Tag: Fund

  • ದೇವರ ಟಾರ್ಗೆಟ್ ಬಿಟ್ಟು ಮತ್ಯಾರ ಟಾರ್ಗೆಟ್ಟಿಗೂ ನಾನು ತಲೆ ಕೆಡಿಸಿಕೊಳ್ಳಲ್ಲ- ಸಚಿವ ಪ್ರಮೋದ್ ಮಧ್ವರಾಜ್

    ದೇವರ ಟಾರ್ಗೆಟ್ ಬಿಟ್ಟು ಮತ್ಯಾರ ಟಾರ್ಗೆಟ್ಟಿಗೂ ನಾನು ತಲೆ ಕೆಡಿಸಿಕೊಳ್ಳಲ್ಲ- ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ನನ್ನನ್ನು ದೇವರು ಮಾತ್ರ ಟಾರ್ಗೆಟ್ ಮಾಡಬಹುದು. ಅದನ್ನು ಹೊರತಾಗಿ ನಾನು ಯಾವುದೇ ಟಾರ್ಗೆಟ್ಟಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಮೀನುಗಾರಿಕಾ- ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿಯಲ್ಲಿ ಐಟಿ ಅಧಿಕಾರಿಗಳು ಮತ್ಸ ಘಟಕಗಳ ಮೇಲೆ ಐಟಿ ದಾಳಿ ಮಾಡಿದ ವಿಚಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

    ನಾನು ಚುನಾವಣೆಗೆ ಯಾರ ಫಂಡ್ ತೆಗೆದುಕೊಂಡಿಲ್ಲ. ಕಳುಹಿಸಿದ ಫಂಡನ್ನು ಹಿಂದೆ ಕಳುಹಿಸಿದ್ದೆ. ಚುನಾವಣೆಗೆ ಫಂಡಿಂಗ್ ಮಾಡುವವರೇ ನನಗೆ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ- ದೇಶದ ಕಾನೂನಿನಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಮತ್ಸೋದ್ಯಮಿಗಳ ಐಟಿ ಟಾರ್ಗೆಟ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಪ್ರತಿಕ್ರಿಯೆ ಕೊಡದಿರುವುದಕ್ಕೂ ನಾನು ಕಾರಣ ಕೊಡಲ್ಲ ಅಂತ ಹೇಳಿದ್ರು.

    ನಾನು ಬಿಜೆಪಿ ಸೇರುತ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ನ ಕಾರ್ಯಕರ್ತರೂ ಹೇಳಿಲ್ಲ. ಇದು ಪತ್ರಕರ್ತರ ಸದಾ ಫೇವರೇಟ್ ಪ್ರಶ್ನೆ. ನಿಮಗೆ ಪ್ರಶ್ನೆ ಕೇಳುವ ಮತ್ತು ವಿಮರ್ಶಿಸುವ ಅಧಿಕಾರ ಇದೆ. ನೀವು ಪ್ರಶ್ನೆ ಮಾಡಬಹುದು. ಆದ್ರೆ ನನಗ್ಯಾರೂ ಆಫರ್ ಕೊಟ್ಟಿಲ್ಲ. ನಾನೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ ಅಂದ್ರು.

    ಹಾರ್ಡ್ ಹಿಂದುತ್ವ ಅಂದ್ರೆ ಏನು? ಸಾಫ್ಟ್ ಹಿಂದುತ್ವ ಅಂದ್ರೆ ಏನು? ಕೊಲೆ ಮಾಡಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುವುದು ಹಾರ್ಡ್ ಹಿಂದುತ್ವನಾ? ಕಾಂಗ್ರೆಸ್ಸಿಗರು ದೇವಸ್ಥಾನಕ್ಕೆ ಹೋಗ್ಬಾರ್ದಾ- ನಾವೇನು ಅಸ್ಪೃಶ್ಯರಾ? ಕಾಂಗ್ರೆಸ್ ನವರು ಹಿಂದೂಗಳಲ್ವಾ? ಕೇವಲ ಬಿಜೆಪಿಯವರು ಮಾತ್ರ ದೇವಸ್ಥಾನಗಳಿಗೆ ಹೋಗ್ಬೇಕಾ ಅಂತ ಪ್ರಮೋದ್ ಮಧ್ವರಾಜ್ ಪ್ರಶ್ನೆ ಮಾಡಿದರು. ಈ ಮೂಲಕ ರಾಹುಲ್ ಗಾಂಧಿ ಟೆಂಪಲ್ ರನ್ ಸಮರ್ಥಿಸಿಕೊಂಡರು.

