Tag: friends

  • ಮದ್ವೆಯಾದ 28 ದಿನದ ನಂತ್ರ ಸ್ನೇಹಿತರಿಗೆ ಪಾರ್ಟಿ ಕೊಡಿಸುವಾಗ್ಲೇ ಯುವಕ ಸಾವು

    ಮದ್ವೆಯಾದ 28 ದಿನದ ನಂತ್ರ ಸ್ನೇಹಿತರಿಗೆ ಪಾರ್ಟಿ ಕೊಡಿಸುವಾಗ್ಲೇ ಯುವಕ ಸಾವು

    – ಪಾರ್ಟಿ ಮಾಡಲು ಹೋದವ ವಾಪಸ್ ಬರಲೇ ಇಲ್ಲ
    – ಕೃಷ್ಣಾ ನದಿಗೆ ಬಿದ್ದು ನವ ವಿವಾಹಿತ ಸಾವು

    ಹೈದರಾಬಾದ್: ಸ್ನೇಹಿತರಿಗೆ ಮದುವೆ ಪಾರ್ಟಿ ಕೊಡಿಸಲು ಹೋಗಿದ್ದ ಯುವಕ ನದಿಯಲ್ಲಿ ಬಿದ್ದು ವಿವಾಹವಾದ 28 ದಿನಗಳಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ತಡೆಪಲ್ಲಿ ಗ್ರಾಮದ ನಿವಾಸಿ ವೆಂಕಟ ವರಪ್ರಸಾದ್ ಮತ್ತು ಲಕ್ಷ್ಮಿ ದಂಪತಿಯ ಪುತ್ರ ಸಾಯಿಫಕೀರ್ (22) ಮೃತ ಯುವಕ. ಸ್ನೇಹಿತರಿಗೆ ಮದುವೆ ಪಾರ್ಟಿ ಕೊಡಿಸಲು ಹೋಗಿ ಕೃಷ್ಣಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ತಡೆಪಲ್ಲಿ ನಗರ ಪ್ರದೇಶದ ಕೃಷ್ಣಾ ನದಿಯ ರೈಲ್ವೆ ಸೇತುವೆ ಅಡಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ.

    ಏನಿದು ಪ್ರಕರಣ?
    ಸಾಯಿಫಕೀರ್ (22) ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ತಂದೆಯ ಸಾವಿನ ನಂತರ ತಾನೇ ಕುಟುಂಬವನ್ನು ಪೋಷಿಸುತ್ತಿದ್ದನು. ಕಳೆದ ತಿಂಗಳು ಅಂದರೆ ಆಗಸ್ಟ್ 8 ರಂದು ಅದೇ ಗ್ರಾಮದ ವೈಷ್ಣವಿ ಜೊತೆ ವಿವಾಹವಾಗಿದ್ದನು. ಮದುವೆಯಾದ 28 ದಿನಗಳ ನಂತರ ಸ್ನೇಹಿತರು ಪಾರ್ಟಿ ಕೊಡಿಸುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಸಾಯಿಫಕೀರ್ ಭಾನುವಾರ ರಾತ್ರಿ ಕೃಷ್ಣಾ ನದಿ ರೈಲ್ವೆ ಸೇತುವೆ ಬಳಿ ಪಾರ್ಟಿ ಮಾಡಲು ಸ್ನೇಹಿತರ ಜೊತೆ ಹೋಗಿದ್ದಾನೆ. ಆದರೆ ಪಾರ್ಟಿ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೃಷ್ಣಾ ನದಿಗೆ ಸಾಯಿಫಕೀರ್ ಬಿದ್ದಿದ್ದಾನೆ.

    ತಕ್ಷಣ ಸ್ನೇಹಿತರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ನುರಿತು ಈಜುಗಾರರನ್ನು ಕರೆದುಕೊಂಡು ಬಂದಿದ್ದು, ಆತನಿಗೆ ಶೋಧ ನಡೆಸಿದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆಯ ನಂತರ ಮುಳುಗಿದ್ದ ಸಾಯಿಫಕೀರ್ ನನ್ನು ಹೊರತೆಗೆಯಲಾಯಿತು.

    ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಸಾಯಿಫಕೀರ್ ಮೃತಪಟ್ಟಿದ್ದನು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯ ಸಾವಿನ ನಂತರ ಸಾಯಿಫಕೀರ್ ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದನು. ಆದರೆ ಮದುವೆಯಾದ 28 ದಿನಗಳಲ್ಲೇ ಸಾವನ್ನಪ್ಪಿದ್ದು, ಕುಟುಂಬದರ ಆಕ್ರಂದನ ಮುಗಿಲು ಮುಟ್ಟಿದೆ. ತಡೆಪಲ್ಲಿ ಟೌನ್ ಪೊಲೀಸ್ ಅಧಿಕಾರಿ ಸುಬ್ರಮಣ್ಯಂ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ನದಿಯಲ್ಲಿ ಈಜಲು ಹೋದ ಬೆಂಗಳೂರಿನ ಯುವಕ ನೀರುಪಾಲು

    ನದಿಯಲ್ಲಿ ಈಜಲು ಹೋದ ಬೆಂಗಳೂರಿನ ಯುವಕ ನೀರುಪಾಲು

    ಮಂಗಳೂರು: ಈಜಾಡಲು ನದಿ ನೀರಿಗಿಳಿದ ಮೂವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕರ್ನಿರೆಯ ಶಾಂಭವಿ ನದಿಯಲ್ಲಿ ನಡೆದಿದೆ.

    ಬೆಂಗಳೂರು ನಿವಾಸಿ 32 ವರ್ಷದ ಅನಿಲ್ ಮೃತಪಟ್ಟಿರುವ ದುರ್ದೈವಿ. 7 ಮಂದಿ ಯುವಕರು ಬೆಂಗಳೂರಿನಿಂದ ಆಗಮಿಸಿದ್ದರು. ಕರ್ನಿರೆ ಬಳಿಯ ಶಾಂಭವಿ ನದಿಯ ಕಡೆಗೆ ಬಂದಿದ್ದು, ನದಿ ನೀರಿನಲ್ಲಿ ಈಜಾಡಲು ಮೂವರೂ ನೀರಿಗಿಳಿದ್ದಿದ್ದರು. ಈ ವೇಳೆ ಈಜಾಡುತ್ತಿದ್ದ ಮೂವರು ನೀರಿನ ಸೆಳೆತಕ್ಕೆ ಸಿಕ್ಕಿದ್ದು, ನೀರು ಅವರನ್ನು ಕೊಚ್ಚಿಕೊಂಡು ಹೋಗಿತ್ತು. ತಕ್ಷಣ ಅಲ್ಲೇ ಇದ್ದ ಸ್ಥಳೀಯರು ನೀರಿಗಿಳಿದು ಇಬ್ಬರನ್ನು ರಕ್ಷಿಸಿದ್ದಾರೆ.

    ಕೊನೆಯದಾಗಿ ಅನಿಲ್‍ನನ್ನು ರಕ್ಷಿಸುವಲ್ಲಿ ಪ್ರಯತ್ನಪಟ್ಟರೂ ಆತ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕಿಗೆ ಬೆಂಕಿ – ಸ್ನೇಹಿತರ ನಡುವೆ ಗಲಾಟೆ, ಓರ್ವನಿಗೆ ಚಾಕು ಇರಿತ

    ಬೈಕಿಗೆ ಬೆಂಕಿ – ಸ್ನೇಹಿತರ ನಡುವೆ ಗಲಾಟೆ, ಓರ್ವನಿಗೆ ಚಾಕು ಇರಿತ

    ಚಿಕ್ಕಬಳ್ಳಾಪುರ: ಸ್ನೇಹಿತನಿಗೆ ಚಾಕುವಿನಿಂದ ಮನಸ್ಸೋಇಚ್ಛೆ ಇರಿದಿದ್ದ ಇಬ್ಬರು ಯುವಕರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಸಯ್ಯದ್ ಅಹ್ಮದ್ ಸ್ನೇಹಿತರಿಂದ ಹಲ್ಲೆಗೊಳಗಾದ ಯುವಕ. ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಹಿಂಭಾಗದಲ್ಲಿ ಮದ್ಯದ ಅಮಲಿನಲ್ಲಿದ್ದ ಸಯ್ಯದ್ ಅಹ್ಮದ್‍ನಿಗೆ ಆತನ ಸ್ನೇಹಿತರಾದ ರಾಮು, ಪ್ರವೀಣ್ ಮತ್ತು ವೇಣು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿಗಳಾದ ರಾಮು ಮತ್ತು ಪ್ರವೀಣ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪ್ರಕರಣದ ಮತ್ತೊಬ್ಬ ಆರೋಪಿ ವೇಣು ನಾಪತ್ತೆಯಾಗಿದ್ದಾನೆ. ಐದು ದಿನಗಳ ಹಿಂದೆ ಆರೋಪಿ ರಾಮು ಮನೆ ಬಳಿ ನಿಲ್ಲಿಸಿದ್ದ ಬೈಕಿಗೆ ಅಪರಿಚಿತರು ಬೆಂಕಿ ಹಚ್ಚಿದ್ದರು. ಇದರಿಂದ ರಾಮು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅಲ್ಲದೇ ಬೈಕ್ ಪಕ್ಕದಲ್ಲೇ ಇದ್ದ ಬೇರೊಬ್ಬರ ಕಾರಿಗೂ ಬೆಂಕಿ ತಗುಲಿತ್ತು.

