Tag: friends

  • ಆಟದಲ್ಲಿ ಜಗಳ-ಗೆಳೆಯನನ್ನ ಕೊಡಲಿಯಿಂದ ಕೊಂದ್ರು

    ಆಟದಲ್ಲಿ ಜಗಳ-ಗೆಳೆಯನನ್ನ ಕೊಡಲಿಯಿಂದ ಕೊಂದ್ರು

    – ಇಬ್ಬರ ಬಂಧನ, ರಬ್ಬರ್ ತೋಟದಲ್ಲಿ ಸಮಾಧಿ

    ತಿರುವನಂತಪುರ: 16 ವರ್ಷದ ಬಾಲಕನೋರ್ವ ತನ್ನ ಸಹಪಾಠಿಯನ್ನು ಕೊಲೆಗೈದಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

    ಅಂಗದಿಕ್ಕಲ್ ನಿವಾಸಿಯಾದ ಅಖಿಲ್ (16) ಸ್ನೇಹಿತರಿಂದಲೇ ಕೊಲೆಯಾದ ಬಾಲಕ. ಎಲ್‍ಐಡಿ ಆಟದಲ್ಲಿ ಸ್ನೇಹಿತರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಅಖಿಲ್ ನನ್ನು ಆತನ ಗೆಳೆಯರೇ ಕೊಡಲಿಯಿಂದ ಕೊಂದಿದ್ದಾರೆ. ತದನಂತರ ಶವವನ್ನು ಕೊಡುಮಾನ್ ಪ್ರದೇಶದ ರಬ್ಬರ್ ತೋಟದಲ್ಲಿ ಯಾರಿಗೂ ತಿಳಿಯದಂತೆ ಸಮಾಧಿ ಮಾಡಿದ್ದಾರೆ.

    ಭಾನುವಾರ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಕೊಲೆಗೆ ಬೇರೆ ಕಾರಣಗಳಿರುಬಹುದಾ ಎಂದು ಅನುಮಾನಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ನಿನಗೆ ಕೊರೊನಾ ಬಂದಿದೆ ಎಂದ ಸ್ನೇಹಿತನಿಗೆ ಗುಂಡು ಹಾರಿಸಿದ

    ನಿನಗೆ ಕೊರೊನಾ ಬಂದಿದೆ ಎಂದ ಸ್ನೇಹಿತನಿಗೆ ಗುಂಡು ಹಾರಿಸಿದ

    – ಲುಡೋ ಆಡುವಾಗ ಎಡವಟ್ಟು

    ಲಕ್ನೋ: ನಿನಗೆ ಕೊರೊನಾ ಬಂದಿದೆ ಎಂದು ತಮಾಷೆ ಮಾಡಿದ ಸ್ನೇಹಿತ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜಾರ್ಚಾ ಪ್ರದೇಶದಲ್ಲಿ ನಡೆದಿದೆ.

    ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಜನರಲ್ಲಿ ಭಯ ತರಿಸಿದೆ ಎಂದರೆ ನಮ್ಮ ಜೊತೆಯಲ್ಲಿ ಇರುವವರು ಯಾರೇ ಅನೇಕ ಬಾರಿ ಕೆಮ್ಮಿದರೆ ಅವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಬಂದಿದೆ. ಹಾಗೆಯೇ ಲುಡೋ ಆಡುವಾಗ ಕೆಮ್ಮಿದ ಗೆಳಯನನ್ನು ಕೊರೊನಾ ಬಂದಿದೆ ಎಂದು ಕೀಟಲೆ ಮಾಡಿದವನು ಈಗ ಗುಂಡಿನ ಏಟು ತಿಂದು ಆಸ್ಪತ್ರೆ ಸೇರಿದ್ದಾನೆ.

