Tag: friends

  • ಬಾರ್‌ನಲ್ಲಿ ಗ್ಯಾಂಗ್ ವಾರ್- ಯುವಕನ ಎದೆಗೆ ಚುರಿ ಇರಿದ ಗೆಳೆಯ

    ಬಾರ್‌ನಲ್ಲಿ ಗ್ಯಾಂಗ್ ವಾರ್- ಯುವಕನ ಎದೆಗೆ ಚುರಿ ಇರಿದ ಗೆಳೆಯ

    – ಓರ್ವನ ಕೊಲೆ, ಮತ್ತೊಬ್ಬನಿಗೆ ಗಾಯ

    ಮಂಗಳೂರು: ಗೆಳೆಯರು ಪರಸ್ಪರ ಹೊಡೆದಾಡಿಕೊಂಡು ಓರ್ವನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ನಲ್ಲಿ ನಡೆದಿದೆ.

    ಗುಡ್ಡೆಕೊಪ್ಲ ನಿವಾಸಿ ಸಂದೇಶ್ ಕರ್ಕೇರ (35) ಕೊಲೆಯಾದ ಯುವಕ. ಘಟನೆಯಲ್ಲಿ ಗಣೇಶ್ ಎಂಬಾತನಿಗೆ ಗಾಯವಾಗಿದ್ದು, ಆತನನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶುಕ್ರವಾರ ರಾತ್ರಿ ಸುರತ್ಕಲ್ ಖಾಸಗಿ ಬಾರ್ ಒಂದರಲ್ಲಿ ಘಟನೆ ನಡೆದಿದೆ.

    ಸಂದೇಶ್, ಗಣೇಶ್ ಹಾಗೂ ಕೆಲ ಸ್ನೇಹಿತರು ಶುಕ್ರವಾರ ರಾತ್ರಿ 11 ಗಂಟೆಗೆ ಬಾರ್‌ಗೆ ಹೋಗಿದ್ದರು. ಮದ್ಯದ ಅಮಲಿನಲ್ಲಿದ್ದಾಗ ಯಾವುದೋ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಗೆಳೆಯನೊಬ್ಬ ಮಾರಕಾಸ್ತ್ರದಿಂದ ಸಂದೇಶ್ ಎದೆಗೆ ಇರಿದಿದ್ದಾನೆ. ಪರಿಣಾಮ ಆತ ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗೆ ಘಟನೆಯಲ್ಲಿ ಗಣೇಶ್ ಗಾಯಗೊಂಡಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಂದೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಹುಟ್ಟುಹಬ್ಬ ಆಚರಣೆಗೆ ಹೋಗಿದ್ದ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್

    ಹುಟ್ಟುಹಬ್ಬ ಆಚರಣೆಗೆ ಹೋಗಿದ್ದ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್

    ಚೆನ್ನೈ: ತನ್ನ ಹುಟ್ಟುಹಬ್ಬದ ಆಚರಣೆಗೆ ಹೊರಗೆ ಹೋಗಿದ್ದ ಅಪ್ರಾಪ್ತೆಯ ಮೇಲೆ 6 ಜನರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

    ತೆಲಂಗಾಣದಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾಸುವ ಮುನ್ನವೇ ತಮಿಳುನಾಡಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ತನ್ನ ಹುಟ್ಟುಹಬ್ಬವನ್ನು ಆಚರಿಸಲು ಪಾರ್ಕಿಗೆ ಹೋಗಿದ್ದ 11 ನೇ ತರಗತಿಯ ವಿದ್ಯಾರ್ಥಿನಿಯನ್ನು 6 ಜನ ದುಷ್ಕರ್ಮಿಗಳು ಅತ್ಯಾಚಾರ ಮಾಡಿದ್ದಾರೆ,