    ಈ ಸಂಬಂಧ ಆಕ್ರೋಶಗೊಂಡಿದ್ದ ರಾಮು ತನ್ನ ಸ್ನೇಹಿತರ ಜೊತೆಗೂಡಿ ಬೆಂಕಿ ಹಚ್ಚಿದ್ದವರು ಯಾರು ಅಂತ ಪತ್ತೆ ಮಾಡೋಣ ಬಾ ಎಂದು ಕುಡಿದ ಅಮಲಿನಲ್ಲಿದ್ದ ಅಹ್ಮದ್‍ನನ್ನು ಕರೆದಿದ್ದಾನೆ. ಆದರೆ ಆಹ್ಮದ್ ಬರಲು ನಿರಾಕರಿಸಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಚಾಕುವಿನಿಂದ ಇರಿದಿದ್ದಾರೆ. ಅಹ್ಮದ್ ಮುಖ, ತಲೆ, ಕೈ ಕಾಲಿನ ಭಾಗದಲ್ಲಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

  • ಗೆಳೆಯನ ಪ್ರಾಣ ಹೋಗ್ತಿದ್ರೂ ಮೊಬೈಲ್ ಸಮೇತ ನಾಪತ್ತೆಯಾದ ಸ್ನೇಹಿತರು

    ಗೆಳೆಯನ ಪ್ರಾಣ ಹೋಗ್ತಿದ್ರೂ ಮೊಬೈಲ್ ಸಮೇತ ನಾಪತ್ತೆಯಾದ ಸ್ನೇಹಿತರು

    – ಅಮ್ಮ, ಅಕ್ಕನಿಗೆ ಆಸರೆಯಾಗಿದ್ದ ಯುವಕ

    ಚಿಕ್ಕಮಗಳೂರು: ಬೆಂಗಳೂರಿನಿಂದ ಬಂದಿದ್ದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದಾನೆ. ಆದರೆ ಯುವಕ ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಆತನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರಿನ ಗ್ರಾಮದಲ್ಲಿ ನಡೆದಿದೆ.

    ಅನ್ವಿತ್ (18) ಮೃತ ಯುವಕ. ತಂದೆಯನ್ನ ಕಳೆದುಕೊಂಡಿದ್ದ ಅನ್ವಿತ್ ಅಮ್ಮ-ಅಕ್ಕನಿಗೆ ಆಸರೆಯಾಗಿದ್ದನು. ಅಕ್ಕನನ್ನು ಈತನೇ ಓದಿಸುತ್ತಿದ್ದು, ಬೆಂಗಳೂರಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದನು. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದ ಅನ್ವಿತ್ ಮತ್ತೆ ಬೆಂಗಳೂರಿಗೆ ಹೋಗಿರಲಿಲ್ಲ. ನಂತರ ಊರಿನಲ್ಲೇ ಓಮ್ನಿ ಕಾರನ್ನ ಬಾಡಿಗೆ ಇಟ್ಟುಕೊಂಡಿದ್ದನು. ಜೊತೆಗೆ ಕುಡಿಯುವ ನೀರಿನ ಕ್ಯಾನ್ ಬ್ಯುಸಿನೆಸ್ ಮಾಡುತ್ತಿದ್ದನು.

