Tag: Galwan Clash

  • Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು

    Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು

    – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು
    – ರಾತ್ರಿ ವೇಳೆ ಗಲ್ವಾನ್‌ ನದಿಗೆ ಬಿದ್ದು ಸಾವು

    ನವದೆಹಲಿ: ಗಲ್ವಾನ್‌ ಕಣಿವೆಯಲ್ಲಿ ಭಾರತದೊಂದಿಗಿನ ಘರ್ಷಣೆಯ ವೇಳೆ ಚೀನಾ ಕಡೆಯಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ತನಿಖಾ ವರದಿ ಮಾಡಿದೆ.

    ಚೀನಾದಲ್ಲಿನ ಮೂಲಗಳನ್ನು ಆಧಾರಿಸಿ ಆಸ್ಟ್ರೇಲಿಯಾದ ದಿ ಕ್ಲಾಕ್ಸನ್‌ನ ಪತ್ರಿಕೆ, 2020ರ ಜೂನ್ 15-16 ರ ಘರ್ಷಣೆಯ ಆರಂಭದ ಸಮಯದಲ್ಲಿ ಭಾರತೀಯ ಸೇನೆಯಿಂದ ಪಾರಾಗಲು ಗಾಲ್ವಾನ್ ನದಿಯನ್ನು ರಾತ್ರಿ ದಾಟುವ ವೇಳೆ ಕನಿಷ್ಠ 38 ಚೀನಿ ಸೈನಿಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಿದೆ.

    ಚೀನಾ ಬ್ಲಾಗರ್‌ಗಳು, ಚೀನಿ ನಾಗರಿಕರಿಂದ ಪಡೆದ ಮಾಹಿತಿಯನ್ನು ಆಧರಿಸಿ ಈ ಸುದ್ದಿ ಪ್ರಕಟಿಸಲಾಗಿದೆ. ಭದ್ರತಾ ಕಾರಣದಿಂದ ಚೀನಿ ಮೂಲಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪತ್ರಿಕೆ ಹೇಳಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ – ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ

    ಘರ್ಷಣೆಯಲ್ಲಿ ಮಡಿದ ತನ್ನ ನಾಲ್ಕು ಸೈನಿಕರಿಗೆ ಫೆಬ್ರವರಿ 2021 ರಲ್ಲಿ ಚೀನಾ ಪದಕಗಳನ್ನು ಘೋಷಿಸಿತ್ತು. ಈ ಮೂಲಕ ಘಟನೆಯಲ್ಲಿ ನಮ್ಮ ಕಡೆಯಲ್ಲೂ ಸಾವು ನೋವು ಸಂಭವಿಸಿದೆ ಎನ್ನುವುದನ್ನು ಮೊದಲ ಬಾರಿಗೆ ಖಚಿತ ಪಡಿಸಿತ್ತು. ಹೀಗಿದ್ದರೂ ಅಧಿಕೃತವಾಗಿ ಚೀನಾ ವರದಿ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ.

    ಅಂದು ಏನಾಯ್ತು?
    ವರದಿಯ ಪ್ರಕಾರ ಭಾರತೀಯ ಸೈನಿಕರು ಜೂನ್ 15ರ ರಾತ್ರಿ ಗಾಲ್ವಾನ್ ಕಣಿವೆಯ ಎಲ್‌ಎಸಿ(ವಾಸ್ತವಿಕ ಗಡಿ ರೇಖೆ) ಜಾಗಕ್ಕೆ ತೆರಳಿ ಚೀನಾ ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್‌ ಕಿತ್ತು ಎಸೆದಿದ್ದಾರೆ. ಈ ವೇಳೆ ಚೀನಾದ ಕರ್ನಲ್ ಕಿ ಫಾಬಾವೊ ಮತ್ತು 150 ಚೀನೀ ಸೈನಿಕರು ಭಾರತೀಯ ಸೈನಿಕರೊಂದಿಗೆ ಸಮಸ್ಯೆಯನ್ನು ಚರ್ಚಿಸುವ ಬದಲು ಘರ್ಷಣೆಗೆ ಇಳಿದಿದ್ದಾರೆ. ಇದನ್ನೂ ಓದಿ: ಗಲ್ವಾನ್ ಘರ್ಷಣೆಯಲ್ಲಿ ಐವರು ಬಲಿ – ಕೊನೆಗೂ ಸತ್ಯ ಒಪ್ಪಿಕೊಂಡ ಚೀನಾ