    ಈ ಘಟನೆ ಗುರುವಾರ ನಡೆದಿದ್ದು, ಅಂದು ತನ್ನ ಹುಟ್ಟುಹಬ್ಬ ಇದ್ದ ಕಾರಣ ಬಾಲಕಿ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬವನ್ನು ಆಚರಿಸಲು ಪಾರ್ಕ್ ಗೆ ಹೋಗಿದ್ದಾರೆ. ಪಾರ್ಟಿ ಮುಗಿಸಿ ರಾತ್ರಿ ಸುಮಾರು 9 ಗಂಟೆಗೆ ಮನೆಗೆ ವಾಪಸ್ ಬರುತ್ತಿದ್ದ ಬಾಲಕಿ ಮತ್ತು ಆಕೆಯ ಸ್ನೇಹಿತರನ್ನು ಅಡ್ಡಗಟ್ಟಿದ ಆರೋಪಿಗಳು ಆಕೆಯ ಗೆಳೆಯರನ್ನು ಥಳಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಗೈದು ವಿಡಿಯೋ ಕೂಡ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಇದಾದ ನಂತರ ಮನೆಗೆ ಬಂದ ಬಾಲಕಿ ನಡೆದ ಘಟನೆಯ ಬಗ್ಗೆ ಮರುದಿನ ತನ್ನ ತಾಯಿಗೆ ವಿವರಿಸಿದ್ದಾಳೆ. ಆಗ ತಾಯಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ದೂರ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಇಬ್ಬರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

  • ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ಸಾವು

    ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ಸಾವು

    – 24 ಗಂಟೆ ಕಳೆದರೂ ಶವಕ್ಕಾಗಿ ಶೋಧ

    ಚಾಮರಾಜನಗರ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಲವತ್ತ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ಹೊಂಗನೂರು ಗ್ರಾಮದ ಲೋಕೇಶ್(15) ತನ್ನ ಸ್ನೇಹಿತರೊಂದಿಗೆ ಈಜಲು ಬೆಲವತ್ತ ಕೆರೆಗೆ ಹೋಗಿದ್ದನು. ಆದರೆ ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಶವಕ್ಕಾಗಿ ಸ್ಥಳೀಯರು ಭಾನುವಾರದಿಂದಲೂ ಹುಡುಕಾಟ ನಡೆಸುತ್ತಿದ್ದಾರೆ. 24 ಗಂಟೆ ಕಳೆದರೂ ಸಹ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.

    24 ಗಂಟೆ ಕಳೆದರೂ ಸ್ಥಳಕ್ಕೆ ನುರಿತ ಈಜುದಾರರನ್ನ ಕರೆಸಿ ಶವಪತ್ತೆ ಮಾಡದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಬಾಲಕನ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹುಡುಗಿಗಾಗಿ ಕಿತ್ತಾಡಿ ಸ್ನೇಹಿತನನ್ನೇ ಕೊಂದ ಯುವಕ

    ಹುಡುಗಿಗಾಗಿ ಕಿತ್ತಾಡಿ ಸ್ನೇಹಿತನನ್ನೇ ಕೊಂದ ಯುವಕ

    ಬೆಂಗಳೂರು: ಹುಡುಗಿ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಜಗಳವಾಗಿ, ಯುವಕನೋರ್ವ ಆತನ ಸ್ನೇಹಿತನನ್ನೇ ಅಮಾನುಷವಾಗಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲಿನಲ್ಲಿ ಈ ಘಟನೆ ನಡೆದಿದೆ. ಪ್ರದೀಪ್(26) ಕೊಲೆಯಾದ ಯುವಕ. ಆತನ ಸ್ನೇಹಿತ ವಿಜಯ್ ಆಲಿಯಾಸ್ ವಿನೋದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

    ಭಾನುವಾರ ರಾತ್ರಿ ಶ್ರೀನಗರದಿಂದ ವಿಜಯ್‍ನನ್ನು ನೋಡಲು ಪ್ರದೀಪ್ ಬಂದಿದ್ದನು. ಈ ವೇಳೆ ಇಬ್ಬರ ನಡುವೆ ಹುಡುಗಿ ವಿಚಾರಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ಕೋಪದಲ್ಲಿ ವಿಜಯ್ ಚಾಕುವಿನಿಂದ ಪ್ರದೀಪ್‍ಗೆ ಇರಿದು ಕೊಲೆ ಮಾಡಿದ್ದಾನೆ.