    ಗುಂಡಿನ ಏಟು ತಿಂದು ಆಸ್ಪತ್ರೆಗೆ ಸೇರಿದವನನ್ನು ಪ್ರತೀಕ್ ಮತ್ತು ಗುಂಡು ಹಾರಿಸಿದವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪ್ರತೀಕ್ ಮತ್ತು ಸುರೇಶ್ ಸ್ನೇಹಿತರಾಗಿದ್ದು, ಮಂಗಳವಾರ ರಾತ್ರಿ 9 ಗಂಟೆಗೆ ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿಕೊಂಡು ಲುಡೋ ಆಡಲು ಅವರ ಏರಿಯಾದಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ಹೋಗಿದ್ದರು. ಲೂಡೋ ಆಡವಾಗ ಸುರೇಶ್ ಹಲವು ಬಾರಿ ಕೆಮ್ಮಿದ್ದಾನೆ.

    ಸುರೇಶ್ ಕೆಮ್ಮಿದ್ದನ್ನು ನೋಡಿ ಪ್ರತೀಕ್, ತುಂಬ ಕೆಮ್ಮುತ್ತಿದ್ದಾನೆ. ಅವನಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ತಮಾಷೆ ಮಾಡಿದ್ದಾನೆ. ಈ ತಮಾಷೆ ವಿಕೋಪಗೆ ಹೋಗಿದೆ. ಕೆಮ್ಮಿದಾಗಲೆಲ್ಲ ಕೊರೊನಾ ಕೊರೊನಾ ಅನ್ನುತ್ತಿದ್ದ ಪ್ರತೀಕ್ ಕೋಪಗೊಂಡ ಸುರೇಶ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಶೂಟ್ ಮಾಡಿದ್ದಾನೆ. ನಂತರ ಗನ್ ಶಬ್ದ ಕೇಳಿದ ಸುತ್ತಮುತ್ತಲಿನ ಜನರು ದೇವಸ್ಥಾನದ ಬಳಿ ಬಂದಿದ್ದಾರೆ.

    ಜನರು ಬರುವುದನ್ನು ಕಂಡ ಸುರೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಕಾಲಿಗೆ ಗುಂಡು ಬಿದ್ದು ನರಳುತ್ತಿದ್ದ ಪ್ರತೀಕ್ ನನ್ನು ಸ್ಥಳೀಯರು ನೋಯ್ಡಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆರೋಪಿ ಸುರೇಶ್‍ಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಸ್ನೇಹಿತನ ಕೊಲೆ ಮಾಡಿ ಮೃತದೇಹದ ಜೊತೆ ಸೆಕ್ಸ್ ಆರೋಪ

    ಸ್ನೇಹಿತನ ಕೊಲೆ ಮಾಡಿ ಮೃತದೇಹದ ಜೊತೆ ಸೆಕ್ಸ್ ಆರೋಪ

    – ಮೃತ ಗೆಳೆಯನ ಮನೆಯಲ್ಲೇ ಮದ್ಯಪಾನ
    – ಮರುದಿನ ಮೃತದೇಹ ಸಾಗಿಸುವಾಗ ಸೋದರಿ ಕೈಗೆ ಸಿಕ್ಕಿಬಿದ್ರು

    ನವದೆಹಲಿ: ಸ್ನೇಹಿತನನ್ನು ಕೊಲೆ ಮಾಡಿ ಮೃತದೇಹದ ಜೊತೆಗೆ ಸೆಕ್ಸ್ ಮಾಡಿರುವ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬಿಹಾರದ ಪಾಟ್ನಾದಿಂದ ಬಂಧಿಸಲಾಗಿದೆ.

    ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳು ಜಾರ್ಖಂಡ್ ಮತ್ತು ಬಿಹಾರ ಮೂಲದವರಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಪಾಟ್ನಾಕ್ಕೆ ಪರಾರಿಯಾಗಿದ್ದರು. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಸ್ನೇಹಿತನ ಶವ ಆತನ ನಿವಾಸದಲ್ಲಿ ಪತ್ತೆಯಾಗಿದೆ.

