ಪ್ಯಾರಿಸ್: ಭಾರತ ಹಾಗೂ ಪಾಕಿಸ್ತಾನದ ಸಮಸ್ಯೆ ದ್ವಿಪಕ್ಷೀಯವಾಗಿದ್ದು, ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ, ನಮಗಾಗಿ ಇತರೆ ರಾಷ್ಟ್ರಗಳು ತೊಂದರೆ ಅನುಭವಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಫ್ರಾನ್ಸ್ ದೇಶದ ಬಿಯರಿಟ್ಜ್ ನ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಈ ವೇಳೆ ಮೋದಿ ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು ಎಂದು ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ 1947ಕ್ಕೂ ಮೊದಲು ಒಂದಾಗಿತ್ತು. ಹೀಗಾಗಿ ನಮ್ಮ ಸ್ವಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಜಮ್ಮು ಕಾಶ್ಮೀರದ ವಿಚಾರವು ದ್ವಿಪಕ್ಷೀಯ ವಿಷಯವಾಗಿದೆ ಎಂದು ಒತ್ತಿ ಹೇಳುವ ಮೂಲಕ ಈ ಹಿಂದೆ ಎರಡು ಬಾರಿ ಜಮ್ಮು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಪಾಕಿಸ್ತಾನ ಹಾಗೂ ಭಾರತದ ನಡುವೆ ಹಲವು ದ್ವೀಪಕ್ಷೀಯ ಸಮಸ್ಯೆಗಳಿವೆ. ಹೀಗಾಗಿ ನಾವು ಈ ಕುರಿತು ಯಾವುದೇ ಮೂರನೇ ರಾಷ್ಟ್ರಕ್ಕೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಈ ಸಮಸ್ಯೆಗಳನ್ನು ನಾವು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟ್ರಂಪ್ ಮಾತನಾಡಿ, ಕಾಶ್ಮೀರ ವಿಚಾರ ಸಂಬಂಧ ಕಳೆದ ರಾತ್ರಿ ನಾವಿಬ್ಬರು ಮಾತನಾಡಿದ್ದೇವೆ. ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ಹೇಳಿದರು.
ಟ್ರಂಪ್ ಅವರಿಂದ ಮಧ್ಯಸ್ಥಿಕೆ ಹೇಳಿಕೆ ಬಂದ ಹಿನ್ನೆಲೆಯಲ್ಲಿ ಭಾರತದ ವಿರೋಧ ಪಕ್ಷಗಳು ಈ ಹೇಳಿಕೆಯ ಬಗ್ಗೆ ಪ್ರಧಾನಿ ಮೋದಿ ಅವರೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿತ್ತು. ಈಗ ಮೋದಿ ಟ್ರಂಪ್ ಮುಂದುಗಡೆಯೇ ಯಾವುದೇ ದೇಶ ಈ ವಿಚಾರದಲ್ಲಿ ಮಧ್ಯಸ್ಥಿತಿಕೆ ವಹಿಸುವುದು ಬೇಡ ಎಂದು ಹೇಳಿಕೆ ನೀಡುವ ಮೂಲಕ ಎಲ್ಲ ಗೊಂದಲ, ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ.
ಈ ಹಿಂದೆ ಭಾರತ ಹಾಗೂ ಪಾಕಿಸ್ತಾನದ ಸಮಸ್ಯೆ ಬಗೆಹರಿಸುವಲ್ಲಿ ನನ್ನ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳುವ ಮೂಲಕ ಮಧ್ಯಸ್ಥಿಕೆ ವಹಿಸುವ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ತೋರಿಸಿದ್ದರು.
ಇದಕ್ಕೂ ಹಿಂದೆ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಮೋದಿ ನನ್ನ ಬಳಿ ಮನವಿ ಮಾಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಆದರೆ, ಈ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿತ್ತು. ಪಾಕ್ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಜುಲೈ ತಿಂಗಳ ನಾಲ್ಕನೇಯ ವಾರದಲ್ಲಿ ಇಮ್ರಾನ್ ಖಾನ್ ಶ್ವೇತಭವನಕ್ಕೆ ಭೇಟಿ ನೀಡಿ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಭಾರತ-ಪಾಕ್ ಒಪ್ಪಿದರೆ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಹೇಳಿದ್ದರು.
ಎರಡು ವಾರಗಳ ಹಿಂದೆ ನಾನು ಮತ್ತು ಮೋದಿ ಕಾಶ್ಮೀರ ವಿಚಾರದ ಬಗ್ಗೆ ಚರ್ಚೆ ನಡೆಸಿದೆವು. ಈ ವೇಳೆ ಮೋದಿ ಈ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಗೆ ವಹಿಸುತ್ತೀರಾ ಎಂದು ಕೇಳಿದರು. ಇದಕ್ಕೆ ನಾನು ನನ್ನಿಂದ ಸಹಾಯವಾಗುತ್ತದೆ ಎಂದಾದರೆ ನಾನು ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಭರವಸೆ ನೀಡಿದೆ ಎಂದು ತಿಳಿಸಿದ್ದರು.
ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರಿದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇಮ್ರಾನ್ ಖಾನ್ ಸ್ವಾಗತಿಸಿದ್ದರು. ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಪ್ರತಿಕ್ರಿಯಿಸಿ, ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಜಮ್ಮು ಕಾಶ್ಮೀರ ವಿವಾದ ಪರಿಹರಿಸಲು ಸಾಧ್ಯ. ಈ ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿರುವ ಉಗ್ರಗಾಮಿ ಚಟುವಟಿಕೆ ನಿಲ್ಲಬೇಕು. ಪ್ರಧಾನಿ ಮೋದಿಯವರು ಈ ಸಮಸ್ಯೆ ಪರಿಹಾರಕ್ಕೆ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ್ದರು.