Tag: Function

  • ಮದುವೆ ಮನೆಯಿಂದ ಹೊರಟವರು ಮಸಣ ಸೇರಿದ್ರು

    ಮದುವೆ ಮನೆಯಿಂದ ಹೊರಟವರು ಮಸಣ ಸೇರಿದ್ರು

    ಭುವನೇಶ್ವರ: ಮದುವೆ ಸಮಾರಂಭಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ, ಭೀಕರವಾದ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಒಡಿಶಾದ ಸೋನಾಪುರ ಜಿಲ್ಲೆಯ ಮಹಾನದಿ ಸೇತುವೆ ಮೇಲೆ ನಡೆದಿದೆ.

    ಕಾರು, ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪೊಲೀಸರು ಪ್ರಾಮಾಣಿಕರಾಗಿಲ್ಲದಿದ್ದರೆ, ನಾಗರೀಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ

    ಸೋನಾಪುರ ಜಿಲ್ಲೆಯ ಉಲ್ಲುಂದಾ ನಿಮ್ನಾ ಗ್ರಾಮದ 10 ಜನರು ಕೌದಿಯಾಮುಂಡ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಕಾರ್‌ನಲ್ಲಿ ವಾಪಸ್ ಆಗುತ್ತಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಸೋನಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬುರ್ಲಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

  • ಮದುವೆಗೆ ಹೆಚ್ಚು ಜನ ಸೇರಿಸಿದ್ರೆ ಕ್ರಿಮಿನಲ್ ಕೇಸ್ – ಪೊಲೀಸರಿಂದ ಖಡಕ್ ರೂಲ್ಸ್

    ಮದುವೆಗೆ ಹೆಚ್ಚು ಜನ ಸೇರಿಸಿದ್ರೆ ಕ್ರಿಮಿನಲ್ ಕೇಸ್ – ಪೊಲೀಸರಿಂದ ಖಡಕ್ ರೂಲ್ಸ್

    ಮೈಸೂರು: ಕೊರೊನಾ ಲಾಕ್‍ಡೌನ್ ಶುರುವಾಗಿದ್ದೇ ಬಂತು. ಚಿತ್ರಮಂದಿರ, ಕಲ್ಯಾಣ ಮಂಟಪ, ಸಾರ್ವಜನಿಕ ಸಭೆ- ಸಮಾರಂಭಗಳಿಗೆಲ್ಲ ಆತಂಕ ಶುರುವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಕಲ್ಯಾಣ ಮಂಟಪಗಳ ಹೊಸ ನಿಯಮ ಜಾರಿಯಾಗಿದೆ. ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇತ್ತ ಕಲ್ಯಾಣ ಮಂಟಪದ ಮಾಲೀಕರು ಸಹ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಬಂದ ಮೇಲೆ ಜೀವನ ಶೈಲಿಯೇ ಬದಲಾಗುತ್ತಿದೆ. ಮೊದಲೆಲ್ಲ ಮದುವೆ, ಉಪನಯನ, ಹುಟ್ಟುಹಬ್ಬ, ಬೀಗರೂಟ ಹೀಗೆ ಶುಭ ಸಮಾರಂಭಗಳಿಗೆ ಬಂಧು- ಬಳಗದವರೆಲ್ಲ ಸೇರಿ ಸಂಭ್ರಮಿಸುತ್ತಿದ್ದರು. ಕೊರೊನಾ ಕಾಲಿಟ್ಟ ಬಳಿಕ ಶುಭ ಸಮಾರಂಭಗಳ ಚಿತ್ರಣವೇ ಬದಲಾಗಿ ಹೋಗಿದೆ. ಈ ನಡುವೆ ಮೈಸೂರು ಪೊಲೀಸರು ಕಲ್ಯಾಣ ಮಂಟಪಗಳಿಗೆ ಹೊಸ ಆದೇಶ ಜಾರಿ ಮಾಡಿದ್ದಾರೆ. ಮದುವೆಗಳಿಗೆ ಕೇವಲ 200 ಜನ ಮಾತ್ರ ಇರಬೇಕು. ಹುಟ್ಟುಹಬ್ಬ, ನಾಮಕರಣದಂತಹ ಸಮಾರಂಭಗಳಿಗೂ ನಿಗದಿಪಡಿಸಿದಷ್ಟು ಜನ ಮಾತ್ರ ಸೇರಬೇಕು. ಹೆಚ್ಚು ಜನರಿದ್ದು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದ್ರೆ, ಕ್ರಿಮಿನಲ್ ಕೇಸ್ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

