ಕಾರವಾರ: ಹಣ್ಣಿನ ವಾಹನದಲ್ಲಿ ಗೋವಿನ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಶಿರಾಲಿ ಚೆಕ್ ಪೋಸ್ಟ್ ಸಿಬ್ಬಂದಿ ಗೂಡ್ಸ್ ವಾಹನ ಸಹಿತ ಮೂವರನ್ನು ಬಂಧಿಸಿದ್ದಾರೆ.
ಹೊನ್ನಾವರದಿಂದ ಭಟ್ಕಳದ ಕಡೆಗೆ ಕಲ್ಲಂಗಡಿ ಹಣ್ಣುಗಳೂ ಸೇರಿದಂತೆ ಇತರೇ ಹಣ್ಣುಗಳನ್ನು ತುಂಬಿಕೊಂಡು ಅದರ ಅಡಿಯಲ್ಲಿ ಸುಮಾರು 500 ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು, ವಾಹನವು ಶಿರಾಲಿ ಚೆಕ್ ಪೋಸ್ಟ್ ಹತ್ತಿರ ತಲುಪುತ್ತಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ತುಂಬಿದ್ದ ಹಣ್ಣುಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಗೋವಿನ ಮಾಂಸ ಪತ್ತೆಯಾಗಿದೆ. ಇದನ್ನೂ ಓದಿ: ಕಾರವಾರ ಸಮುದ್ರದ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ!
ಗೂಡ್ಸ್ ವಾಹನದಲ್ಲಿ ಗೋವಿನ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೌಲಾ ಅಲಿ ಬಾಷಾ ಸಾಬ್ ತೋಟದ್ ಹಾನಗಲ್, ಜೀಲಾನಿ ಗೌಸ್ ಮೊಹಿದ್ದೀನ್ ಹಾಗೂ ಭಟ್ಕಳದ ಮುಝಾಫರ್ ಎನ್ನುವವರನ್ನು ಬಂಧಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಇದು ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕರ ಕಥೆ. ಪಾಠದ ಜೊತೆಗೆ ಬೆಳಗ್ಗೆ ಹಸಿವಿನಿಂದ ಶಾಲೆಗೆ ಬರುವ ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿಯೇ ಬೆಳಗಿನ ಉಪಹಾರದ ವ್ಯವಸ್ಥೆಯನ್ನ ಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ್ ಬಡ ಮಕ್ಕಳಿಗಾಗಿ ಉಪಹಾರ ಆರಂಭಿಸಿದ್ದಾರೆ. ಈ ಶಾಲೆಗೆ ಬರುವ ಮಕ್ಕಳು ಬಡ ಕುಟುಂಬದವರು. ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಬರುತ್ತಿರೋದು ರಾಮಚಂದ್ರ ಅವರ ಗಮನಕ್ಕೆ ಬಂದಿದೆ. ಪೊಷಕರನ್ನು ಕರೆದು ತಿಳಿ ಹೇಳಿದರೂ ಹಲವು ಮಕ್ಕಳು ಹಸಿವಿನಿಂದಲೇ ಶಾಲೆಗೆ ಬರುತ್ತಿದ್ದರು. ಇದನ್ನು ಅರಿತ ರಾಮಚಂದ್ರ ನಾಯ್ಕ್, ಸರ್ಕಾರ ಮಧ್ಯಾಹ್ನ ನೀಡುವ ಬಿಸಿಯೂಟದ ಜೊತೆಗೆ ತಮ್ಮ ಹಣದ ಮೂಲಕ ಬೆಳಗಿನ ಉಪಹಾರ ಸಹ ಪ್ರಾರಂಭಿಸಿದರು.
ರಾಮಚಂದ್ರ ಗುರುಗಳ ಕಾರ್ಯ ನೋಡಿ ಒಂದಿಷ್ಟು ದಾನಿಗಳು ಸಹ ಸಹಾಯ ಹಸ್ತ ನೀಡಿದ್ದಾರೆ. ಶಾಲೆಗೆ ಬರುವ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಗಮನಿಸಿದ ಅವರು, ಪ್ರತಿ ದಿನ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ಖರೀದಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಕೊರೊನಾ ಬಂದಿದ್ದರಿಂದ ಶಾಲೆಗೆ ರಜೆ ನೀಡಿದ್ರೂ ಪ್ರತಿ ದಿನ ತಮ್ಮ ಬೈಕ್ ನಲ್ಲಿ ಮಕ್ಕಳ ಮನೆ ಮನೆಗೆ ತೆರಳಿ ಬಾಳೆಹಣ್ಣು ನೀಡುತ್ತಾ ಬಂದಿದ್ದಾರೆ. ವಿದ್ಯಾಗಮ ಆರಂಭಕ್ಕೂ ತಿಂಗಳ ಮುಂಚೆಯೇ ಕೋವಿಡ್ ಸುರಕ್ಷಾ ಕ್ರಮದೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಮಕ್ಕಳಿಗೆ ಮನೆ ಮನೆಗೆ ತೆರಳಿ ಪಾಠ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.
