Tag: Galwan

  • ಗಲ್ವಾನ್‍ನಲ್ಲಿ ಶಾಂತಿ – ಚೀನಾದ 45 ಹೂಡಿಕೆಗಳಿಗೆ ಮತ್ತೆ ಒಪ್ಪಿಗೆ?

    ಗಲ್ವಾನ್‍ನಲ್ಲಿ ಶಾಂತಿ – ಚೀನಾದ 45 ಹೂಡಿಕೆಗಳಿಗೆ ಮತ್ತೆ ಒಪ್ಪಿಗೆ?

    ನವದೆಹಲಿ: ಭಾರತ, ಚೀನಾ ನಡುವಿನ ಗಲ್ವಾನ್ ಘರ್ಷಣೆಯ ವಿವಾದ ತಣ್ಣಗಾಗುತ್ತಿದ್ದಂತೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಮತ್ತೆ ಚಿಗುರೊಡೆದಿದೆ. ಈ ಮೊದಲು ತಡೆ ನೀಡಿದ್ದ 150 ಹೂಡಿಕೆಗಳ ಪೈಕಿ ಸುಮಾರು 45 ಹೂಡಿಕೆಗಳಿಗೆ  ಭಾರತ ಮತ್ತೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

    ಗ್ರೇಟ್ ವಾಲ್ ಮೋಟರ್ ಮತ್ತು ಸೈಕ್ ಮೋಟರ್ ಕಾರ್ಪ್ ಸಹಿತ ಇತರ 45 ಹೂಡಿಕೆಗಳಿಗೆ ಭಾರತ ಸರ್ಕಾರ ಮರು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರ ಮತ್ತು ಕೈಗಾರಿಕಾ ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ.

    ಈ ಎಲ್ಲಾ ಹೂಡಿಕೆಗಳಿಗೆ ಭಾರತ ಹಾಗೂ ಚೀನಾದ ಕಂಪನಿಗಳ ನಡುವೆ ಕಳೆದ ವರ್ಷವೇ ಒಪ್ಪಂದ ನಡೆದಿತ್ತು. ಆದರೆ ಗಲ್ವಾನ್ ಘರ್ಷಣೆಯಿಂದಾಗಿ ಭಾರತ 2 ಶತಕೋಟಿ ಡಾಲರ್ ಮೌಲ್ಯದ 150 ವಿವಿಧ ಹೂಡಿಕೆಗಳಿಗೆ ತಡೆ ನೀಡಿತ್ತು. ಈಗ ಭಾರತ ಮತ್ತೆ ಈ ಎಲ್ಲಾ ಹೂಡಿಕೆಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.

    ಕೇಂದ್ರ ಗೃಹ ಸಚಿವಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತರ ಸರ್ಕಾರಿ ಮೂಲದ ಮಾಹಿತಿ ಮತ್ತು ಕೈಗಾರಿಕಾ ಮೂಲದಿಂದ ತಿಳಿದು ಬಂದ ಮಾಹಿತಿ ಪ್ರಕಾರ ಗ್ರೇಟ್ ವಾಲ್ ಮತ್ತು ಜನರಲ್ ಮೋಟರ್ಸ್, ಅಮೆರಿಕ ಕಾರು ತಯಾರಿಕಾ ಘಟಕವನ್ನು ಖರೀದಿಸಿ ಭಾರತದಲ್ಲಿ ಸ್ಥಾಪಿಸುವ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಬರೋಬ್ಬರಿ 250 ದಶಲಕ್ಷ ಡಾಲರ್ – 300 ದಶಲಕ್ಷ ಡಾಲರ್ ಮೌಲ್ಯ ಇರಬಹುದು ಎಂದು ಅಂದಾಜಿಸಲಾಗಿದೆ.

    ಮುಂದಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡಲು ಗ್ರೇಟ್ ವಾಲ್ ಪ್ಲಾನ್ ಮಾಡಿಕೊಂಡಿದೆ. ಆರಂಭದಲ್ಲಿ ಕಾರುಗಳನ್ನು ಮಾರಾಟ ಮಾಡಿ ನಂತರ ಎಲೆಕ್ಟ್ರಿಕ್ ಕಾರು ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಗಡಿ ಘರ್ಷಣೆಯ ನಂತರ ಚೀನಾದ ಆಟೋಮೊಬೈಲ್ಸ್, ಕೆಮಿಕಲ್ಸ್, ಟೆಕ್ಸ್ಟೈಲ್ ಸಹಿತ ಇತರ ಪ್ರಮುಖ ಕೈಗಾರಿಕಾ ಪ್ರಸ್ತಾಪಗಳಿಗೆ ಭಾರತ ತಡೆ ನೀಡಿತ್ತು.

  • ಗಲ್ವಾನ್ ಘರ್ಷಣೆಯಲ್ಲಿ  ಐವರು ಬಲಿ – ಕೊನೆಗೂ ಸತ್ಯ ಒಪ್ಪಿಕೊಂಡ ಚೀನಾ

    ಗಲ್ವಾನ್ ಘರ್ಷಣೆಯಲ್ಲಿ ಐವರು ಬಲಿ – ಕೊನೆಗೂ ಸತ್ಯ ಒಪ್ಪಿಕೊಂಡ ಚೀನಾ

    ಬೀಜಿಂಗ್ : ಗಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ನಮ್ಮ ಸೈನಿಕರು ಸಾವನ್ನಪ್ಪಿಲ್ಲ ಎಂದು ಸುಳ್ಳು ಹೇಳಿದ್ದ ಚೀನಾ ಈಗ ಮೊದಲ ಬಾರಿಗೆ ಸತ್ಯವನ್ನು ಒಪ್ಪಿಕೊಂಡಿದೆ. 5 ಮಂದಿ ಹುತಾತ್ಮರಾಗಿರುವುದಾಗಿ ಚೀನಾ ಈಗ ಅಧಿಕೃತವಾಗಿ ಒಪ್ಪಿಕೊಂಡಿದೆ.

     

     

    ಓರ್ವ ಸೈನಿಕ ಮತ್ತು 4 ಮಂದಿ ಅಧಿಕಾರಿಗಳು ಮೃತಪಟ್ಟಿರುವುದುದಾಗಿ ಚೀನಾದ ಮಿಲಿಟರಿ ಪತ್ರಿಕೆ ಪಿಎಲ್‍ಎ ಡೈಲಿ ಪ್ರಕಟಿಸಿದೆ. ಜೂನ್ 15ರಂದು ನಡೆದ ಘರ್ಷಣೆಯಲ್ಲಿ 20 ಯೋಧರು ವೀರ ಮರಣ ಹೊಂದಿದ್ದಾರೆ ಎಂದು ತಿಳಿಸಿತ್ತು. ತನ್ನ ಹೇಳಿಕೆಯಲ್ಲಿ ಚೀನಾ ಕಡೆಯಲ್ಲೂ ಭಾರೀ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು.

     

    ಚೀನಾ ಸರ್ಕಾರ ಇಲ್ಲಿಯವರೆಗೆ ಸಾವುನೋವುಗಳನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ರಷ್ಯಾದ ಸುದ್ದಿ ಸಂಸ್ಥೆಯಾದ ಟಾಸ್ ಫೆಬ್ರವರಿಯಲ್ಲಿ ವರದಿಮಾಡಿ ಚೀನಾದ 45 ಸೈನಿಕರು ಹುತಾತ್ಮರಾಗಿದ್ದರು ಎಂದು ವರದಿಮಾಡಿತ್ತು.

  • ಚೀನಾ ಕಿರಿಕ್‌ಗೆ ಕಾರಣವಾಗಿದ್ದ ಗಲ್ವಾನ್‌ ಸೇತುವೆ ಕಾಮಗಾರಿ ಪೂರ್ಣ

    ಚೀನಾ ಕಿರಿಕ್‌ಗೆ ಕಾರಣವಾಗಿದ್ದ ಗಲ್ವಾನ್‌ ಸೇತುವೆ ಕಾಮಗಾರಿ ಪೂರ್ಣ

    ನವದೆಹಲಿ: ಚೀನಾದ ಭಾರೀ ವಿರೋಧದ ನಡುವೆಯೂ ಗಲ್ವಾನ್‌ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಸೇತುವೆ ಕಾಮಗಾರಿಯನ್ನು ಭಾರತ ಪೂರ್ಣಗೊಳಿಸಿದೆ.