    ಏನಿದು ಪ್ರಕರಣ?
    ಇಬ್ಬರು ಆರೋಪಿಗಳು ಮಂಗಳವಾರ ಸಂಜೆ ಮೃತನ ನಿವಾಸದಲ್ಲಿದ್ದು, ಮೂವರು ಮದ್ಯಪಾನ ಮಾಡುತ್ತಿದ್ದರು. ಮದ್ಯಪಾನ ಮಾಡುವಾಗ ಆರೋಪಿಗಳಿಬ್ಬರು ಮತ್ತು ಮೃತ ಸ್ನೇಹಿತನ ನಡುವೆ ಗಲಾಟೆ ಶುರುವಾಗಿದೆ. ಆಗ ಮೃತ ಸ್ನೇಹಿತ ಅಸಭ್ಯ ಪದಗಳಿಂದ ಬೈದಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಆತನನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಅವನ ಮೃತದೇಹದ ಜೊತೆಗೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಕೊಲೆ ಮಾಡಿದ ನಂತರ ಆರೋಪಿಗಳು ಅಲ್ಲಿಂದ ಹೋಗಿದ್ದಾರೆ. ಆದರೆ ಮರುದಿನ ಮೃತದೇಹವನ್ನು ಸಾಗಿಸಲು ಬಂದಿದ್ದಾರೆ. ಈ ವೇಳೆ ಮೃತನ ಸಹೋದರಿಯ ಕೈಗೆ ಸಿಕ್ಕಿಬಿದ್ದಿದ್ದು, ಇಬ್ಬರು ಆರೋಪಿಗಳನ್ನು ಮೃತನ ಸಹೋದರಿ ಪ್ರಶ್ನೆ ಮಾಡಿದ್ದಾರೆ. ಆಗ ಭಯದಿಂದ ಇಬ್ಬರು ಪರಾರಿಯಾಗಿದ್ದಾರೆ. ಬಳಿಕ ಆತನ ಸಹೋದರಿ ನಡೆದಿದ್ದ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಹಿಳೆಯ ದೂರಿನ ಮೇರೆಗೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇತ್ತ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪಾಟ್ನಾಕ್ಕೆ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರ ತಂಡ ಪಾಟ್ನಾಕ್ಕೆ ಹೋಗಿದ್ದರು. ಅಲ್ಲಿ ರೈಲ್ವೆ ನಿಲ್ದಾಣದಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

  • ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

    ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

    – ಪತಿಯ ವಿಷಯ ತಿಳಿದು ಪ್ರಜ್ಞೆ ತಪ್ಪಿದ ಪತ್ನಿ
    – ಪ್ರಜ್ಞೆ ಬರುತ್ತಿದ್ದಂತೆ ಆಸ್ಪತ್ರೆಗೆ ಓಡಿದ ವಧು

    ಚಂಢೀಗಡ್: ಮದುವೆ ದಿನದಂದು ವರ ಸಂಬಂಧಿಕರೊಂದಿಗೆ ಮೋಜು-ಮಸ್ತಿ ಮಾಡಲು ಹೋಗಿ ಮೊದಲ ರಾತ್ರಿಗೂ ಮುನ್ನವೇ ಮೃತಪಟ್ಟ ಘಟನೆ ಪಂಜಾಬ್‍ನ ಲುದಿಯಾನಾದಲ್ಲಿ ನಡೆದಿದೆ.