ಹಾಸನ ಜಿಲ್ಲೆಯಿಂದ 201 ರಲ್ಲಿ ಶಾಲೆಗೆ ವರ್ಗಾವಣೆಗೊಂಡಿದ್ದ ರಾಮಚಂದ್ರ ಗುರುಗಳು ಒಂದು ವರ್ಷದಿಂದ ಬಡ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಜೊತೆಗೆ ಹಣ್ಣುಗಳನ್ನು ಸಹ ನೀಡುತ್ತಾ ಬಂದಿದ್ದಾರೆ. ಇವರ ಈ ಕಾರ್ಯದಿಂದ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಸಹ ಏರಿಕೆಯಾಗಿದೆ. ಇದಲ್ಲದೇ ಇವರು ಪ್ರತಿ ತಿಂಗಳ ಸಂಬಳದಲ್ಲಿ ದೇಶದ ರಕ್ಷಣಾ ನಿಧಿ, ಪ್ರಧಾನ ಮಂತ್ರಿ ಹಾಗೂ ಸಿಎಂ ನಿಧಿಗೆ ಹಣ ಪಾವತಿಮಾಡುವ ಮೂಲಕ ದೇಶಾಭಿಮಾನ ಮೆರೆಯುತ್ತಿದ್ದಾರೆ.
ಮಕ್ಕಳು ಶಾಲೆಗೆ ಬಂದಾಗ ಹಸಿವಿನಿಂದ ಹೊಟ್ಟೆ ಹಿಡಿದು ಕೂರುವುದು ಗಮನಕ್ಕೆ ಬಂತು. ಆಗ ಮಕ್ಕಳಿಗೆ ವಿಚಾರಿಸಿದಾಗ ಬೆಳಗಿನ ಉಪಹಾರ ಮಾಡದೇ ಬರುತ್ತಿರುವುದು ಗಮನಕ್ಕೆ ಬಂತು. ಪೊಷಕರನ್ನು ವಿಚಾರಿಸಿದಾಗ ಇವರ ಸಮಸ್ಯೆ ಅರಿವಿಗೆ ಬಂದು ಮಕ್ಕಳು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ನನ್ನ ಸ್ವಂತ ಹಣದಿಂದ ಬೆಳಗಿನ ಉಪಹಾರ ಪ್ರಾರಂಭಿಸಿದೆ. ನಮ್ಮ ಶಾಲೆಯ ಮಕ್ಕಳಲ್ಲದೇ ಅಂಗನವಾಡಿ ಹಾಗೂ ಇತರೆ ಮಕ್ಕಳೂ ಇಲ್ಲಿ ಬಂದು ಉಪಹಾರ ಸೇವಿಸುತ್ತಾರೆ. ಅಪೌಷ್ಟಿಕತೆ ನೀಗಿಸಲು ಹಣ್ಣುಗಳನ್ನು ನೀಡುತ್ತಿದ್ದೇನೆ ಎಂದು ಶಿಕ್ಷಕ ರಾಮಚಂದ್ರ ನಾಯ್ಕ್ ಹೇಳುತ್ತಾರೆ.
ಈ ಹಿಂದೆಯೂ ಇವರು ಕಾರ್ಯನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುತುಗನ್ನೆ ಶಾಲೆಯಲ್ಲಿ ಸಹ ಮಕ್ಕಳ ಅಪೌಷ್ಟಿಕತೆ ನೀಗಿಸಲು ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ನೀಡುತ್ತಿದ್ದರು. ಇಲ್ಲಿಯೂ ಸಹ ಬಡ ಮಕ್ಕಳ ಸಮಸ್ಯೆ ಅರಿತು ಬೆಳಗಿನ ಉಪಹಾರ ಹಾಗೂ ಹಣ್ಣುಗಳನ್ನು ನೀಡುವ ಮೂಲಕ ಬಡ ಮಕ್ಕಳ ಜೊತೆ ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕಲಬುರಗಿ: ಹಣ್ಣಿನ ವ್ಯಾಪಾರಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಅಬ್ದುಲ್ ಖದೀರ್(32) ಆತ್ಮಹತ್ಯೆ ಮಾಡಿಕೊಂಡ ಹಣ್ಣಿನ ವ್ಯಾಪಾರಿ. ಈ ಘಟನೆ ಕಲಬುರಗಿಯ ಕಂಟೈನ್ಮೆಂಟ್ ಝೋನ್ ಮೋಮಿನಪುರ ಬಡಾವಣೆಯಲ್ಲಿ ನಡೆದಿದೆ.
ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಬ್ದುಲ್ ನನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಮೊಮ್ಮಿನಪುರ ಬಡಾವಣೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಇತ್ತ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣ್ಣಿನ ವ್ಯಾಪಾರ ಮಾಡಲಾಗದೆ ವ್ಯಾಪಾರಿ ಕಂಗಾಲಾಗಿದ್ದನು. ಹೀಗಾಗಿ ತನ್ನ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ತರಕಾರಿ, ಹಣ್ಣು ಬೆಳೆಗಾರರು ಹಾಗೂ ಕೈಮಗ್ಗ ಕಾರ್ಮಿಕರಿಗಾಗಿ ಒಟ್ಟು 162 ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದ್ದಾರೆ.
ತರಕಾರಿ, ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂಪಾಯಿನಂತೆ ಒಟ್ಟು 137 ಕೋಟಿ ರೂ. ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರದಿಂದ ಘೋಷಣೆ ಮಾಡಲಾಗಿದೆ. ಇದು 7 ಬಗೆಯ ಹಣ್ಣುಗಳು, 10 ತರಕಾರಿ ಬೆಳೆಗಳಿಗೆ ಸಿಮೀತವಾಗಿದೆ.
ಬಾಳೆ, ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರಾ, ಅನಾನಸ್, ಕಲ್ಲಂಗಡಿ/ ಕರ್ಜೂರಾ, ಬೋರೆ/ ಬೆಣ್ಣೆ ಹಣ್ಣು, 10 ತರಕಾರಿ ಬೆಳೆಗಳಾದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂ ಕೋಸು, ಎಲೆ ಕೋಸು, ಸಿಹಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪುಗಳು/ಹೀರೇಕಾಯಿ ಹಾಗೂ ತೊಂಡೆ ಕಾಯಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ನೀಡಲಾಗುತ್ತದೆ.
ಇತ್ತ 1.62 ಲಕ್ಷ ವಿದ್ಯುತ್ ವಿದ್ಯುತ್ ಚಾಲಿತ ಕೈಮಗ್ಗ, ಹ್ಯಾಂಡ್‍ಲೂಮ್ ಘಟಕಗಳ ಕಾರ್ಮಿಕರ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಇಲ್ಲಿ ಕೆಲಸ ಮಾಡು ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ.ನಂತೆ ಒಟ್ಟು 25 ಕೋಟಿ ರೂ. ನೀಡಲು ನಿರ್ಧರಿಸಿದೆ.
ಈ ಹಿಂದೆ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಹೀಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಹಣ ನೀಡಲಿದೆ. ರೈತರು ಎಷ್ಟೇ ಹೆಕ್ಟೇರ್ ಗಳಲ್ಲಿ ಹೂ ಬೆಳೆದಿದ್ದರೂ ಸರ್ಕಾರ ಪರಿಹಾರ ನೀಡುವುದು ಒಂದು ಹೆಕ್ಟೇರ್‍ಗೆ ಮಾತ್ರ ಎಂದು ಹೇಳಿದ್ದರು.
ಈ ಬೆನ್ನಲ್ಲೇ ತರಕಾರಿ ಹಾಗೂ ಹಣ್ಣಿನ ಬೆಳೆಗೂ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಸದ್ಯ ಸಿಎಂ 50,083 ಹೆಕ್ಟೇರ್ ಗಳಲ್ಲಿ ಬೆಳೆದ ತರಕಾರಿ ಹಾಗೂ 41,054 ಹೆಕ್ಟೇರ್ ಗಳಲ್ಲಿ ಬೆಳೆದ ಹಣ್ಣು ಬೆಳೆಗಾಗರಿಗೆ ಪ್ರತಿ ಹೆಕ್ಟೇರ್ ನಂತೆ 15 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ರಾಜ್ಯ ಸಕಾರವು ಈ ಹಿಂದೆ 1,610 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿತ್ತು. ಈಗ 162 ಕೋಟಿ ರೂ. ಪ್ಯಾಕೇಜ್ ಪ್ರಕಟಿಸುವ ಮೂಲಕ ಒಟ್ಟು 1,772 ಕೋಟಿ ರೂ.ಗೆ ಹೆಚ್ಚಳವಾಗಿದೆ.
