ಹುಬ್ಬಳ್ಳಿ: ಕೇವಲ 10 ಸಾವಿರ ಹಣಕ್ಕಾಗಿ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ್, ಜೂನ್ 8 ರ ಮಧ್ಯರಾತ್ರಿ ಅಜಂತ ಹೋಟೆಲ್ ಬಳಿ ನಡೆದಿದ್ದ ಜೋಡಿ ಕೊಲೆಯ ಆರೋಪಿಗಳನ್ನ ಬಂಧಿಸಲಾಗಿದೆ. ಹಣದ ವ್ಯವಹಾರಕ್ಕಾಗಿ ಕೊಲೆ ಮಾಡಲಾಗಿದೆ. ಕೊಲೆಯ ಹಿಂದೆ ಹಳೆಯ ವೈಷಮ್ಯ ಇರುವ ಕುರಿತ ಶಂಕೆಯಿದೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ: ಕೆಲ ದಿನಗಳ ಹಿಂದೆ ನಗರದ ಅಜಂತ ಹೋಟೆಲ್ ಬಳಿ ಫೈರೋಜ್ ಇರ್ಷಾದ್ ಹಾಗೂ ರಿಯಾಜ್ ರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಕೊಲೆಯಾದ ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಖಿಲ್ ಬೇಪಾರಿ(23) ಇರ್ಷಾದ್ ಮಿಶ್ರಿಕೋಟಿ(26), ನವಲೂರು(25) ಹಾಗೂ ಕೊಲೆಗೆ ಸಹಾಯ ಮಾಡಿದ ವಿರೇಶ್ ಸೊಟ್ನಾಳ(27) ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮೃತ ಫೈರೋಜ್ ಆರೋಪಿ ಇರ್ಷಾದ್ ಗೆ ಹತ್ತು ಸಾವಿರ ಹಣ ನೀಡಿದ್ದ. ಇದನ್ನು ವಾಪಸ್ ಕೇಳಿದ ಸಂದರ್ಭದಲ್ಲಿ ಇರ್ಷಾದ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ಫೈರೋಜ್ ಹಾಗೂ ರಿಯಾಜ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕುರಿತು ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಆರೋಪಿಗಳ ನಡುವೆ ಪ್ರೇಮ ಪ್ರಕರಣ ಕುರಿತು ವೈಷಮ್ಯ ಉಂಟಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿರುವುದಾಗಿ ಮಾಹಿತಿ ನೀಡಿದ್ದು, ಆದರೆ ಇಂದಿನ ಕೊಲೆಗೆ ಹಣಕಾಸಿನ ವೈಷ್ಯಮ್ಯವೇ ಕಾರಣವೆಂದು ತಿಳಿಸಿದ್ದಾರೆ.
ಬೆಂಗಳೂರು: ಆಸರೆ ಕೊಟ್ಟ ಸ್ನೇಹಿತರ ಮೊಬೈಲ್, ಹಣ ಕದ್ದು ಪರಾರಿಯಾಗಿದ್ದ ಖದೀಮನನ್ನು ಸ್ನೇಹಿತರು ಹಿಡಿದಿರುವ ಘಟನೆ ಕೆಆರ್ ಪುರಂ ನಲ್ಲಿ ನಡೆದಿದೆ.
ಸಾಗರ ಮೂಲದ ಸಿದ್ದಿಕ್ ಎಂಬಾತನೇ ಸ್ನೇಹಿತನ ಮನೆಗೆ ಕನ್ನ ಹಾಕಿದವನು. ಕೆ.ಆರ್ ಪುರಂನಲ್ಲಿರುವ ಸ್ನೇಹಿತರ ರೂಮ್‍ನಲ್ಲಿ ಸಿದ್ದಿಕ್ ಆಸರೆ ಪಡೆದಿದ್ದನು. ರೂಮಿನಲ್ಲಿ ಯಾರು ಇಲ್ಲದ ವೇಳೆಯಲ್ಲಿ ಸ್ನೇಹಿತರ ಮೂರು ಮೊಬೈಲ್, 10 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಮೊಬೈಲ್ ಕದ್ದು ಹೋಗುತ್ತಿದ್ದ ಸಿದ್ದಿಕ್ ನನ್ನು ಸ್ನೇಹಿತರು ನಗರದ ಹೊರವಲಯದ ನೆಲಮಂಗಲದ ಬಳಿ ಹಿಡಿದಿದ್ದಾರೆ. ಕೊನೆಗೆ ಸಿದ್ದಿಕ್‍ನನ್ನು ಕೆ.ಆರ್.ಪುರಂ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ.