    ರಾಹುಲ್ ಮೃತಪಟ್ಟ ವರ. ಬುಧವಾರ ಬೆಳಗ್ಗೆ ರಾಹುಲ್ ಮದುವೆಯಾಗಿದ್ದು, ಸಂಜೆ ತನ್ನ ಸಂಬಂಧಿಕರ ಜೊತೆ ಮೋಜುಮಸ್ತಿ ಮಾಡಲು ಕಾರಿನಲ್ಲಿ ಲುದಿಯಾನಾಗೆ ತೆರಳಿದ್ದರು. ಅಲ್ಲಿಂದ ಭಾಟೀಯಾ ಗ್ರಾಮಕ್ಕೆ ತೆರಳುವಾಗ ಕಾರು ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಹುಲ್ ಹಾಗೂ ಆತನ ಬಾವ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಚಾಲಕ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದನು. 5 ಸೀಟ್ ಇರುವ ಕಾರಿನಲ್ಲಿ 7 ಮಂದಿ ಕುಳಿತು ಪ್ರಯಾಣಿಸುತ್ತಿದ್ದರು. ಎಲ್ಲರೂ ಮೋಜುಮಸ್ತಿ ಮಾಡಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ಹಿಂಬದಿಯಿಂದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವರ ಹಾಗೂ ಆತನ ಬಾವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ, ಕಾರಿನಲ್ಲಿದ್ದ ಏಳು ಮಂದಿ ಮದ್ಯ ಸೇವಿಸಿದ್ದರು. ಅಪಘಾತದ ಮಾಹಿತಿ ಬರುತ್ತಿದ್ದಂತೆ ಎಸಿಪಿ ನರ್ಕೋಟಿಕ್ಸ್ ಸೆಲ್ ರಾಜಕುಮಾರ್ ಚೌಧರಿ ಹಾಗೂ ಉಳಿದ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕ್ರೇನ್ ಸಹಾಯದಿಂದ ಕಾರನ್ನು ಟ್ಯಾಂಕರ್ ನಿಂದ ಬೇರ್ಪಡಿಸಲಾಯಿತು.

    ಈ ಘಟನೆ ಬಗ್ಗೆ ಟ್ಯಾಂಕರ್ ಚಾಲಕ ಶಮ್‍ಶೇರ್ ಕೊಹ್ಲಿ ಮಾತನಾಡಿ, ಸರಾಬಾದಿಂದ ಮೊಟ್ಟೆ ಲೋಡ್ ಮಾಡಿಕೊಂಡು ಜಮ್ಮುಗೆ ಹೋಗುತ್ತಿದೆ. ಈ ವೇಳೆ ಟ್ಯಾಂಕರ್ ಹಿಂಬದಿ ಡಿಕ್ಕಿ ಹೊಡಯಲಾಯಿತು. ತಕ್ಷಣ ನಾನು ಟ್ಯಾಂಕರ್ ನ ಬ್ರೇಕ್ ಹಾಕಿ ಕೆಳಗೆ ಇಳಿದು ನೋಡಿದೆ. ಆಗ ಟ್ಯಾಂಕರಿಗೆ ಕಾರು ಡಿಕ್ಕಿ ಹೊಡೆದಿತ್ತು. ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.

    ವಧು ಮೊದಲ ರಾತ್ರಿಯಂದು ತನ್ನ ಪತಿ ರಾಹುಲ್‍ಗಾಗಿ ಕಾಯುತ್ತಿದ್ದಳು. ಈ ವೇಳೆ ಕುಟುಂಬಸ್ಥರು ರಾಹುಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ ತಕ್ಷಣ ವಧು ಪ್ರಜ್ಞೆ ತಪ್ಪಿದ್ದಾಳೆ. ಎಚ್ಚರಗೊಂಡಾಗ ವಧು ಅಳುತ್ತಾ ಆಸ್ಪತ್ರೆಗೆ ಓಡಿ ಹೋಗಿದ್ದಾಳೆ. ಈ ವೇಳೆ ಕೊನೆಯ ಬಾರಿಗೆ ನನ್ನ ಪತಿಯ ಮುಖವನ್ನು ನೋಡಲು ಬಿಡಿ ಎಂದು ಕಣ್ಣೀರು ಹಾಕಿದ್ದಾಳೆ.

  • ಸ್ನೇಹಿತರ ಜೊತೆ ವಿಡಿಯೋ ಹಂಚಿಕೊಂಡ ಪ್ರಿಯತಮ – ಅಪ್ರಾಪ್ತೆ ಆತ್ಮಹತ್ಯೆ

    ಸ್ನೇಹಿತರ ಜೊತೆ ವಿಡಿಯೋ ಹಂಚಿಕೊಂಡ ಪ್ರಿಯತಮ – ಅಪ್ರಾಪ್ತೆ ಆತ್ಮಹತ್ಯೆ

    – ಇಬ್ಬರ ಒಪ್ಪಿಗೆ ಮೇರೆಗೆ ವಿಡಿಯೋ ರೆಕಾರ್ಡ್
    – ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ಗಾಂಧಿನಗರ: ತನ್ನ ಪ್ರಿಯಕರನೇ ತಮ್ಮ ಖಾಸಗಿ ವಿಡಿಯೋವನ್ನು ಸ್ನೇಹಿತರಿಗೆ ಶೇರ್ ಮಾಡಿಕೊಂಡಿದ್ದಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನ ಚರಾ ನಗರ ಪ್ರದೇಶದಲ್ಲಿ ನಡೆದಿದೆ.

