Tag: Gajapade

  • ಜಂಬೂಸವಾರಿ ಮೊದಲೇ ಗಜಪಡೆಯ ಈಶ್ವರ ಆನೆ ಅರಣ್ಯಕ್ಕೆ ವಾಪಸ್

    ಜಂಬೂಸವಾರಿ ಮೊದಲೇ ಗಜಪಡೆಯ ಈಶ್ವರ ಆನೆ ಅರಣ್ಯಕ್ಕೆ ವಾಪಸ್

    ಮೈಸೂರು: ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಗಜಪಡೆಯ ಮೊದಲ ತಂಡದ ಸದಸ್ಯ ಈಶ್ವರ ಆನೆಯನ್ನು ಕಾಡಿಗೆ ಹಿಂದಕ್ಕೆ ಕಳುಹಿಸಲು ನಿರ್ಧರಿಸಿಲಾಗಿದೆ.

    ಇಂದು ನಡೆದ ದಸರಾ ಸಿದ್ಧತಾ ಸಭೆಯಲ್ಲಿ ಈಶ್ವರ ಆನೆ ಬಗ್ಗೆ ಸಚಿವ ಸೋಮಣ್ಣ ಆತಂಕ ವ್ಯಕ್ತಪಡಿಸಿದರು. ನಗರದ ವಾತಾವರಣಕ್ಕೆ ಈಶ್ವರ ಆನೆ ಹೊಂದಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆ ಅರಣ್ಯಾಧಿಕಾರಿಗಳ ಆನೆಯನ್ನು ವಾಪಸ್ ಕಾಡಿಗೆ ಬಿಡಲು ತೀರ್ಮಾನಿಸಿದ್ದಾರೆ. ಈಶ್ವರ ಆನೆ ಬದಲು ಗಜಪಡೆಗೆ ಪರ್ಯಾಯವಾಗಿ ಬೇರೆ ಆನೆ ತರಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.

    ಈಶ್ವರ ಆನೆ ವಿಚಾರವಾಗಿ ಸಾರ್ವಜನಿಕರಿಂದ ದೂರು ಬರುತ್ತಿರುವುದರಿಂದ ಈ ಬಗ್ಗೆ ಸೋಮಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇಂತಹ ದೂರುಗಳು ಬಂದಾಗ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆನೆಯನ್ನು ಬದಲಾಯಿಸಲೇ ಬೇಕಾಗುತ್ತದೆ ಎಂದು ಡಿಸಿಎಫ್(ಅರಣ್ಯ ಉಪ ಸಂರಕ್ಷಣಾಧಿಕಾರಿ) ಅಲೆಕ್ಸಾಂಡರ್ ಅವರು ತಿಳಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇದೇ ಮೊದಲ ಬಾರಿಗೆ ಈಶ್ವರ ಆನೆಯನ್ನು ದಸರಾ ಗಜಪಡೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಗರ ಪ್ರದೇಶದಲ್ಲಿ ಗಜಪಡೆ ತಾಲೀಮು ಆರಂಭಿಸಿದ ದಿನದಿಂದಲೂ ಈಶ್ವರ ಆನೆ ಗಾಬರಿಗೊಳ್ಳುತಿತ್ತು. ಆಗ ವೈದ್ಯರು ಹಾಗೂ ಅಧಿಕಾರಿಗಳು ದಿನ ಕಳೆಯುತ್ತಿದ್ದಂತೆ ಆನೆ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಪ್ರತಿದಿನ ತಾಲೀಮು ಮಾಡುತ್ತಿರುವಾಗಲೂ ಈಶ್ವರ ಆನೆ ನಗರದ ವಾತಾವರಣಕ್ಕೆ ಬೆಚ್ಚಿಬೀಳುತ್ತಿತ್ತು. ಹೊಸ ವಾತಾವರಣಕ್ಕೆ ಅದು ಹೊಂದಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಈಶ್ವರ ಆನೆಯನ್ನು ವಾಪಸ್ ಅರಣ್ಯಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    https://www.youtube.com/watch?v=ZSV-6_HpYQk

  • ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಗಜಪಡೆಯಿಂದ ತಾಲೀಮು ಆರಂಭ

    ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಗಜಪಡೆಯಿಂದ ತಾಲೀಮು ಆರಂಭ

    ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ 2019ಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತದೆ. ಇಂದು ಬೆಳ್ಳಂಬೆಳಗ್ಗೆಯೇ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಡೆ ತಾಲೀಮು ಆರಂಭಿಸಿದೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವಿಜಯಾ, ವರಲಕ್ಷ್ಮಿ ಸೇರಿ ಎಲ್ಲ ಆರು ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿವೆ. ಸದ್ಯ ಆನೆಗಳು ಬರಿ ಮೈ ನಡಿಗೆ ತಾಲೀಮು ಆರಂಭಿಸಿದ್ದು, ಜಂಬೂ ಸವಾರಿಗಾಗಿ ಗಜಪಡೆಗೆ ತರಬೇತಿ ನೀಡಲಾಗುತ್ತಿದೆ. ಮೈಸೂರು ಅರಮನೆಯಿಂದ ಗಜಪಡೆ ತಾಲೀಮು ಆರಂಭಿಸಿದ್ದು, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಸಾಗಿ ಬಳಿಕ ಅರಮನೆ ಸೇರಲಿದೆ.