ಘಟನೆ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್ ಆಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಹಳೇ ದ್ವೇಷದಿಂದ ಚಾಕು ಇರಿದು ಕೊಲೆ ಮಾಡಿದ ಘಟನೆ ಅಂಜತಾ ಹೋಟೆಲ್ ತಡರಾತ್ರಿ ನಡೆದಿದೆ.
ಕೇಶ್ವಾಪುರ ನಿವಾಸಿ ರಿಯಾಜ್ ಸವಣೂರ (23) ಹಾಗೂ ಮಂಟೂರು ರಸ್ತೆಯ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ (23) ಕೊಲೆಯಾದವರು. ರಿಯಾಜ್ ಹಾಗೂ ಫಿರೋಜ್ ಸ್ನೇಹಿತರಾದ ವಾಸಿಂ, ಅಖಿಲ್ ಸೇರಿದಂತೆ ಇನ್ನೊಬ್ಬ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮೊದಲು ಸ್ನೇಹಿತರಾಗಿದ್ದ ಐದು ಜನರು ಎರಡು ತಿಂಗಳ ಹಿಂದೆ ಹುಡುಗಿ ವಿಷಯಕ್ಕೆ ಜಗಳವಾಡಿದ್ದರು. ಇದೇ ದ್ವೇಷವನ್ನು ಸಾಧಿಸಲು, ತಡರಾತ್ರಿ ಫೋನ್ ಮಾಡಿ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ಅವರು ಕಿಮ್ಸ್ ಶವಾಗಾರಕ್ಕೆ ಭೇಟಿಯಿತ್ತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರೆಲ್ಲಾ ಸ್ನೇಹಿತರು, ಅವರ ಮಧ್ಯೆ ತಡರಾತ್ರಿ ಗಲಾಟೆ ನಡೆದು ಇಬ್ಬರ ಕೊಲೆ ಮಾಡಿ, ಮೂವರು ಪರಾರಿಯಾಗಿದ್ದಾರೆ. ಮಾಹಿತಿ ಪ್ರಕಾರ, ವಾಸಿಂ, ಅಖಿಲ್ ಸೇರಿದಂತೆ ಇನ್ನೊಬ್ಬರು ಈ ಕೃತ್ಯವನ್ನು ಮಾಡಿದ್ದಾರೆ. ಕೂಡಲೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ನವದೆಹಲಿ: 19 ವರ್ಷದ ಯುವತಿ ಚಲಿಸುತ್ತಿದ್ದ ಕ್ಯಾಬ್‍ನಿಂದ ಜಿಗಿದಿರುವ ಘಟನೆ ಭಾನುವಾರ ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಏರಿಯಾದಲ್ಲಿ ನಡೆದಿದೆ.
ಯುವತಿ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ನಾವಿಬ್ಬರೂ ಫ್ರೆಂಡ್ಸ್ ಆಗೋಣ.. ನಿನ್ನ ನಂಬರ್ ಕೊಡು ಅಂತ ಬಲವಂತ ಮಾಡಿದ್ದಾನೆ. ಚಾಲಕನ ವರ್ತನೆಯಿಂದ ಭಯಬೀತಳಾದ ಯುವತಿ ಚಲಿಸುತ್ತಿದ್ದ ಕ್ಯಾಬ್‍ನಿಂದ ಜಂಪ್ ಮಾಡಿದ್ದಾರೆ.
ರಂಗಭೂಮಿ ಕಲಾವಿದೆಯಾಗಿರುವ ಯುವತಿ ನಗರದ ಮಂದಿ ಹೌಸ್ ಬಳಿ ಕ್ಯಾಬ್ ಹತ್ತಿದ್ದಾರೆ. ಕಾಪಶೇರಾ ಹತ್ತಿರ ಬರುತ್ತಿದ್ದಂತೆ ಚಾಲಕ ಫೋನ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಧೌಲ್ ಕೌನ್ ಬಸ್ ನಿಲ್ದಾಣ ಬರುತ್ತಿದ್ದಂತೆಯೇ ತನ್ನನ್ನು ಕಾಪಾಡಿಕೊಳ್ಳಲು ಯುವತಿ ಕ್ಯಾಬ್‍ನಿಂದ ಜಿಗಿದಿದ್ದಾರೆ.
ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರ: ಮೂವರು ಸ್ನೇಹಿತರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ರಾಜಸಮಂಡ್ ಜಿಲ್ಲೆಯ ದೇವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್ ಖತೀಕ್ (24), ಸುದರ್ಶನ್ ಖತೀಕ್ (22) ಮತ್ತು ರಾಧೆಶ್ಯಾಮ್ ಸಾವನ್ನಪ್ಪಿದವರು ಒಳ್ಳೆಯ ಸ್ನೇಹಿತರು ಮತ್ತು ಸಂಬಂಧಿಗಳಾಗಿದ್ದರು. ಸಂಬಂಧಿಗಳಿಗಿಂತ ಒಳ್ಳೆಯ ಸ್ನೇಹಿತರಾಗಿದ್ದ ಮೂವರು ಏಕಕಾಲದಲ್ಲಿ ಸಾವನ್ನಪ್ಪಿದ್ದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಆಗಿದ್ದೇನು?
ಮೂವರು ಕೊಳ ಸ್ನಾನಕ್ಕೆ ತೆರಳಿದ್ದಾರೆ. ಮೂವರಲ್ಲಿ ಚೇತನ್ ತನ್ನ ಮೊಬೈಲ್ ವಿಡಿಯೋ ಆನ್ ಮಾಡಿ ಕೊಳಕ್ಕೆ ಜಿಗಿದಿದ್ದಾರೆ. ಕೊಳದಲ್ಲಿ ಜಿಗಿದ ಚೇತನ್ ಈಜಲು ಸಾಧ್ಯವಾಗದೇ ಮುಳಗಲು ಆರಂಭಿಸುತ್ತಿದ್ದಂತೆ, ಇನ್ನಿಬ್ಬರು (ರಾಧೆಶ್ಯಾಮ್ ಮತ್ತು ಸುದರ್ಶನ್) ಚೇತನ್ ನನ್ನು ಕಾಪಾಡಲು ಮುಂದಾಗಿದ್ದಾರೆ. ಒಟ್ಟಾಗಿ ಮೂವರು ಕೊಳದಲ್ಲಿ ಜಿಗಿದಿದ್ದರಿಂದ ಒಬ್ಬರನೊಬ್ಬರನ್ನು ರಕ್ಷಿಸಲು ಹೋಗಿ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.
ಸಾವನ್ನಪ್ಪಿದ ಮೂವರು ಸಂಬಂಧಿಗಳಾಗಿದ್ದು, ಮೂರು ನಿಮಿಷದ ಅವಧಿಯಲ್ಲಿ ಎಲ್ಲರೂ ನೀರಿನಲ್ಲಿ ಮುಳುಗಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ. ರಾಧೆಶ್ಯಾಮ್ ಮತ್ತು ಸುದರ್ಶನ್ ಇಬ್ಬರೂ ಕೊಳದಲ್ಲಿ ದಡದಲ್ಲಿದ್ರು. ಮುಳುಗುತ್ತಿದ್ದ ಚೇತನ್ ನನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಗೋಡಾರ ತಿಳಿಸಿದ್ದಾರೆ.
ಮೃತ ದೇಹಗಳನ್ನು ಕೊಳದಿಂದ ಹೊರತೆಗೆದು ಮರಣೋತ್ತರ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ದರ್ಶನ್ ಜೊತೆ ಕಳೆದ ಕೆಲವು ದಿನಗಳನ್ನು ಮೆಲುಕು ಹಾಕಿದ್ದಾರೆ.
ಖಾಸಗಿ ಪತ್ರಿಕೆಗೆ ಸಂದರ್ಶನ ನೀಡುತ್ತಾ, ದರ್ಶನ್ ಜತೆಗಿನ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದು ಕಾಲದಲ್ಲಿ ನಾನು ದರ್ಶನ್ ಎಲ್ಲಾ ಕಡೆ ಬೈಕ್‍ನಲ್ಲಿ ಸುತ್ತಾಡುತ್ತಿದ್ದೆವು. ಆಗ ನಮ್ಮನ್ನು ನೋಡಿದ ಎಲ್ಲರೂ ಇವರು ಹೀರೋಗಳ ಎಂದುಕೊಳ್ಳುತ್ತಿದ್ದರು. ಅದೊಂದು ಒಳ್ಳೆಯ ಫೀಲಿಂಗ್ ಚೆನ್ನಾಗಿತ್ತು. ಆ ದಿನಗಳು ಅವನ ಜತೆಗಿನ ಸ್ನೇಹ ಮಧುರ ಎಂದು ಸುದೀಪ್ ಹೇಳಿದ್ದಾರೆ.
