Tag: friends

  • ಮದುವೆಗೆ ಹೊರಟವರು ಮಸಣಕ್ಕೆ – ಶಿವಮೊಗ್ಗದಲ್ಲಿ 7 ಮಂದಿ ಯುವಕರ ದುರ್ಮರಣ

    ಮದುವೆಗೆ ಹೊರಟವರು ಮಸಣಕ್ಕೆ – ಶಿವಮೊಗ್ಗದಲ್ಲಿ 7 ಮಂದಿ ಯುವಕರ ದುರ್ಮರಣ

    ಶಿವಮೊಗ್ಗ: ಭೀಕರ ಅಪಘಾತದಿಂದಾಗಿ ಗೆಳೆಯನ ಮದುವೆಗೆ ಹೊರಟ ಏಳು ಮಂದಿ ಮಸಣ ಸೇರಿದ ಘಟನೆ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದಲ್ಲಿ ರಾತ್ರಿ ನಡೆದಿದೆ. ಮುಂದೆ ಹೋಗುತ್ತಿದ್ದ ಟಿಂಬರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಾಗಡಿಯ ಸಹೋದರರಾದ ಪ್ರವೀಣ ಹಾಗೂ ಮಧು, ಮಂಡ್ಯದ ಮಲ್ಲೇಶ್, ಬೆಂಗಳೂರು ಜಾಲಹಳ್ಳಿಯ ಶ್ರೀಧರ, ಸೊರಬದ ರಾಜಶೇಖರ, ಚೋರಡಿಯ ಮಂಜುನಾಥ್, ಶಿಕಾರಿಪುರದ ರಾಘವೇಂದ್ರ ಈ ಭೀಕರ ಅಪಘಾತದಲ್ಲಿ ಮೃತಪಟ್ಟವರು. ಸಾಗರದಲ್ಲಿ ನಡೆಯುತ್ತಿದ್ದ ಮದುವೆಗೆ ಈ ಎಲ್ಲಾ ಸ್ನೇಹಿತರು ಬೆಂಗಳೂರಿನಿಂದ ಗೆಳೆಯನೊಬ್ಬನ ಇನ್ನೋವಾ ಕಾರಿನಲ್ಲಿ ಹೊರಟಿದ್ದರು. ಅತೀ ವೇಗದ ಚಾಲನೆ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

    ಮಧು ಹಾಗೂ ಶ್ರೀಧರ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣ್ ಸಿನೆಮಾ ಕ್ಷೇತ್ರದಲ್ಲಿ ಮೇಕಪ್ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾನೆ. ಮಂಜುನಾಥ್ ಹಾಗೂ ರಾಜೇಶ್, ಮಲ್ಲೇಶ್ ಮೂವರೂ ಬೆಂಗಳೂರಿನಲ್ಲಿ ಹೊಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಹುಪಾಲು ಭಾಗ ಲಾರಿಯ ಒಳಗೆ ಸಿಲುಕಿಕೊಂಡಿತ್ತು. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಕಾರನ್ನು ಹಂತಹಂತವಾಗಿ ಕತ್ತರಿಸಿ ಒಳಗಿದ್ದ ದೇಹಗಳನ್ನು ಒಂದೊಂದಾಗಿ ತೆಗೆಯಲಾಯಿತು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಚಂದ್ರಶೇಖರ ಶೆಟ್ಟಿ, ಇನ್ಸಪೆಕ್ಟರ್ ಗುರುರಾಜ್ ಇನ್ನಿತರ ಅಧಿಕಾರಿಗಳ ನೇತೃತ್ವದಲ್ಲಿ ಮುಂಜಾನೆಯವರೆಗೂ ಈ ಕಾರ್ಯಾಚರಣೆ ನಡೆಯಿತು. ಅಪಘಾತ ಪರಿಣಾಮ ಎರಡು ಕಿ.ಮೀ. ಉದ್ದ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಫೋನ್ ಲಾಕ್ ನಿಂದ ಗುರುತೂ ಲಾಕ್: ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಕಾರಿನ ಮೇಲಿದ್ದ ಮೊಬೈಲ್ ನಂಬರ್ಗೆ ಕಾಲ್ ಮಾಡಿದರೆ ಅವರಿಗೆ ಯಾರ್ಯಾರು ಈ ಕಾರಿನಲ್ಲಿ ಇದ್ದಾರೆ ಎಂಬ ಮಾಹಿತಿ ಇರಲಿಲ್ಲ. ಮೃತಪಟ್ಟವರ ಜೇಬಿನಲ್ಲಿ ಇದ್ದ ಮೊಬೈಲ್ಗಳನ್ನು ಪಡೆದ ಪೊಲೀಸರು ಅವುಗಳ ಮೂಲಕ ಅವರ ಗುರುತು ಪತ್ತೆ ಹಚ್ಚಲು ಯತ್ನಿಸಿದರು. ಆದರೆ, ಎಲ್ಲಾ ಸೆಲ್ ಫೋನ್ ಗಳೂ ಲಾಕ್ ಆಗಿದ್ದವು. ಪೊಲೀಸರ ಈ ಪ್ರಯತ್ನವೂ ವಿಫಲವಾಯಿತು. ದೇಹಗಳನ್ನು ಕಾರಿನಿಂದ ಹೊರತೆಗೆದಷ್ಟೇ ಶ್ರಮವನ್ನೂ ಇವರ ಗುರುತು ಪತ್ತೆ ಹಚ್ಚಲೂ ಹಾಕುವಂತಾಯಿತು.

  • ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

    ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

    ರೋಹ್ಟಕ್: ಅಪ್ರಾಪ್ತೆಯ ಮೇಲೆ ಆಕೆಯ ತಾಯಿಯ ಗೆಳೆಯರೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದು, ಅಮ್ಮನೇ ಅದರ ವೀಡಿಯೋ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹರಿಯಾಣದ ರೋಹ್ಟಕ್‍ನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿ ಓದುತ್ತಿರುವ 16 ವರ್ಷದ ಬಾಲಕಿಯ ಮೇಲೆ ಅದೇ ಗ್ರಾಮದ ರಾಮ್ಬಗತ್, ದಿನೇಶ್ ಮತ್ತು ಕಮಲ್ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಇದನ್ನು ತಾಯಿ ವೀಡಿಯೋ ಮಾಡಿದ್ದಾಳೆ ಅಂತಾ ಬಾಲಕಿ ಪೊಲೀಸರ ಮುಂದೆ ಹೇಳಿದ್ದಾಳೆ.

    ಬಾಲಕಿಯ ತಾಯಿ ಈ ಮೂವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಂತೆಯೇ ತಾಯಿ ಅವರೊಂದಿಗೆ ಕಾಲ ಕಳೆಯುತ್ತಿರುವುದನ್ನು ಬಾಲಕಿ ಗಮನಿಸಿದ್ದಾಳೆ. ಆ ಬಳಿಕ ತಾಯಿ ತನ್ನ ಮಗಳ ಮೇಲೆಯೇ ಮೂವರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾಳೆ

    ವೀಡಿಯೋ ಕೂಡ ಮಾಡಿಕೊಂಡಿದ್ದು, ವಿಚಾರ ಬಹಿರಂಗಪಡಿಸಿದ್ರೆ ವೀಡಿಯೋವನ್ನು ವೈರಲ್ ಮಾಡುತ್ತೇನೆ ಅಷ್ಟೇ ಅಲ್ಲದೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಮಗಳು ದೂರಿನಲ್ಲಿ ಆರೋಪಿಸಿದ್ದಾಳೆ.

    ಸದ್ಯ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.