    ಮಂಗಳವಾರ ನಗರದ ದೇವರಾಜ ಮೊಹಲ್ಲಾದ ಸಾಯಿರಾಮ್ & ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ನಡೆದಿದೆ. ಗಜಪಡೆಯ ಕ್ಯಾಪ್ಟನ್ ಅರ್ಜುನ- 5,800 ಕೆ.ಜಿ ಇದ್ದರೆ, ವರಲಕ್ಷ್ಮಿ- 3,510 ಕೆ.ಜಿ, ಈಶ್ವರ- 3,995 ಕೆ.ಜಿ, ಧನಂಜಯ- 4,460 ಕೆ.ಜಿ, ವಿಜಯ- 2,825 ಕೆ.ಜಿ ಹಾಗೂ ಅಭಿಮನ್ಯು- 5,145 ಕೆ.ಜಿ ಇದೆ.

    ಸೋಮವಾರ ಮೈಸೂರು ಅರಮನೆಗೆ ಮೊದಲ ತಂಡದ ಆರು ಆನೆಗಳು ಆಗಮಿಸಿದ್ದವು. ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆನೆಗಳನ್ನು ಬರ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗಜಪಡೆಗೆ ಪೂಜೆ ನಡೆದಿತ್ತು. ಇನ್ನೂ ಒಂದೂವರೆ ತಿಂಗಳ ಕಾಲ ಆನೆಗಳು ಅರಮನೆಯಲ್ಲೇ ಉಳಿಯಲಿದೆ.

  • ಗಜಪಯಣ ಮುಗಿಸಿ ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

    ಗಜಪಯಣ ಮುಗಿಸಿ ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

    ಮೈಸೂರು: ದಸರಾ ಮಹೋತ್ಸವ 2019ರ ಗಜಪಯಣಕ್ಕೆ ಗುರುವಾರ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗಿದ್ದು, ಈಗ ಗಜಪಯಣ ಮುಗಿಸಿ ಗಜಪಡೆ ಅರಮನೆ ನಗರಿಗೆ ಎಂಟ್ರಿ ಕೊಟ್ಟಿದೆ.

    ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಅರ್ಜುನ ಪಡೆ, ಜಿಲ್ಲೆಯ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದೆ. ಮೈಸೂರಿಗೆ ಲಾರಿಗಳಲ್ಲಿ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವಿಜಯ ಹಾಗೂ ವರಲಕ್ಷ್ಮಿ ಆನೆಗಳನ್ನು ಕರೆತರೆಲಾಯಿತು. ಒಟ್ಟು 6 ಆನೆಗಳು ಗಜಪಯಣ ಮುಗಿಸಿ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ.

    ಆಗಸ್ಟ್ 26ರಂದು ಅರಮನೆ ಗಜಪಡೆ ಪ್ರವೇಶಿಸಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈಶ್ವರ ಆನೆ ಭಾಗವಹಿಸುತ್ತಿದೆ. ದುಬಾರೆ ಕ್ಯಾಂಪ್‍ನಿಂದ ಈಶ್ವರ ಆನೆಯನ್ನು ಕರೆತರಲಾಗಿದೆ. ವಿಶೇಷವೆಂದರೆ ಈ ಬಾರಿ ಕೂಡ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಎಲ್ಲರ ಗಮನ ಸೆಳೆಯಲಿದ್ದು, ಸತತ 8ನೇ ಬಾರಿಗೆ ಅಂಬಾರಿಯನ್ನ ಹೊತ್ತ ಕೀರ್ತಿಗೆ ಅರ್ಜುನ ಪಾತ್ರವಾಗಲಿದ್ದಾನೆ.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದರು.

  • ಕ್ಯಾಮೆರಾಗೆ ಪೋಸ್ ಕೊಟ್ಟ ಅರ್ಜುನ ಆಂಡ್ ಟೀಂ

    ಕ್ಯಾಮೆರಾಗೆ ಪೋಸ್ ಕೊಟ್ಟ ಅರ್ಜುನ ಆಂಡ್ ಟೀಂ

    ಮೈಸೂರು: ನಗರದ ಅರಮನೆಯಲ್ಲಿ ಈ ಹಿಂದೆ ವಿವಿಧ ರೀತಿಯ ಫೋಟೋ ಶೂಟ್ ಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ತುಂಬಾ ವಿಭಿನ್ನವಾದ ಫೋಟೋ ಶೂಟ್ ಅರಮನೆಯ ಮುಂಭಾಗದಲ್ಲಿ ನಡೆದಿದೆ.

    ಕ್ಯಾಪ್ಟನ್ ಅರ್ಜುನ ಮತ್ತು ತಂಡದ ಆನೆಗಳಿಗೆ ಅರಮನೆ ಮುಂಭಾಗ ವಿಭಿನ್ನ ರೀತಿಯ ಫೋಟೋ ಶೂಟ್ ನಡೆದಿದೆ. ಆನೆಗಳು ಕ್ಯಾಮೆರಾಕ್ಕೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿವೆ. ಸೊಂಡಿಲೆತ್ತಿ ಸಲ್ಯೂಟ್ ಮಾಡಿ ಫೋಟೋಗೆ ಪೋಸ್ ಕೊಟ್ಟಿವೆ. ಕೆಎಸ್‍ಟಿಡಿಸಿ ಬ್ರೌಚರ್ ಗಾಗಿ ಈ ಫೋಟೋ ಶೂಟ್ ನಡೆಸಲಾಗಿದೆ.

    ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಮೊದಲ ಬಾರಿಗೆ ಅರಮನೆ ಮುಂದೆ ಗಜಪಡೆ ನಿಲ್ಲಿಸಿ ಫೋಟೋ ಶೂಟ್ ಮಾಡಲಾಯಿತು. ಫೋಟೋ ಶೂಟ್‍ನಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 6 ಆನೆಗಳು ಭಾಗಿಯಾಗಿದ್ದವು. ಆನೆಗಳ ಮುಂದೆ ಮಾಡೆಲ್ ಗಳು, ಯಕ್ಷಗಾನ ಕಲಾವಿದರು, ಭರತ ನಾಟ್ಯ ಕಲಾವಿದರನ್ನ ನಿಲ್ಲಿಸಿ ಫೋಟೋ ಶೂಟ್ ಮಾಡಲಾಯಿತು. ಇಷ್ಟು ದಿನ ಅರಮನೆ ಮುಂದೆ ನವ ಜೋಡಿಗಳು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರು. ಇದೀಗ ದಸರಾ ಗಜಪಡೆಯು ಫೋಟೋ ಶೂಟ್ ನಲ್ಲಿ ಭಾಗಿಯಾಗಿರುವುದು ತುಂಬಾ ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಪಥದಲ್ಲಿ ಗಜಪಡೆ ನಡಿಗೆ

    ರಾಜಪಥದಲ್ಲಿ ಗಜಪಡೆ ನಡಿಗೆ

    ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದೆ. ಹೀಗಾಗಿ ದಸರಾ ಗಜಪಡೆಯ ತಾಲೀಮು ಕೂಡ ಮೈಸೂರಿನಲ್ಲಿ ಆರಂಭವಾಗಿದೆ. ಮೈಸೂರಿನ ರಾಜಪಥದಲ್ಲಿ ಇಂದು ಗಜಪಡೆ ತಾಲೀಮು ಆರಂಭಿಸಿದೆ.

    ಮೈಸೂರಿನಲ್ಲಿ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತಿತ್ತು. ಈ ಬಾರಿ ದಸರಾದಲ್ಲಿ ಎಲ್ಲ 13 ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಲಿದ್ದು, ಇದುವರೆಗೆ ಆರು ಆನೆಗಳು ನಡಿಗೆ ತಾಲೀಮು ನಡೆಸುತ್ತಿದೆ. ಶುಕ್ರವಾರ ಸಂಜೆಯಷ್ಟೇ ಮೈಸೂರಿಗೆ ಆಗಮಿಸಿದ್ದ ಎರಡನೇ ತಂಡದ ಆರು ಆನೆಗಳು ಮೊದಲನೇ ದಿನ ತಾಲೀಮು ನಡೆಸುತ್ತಿವೆ. ಇದನ್ನು ಓದಿ: ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ

    ಧನಂಜಯ ಆನೆಗೆ ಭಾರ ಹೊರುವ ತಾಲೀಮು ನೀಡಲಾಗಿದ್ದು, ಇಂದು ಧನಂಜಯನ ಬೆನ್ನಿಗೆ ಸುಮಾರು 300 ಕೆ.ಜಿ. ತೂಕದ ಭಾರವನ್ನು ಹೊರಿಸಲಾಗುತ್ತಿದೆ. ಅರ್ಜುನ ಶುಕ್ರವಾರ ಮರಳು ಮೂಟೆ ಹೊತ್ತಿದ್ದಾನೆ. ಇನ್ನೂ ಅರಣ್ಯ ಇಲಾಖೆ ಅಂಬಾರಿ ಹೊರಲು ಅರ್ಜುನ, ಧನಂಜಯ, ಬಲರಾಮನಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=cziWRBz4mkg