    ಈ ವಿಚಾರ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ನಡುರಸ್ತೆಯಲ್ಲೇ ಕೈಕೊಟ್ಟ ಸ್ನೇಹಿತರು – ದುಷ್ಕರ್ಮಿಗಳಿಂದ ಯುವತಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು

    ನಡುರಸ್ತೆಯಲ್ಲೇ ಕೈಕೊಟ್ಟ ಸ್ನೇಹಿತರು – ದುಷ್ಕರ್ಮಿಗಳಿಂದ ಯುವತಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು

    ಪುಣೆ: ಲೈಂಗಿಕ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳಿಂದ ಯುವತಿಯೋರ್ವಳನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ(ಆರ್‌ಪಿಎಫ್‌) ರಕ್ಷಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

    ಪುಣೆಯಿಂದ 21 ಕಿ.ಮಿ ದೂರದಲ್ಲಿರುವ ಅಲಂದ್ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಯುವತಿ ಕೆಲ ಸ್ನೇಹಿತರೊಂದಿಗೆ ಕಾರಿನಲ್ಲಿ ರೈಲ್ವೇ ನಿಲ್ದಾಣದ ಬಳಿ ಬಂದಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಹಾಗೂ ಯುವತಿ ಸ್ನೇಹಿತರ ನಡುವೆ ಜಗಳ ನಡೆದಿದೆ. ಆಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೆದರಿಸಿದಾಗ, ತಕ್ಷಣ ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ನೇಹಿತರು ಓಡಿ ಹೋಗಿದ್ದಾರೆ.

    ಯುವತಿ ಮಾತ್ರ ದುಷ್ಕರ್ಮಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಆಕೆಯನ್ನು ದುಷ್ಕರ್ಮಿಗಳು ರೈಲ್ವೆ ನಿಲ್ದಾಣದ ಬಳಿ ಪಾಳು ಬಿದ್ದ ಪ್ರದೇಶದಲ್ಲಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ಯುವತಿಯ ಕಿರುಚಾಟ ಕೇಳಿ ಆರ್‌ಪಿಎಫ್‌ ಪೊಲೀಸರು ಸ್ಥಳಕ್ಕೆ ಹೋಗಿದ್ದು, ಪೊಲೀಸರನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಯುವತಿಯನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

  • ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

    ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

    – ಐದು ಬಾರಿ ಸಿನಿಮಾ ವೀಕ್ಷಿಸಿದ್ದ ಆರೋಪಿ
    – ಸಂಜಯ್ ದತ್ ಸಿನಿಮಾ ನೋಡಿ ಚಾಕು ಹಾಕ್ದ

    ಮೈಸೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾವೊಂದು ಪ್ರೇರಣೆಯಾಗಿದೆ ಎಂಬ ಸ್ಫೋಟಕ ಸುದ್ದಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

    ಭಾನುವಾರ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೈಸೂರು ಪೊಲೀಸರು, ಹಲವಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡುವ ಮುನ್ನಾ ಬಾಲಿವುಡ್ ಸಿನಿಮಾವೊಂದನ್ನು ಐದಾರು ಬಾರಿ ನೋಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ.

    ಆರೋಪಿ ಫರಾನ್ ಪಾಷಾ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಹಿಂದಿನ ರಾತ್ರಿ ಬಾಲಿವುಡ್‍ನ ವಾಸ್ತವ್ ಸಿನಿಮಾವನ್ನು ಐದಾರು ಬಾರಿ ನೋಡಿದ್ದ. ಇದು ಬಾಲಿವುಡ್ ನಟ ಸಂಜಯ್ ದತ್ ನಟನೆಯ ಗ್ಯಾಂಗ್ ಸ್ಟಾರ್ ಸಿನಿಮಾವಾಗಿದ್ದು, ಸಿನಿಮಾವನ್ನು ಹಲ್ಲೆ ಮಾಡುವ ಹಿಂದಿನ ರಾತ್ರಿ ಐದಾರು ಬಾರಿ ನೋಡಿದ್ದ ಎಂದು ಆರೋಪಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ಸಿನಿಮಾ ಯಾಕೆ ನೋಡ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಸಿನಿಮಾ ಹೀರೋ ಥರ ನಾನು ಆಗಬೇಕು. ನನಗೆ ಇದು ಪ್ರೇರಣೆ ಆಗ್ತಿದೆ ಎಂದು ಫರಾನ್ ಹೇಳಿದ್ದನಂತೆ.

    ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನು ಓದಿ: ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ

    ಸದ್ಯ ಆರೋಪಿ ಫರಾನ್ ಪೋಲಿಸರ ವಶದಲ್ಲಿದ್ದು, ಆರೋಪಿಯನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

  • ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    – ಫರಾನ್‍ಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು
    – ಪೊಲೀಸರಿಗೆ ಫರಾನ್ ಸ್ನೇಹಿತರಿಂದ ವಿವರಣೆ

    ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಫರಾನ್ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡ್ತಿನಿ ಎಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಸ್ಫೋಟಕ ವಿಚಾರ ಈಗ ಬಹಿರಂಗವಾಗಿದೆ.

    ಭಾನುವಾರ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿದ್ದ ತನ್ವೀರ್ ಸೇಠ್ ಅವರ ಮೇಲೆ ಆರೋಪಿ ಫರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವಿಚಾರದ ತನಿಖೆ ವೇಳೆ ಫಾರನ್ ಸ್ನೇಹಿತರನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದಾಗ, ಫರಾನ್ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡುತ್ತೇನೆ ಎಂದು ಅವನ ಆಪ್ತರು ಹಾಗೂ ಗೆಳೆಯರೊಂದಿಗೆ ಹೇಳಿಕೊಂಡಿದ್ದ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ತನ್ವೀರ್ ಕೊಲೆ ಯತ್ನ ಪ್ರಕರಣ ತನಿಖೆ ಚುರುಕುಗೊಳಿಸಿರುವ ಪೊಲೀಸರು ಫರಾನ್ ಜೊತೆಗೆ ಫೋಟೋದಲ್ಲಿ ಗುರುತಿಸಿಕೊಂಡಿದ್ದ ಸ್ನೇಹಿತರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತನ ಸ್ನೇಹಿತರು, ಫರಾನ್‍ಗೆ ಇತ್ತೀಚೆಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು. ನಮ್ಮ ಜೊತೆಗೆ ವಿಐಪಿ ಒಬ್ಬರನ್ನು ಕೊಲೆ ಮಾಡಿ ಫೇಮಸ್ ಆಗುತ್ತೇನೆ ಎಂದು ಹೇಳಿದ್ದ. ಯಾರು ಆ ವಿಐಪಿ? ಯಾವಾಗ ಮಾಡುತ್ತೇನೆ ಎಂದು ಹೇಳಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಏರಿಯಾದಲ್ಲಿ ಹವಾ ಸೃಷ್ಟಿಸಲು 20ಕ್ಕೂ ಹೆಚ್ಚು ಕಾರುಗಳನ್ನು ಜಖಂಗೊಳಿಸಿದ ಪುಂಡರು ಅರೆಸ್ಟ್

    ಆತ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದೇವು. ಆದರೆ ಭಾನುವಾರ ರಾತ್ರಿ ತನ್ವೀರ್ ಸೇಠ್ ಮೇಲಿನ ಕೊಲೆಯತ್ನ ಕಂಡು ನಮಗೂ ಭಯವಾಗಿದೆ ಎಂದು ಫರಾನ್ ಸ್ನೇಹಿತರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  • ಸ್ನೇಹಿತ ನೀರಿನಲ್ಲಿ ಮುಳುಗೋದನ್ನು ಕಂಡ್ರೂ ಬದುಕಿಸಲಾಗದ ಸ್ಥಿತಿ!

    ಸ್ನೇಹಿತ ನೀರಿನಲ್ಲಿ ಮುಳುಗೋದನ್ನು ಕಂಡ್ರೂ ಬದುಕಿಸಲಾಗದ ಸ್ಥಿತಿ!

