Tag: fund raising

  • ಪೇಜಾವರ ಶ್ರೀಗಳಿಂದ ಹರಿಜನ ಕಾಲೋನಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹ

    ಪೇಜಾವರ ಶ್ರೀಗಳಿಂದ ಹರಿಜನ ಕಾಲೋನಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹ

    – ಸಾಮರಸ್ಯಕ್ಕೆ ಮುನ್ನುಡಿ ಬರೆದ ಶ್ರೀಗಳು

    ತುಮಕೂರು: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರಾದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ತುಮಕೂರು ನಗರದ ನರಸಿಂಹರಾಜ ಕಾಲೋನಿ ಮತ್ತು ಅಂಬೇಡ್ಕರ್ ನಗರದಲ್ಲಿ ಮನೆ ಮನೆ ಸಂಪರ್ಕ ಮಾಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದ ನಿಧಿ ಸಂಗ್ರಹ ಮಾಡಿದ್ದಾರೆ.

    ಪೇಜಾವರ ಶ್ರೀಗಳ ಭೇಟಿಯ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀಗಳಿಗೆ ಅಲ್ಲಿನ ನಿವಾಸಿಗಳು ಪುಷ್ಪಾರ್ಚನೆಯ ಮೂಲಕ ಸ್ವಾಗತಿಸಿದರು. ಪ್ರತಿಯೊಂದು ಮನೆಯಲ್ಲಿಯೂ ಶ್ರೀಗಳಿಗೆ ಫಲಪುಷ್ಪ ನೀಡಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ನೀಡಿದ್ದಾರೆ.

    ಪೇಜಾವರ ಶ್ರೀಗಳಿಗೆ 10ಕ್ಕೂ ಹೆಚ್ಚು ಮನೆಗಳಲ್ಲಿ ಪಾದಪೂಜೆ ನೆರವೇರಿಸಿ ಶ್ರೀರಾಮ ನಿಧಿ ಸಮರ್ಪಿಸಲಾಯಿತು. ನಂತರ ಶ್ರೀಗಳು ಕೃಷ್ಣರಾಜ ಬಡಾವಣೆಯಲ್ಲಿರುವ ಶ್ರೀ ಕೃಷ್ಣ ಮಠಕ್ಕೆ ತೆರಳಿ ಆಶೀರ್ವಚನ ನೀಡಿ ರಾಮಮಂದಿರ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶ್ರೀರಾಮನ ಸೇವೆಗಾಗಿ ಶಬರಿ ಮತ್ತು ಗುಹನಂತೆ ಇಲ್ಲಿನ ಭಕ್ತಸಮೂಹ ತಮ್ಮ ಸೇವೆಯನ್ನು ಸಮರ್ಪಿಸಿದ್ದಾರೆ ಎಂದು ಹೇಳಿದ್ದಾರೆ.

    ತದನಂತರ ನಗರದ ಶ್ರೀ ಸಿದ್ದಗಂಗಾ ಮಠದ ಸಂಜೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿದರು. ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಎರಡು ಮಠಗಳ ಹಿರಿಯ ಸ್ವಾಮೀಜಿಗಳು ನಡೆದುಕೊಂಡು ಬಂದ ದಾರಿಯನ್ನು ನೆನಪಿಸಿಕೊಂಡರು.

  • ಬೆತ್ತಲೆ ಫೋಟೋ ಮಾರಾಟ ಮಾಡಿ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ 5 ಕೋಟಿ ಸಂಗ್ರಹಿಸಿದ ಯುವತಿ

    ಬೆತ್ತಲೆ ಫೋಟೋ ಮಾರಾಟ ಮಾಡಿ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ 5 ಕೋಟಿ ಸಂಗ್ರಹಿಸಿದ ಯುವತಿ