ಚಿತ್ರದುರ್ಗ: ಸತತ ಬರದಿಂದ ಕಂಗಾಲಾಗಿದ್ದ ರೈತರು ಇದೀಗ ಕೊರೊನಾ ಹರಡದಂತೆ ದಿಢೀರ್ ಆದಂತಹ ಭಾರತ ಲಾಕ್ ಡೌನ್ ನಿಂದಾಗಿ ತಾವು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲಾಗದೆ ಜಮೀನಿನಲ್ಲೇ ಕೊಳೆತು ಹೋಗುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ವೀಕ್ಷಿಸಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯ, ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಬರುವ ರೈತರು ತಾವು ಬೆಳೆದ ತೋಟಗಾರಿಕಾ ಉನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್‍ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ಜಯ್ಯಣ್ಣ ಹಾಗು ನಾಗಣ್ಣ ಎಂಬ ರೈತರು ಪ್ರತ್ಯೆಕವಾಗಿ ತಲಾ 3 ಎಕರೆ ಜಮೀನಿನಲ್ಲಿ ಸುಮಾರು 40 ಟನ್ ಕರ್ಬೂಜ ಬೆಳೆದಿದ್ದರು. ಅಲ್ಲದೆ ಹಾಲಗೊಂಡನಹಳ್ಳಿಯಲ್ಲಿ ತಿಪ್ಪೇಸ್ವಾಮಿ ಸಹ ತಮ್ಮ 4 ಎಕರೆ ಜಮೀನನಲ್ಲಿ ಸುಮಾರು 50 ಟನ್ ಕರ್ಬೂಜ ಬೆಳೆದಿದ್ದು, ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಗುರುಸಿದ್ದಪ್ಪ ಮೂರು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೈ ಸುಟ್ಕೊಂಡಿದ್ದಾರೆ.
ಈ ಬಾರಿ ಅತಿ ಕಡಿಮೆ ಅವಧಿ ಅಂದರೆ ಕೇವಲ 60 ದಿನಗಳಲ್ಲಿ ಬೆಳೆ ಕೈಗೆ ಬರುವ ಬೆಳೆ ಅಂತ ಬಿತ್ತನೆ ಮಾಡಿದ್ದರು. ಅದರಲ್ಲೂ ಯುಗಾದಿ, ರಾಮನವಾಮಿ ಹಾಗೂ ಜಾತ್ರೆಗಳ ಸೀಸನ್ ಇರೋದ್ರಿಂದ ಉತ್ತಮ ಬೆಲೆ ಸಿಗುತ್ತದೆ ಎಂಬ ನಿಟ್ಟಿನಲ್ಲಿ ಅಪಾರ ಲಾಭದ ನಿರೀಕ್ಷೆಯಲ್ಲಿ ಅನ್ನದಾತರು ಇದ್ದರು. ಆದರೆ ಕೊರೊನಾ ವೈರಸ್ ಅವರ ಆಸೆಗೆ ತಣ್ಣೀರೆರಚಿದೆ ಅಂತ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ಬಳಿಕ ಅನ್ನದಾತರ ಸಂಕಷ್ಟ ಅರಿತ ಜಿಲ್ಲಾಡಳಿತ ಉತ್ತಮ ನಿರ್ಧಾರ ಕೈಗೊಂಡಿದೆ.
ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ತಾವು ಬೆಳೆದ ಅಥವಾ ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಆಯಾ ಮಾರುಕಟ್ಟೆಗೆ, ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗಿದೆ. ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಸಗಟು ವ್ಯಾಪಾರಿಗಳು ಖರೀದಿಸಿ ಮಾರಾಟ ಮಾಡಲು ಕೂಡ ಅನುಮತಿ ನೀಡಲಾಗಿದೆ. ಸಗಟು ವ್ಯಾಪಾರಿಗಳು ತೋಟಗಾರಿಕೆಗೆ ಸಂಬಂಧಿಸಿದ ಕೂಲಿಕಾರರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಬೇಕು. ಮತ್ತು ಕಡ್ಡಾಯವಾಗಿ ಇವುಗಳನ್ನು ಉಪಯೋಗಿಸುವ ಮೂಲಕ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರಾಟ ವ್ಯವಹಾರ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಬೆಂಗಳೂರು: ದಸರಾ ಹಬ್ಬಕ್ಕೆ ಈಗಾಗಲೇ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಸೋಮವಾರ ಹಾಗೂ ಮಂಗಳವಾರ ನಡೆಯುವ ಹಬ್ಬಕ್ಕೆ ಈಗಾಗಲೇ, ಭರ್ಜರಿ ಪ್ರಿಪರೇಷನ್ ನಡೆಸಲಾಗುತ್ತಿದೆ. ಇದರ ನಡುವೆ ಬೆಲೆ ಏರಿಕೆಯ ಬಿಸಿ ಜನರನ್ನು ಕಾಡುತ್ತಿದ್ದು, ದುಬಾರಿ ರೇಟ್ ಗೆ ಜನರು ಹೈರಾಣಾಗಿದ್ದಾರೆ.