ದರ್ಶನ್‍ಗೆ ತನ್ನ ಮೇಲೆ ಪೊಸೆಸೀವ್, ದರ್ಶನ್ ಯಾವತ್ತಿದ್ದರೂ ನನ್ನ ಗೆಳೆಯನೇ ಅವನ ತಲೆಗೆ ಯಾರೋ ಏನೋ ತುಂಬಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾನು ಅವನನ್ನು ನೋಡಿದ್ದೇನೆ. ಆಗಿನಿಂದಲೂ ನನ್ನ ಕಂಡರೆ ಅವನಿಗೆ ತುಂಬಾ ಪ್ರೀತಿ ಎಂದು ಸುದೀಪ್ ತಿಳಿಸಿದರು.
ಇನ್ನು ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ಗೆ `ದರ್ಶನ್ ಕುಂಭಕರ್ಣ’ ಎಂದಿದ್ದಾರೆ. ಸುದೀಪ್ ಹೀಗೆ ಹೇಳೋಕೆ ಕಾರಣವಿದೆ. ದರ್ಶನ್‍ಗೆ ನಿದ್ದೆ ಜಾಸ್ತಿ. ಒಮ್ಮೆ ಮಲಗಿದರೆ ಸಾಕು ಎದ್ದೇಳುತ್ತಿರಲಿಲ್ಲ. ಎಷ್ಟೋ ಭಾರಿ ದರ್ಶನ್ ಜೊತೆ ಹೊರಗೆ ಹೋಗಬೇಕು ಎಂದು ಹೊರಟಾಗ ಆತ ಮಲಗಿರುವ ಸುದ್ದಿ ಕೇಳಿ ಪಾರ್ಟಿ ಕ್ಯಾನ್ಸಲ್ ಕೂಡ ಮಾಡಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ದರ್ಶನ್ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡ ನಂತರ ಕಿಚ್ಚ ಸಂದರ್ಶನವೊಂದರಲ್ಲಿ ದರ್ಶನ್ ಅವರ ಬಗ್ಗೆ ಓಪನ್ ಆಗಿ ಮಾತನಾಡಿದ್ದರು. ನನಗೆ ಯಾವ ಬೇಸರನೂ ಇಲ್ಲ. ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ. ಹಾಗಾಗಿ ಆತ ಕೋಪ ಮಾಡಿಕೊಂಡಿದ್ದಾನೆ. ನನ್ನ ಪ್ರಕಾರ ಒನ್ ಸೈಡ್ ಹಿಮ್ ಈಸ್ ವೆರಿ ಸ್ವೀಟ್. ನಾನು ಸಣ್ಣ ವಯಸ್ಸಿನಿಂದಲೂ ಆತನನ್ನು ನೋಡಿದ್ದೀನಿ. ನನ್ನ ಬಗ್ಗೆ ಆತ ತುಂಬ ಪೊಸೆಸಿವ್ ಎಂದು ಹೇಳಿದ್ದರು.
ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ದರ್ಶನ್‍ಗೆ ಬೇಸರ ಆಗಿರಬಹುದು. ಆದರೆ ಅದೆಲ್ಲಾ ಅದಾಗಿ ಅದೇ ಆಗಿದ್ದು. ಆ ರೀತಿ ನೋಡಿದ್ದರೆ ಯಾರ ಮೇಲಾದರೂ ದ್ವೇಷ ಸಾಧಿಸುವುದು ಏಕೆ? ಇಲ್ಲಿ ಎಲ್ಲರೂ ಸಾಧಕರೇ. ಇಂದು ಶಿವಣ್ಣ ಹಾಗೂ ನಾನು ಚೆನ್ನಾಗಿ ಇದ್ದೀವಿ ಎಂದರೆ ಅದು ನನಗೆ ಅವರ ಮೇಲೆ ಮೊದಲಿನಿಂದಲೂ ಪ್ರೀತಿಯಿತ್ತು. ಮಧ್ಯದಲ್ಲಿ ಸ್ವಲ್ಪ ಹಾಳಾಗಿತ್ತು. ಅದು ಕೂಡ ಸತ್ಯ ಹಾಗೂ ಅದಕ್ಕೂ ಕಾರಣವಿತ್ತು ಎಂದು ಸುದೀಪ್ ಹೇಳಿದ್ದರು.