    – ಪ್ರತಿ 10 ಡಾಲರ್ ಗೆ  1 ನಗ್ನ ಫೋಟೋ ಮಾರಾಟ
    – ಖಾತೆ ಬ್ಲಾಕ್ ಮಾಡಿದ ಇನ್‍ಸ್ಟಾಗ್ರಾಮ್

    ವಾಷಿಂಗ್ಟನ್: ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಬೆತ್ತಲೆ ಫೋಟೋ ಮಾರಾಟ ಮಾಡುವ ಮೂಲಕ ಅಮೆರಿಕ ಮೂಲದ ಯುವತಿಯೊಬ್ಬಳು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಬರೋಬ್ಬರಿ 5 ಕೋಟಿ ರೂಪಾಯಿ(700 ಸಾವಿರ ಡಾಲರ್) ಸಂಗ್ರಹಿಸಿದ್ದಾಳೆ.

    ಕಾಡ್ಗಿಚ್ಚಿನಿಂದ ಬೆಂದು ಹೋಗುತ್ತಿರುವ ಆಸ್ಟ್ರೇಲಿಯಾಕ್ಕಾಗಿ ಹಣ ಸಂಗ್ರಹ ಮಾಡಲು ಅಮೆರಿಕ ಮೂಲದ ಕೇಲೆನ್ ವಾರ್ಡ್(20) ಈ ರೀತಿ ಪ್ಲಾನ್ ಮಾಡಿದ್ದಾಳೆ. ‘ದಿ ನೆಕ್ಡ್ ಫಿಲ್ಯಾಂಥ್ರೋಪಿಸ್ಟ್’ ಹೆಸರಿನ ಇನ್‍ಸ್ಟಾಗ್ರಾಮ್ ಖಾತೆ ಹೊಂದಿದ್ದ ಕೇಲೆನ್ ತನ್ನ ಖಾತೆಯಿಂದ ನಗ್ನ ಫೋಟೋಗಳನ್ನು ಮಾರಾಟ ಮಾಡುತ್ತಿದ್ದಳು. ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ಮಂದಿಗೆ ಹಾಗೂ ಪ್ರಾಣಿಗಾಳಿಗಾಗಿ ಕೇಲೆನ್ ಹಣ ಸಂಗ್ರಹ ಮಾಡಲು ತನ್ನ ನಗ್ನ ಫೋಟೋಗಳನ್ನು ಇನ್‍ಸ್ಟಾದಲ್ಲಿ ಮಾರಾಟ ಮಾಡುತ್ತಿದ್ದಳು.

    ನಾನು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಹಣ ಸಂಗ್ರಹ ಮಾಡುತ್ತಿದ್ದೇನೆ. ನೀವು ಕೊಡುವ ಪ್ರತಿ 10 ಡಾಲರ್ ಗೆ ನನ್ನ 1 ಬೆತ್ತಲೆ ಫೋಟೋವನ್ನು ನಿಮಗೆ ಕಳುಹಿಸುತ್ತೇನೆ ಎಂದು ಜನವರಿ 4ರಂದು ಕೇಲೆನ್ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ನೋಡಿದ ಅನೇಕರು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಹಣ ನೀಡಿ ಕೇಲೆನ್‍ನ ಬೆತ್ತಲೆ ಫೋಟೋವನ್ನು ಖರೀದಿಸಿದ್ದಾರೆ. ಈ ಮೂಲಕ ಕೇವಲ ಎರಡೇ ದಿನದಲ್ಲಿ ಕೇಲೆನ್ ಬರೋಬ್ಬರಿ 5 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದ್ದಳು.

    ಈ ಬಗ್ಗೆ ಸ್ವತಃ ಕೇಲೆನ್ ತನ್ನ ಇನ್‍ಸ್ಟಾ ಖಾತೆಯಲ್ಲಿ ಸೋಮವಾರ ಪೋಸ್ಟ್ ಮಾಡಿದ್ದಳು. ನನ್ನ ಪೋಸ್ಟ್ ನೋಡಿದ ಅನೇಕರು ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ನೀಡಿದ್ದಾರೆ. ಇದು ನಿಜ ಜೀವನ. ಸುಮಾರು 700 ಸಾವಿರ ಡಾಲರ್(5 ಕೋಟಿ ರೂಪಾಯಿ) ಹಣ ಈಗಾಗಲೇ ಸಂಗ್ರಹವಾಗಿದೆ ಎಂದು ಬರೆದುಕೊಂಡಿದ್ದಳು.

