್ನು ನೋಡಲು ಸಾಲು ಸಾಲು ಭಕ್ತರು ಬರುತ್ತಿದ್ದು, ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಸಂಕಷ್ಟ ಚರ್ತುರ್ಥಿಯಂದು ಅರ್ಚಕರ ಕಣ್ಣಿಗೆ ಬಿದ್ದಿರುವ ಈ ಗಣಪನಲ್ಲಿ ಅದೇನೋ ವಿಶೇಷ ಶಕ್ತಿ ಇದೆ ಅನ್ನೋದು ಸ್ಥಳೀಯರ ಮಾತಾಗಿದೆ.

    ಅರಳಿಮರದ ಕೆಳಭಾಗದಲ್ಲಿ ಮೂಡಿರುವ ಮರದ ಬೇರುಗಳು ಸಂಪೂರ್ಣ ಗಣೇಶ ಮೂರ್ತಿಯ ಆಕಾರ ಹೊಂದಿದೆ. ಸೊಂಡಿಲು, ಕಣ್ಣು, ಕಿವಿ ಹೊಂದಿರುವ ಈ ಬೇರು ಗಣೇಶ ಮೂರ್ತಿಯಾಗಿ ಮೂಡಿದೆ. ಉದ್ಭವಮೂರ್ತಿ ಗಣಪನಿಗೆ ಅರಿಶಿನ ಕುಂಕುಮವನ್ನು ಜನರು ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮೈತ್ರಿ ಹೇಳುತ್ತಾರೆ.

    ಈ ದೇವಾಲಯದ ಹಿನ್ನೆಲೆಯೂ ಈ ಮೂರ್ತಿಯ ಉದ್ಭವಕ್ಕೆ ಕಾರಣವಾ ಅನ್ನೋ ಮಾತು ಕೇಳಿ ಬಂದಿದೆ. 6 ವರ್ಷಗಳ ಹಿಂದೆ ಕನಕಗಿರಿಯಲ್ಲಿ ಭಾರಿ ಮಳೆಗೆ ಮನೆಗಳು ಜಲಾವೃತವಾಗಿ, ಇಲ್ಲಿದ್ದ ಗಣೇಶ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭ ಗುಡಿಯಲ್ಲಿನ ಗಣೇಶ ಮೂರ್ತಿಗೆ ಏನೂ ಆಗಿರಲಿಲ್ಲ. ಈಗ ಇದೇ ದೇವಸ್ಥಾನದಲ್ಲಿ ಮತ್ತೊಂದು ಅಚ್ಚರಿ ಸೃಷ್ಟಿಯಾಗಿದೆ ಎಂದು ಸ್ಥಳೀಯ ರವಿ ಅವರು ತಿಳಿಸಿದ್ದಾರೆ.