    ಐಪಿಎಸ್ ಅಂದ್ರೆ ಪಕೋಡ ಸರ್ವಿಸ್ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ವಿವಾದವಾಗಿದೆ. ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಮೋದ್ ಮಧ್ವರಾಜ್, ಶಾರ್ಟ್ ಫಾರ್ಮ್ ಗೆ ಹಲವಾರು ಅರ್ಥಗಳನ್ನು ಕಲ್ಪಿಸಬಹುದು. ಐಟಿ ಅನ್ನೋ ಶಬ್ದಕ್ಕೆ ಹಲವಾರು ಅರ್ಥ ಕಲ್ಪಿಸಬಹುದು. ಹಾಗಾಗಿ ಐಪಿಎಸ್‍ಗಳು ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹೇಳಿದರು.

  • ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

    ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

    ಮೈಸೂರು: ನಿಧಿಗಾಗಿ ಕೇರಳದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಗು ಬಲಿ ಕೊಡಲು ಮುಂದಾಗಿ ತಮ್ಮದಲ್ಲದ ಜಮೀನಿನಲ್ಲಿ ಗುಂಡಿ ತೆಗೆದ ಏಳು ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ನೆರಳೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸುಧೀರ್ ಎಂಬಾತ ನಿಧಿಗಾಗಿ ಇಂತಹ ಪ್ಲಾನ್ ಮಾಡಿದ್ದ. ಅದೇ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನಿಧಿ ಇದೆ ಎಂದು ಸುಧೀರ್ ತನ್ನ ಸುಳ್ಯದ ಗೆಳೆಯ ರವೀಂದ್ರ ಹಾಗೂ ಇನ್ನಿತರ ಐದು ಜನರೊಂದಿಗೆ ಹಳ್ಳ ತೆಗೆಯಲು ಜಮೀನಿಗೆ ಹೋಗಿದ್ದಾನೆ.

    ಈ ಸಂದರ್ಭದಲ್ಲಿ ರವೀಂದ್ರ ಜೊತೆ 11 ವರ್ಷದ ಮಗು ಕೂಡ ಇತ್ತು. ಅಲ್ಲದೆ ಪೂಜೆಯ ಸಾಮಾಗ್ರಿಗಳು, ಕೇರಳದ ಜ್ಯೋತಿಷ್ಯ ಶಾಸ್ತ್ರದ ಪುಸ್ತಕಗಳು ಹಾಗೂ ಮಾಂತ್ರಿಕ ವಿದ್ಯೆಯ ಸಾಮಾಗ್ರಿಗಳು ಕೂಡ ಇದ್ದವು. ಇವರೆಲ್ಲಾ ಸೇರಿ ಹಳ್ಳ ತೆಗೆಯುವುದನ್ನು ಸ್ಥಳೀಯರು ಗಮನಿಸಿ ನಿಧಿಗಾಗಿ ಮಗು ಬಲಿ ಕೊಡಲಾಗುತ್ತಿದೆ ಎಂದು ಶಂಕಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕೌವಲಂದೆ ಪೊಲೀಸರು ಸ್ಥಳದಲ್ಲಿದ್ದ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಜಮೀನಿನ ಮಾಲೀಕ ಮಹೇಶ್ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಾಲಕನನ್ನು ಹೊರತು ಪಡಿಸಿ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಬಳ್ಳಾರಿಯಲ್ಲಿ ನಿಧಿಗಾಗಿ ದೇವರ ವಿಗ್ರಹವನ್ನೇ ಧ್ವಂಸಗೊಳಿಸಿದ್ರು..!