    ಈ ನಿಯಮ ಕಲ್ಯಾಣ ಮಂಟಪಗಳ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಡೀ ಮದುವೆ ಸೀಸನ್ ಕೊರೊನಾ ಲಾಕ್‍ಡೌನ್‍ನಲ್ಲೇ ಕಳೆದು ಹೋಯ್ತು. ಈಗಷ್ಟೆ ಒಂದೋ ಎರಡೋ ದಿನ ಬುಕ್ಕಿಂಗ್ ಸಿಗುತ್ತಿದೆ. ಅದಕ್ಕೂ ನಿಯಮ, ನಿಬಂಧನೆ ವಿಧಿಸಿದ್ರೆ ಜನ ಕಲ್ಯಾಣ ಮಂಟಪಗಳನ್ನೇ ಮರೆತು ಬಿಡ್ತಾರೆ ಎನ್ನುವ ಆತಂಕ ಶುರುವಾಗಿದೆ. ಕೆಲ ಕಲ್ಯಾಣ ಮಂಟಪಗಳ ಮಾಲೀಕರು ಪೊಲೀಸರ ಆದೇಶವನ್ನು ಸ್ವಾಗತಿಸಿದ್ದಾರೆ. ಆದರೆ ಬಹುತೇಕರು ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಬಹುತೇಕ ಕಲ್ಯಾಣ ಮಂಟಪಗಳು ಖಾಲಿ ಹೊಡೆಯುತ್ತಿವೆ. ಶುಭ ಸಮಾರಂಭ ನಡೆಯಲೀ ಬಿಡಲಿ ಲೈಸೆನ್ಸ್, ಎನ್‍ಒಸಿ, ಕರೆಂಟು ಬಿಲ್, ವಾಟರ್ ಬಿಲ್, ಸೆಕ್ಯೂರಿಟಿ ಹೀಗೆ ಹತ್ತಾರು ಮೇಂಟೆನೆನ್ಸ್ ಖರ್ಚುಗಳು ಇದ್ದೇ ಇರುತ್ತವೆ. ಇದೆಲ್ಲವನ್ನೂ ನಿಭಾಯಿಸಿಕೊಂಡು, ಕೊರೊನಾ ನಿಯಮಗಳನ್ನೂ ಪಾಲಿಸೋದು ಅಷ್ಟು ಸುಲಭವಲ್ಲ. ಆದರೆ ಕೊರೊನಾ ಮಾಹಾಮಾರಿ ವಿರುದ್ಧ ಹೋರಾಡುವುದು ಸಾಮಾಜಿಕ ಜವಾಬ್ದಾರಿ ಅನ್ನೋದನ್ನು ಕಲ್ಯಾಣ ಮಂಟಪದ ಮಾಲೀಕರು ಒಪ್ಪಿಕೊಳ್ಳುತ್ತಾರೆ.

    ಒಟ್ಟಾರೆ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿದ್ದು, ಅದನ್ನ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಿಮಿನಲ್ ಕೇಸ್ ಅಸ್ತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

  • ಫಂಕ್ಷನ್‍ಗೆ ಕರೆದುಕೊಂಡು ಹೋಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    ಫಂಕ್ಷನ್‍ಗೆ ಕರೆದುಕೊಂಡು ಹೋಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    ಮೈಸೂರು: ಫಂಕ್ಷನ್‍ಗೆ ಕರೆದುಕೊಂಡು ಹೋಗದ್ದಕ್ಕೆ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಶಾರದಾ ದೇವಿನಗರದಲ್ಲಿ ನಡೆದಿದೆ.

    17 ವರ್ಷದ ಅಮಿತ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಅಮಿತ್ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು. ಅಮಿತ್ ತಂದೆ ಮಾಜಿ ಯೋಧರು. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕುಟುಂಬದ ಕಾರ್ಯಕ್ರಮಕ್ಕೆ ತೆರಳುವ ವೇಳೆ ಅಮಿತ್ ನನ್ನು ಪೋಷಕರು ಕರೆದುಕೊಂಡು ಹೋಗದೆ ಪರೀಕ್ಷೆಗೆ ಓದುವಂತೆ ಹೇಳಿದ್ದರು. ಫಂಕ್ಷನ್‍ಗೆ ಕರೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಬೇಸತ್ತ ಅಮಿತ್ ನೇಣಿಗೆ ಶರಣಾಗಿದ್ದಾನೆ.

    ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇದು ಉದ್ದೇಶಪೂರ್ವಕ ಕೃತ್ಯ: ಹ್ಯಾರಿಸ್ ಪುತ್ರ ನಲಪಾಡ್ ಆರೋಪ

    ಇದು ಉದ್ದೇಶಪೂರ್ವಕ ಕೃತ್ಯ: ಹ್ಯಾರಿಸ್ ಪುತ್ರ ನಲಪಾಡ್ ಆರೋಪ

    ಬೆಂಗಳೂರು: ನಮ್ಮ ತಂದೆಯ ಮೇಲೆ ನಡೆದ ದಾಳಿ ಉದ್ದೇಶಪೂರ್ವಕ ಕೃತ್ಯ ಎಂದು ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಲಪಾಡ್, ಪ್ರತಿ ವರ್ಷದಂತೆ ನಮ್ಮ ತಂದೆಯ ಹುಟ್ಟುಹಬ್ಬದ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲಿದ್ದ ವಿಶೇಷ ಚೇರ್ ಮೇಲೆ ಕುಳಿತುಕೊಳ್ಳಲು ತಂದೆ ನಿರಾಕರಿಸಿದರು. ಹೀಗಾಗಿ ಸಾಮಾನ್ಯರಂತೆ ಪಕ್ಕದ ಚೇರ್ ಮೇಲೆ ಕುಳಿತಿದ್ದಾಗ ಯಾರೋ ವೇದಿಕೆಯ ಕಡೆಗೆ ಗ್ರೀನ್ ಕಲರ್ ಪ್ಲ್ಯಾಸ್ಟಿಕ್ ವಸ್ತು ಎಸೆದರು. ಅದು ತಂದೆಯ ಭುಜಕ್ಕೆ ಬಡಿದು ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಹೀಗಾಗಿ ಕಾಲಿಗೆ ಗಾಯವಾಗಿದೆ ಎಂದರು.

    ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಮೋಹನ್, ಚಿಟ್ಟಿಬಾಬು ಹಾಗೂ ಸಂಪತ್ ಗಾಯಗೊಂಡಿದ್ದಾರೆ. ಪಕ್ಕದ ಚೇರ್ ಮೇಲೆ ಕುಳಿದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಒಂದು ವೇಳೆ ತಂದೆ ಹ್ಯಾರಿಸ್ ಅವರ ಮೇಲೆ ಬಿದ್ದ ತಕ್ಷಣವೇ ಸ್ಫೋಟಕ ಸ್ಫೋಟಗೊಂಡಿದ್ದರೆ ಘಟನೆ ತೀವ್ರವಾಗಿರುತ್ತಿತ್ತು. ಬ್ಲಾಸ್ಟ್ ತೀವ್ರತೆಯಿಂದ ತಂದೆಯ ಕಿವಿಯಲ್ಲಿ ಗುಂಯ್ ಎನ್ನುವ ಶಬ್ದ ಕೇಳುತ್ತಿದೆಯಂತೆ ಎಂದು ಹೇಳಿದರು.

    ಕ್ಷೇತ್ರದಲ್ಲಿ ನಮಗೆ ಯಾವುದೇ ವೈರಿಗಳಿಲ್ಲ. ನಮ್ಮ ತಂದೆ ಎಲ್ಲರ ಜೊತೆಗೆ ಸೇರಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ ಇದು ಉದ್ದೇಶಪೂರ್ವಕ ಕೃತ್ಯವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

  • ಬೆಂಗ್ಳೂರಿನಲ್ಲಿ ಅನುಮಾನಾಸ್ಪದ ಸ್ಫೋಟ- ಶಾಸಕ ಹ್ಯಾರಿಸ್ ಕಾಲಿಗೆ ಗಾಯ

    ಬೆಂಗ್ಳೂರಿನಲ್ಲಿ ಅನುಮಾನಾಸ್ಪದ ಸ್ಫೋಟ- ಶಾಸಕ ಹ್ಯಾರಿಸ್ ಕಾಲಿಗೆ ಗಾಯ

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣ ಇಡೀ ರಾಜ್ಯ ಹಾಗೂ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ.

