Tag: Fuel prices

  • ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪಟ್ಟಿ ಕನ್ನಡದಲ್ಲೂ ಇರುತ್ತೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

    ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪಟ್ಟಿ ಕನ್ನಡದಲ್ಲೂ ಇರುತ್ತೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

    – ನಾಳೆಯಿಂದಲೇ ಜಾರಿಗೆ ಸೂಚನೆ

    ಬೆಂಗಳೂರು: ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ (Petrol, Diesel) ದರ ಪಟ್ಟಿ ಕನ್ನಡದಲ್ಲೂ ಇರಲಿದೆ. ನಾಳೆಯಿಂದಲೇ ಕನ್ನಡದಲ್ಲಿ ಪ್ರದರ್ಶಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ಹೇಳಿದ್ದಾರೆ.

    ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಕ್‌ಗಳಲ್ಲಿ ಪೆಟ್ರೋಲ್ ಬೆಲೆ (Fuel Prices) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇದ್ದು, ಕನ್ನಡದಲ್ಲಿ ನೀಡಬೇಕು ಎಂಬ ಮನವಿ ಇದೆ. ಇಂಧನ ಬೆಲೆಗಳನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು ಎಂಬ ಬೇಡಿಕೆಯಿತ್ತು. ನಾಳೆಯಿಂದ ಕನ್ನಡದಲ್ಲಿ ಲಭ್ಯವಿರುತ್ತದೆ ಎಂದು ನಾನು ತಕ್ಷಣ ಘೋಷಿಸಿದೆ. ತೈಲ ಕಂಪನಿಗಳಿಗೆ ಕನ್ನಡದಲ್ಲಿ ಪ್ರದರ್ಶಿಸುವ ಬೆಲೆಗಳನ್ನು ಹೊಂದಿರಬೇಕು ಎಂದು ಸೂಚಿಸಲು ನನ್ನ ಸಹೋದ್ಯೋಗಿಗಳಿಗೆ ಹೇಳಿದ್ದೇನೆ ತಿಳಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನಾಂಕ ಬದಲಾವಣೆ

    ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಇದ್ದೇನೆ. ಹಾಸನ, ಬೇಲೂರಿನಲ್ಲಿ‌ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಕೇಂದ್ರದ ಯೋಜನೆಗಳಿಗೆ ಇಲ್ಲಿ ಉತ್ತಮ ಸ್ಪಂದನೆ ಇದೆ. ಕೇಂದ್ರದ ಬಹಳಷ್ಟು ಯೋಜನೆಗಳು ಮಹಿಳಾ ಕೇಂದ್ರಿತವಾಗಿವೆ. ಅನೇಕ ಮಹಿಳೆಯರು ಫಲಾನುಭವಿಗಳಾಗಿ ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ ಎಂದಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ಜನರೇ ನಮ್ಮನ್ನು ಗೆಲ್ಲಿಸ್ತಾರೆ. ಚುನಾವಣೆಗಳು ಬರ್ತವೆ, ಹೋಗ್ತವೆ. ಆದರೆ ಕೇಂದ್ರದ ಯೋಜನೆಗಳು ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಮೋದಿಯವರು ಮತ್ತು ಕೇಂದ್ರದ ಯೋಜನೆಗಳ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ವಿಪಕ್ಷಗಳು ಏನೇ ರಾಜಕೀಯ ಆರೋಪ ಮಾಡಬಹುದು. ನಾವು ಹೆಚ್ಚಿನ ಸಂಸತ್ ಸ್ಥಾನಗಳನ್ನು ಗೆಲ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    petrol

    ರಾಜ್ಯದ ದೇವಸ್ಥಾನಗಳಲ್ಲಿ ರಾಮಮಂದಿರ ಉದ್ಘಾಟನೆ ದಿನ ವಿಶೇಷ ಪೂಜೆಗೆ ಆದೇಶ ವಿಚಾರವಾಗಿ ಮಾತನಾಡಿ, ಇದು ಒಳ್ಳೆಯ ನಡೆ. ನಾನು ಇದನ್ನು ಸ್ವಾಗತ ಮಾಡುತ್ತೇನೆ. ಪೂಜೆಯನ್ನು ದೇವಸ್ಥಾನಗಳಲ್ಲೇ ಮಾಡಬೇಕು. ರೈಲ್ವೆ ಸ್ಟೇಷನ್‌ನಲ್ಲಿ ಮಾಡೋಕೆ ಆಗತ್ತದಾ? ಒಳ್ಳೆಯ ಬೆಳವಣಿಗೆ, ಸನಾತನ ಸಂಸ್ಕೃತಿಯನ್ನು ಅವರು ಒಪ್ಪಿದ್ದಾರೆ ಎಂದರ್ಥ ಎಂದು ರಾಜ್ಯ ಸರ್ಕಾರದ ಕ್ರಮವನ್ನ ಸ್ವಾಗತಿಸಿದ್ದಾರೆ.