    16 ವರ್ಷದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಅಪ್ರಾಪ್ತೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವೇಳೆ ಪರಸ್ಪರ ಇಬ್ಬರು ಒಪ್ಪಿಗೆಯ ಮೇರೆಗೆ ತಮ್ಮ ಖಾಸಗಿ ವಿಡಿಯೋವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಸ್ವಲ್ಪ ದಿನದ ನಂತರ ಯುವಕ ಆ ಖಾಸಗಿ ವಿಡಿಯೋವನ್ನು ತನ್ನ ಮೂವರು ಸ್ನೇಹಿತರ ಜೊತೆ ಹಂಚಿಕೊಂಡಿದ್ದನು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಅಪ್ರಾಪ್ತೆಯ ಪೋಷಕರು ಪೊಲೀಸ್ ಠಾಣೆಗೆ ಹೋಗಿ ಈ ಕುರಿತು ಯುವಕನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಆದರೆ ವಿಡಿಯೋ ವೈರಲ್ ಆದ ನಂತರ ಅಪ್ರಾಪ್ತೆ ಖಿನ್ನತೆಗೆ ಒಳಗಾಗಿದ್ದಳು. ಇದರಿಂದ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಆರೋಪಿ ಯುವಕ ಮೇಲೆ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಆತನ ಮೂವರು ಸ್ನೇಹಿತರ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಈಗಾಗಲೇ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಹೇಮಂತ್ ಪಟೇಲ್ ಹೇಳಿದರು.

  • ಮೊಬೈಲ್‍ಗಾಗಿ ಸ್ನೇಹಿತನ ಕೊಲೆ- ಮಧ್ಯರಾತ್ರಿ ಎಣ್ಣೆ ಪಾರ್ಟಿಯಲ್ಲಿ ಕೃತ್ಯ

    ಮೊಬೈಲ್‍ಗಾಗಿ ಸ್ನೇಹಿತನ ಕೊಲೆ- ಮಧ್ಯರಾತ್ರಿ ಎಣ್ಣೆ ಪಾರ್ಟಿಯಲ್ಲಿ ಕೃತ್ಯ

    – ದೂರು ದಾಖಲಾದ 2 ಗಂಟೆಯಲ್ಲಿ ಊರು ಬಿಟ್ಟಿದ್ದ ಆರೋಪಿ ಅರೆಸ್ಟ್

    ಬೆಳಗಾವಿ: ಮೊಬೈಲ್ ವಿಚಾರವಾಗಿ ಜಗಳವಾಡಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಘಟನೆ ಬೆಳಗಾವಿ ತಾಲೂಕಿನ ಬಿ.ಕೆ ಕಂಗ್ರಾಳಿಯಲ್ಲಿ ನಡೆದಿದೆ.

    ಶಂಕರ್ ಪಾಲ್ಕರ್ (30) ಕೊಲೆಯಾದ ವ್ಯಕ್ತಿ. ಈತ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಮದುವೆ ಕೂಡ ಆಗಿರಲಿಲ್ಲ. ಶಂಕರ್‌ಗೆ ಎಂಟು ವರ್ಷದ ಹಿಂದೆ ಮಹೇಶ್ ಪರಿಚಯವಾಗಿದ್ದನು. ಈತ ಕೂಡ ಬೆಳಗಾವಿಯ ರಾಮನಗರದ ನಿವಾಸಿಯಾಗಿದ್ದು, ಇಬ್ಬರು ಅಕ್ಕಪಕ್ಕದ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಜೊತೆಗೆ ಒಂದೇ ವೃತ್ತಿ ಆಗಿದ್ದರಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.