ಲಕ್ನೋ: 35 ವರ್ಷದ ಮಗಳನ್ನು ತಂದೆಯೇ ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಆಕೆಯ ಮೇಲೆ ಗ್ಯಾಂಗ್‍ರೇಪ್ ಮಾಡಿಸಿದ ಘಟನೆ ಸೋಮವಾರ ಉತ್ತರಪ್ರದೇಶದ ಲಕ್ನೋದಿಂದ 70ಕಿ.ಮೀ ದೂರದಲ್ಲಿರುವ ಸಿತಾಪುರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
50 ವರ್ಷದ ವ್ಯಕ್ತಿ ಏಪ್ರಿಲ್ 15ರಂದು ತನ್ನ ಮಗಳನ್ನು ಜಾತ್ರೆಗೆಂದು ಕಮಲಾಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಜಾತ್ರೆಗೆ ಹೋಗಿ ಹಿಂತಿರುಗುವಾಗ ಆತ ತನ್ನ ಸ್ನೇಹಿತ ಮನ್ ಸಿಂಗ್‍ಗೆ ಕರೆ ಮಾಡಿ ಭೇಟಿಯಾಗಲು ಹೇಳಿದ್ದಾನೆ. ನಂತರ ಮಗಳನ್ನು ತನ್ನ ಸ್ನೇಹಿತರ ಜೊತೆ ಬರುವಂತೆ ಮನವೊಲಿಸಿ, ತನ್ನ ಮತ್ತೊಬ್ಬ ಸ್ನೇಹಿತ ಮೀರಜ್ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.
ನಂತರ ತಂದೆ ತನ್ನ ಮಗಳನ್ನು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದ. ಬಳಿಕ ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳೆಯನ್ನು ಮೀರಜ್ ಮನೆಯಲ್ಲಿ 18 ಗಂಟೆಗಳ ಕಾಲ ಕೂಡಿಹಾಕಿ ಅತ್ಯಾಚಾರವೆಸಗಿದ್ದಾರೆ. ನಂತರ ಮಹಿಳೆ ಸೋಮವಾರ ರಾತ್ರಿ ಅಲ್ಲಿಂದ ತಪ್ಪಿಸಿಕೊಂಡು ಬಂದು, ತನ್ನ ತಾಯಿಯ ಹತ್ತಿರ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಅದೇ ದಿನ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀರಜ್‍ನನ್ನು ಮಂಗಳವಾರ ಬಂಧಿಸಿದ್ದೇವೆ. ಮಹಿಳೆಯ ತಂದೆ ಹಾಗೂ ಮನ್ ಸಿಂಗ್ ತಪ್ಪಿಸಿಕೊಂಡಿದ್ದು, ಆ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮೀರಜ್ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದಾನೆ. ಆದರೆ ಅವನು ತನ್ನ ಪದವಿಯನ್ನು ಸಹ ಪೂರ್ಣಗೊಳಿಸಿಲ್ಲ. ಮಹಿಳೆ ಮೇಲೆ ಈ ಕೃತ್ಯವೆಸಗುವಾಗ ಮೀರಜ್ ಕುಟುಂಬದವರು ಊರಿನಲ್ಲಿ ಇರಲಿಲ್ಲ ಎಂದು ಎಸ್‍ಎಚ್‍ಒ ಸಂಜೀತ್ ಸೋನ್ಕರ್ ತಿಳಿಸಿದ್ದಾರೆ.
ಮಹಿಳೆ 16ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ ಮದುವೆಯಾದ 2 ವರ್ಷದಲ್ಲೇ ದಾಂಪತ್ಯದಲ್ಲಿ ಬಿರುಕು ಕಾಣಿಸಿದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದಳು. ನಂತರ ನವೆಂಬರ್ 2017ರಲ್ಲಿ ತಂದೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪ ಕೇಳಿ ಬಂದಿತ್ತು. ನಂತರ ಆಕೆಗೆ ಹಳ್ಳಿಯಲ್ಲಿ ಬಹಿಷ್ಕಾರ ಹಾಕಿ ತಂದೆಯನ್ನು ಜೈಲಿಗೆ ಕಳುಹಿಸಲಾಗಿತ್ತು.
ಈ ಘಟನೆಯ ಬಳಿಕ ಮಹಿಳೆ ತನ್ನ 14 ವರ್ಷದ ಮಗನ ಜೊತೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು. ಫೆಬ್ರವರಿಯಲ್ಲಿ ತಂದೆ ಜಾಮೀನು ಪಡೆದು ಹೊರಬಂದಿದ್ದ ಎಂದು ಸಿತಾಪುರದ ಎಸ್‍ಪಿ ಸುರೇಶ್‍ರಾವ್ ಕುಲಕರ್ಣಿ ತಿಳಿಸಿದ್ದಾರೆ.
ಬೆಂಗಳೂರು: ಹಲ್ಲೆ ಮಾಡಿರುವುದು ನಿಜ ಎಂದು ಹ್ಯಾರಿಸ್ ಪುತ್ರ ನಲಪಾಡ್ ತಪ್ಪೊಪ್ಪಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ವಶಪಡಿಸಿಕೊಂಡು ಪರಿಶೀಲನೆ ಮಾಡಿದ್ದೇವೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.
ಶಾಸಕ ಹ್ಯಾರಿಸ್ ಮಗ ನಲಪಾಡ್ ಮತ್ತು ಆತನ ಸ್ನೇಹಿತರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸಾಕ್ಷ್ಯ ಗಳು ಸಿಕ್ಕಿದ್ದು ಕಾಲು ತಗಲಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.
ಗಲಾಟೆ ಹೇಗಾಯ್ತು?
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡಲು ಹೋಗಿದ್ದರು. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಊಟಕ್ಕೆಂದು ಅದೇ ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ವತ್ ನ ಕಾಲು ಮುರಿದಿತ್ತು. ಆದ್ದರಿಂದ ಕಾಲು ಚಾಚಿಕೊಂಡು ಕುಳಿತ್ತಿದ್ದರು. ಆಗ ನಲಪಾಡ್ ನಿಗೆ ಕಾಲು ತಗುಲಿದೆ. ನಂತರ ವಿದ್ವತ್ ಕ್ಷಮೆ ಕೇಳಿರಲಿಲ್ಲ. ಇದರಿಂದ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಡಿಸಿಪಿ ತಿಳಿಸಿದರು.
ಲೋಕಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಪುತ್ರ ಇರುವುದರ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸಿಕ್ಕಿಲ್ಲ. ಮಹದೇವಪ್ಪ ಪುತ್ರನ ಹುಟ್ಟುಹಬ್ಬಕ್ಕೆ ಹೋಗಿದ್ದರು ಎಂಬ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಮಾಧ್ಯಮದವರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದೆ. ಓರ್ವನ ಬಂಧನ ಕೂಡ ಆಗಿದೆ. ಇನ್ನುಳಿದವರ ಹುಡುಕಾಟ ನಡೆಯುತ್ತಿದೆ ಎಂದು ಚಂದ್ರಗುಪ್ತ ವಿವರಿಸಿದರು.
ನಲಪಾಡ್‍ನ ವಿರುದ್ಧ ಮತ್ತೊಂದು ಕೇಸ್ ಆಗಿದ್ದು, 3 ವರ್ಷದ ಹಿಂದೆ ನಡೆದಿದ್ದ ಪ್ರಕರಣವಾಗಿದೆ. ಪೂರ್ಣಿಮಾ ದಾಸ್ ವಿಡಿಯೋ ವೈರಲ್ ಆಗಿರುವುದರ ಬಗ್ಗೆ ಗಮನಕ್ಕೆ ಬಂದಿಲ್ಲ. ಪೊಲೀಸರು ಸ್ವಯಂಪ್ರೇರಿತ ದಾಖಲು ಮಾಡಿಕೊಳ್ಳುತ್ತಾರೆ. ಮಲ್ಯ ಆಸ್ಪತ್ರೆ ವೈದ್ಯರಿಂದ ವರದಿ ಬಿಡುಗಡೆಯಾಗಿದೆ. ವಿದ್ವತ್ ಮುಖದಲ್ಲಿ ರಕ್ತ ಹೆಪ್ಪುಗಟ್ಟಿದೆ. ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧನ ಮಾಡಲಾಗಿದೆ. ಹಲ್ಲೆ ಮಾಡಿರುವುದು ಗೊತ್ತಿರುವುದರಿಂದ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ನಲಪಾಡ್ ಮತ್ತು ಆತನ ಸ್ನೇಹಿತರನ್ನ ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಅಂದು ಡ್ರಗ್ಸ್ ಸೇವನೆ ಮಾಡಿದ್ದಾ ಇಲ್ಲವಾ ತಿಳಿದಿಲ್ಲ. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇನ್ನು ವರದಿ ಬಂದಿಲ್ಲ ಎಂದು ವಿವರಿಸಿದರು.
ಯಾವೆಲ್ಲ ಕೇಸ್ ಹಾಕಲಾಗಿದೆ?
ಐಪಿಸಿ ಸೆಕ್ಷನ್ 141(ಗುಂಪು ಹಲ್ಲೆ), 143(ದಂಡನೆ), 144(ಮಾರಕಾಸ್ತ್ರಗಳಿಂದ ಗುಂಪು ಹಲ್ಲೆ), 146(ದೊಂಬಿ), 149( ಅಕ್ರಮವಾಗಿ ಗುಂಪುಗೂಡುವಿಕೆ), 341(ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 326(ಅಪಾಯಕಾರಿ ಆಯುಧಗಳಿಂದ ಸ್ವ ಇಚ್ಚೆಯಿಂದ ತ್ರೀವ ಗಾಯ ಉಂಟು ಮಾಡುವುದು), 307(ಕೊಲೆ ಮಾಡುವ ಪ್ರಯತ್ನ), 504(ಶಾಂತಿ ಭಂಗ), ಐಪಿಸಿ 506(ಜೀವ ಬೆದರಿಕೆ) ಅಡಿ ಕೇಸ್ ದಾಖಲಾಗಿದೆ.
ಆರೋಪಿಗಳು ಮತ್ತು ಕೆಲಸ: ಆರೋಪಿ ನಂಬರ್ 1 ಶಾಸಕ ಹ್ಯಾರಿಸ್ ಮಗ ನಲಪಾಡ್ ಒಬ್ಬ ನಿರುದ್ಯೋಗಿಯಾಗಿದ್ದು, ಸ್ನೇಹಿತರಾದ ಅರುಣ್ ಬಾಬು(28) ಡಿಪ್ಲೋಮಾ ಮಾಡಿದ್ದು, ಕೊಕೋಟೆರಿನೋ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬಾಲಕೃಷ್ಣ (25) ಎಸ್‍ಎಸ್‍ಎಲ್‍ಸಿ ಮಾಡಿದ್ದು, ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಭಿಷೇಕ್(23) ಬಿಬಿಎಂ ಮಾಡಿದ್ದು, ಸ್ವಂತ ಉದ್ಯಮ ಮಾಡುತ್ತಿದ್ದಾನೆ. ಶ್ರೀಕೃಷ್ಣ ತಲೆ ಮರೆಸಿಕೊಂಡಿದ್ದಾನೆ. ಮಂಜುನಾಥ್ (31) ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಹಮದ್ ಅಪ್ರಾಸ್ ಆಶ್ರಾಪ್ (23) ಈತ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ನಾಫಿ ಮಹಮದ್ ನಾಸೀರ್(28) ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ.
ಸೊನಾರ್‍ಪುರ್: ಹುಟ್ಟುಹಬ್ಬದ ಪಾರ್ಟಿ ವೇಳೆ 12ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಆಕೆಯ ಬಾಯ್‍ಫ್ರೆಂಡ್ ಸೇರಿದಂತೆ ನಾಲ್ವರು ಸ್ನೇಹಿತರು ಸೇರಿ ಅತ್ಯಾಚಾರವೆಸಗಿರೋ ಘಟನೆ ಪಶ್ಚಿಮ ಬಂಗಾಳದ ರತ್ನಾಲಾದಲ್ಲಿ ನಡೆದಿದೆ ಎಂದು ಬುಧವಾರದಂದು ಪೊಲೀಸರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ಮೂವರನ್ನ ಬಂಧಿಸಲಾಗಿದೆ. ನಾಲ್ಕನೇ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರೋಪಿಗಳು ಅತ್ಯಾಚಾರವೆಸಗಿದ ನಂತರ ಯುವತಿಯನ್ನ ಕೊಲ್ಲಲು ಯತ್ನಿಸಿದ್ದರು. ಸಂತ್ರಸ್ತ ಯುವತಿ ಸದ್ಯ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸಂತ್ರಸ್ತೆಯ ಬಾಯ್‍ಫ್ರೆಂಡ್ ಆತನ ಸಂಬಂಧಿಕರೊಬ್ಬರ ಮನೆಗೆ ಫೋನ್ ಮಾಡಿ ಆಕೆಯನ್ನ ಕರೆಸಿಕೊಂಡಿದ್ದ. ಮನೆಯವರು ಕಾರ್ಯಕ್ರಮವೊಂದಕ್ಕೆ ಹೋಗಿದ್ದರಿಂದ ಮನೆ ಖಾಯಿಯಾಗಿತ್ತು. ಯುವತಿಯ ಬಾಯ್‍ಫ್ರೆಂಡ್ ಮೂವರು ಸ್ನೇಹಿತರೊಂದಿಗೆ ಮದ್ಯಪಾನ ಮಾಡ್ತಿದ್ದ. ಯುವತಿಗೆ ಮತ್ತು ಬರುವ ಔಷಧ ಬೆರೆಸಿದ ಮದ್ಯವನ್ನು ಕುಡಿಯುವಂತೆ ಮಾಡಿದ್ದರು. ನಂತರ ಆಕೆಗೆ ಪ್ರಜ್ಞೆ ತಪ್ಪಿತ್ತು. ನಂತರ ಒಬ್ಬೊಬ್ಬರಾಗಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಯವರು ಮನೆಗೆ ವಾಪಸ್ ಬಂದ ನಂತರ ಯುವತಿಗೆ ರಕ್ತಸ್ರಾವವಾಗುತ್ತಿರವುದು ನೋಡಿದ್ದರು. ಬಳಿಕ ಏನೋ ಅಪಘಾತವಾಗಿದೆ ಎಂದು ಯುವತಿಯ ಪೋಷಕರಿಗೆ ಫೋನ್ ಮಾಡಿ ಹೇಳಿದ್ದರು. ಆದ್ರೆ ಯುವಕನ ಸಂಬಂಧಿಕರು ಹೇಳಿದ ಮಾತನ್ನ ಯುವತಿ ಪೋಷಕರು ನಂಬಿರಲಿಲ್ಲ. ಹೀಗಾಗಿ ಸೊನಾರ್‍ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಆಲದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ಸುಮಾರು 3ಗಂಟೆಗೆ ಪಲ್‍ಘಢ ಎಂಬಲ್ಲಿ ನಡೆದಿದೆ. ಅಪಘಾತ ನಡೆದ ಸ್ಥಳ ಪಲಘಡ್ ಮುಂಬೈ ನಗರದಿಂದ 110 ಕಿ.ಮೀ. ದೂರದಲ್ಲಿದೆ.
ತಾರಾಪುರ ನಿವಾಸಿ ನಿಲೇಶ್ ತಾಮೋರ್ (25), ವಾದರೈ ನಿವಾಸಿ ಕಿರಣ್ ಪಗ್ದಾರೆ (30), ಸತ್‍ಪತಿ ನಿವಾಸಿ ದಿಪೇಶ್ ಪಗ್ದಾರೆ (24), ಪಲಘಡ್ ನಿವಾಸಿ ವಿರಾಜ್ ವೆಟಲ್ (25) ಮತ್ತು ಖಂಪಡಾ ನಿವಾಸಿ ಸಂತೋಷ್ (37) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಮೃತ ಗೆಳಯರೆಲ್ಲಾ ವಾದ್ರೈ ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದುರುಗುತ್ತಿದ್ದರು.
ವಿರಾಜ್ ವೆಟಲ್ ಅವರ ಸಿಲ್ವರ್ ವೊಕ್ಸ್ ವ್ಯಾಗನ್ ಕಾರಿನಲ್ಲಿ ಐವರು ಗೆಳೆಯರು ಮದುವೆಗೆ ತೆರಳಿದ್ದರು. ಪಲ್‍ಘಟ್ ಕಾರ್ ತಿರುವು ತೆಗದುಕೊಳ್ಳುವಾಗ ವಿರಾಜ್‍ನ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಬದಿಯಲ್ಲಿದ್ದ ಆಲದ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.
ಕಾರ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದ್ದನ್ನು ನಾನು ನೋಡಿದೆ. ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ಎಳೆಯಲು ಸಾಕಷ್ಟು ಪ್ರಯತ್ನ ಮಾಡಿದ್ರೂ ಸಾಧ್ಯವಾಗಲಿಲ್ಲ. ವೇಗವಾಗಿ ಬಂದ ಕಾರ್ ಮರಕ್ಕೆ ಡಿಕ್ಕಿ ಆಗಿದ್ದರಿಂದ ಅಪ್ಪಚ್ಚಿಯಾಗಿತ್ತು. ಕಾರಿನಲ್ಲಿದ್ದ ಎಲ್ಲ ಯುವಕರು ಇಕ್ಕಾಟದ ಸ್ಥಳದಲ್ಲಿ ಸಿಲುಕಿಕೊಂಡಿದ್ದರು ಎಂದು ಅಪಘಾತ ನಡೆದ ಸ್ಥಳದ ಪಕ್ಕದಲ್ಲಿಯೇ ವಾಸವಾಗಿದ್ದ ದಾನೀಶ್ ಖಾನ್ ಹೇಳುತ್ತಾರೆ.
ಅಪಘಾತದ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಸತ್‍ಪತಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಐವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದರು. ಆಸ್ಪತ್ರೆಯಲ್ಲಿ ಐವರು ಮೃತಪಟ್ಟಿದ್ದಾರೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ನಡೆಸಿದ್ದು, ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಸತ್‍ಪತಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಸರ್ ಮನ್ ಸಿನ್ಹಾ ಪಾಟೀಲ್ ತಿಳಿಸಿದ್ದಾರೆ.