    ಕರ್ನಲ್ ಫಾಬಾವೊ ದಾಳಿ ಮಾಡಿದ ಕೂಡಲೇ ಭಾರತೀಯ ಸೈನಿಕರು ಪಿಎಲ್‌ಎ ಯೋಧರನ್ನು ಮುತ್ತಿಗೆ ಹಾಕಿದ್ದಾರೆ. ಅನಿರೀಕ್ಷಿತ ಬೆಳವಣಿಗೆ ಕಂಡು ಬೆಟಾಲಿಯನ್ ಕಮಾಂಡರ್ ಚೆನ್ ಹಾಂಗ್‌ಜುನ್ ಮತ್ತು ಸೈನಿಕ ಚೆನ್ ಕ್ಸಿಯಾಂಗ್ರಾನ್ ಉಕ್ಕಿನ ಪೈಪ್‌ಗಳು, ಸ್ಟಿಕ್‌ಗಳು ಮತ್ತು ಕಲ್ಲುಗಳನ್ನು ಬಳಸಿ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದ್ದಾರೆ. ಭಾರತದ ಪ್ರತಿದಾಳಿಗೆ ಮೂವರು ಪಿಎಲ್‌ಎ ಸೈನಿಕರು ಮೃತಪಟ್ಟಿದ್ದನ್ನು ನೋಡಿ ಚೀನಿ ಸೈನಿಕರು ಭಯಗೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ.

    ಈ ಸಂದರ್ಭದಲ್ಲಿ ಪಿಎಲ್‌ಎ ಸೈನಿಕರಿಗೆ ವಾಟರ್‌ ಪ್ಯಾಂಟ್‌ ಧರಿಸಲು ಸಮಯವಿರಲಿಲ್ಲ. ಸೈನಿಕ ವಾಂಗ್‌ ನೇತೃತ್ವದಲ್ಲಿ ರಾತ್ರಿಯೇ ನದಿಯ ಹಿಮಾವೃತ ನೀರನ್ನು ದಾಟಲು ಪಿಎಲ್‌ಎ ಯೋಧರು ನಿರ್ಧರಿಸಿದ್ದಾರೆ. ಈ ವೇಳೆ ನದಿಯ ನೀರಿನ ಮಟ್ಟ ಏರಿತ್ತು. ಹೀಗಾಗಿ ಕೆಲವರು ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋಗಿದ್ದರೆ ಕೆಲವರು ಮೇಲಿನಿಂದ ನದಿಗೆ ಬಿದ್ದು ಮೃತಪಟ್ಟಿದ್ದಾರೆ.

    ಆ ರಾತ್ರಿ ವಾಂಗ್ ಜೊತೆಗೆ ಕನಿಷ್ಠ 38 ಚೀನೀ ಸೈನಿಕರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ಸಾಮಾಜಿಕ ಜಾಲತಾಣ ಖಾತೆ ವೈಬೋದಲ್ಲಿ ಹಲವು ಮಂದಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

    ನಿಜವಾಗಿ ಏನಾಯಿತು? ಚಕಮಕಿಗೆ ಕಾರಣವೇನು ಎಂಬುದರ ಕುರಿತು ಬಹಳಷ್ಟು ಸಂಗತಿಗಳನ್ನು ಬೀಜಿಂಗ್ ಮರೆಮಾಡಿದೆ. ಅಷ್ಟೇ ಅಲ್ಲದೇ ಚೀನಾ ಹಲವು ಕಟ್ಟು ಕಥೆಗಳನ್ನು ಪ್ರಕಟಿಸಿದೆ ಎಂದು ಪತ್ರಿಕೆ ಹೇಳಿದೆ.

    2020ರ ಜೂನ್‌ 16ರಂದೇ ಗ್ಲೋಬಲ್‌ ಟೈಮ್ಸ್‌ ಸಂಪಾದಕ ಹು ಕ್ಸಿಜಿನ್‌ ಚೀನಿ ಸೈನಿಕರು ಮೃತಪಟ್ಟ ವಿಚಾರವನ್ನು ದೃಢಪಡಿಸಿದ್ದರು. ನನಗೆ ತಿಳಿದ ಮಾಹಿತಿ ಪ್ರಕಾರ ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆಯಲ್ಲಿ ಚೀನಾದ ಸೈನಿಕರು ಮೃತಪಟ್ಟಿದ್ದಾರೆ. ಹೀಗಾಗಿ ನಾನು ಭಾರತಕ್ಕೆ ಒಂದು ವಿಚಾರ ಹೇಳಲು ಇಚ್ಛಿಸುತ್ತೇನೆ. ಚೀನಾದ ಸಹನೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ಭಾರತದ ಜೊತೆ ಘರ್ಷಣೆ ನಡೆಸಲು ಚೀನಾ ಬಯಸುತ್ತಿಲ್ಲ. ಆದರೆ ನಾವು ಯಾರಿಗೂ ಭಯ ಪಡುವುದಿಲ್ಲ ಎಂದು ಟ್ವೀಟ್‌ ಮಾಡಿದ್ದರು.

    ಲಡಾಖ್‌ ಗಡಿಯಲ್ಲಿ ಜೂನ್‌ 15 ರಂದು ನಡೆದ ಗರ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಹೇಳಿತ್ತು. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ಚೀನಾ ಅಧಿಕೃತವಾಗಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಇಲ್ಲಿಯವರೆಗೆ ತಿಳಿಸಿಲ್ಲ.