ಸೋಮವಾರ ಆಯುಧ ಪೂಜೆ ಇದ್ದು, ಮಂಗಳವಾರ ವಿಜಯದಶಮಿ ಇದೆ. ಇವೆರಡು ದಿನ ನವದುರ್ಗೆಯರ ಅರ್ಚನೆ ಮಾಡಿ, ವಾಹನಗಳಿಗೆ ಪೂಜೆ ಮಾಡುವ ಉತ್ಸಾಹದಲ್ಲಿ ಜನರಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ವಾಹನಗಳಿಗೆ, ಆಯುಧಗಳಿಗೆ ದೃಷ್ಟಿ ತೆಗೆಯಲು ಕುಂಬಳಕಾಯಿ ವ್ಯಾಪಾರ ದುಪ್ಪಟ್ಟಾಗಿದ್ದು, ಕೆ.ಜಿಗೆ 150ರೂ ಆಗಿದೆ. ನವದುರ್ಗೆಯರ ಪೂಜೆಗೆ ಬೇಕಾಗುವ ಹೂವು ಹಾಗೂ ಹಣ್ಣುಗಳ ಬೆಲೆ ದುಬಾರಿಯಾಗಿದೆ.
ಗಗನಕ್ಕೇರಿದ ಹೂವುಗಳ ಬೆಲೆ;
ಕನಕಾಂಬರ ಹಿಂದಿನ ದರ ಕೆ.ಜಿಗೆ 600 ರೂ. ಇದ್ದು, ಈಗಿನ ದರ 1500 ರೂ. ಆಗಿದೆ. ದುಂಡುಮಲ್ಲಿಗೆ ಮೊದಲು ಕೆಜಿಗೆ 400ರೂ. ಇತ್ತು, ಆದರೆ ಈಗ 1,000ರೂ. ಆಗಿದೆ. ಕಾಕಡ ಹಿಂದಿನ ದರ 200ರೂ, ಈಗ 500ರೂ. ಆಗಿದೆ. ಜಾಜಿ ಮಲ್ಲಿಗೆ 150 ರೂ. ಆಗಿದ್ದು, ಈಗ 200ರೂ. ಆಗಿದೆ. ಸೇವಂತಿಗೆ 40 ರೂ. ಇತ್ತು, ಆದರೆ ಈಗ 150 ರೂ. ಆಗಿದೆ. ಸುಗಂಧರಾಜ ಮೊದಲು 100ರೂ. ಇತ್ತು, ಆದರೆ ಈಗ 300ರೂ. ಆಗಿದೆ. ಗುಲಾಬಿ ಹೂವಿನ ಹಿಂದಿನ ದರ 150 ಇದ್ದು, ಈಗಿನ ದರ 200ರೂ. ಆಗಿದೆ. ತುಳಸಿ ಒಂದು ಮಾರಿಗೆ 50ರೂ. ಆಗಿದ್ದು, ಮಾವಿನ ಎಲೆ ಒಂದು ಕಟ್ಟಿಗೆ 40ರೂ. ಆಗಿದೆ.
ಹಣ್ಣುಗಳ ಬೆಲೆಗಳನ್ನು ನೋಡೋದಾದರೆ;
ಸೇಬುಹಣ್ಣು ಮೊದಲು 80ರೂ. ಇದ್ದು, ಈಗಿನ ಬೆಲೆ 120ರೂ. ಆಗಿದೆ. ಕಿತ್ತಳೆ ಹಿಂದಿನ ದರ 60 ರೂ. ಇದ್ದು, ಈಗ 80ರೂ. ಆಗಿದೆ. ಮೊಸಂಬಿ ಮೊದಲು 70ರೂ. ಇದ್ದು, ಈಗ 100ರೂ. ಹೆಚ್ಚಾಗಿದೆ. ಬಾಳೆಹಣ್ಣಿನ ಹಿಂದಿನ ದರ 50ರೂ, ಆದರೆ ಈಗ 80ರೂ. ಆಗಿದೆ. ಅನಾನಸ್ ಮೊದಲು 30ರೂ. ಇದ್ದು, ಈಗ 60 ರೂ. ಆಗಿದೆ. ದ್ರಾಕ್ಷಿ ಹಣ್ಣಿನ ಹಿಂದಿನ ದರ 90ರೂ. ಇದ್ದು, ಈಗ 120ರೂ. ಆಗಿದೆ. ಅಲ್ಲದೆ ದಾಳಿಂಬೆ ಮೊದಲು 80 ರೂ. ಇತ್ತು, ಆದರೆ ಈಗ 100ರೂ. ಆಗಿದೆ.