    ಐದು ದಿನದ ಹಿಂದೆ ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು, ಪಾರ್ಟಿ ಮಾಡೋ ನೆಪದಲ್ಲಿ ಆಲ್ದೂರು ಸಮೀಪದ ನದಿಗೆ ಕರೆದುಕೊಂಡು ಹೋಗಿದ್ದರು. ಆದರೆ ಸ್ನೇಹಿತರು ನಾಪತ್ತೆಯಾಗಿದ್ದು, ನದಿಯಲ್ಲಿ ಅನ್ವಿತ್ ಶವವಾಗಿ ಪತ್ತೆಯಾಗಿದ್ದಾನೆ. ಅನ್ವಿತ್‍ಗೆ ಈಜಲು ಬರುತ್ತಿರಲಿಲ್ಲ. ಆತ ನೀರಿಗೆ ಇಳಿದಿಲ್ಲ, ಬೆಂಗಳೂರಿನಿಂದ ಬಂದವರು ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.

    ಅನ್ವಿತ್ ಸ್ನೇಹಿತರು ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ. ಇದುವರೆಗೂ ಫೋನ್ ಆನ್ ಆಗಿದೆ. ಕಾಲ್ ಮಾಡಿದರೆ ರಿಸೀವ್ ಮಾಡುತ್ತಾರೆ. ಆದರೆ ಯಾರೂ ಮಾತನಾಡುವುದಿಲ್ಲ. ಅನ್ವಿತ್ ಬೆಂಗಳೂರಲ್ಲಿ ಕೆಲಸ ಮಾಡುವಾಗ ಇದ್ದ ಸ್ನೇಹಿತರು ಊರಿಗೆ ಬರೋದಾಗಿ ಹಿಂದಿನ ದಿನವೇ ತಿಳಿಸಿದ್ದರು. ಅದರಂತೆಯೇ ಸ್ವಿಫ್ಟ್ ಕಾರಲ್ಲಿ ಬಂದಿರೋದು, ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿರುವುದು, ಬಾರ್‌ಗೆ ಹೋಗಿ ಎಣ್ಣೆ ಖರೀದಿಸಿರೋದು ಎಲ್ಲದರ ಸಿಸಿಟಿವಿ ದೃಶ್ಯ ಕೂಡ ಇದೆ. ನಾನು ಸ್ನೇಹಿತರ ಜೊತೆ ಹೋಗುತ್ತೀನಿ ಅಂತ ಅನ್ವಿತ್ ತಾಯಿಗೆ ಫೋನ್ ಮಾಡಿ ಹೋಗಿದ್ದನು.

    ಇದೇ ವೇಳೆ ಸ್ಥಳೀಯ ಇಬ್ಬರು ಹುಡುಗರು ಕೂಡ ಬೆಂಗಳೂರಿಂದ ಬಂದ ಹುಡುಗರಿಗೆ ಸಾಥ್ ನೀಡಿದ್ದಾರೆ. ಈಜಲು ಹೋಗಿ ಸಾವನ್ನಪ್ಪಿದ್ದಾನೆ ಅಂತ ಸುದ್ದಿ ಹಬ್ಬಿಸಿ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಅನ್ವಿತ್ ಕುತ್ತಿಗೆಯಲ್ಲಿ ಗಾಯದ ಗುರುತುಗಳಿದ್ದು, ಇದು ಆಕಸ್ಮಿಕ ಸಾವಲ್ಲ, ಬದಲಾಗಿ ಕೊಲೆ ಅನ್ನೋ ಸಂಶಯ ಮೂಡಿಸಿದೆ. ಅಷ್ಟೇ ಅಲ್ಲದೇ ಅನ್ವಿತ್ ನದಿಗೆ ಬಿದ್ದರೂ ನೀರು ಕುಡಿದಿರಲಿಲ್ಲ. ಮೂಗು-ಬಾಯಲ್ಲಿ ನೊರೆ ಬಂದಿದೆ. ಇದೆಲ್ಲಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಎಸ್‍ಪಿ ಅಕ್ಷಯ್ ಹೇಳಿದ್ದಾರೆ.

    ಮೃತನ ತಾಯಿ ಆಲ್ದೂರು ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಅದು ಬೆಂಗಳೂರು, ಅಷ್ಟು ದೊಡ್ಡ ಊರಲ್ಲಿ ಯಾರು? ಎಲ್ಲಿ? ಅಂತ ಹುಡುಕೋದು. ಸಿಕ್ಕಾಗ ಹೇಳುತ್ತೀವಿ ಬನ್ನಿ ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯ, ಸ್ವಿಫ್ಟ್ ಕಾರಿನ ನಂಬರ್ ಕೊಟ್ಟರೂ ಪೊಲೀಸರು ತನಿಖೆ ಮಾಡುತ್ತಿಲ್ಲ ಎಂದು ಸಂಬಂಧಿಕರು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಎಸ್‍ಪಿ ಗಮನಕ್ಕೆ ಬಂದಿದ್ದು ಸೂಕ್ತ ತನಿಖೆ ನಡೆಸುವಂತೆ ಆಲ್ದೂರು ಪೊಲೀಸರಿಗೆ ಸೂಚಿಸಿದ್ದಾರೆ.