    ಭಾರತದಲ್ಲಿ ಮಾತ್ರ ಕಳೆದ ಎರಡು ವರ್ಷದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಆಗಿರೋದು ಎಂದ ಸಚಿವರು, ಲೋಕಸಭೆ ಚುನಾವಣೆ‌ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಕೊಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ – ಜ.22ರಂದು ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

  • ನಮಗೆ ಯಾವತ್ತೂ ಜನರ ಹಿತ ಮೊದಲು – ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ ಬಳಿಕ ಮೋದಿ ಮಾತು

    ನಮಗೆ ಯಾವತ್ತೂ ಜನರ ಹಿತ ಮೊದಲು – ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ ಬಳಿಕ ಮೋದಿ ಮಾತು

    ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ನಮಗೆ ದೇಶದ ಜನರ ಹಿತ ಮೊದಲು ಎಂದಿದ್ದಾರೆ.

    ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‍ಗೆ 9.50 ರೂ. ಮತ್ತು ಪ್ರತಿ ಲೀಟರ್ ಡೀಸೆಲ್‍ಗೆ 6 ರೂ. ಕಡಿತಗೊಳಿಸಿದೆ. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ ಬಳಿಕ ಮೋದಿ ರೀಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ಟ್ವೀಟ್‍ನಲ್ಲಿ ಏನಿದೆ?
    ನಮಗೆ ಯಾವತ್ತೂ ಜನರ ಹಿತ ಮೊದಲು. ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಗಮನಾರ್ಹ ಇಳಿಕೆಗೆ ಸಂಬಂಧಿಸಿದ ನಿರ್ಧಾರಗಳು ವಿವಿಧ ಕ್ಷೇತ್ರಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ನಾಗರಿಕರಿಗೆ ಪರಿಹಾರ ಸಿಗುತ್ತಿದ್ದು, ಮತ್ತಷ್ಟು ಜೀವನವನ್ನು ಸುಲಭಗೊಳಿಸಲು ಸಹಾಯವಾಗಿದೆ. ಉಜ್ವಲಾ ಯೋಜನೆಯು ಕೋಟ್ಯಂತರ ಭಾರತೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದೆ. ಉಜ್ವಲಾ ಸಬ್ಸಿಡಿ ಕುರಿತು ನಾವು ತೆಗೆದುಕೊಂಡಿರುವ ನಿರ್ಧಾರವು ಕುಟುಂಬದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದನ್ನೂ ಓದಿ: ಇದು ದುರಹಂಕಾರವಲ್ಲ, ಆತ್ಮವಿಶ್ವಾಸ: ರಾಹುಲ್‌ಗೆ ವಿದೇಶಾಂಗ ಸಚಿವ ತಿರುಗೇಟು

    ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಶುಲ್ಕ 8 ರೂ. ಹಾಗೂ ಡೀಸೆಲ್ ಮೇಲಿನ ಅಬಕಾರಿ ಶುಲ್ಕ 6 ರೂ. ಕಡಿತಗೊಳಿಸಿದೆ. ಇದರಿಂದ ಪೆಟ್ರೋಲ್ ದರ 9.50 ರೂ ಹಾಗೂ ಡೀಸೆಲ್ ದರ 7 ರೂಪಾಯಿಯಷ್ಟು ಇಳಿಕೆಯಾಗಿದೆ. ಗೃಹಬಳಕೆಯ ಸಬ್ಸಿಡಿ ಹೊಂದಿರುವ ಅಡುಗೆ ಅನಿಲದ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಇದರಿಂದ ಅಡುಗೆ ಅನಿಲದ ದರ ಇಳಿಕೆಯಾಗಿದ್ದು, ಅದರ ನೇರ ಲಾಭ ಪ್ರತಿ ಕುಟುಂಬಕ್ಕೆ ಸಿಗಲಿದೆ. ಈ ಸಂಬಂಧ ಸಮಸ್ತ ನಾಗರಿಕರ ಪರವಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

    ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಬಗ್ಗೆ ವಾಹನಸವಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಸಂತಸ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಏನೋ ದೊಡ್ಡ ಶಾಕ್ ಕೊಡೋಕೆ ಈ ರೀತಿ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮೊದಲು ಜಾಸ್ತಿ ಮಾಡಿ ಇವಾಗ ಕಡಿಮೆ ಮಾಡಿದ್ರೆ ಏನು ಪ್ರಯೋಜನ? ಮೊದಲಿನಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಬೇಕಾಗಿತ್ತು. ಇವಾಗ ಕಡಿಮೆ ಮಾಡಿದ್ರೆ 100 ರೂಪಾಯಿ ಒಳಗಡೆ ಆದರೆ ಅನುಕೂಲ. ದಿನನಿತ್ಯ ಬಳಸುವ ವಸ್ತುಗಳ ಬೆಲೆ ಕೂಡ ಕಡಿಮೆ ಆಗಬೇಕು ಆಗ ಬಡ ಜನರಿಗೆ ಅನುಕೂಲ. ಇವಾಗ ಕಡಿಮೆ ಮಾಡಿ ಸ್ವಲ್ಪ ದಿನಕ್ಕೆ ಜಾಸ್ತಿ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಬೆಲೆ ಏರಿಸುತ್ತಿರುವ ಈ ಸರ್ಕಾರ ಒಂದು ರೀತಿ ಕೋಲ್ಡ್‌ಬ್ಲಡೆಡ್ ಹಂತಕನಿದ್ದಂತೆ: ದಿನೇಶ್ ಗುಂಡೂರಾವ್

    ಬೆಲೆ ಏರಿಸುತ್ತಿರುವ ಈ ಸರ್ಕಾರ ಒಂದು ರೀತಿ ಕೋಲ್ಡ್‌ಬ್ಲಡೆಡ್ ಹಂತಕನಿದ್ದಂತೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಶಾಸಕ ದಿನೇಶ್ ಗುಂಡೂರಾವ್ ಸರ್ಕಾರವನ್ನು ಕೋಲ್ಡ್ ಬ್ಲೆಡ್ಡೆಡ್ ಹಂತಕ ಎಂದು ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಪ್ರತಿದಿನ ತೈಲಬೆಲೆ ಏರುತ್ತಲೇ ಇದೆ. ಕೇವಲ 13 ದಿನದ ಅವಧಿಯಲ್ಲಿ 8 ರೂ. ಏರಿಕೆಯಾಗಿದೆ. ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ತೈಲ ಬೆಲೆ ಏರಿಸುತ್ತಿರುವ ಕೇಂದ್ರ, ಜನರಿಗೆ ಒಂದೇ ಬಾರಿ ವಿಷ ಕೊಟ್ಟು ಸಾಯಿಸದೆ, ಒಂದೊಂದೆ ತೊಟ್ಟು ವಿಷ ಕೊಟ್ಟು ಸಾಯಿಸುವ ಪ್ರಯೋಗ ಮಾಡುತ್ತಿದೆ. ಕರುಣೆಯಿಲ್ಲದ ಈ ಸರ್ಕಾರ ಒಂದು ರೀತಿ ಕೋಲ್ಡ್‍ಬ್ಲಡೆಡ್ ಹಂತಕನಿದ್ದಂತೆ.

    ತೈಲ ಬೆಲೆ ನಿಯಂತ್ರಣ ನಮ್ಮ ಕೈಲಿಲ್ಲ ಎಂದು ಈಗ ಹೇಳುತ್ತಿರುವ ಕೇಂದ್ರ, ಕಳೆದ ನಾಲ್ಕೂವರೆ ತಿಂಗಳು ತೈಲ ಬೆಲೆ ಏರದೆ ತಟಸ್ಥವಾಗಿದ್ದು ಯಾಕೆ.? ಪಂಚರಾಜ್ಯ ಚುನಾವಣೆಯ ಕಾರಣಕ್ಕೆ ತೈಲ ಬೆಲೆ ಏರಿಕೆಯಾಗದಂತೆ ಕೇಂದ್ರ ನೋಡಿಕೊಂಡಿತ್ತು. ಈಗ ಚುನಾವಣೆ ಮುಗಿದಿದೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ ಈಗ ತೈಲಬೆಲೆಯನ್ನು ಏರಿಸುತ್ತಿದೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

    ತೈಲಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೈಲ ಬಾಂಡ್‍ನ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ತೈಲಬಾಂಡ್‍ಗೆ ಕೊಡಬೇಕಾಗಿರುವ ಸಾಲ 2 ಲಕ್ಷದ 20 ಸಾವಿರ ಕೋಟಿ. ಕಳೆದ 8 ವರ್ಷಗಳಲ್ಲಿ ಹೆಚ್ಚುವರಿ ಅಬಕಾರಿ ಸುಂಕದ ಮೂಲಕ ಕೇಂದ್ರ ವಸೂಲಿ ಮಾಡಿರುವುದು 26 ಲಕ್ಷ ಕೋಟಿಯಾಗಿದೆ. ಆ 26 ಲಕ್ಷ ಕೋಟಿ ಯಾರ ಉದ್ಧಾರಕ್ಕೆ ಖರ್ಚಾಯ್ತು.? ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ: ಶ್ರೀನಿವಾಸ್ ಮಾನೆ

    ತೈಲದ ಮೇಲೆ ಮನಸ್ಸಿಗೆ ಬಂದಂತೆ ಅಬಕಾರಿ ಸುಂಕ ಏರಿಸಿರುವ ಕೇಂದ್ರ, ದೇಶದ ಜನರನ್ನು ಅಕ್ಷರಶಃ ದರೋಡೆ ಮಾಡುತ್ತಿದೆ. ತಲೆಯಲ್ಲಿ ಮೆದುಳಿಲ್ಲದ ಕೆಲ ಭಕ್ತ ಶಿಖಾಮಣಿಗಳು ಸಾಮಾಜಿಕ ಜಾಲತಾಣದಲ್ಲಿ ತೈಲ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಕೇಂದ್ರದ ಹಗಲು ದರೋಡೆಗೆ ಅಂಗೀಕಾರದ ಮುದ್ರೆ ಒತ್ತಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇದು ದೇಶದ ದುರಂತ ಎಂದು ಟ್ವೀಟ್‍ನಲ್ಲಿ ಕಿಡಿಕಾರಿದ್ದಾರೆ.

  • ನಿರಂತರ 7 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ

    ನಿರಂತರ 7 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ

    ನವದೆಹಲಿ: ಕಳೆದ ಏಳು ದಿನಗಳಿಂದ ಇಂಧನ ಬೆಲೆಯನ್ನು ನಿರಂತರವಾಗಿ ಆರು ಬಾರಿ ಏರಿಕೆ ಮಾಡಲಾಗಿದೆ. ಪರಿಣಾಮ ಕಳೆದೊಂದು ವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು 3.31 ರೂ. ಹಾಗೂ ಡೀಸೆಲ್ 3.42 ರೂ. ಏರಿಕೆಯಾಗಿದೆ.

    ದೇಶಾದ್ಯಂತ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 59 ಪೈಸೆ ಮತ್ತು ಡೀಸೆಲ್‍ಗೆ 58 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ ಬೆಂಗಳೂರಿನಲ್ಲಿ 77.57 ರೂ., ದೆಹಲಿಯಲ್ಲಿ 75.16 ರೂ., ಮುಂಬೈ 82.10 ರೂ., ಚೆನ್ನೈ 78.99 ರೂ. ಮತ್ತು ಕೋಲ್ಕತಾ 77.05 ರೂ. ಬೆಲೆ ನಿಗಧಿಯಾಗಿದೆ.

    ಪ್ರತಿ ಲೀಟರ್ ಡೀಸೆಲ್ ದರ ಬೆಂಗಳೂರಿನಲ್ಲಿ 69.22 ರೂ., ದೆಹಲಿಯಲ್ಲಿ 73.39ರೂ., ಮುಂಬೈ 72.03 ರೂ., ಚೆನ್ನೈ 71.64 ರೂ. ಮತ್ತು ಕೋಲ್ಕತಾ 69.23 ರೂ. ಬೆಲೆ ನಿಗಧಿಯಾಗಿದೆ.