    ಕೇಲೆನ್ ಈ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾಳೆ ಎಂದ ಆರೋಪ ಕೇಳಿ ಬಂದ ಹಿನ್ನೆಲೆ ಇನ್‍ಸ್ಟಾಗ್ರಾಮ್ ಕಂಪನಿ ಆಕೆಯ ಖಾತೆಯನ್ನು ಬ್ಲಾಕ್ ಮಾಡಿತ್ತು. ಆದರೂ ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಹಣ ಸಂಗ್ರಹಿಸಲು ಮತ್ತೊಂದು ಇನ್‍ಸ್ಟಾ ಖಾತೆಯನ್ನು ಕೇಲೆನ್ ತೆರೆದಳು. ಅದನ್ನೂ ಕೂಡ ಇನ್‍ಸ್ಟಾಗ್ರಾಮ್ ಕಂಪನಿ ಬ್ಲಾಕ್ ಮಾಡಿದೆ.

    ಈ ಬಗ್ಗೆ ಸ್ಪಷ್ಟಪಡಿಸಿದ ಕೇಲೆನ್, ನಾನು ಯಾವ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ. ಯಾರೆಲ್ಲಾ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ನೀಡಿದ್ದಾರೋ ಅವರು ಆಸ್ಟ್ರೇಲಿಯಾಗಾಗಿ ಹಣ ಸಂಗ್ರಹಿಸುತ್ತಿರುವ ತಮ್ಮ ಹತ್ತಿರದ ಚಾರಿಟಿ ಅಥವಾ ಎನ್‍ಜಿಓಗೆ ಹಣ ನೀಡಿದ್ದಾರೆ. ಹಣ ನೀಡಿದ ಬಗ್ಗೆ ಖಾತರಿಗೊಳಿಸಿದ ಬಳಿಕ ನಾನು ಅವರಿಗೆ ನನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದೇನೆ. ನಾನು ನನ್ನ ಸ್ವಂತಕ್ಕೆ ಹಣವನ್ನು ಬಳಸಿಕೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ.

    ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರನರ್ತನಕ್ಕೆ ಅಕ್ಷರಶಃ ನಲುಗಿಹೋಗಿದೆ. ಕಾಡ್ಗಿಚ್ಚಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಈವರೆಗೆ ಸುಮಾರು 25 ಮಂದಿ ಬೆಂಕಿ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಲಕ್ಷಗಟ್ಟಲೆ ಕಾಡು ಪ್ರಾಣಿಗಳು, ಪಕ್ಷಿಗಳು ಜೀವ ಕಳೆದುಕೊಂಡಿವೆ.

    https://twitter.com/Loving_mou/status/1214423178065436673

    ಸಾಮಾಜಿಕ ಜಾಲತಾಣಗಳಲ್ಲಿ ‘ಪ್ರೇ ಫಾರ್ ಆಸ್ಟ್ರೇಲಿಯಾ’ ಎಂದು ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಫೋಟೋಗಳು, ಸುಟ್ಟು ಕರಕಲಾಗಿರುವ ಪ್ರಾಣಿಗಳ ಮೃತದೇಹಗಳ ಫೋಟೋಗಳು ಹಾಗೂ ಸಹಾಯಕ್ಕಾಗಿ ಜನರ ಕಾಲು ಹಿಡಿದ ಕಾಂಗರುಗಳು ಹಾಗೂ ಇತರೆ ಪ್ರಾಣಿಗಳ ಫೋಟೋಗಳು ವೈರಲ್ ಆಗುತ್ತಿದೆ.