    – ಸಾವಿನ ಕೊನೆ ಕ್ಷಣಗಳು ಮೊಬೈಲಿನಲ್ಲಿ ಸೆರೆ

    ಕಲಬುರಗಿ: ತನ್ನ ಕಣ್ಣಮುಂದೆಯೇ ಸ್ನೇಹಿತ ನೀರಿನಲ್ಲಿ ಮುಳುಗುವುದನ್ನು ಕಂಡು ಸ್ನೇಹಿತರು ಗಾಬರಿಯಾಗಿದ್ದು, ಬದುಕಿಸುವಲ್ಲಿ ಅಸಹಾಯಕರಾದ ಪ್ರಸಂಗವೊಂದು ನಡೆದಿದೆ.

    ಕಲಬುರಗಿ ಪಟ್ಟಣದ ಹೊರವಲಯದಲ್ಲಿನ ರಾಣೇಶಪೀರ್‍ದರ್ಗಾ ಬಳಿಯ ಕಲ್ಲು ಕ್ವಾರಿಯಲ್ಲಿ ಘಟನೆ ನಡೆದಿದೆ. ಜಾಫರ್(22) ನೀರಲ್ಲಿ ಮುಳುಗಿ ಮೃತ ಯುವಕ. ಸಾವಿನ ಕೊನೆ ಕ್ಷಣಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವಕ ಜಾಫರ್ ನೀರಲ್ಲಿ ಮುಳುಗಿ ಸಾಯುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ತನ್ನ ಕಣ್ಣಮುಂದೆ ಸ್ನೇಹಿತ ನೀರಲ್ಲಿ ಮುಳಗುವುದನ್ನೂ ಕಂಡರೂ ಬದುಕಿಸಲಾಗದ ಸ್ಥಿತಿಯಲ್ಲಿ ಸ್ನೇಹಿತನಿದ್ದನು.

    ಕಲಬುರಗಿ ನಗರದ ಮಿಜಗುರಿ ಬಡಾವಣೆ ನಿವಾಸಿ ಜಾಫರ್, ಶುಕ್ರವಾರ ಸಂಜೆ ಸ್ನೇಹಿತರ ಜೊತೆ ಸೇರಿ ಕಲ್ಲು ಕಣಿಯಲ್ಲಿ ಈಜಲು ಹೋಗಿದ್ದ. ಸುಮಾರು ಹೊತ್ತು ಸ್ನೇಹಿತರೆಲ್ಲ ಸೇರಿ ಈಜಾಡಿದ್ದಾರೆ. ಅದೆಲ್ಲವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದೆ. ಕೊನೆಗೆ ಮತ್ತೆ ನೀರಿಗೆ ಜಿಗಿದ ಜಾಫರ್, ಒಂದು ನಿಮಿಷ ಈಜಿ ದಡಕ್ಕೆ ಬರಲು ಪ್ರಯತ್ನಿಸುತ್ತಿದ್ದ. ದಣಿವಾಗಿ ದಡಮುಟ್ಟಲು ಬರುತ್ತಾನೆ. ದಡದತ್ತ ಬರುತ್ತಿದ್ದಾನೆ ಎಂದು ಸ್ನೇಹಿತರು ಸುಮ್ಮನಾಗಿದ್ದಾರೆ.

    ಆದರೆ ಅಷ್ಟರೊಳಗಾಗಿ ಜಾಫರ್ ನೀರು ಪಾಲಾಗಿ ಮೃತಪಟ್ಟಿರುತ್ತಾನೆ. ಈ ಎಲ್ಲ ಘಟನೆ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹುಡುಗಿಗಾಗಿ ಸ್ನೇಹಿತರಿಂದಲೇ ಕೊಲೆಯಾದ ಯುವಕ