    ಬಳ್ಳಾರಿಯಲ್ಲಿ ನಿಧಿಗಾಗಿ ದೇವರ ವಿಗ್ರಹವನ್ನೇ ಧ್ವಂಸಗೊಳಿಸಿದ್ರು..!

    ಬಳ್ಳಾರಿ: ನಿಧಿ ಆಸೆಗಾಗಿ ದೇವಾಲಯದಲ್ಲಿನ ದೇವರ ಗದ್ದುಗೆಯನ್ನು ಒಡೆದು ದೇವರ ವಿಗ್ರಹಗಳನ್ನು ದ್ವಂಸಗೊಳಿಸಿದ ಘಟನೆ ಜಿಲ್ಲೆಯ ಹಡಗಲಿ ತಾಲೂಕು ಕಳಸಾಪುರ ಗ್ರಾಮದದಲ್ಲಿ ನಡೆದಿದೆ.

    ತಾಲೂಕಿನ ಪುರಾತನ ದೇವಾಲಯ ಎಂದು ಪ್ರಸಿದ್ಧಿ ಪಡೆದಿರುವ ಕಳಸಾಪುರ ಗ್ರಾಮದ ಬೆಟ್ಟದ ಮೇಲಿರುವ ಮಲ್ಲೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳು ನಿಧಿ ಶೋಧ ನಡೆಸಿದ್ದಾರೆ. ದೇವಾಲಯವು ಪುರಾತನ ಕಾಲದಲ್ಲಿ ನಿರ್ಮಾಣವಾಗಿದ್ದು, ದೇವರ ಮೂರ್ತಿ ಕೆಳಗೆ ಚಿನ್ನಾಭರಣ ಸಿಗುವ ಆಸೆಯಿಂದ ದುಷ್ಕರ್ಮಿಗಳು ವಿಗ್ರಹಗಳನ್ನು ಕಿತ್ತು ಗರ್ಭಗುಡಿಯಲ್ಲಿ ಬೃಹದಾಕಾರದ ಹಳ್ಳವನ್ನು ನಿರ್ಮಿಸಿದ್ದಾರೆ.

    ಇಂದು ಮುಂಜಾನೆ ದೇವಾಲಯದಲ್ಲಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ನಿಧಿಯ ಆಸೆಯಿಂದ ದೇವರ ಮೂರ್ತಿಗಳನ್ನು ನಾಶಗೊಳಿಸಿರುವ ವ್ಯಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆಯನ್ನು ಆರಂಭಿಸಿದ್ದಾರೆ.

     

     

  • ಸೆಪ್ಟೆಂಬರ್ ಹುಂಡಿ ಎಣಿಕೆಯಲ್ಲಿ ದಾಖಲೆ ಬರೆದ ಕೊಲ್ಲೂರು ಮೂಕಾಂಬಿಕಾ ದೇವಾಲಯ

    ಸೆಪ್ಟೆಂಬರ್ ಹುಂಡಿ ಎಣಿಕೆಯಲ್ಲಿ ದಾಖಲೆ ಬರೆದ ಕೊಲ್ಲೂರು ಮೂಕಾಂಬಿಕಾ ದೇವಾಲಯ

    – ನೋಟ್ ಬ್ಯಾನ್ ಆಗಿ ವರ್ಷ ಕಳೆದರೂ ಬರ್ತಿದೆ ಹಳೆ ನೋಟು

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ದಾಖಲೆ ಪ್ರಮಾಣದ ಹಣ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಈವರೆಗಿನ ಎಲ್ಲಾ ದಾಖಲೆಗಳು ಬ್ರೇಕ್ ಆಗಿದ್ದು ಒಂದು ತಿಂಗಳಲ್ಲೇ ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ಹುಂಡಿಗೆ ಬಿದ್ದಿದೆ.