  • ಉತ್ತರ ಕರ್ನಾಟಕ ಪ್ರವಾಹಕ್ಕೆ ಮಿಡಿದ ಮಕ್ಕಳ ಹೃದಯ

    ಉತ್ತರ ಕರ್ನಾಟಕ ಪ್ರವಾಹಕ್ಕೆ ಮಿಡಿದ ಮಕ್ಕಳ ಹೃದಯ

    – ಕಣ್ಣೀರಾಕಿ ಚಂದಾ ಎತ್ತಿದ ಮಕ್ಕಳು

    ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಿಂದ ತತ್ತರಿಸಿದ ಜನರಿಗಾಗಿ ಶಾಲಾ ವಿದ್ಯಾರ್ಥಿಗಳು ಕಣ್ಣೀರು ಹಾಕಿ ಚಂದಾ ಸಂಗ್ರಹ ಮಾಡಿದ್ದಾರೆ.

    ಪಬ್ಲಿಕ್ ಟಿವಿಯ ‘ಬುಲೆಟ್ ರಿಪೋರ್ಟರ್’ನಲ್ಲಿ ರಾಮದುರ್ಗದ ಪ್ರವಾಹ ಪೀಡಿತ ಪ್ರದೇಶದ ಕುರಿತು ಪ್ರಸಾರವಾಗಿತ್ತು, ಅದರಲ್ಲಿ ರಾಮದುರ್ಗ ಶಾಲೆಯ ಮಕ್ಕಳಿಗೆ ಸಹಾಯ ಮಾಡುವಂತೆ ಅಲ್ಲಿನ ಮುಖ್ಯೋಪಾಧ್ಯಾಯರು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಬನಶಂಕರಿಯಲ್ಲಿರುವ ಸೆಂಟ್ ಪೀಟರ್ಸ್ ಶಾಲೆಯ ಮಕ್ಕಳ ಮನ ಮಿಡಿದಿದ್ದು, ಪ್ರವಾಹ ಪೀಡಿತರಿಗಾಗಿ ಚಂದಾ ಸಂಗ್ರಹ ಮಾಡಿದ್ದಾರೆ.

    ಪ್ರವಾಹದಿಂದ ಹಾನಿಯಾಗಿರುವ ದೃಶ್ಯಗಳನ್ನು ಮಾಧ್ಯಮದಲ್ಲಿ ನೋಡಿ ಸೆಂಟ್ ಪೀಟರ್ಸ್ ಶಾಲೆಯ ವಿದ್ಯಾರ್ಥಿಗಳು ಬೇಸರಗೊಂಡು ತಮ್ಮ ಮುಖ್ಯೋಪಾಧ್ಯಾಯರ ಬಳಿ ಹೋಗಿ, ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಬಯಸುತ್ತೇವೆ ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ ಅವರಿಗಾಗಿ ಹಣ ಸಂಗ್ರಹಿಸಿ ನೀಡುತ್ತೇವೆ ಎಂದು ಹೇಳಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ಬಯಸಿದ ಮಕ್ಕಳ ನಿರ್ಧಾರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಅನುಮತಿ ನೀಡುವ ಮೂಲಕ ಮಕ್ಕಳ ಸಹಾಯ ಕಾರ್ಯಕ್ಕೆ ಕೈಜೊಡಿಸಿದ್ದಾರೆ.

    ಈವರೆಗೆ ವಿದ್ಯಾರ್ಥಿಗಳೆಲ್ಲಾ ಸೇರಿ ಸುಮಾರು 25 ಸಾವಿರ ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ. ಈ ಹಣವನ್ನು ಪ್ರವಾಹ ಪೀಡಿತ ಜನರಿಗೆ ನೀಡಲು ಮಕ್ಕಳು ನಿರ್ಧರಿಸಿದ್ದಾರೆ.