    ಹುಡುಗಿಗಾಗಿ ಸ್ನೇಹಿತರಿಂದಲೇ ಕೊಲೆಯಾದ ಯುವಕ

    ಬೆಂಗಳೂರು: ದರೋಡೆ, ಸುಲಿಗೆ ಮಾಡಿಕೊಂಡು ಪ್ರೀತಿ ಎಂದು ಒಡಾಡುತ್ತಿದ್ದ ಯುವಕನನ್ನು ಸ್ನೇಹಿತರೇ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸುದರ್ಶನ್ ಕೊಲೆಯಾದ ಯುವಕ. ಹುಡುಗಿಯ ವಿಚಾರಕ್ಕಾಗಿ ಸ್ನೇಹಿತರೆಲ್ಲಾ ಸೇರಿಕೊಂಡು ಸುದರ್ಶನ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದರ್ಶನ್ ಹಾಗೂ ಸ್ನೇಹಿತರು ಜೊತೆಗೆ ದರೋಡೆ, ಸುಲಿಗೆ ಮಾಡಿಕೊಂಡಿದ್ದರು.

    ಈ ಗ್ಯಾಂಗ್‍ನಲ್ಲಿದ್ದ ಸದಸ್ಯನ ತಂಗಿಯನ್ನು ಸುದರ್ಶನ್ ಪ್ರೀತಿಸುತ್ತಿದ್ದನು. ಈ ವಿಷಯ ಆಕೆಯ ಸಹೋದರನಿಗೆ ತಿಳಿಯಿತು. ಬಳಿಕ ಈ ವಿಚಾರವಾಗಿ ಸುದರ್ಶನ್ ಹಾಗೂ ಆತನ ಗ್ಯಾಂಗ್‍ನಲ್ಲಿದ್ದ ಹುಡುಗರ ನಡುವೆ ಆಗಾಗ ಜಗಳ ಕೂಡ ಆಗುತ್ತಿತ್ತು.

    ಜೈಲಿನಿಂದ ಬಂದಿದ್ದ ಸುದರ್ಶನ್ ಜೊತೆ ಮಾತನಾಡುವುದಕ್ಕೆ ತಂಡ ಆತನನ್ನು ಪೂರ್ಣ ಚಂದ್ರತೇಜಸ್ವಿ ಬಡವಾಣೆಗೆ ಕರೆಸಿಕೊಂಡಿದ್ದರು. ಖಾಲಿ ಸೈಟ್‍ನಲ್ಲಿ ಯುವಕರ ಗುಂಪು ಗಲಾಟೆ ಮಾಡಿ ಸುದರ್ಶನ್ ಕತ್ತು ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಬಗ್ಗೆ ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

  • ಕೆರೆಯಲ್ಲಿ ಈಜಲು ತೆರೆಳಿದ್ದ ನಾಲ್ವರು ಸ್ನೇಹಿತರು ನೀರು ಪಾಲು

    ಕೆರೆಯಲ್ಲಿ ಈಜಲು ತೆರೆಳಿದ್ದ ನಾಲ್ವರು ಸ್ನೇಹಿತರು ನೀರು ಪಾಲು

    ಹುಬ್ಬಳ್ಳಿ: ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಸ್ನೇಹಿತರು ನೀರು ಪಾಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಕೆರೆಯಲ್ಲಿ 7 ಸ್ನೇಹಿತರು ಈಜಲು ತೆರಳಿದ ವೇಳೆ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಹುಬ್ಬಳ್ಳಿಯ ನಿವಾಸಿಗಳಾದ ಜುನೈದ್ (18), ಸುಭಾನಿ (18), ಐಯಾನ್ (18) ಮತ್ತು ಸುಭಾನಿ (18) ಎಂದು ಗುರುತಿಸಲಾಗಿದೆ.

    ಈದ್ ಮಿಲಾದ್ ಹಬ್ಬದ ನಂತರ ಇಂದು ಏಳು ಜನ ಸ್ನೇಹಿತರು ಸೇರಿಕೊಂಡು ದೇವರಗುಡಿಹಾಳ ಕೆರೆಗೆ ಹೋದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿ ಸ್ಥಳೀಯರ ಸಹಾಯಯೊಂದಿಗೆ ಮೃತರ ಶವಗಳನ್ನು ಪತ್ತೆ ಮಾಡಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.