    ಭಾನುವಾರ ಇಬ್ಬರೂ ಮಧ್ಯ ರಾತ್ರಿವರೆಗೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ನಂತರ ಮಹೇಶ್ ಹೊಸದೊಂದು ಮೊಬೈಲ್ ಕೊಡಿಸು ನನ್ನ ಮೊಬೈಲ್ ಹಾಳಾಗಿದೆ ಎಂದು ಶಂಕರ್ ಬಳಿ ಕೇಳಿದ್ದಾನೆ. ಆಗ ಶಂಕರ್, ನಿನಗ್ಯಾಕೆ ಮೊಬೈಲ್ ಕೊಡಿಸಬೇಕೆಂದು ಹೇಳಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆಗ ಶಂಕರ್ ಬಳಿಯಿದ್ದ ಚಾಕುವನ್ನ ಮಹೇಶ್ ಕಸಿದುಕೊಂಡು ಶಂಕರ್ ಹೊಟ್ಟೆಗೆ ಇರಿದಿದ್ದಾನೆ. ಹಲ್ಲೆಗೊಳಗಾಗಿ ಶಂಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿ.ಕೆ ಕಂಗ್ರಾಳಿ ಗ್ರಾಮದ ಹೊರವಲಯದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಮೂವರು ಪಾರ್ಟಿ ಮಾಡಿದ್ದಾರೆ. ಆದರೆ ಲೇಟ್ ಆಗಿದ್ದಕ್ಕೆ ಓರ್ವ ಸ್ನೇಹಿತ ಮನೆಗೆ ಹೋಗಿದ್ದಾನೆ. ಆಗ ಮಹೇಶ್ ಮತ್ತು ಶಂಕರ್ ನಡುವೆ ಕುಡಿದ ಮತ್ತಿನಲ್ಲಿ ಮೊಬೈಲ್ ವಿಚಾರಕ್ಕೆ ಗಲಾಟೆಯಾಗಿದೆ. ಈ ವೇಳೆ ಮಹೇಶ್, ಶಂಕರ್‌ಗೆ ಚಾಕುವಿನಿಂದ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಈ ಕುರಿತು ಶಂಕರ್ ಸಹೋದರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ತಕ್ಷಣ ಎಚ್ಚೆತ್ತುಕೊಂಡ ಎಪಿಎಂಸಿ ಪೊಲೀಸರು ದೂರು ದಾಖಲಾದ ಎರಡೇ ಗಂಟೆಯಲ್ಲಿ ಊರು ಬಿಟ್ಟಿದ್ದ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆ ಮಾಡಿದ ಹಂತಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಕುಡಿದು ಕೊಲೆ ಮಾಡುವ ಮಟ್ಟಿಗೆ ಯಾರು ಹೋಗಬಾರದು ಎಂದು ಸಂಬಂಧಿಕರು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

  • ಸ್ನೇಹಿತನೊಂದಿಗೆ ಬಿಯರ್ ಕುಡಿಯಲು ಹೋದವ ಶವವಾದ

    ಸ್ನೇಹಿತನೊಂದಿಗೆ ಬಿಯರ್ ಕುಡಿಯಲು ಹೋದವ ಶವವಾದ

    ಮೈಸೂರು: ಪಾರ್ಟಿ ಮಾಡಲೆಂದು ಸ್ನೇಹಿತನ ಜೊತೆ ಮನೆ ಬಿಟ್ಟು ಹೋದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮನೋಜ್ ಕುಮಾರ್ ಮೃತ ದುರ್ದೈವಿ. ತಗಡೂರು ಗ್ರಾಮದ ನಿವಾಸಿ ಮನೋಜ್ ಕುಮಾರ್, ಗುರುವಾರ ಸಂಜೆ ಸ್ನೇಹಿತ ವಿಜಯ್ ಕುಮಾರ್ ಜೊತೆ ಬೈಕಿನಲ್ಲಿ ತೆರಳಿದ್ದ. ಇದೀಗ ನಾಲೆಯ ತೂಬಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಸೋನಹಳ್ಳಿ ಗ್ರಾಮದ ತಗಡೂರು ರಾಮಚಂದ್ರರಾವ್ ನಾಲೆ ಬಳಿ ಇಬ್ಬರೂ ಬಿಯರ್ ಕುಡಿಯುತ್ತಿದ್ದರು. ಬಿಯರ್ ಪಾರ್ಟಿಗೆ ಇಬ್ಬರು ಅಪರಿಚಿತರು ಸೇರಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿ ವಿಜಯ್ ಕುಮಾರ್ ಬೈಕನ್ನು ನಾಲೆಗೆ ತಳ್ಳಿದ್ದು, ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