ಬೆಲೆ ಏರಿಕೆಗೆ ಕಾರಣಗಳು; * ಅತಿಯಾದ ಮಳೆ * ಹೂವು-ಹಣ್ಣುಗಳ ಇಳುವರಿ ಕಡಿಮೆಯಾಗಿರುವುದು * ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಸಪ್ಲೈ ಆಗದೇ ಇರುವುದು
ಬೀದರ್: ಬರಡು ಭೂಮಿಯಲ್ಲಿ ಮಿಶ್ರ ಬಂಪರ್ ಹಣ್ಣು ಗಿಡಗಳನ್ನು ಬೆಳೆದು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇತರ ರೈತರಿಗೆ ಶಿಕ್ಷಕ ಕಮ್ ರೈತ ಮಾದರಿಯಾಗಿದ್ದಾರೆ. ನಾಲ್ಕು ಎಕರೆ ಭೂಮಿಯಲ್ಲಿ ಹತ್ತಾರು ವಿವಿಧ ಹಣ್ಣುಗಳನ್ನು ಬೆಳೆದು ಪ್ರತಿ ವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಗ್ರಾಮದ ಬಳಿಯ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಿ ಶಿಕ್ಷಕ ಕಮ್ ಮಾದರಿ ರೈತ ಸಾಧನೆ ಮಾಡಿದ್ದಾರೆ. ಭಾಲ್ಕಿ ಪಟ್ಟಣ್ಣದ ಖಾಸಗಿ ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿರುವ ಗಣಪತಿ ಬೋಚ್ರೆ ಸತತ ಪರಿಶ್ರಮದಿಂದ ಇಂದು ಮಾದರಿ ರೈತರಾಗಿದ್ದಾರೆ. ನಾಲ್ಕು ಎಕರೆ ಬರಡು ಭೂಮಿಯನ್ನು 5 ವರ್ಷಗಳಲ್ಲಿ ಸತತ ಪರಿಶ್ರಮ ಹಾಕಿ ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಇಂದು ಪ್ರತಿವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಪರಿಶ್ರಮ ನೋಡಿದ ಜಿಲ್ಲೆಯ ರೈತರು ಅವರನ್ನೇ ಅನುಸರಿಸುತ್ತಿದ್ದಾರೆ. ರೈತರು ಸರಿಯಾಗಿ ಪ್ಲಾನ್ ಮಾಡಿ ಕೃಷಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದು ಮಾದರಿ ರೈತ ತಿಳಿಸಿದ್ದಾರೆ.
ಮಾವು, ನೇರಳೆ, ದಾಳಿಂಬೆ, ಮೊಂಸಬಿ, ಕಿತ್ತಳೆ, ಜಾಪಳ್, ಸಪೋಟಾ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಗಡಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಾವಿನ ಹಣ್ಣನಲ್ಲಿ ನಾಲ್ಕು ವಿಧಗಳ ಗಿಡಗಳನ್ನು ವಿದೇಶದಿಂದ ತಂದು ಹಾಕಿದ್ದಾರೆ. ಸಂರ್ಪೂಣವಾಗಿ ಸಾವಯವ ಗೊಬ್ಬರವನ್ನು ಹಾಕಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಲ್ಲೂ ಇವುಗಳಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದು ಈ ರೀತಿ ಮಾದರಿ ರೈತನ ಸಾಧನೆ ನೋಡಿ ಸ್ಫೂರ್ತಿಯಾಗಿದ್ದಾರೆ. ಸರ್ಕಾರಗಳು ರೈತರಿಗೆ ಯಾವುದೇ ಸಹಕಾರ ನೀಡದೆ ರೈತರಿಗೆ ಶಾಪವಾಗಿದ್ದು, ಈ ರೀತಿಯ ಸಾಧನೆ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.
ಶಿವಮೊಗ್ಗ: ರಸ್ತೆ ಬದಿಗಳಲ್ಲಿ ಹಣ್ಣಿನ ಗಾಡಿ ಹಾಕಿಕೊಂಡ ವ್ಯಾಪಾರಿಗಳು ಹಾಗೂ ಪೊಲೀಸರು ನಡುವೆ ನಡೆದ ಬೀದಿಕಾಳಗಕ್ಕೆ ಸಾವಿರಾರು ರೂ.ಗಳ ಹಣ್ಣುಗಳು ಮಣ್ಣುಪಾಲಾಗಿದೆ.
ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿಗಳಲ್ಲಿ ಹಣ್ಣಿನ ಗಾಡಿ ಹಾಕಿದ್ದಕ್ಕೆ ಅದನ್ನು ತೆರವುಗೊಳಿಸಲು ಸಂಚಾರಿ ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರು ಮತ್ತು ಹಣ್ಣು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಗಲಾಟೆಯಾಗಿದೆ. ಆದರೆ ಪೊಲೀಸರು ಹಾಗೂ ವ್ಯಾಪಾರಿಗಳ ನೂಕಾಟ ತಳ್ಳಾಟದಲ್ಲಿ ಹಣ್ಣುಗಳು ಮಣ್ಣುಪಾಲಾಗಿದ್ದು, ವ್ಯಾಪಾರಿಗಳು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಹಣ್ಣುಗಳು ವ್ಯರ್ಥವಾಯ್ತಲ್ಲ ಎಂದು ವ್ಯಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಅಮೀರ್ ಅಹ್ಮದ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.
ಮಾತಿನ ಚಕಮಕಿಯಿಂದ ಶುರುವಾದ ಗಲಾಟೆ ಪ್ರತಿಭಟನೆ ನಡೆಸುವ ಮಟ್ಟಿಗೆ ಬಂದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಪೊಲೀಸರು ಗಲಾಟೆಯನ್ನು ನಿಯಂತ್ರಿಸಿದರು.
ಬೆಂಗಳೂರು: ಇಂದು ಮಹಾಶಿವರಾತ್ರಿ ಹಬ್ಬ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ನಗರದ ಕೆ.ಆರ್.ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಯಶವಂತರಪುರ ಸೇರಿದಂತೆ ಎಲ್ಲಾ ಕಡೆ ಖರೀದಿ ಭರಾಟೆ ಜೋರಾಗಿದೆ. ಶಿವನ ಆರಾಧನೆ ವೇಳೆ ಬಿಲ್ವ ಪತ್ರೆ, ಮಲ್ಲಿಗೆ ಹೂವಿನದರ ಮಾತ್ರ ಏರಿಕೆ ಕಂಡಿದೆ. ಈ ಹಬ್ಬದಲ್ಲಿ ಬಹುತೇಕ ಎಲ್ಲರೂ ಉಪವಾಸ ವ್ರತ ಆಚರಣೆ ಹಿನ್ನೆಲೆಯಲ್ಲಿ ಹೂವಿಗಿಂತ, ಹಣ್ಣು, ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಪರಿಣಾಮ ಹಣ್ಣು, ತರಕಾರಿ ಬೆಲೆ ಕೊಂಚ ಏರಿಕೆ ಕಂಡಿದೆ.
ಹೂವಿನ ದರ ಎಷ್ಟು?
ಮಲ್ಲಿಗೆ ಕೆಜಿಗೆ 300 ರೂ. ಇದ್ದರೆ 500 ರೂ. ಏರಿಕೆಯಾಗಿದೆ. ಸೇವಂತಿ 200 ರೂ.ನಿಂದ 250ಕ್ಕೆ ಏರಿಕೆಯಾಗಿದ್ದರೆ ಗುಲಾಬಿ 100 ರೂ. ನಿಂದ 150 ರೂ.ಗೆ ಏರಿಕೆಯಾಗಿದೆ. ಬಿಲ್ವಪತ್ರೆ ಒಂದು ಕಟ್ಟಿಗೆ 10 ರೂ. ಇದ್ದರೆ ಈಗ 20 ರೂ. ಆಗಿದೆ.
ಹಣ್ಣಿನ ದರ ಎಷ್ಟು?
ಸೇಬು ಕೆಜಿಗೆ 80 ರೂ. ಇದ್ದರೆ 100 ರೂ. ಏರಿಕೆಯಾಗಿದೆ. ಕರ್ಬೂಜ ಕೆಜಿಗೆ 30 ರೂ.ಯಿಂದ 35 ರೂ.ಕ್ಕೆ ಹೆಚ್ಚಾಗಿದೆ. ಕಲ್ಲಂಗಡಿ ಕೆಜಿಗೆ 10 ರೂ.ಯಿಂದ 15 ರೂ. ಏರಿಕೆಯಾಗಿದೆ. ದಾಳಿಂಬೆ ಕೆಜಿಗೆ 80 ರೂ.ಯಿಂದ 100 ರೂ. ಹೆಚ್ಚಾಗಿದೆ.