    ಬೆಂಗಳೂರಿನ ವಿವೇಕನಗರದಲ್ಲಿ ಇಂದು ರಾತ್ರಿ 9:30ಕ್ಕೆ ಘಟನೆ ನಡೆದಿದ್ದು, ಹ್ಯಾರಿಸ್ ಅವರ ಕಾಲಿಗೆ ಗಾಯವಾಗಿದೆ. ಅವರನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ವಿವೇಕನಗರದ ವನಾರ್ ಪೇಟೆ ದೇವರ ಕಾರ್ಯಕ್ರಮದಲ್ಲಿ ಶಾಸಕ ಹ್ಯಾರಿಸ್ ಭಾಗಿಯಾಗಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸೆಂಟ್ ಫಿಲೋಮಿನಾ  ಆಸ್ಪತ್ರೆಯ ಮುಂದೆ ಶಾಸಕ ಹ್ಯಾರಿಸ್ ಬೆಂಬಲಿಗರು ಜಮಾಯಿಸಿದ್ದಾರೆ.

  • ಮತ್ತೆ ಜೊತೆಜೊತೆಯಲಿ – ಒಟ್ಟಿಗೆ ಉಪಹಾರ ಸೇವಿಸಿದ ಜಿಟಿಡಿ, ಪ್ರತಾಪ್ ಸಿಂಹ

    ಮತ್ತೆ ಜೊತೆಜೊತೆಯಲಿ – ಒಟ್ಟಿಗೆ ಉಪಹಾರ ಸೇವಿಸಿದ ಜಿಟಿಡಿ, ಪ್ರತಾಪ್ ಸಿಂಹ

    ಮೈಸೂರು: ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಕುಸ್ತಿ ಆಡುವ ಜೆಡಿಎಸ್, ಬಿಜೆಪಿ ನಾಯಕರು ಕಾರ್ಯಕ್ರಮಗಳಲ್ಲಿ ಜೊತೆಯಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

    ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಜಿ.ಟಿ ದೇವೇಗೌಡ ಅವರು ಮತ್ತೆ ಜೊತೆಯಾಗಿ ಕಾಣಿಸಿಕೊಂಡು ಭಾರೀ ಸುದ್ದಿಯಾಗುತ್ತಿದ್ದಾರೆ. ಹೌದು. ಮೈಸೂರು ತಾಲೂಕಿನ ಮರಟಿ ಕ್ಯಾತನಹಳ್ಳಿಯಲ್ಲಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯಲ್ಲಿ ಎರಡೂ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶನ ನೀಡಿದ್ದಾರೆ.

    ಅಷ್ಟೇ ಅಲ್ಲದೆ ತಾಲೂಕು ಪಂಚಾಯತ್ ಜೆಡಿಎಸ್ ಸದಸ್ಯೆ ಮನೆಯಲ್ಲಿ ಉಪಹಾರ ಸೇವನೆ ಮಾಡಿ, ಬಳಿಕ ಜಿಟಿಡಿ, ಪ್ರತಾಪ್ ಸಿಎಂ ಅವರು ಒಂದೇ ಕಾರಿನಲ್ಲಿ ಸಂಚರಿಸಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

    ಈ ಹಿಂದೆ ಒಂದೇ ಕಾರಿನಲ್ಲಿ ಪ್ರತಾಪ್ ಸಿಂಹ, ಜಿ.ಟಿ ದೇವೇಗೌಡ ಹಾಗೂ ಸಚಿವ ಸಾ.ರಾ.ಮಹೇಶ್ ಜೊತೆಯಾಗಿ ಓಡಾಟ ನಡೆಸಿ ಅಚ್ಚರಿ ಮೂಡಿಸಿದ್ದರು.

    ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಜಿಟಿಡಿ ಹಾಗೂ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ ಅವರು ಸಹ ನಾಯಕರಿಗೆ ಸಾಥ್ ನೀಡಿದ್ದರು.

