Tag: Gabbur

  • ಪಿಎಸ್‍ಐ ಥಳಿತಕ್ಕೆ ಯುವಕ ಸಾವು: ಗ್ರಾಮಸ್ಥರಿಂದ ಆರೋಪ

    ಪಿಎಸ್‍ಐ ಥಳಿತಕ್ಕೆ ಯುವಕ ಸಾವು: ಗ್ರಾಮಸ್ಥರಿಂದ ಆರೋಪ

    ರಾಯಚೂರು: ಪೊಲೀಸ್ ವಶದಲ್ಲಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

    ಗಬ್ಬೂರು ಗ್ರಾಮದ ನಿವಾಸಿ ಶಿವಕುಮಾರ (23) ಮೃತ ಯುವಕ. ಶಿವಕುಮಾರನನ್ನು ಪಿಎಸ್‍ಐ ಮುದುರಂಗಪ್ಪ ಅವರ ಥಳಿಸಿದ್ದಾರೆ. ಹೀಗಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಶಿವಕುಮಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನು ತಳ್ಳಿಹಾಕಿರುವ ಪೊಲೀಸರು, ಯುವಕ ಮೂರ್ಛೆ ರೋಗದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಗಬ್ಬೂರು ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ವಿಸರ್ಜನೆ ಮಾಡಲಾಯಿತು. ಈ ವೇಳೆ ಗಲಾಟೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶಿವಕುಮಾರನನ್ನು ಭಾನುವಾರ ಸಂಜೆ 4:30 ಗಂಟೆಗೆ ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸ್ ಜೀಪ್‍ನಲ್ಲಿ ಠಾಣೆಗೆ ಕರೆದೊಯ್ಯುತ್ತಿದ್ದಾಗ ಶಿವಕುಮಾರಗೆ ಮೂರ್ಛೆ ರೋಗ ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಶಿವಕುಮಾರ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಶಿವಕುಮಾರ ಸಾವಿಗೆ ಪಿಎಸ್‍ಐ ಮುದುರಂಗಪ್ಪ ಅವರೇ ಕಾರಣ. ಅವರು ಜೀಪ್‍ನಲ್ಲಿ ಶಿವಕುಮಾರಗೆ ಥಳಿಸಿದ್ದಾರೆ. ಇದರಿಂದಾಗಿ ಆತ ಪ್ರಾಣಬಿಟ್ಟಿದ್ದಾನೆ. ಹೀಗಾಗಿ ಪಿಎಸ್‍ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಮೃತ ಶಿವಕುಮಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು, ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸ್ ಜೀಪ್‍ಗೆ ಕಲ್ಲು ಜಖಂಗೊಳಿಸಿದ್ದಾರೆ. ಇತ್ತ ಶಿವಕುಮಾರ ಮೃತ ದೇಹವನ್ನು ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

  • ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ: ಭಾರೀ ಅನಾಹುತದಿಂದ ಪಾರಾದ ಚಾಲಕ!

    ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ: ಭಾರೀ ಅನಾಹುತದಿಂದ ಪಾರಾದ ಚಾಲಕ!

    ರಾಯಚೂರು: ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದ ಘಟನೆ ರಾಯಚೂರಿನ ದೇವದುರ್ಗದ ಗಬ್ಬೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಪೆಟ್ರೋಲ್ ತುಂಬಿಕೊಂಡು ಟ್ಯಾಂಕರ್ ರಾಯಚೂರಿನಿಂದ ಕಲಬುರಗಿಗೆ ಹೊರಟಿತ್ತು. ಗಬ್ಬೂರು ಸಮೀಪದಲ್ಲಿ ಎಮ್ಮೆ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿ ರಸ್ತೆ ಪಕ್ಕದ ಹೊಲದಲ್ಲಿ ಬಿದ್ದಿದೆ.

    ಟ್ಯಾಂಕರ್ ನಲ್ಲಿ ಸುಮಾರು 12 ಸಾವಿರ ಲೀಟರ್ ಪೆಟ್ರೋಲ್ ಇತ್ತು. ಪಲ್ಟಿಯಾಗಿರುವ ಪರಿಣಾಮ ಸ್ವಲ್ಪ ಪ್ರಮಾಣದ ಪೆಟ್ರೋಲ್ ಸೋರಿಕೆಯಾಗಿದೆ. ಅದೃಷ್ಟವಶಾತ್ ಹೊಲದಲ್ಲಿ ಟ್ಯಾಂಕರ್ ಬಿದ್ದ ಪರಿಣಾಮ ಬೆಂಕಿ ತಗುಲದೆ ಭಾರೀ ಅನಾಹುತವೊಂದು ತಪ್ಪಿದೆ. ಇನ್ನು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಗಬ್ಬೂರು ಪೊಲೀಸರು, ಎರಡು ಕ್ರೇನ್ ಮೂಲಕ ಟ್ಯಾಂಕರ್ ಅನ್ನು ಮೇಲೆತ್ತಿದ್ದಾರೆ. ಕಾರ್ಯಾಚರಣೆ ವೇಳೆ ಕೆಲ ಸಮಯ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.