ತರಕಾರಿ ದರ ಎಷ್ಟು?
ಹುರುಳಿಕಾಯಿ ಕೆಜಿಗೆ 40 ರೂ. ಇದ್ದರೆ 45 ರೂ. ಏರಿಕೆಯಾಗಿದೆ. ಅವರೇಕಾಯಿ ಕೆಜಿಗೆ 40 ರೂ.ಯಿಂದ 45 ರೂ. ಹೆಚ್ಚಾಗಿದೆ. ಕ್ಯಾರೆಟ್ ಕೆಜಿಗೆ 20 ರೂ.ಯಿಂದ ಕೆಜಿ 25 ರೂ. ಏರಿಕೆಯಾಗಿದ್ದರೆ, ಬೆಂಡೆಕಾಯಿ ಕೆಜಿಗೆ 60 ರೂಯಿಂದ 65 ರೂ. ಹೆಚ್ಚಾಗಿದೆ.
ಪೂಜಾ ಸಾಮಾಗ್ರಿಗಳ ದರದ ವಿವರ: ಶಿವಧಾರ ಒಂದಕ್ಕೆ 2 ರೂ ಇದ್ದರೆ, ವಿಭೂತಿ ಗಟ್ಟಿ- ಒಂದಕ್ಕೆ 30 ರೂ. ಇದೆ ಹಾಗೂ ವಸ್ತ್ರ ಒಂದಕ್ಕೆ 10 ರೂ. ಆಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಕೆಲ ಗ್ರಾಹಕರು ಹೇಳಿದರೆ ಮತ್ತೆ ಕೆಲವೆಡೆ ಸಂಕ್ರಾಂತಿ, ಲಕ್ಷ್ಮೀ ಹಬ್ಬಕ್ಕಿಂತ ಬೆಲೆ ಏರಿಕೆ ಕಡಿಮೆ ಇದೆ. ಖರೀದಿಗೆ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ. ದೇಗುಲಗಳಲ್ಲಿ ಇಂದು ವಿಶೇಷ ಪೂಜೆ ನಡೆಯುತ್ತಿದೆ. ಶಿವ ದೇಗುಲ ಮುರುಡೇಶ್ವರ, ಕೊಯಮತ್ತೂರಿನ ಶಿವ ದೇಗುಲದಲ್ಲೂ ವಿಶೇಷ ಪೂಜೆ ಪುನಸ್ಕಾರ ಜರುಗಲಿದೆ.
ಕೋಲಾರ: ಫ್ರೂಟ್ಸ್ ಕೋಲ್ಡ್ ಸ್ಟೋರೇಜ್ ಗೋದಾಮಿನಲ್ಲಿ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು ಒಂದು ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರ ತಾಲೂಕಿನ ವಡಗೂರು ಗೇಟ್ ಬಳಿ ಇರುವ ಸುಬ್ರಮಣಿ ಎಂಬವರಿಗೆ ಸೇರಿದ ವೆಂಕಟೇಶ್ವರ್ ಫ್ರೂಟ್ಸ್ ಕೋಲ್ಡ್ ಸ್ಟೋರೇಜ್‍ನಲ್ಲಿ ಕಳೆದ ರಾತ್ರಿ 1.30 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಗೋದಾಮಿನಲ್ಲಿದ್ದ ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಯಂತ್ರಗಳು ಮತ್ತು ಹಣ್ಣು, ತರಕಾರಿಗಳು ಸುಟ್ಟು ಭಸ್ಮವಾಗಿದೆ.
ಗೋದಾಮಿಯಲ್ಲಿ ಶೇಖರಣೆ ಮಾಡುತ್ತಿದ್ದ ಪಪ್ಪಾಯಿ, ಮಾವು, ಬಾಳೆಹಣ್ಣು ಮತ್ತು ತರಕಾರಿಗಳನ್ನ ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿಗೆ ಕಳುಹಿಸಿಕೊಡಲಾಗುತ್ತಿತ್ತು. ರವಿವಾರ ರಾತ್ರಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು ಒಂದು ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.
ಕೋಲ್ಡ್ ಸ್ಟೋರೇಜ್‍ನಲ್ಲಿ ಯಾರೂ ಇಲ್ಲದೆ ಇದ್ದ ಕಾರಣ ಯಾವುದೇ ಪ್ರಾಣಪ್ರಾಯವಾಗಿಲ್ಲ. ವಿಯಷ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಸಿರುವ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನ ನಂದಿಸಲು ಸುಮಾರು 5 ಗಂಟೆಗಳ ಕಾಲ ಹರಸಾಹಸ ಪಟ್ಟಿದ್ದಾರೆ.
ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.