  • ಸ್ನೇಹಿತರ ಕೊಲೆ – 24 ಗಂಟೆಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅಂದರ್

    ಸ್ನೇಹಿತರ ಕೊಲೆ – 24 ಗಂಟೆಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅಂದರ್

    ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಬ್ಬರು ಯುವಕರ ಕೊಲೆ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶ್ರೀನಿವಾಸ್ ಪರಶುರಾಮ ಹಿರೇಕುಂಬಿ (26) ಅವಿನಾಶ್ ಬಸವರಾಜ ನರಗುಂದ (29) ಸಂಜೀವ ರೇವಣಸಿದ್ದಪ್ಪ ವಡ್ಡರ (28) ಮತ್ತು ಮಧು ಕಲ್ಮೇಶ ಹಾದಿಮನಿ (25) ಬಂಧಿತ ಆರೋಪಿಗಳು. ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ನಿಯಾಜ್ ಜೋರಮ್ಮನವರ ಮತ್ತು ಈತನ ಗೆಳೆಯ ಮಂಜುನಾಥ ಕಬ್ಬಿನ್ ಇಬ್ಬರನ್ನು ನಾಲ್ವರು ಕಬ್ಬಿಣದ ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ್ದರು. ಇದರಲ್ಲಿ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ಸೀನು ನಿಯಾಜ್‍ನೊಂದಿಗೆ ಜಗಳವಾಡಿಕೊಂಡಿದ್ದ. ಅದೇ ಕಾರಣಕ್ಕೆ ಗೆಳೆಯರೊಂದಿಗೆ ಬಂದು ಹತ್ಯೆ ಮಾಡಿದ್ದಾನೆ.

    ಸೀನುಗೆ ಸಾಥ್ ನೀಡಿದ ಮೂವರು ಸ್ನೇಹಿತರ ಬಂಧನವಾಗಿದೆ. ಮೃತ ಇಬ್ಬರು ಮತ್ತು ಆರೋಪಿಗಳು ಒಂದೇ ಪ್ರದೇಶದವರಾಗಿದ್ದು, ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಹುಬ್ಬಳ್ಳಿ ಗೋಪನಕೊಪ್ಪ ಸಿದ್ರಾಮೇಶ್ವರನಗರ 3ನೇ ಕ್ರಾಸ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಇಬ್ಬರನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಶ್ವಾಪುರ ಠಾಣೆಯ ಪೊಲೀಸರು 24 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಗಣೇಶ ವಿರ್ಸಜನೆ ವೇಳೆ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್

    ಗಣೇಶ ವಿರ್ಸಜನೆ ವೇಳೆ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್

    ಹುಬ್ಬಳ್ಳಿ: ಹಳೇ ವೈಷಮ್ಯದ ವಿಚಾರವಾಗಿ ಸ್ನೇಹಿತರ ಮಧ್ಯೆ ಮಾರಾಮಾರಿ ನಡೆದು, ಇಬ್ಬರು ಕೊಲೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶ ವಿರ್ಸಜನೆ ವೇಳೆಯೇ ಡಬಲ್ ಮರ್ಡರ್ ನಡೆದಿರುವ ಪರಿಣಾಮ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದಿದ್ದಾರೆ.

    ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ಘಟನೆ ನಡೆದಿದ್ದು, ಹಳೇ ಸ್ನೇಹಿತರಾಗಿದ್ದ ವಡ್ಡರ ಓಣಿಯ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಕೊಲೆಯಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಕೊಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಮಂಜುನಾಥ ಕಬ್ಬಿನ್ ಜೊತೆ ನಿಯಾಜ್ ಜೋರಮ್ಮನವರ ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

    ಈ ಕಾರಣದಿಂದ ನಿಯಾಜ್‍ನ್ನು ಹೊಡೆಯಬೇಕೆಂದು ಕಾದುಕುಳಿತಿದ್ದ ಮಂಜುನಾಥ, ನಿನ್ನೆ ತಡರಾತ್ರಿ ತನ್ನ ಸಹಚರರ ಜೊತೆ ನಿಯಾಜ್‍ನನ್ನು ಹುಡುಕಿಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಳೆಯ ಸ್ನೇಹಿತರಿಬ್ಬರು ರಾಡ್‍ನಿಂದ ಹೊಡೆದಾಡಿಕೊಂಡು ಇಬ್ಬರು ಕೊಲೆಯಾಗಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