    ಲೋಕಸಭಾ ಚುನಾವಣೆಯ ಸಮಯದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಾಂಗ್ರೆಸ್ಸಿನ ವಿಜಯಶಂಕರ್ ಕಣಕ್ಕೆ ಇಳಿದಾಗ ಸಿಂಹ ವಿರುದ್ಧ ಜೆಡಿಎಸ್ ನಾಯಕರು ಪ್ರಚಾರ ನಡೆಸಿದ್ದರು. ಆದರೆ ಈಗ ಪದೇ ಪದೇ ಬಿಜೆಪಿ ನಾಯಕನ ಜೊತೆ ಜೆಡಿಎಸ್ ನಾಯಕರು ಓಡಾಡುತ್ತಿರುವ ವಿಚಾರ ರಾಜಕೀಯ ವಲಯದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗುತ್ತಿಗೆ ಸಿಕ್ಕಿದ್ದಕ್ಕೆ ಹಣ ಕೊಡಿ – ಸಚಿವರ ಬೆಂಬಲಿಗರಿಂದ ಪರ್ಸಂಟೇಜ್  ಗೂಂಡಾಗಿರಿ!

    ಗುತ್ತಿಗೆ ಸಿಕ್ಕಿದ್ದಕ್ಕೆ ಹಣ ಕೊಡಿ – ಸಚಿವರ ಬೆಂಬಲಿಗರಿಂದ ಪರ್ಸಂಟೇಜ್ ಗೂಂಡಾಗಿರಿ!

    – ವೆಂಕಟರಾವ್ ಬೆಂಬಲಿಗರಿಂದ ಹಲ್ಲೆ
    – ಶಾಮಿಯಾನ ಗುತ್ತಿಗೆದಾರನಿಂದ ದೂರು

    ರಾಯಚೂರು: ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡರ ಬೆಂಬಲಿಗರು ಪರ್ಸಂಟೇಜ್ ಕಲೆಕ್ಷನ್‍ಗೆ ಮುಂದಾಗಿ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಚಿವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.

    ಜನವರಿ 5 ರಿಂದ 7 ರವರೆಗೆ ರಾಯಚೂರಿನ ಸಿಂಧನೂರಿನಲ್ಲಿ ರಾಜ್ಯಮಟ್ಟದ ಮತ್ಸ್ಯ ಹಾಗು ಪಶು ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಶಾಮಿಯಾನ ಹಾಕಿದ್ದ ಗುತ್ತಿಗೆದಾರ ಮೆಹಬೂಬ್ ಮುಲ್ಲಾ ಅವರಿಗೆ ಪರ್ಸಂಟೇಜ್ ಕೊಡಬೇಕು ಅಂತ ಸಚಿವ ನಾಡಗೌಡರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.

    ವೆಂಕಟರಾವ್ ನಾಡಗೌಡರ ಬೆಂಬಲಿಗರಾದ ವೆಂಕಟೇಶ್, ಹನುಮನಗೌಡ, ಮಹಾಲಿಂಗಸ್ವಾಮಿ, ವಿಶ್ವ ಎಂಬುವವರು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಮೆಹಬೂಬ್ ಮುಲ್ಲಾ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿ ಸಚಿವರ ಸ್ವಗ್ರಾಮ ಜವಳಗೇರಾಕ್ಕೆ ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಕರೆದುಕೊಂಡು ಹೋಗಿದ್ದಾರೆ. ಆಗ ಸಚಿವರು ಸಹ ಹಣ ನೀಡದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಮೆಹಬೂಬ್ ಮುಲ್ಲಾ ಆರೋಪಿಸಿದ್ದಾರೆ.

    ಮೇಳದ ಶಾಮಿಯಾನ ಗುತ್ತಿಗೆಯನ್ನು ಶರಣಬಸವೇಶ್ವರ ಶಾಮಿಯಾನ ಸಪ್ಲೇಯರ್ಸ್ ಪಡೆದಿದ್ದರು. ಅವರಿಂದ ಮೆಹಬೂಬ್ ಅವರು ಉಪಗುತ್ತಿಗೆ ಪಡೆದಿದ್ದರು. 16 ಲಕ್ಷ ರೂ. ಚೆಕ್ ಡ್ರಾ ಮಾಡಿಕೊಳ್ಳಲು ಆಕ್ಸಿಸ್ ಬ್ಯಾಂಕ್‍ಗೆ ಹೋದಾಗ ಈ ಘಟನೆ ನಡೆದಿದೆ. ಬ್ಯಾಂಕ್ ಮ್ಯಾನೆಜರ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮೆಹಬೂಬ್ ಅವರು ಆರೋಪಿಸಿದ್ದಾರೆ. ಸಿಂಧನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಮೆಹಬೂಬ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

    ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

    ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಇಂದು ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು.