    ಪೆಟ್ರೋಲ್ ಮತ್ತು ಡೀಸೆಲ್ ದರವು 12 ವಾರಗಳ ವಿರಾಮದ ನಂತರ ಸತತ ಆರು ದಿನಗಳಲ್ಲಿ ಏರಿಕೆ ಕಂಡಿದೆ. ಹೆಚ್ಚಿನ ದೇಶೀಯ ಸುಂಕದ ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ಮತ್ತಷ್ಟು ಏರಿಕೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಡಾಲರ್ ಎದುರು ರೂಪಾಯಿ ದರದ ಕುಸಿತವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ.

  • ತೈಲ ಬೆಲೆ ಏರಿಕೆ ಎಚ್ಚರಿಕೆ!

    ತೈಲ ಬೆಲೆ ಏರಿಕೆ ಎಚ್ಚರಿಕೆ!

    ಬೆಂಗಳೂರು: ಅಮೆರಿಕ-ಇರಾನ್ ನಡುವಿನ ಪ್ರಕ್ಷುಬ್ದ ವಾತಾವರಣ ಭಾರತದ ಮೇಲೂ ಬೀಳಲಿದೆ. ಇರಾನ್-ಅಮೆರಿಕ ಕ್ಷಿಪ್ರ ದಾಳಿ ಯುದ್ಧದ ಕಡೆ ತಿರುಗಿದ್ದರೆ, ಆರ್ಥಿಕ ಹೊಡೆತ ಎದುರಾಗಲಿದೆ ಎಂದು ವಿಂಗ್ ಕಮಾಂಡರ್ ಅತ್ರಿ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ ಅವರು, ಭಾರತದ ಆರ್ಥಿಕತೆಯ ಮೇಲೆ ಈ ಬೆಳವಣಿಗೆ ಹೆಚ್ಚು ಪರಿಣಾಮ ಬೀರಲಿದೆ. ಸದ್ಯ ಭಾರತ ಆರ್ಥಿಕವಾಗಿ ಕುಂಟುತ್ತಾ ಸಾಗಿದೆ. ಎರಡು ರಾಷ್ಟ್ರಗಳ ನಡುವೆ ಯುದ್ಧ ಪರಿಸ್ಥಿತಿ ಎದುರಾದರೆ ಇಡೀ ಪ್ರಪಂಚಕ್ಕೆ ಕಷ್ಟ ಎದುರಾಗುತ್ತದೆ. ಕಚ್ಚಾ ತೈಲದ ಬೆಲೆ ಭಾರೀ ದುಬಾರಿಯಾಗಲಿದೆ. ಯುದ್ಧ ಕಾಲ ಹಣಕಾಸಿನ ವೆಚ್ಚ ಹೆಚ್ಚಾಗಲಿದ್ದು, ಆಗ ಇರಾನ್ ತನ್ನ ರಫ್ತಿನ ಮೇಲಿನ ದರ ಏರಿಕೆ ಮಾಡಲಿದೆ. ಇದರ ಪರಿಣಾಮ ತೈಲ ಬೆಲೆಯೂ ಹೆಚ್ಚಾಗಲಿದೆ ಎಂದು ತಿಳಿಸಿದರು.

    ಹೀಗಾಗಿ ಇದನ್ನ ತಪ್ಪಿಸಲು ಪ್ರಧಾನಿ ಮೋದಿ ಶಾಂತಿದೂತನಂತೆ ಪ್ರವೇಶ ಮಾಡಬೇಕಿದೆ. ಇರಾನ್-ಅಮೆರಿಕ ಎರಡು ರಾಷ್ಟ್ರಗಳಲ್ಲಿ ಯಾರದ್ದು ತಪ್ಪಿದೆ ಎನ್ನುವುದನ್ನು ಒಪ್ಪಿಕೊಂಡರೆ ಅವರು ದೊಡ್ಡವರಾಗುತ್ತಾರೆ. ಸದ್ಯ ಭಾರತದ ಮಾತಿಗೆ ಬಾರೀ ಬೆಲೆಯಿದ್ದು, ಕೂಡಲೇ ಭಾರತ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ರಾಜ್ಯದ ಜನರಿಗೆ ಸೋಮವಾರ ಬಂಪರ್ ಗಿಫ್ಟ್?

    ರಾಜ್ಯದ ಜನರಿಗೆ ಸೋಮವಾರ ಬಂಪರ್ ಗಿಫ್ಟ್?

    ಬೆಂಗಳೂರು: ರಾಜಸ್ಥಾನ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅನುಸರಿಸಿದ್ದು ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆಯಿದೆ.