    ಕಳೆದ ವರ್ಷವೂ ಸಹ ಗಣೇಶ ವಿರ್ಸಜನೆ ವೇಳೆಯೇ ಯುವಕನೋರ್ವನಿಗೆ ಚಾಕು ಇರಿದ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಹೀಗಾಗಿ ಪೊಲೀಸರು ಬುಧವಾರ ನಗರದಲ್ಲಿ ಸಾಕಷ್ಟು ಬಂದೋಬಸ್ತ್ ಮಾಡಿದ್ದರು. ಆದರೂ ಮಧ್ಯರಾತ್ರಿ ನಡೆದ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ.

  • ಜಗಳ ಬಿಡಿಸಲು ಬಂದ ಸ್ನೇಹಿತನೇ ಕೊಲೆಯಾದ

    ಜಗಳ ಬಿಡಿಸಲು ಬಂದ ಸ್ನೇಹಿತನೇ ಕೊಲೆಯಾದ

    ಹಾಸನ: ಹಣದ ವಿಷ್ಯವಾಗಿ ಇಬ್ಬರು ಸ್ನೇಹಿತರು ಜಗಳವಾಡುತ್ತಿದ್ದಾಗ ಅದನ್ನು ತಡೆಯಲು ಹೋದ ಯುವಕನೇ ಕೊಲೆಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    25 ವರ್ಷದ ಸಮೀವುಲ್ಲಾ ಸ್ನೇಹಿತರಿಂದಲೇ ಕೊಲೆಯಾದ ಯುವಕ. ಬುಧವಾರ ರಾತ್ರಿ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಯುವಕರ ನಡುವೆ ಗಲಾಟೆಯಾಗಿದೆ. ಈ ವೇಳೆ ಸಮೀವುಲ್ಲಾ ಇಬ್ಬರ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ್ದಾನೆ. ಗಲಾಟೆಯಲ್ಲಿ ಸಮೀವುಲ್ಲಾನಿಗೆ ಚಾಕುವಿನಿಂದ ಇರಿದಿದ್ದು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.

    ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಾಕಿ ರೌಡಿಶೀಟರ್ ಕೊಲೆ

    ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಾಕಿ ರೌಡಿಶೀಟರ್ ಕೊಲೆ

    ಕಲಬುರಗಿ: ಚಾಕುವಿನಿಂದ ಇರಿದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಲಬುರಗಿ ನಗರದ ರಿಂಗ್ ರಸ್ತೆಯ ಪೀರ್ ಬೆಂಗಾಲಿ ಮೈದಾನದಲ್ಲಿ ಈ ಘಟನೆ ನಡೆದಿದೆ. ಹಸನ್ ಅಲಿ (24) ಹತ್ಯೆಯಾದ ರೌಡಿಶೀಟರ್. ಮೃತ ಅಲಿ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದನು. ಕಳೆದ ಆರು ತಿಂಗಳ ಹಿಂದಷ್ಟೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದನು.

    ಹಳೆ ವೈಷಮ್ಯಕ್ಕೆ ಶುಕ್ರವಾರ ರಾತ್ರಿ ಪೀರ್ ಬೆಂಗಾಲಿ ಮೈದಾನದಲ್ಲಿ ಸ್ನೇಹಿತರ ಮಧ್ಯೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತರೇ ಕೊಲೆ ಮಾಡಿದ್ದಾರೆ.

    ಇಂದು ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯಕ್ಕೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಈಜಲು ಹೋಗಿದ್ದ ಸ್ನೇಹಿತರು- ಯುವತಿ ಸೇರಿ ಮೂವರು ದುರ್ಮರಣ

    ಈಜಲು ಹೋಗಿದ್ದ ಸ್ನೇಹಿತರು- ಯುವತಿ ಸೇರಿ ಮೂವರು ದುರ್ಮರಣ

    ಬೆಂಗಳೂರು: ಕೊಳದಲ್ಲಿ ಈಜಲು ಹೋಗಿದ್ದ ಬೆಂಗಳೂರು ಮೂಲದ ಯುವತಿ ಹಾಗೂ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ.