    ಈ ಕಾರ್ಯಕ್ರಮಕ್ಕೆ ಹನುಮಂತ ಅವರೇ ಕೇಂದ್ರ ಬಿಂದುವಾಗಿದ್ದರು. ಹನುಮಂತ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಯಡ್ರಾಮಿ ಪಟ್ಟಣದ ಪ್ರಮುಖ ವೃತಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವಿಸಿದರು. ಈ ಸಂದರ್ಭದಲ್ಲಿ ಸರಿಗಮಪ ಸೀಸನ್ 13ರಲ್ಲಿ ಚಾಂಪಿಯನ್ ಆಗಿದ್ದ ಸುನೀಲ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ವೇದಿಕೆಗೆ ಬರುತ್ತಿದ್ದಂತೆ ಮೈಕ್ ಹಿಡಿದ ಹನುಮಂತ ಅವರು ಹಾಡು ಹಾಡಿ ಜನರ ಮನಸ್ಸು ಗೆದ್ದಿದ್ದಾರೆ. ಇನ್ನು ಹನುಮಂತ ಸಹ ಬಂಜಾರಾ ಸಮುದಾಯದ ಜನಾಂಗಕ್ಕೆ ಸೇರಿದ್ದು, ಲಂಬಾಣಿ ಭಾಷೆಯಲ್ಲಿ ಸಹ ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ. ಅದಾದ ಬಳಿಕ ಸುನೀಲ್ ಹನುಮಂತ ಅವರಿಗೆ ಸಾಥ್ ನೀಡಿದ್ದು, ಇಬ್ಬರ ಹಾಡಿಗೆ ನೆರೆದ ಜನ ವಿಸಿಲ್ ಹಾಕಿ ಭರಪೂರ ಎಂಜಾಯ್ ಮಾಡಿದ್ದಾರೆ.

    ಬಂಜಾರಾ ಸಮುದಾಯದ ವತಿಯಿಂದ ಹನುಮಂತ ಹಾಗು ಸುನೀಲ್ ಅವರನ್ನು ಶಾಲು ಹೊದಿಸಿ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಯಕ್ರಮಕ್ಕೆ ಕರೆದೊಯ್ದು ವಿದ್ಯಾರ್ಥಿಗಳನ್ನ ಮರೆತ ಶಿಕ್ಷಕ- 10 ಕಿ.ಮೀ ನಡ್ಕೊಂಡು ಬಂದ ಮಕ್ಕಳು..!

    ಕಾರ್ಯಕ್ರಮಕ್ಕೆ ಕರೆದೊಯ್ದು ವಿದ್ಯಾರ್ಥಿಗಳನ್ನ ಮರೆತ ಶಿಕ್ಷಕ- 10 ಕಿ.ಮೀ ನಡ್ಕೊಂಡು ಬಂದ ಮಕ್ಕಳು..!

    ಕಾರವಾರ: ಸೇವಾದಳದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ದೈಹಿಕ ಶಿಕ್ಷಕರೊಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದರಿಂದ ಸುಮಾರು 10 ಕಿ.ಮೀ ದೂರ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಮನೆ ಸೇರಿರುವ ಘಟನೆ ಜಿಲ್ಲೆಯ ಮುಂಡಗೋಡು ಪಟ್ಟಣದ ಕಾತೂರು ತಾಲೂಕಿನಲ್ಲಿ ನಡೆದಿದೆ.

    ಕಾತೂರಿನಲ್ಲಿ ತಾಲೂಕು ಮಟ್ಟದ ಸೇವಾದಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದ್ದರಿಂದ ಸರ್ಕಾರಿ ಜೂನಿಯರ್ ಕಾಲೇಜಿನ 14ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ದೀಪಕ್ ಲೋಕಣ್ಣವರ್ ಕರೆದುಕೊಂದು ಹೋಗಿದ್ದರು. ಹೋಗುವಾಗ ಮಕ್ಕಳನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕ, ವಾಪಾಸ್ ಬರುವಾಗ ಮಕ್ಕಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾರೆ.