    ಸಿಎಂ ಕುಮಾರಸ್ವಾಮಿ ಅವರು ಸೋಮವಾರದಿಂದ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಮೇಲಿನ ಸೆಸ್ ಕಡಿತಗೊಳಿಸಿ ಬಂಪರ್ ಗಿಫ್ಟ್ ಕೊಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸಮ್ಮಿಶ್ರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಹೆಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು. ಆದರೆ ಬಂದ್ ದಿನವೇ ಸೆಸ್ ಇಳಿಸುವ ಸುಳಿವನ್ನು ನೀಡಿದ್ದರು. ಇದರಂತೆ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರಿಂದ 3 ರೂ. ಇಳಿಕೆಯಾಗುವ ಸಾಧ್ಯತೆಯಿದೆ.

    ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರ ವಿಧಿಸುವ ಸೆಸ್ ಕಡಿಮೆಯಾದರೂ ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಿರುವ ಕಾರಣ ಸೆಸ್ ಕಡಿಮೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇತ್ತ ತೈಲ ಬೆಲೆ ನಿತ್ಯ ಹೆಚ್ಚಾಗುತ್ತಿದ್ದು ಇಂದು ಕೂಡ ಲೀಟರ್ ಪೆಟ್ರೋಲ್‍ಗೆ 28 ಪೈಸೆ, ಲೀಟರ್ ಡೀಸೆಲ್‍ಗೆ 18 ಪೈಸೆ ಏರಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಧನ ಬೆಲೆ ಏರಿಕೆ ಸ್ಕೂಟರ್ ಗೆ  ಬೆಂಕಿ ಹಚ್ಚಿ ಪ್ರತಿಭಟನೆ

    ಇಂಧನ ಬೆಲೆ ಏರಿಕೆ ಸ್ಕೂಟರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ

    ಹೈದರಾಬಾದ್: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿಯೂ ತೆಲಗು ದೇಶಂ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

    ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ಟಿಡಿಪಿ ಕಾರ್ಯಕರ್ತರು ತಮ್ಮ ಸ್ಕೂಟರ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದ್ರು. ಕಾರ್ಯಕರ್ತರು ಸ್ಕೂಟರ್‍ಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈಗಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗಿದೆ. ಈ ಮಧ್ಯೆ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚುತ್ತಲೇ ಇದ್ದು, ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‍ಗೆ 3ರಿಂದ 4 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.12 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.25 ರೂ. ಇದೆ.

    2 ವರ್ಷದ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 40 ಡಾಲರ್(ಅಂದಾಜು 2,700 ರೂ.) ಇತ್ತು. ಆದರೆ ಈಗ ದುಪ್ಪಟ್ಟು ಆಗಿದ್ದು 79 ಡಾಲರ್(ಅಂದಾಜು 5,300 ರೂ.) ಆಗಿದೆ.

    ಬೆಲೆ ಏರಿಕೆ ಆಗುತ್ತಿರೋದು ಯಾಕೆ?
    ಈ ಹಿಂದೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ(ಒಪೆಕ್) ನಡುವೆ ಶೀತಲ ಸಮರವಿತ್ತು. ಹೀಗಾಗಿ ಈ ರಾಷ್ಟ್ರಗಳು ತೈಲ ಉತ್ಪಾದನೆಗೆ ಯಾವುದೇ ಮಿತಿ ಹಾಕಿರಲಿಲ್ಲ. ಆದರೆ ಈಗ ಈ ರಾಷ್ಟ್ರಗಳ ಮಿತಿ ಹಾಕಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿನವೂ ಏರಿಕೆಯಾಗುತ್ತಿದೆ. ಎಸ್‍ಆಂಡ್‍ಪಿ ಗ್ಲೋಬಲ್ ಪ್ಯಾಂಟ್ ಅಧ್ಯಯನದ ಪ್ರಕಾರ ತೈಲ ಉತ್ಪಾದಿಸುವ 14 ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ಹಿಂದೆ ಪ್ರತಿದಿನ 32 ದಶಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದರೆ ಏಪ್ರಿಲ್ ನಲ್ಲಿ 1.40 ದಶಲಕ್ಷ ಕಡಿಮೆಯಾಗಿದೆ. ವಿಶ್ವದೆಲ್ಲೆಡೆ ಭಾರೀ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ಜೂನ್ 22 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ತೈಲ ಉತ್ಪಾನೆಯ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.