    ಸ್ವಲ್ಪ ಸಮಯದ ನಂತರ ಹಿಂದಿರುಗಿ ಬಂದಾಗ ಮನೋಜ್ ಕುಮಾರ್ ಕೂಡ ಅಲ್ಲಿ ಇರಲಿಲ್ಲ. ಆಗ ವಿಜಯಕುಮಾರ್, ಮನೋಜ್ ಕುಮಾರ್ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಾಲೆ ಬಳಿ ಹುಡುಕಾಡಿದಾಗ ಮನೋಜ್ ಶವ ಪತ್ತೆಯಾಗಿದೆ. ಮನೋಜ್‍ನ ಕಿವಿ, ಮರ್ಮಾಂಗ ಹಾಗೂ ಹುಬ್ಬುಗಳ ಮೇಲೆ ಗಾಯವಾಗಿದ್ದು, ಪೋಷಕರು ಕೊಲೆ ಆರೋಪದ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

  • ಫುಡ್ ಆರ್ಡರ್ ಪಡೆಯುವ ವಿಚಾರಕ್ಕೆ ಜಗಳ- ಸ್ನೇಹಿತನನ್ನೇ ಕೊಲೆಗೈದಿದ್ದವರು ಅಂದರ್

    ಫುಡ್ ಆರ್ಡರ್ ಪಡೆಯುವ ವಿಚಾರಕ್ಕೆ ಜಗಳ- ಸ್ನೇಹಿತನನ್ನೇ ಕೊಲೆಗೈದಿದ್ದವರು ಅಂದರ್

    ಬೆಂಗಳೂರು: ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪ್ರವೀಣ್ ಹಾಗೂ ತೇಜಸ್ ಬಂಧಿತ ಆರೋಪಿಗಳು. ಬಿಟಿಎಂ ಲೇಔಟ್ 2ನೇ ಹಂತದ 16 ಮೇನ್ ಮನೆಯೊಂದರಲ್ಲಿ ಫೆಬ್ರವರಿ 28ರ ಬೆಳಗ್ಗೆ ಸುನಿಲ್‍ನನ್ನು (28) ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.

    ಸುನಿಲ್, ಆರೋಪಿಗಳಾದ ಪ್ರವೀಣ್ ಮತ್ತು ತೇಜಸ್ ಖಾಸಗಿ ಫುಡ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಫುಡ್ ಆರ್ಡರ್ ಪಡೆದುಕೊಳ್ಳುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತ ಎನ್ನುವುದನ್ನೂ ನೋಡದೆ ಆರೋಪಿಗಳು  ಮಾರಣಾಂತಿಕ ಹಲ್ಲೆ ಮಾಡಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ಸುನಿಲ್‍ನನ್ನ ಸ್ಥಳೀಯರು ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮಾರ್ಚ್ 4ರಂದು ಮೃತಪಟ್ಟಿದ್ದ. ಇತ್ತ ಆರೋಪಿಗಳು ಕೃತ್ಯದ ಬಳಿಕ ತುಮಕೂರಿನಲ್ಲಿ ತಲೆಮರೆಸಿಕೊಂಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಪ್ರವೀಣ್ ಮತ್ತು ತೇಜಸ್ ತುಮಕೂರಿನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ತಂಡವನ್ನು ರಚಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

  • ವೀಕೆಂಡ್ ಲಾಂಗ್ ರೈಡ್ ಹೋಗಿ ಮಸಣ ಸೇರಿದ ಬೈಕ್ ಸವಾರ

    ವೀಕೆಂಡ್ ಲಾಂಗ್ ರೈಡ್ ಹೋಗಿ ಮಸಣ ಸೇರಿದ ಬೈಕ್ ಸವಾರ

    ಚಿಕ್ಕಬಳ್ಳಾಪುರ: ವೀಕೆಂಡ್ ಲಾಂಗ್ ರೈಡ್ ಹೋಗಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 07 ರ ಶಿಡ್ಲಘಟ್ಟ ಫ್ಲೈಓವರ್ ಬಳಿ ನಡೆದಿದೆ.

    ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಮಧು ಬೆಂಗಳೂರಿನಲ್ಲಿ ವಾಸವಾಗಿದ್ದರು. ವೀಕೆಂಡ್ ಎಂದು ಮಧು ತಮ್ಮ ಬೈಕ್‍ನಲ್ಲಿ ಲಾಂಗ್ ರೈಡ್ ತೆರೆಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಿಂಬದಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    6 ಮಂದಿ ಸ್ನೇಹಿತರ ತಂಡ ವೀಕೆಂಡ್ ಹಿನ್ನೆಲೆ ಮೂರು ಬೈಕ್‍ಗಳ ಮೂಲಕ ಬೆಂಗಳೂರಿನಿಂದ ಲೇಪಾಕ್ಷಿಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಲಾರಿಯೊಂದು ಕೆಟ್ಟು ನಿಂತಿದ್ದು, ಅದನ್ನ ಗಮನಿಸದ ಬೈಕ್ ಸವಾರರು ಲಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದಾರೆ. ಅಪಘಾತಕ್ಕೀಡಾದ ರಭಸಕ್ಕೆ ಬೈಕ್ ಸವಾರ ಬಲಭಾಗದ ರಸ್ತೆಯ ಮೇಲೆ ಬಿದ್ದ ಪರಿಣಾಮ ಹಿಂಬದಿ ಬರುತ್ತಿದ್ದ ಲಾರಿ ಆತನ ಮೇಲೆ ಹರಿದು ಹೋಗಿದೆ.

    ಬೈಕ್ ಸವಾರನ ಮೇಲೆ ಲಾರಿ ಹರಿದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಪಿಎಸ್‍ಐ ಒಂ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸ್ನಾನಕ್ಕೆಂದು ನದಿಗೆ ಇಳಿದ ಯುವಕ ನೀರಲ್ಲಿ ಮುಳುಗಿ ಸಾವು

    ಸ್ನಾನಕ್ಕೆಂದು ನದಿಗೆ ಇಳಿದ ಯುವಕ ನೀರಲ್ಲಿ ಮುಳುಗಿ ಸಾವು

    ಮಂಗಳೂರು: ಸ್ನಾನಕ್ಕೆಂದು ನದಿಗೆ ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಮಾರಧಾರ ನದಿಯಲ್ಲಿ ನಡೆದಿದೆ.

    ಅರ್ಫಾದ್(22) ಮೃತಪಟ್ಟ ದುರ್ದೈವಿ. ಅರ್ಫಾದ್ ಕೊಯಿಲ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬವರ ಪುತ್ರನಾಗಿದ್ದು, ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗೆ ಇಳಿದಿದ್ದನು.

    ನದಿಗೆ ಇಳಿದ ಸ್ವಲ್ಪ ಹೊತ್ತಿನ ಬಳಿಕ ಅರ್ಫಾದ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದನು. ಅರ್ಫಾದ್ ಕಣ್ಮರೆ ಆಗುತ್ತಿದ್ದಂತೆ ಸ್ನೇಹಿತರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅರ್ಫಾದ್‍ಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.

    ಸ್ಥಳಕ್ಕೆ ಕಡಬ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು, ಭೇಟಿ ನೀಡಿದ್ದರು. ಕೆಲ ಸಮಯದ ಹುಡುಕಾಟದ ಬಳಿಕ ಯುವಕನ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.