    ಕೊಲ್ಲೂರಿನಲ್ಲಿ ಪ್ರತಿ ತಿಂಗಳು ಹುಂಡಿಯ ಹಣವನ್ನು ಲೆಕ್ಕ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಈ ಬಾರಿ 1.10 ಕೋಟಿ ರೂಪಾಯಿ ಹುಂಡಿಗೆ ಕಾಣಿಕೆ ಬಿದ್ದಿದೆ. ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ 1 ಕೋಟಿ 60 ಸಾವಿರ ರೂಪಾಯಿ ಸಂಗ್ರಹವಾಗಿ ಅದೇ ಈ ವರೆಗಿನ ದಾಖಲೆಯಾಗಿತ್ತು. ಈ ಪೈಕಿ 63 ಸಾವಿರ ರೂಪಾಯಿ 1000 ಮತ್ತು 500 ಮುಖಬೆಲೆಯ ಹಳೆಯ ನೋಟುಗಳು ಅನ್ನೋದು ವಿಶೇಷ.

    ಈ ವರ್ಷ 9 ಲಕ್ಷ 40 ಸಾವಿರ ರೂಪಾಯಿ ಹೆಚ್ಚುವರಿ ಸಂಗ್ರಹವಾಗಿದೆ. ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ದೇವಸ್ಥಾನದ ಸಿಬ್ಬಂದಿ, ಸಾರ್ವಜನಿಕರು, ಶಾಲಾ ಮಕ್ಕಳು ಕೊಲ್ಲೂರು ಕ್ಷೇತ್ರದ ಎಲ್ಲಾ ಹುಂಡಿಗಳನ್ನು ಲೆಕ್ಕ ಮಾಡಿದ್ದಾರೆ. ತಡರಾತ್ರಿ 12.30ರ ತನಕವೂ ಸಿಬ್ಬಂದಿ ಚಿಲ್ಲರೆ- ನೋಟು ವಿಭಜನೆ, ಕಟ್ಟು ಕಟ್ಟುವುದು- ಲೆಕ್ಕ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅನುರಾಧಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಬಾರಿ ಹುಂಡಿಯಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ದೇವಿ ಮೂಕಾಂಬಿಕೆಗೆ 870 ಗ್ರಾಂ ಚಿನ್ನದ ಆಭರಣ- 3 ಕಿಲೋ ಬೆಳ್ಳಿಯ ಆಭರಣಗಳು ಹರಕೆ ರೂಪದಲ್ಲಿ ಬಂದಿದೆ. ಇದೂವರೆಗಿನ ದೊಡ್ಡ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಹರಕೆ. ಈ ಬಾರಿ 63 ಸಾವಿರ ರೂಪಾಯಿಯ ಹಳೇ ನೋಟುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಹೀಗೆ ಮಾಡಿದ್ರೋ..? ಇದರಲ್ಲೂ ಕಪ್ಪು ಹಣ ಇತ್ತೋ ಅನ್ನೋದು ಉತ್ತರ ಸಿಗದ ಪ್ರಶ್ನೆ.

    ನವರಾತ್ರಿ ತಿಂಗಳಲ್ಲಿ ದೇಶಾದ್ಯಂತ ಭಕ್ತರು ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದು ತಮ್ಮ ಹರಕೆ ತೀರಿಸುತ್ತಾರೆ. ಕೇರಳ ತಮಿಳುನಾಡು ರಾಜ್ಯದಿಂದ ಹೆಚ್ಚು ಮಂದಿ ಭಕ್ತರು ಕೊಲ್ಲೂರು ಕ್ಷೇತ್ರಕ್ಕೆ ಬರುವುದು ವಾಡಿಕೆ. ಈ ಬಾರಿ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದೆ. ಜೊತೆಗೆ ಬಂದ ಭಕ್ತರು ಹುಂಡಿಗೆ ಹಾಕಿದ- ಹೊತ್ತುಕೊಂಡ ಹರಕೆಯ ಮೊತ್ತವೂ ಹೆಚ್ಚಾಗಿದೆ.