    ಹೌದು. ಸೇನಾ ಎಂಜಿನಿಯರ್‌ಗಳು 60 ಮೀಟರ್‌ ಉದ್ದದ ಸೇತುವೆ ಕಾಮಗಾರಿಯನ್ನು ಗುರುವಾರ ಪೂರ್ಣಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಚೀನಾ ಗಡಿ ಭಾಗದಲ್ಲಿ ರಸ್ತೆ, ವಾಯು ನೆಲೆಗಳನ್ನು ನಿರ್ಮಿಸುತ್ತಿದ್ದರೆ ಭಾರತ ತನ್ನ ಗಡಿ ಒಳಗಡೆ ಗಲ್ವಾನ್‌ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವುದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕಾರಣಕ್ಕೆ ಮೇ ತಿಂಗಳಿನಿಂದಲೇ ಕಿರಿಕ್‌ ಆರಂಭಿಸಿತ್ತು. ಜೂನ್‌ ತಿಂಗಳಿನಲ್ಲಿ ವಿಕೋಪಕ್ಕೆ ಹೋಗಿ ಎಲ್‌ಎಸಿ ಬಳಿ ಟೆಂಟ್‌ ಹಾಕಿ ಗಲಾಟೆ ಎಬ್ಬಿಸಿದ್ದರು. ಪರಿಣಾಮ ಸೋಮವಾರ ರಕ್ತಪಾತವೇ ನಡೆದಿತ್ತು.

    ಭಾರತಕ್ಕೆ ಯಾಕೆ ಮಹತ್ವ?
    ಚೀನಾದ ಆಕ್ಷೇಪಕ್ಕೆ ಕಾರಣವಾಗಿರುವುದು ದರ್ಬುಕ್‌- ಶಾಯಕ್‌- ದೌಲತ್‌ ಬೇಗ್‌ ಓಲ್ಡೀ ರಸ್ತೆ(ಡಿಎಸ್‌ಡಿಬಿಒ) ಸುಮಾರು 255 ಕಿಲೋಮೀಟರ್‌ ಉದ್ದವಿದೆ. ಭಾರತಕ್ಕೆ ಎಷ್ಟು ಮಹತ್ವ ಎಂದರೆ ಇದು ದೌಲತ್‌ ಬೇಗ್‌ ಓಲ್ಡೀ ವಾಯುನೆಲೆಯಿಂದ ನಡುವಿನ ಪ್ರಯಾಣದ ಸಮಯವನ್ನು 2 ದಿನಗಳಿಂದ 6 ಗಂಟೆಗಳಿಗೆ ಇಳಿಸುತ್ತದೆ.

    ಗಲ್ವಾನ್‌ ನದಿಯ ಹಾಗೂ ವಾಸ್ತವಿಕ ಗಡಿರೇಖೆಯ ಪಕ್ಕದಲ್ಲೇ ಈ ಹೆದ್ದಾರಿ ಹಾದುಹೋಗುತ್ತದೆ. ಹೆದ್ದಾರಿ ನಿರ್ಮಾಣದಿಂದಾಗಿ ಸೇನೆಗೆ ತನ್ನ ಸರಕುಗಳನ್ನು ತೆಗೆದುಕೊಂಡು ಹೋಗಲು ಸಹಾಯವಾಗಲಿದೆ.

    ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ ನಡುವಿನ ಕಾರಕೋರಂ ಹೆದ್ದಾರಿ ಹಾದುಹೋಗಿರುವ ಆಕ್ಸಾಯ್‌ ಚಿನ್‌ ಪ್ರದೇಶವೂ ಈ ಭಾರತ ನಿರ್ಮಿತ ರಸ್ತೆಯ ಪಕ್ಕದಲ್ಲೇ ಇರಲಿದೆ. ಯುದ್ಧ ಸಮಭವಿಸಿದರೆ ಭಾರತಕ್ಕೆ ತನ್ನ ಸೇನೆಯನ್ನು ಕ್ಷಿಪ್ರ ಅವಧಿಯಲ್ಲಿಇಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕೆ ಚೀನಾ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿತ್ತು.