    ಡ್ಯಾನಿಶ್ (23), ಮೋಸಿಸ್ (28) ಮತ್ತು ಜಸಿಕಾ ಮೃತ ಸ್ನೇಹಿತರು. ಜಾನ್ ಮತ್ತು ದಿವ್ಯ ಎಂಬವವರ ಜೊತೆಗೆ ಈ ಮೂವರು ಸ್ನೇಹಿತರು ಬಂದಿದ್ದರು. ಜಸಿಕಾ ಮತ್ತು ಮೋಸಿಸ್ ವಿಲ್ಸನ್ ಗಾರ್ಡನ್ ಮೂಲದವರಾಗಿದ್ದು, ಡ್ಯಾನಿಶ್ ಗರುಡ ಮಹಲ್ ನಿವಾಸಿ ಎಂದು ತಿಳಿದು ಬಂದಿದೆ.

    ಮೂವರು ಸ್ನೇಹಿತರು ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಎಂಬ ಕೊಳಕ್ಕೆ ಶುಕ್ರವಾರ ಸಂಜೆ ಹೋಗಿದ್ದರು. ಚಂಪಕದಾಮ ದೇವಸ್ಥಾನ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಸ್ನೇಹಿತರು ತೆರಳಿದ್ದರು. ನಂತರ ಕೊಳದಲ್ಲಿ ಈಜಲು ತೆರಳಿದಾಗ ಈ ಘಟನೆ ಸಂಭವಿಸಿದೆ.

    ಮಾಹಿತಿ ತಿಳಿದ ಬನ್ನೇರುಘಟ್ಟ ಪೊಲೀಸರು ಮತ್ತು ಅಗ್ನಿಶಾಮಕ ದಳ ಮೃತ ಮೃತದೇಹಕ್ಕಾಗಿ ಹುಡುಕಾಟ ಮಾಡಿದ್ದಾರೆ. ಸತತ ಕಾರ್ಯಾಚರಣೆಯ ನಂತರ ಮೂವರು ಮೃತದೇಹಗಳು ಪತ್ತೆಯಾಗಿವೆ.

    ಬನ್ನೇರುಘಟ್ಟ ಕಾಡಿನಲ್ಲಿರುವ ಶಿವ ಮತ್ತು ಆಂಜನೇಯ ದೇವಸ್ಥಾನ ಬಳಿ ಸುವರ್ಣ ಮುಖಿ ಕೊಳ ಇದೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮದ್ವೆ ಮನೆಯಲ್ಲಿ ಸ್ವೀಟ್‍ಗಾಗಿ ಜಗಳ- 9 ವರ್ಷದ ಬಾಮೈದನನ್ನೇ ಕೊಲೆಗೈದ ವರ

    ಮದ್ವೆ ಮನೆಯಲ್ಲಿ ಸ್ವೀಟ್‍ಗಾಗಿ ಜಗಳ- 9 ವರ್ಷದ ಬಾಮೈದನನ್ನೇ ಕೊಲೆಗೈದ ವರ

    – ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಗ್ರಾಮದಲ್ಲಿ ಬಿಸಾಕಿ ಹೋದ್ರು

    ಲಕ್ನೋ: ಮದುವೆ ಮನೆಯಲ್ಲಿ ಸಿಹಿತಿಂಡಿಗಾಗಿ ಉಂಟಾದ ಜಗಳ ವರ ತನ್ನ ಬಾಮೈದನನ್ನೇ ಕೊಲೆ ಮಾಡುವಲ್ಲಿ ಅಂತ್ಯವಾದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಶಮ್ಶಾಬಾದ್ ನಲ್ಲಿ ನಡೆದ ಈ ಘಟನೆಯಲ್ಲಿ ಬಾಲಕಿ ಸಹಿತ ಇಬ್ಬರು ಮಹಿಳೆಯರಿಗೆ ಕೂಡ ಗಂಭೀರ ಗಾಯಗಳಾಗಿವೆ. ವರನ ಕೋಪಕ್ಕೆ 9 ವರ್ಷದ ಬಾಲಕ ಪ್ರನ್ಶು ಬಲಿಯಾಗಿದ್ದಾನೆ.

    ಸೋಮವಾರ ರಾತ್ರಿ ವರ ಮನೋಜ್ ಕುಮಾರ್ ಹಾಗೂ ಆತನ ಇಬ್ಬರು ಸ್ನೇಹಿತರು ವಧುವಿನ ಮನೆಯವರ ಜೊತೆ ಸ್ವೀಟ್ ಗಾಗಿ ಕ್ಯಾತೆ ತೆಗೆದಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಯುವಕರನ್ನು ಸಮಾಧಾನಪಡಿಸಲು ಹಿರಿಯರು ಮಧ್ಯಪ್ರವೇಶ ಮಾಡಿದರು. ಈ ವೇಳೆ ಅವರು ಗುಂಡು ಹಾರಿಸಿದ್ದಾರೆ. ಆದರೆ ಭಾರೀ ಅನಾಹುತದಿಂದ ನನ್ನ ಸೋದರ ಮಾವ ಪಾರಾಗಿದ್ದಾರೆ ಎಂದು ವಧುವಿನ ಸಹೋದರ ಪುನೀತ್ ತಿಳಿಸಿದ್ದಾರೆ.

    ಅಲ್ಲದೆ ಸಹೋದರ ಪ್ರನ್ಶು, ಮನೋಜ್ ಹಾಗೂ ಆತನ ಗೆಳೆಯರಿಗೆ ನೀರು ಕೊಡುತ್ತಿದ್ದರು. ಈ ವೇಳೆ ಅವರು ಸಿಟ್ಟಿನಿಂದ ಹೊಡೆಯಲು ಮುಂದಾಗಿದ್ದಲ್ಲದೇ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೀಗೆ ಎಸ್ಕೇಪ್ ಆಗಲು ಯತ್ನಿಸುವಾಗ ಅವರನ್ನು ತಡೆಯಲು ಇಬ್ಬರು ಮಹಿಳೆಯರು ಹಾಗೂ ಬಾಲಕಿ ಓಡಿದ್ದು, ಅವರಿಗೂ ಗಂಭೀರ ಗಾಯಗಳಾಗಿವೆ.

    ಇಷ್ಟೆಲ್ಲ ಆದ ಬಳಿಕ ವಾಪಸ್ ಬರುವಂತೆ ಹಾಗೂ ಪ್ರನ್ಶುವನ್ನು ಕರೆದುಕೊಂಡು ಬರುವಂತೆ ಮನೋಜ್ ಗೆ ಹಲವು ಬಾರಿ ಕರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ನಸುಕಿನ ಜಾವ 3 ಗಂಟೆ ಸುಮಾರಿಗೆ ನನ್ನ ಸಹೋದರನ ಮೃತದೇಹವನ್ನು ಗ್ರಾಮದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ ಎಂದು ಪುನೀತ್ ಬೇಸರ ವ್ಯಕ್ತಪಡಿಸಿದನು.

    ಪ್ರನ್ಶು ಕುತ್ತಿಗೆ ಹಾಗೂ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದವು. ಇತ್ತ ಗಾಯಗೊಂಡಿರುವ ವಿಮ್ಲಾ(50), ಮಿಥಿಲೇಶ್(35) ಹಾಗೂ ಸಪ್ನಾ(17) ಇವರುಗಳನ್ನು ಲೋಹಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರಲ್ಲಿ ಮಿಥಿಲೇಶ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ವಧುವಿನ ತಂದೆ ರಾಂಪಲ್ ಜಾತವ್ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ರಸ್ತೆ ಬದಿಯಲ್ಲಿ ನಿಂತಿದ್ದ ಜನರನ್ನು ಲೆಕ್ಕಿಸದೆ ಮನೋಜ್ ಕುಮಾರ್ ತುಂಬಾ ಸ್ಪೀಡಾಗಿ ಕಾರು ಚಾಲನೆ ಮಾಡಿದ್ದಾನೆ. ಪರಿಣಾಮ ನಮ್ಮ ಸಂಬಂಧಿಕರಾದ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಅಲ್ಲದೆ ನನ್ನ 9 ವರ್ಷದ ಮಗನನ್ನು ಮನೋಜ್ ಕುಮಾರ್ ಹಾಗೂ ಆತನ ಗೆಳೆಯರು ಸೇರಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಎರಡು ಕಡೆಯ ದೂರುಗಳನ್ನು ಆಲಿಸಿ ಕ್ರಮ ಕೈಗೊಳ್ಳುವುದಾಗಿ ಸರ್ಕಲ್ ಅಧಿಕಾರಿ ರಾಜ್ ವೀರ್ ಸಿಂಗ್ ಗೌರ್ ಹೇಳಿದ್ದಾರೆ.