    ಕಾರ್ಯಕ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಮಕ್ಕಳ ಶಿಕ್ಷಕರ ಬಳಿ ಊಟದ ಚೀಟಿಯನ್ನು ನೀಡಲಾಗಿತ್ತು. ಆದ್ರೆ ದೀಪಕ್ ಅವರು ಮಕ್ಕಳ ಊಟದ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾರ್ಯಕ್ರಮದಿಂದ ಹಾಗೆಯೇ ಮುಂಡಗೋಡಿಗೆ ತೆರೆಳಿದ್ದಾರೆ. ಇತ್ತ ಮಕ್ಕಳು ಊಟವನ್ನೂ ಮಾಡದೆ ಶಿಕ್ಷಕರು ಬರುತ್ತಾರೆ ಎಂದು ಕಾದು ಕೂತಿದ್ದಾರೆ. ಆದ್ರೆ ಸಂಜೆಯಾದರೂ ಶಿಕ್ಷಕ ಬರದಿದ್ದಾಗ ಮಕ್ಕಳು ಆತಂಕಗೊಂಡಿದ್ದಾರೆ.

    ಬಳಿಕ ಮನೆ ಸೇರಲು ಬಸ್ಸಿಗೆ ಹೋಗಲು ಕೈಯಲ್ಲಿ ಹಣವಿಲ್ಲದೆ ನಡೆದುಕೊಂಡೇ ಸುಮಾರು 10 ಕಿ.ಮೀ ದೂರ ಬಂದಿದ್ದಾರೆ. ಬಳಿಕ ಮಕ್ಕಳನ್ನು ನೋಡಿದ ಗ್ರಾಮಸ್ಥರೊಬ್ಬರು ಹಣ ನೀಡಿ ಎಲ್ಲರನ್ನೂ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದಾರೆ. ಈ ವಿಷಯ ಪೋಷಕರಿಗೆ ತಿಳಿಯುತ್ತಿದಂತೆ ಶಿಕ್ಷಕರ ಮೇಲೆ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಮರುದಿನ ಶಾಲೆಗೆ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ಶಿಕ್ಷಕ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ಬೆಂಗಳೂರು: ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆಯ ಆದೇಶ ಹೊರಡಿಸಿದರೂ ಖಾಸಗಿ ಹೋಟೆಲಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರಿಯಾಂಕ್ ಖರ್ಗೆ ಕಾರ್ಯಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಕೆ.ಸಿ.ವೇಣುಗೋಪಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ನಿಮಗೆ ಇಲ್ಲದೇ ಹೋಯ್ತೇ? ಸಿದ್ದಗಂಗಾ ಶ್ರೀಗಳಂತ ಸಾಧಕರು ಅಗಲಿದಾಗ ಈ ಕಾರ್ಯಕ್ರಮ ನಡೆಸಿ ವಿವಾದ ಮಾಡಿಕೊಳ್ಳಬೇಕಾದ ಅವಶ್ಯಕತೆ ಏನಿತ್ತು? ಈ ವಿಚಾರಗಳು ಭಾವನಾತ್ಮಕವಾದ ವಿಷಯಗಳು ಎನ್ನುವುದು ನಿಮಗೆ ಗೊತ್ತಾಗುದಿಲ್ಲವೇ? ಇದರಿಂದ ಆಗುವ ಪರಿಣಾಮಗಳೇನು ಅಂತ ಯೋಚಿಸುವ ಶಕ್ತಿಯು ನಿಮಗಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ಈ ವಿಚಾರವಾಗಿ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಪ್ರಿಯಾಂಕ್ ಖರ್ಗೆಗೆ ಸೂಚನೆಯನ್ನು ಕೂಡ ವೇಣುಗೋಪಾಲ್ ನೀಡಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಆಯೋಜಿಸಿದೆ. ಮಂಗಳವಾರ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಇಡೀ ರಾಜ್ಯವೇ ಶೋಕಾಚರಣೆ ಮಾಡುತ್ತಿರುವಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಬಿಜೆಪಿ ಆಕ್ಷೇಪಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು.

    https://www.youtube.com/watch?v=kX1PUyGudYg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv