Tag: friends

  • ಚಿಲ್ಲರೆ ಕಾಸಿಗೆ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

    ಚಿಲ್ಲರೆ ಕಾಸಿಗೆ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಆತ್ಮೀಯ ಗೆಳೆಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.

    ಪ್ರತಾಪ್ ಹಾಗೂ ಶ್ರೀನಿವಾಸ್ ಆತ್ಮೀಯ ಗೆಳೆಯರು. ಪ್ರತಾಪ್ ಹಾಗೂ ಶ್ರೀನಿವಾಸ್ ಇಬ್ಬರು ವಿದ್ಯಾರಣ್ಯಪುರದ ರಾಮಚಂದ್ರಪುರ ನಿವಾಸಿಗಳು. ಕಳೆದ ಹತ್ತು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರು ಸಂಜೆಯಾದರೆ ಜೊತೆಯಾಗಿ ಬಾರ್ ಗೆ ಹೋಗುತ್ತಿದ್ದರು. ಎಂದಿನಂತೆ ಶ್ರೀನಿವಾಸ್ ಹಾಗೂ ಪ್ರತಾಪ್ ಇಬ್ಬರು ಮಂಗಳವಾರ ಸಂಜೆ ಕಂಠಪೂರ್ತಿ ಕುಡಿದಿದ್ದಾರೆ.

    ಶ್ರೀನಿವಾಸ್ ಹಾಗೂ ಪ್ರತಾಪ್‍ಗೆ ಮದ್ಯ ತರುವುದಕ್ಕೆ ಹಣ ಕೊಟ್ಟಿರುತ್ತಾನೆ. ಕುಡಿದ ಬಳಿಕ ಶ್ರೀನಿವಾಸ್, ಪ್ರತಾಪ್ ಬಳಿ ಚಿಲ್ಲರೆ ಕಾಸು ಕೇಳಿದ್ದಾನೆ. ಚಿಲ್ಲರೆ ಕಾಸಿಗಾಗಿ ಆರಂಭವಾದ ಗಲಾಟೆಯಲ್ಲಿ ಶ್ರೀನಿವಾಸ್, ಪ್ರತಾಪ್ ನ ಮೂಗಿಗೆ ಒಂದೇ ಒಂದು ಪಂಚ್ ಕೊಟ್ಟಿದ್ದಾನೆ. ಕೊಟ್ಟ ಒಂದೇ ಪಂಚ್‍ಗೆ ಪ್ರತಾಪ್ ನೆಲಕ್ಕೆ ಬಿದ್ದಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಪ್ರತಾಪ್ ಸಾವನ್ನಪ್ಪಿದ್ದಾನೆ.

    ಘಟನೆಯಲ್ಲಿ ಮೃತನಾಗಿರುವ ಪ್ರತಾಪ್ ಈ ಹಿಂದಿನಿಂದಲೂ ಹಿಮೋಫೀಲಿಯಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದನು. ಈ ಕಾಯಿಲೆಯಿಂದ ಬಳಲುತ್ತಿರುವರಿಗೆ ಸಣ್ಣ ಗಾಯಗಳಾದರೂ ರಕ್ತಸ್ರಾವ ಹೆಚ್ಚಾಗುತ್ತಂತೆ. ಸದ್ಯ ಕುಟುಂಬದವರು ನೀಡಿರುವ ದೂರಿನ ಮೇರೆಗೆ ಆರೋಪಿ ಶ್ರೀನಿವಾಸ್ ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

  • ಸ್ನೇಹಿತರು ಹೊಡೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ

    ಸ್ನೇಹಿತರು ಹೊಡೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ

    ಬೆಂಗಳೂರು: ವಾಲಿಬಾಲ್ ಆಡುವಾಗ ಸ್ನೇಹಿತರ ಜೊತೆ ಗಲಾಟೆ ನಡೆದ ವೇಳೆ ಸ್ನೇಹಿತರು ಹೊಡೆದರು ಎಂಬ ಕಾರಣಕ್ಕೆ ಮನನೊಂದಿದ್ದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಮುರಳಿ (21) ನೇಣಿಗೆ ಶರಣಾದ ಯುವಕ. ಮುರಳಿ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದವನಾಗಿದ್ದು, ಕೆ. ಸತ್ಯವಾರ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಶನಿವಾರ ಸಂಜೆ ವಾಲಿಬಾಲ್ ಆಡುವ ವೇಳೆ ಸ್ನೇಹಿತರು ಬೈದಿದ್ದಾರೆ.

    ಇದರಿಂದ ಮನನೊಂದ ಮುರಳಿ ಗ್ರಾಮದ ಹೊರಭಾಗದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿ ದೊರೆತಿದ್ದು, ಇದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಈ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    ಕಲಬುರಗಿ: ಇಂದು ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಪೋಷಕರು ಹಾಗೂ ಸ್ನೇಹಿತರು ಸಹಕರಿಸುತ್ತಿದ್ದ ದೃಶ್ಯ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಂಡು ಬಂದಿದೆ.

    ಮಣ್ಣೂರು ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಮಣ್ಣೂರು ಪರೀಕ್ಷಾ ಕೇಂದ್ರದಲ್ಲಿ 298ರ ಪೈಕಿಯ 296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ವೇಳೆ ನಕಲು ಮಾಡಲು ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಹೊರಗಿನಿಂದ ಸಹಾಯ ಮಾಡುತ್ತಿದ್ದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರೀಕ್ಷಾ ಕೊಠಡಿಯ ಕಿಟಕಿ ಹೊರಗಿನಿಂದ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ, ಪುಸ್ತಕಗಳನ್ನು ಕೊಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಯೇ ಸಾಮೂಹಿಕ ನಕಲಿಗೆ ಸಹಕರಿಸಿದ್ದಾರೆಂದು ಆರೋಪಗಳು ಕೇಳಿ ಬಂದಿದ್ದು, ಸ್ಕ್ಟಾಡ್ ತಂಡದಿಂದ ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿದಾಗ ನಕಲು ಮಾಡುತ್ತಿರುವುದು ಬಹಿರಂಗವಾಗಿದೆ. ಅಫಜಲಪುರ ಬಿಇಒ ವಸಂತ ರಾಠೋಡ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆದರಿಂದಲೇ ಈ ರೀತಿ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ನಟಿ ರಾಗಿಣಿ ಗೆಳೆಯರ ಗಲಾಟೆ ಕೇಸ್‍ಗೆ ಹೊಸ ಟ್ವಿಸ್ಟ್..!

    ನಟಿ ರಾಗಿಣಿ ಗೆಳೆಯರ ಗಲಾಟೆ ಕೇಸ್‍ಗೆ ಹೊಸ ಟ್ವಿಸ್ಟ್..!

    ಬೆಂಗಳೂರು: ನಟಿ ರಾಗಿಣಿ ಸ್ನೇಹಿತರ ಗಲಾಟೆ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ತುಪ್ಪದ ಬೆಡಗಿ ಗೆಳೆಯ ರವಿಗೆ ಆತನ ಪತ್ನಿಯೇ ಫೋನ್ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಆ ಬೆನ್ನಲ್ಲೇ ರವಿಗೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪತಿ ರವಿಗೆ ಕರೆ ಮಾಡಿದ ಪತ್ನಿ, ನೀನು ರಾಗಿಣಿ ಜೊತೆ ಹೋಗಿದ್ದೀಯಾ? ನಿನಗೆ ಯಾರಾದ್ರೂ ಬಂದು ಒದೆ ಕೊಡುತ್ತಾರೆ. ನನ್ನ ಬಾಳು ಹಾಳು ಮಾಡಿದ್ದೀಯ. ನಿನ್ನನ್ನ ನಾನು ಬಿಡಲ್ಲ. ಮದುವೆ ಆಗಿ ಬೇರೆ ಹುಡುಗಿಯರ ಜೊತೆ ಸುತ್ತಾಡುತ್ತಿದ್ದಿ. ನಿನಗೆ ಏನು ಮಾಡಿದ್ರೂ ಬುದ್ಧಿ ಬರಲ್ಲ. ನೀನು ಎಲ್ಲಿದ್ದೀಯ ಎಂದು ಗೊತ್ತು. ಅಲ್ಲಿಗೆ ಬಂದು ಒಬ್ಬ ಬುದ್ಧಿ ಕಲಿಸುತ್ತಾನೆ ಎಂದು ಪತ್ನಿಯೇ ರವಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಈ ವಾರ್ನಿಂಗ್ ಬಳಿಕ ಹೋಟೆಲ್‍ಗೆ ಬಂದಿದ್ದ ರವಿಗೆ ಗಣಿ ಉದ್ಯಮಿ ಶಿವಕುಮಾರ್ ಥಳಿಸಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?:
    ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಇಬ್ಬರು ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ಕಿತ್ತಾಡಿಕೊಂಡಿದ್ದರು. ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಯೊಂದಿಗೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು.

    ನಟಿ ರಾಗಿಣಿ ದ್ವಿವೇದಿ ಮೊದಲು ಉದ್ಯಮಿ ಶಿವಪ್ರಕಾಶ್ ನನ್ನ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ಆಫೀಸರ್ ಆಗಿ ರವಿ ಕಾರ್ಯನಿರ್ವಹಿಸುತ್ತಿರುವ ರವಿ ಅವರೊಂದಿಗೆ ಒಡನಾಟ ಹೆಚ್ಚಿತ್ತು. ರಾತ್ರಿ ನಡೆದ ಗಲಾಟೆಯ ಬಳಿಕ ಶಿವಪ್ರಕಾಶ್, ರಾಗಿಣಿ ಅವರ ಬಳಿ ಇದ್ದ ಮರ್ಸಿಡೀಸ್ ಬೆಂಜ್ ಕಾರು ಕಿತ್ತುಕೊಂಡಿದ್ದಾರೆ. ರಾಗಿಣಿ ಅವರ ಬಳಿ ಇದ್ದ ಕಾರನ್ನು ಶಿವಪ್ರಕಾಶ್ ಕೊಡಿಸಿದ್ದರು ಎನ್ನಲಾಗಿದ್ದು, ಆದ್ದರಿಂದಲೇ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಶಿವಪ್ರಕಾಶ್ ಸ್ಪಷ್ಟನೆ:
    ಗಲಾಟೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಪ್ರಕಾಶ್, ನನ್ನ ಗೆಳತಿ ರಾಗಿಣಿಯೇ ಬೇರೆ. ನಟಿ ರಾಗಿಣಿಯೇ ಬೇರೆ. ನಾನು ರವಿಶಂಕರ್ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ರಾಗಿಣಿಗಾಗಿ ಸ್ನೇಹಿತರ ಮಾರಾಮಾರಿ – ಕೇಸ್ ದಾರಿ ತಪ್ಪಿಸಲು ಶಿವಪ್ರಕಾಶ್ ಪ್ಲಾನ್

    ರಾಗಿಣಿಗಾಗಿ ಸ್ನೇಹಿತರ ಮಾರಾಮಾರಿ – ಕೇಸ್ ದಾರಿ ತಪ್ಪಿಸಲು ಶಿವಪ್ರಕಾಶ್ ಪ್ಲಾನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿಗಾಗಿ ಹಾಲಿ ಮತ್ತು ಮಾಜಿ ಬಾಯ್‍ಫ್ರೆಂಡ್‍ಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಆರೋಪಿ ಶಿವಪ್ರಕಾಶ್ ಉಲ್ಟಾ ಹೊಡೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರೋ ಶಿವಪ್ರಕಾಶ್, ನನ್ನ ಗೆಳತಿ ರಾಗಿಣಿಯೇ ಬೇರೆ. ನಟಿ ರಾಗಿಣಿಯೇ ಬೇರೆ. ನಾನು ರವಿಶಂಕರ್ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.

    ಗಣಿ ಉದ್ಯಮಿಯೂ ಆಗಿರೋ ಶಿವಪ್ರಕಾಶ್ ರಾಗಿಣಿಯ ಹಲವು ವರ್ಷಗಳ ಸ್ನೇಹಿತನಾಗಿದ್ದಾನೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ರೆಸಿಡೆನ್ಸಿ ರಸ್ತೆಯ ರಿಟ್ಜ್ ಕಾರ್ಲ್ ಟನ್ ಹೋಟೆಲ್‍ಗೆ ನಟಿ ರಾಗಿಣಿ ಹಾಗೂ ಹಾಲಿ ಬಾಯ್‍ಫ್ರೆಂಡ್ ರವಿ ಶಂಕರ್ ಹೋಗಿದ್ದರು. ಈ ವೇಳೆಗಾಗಲೇ ಹೋಟೆಲ್‍ನಲ್ಲಿ ರಾಗಿಣಿಯ ಮಾಜಿ ಗೆಳೆಯ, ಗಣಿ ಉದ್ಯಮಿ ಶಿವಪ್ರಕಾಶ್ ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. ರಾಗಿಣಿಯನ್ನು ರವಿ ಜೊತೆ ಕಂಡು ಸಿಟ್ಟಿಗೆದ್ದ ಶಿವಪ್ರಕಾಶ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ನಟಿ ರಾಗಿಣಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ

    ಅಲ್ಲದೆ ತಾನು ರಾಗಿಣಿಗೆ ಕೊಡಿಸಿದ್ದ ಬಿಳಿ ಬಣ್ಣದ ಮರ್ಸಿಡಿಸ್ ಕಾರನ್ನು ಕಿತ್ತುಕೊಂಡು ಕಳುಹಿಸಿದ್ದಾರೆ. ಸದ್ಯ ಪೊಲೀಸರು ಹೋಟೆಲ್‍ನ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ನಾಟಿ ಕೋಳಿ ಸಿನಿಮಾ ಸೆಟ್‍ಗೆ ನುಗ್ಗಿದ್ದ ಶಿವಪ್ರಕಾಶ್, ನನ್ನ ಹುಡುಗಿಗೆ ತುಂಡು ಬಟ್ಟೆ ಹಾಕಿ ಫೋಟೋ ಶೂಟ್ ನಡೆಸ್ತೀರಾ ಎಂದು ನಿರ್ಮಾಪಕ ಶ್ರೀನಿವಾಸ್ ರಾಜು ಮೇಲೂ ಹಲ್ಲೆ ನಡೆಸಿದ್ದ ಅನ್ನೋ ಆರೋಪವೂ ಕೇಳಿ ಬರುತ್ತಿದೆ.

  • ಕೆಟ್ಟು ನಿಂತ ಟೆಂಪೋವನ್ನು 7 ಕಿ.ಮೀ ಎಳೆದ ಬೈಕ್! – ವಿಡಿಯೋ ನೋಡಿ

    ಕೆಟ್ಟು ನಿಂತ ಟೆಂಪೋವನ್ನು 7 ಕಿ.ಮೀ ಎಳೆದ ಬೈಕ್! – ವಿಡಿಯೋ ನೋಡಿ

    ಉಡುಪಿ: ಟೂ ವ್ಹೀಲರ್ ಕೈಕೊಟ್ಟಾಗ ಗೆಳೆಯನ ಬೈಕಿನಲ್ಲಿ ಬಂದು ಕೆಟ್ಟ ಬೈಕಿಗೆ ಹಿಂಬದಿಯಿಂದ ಕಾಲಿಟ್ಟು ತಳ್ಳುತ್ತಾ ಗ್ಯಾರೇಜ್ ತನಕ ಡ್ರಾಪ್ ಮಾಡೋದನ್ನು ನೋಡಿದ್ದೇವೆ. ಅದೇ ರೀತಿ ದೊಡ್ಡ ಗಾಡಿ ಕೆಟ್ಟು ನಿಂತಾಗ ಟೋಯಿಂಗ್ ವಾಹನ ಎಳೆದುಕೊಂಡು ಹೋಗುತ್ತದೆ. ಇಷ್ಟೆಲ್ಲದರ ನಡುವೆ ಉಡುಪಿಯಲ್ಲಿ ಬೈಕ್ ಕೆಟ್ಟ ನಿಂತ ಟೆಂಪೋವನ್ನು ಎಳೆದುಕೊಂಡು ಹೋಗಿದೆ.

    ಮಣಿಪಾಲದಲ್ಲಿ ಟೆಂಪೋವೊಂದು ಕೆಟ್ಟು ನಿಂತಿದೆ. ವಾಹನ ತಂದು ಟೋಯಿಂಗ್ ಮಾಡಿಕೊಂಡು ಹೋಗಬೇಕಾದರೆ ಸಾವಿರಾರು ರೂಪಾಯಿ ಕೇಳಿದ್ದಾರೆ. ಆದರೆ ಇವತ್ತಿನ ಬಾಡಿಗೆ ಇನ್ನೂ ಶುರುವಾಗಿಲ್ಲ. ಜೇಬಲ್ಲಿ ಕಾಸಿಲ್ಲದ ಟೆಂಪೋ ಡ್ರೈವರ್ ಒಂದು ಐಡಿಯಾ ಮಾಡಿದ್ದಾನೆ.

    ತನ್ನ ಬೈಕ್ ಇರುವ ಗೆಳೆಯನಿಗೆ ಫೋನ್ ಮಾಡಿ ಈ ರೀತಿ ಆಗಿದೆ ಎಂದು ತಾನಿದ್ದ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಹಗ್ಗವನ್ನು ಟೆಂಪೋಗೆ ಕಟ್ಟಿ ತುದಿಯನ್ನು ಬೈಕಿಗೆ ಕಟ್ಟಿದ್ದಾನೆ. ಸುಮಾರು 7 ಕಿಲೋಮೀಟರ್ ದೂರವನ್ನು ಈ ಐಡಿಯಾದಲ್ಲಿ ಕ್ರಮಿಸಿ ಕರಾವಳಿ ಬೈಪಾಸಿನ ಗ್ಯಾರೇಜ್ ರೀಚ್ ಆಗಿದ್ದಾರೆ. ಪಬ್ಲಿಕ್ ಟಿವಿಗೆ ಈ ವಿಡಿಯೋ ಲಭ್ಯವಾಗಿದೆ.

    ಬೈಕಿನಲ್ಲಿ ಇಬ್ಬರು ಸವಾರರು ಕುಳಿತುಕೊಂಡಿದ್ದು, ನಿಧಾನವಾಗಿ ಗಾಡಿಯನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ. ಅವರ ಹಿಂದೆ ಹಗ್ಗದಿಂದ ಕಟ್ಟಿದ್ದ ಬಿಳಿ ಬಣ್ಣದ ಟೆಂಪೋವನ್ನು ಎಳದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿ.ಟಿ ರವಿ ಕುಡಿದಿದ್ದರು- ಶಾಸಕರ ವಿರುದ್ಧ ಮೃತರ ಸ್ನೇಹಿತ ಗಂಭೀರ ಆರೋಪ

    ಸಿ.ಟಿ ರವಿ ಕುಡಿದಿದ್ದರು- ಶಾಸಕರ ವಿರುದ್ಧ ಮೃತರ ಸ್ನೇಹಿತ ಗಂಭೀರ ಆರೋಪ

    ಬೆಂಗಳೂರು/ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಅವರ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು, ಈ ಕುರಿತು ಮೃತ ಗೆಳೆಯ ಚೇತನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಿ.ಟಿ ರವಿ ಕುಡಿದಿದ್ದರು ಎಂದು ಆರೋಪಿಸುತ್ತಾ  ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದಿಂದ ಕೊಲ್ಲೂರು, ಧರ್ಮಸ್ಥಳ ದೇವಾಲಯಗಳಿಗೆ ತೆರಳಿ ದರ್ಶನ ಮಾಡಿ ವಾಪಸ್ ಬರುತ್ತಿದ್ದೆವು. ಕುಣಿಗಲ್ ಸಮೀಪ ಒಂದು ಸೇತುವೆ ಇದೆ. ಅದರ ಎಡಬದಿಗೆ ನಾವು ಕಾರು ಪಾರ್ಕ್ ಮಾಡಿದ್ದೆವು. ಈ ವೇಳೆ ಒಂದು ಸ್ಕಾರ್ಪಿಯೋ ಕಾರು ಬೆಂಗಳೂರಿಗೆ ತೆರಳಬೇಕಿತ್ತು. ಸ್ವಿಫ್ಟ್ ಕಾರು ಕನಕಪುರ ಬರಬೇಕಾಗಿತ್ತು. ಸ್ವಿಫ್ಟ್ ಕಾರಿನಲ್ಲಿದ್ದವರಿಗೆ ವಿಳಾಸ ಗೊತ್ತಿರಲಿಲ್ಲ. ಹೀಗಾಗಿ ಅಲ್ಲಿ ನಿಲ್ಲಿಸಿ ಲಗೇಜ್ ಗಳನ್ನು ಒಂದು ಕಾರಿಂದ ಇನ್ನೊಂದು ಕಾರಿಗೆ ಹಾಕುತ್ತಿದ್ದೆವು ಎಂದು ಚೇತನ್ ಹೇಳಿದ್ದಾರೆ.

    ಈ ವೇಳೆ ಮೃತರಾದ ಶಶಿಕುಮಾರ್ ಹಾಗು ಸುನಿಲ್ ಅಲ್ಲೇ ಬ್ಯಾಗ್ ಹಿಡಿದುಕೊಂಡು ನಿಂತಿದ್ದರು. ಇದೇ ಸಂದರ್ಭದಲ್ಲಿ ಈ ಕಡೆಯಿಂದ ಸಿಟಿ ರವಿ ಅವರ ಕಾರು ಬಂತು. ಅವರ ಕಾರು ತುಂಬಾ ಸ್ಪೀಡ್ ನಲ್ಲಿತ್ತು. ಬಲಬದಿಗೆ ಕಾರು ಚಲಿಸಲು ಜಾಗವಿತ್ತು. ಆದ್ರೆ ಅವರು ಆ ಕಡೆ ಹೋಗಲಿಲ್ಲ. ಬದಲಾಗಿ ಸ್ಪೀಡಲ್ಲಿದ್ದ ಕಾರು ನೇರವಾಗಿ ಸ್ಕಾರ್ಪಿಯೋ ಕಾರನ್ನು ಟಚ್ ಮಾಡಿಕೊಂಡು ಸುನಿಲ್ ಹಾಗೂ ಶಶಿಕುಮಾರ್ ಅವರಿಗೆ ಗುದ್ದಿದೆ ಅಂದಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡ್ತಿದ್ದವರಿಗೆ ಶಾಸಕ ಸಿಟಿ ರವಿ ಕಾರು ಡಿಕ್ಕಿ- ಇಬ್ಬರ ದುರ್ಮರಣ

    ಗೆಳೆಯರಾದ ಮುನ್ನಾಭಾಯಿ ಹಾಗೂ ಮಂಜು ಸ್ಕಾರ್ಪಿಯೋ ಮುಂದುಗಡೆ ಇದ್ದರು. ಸ್ಕಾರ್ಪಿಯೋಗೆ ಗುದ್ದಿದ ಕಾರು ನಂತರ ಸ್ವಿಫ್ಟ್ ಕಾರಿಗೂ ಹೊಡೆದಿದೆ. ಹೀಗಾಗಿ ಮುಂದುಗಡೆ ನಿಂತಿದ್ದವರಿಗೂ ಗಾಯಗಳಾಗಿದ್ದು, ಅವರಲ್ಲಿ ಓರ್ವನ ತೊಡೆ ಮುರಿದಿದೆ. ಸದ್ಯ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಜನರಿಗೆ ಗಾಯಗಳಾಗಿದೆ ಎಂದು ಚೇತನ್ ಹೇಳಿದ್ದಾರೆ.

    ಸಿಟಿ ರವಿಯವೇ ಕಾರು ಚಲಾಯಿಸುತ್ತಿದ್ದರು. ಸ್ಕಾರ್ಪಿಯೋ ಹಾಗೂ ಸ್ವಿಫ್ಟ್ ಕಾರಿಗೆ ಗುದ್ದಿದ ರಭಸಕ್ಕೆ ಶಾಸಕರ ಕಾರು ಕೂಡ ಮುಂದೆ ಹೋಗಿ ಪಲ್ಟಿ ಹೊಡೆದಿದೆ. ಇದೇ ವೇಳೆ ನಮ್ಮ ಹುಡುಗರಿಗೆ ಹೀಗೆ ಆಗಿದ್ದರಿಂದ ಗಾಬರಿಗೊಂಡೆವು. ಬಳಿಕ ಗೆಳೆಯರಾದ ಸಂತೋಷ್ ಹಾಗೂ ಜಯಚಂದ್ರ ಸಿ ಟಿ ರವಿ ಬಳಿ ಹೋಗಿ ಯಾಕ್ ಸರ್ ಹಿಂಗೆ ಮಾಡಿದ್ರಿ, ಪ್ರಾಣಕ್ಕೆ ಬೆಲೆನೇ ಇಲ್ವ ಅಂತ ಕೇಳಿದ್ರು. ಆಗ ಅವರು ನಾನು ನೋಡಿಲ್ಲ, ಮಾಡಿಲ್ಲ.. ನೀವ್ಯಾಕೆ ಹಿಂಗೆ ನಿಂತಿದ್ದೀರಿ ಅಂತ ಕೇಳಿದ್ರು. ಹೀಗೆ ಮಾತಿಗೆ ಮಾತು ಬೆಳೆಯಿತು. ಅವರ ಕಾರಿನಲ್ಲಿ 3,4 ಜನ ಇದ್ದರು. ಸಿಟಿ ರವಿಯವರು ಡ್ರಿಂಕ್ಸ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಅವರ ಕಡೆಯಿಂದ ಹುಡುಗರು ಬಂದ್ರು. ಅಲ್ಲದೇ ಗೆಳೆಯ ಪುನೀತ್ ಮೇಲೆ ರೇಗಾಡಿದ್ರು. ಕಾರು ಹತ್ತು ನಿನಗೆ ಎಲ್ಲಿ ಟ್ರೀಟ್ ಮೆಂಟ್ ಕೊಡಿಸಬೇಕು ಅಲ್ಲಿ ಕೊಡಿಸ್ತೀನಿ ಎಂದು ಗದರಿದ್ರು ಎಂದು ತಿಳಿಸಿದ್ದಾರೆ.

    ಇದೇ ವೇಳೆ ಪೊಲೀಸ್ ಜೀಪ್, ಅಂಬುಲೆನ್ಸ್ ಬಂತು. ನಮ್ಮನ್ನು ಅಲ್ಲಿಂದ ಕಳಿಸಿಬಿಟ್ಟರು. ಘಟನೆ ನಡೆದು 8 ಗಂಟೆಯಾದ್ರೂ ಶಾಸಕರು ಏನಾಗಿದೆ ಎಂದು ಬಂದು ಕೇಳಿಲ್ಲ. ಪೊಲೀಸರು ಅವರ ಕಾರನ್ನು ವಶಕ್ಕೆ ಪಡೆದುಕೊಂಡಿಲ್ಲ. ಪೊಲೀಸರು ಕೂಡ ನಮ್ಮನ್ನಷ್ಟೇ ವಿಚಾರಿಸಿದ್ರು ಎಂದು ಪೊಲೀಸರ ವಿರುದ್ಧವೂ ಅಸಾಮಾಧಾನ ಹೊರಹಾಕಿದ್ದಾರೆ.

    ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಸಿ ಟಿ ರವಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಚೇತನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದ ಯುವಕನ ಹತ್ಯೆ

    ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದ ಯುವಕನ ಹತ್ಯೆ

    ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದ ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನ ಮುತ್ತಗಟ್ಟಿ ರಸ್ತೆಯಲ್ಲಿ ನಡೆದಿದೆ.

    ಯುವಕ ಅಪರಿಚಿತನಾಗಿದ್ದು, ಸುಮಾರು 30 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಲಾಗಿದೆ. ಭಾನುವಾರ ರಾತ್ರಿ ಸ್ನೇಹಿತರ ಜೊತೆ ಮೃತ ಯುವಕ ಪಾರ್ಟಿ ಮಾಡಲು ಬಂದಿದ್ದಾನೆ. ಈ ವೇಳೆ ಮದ್ಯಪಾನ ಮಾಡಿ ಬಳಿಕ ಮದ್ಯದ ಅಮಲಿನಲ್ಲಿ ಬಾಟಲ್ ನಿಂದ ಹೊಡೆದು ಕಲ್ಲಿನಿಂದ ಜಜ್ಜಿ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

    ಕೊಲೆಯಾದ ಜಾಗದಲ್ಲಿ ಕೆಎ- 51-ಎಚ್‍ಎಫ್-9207 ಹೋಂಡಾ ಡಿಯೋ ಬೈಕ್ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಇಂದು ಮುಂಜಾನೆ ರಸ್ತೆಯಲ್ಲಿ ಓಡಾಡುವಾಗ ಸ್ಥಳೀಯರು ನೋಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮೃತ ಯುವಕನ ವಿಳಾಸ ಇನ್ನೂ ಪತ್ತೆಯಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಟಿ ಬಳಿಕ ಸ್ನೇಹಿತರ ಮೇಲೆ ಲಾಂಗು, ಮಚ್ಚಿನಿಂದ ಹಲ್ಲೆ

    ಪಾರ್ಟಿ ಬಳಿಕ ಸ್ನೇಹಿತರ ಮೇಲೆ ಲಾಂಗು, ಮಚ್ಚಿನಿಂದ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹದ್ದೇ ಪ್ರಕರಣವೊಂದು ಯಶವಂತಪುರ ರೈಲ್ವೇ ನಿಲ್ದಾಣ ಬಳಿ ಗುರುವಾರ ಸಂಜೆ 6.30 ಗಂಟೆಗೆ ಸುಮಾರು ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

    ಗೌತಮ್, ರಘು ಹಾಗೂ ಸಲ್ಲು ಹಲ್ಲೆ ಮಾಡಿದ ಆರೋಪಿಗಳು. ಈ ಮೂವರು ಸೇರಿ ತಮ್ಮ ಸ್ನೇಹಿತರಾದ ವಿನೋದ್ ಕುಮಾರ್ ಹಾಗೂ ಮಾರುತಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆಗಿದ್ದೇನು?:
    ಹಲ್ಲೆ ಮಾಡಿದ ಹಾಗೂ ಹಲ್ಲೆಗೆ ಒಳಗಾದ ಐವರು ಸ್ನೇಹಿತರಾಗಿದ್ದು, ಒಟ್ಟಾಗಿ ಗುರುವಾರ ಪಾರ್ಟಿ ಮಾಡಿದ್ದಾರೆ. ಬಳಿಕ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಜಗಳವಾಡಿದ್ದಾರೆ. ಈ ವೇಳೆ ಗೌತಮ್, ರಘು ಹಾಗೂ ಸಲ್ಲು ಲಾಂಗ್, ಮಚ್ಚು ಹಿಡಿದು ವಿನೋದ್ ಕುಮಾರ್ ಮತ್ತು ಮಾರುತಿ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಸ್ಥಳೀಯರು ನೋಡುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ಹೈದರಾಬಾದ್: ಅತ್ಯಚಾರವೆಸೆಗಿದ ವಿಡಿಯೋ ತೋರಿಸಿ ಆರೋಪಿಗಳು 16 ವರ್ಷದ ಬಾಲಕಿಯೊಬ್ಬಳ ಮೇಲೆ 4 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    4 ವರ್ಷಗಳ ಹಿಂದೆ ಬಾಲಕಿ ಮೇಲೆ ಆಕೆಯ ಸಂಬಂಧಿಕನೊಬ್ಬ ಅತ್ಯಚಾರವೆಸೆಗಿದ್ದ. ಅಲ್ಲದೆ ಆ ದೃಶ್ಯಗಳನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಬಳಿಕ ಆರೋಪಿ ಹಾಗೂ ಆತನ ಸ್ನೇಹಿತರು ಬಾಲಕಿಗೆ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ಆದ್ರೆ ಈ ಯಾವ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿರಲಿಲ್ಲ.

    ಆ ವಿಡಿಯೋವೊಂದನ್ನೇ ಇಟ್ಟುಕೊಂಡು ಪಾಪಿಗಳು ಬಾಲಕಿ ಮೇಲೆ ಸತತ 4 ವರ್ಷಗಳಿಂದ ಅತ್ಯಚಾರ ಎಸಗಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಕಿರುಕುಳ ತಾಳಲಾರದೇ ಕಳೆದ ತಿಂಗಳು ಹೈದರಾಬಾದ್‍ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ, ತನ್ನ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್‍ನಲ್ಲಿ ಮತ್ತು ಬರುವ ಮಿಶ್ರಣವನ್ನು ಬೆರೆಸಿ ಕೊಟ್ಟನು. ಬಳಿಕ ತನ್ನ ಮೇಲೆ ಅತ್ಯಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ತನ್ನ ಮೇಲೆ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆ ಅಂತ ಹೇಳಿದ್ದಾಳೆ.

    ಈ ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆ ಮನೆಯವರು ಪ್ರತಿಭಟನೆ ಮಾಡಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಕೇವಲ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv