Tag: friends

  • ಲ್ಯಾಪ್‍ಟಾಪ್ ನೋಡ್ತಿದ್ದಂತೆಯೇ ಕುಚುಕು ಗೆಳೆಯನ ಕತ್ತು ಕೊಯ್ದ!

    ಲ್ಯಾಪ್‍ಟಾಪ್ ನೋಡ್ತಿದ್ದಂತೆಯೇ ಕುಚುಕು ಗೆಳೆಯನ ಕತ್ತು ಕೊಯ್ದ!

    ಮೈಸೂರು: ಯುವಕನೊಬ್ಬ ತನ್ನ ಕುಚುಕು ಗೆಳೆಯನ ಕತ್ತು ಕೊಯ್ದು ಪರಾರಿಯಾಗಲು ಯತ್ನಿಸಿದ ಘಟನೆ ನಂಜನಗೂಡಿನ ತಾಂಡವಪುರದಲ್ಲಿ ನಡೆದಿದೆ.

    ಹಲ್ಲೆಗೆ ಒಳಗಾದವನನ್ನು ರೋಹನ್ ಎಂದು ಗುರುತಿಸಲಾಗಿದೆ. ಈತ ಗೆಳೆಯ ದಿಲ್ ಶಾದ್ ನಿಂದ ಮಾರಾಣಾಂತಿಕ ಹಲ್ಲೆಗೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

    ರೋಹನ್ ಹಾಗೂ ದಿಲ್ ಶಾದ್ 5ನೇ ತರಗತಿಯಿಂದ ಗೆಳೆಯರು. ಸದ್ಯ ರೋಹನ್ ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದರೆ, ದಿಲ್ ಶಾದ್ ಮೈಸೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ.

    ನಿನ್ನೆ ರಾತ್ರಿ ಇಬ್ಬರೂ ರೋಹನ್ ಮನೆಯಲ್ಲಿ ಲ್ಯಾಪ್ ಟಾಪ್ ನೋಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ದಿಲ್ ಶಾದ್, ರಾಹುಲ್ ಕುತ್ತಿಗೆಯನ್ನ ಚಾಕುವಿನಿಂದ ಕೊಯ್ದಿದ್ದಾನೆ. ಗೆಳೆಯನನ್ನ ಇರಿದು ಬಳಿಕ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಕೃತಿ ಮಡಿಲಲ್ಲಿ ಸ್ನೇಹಿತರು, ಕುಟುಂಬಸ್ಥರ ಜೊತೆ ಶಿವಣ್ಣ ಎಂಜಾಯ್

    ಪ್ರಕೃತಿ ಮಡಿಲಲ್ಲಿ ಸ್ನೇಹಿತರು, ಕುಟುಂಬಸ್ಥರ ಜೊತೆ ಶಿವಣ್ಣ ಎಂಜಾಯ್

    ಬೆಂಗಳೂರು: ಇತ್ತೀಚೆಗಷ್ಟೆ ಸ್ಯಾಂಡಲ್‍ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಶಿವಣ್ಣ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇದನ್ನೂ ಓದಿ: ಮೈಸೂರು ಮೃಗಾಲಯಕ್ಕೆ ಹ್ಯಾಟ್ರಿಕ್ ಹೀರೋ ಭೇಟಿ

    ಕನಕಪುರ ರಸ್ತೆಯ ಬೇವು ರೆಸಾರ್ಟಿನಲ್ಲಿ ಸೆಂಚುರಿ ಸ್ಟಾರ್ ಸ್ನೇಹಿತರು, ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ್ದಾರೆ. ಅಲ್ಲದೇ ಪ್ರಕೃತಿ ಮಡಿಲಲ್ಲಿ ಶಿವಣ್ಣ ವಾರಂತ್ಯ ಕಳೆಯುತ್ತಿದ್ದಾರೆ. ಜೊತೆಗೆ ಸ್ನೇಹಿತರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಕೆಲ ದಿನಗಳ ಹಿಂದೆಯಷ್ಟೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಶಿವಣ್ಣ ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿಪಟ್ಟಿದ್ದರು. ಅಲ್ಲದೇ ಶಿವರಾಜ್ ಕುಮಾರ್ ಅವರು ಮೃಗಾಲಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳನ್ನು ಕಂಡು ಸಂತಸಪಟ್ಟಿದ್ದರು.

    ಕಳೆದ ಆಗಸ್ಟ್ ತಿಂಗಳಲ್ಲಿ ಶಿವಣ್ಣ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ‘ಪಾರ್ವತಿ’ ಎಂಬ ಹೆಸರಿನ ಆನೆಯನ್ನು 75 ಸಾವಿರ ನೀಡಿ ದತ್ತು ಪಡೆದುಕೊಂಡಿದ್ದರು. ಒಂದು ವರ್ಷದ ಅವಧಿಗೆ ಅಂದರೆ 2020 ಆಗಸ್ಟ್ 19 ರಿಂದ 2021 ಆಗಸ್ಟ್ 19 ರವರೆಗೆ ಈ ಆನೆಯನ್ನು ನಟ ದತ್ತು ಸ್ವೀಕರಿಸಿದ್ದಾರೆ.

  • ಸಣ್ಣ ವಿಚಾರಕ್ಕೆ ಗಲಾಟೆ – ಸ್ನೇಹಿತನ ಎದೆಗೆ ಚಾಕು ಇರಿದ

    ಸಣ್ಣ ವಿಚಾರಕ್ಕೆ ಗಲಾಟೆ – ಸ್ನೇಹಿತನ ಎದೆಗೆ ಚಾಕು ಇರಿದ

    ಬೆಂಗಳೂರು: ಸಣ್ಣ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಯಾರಂಡಳ್ಳಿಯಲ್ಲಿ ನಡೆದಿದೆ.

    ವಿಕಾಸ್ ಕೊಲೆಯಾದ ಯುವಕ. ಆರೋಪಿ ಪೀಟರ್ ಕುಡಿದ ಮತ್ತಿನಲ್ಲಿ ತನ್ನ ಗೆಳೆಯ ವಿಕಾಶ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮೃತ ವಿಕಾಸ್ ಮತ್ತು ಪೀಟರ್ ಇಬ್ಬರು ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರಾಗಿದ್ದರು.

    ಶುಕ್ರವಾರ ಸಂಜೆ ಮೃತ ವಿಕಾಸ್ ಮತ್ತು ಪೀಟರ್ ಒಟ್ಟಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ಪೀಟರ್ ಕೋಪದಿಂದ ವಿಕಾಶ್‍ನ ಎದೆ ಮತ್ತು ಕುತ್ತಿಗೆ ಭಾಗಕ್ಕೆ ಚೂಪಾದ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ವಿಕಾಶ್ ತೀವ್ರ ಗಾಯಗಳಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಆರೋಪಿ ಪೀಟರ್‌ನನ್ನು ಬಂಧಿಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೊಟ್ಟವನನ್ನೇ ಕೊಚ್ಚಿ ಕೊಂದ

    ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೊಟ್ಟವನನ್ನೇ ಕೊಚ್ಚಿ ಕೊಂದ

    – ತನಗೆ ತಂದಿದ್ದ ಊಟ ನೀಡಿದ್ದ ಯುವಕ

    ಮಂಡ್ಯ: ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೇಳಿ ಪಡೆದುಕೊಂಡ. ಕೊನೆಗೆ ಎಣ್ಣೆ ಮತ್ತು ಊಟ ಕೊಟ್ಟವನನ್ನೇ ಗುಂಪು ಕಟ್ಟಿಕೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ನಿವಾಸಿ ಪೂರ್ಣಚಂದ್ರ (28) ಎಂಬಾತನನ್ನು ಲಾಂಗು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಕ್ಕನಹಳ್ಳಿ ಗ್ರಾಮದ ವಿನಯ್ ಹಾಗೂ ಆತನ 6 ಮಂದಿ ಸ್ನೇಹಿತರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಘಟನೆ ಶುಕ್ರವಾರ ರಾತ್ರಿ ಶ್ರೀರಂಗಪಟ್ಟಣದ ಶ್ರೀರಾಂಪುರ ಬಳಿಯ ಕ್ರಷರ್ ಬಳಿ ನಡೆದಿದ್ದು, ಈ ಘಟನೆಯಿಂದ ಶ್ರೀರಂಗಪಟ್ಟಣ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದ ರಾತ್ರಿ ಕೊಲೆಯಾದ ಪೂರ್ಣಚಂದ್ರ ಹಾಗೂ ಆತನ ಸ್ನೇಹಿತರಾದ ಪವನ್, ಚಾಮರಾಜ ಜೊತೆ ಜಕ್ಕನಹಳ್ಳಿಯ ಅಂಗಡಿಯ ಬಳಿ ಗೇಮ್ ಆಡಿಕೊಂಡು ಕಾಲ ಕಳೆಯುತ್ತಿದ್ದನು. ನಂತರ ಕ್ರಷರ್ ಬಳಿ ಸ್ನೇಹಿತರೊಂದಿಗೆ ಹೋಗಿ ಸ್ವಲ್ಪ ಹೊತ್ತು ಟೈಮ್ ಪಾಸ್ ಮಾಡಿಕೊಂಡು ನಂತರ ಪೂರ್ಣಚಂದ್ರ ಊಟಕ್ಕೆ ಕುಳಿತಿದ್ದನು.

    ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ವಿನಯ್ ಎಣ್ಣೆ ಕೇಳಿದ್ದಾನೆ. ಆಗ ಪೂರ್ಣಚಂದ್ರ ಕ್ರಷರ್ ಸಿಬ್ಬಂದಿಗೆ ತಂದಿದ್ದ ಬಿಯರ್ ಕೊಟ್ಟಿದ್ದಾನೆ. ಇದಾದ ಬಳಿಕ ಆರೋಪಿ ವಿನಯ್ ಊಟ ಕೇಳಿದ್ದು, ಕೊನೆಗೆ ತನಗೆ ತಂದಿದ್ದ ಚಪಾತಿಯನ್ನು ನೀಡಿದ್ದಾನೆ. ನಂತರ ಚಪಾತಿ ತಿಂದು, ಎಣ್ಣೆ ಕುಡಿದು ಆರೋಪಿ ಹೋಗಿದ್ದಾನೆ. ಹತ್ತು ನಿಮಿಷದ ನಂತರ ವಿನಯ್ ಗುಂಪಿನಲ್ಲಿ ಬಂದು ಪೂರ್ಣಚಂದ್ರನ ಜೊತೆಗೆ ಇದ್ದವರನ್ನು ಎದುರಿಸಿ ಪೂರ್ಣಚಂದ್ರನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

    ಕೊಲೆಗೆ ಇನ್ನೂ ನಿಖರ ತಿಳಿದು ಬಂದಿಲ್ಲ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ನಾಲ್ವರು ಗೆಳತಿಯರು

    ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ನಾಲ್ವರು ಗೆಳತಿಯರು

    -ಇಬ್ಬರ ಸಾವು, ಇನ್ನಿಬ್ಬರ ರಕ್ಷಣೆ
    -ಗ್ರಾಮದಲ್ಲಿ ಸೂತಕದ ಛಾಯೆ

    ಪಾಟ್ನಾ: ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಬಿಹಾರದ ಖಗರಿಯಾದ ಗೋಗರಿ ಠಾಣಾ ವ್ಯಾಪ್ತಿಯ ಮುಶ್ಕಿಪುರನಲ್ಲಿ ನಡೆದಿದೆ. ಗುಂಡಿಗೆ ಬಿದ್ದಿದ್ದ ನಾಲ್ವರು ಬಾಲಕಿಯರ ಪೈಕಿ ಇಬ್ಬರು ಬದುಕುಳಿದಿದ್ದಾರೆ.

    13 ವರ್ಷದ ಕಾಶಿಯಾ ಮತ್ತು ನರ್ಗಿಸ್ ಮೃತ ಬಾಲಕಿ ಯರು. ನರ್ಗಿಸ್ ತನ್ನ ಮೂವರು ಗೆಳತಿಯರು ರಸ್ತೆ ಬದಿಯಲ್ಲಿ ನೀರು ನಿಂತಿದ್ದ ಪ್ರದೇಶದಲ್ಲಿ ಆಟ ಆಡುತ್ತಿದ್ದರು. ಈ ವೇಳೆ ನರ್ಗಿಸ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಳೆ. ನರ್ಗಿಸ್ ರಕ್ಷಣೆಗೆ ಇನ್ನುಳಿದ ಮೂವರು ಗೆಳತಿಯರು ಗುಂಡಿಗೆ ಧುಮುಕಿದ್ದಾರೆ.

    ಬಾಲಕಿಯರು ಧ್ವನಿ ಕೇಳಿದ ಸ್ಥಳೀಯರು ಗುಂಡಿಗೆ ಧಮುಕಿ ಇಬ್ಬರನ್ನ ಹೊರ ತಂದಿದ್ದಾರೆ. ಆದ್ರೆ ಕಾಶಿಯಾ ಮತ್ತು ನರ್ಗಿಸ್ ನೀರಿನಲ್ಲಿ ಮುಳುಗಿದ್ದರು. ಕೊನೆಗೆ ಸ್ಥಳೀಯರು ಮೀನುಗಾರರ ಸಹಾಯದ ಮೂಲಕ ಶೋಧ ಕಾರ್ಯ ನಡೆಸಿ ಬಾಲಕಿಯರ ಮೃತದೇಹಗಳನ್ನು ಗುಂಡಿಯಿಂದ ಹೊರ ತೆಗೆಯಲಾಗಿದೆ.

    ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೊಗರಿ ಠಾಣೆಯ ಸಿಓ ರವೀಂದ್ರನಾಥ್ ಮೃತ ಬಾಲಕಿಯರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

  • ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

    ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

    – ಬಾಲಕಿಯರ ವಿರುದ್ಧ ದೂರು ನೀಡಿದ ಹುಡುಗನ ತಂದೆ
    – ಮಾತನಾಡುವಾಗ ವಾಗ್ವಾದ ನಡೆದು ಘಟನೆ

    ಲಕ್ನೋ: ತಮ್ಮ ಸ್ನೇಹಿತೆಯರೊಂದಿಗೆ ಜಗಳವಾಗಿದ್ದಕ್ಕೆ ಕೋಪಗೊಂಡು ಇಬ್ಬರು ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮುವಾದ ರಾಣಿಪುರದಲ್ಲಿ ಘಟನೆ ನಡೆದಿದ್ದು, 11ನೇ ತರಗತಿ ಪ್ರವೇಶಕ್ಕಾಗಿ ತೆರಳಿದಾಗ ಬಾಲಕರು ಈ ರೀತಿ ಮಾಡಿಕೊಂಡಿದ್ದಾರೆ. ಇಬ್ಬರು ಹುಡುಗಿಯರು ರಾಣಿಪುರದವರಾಗಿದ್ದು, ಸಾವನ್ನಪ್ಪಿದ ಬಾಲಕರನ್ನು ವಿಶಾಲ್(17) ಗುಪ್ತಾ ಹಾಗೂ ಬಿತ್ತು(18) ಎಂದು ಗುರುತಿಸಲಾಗಿದೆ.

    ವಿಶಾಲ್ ಗುಪ್ತಾ ಖಂದೇರಾಯ್‍ಪುರ ಗ್ರಾಮದ ರಾಮಲೀಲಾ ಮೈದಾನದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಿತ್ತು ಸಹ ಅದೇ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ನಂತರ ವಾರಾಣಸಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸಾವನ್ನಪ್ಪಿದ್ದಾನೆ. ಇದೇ ವೇಳೆ ವಿಶಾಲ್ ತಂದೆ ರಾಣಿಪುರ ಪೊಲೀಸ್ ಠಾಣೆಗೆ ತೆರಳಿ ಇಬ್ಬರು ಹುಡುಗಿಯರ ವಿರುದ್ಧ ದೂರು ನೀಡಿದ್ದಾರೆ.

    ವಿಶಾಲ್ ನಗ್ರಾ ಪ್ರದೇಶದ ಲಖಿಸರಿಯಾ ಗ್ರಾಮದವನಾಗಿದ್ದು, ಬಿತ್ತು ಸಿಕಂದರ್‍ಪುರದ ಮುದಿಯಾರ್‍ಪುರ ಗ್ರಾಮದವನಾಗಿದ್ದಾನೆ. 11ನೇ ತರಗತಿಗೆ ಪ್ರವೇಶಕ್ಕಾಗಿ ಇಬ್ಬರೂ ಮನೆಯಿಂದ ಹೊರಟಿದ್ದಾರೆ. ನಂತರ ಇಬ್ಬರೂ ತಮ್ಮ ಸ್ನೇಹಿತೆಯರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಅವರನ್ನು ಭೇಟಿಯಾಗಲು ಊರಿಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಹುಡುಗಿಯರು ರಾಮಲೀಲಾ ಮೈದಾನದ ಬಳಿ ಹುಡುಗರನ್ನು ಭೇಟಿಯಾಗಿದ್ದು, ನಂತರ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರೂ ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • 300 ರೂ.ಗಾಗಿ ಮೊಳೆಗಳಿದ್ದ ಕೋಲಿನಿಂದ ಹೊಡೆದು ಗೆಳೆಯನ ಕೊಲೆ

    300 ರೂ.ಗಾಗಿ ಮೊಳೆಗಳಿದ್ದ ಕೋಲಿನಿಂದ ಹೊಡೆದು ಗೆಳೆಯನ ಕೊಲೆ

    -ಹಣಕ್ಕಾಗಿ ನಾಲ್ವರ ಮಧ್ಯೆ ಫೈಟ್
    -ಓರ್ವನ ಬಂಧನ, ಇಬ್ಬರು ಎಸ್ಕೇಪ್

    ಲಕ್ನೋ: ಮೂನ್ನೂರು ರೂಪಾಯಿಗಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೌರ್ ನಲ್ಲಿ ನಡೆದಿದೆ. ನಾಲ್ವರು ಗೆಳೆಯರ ಮಧ್ಯೆ ಸೋಮವಾರ ಗಲಾಟೆ ನಡೆದಿದೆ. ಗಲಾಟೆ ವೇಳೆ ನಾಲ್ವರು ಮದ್ಯ ಸೇವನೆ ಮಾಡಿದ್ದರು.

    24 ವರ್ಷದ ದೀಪಕ್ ಗೆಳೆಯರಿಂದಲೇ ಕೊಲೆಯಾದ ಯುವಕ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

    ಸೋಮವಾರ ದೇವಸ್ಥಾನದಿಂದ ನಾಲ್ವರಿಗೆ ಮುನ್ನೂರು ರೂ. ಸಿಕ್ಕಿತ್ತು. ಒಟ್ಟು ಹಣ ದೀಪಕ್ ಜೇಬು ಸೇರಿತ್ತು. ಹಣದ ಹಂಚಿಕೆಯ ಕುರಿತಾಗಿ ನಾಲ್ವರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ರವೀಶ್, ಮುಕೇಶ್ ಮತ್ತು ಶಶಿ ಮೂವರು ಕೋಲಿನಿಂದ ದೀಪಲ್ ತಲೆಗೆ ಹೊಡೆದಿದ್ದಾರೆ. ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ ಮೂವರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ದೀಪಕ್ ಸಾವನ್ನಪ್ಪಿದ್ದಾರೆ.

    ದೀಪಕ್ ಹಣೆಯ ಭಾಗದಲ್ಲಿ ಗಂಭೀರವಾದ ಗಾಯವಾಗಿತ್ತು. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ರವೀಶ್ ಎಂಬಾತನ ಬಂಧನವಾಗಿದೆ. ಇನ್ನಿಬ್ಬರನ್ನ ಶೀಘ್ರದಲ್ಲಿಯೇ ಬಂಧಿಸಲಾಗುವದು ಎಂದು ಬಿಜ್ನೌರ್ ಠಾಣೆಯ ಪೊಲೀಸ್ ಅಧೀಕ್ಷಕ ಧರಂವೀರ್ ಸಿಂಗ್ ಹೇಳಿದ್ದಾರೆ.

  • ಸ್ನೇಹಿತರು ಕರೆದರೆಂದು ಹೋದವ ಹೆಣವಾದ- ಮಂಡ್ಯದಲ್ಲಿ ಒಂದೇ ತಿಂಗಳಲ್ಲಿ 7 ಕೊಲೆ

    ಸ್ನೇಹಿತರು ಕರೆದರೆಂದು ಹೋದವ ಹೆಣವಾದ- ಮಂಡ್ಯದಲ್ಲಿ ಒಂದೇ ತಿಂಗಳಲ್ಲಿ 7 ಕೊಲೆ

    – ಗ್ರಾಮದ ಮಧ್ಯ ಭಾಗದಲ್ಲಿ ಭೀಕರವಾಗಿ ಕೊಚ್ಚಿ ಹತ್ಯೆ

    ಮಂಡ್ಯ: ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಇತ್ತೀಚಿಗೆ ಮರ್ಡರ್ ಸಿಟಿಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 7 ಮಂದಿಯ ಹತ್ಯೆ ನಡೆದಿದೆ. ಕಳೆದ ರಾತ್ರಿಯೂ ಯವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.

    ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ 25 ವರ್ಷದ ಅಭಿಷೇಕ್‍ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸ್ನೇಹಿತರು ಕರೆದರೆಂದು ಮನೆಯಿಂದ ಹೊರ ಹೋದವನು ಊರಿನ ಮಧ್ಯಭಾಗದಲ್ಲೇ ಹೆಣವಾಗಿದ್ದಾನೆ. ಘಟನೆಯಿಂದಾಗಿ ಜನರು ಬೆಚ್ಚಿಬಿದ್ದಿದ್ದಾರೆ.

    ನಿನ್ನೆ ರಾತ್ರಿ 10 ಗಂಟೆಗೆ ಮನೆಗೆ ಬಂದ ಅಭಿಷೇಕ್ ಗೆ ತಾಯಿ ಊಟ ಬಡಿಸಿದ್ದಾರೆ. ಊಟ ಮಾಡುತ್ತಿದಂತೆ ಯಾರೋ ಪೋನ್ ಮಾಡಿದ್ದಾರೆ. ಬಳಿಕ ಎಂದಿನಂತೆ ರೇಷ್ಮೆ ಸಾಕಣೆ ಮನೆಯಲ್ಲಿ ಮಲಗುವುದಾಗಿ ಹೇಳಿ ಹೋದವನನ್ನು ಯಾರೊ ದುಷ್ಕರ್ಮಿಗಳು ತಲೆಯ ಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮುಂಜಾನೆ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದವರು ನೋಡಿದಾಗ ಕೊಲೆಯಾಗಿರುವುದು ತಿಳಿದಿದೆ.

    ಅಭಿಷೇಕ್ ಸದಾ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ. ತಾನು ದುಡಿದ ಹಣವನ್ನೆಲ್ಲ ಗೆಳೆಯರೊಂದಿಗೆ ಸೇರಿ ಖರ್ಚು ಮಾಡಿಕೊಳ್ಳುತ್ತಿದ್ದನಂತೆ. ಹೆತ್ತವರು ಎಷ್ಟೇ ಬುದ್ಧಿವಾದ ಹೇಳಿದರೂ ಸ್ನೇಹಿತರ ಸಹವಾಸದಿಂದ ದೂರವಾಗಿರಲಿಲ್ಲ. ಶನಿವಾರವೂ ಬೆಳಗ್ಗೆ ಮನೆಯಿಂದ ಹೋದನು ರಾತ್ರಿ 10 ಗಂಟೆಗೆ ಬಂದಿದ್ದ. ರೇಷ್ಮೆ ಸಾಕಾಣಿಕೆ ಮನೆಗೆ ಮಲಗಲು ಹೋದವನನ್ನು ಯಾರೋ ಸ್ನೇಹಿತರೇ ಕರೆಸಿಕೊಂಡು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಗ್ರಾಮದ ಮಧ್ಯ ಭಾಗದಲ್ಲೇ ನಡೆದ ಕೊಲೆಯಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರ ಹತ್ಯೆ, ಇಟ್ಟಿಗೆ ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರ ಕೊಲೆ ಜನರ ಮನಸ್ಸಿಂದ ದೂರವಾಗುವ ಮುನ್ನವೇ ಮತ್ತೊಬ್ಬ ಯುವಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲೇ 7ಕ್ಕೂ ಹೆಚ್ಚು ಮರ್ಡರ್ ನಡೆದಂತಾಗಿದೆ.

  • ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಜಿಗಿದ ಐವರು ಗೆಳೆಯರು

    ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಜಿಗಿದ ಐವರು ಗೆಳೆಯರು

    -ಓರ್ವ ಸಾವು, ನಾಲ್ವರು ಪಾರು

    ದಿಸ್ಪುರ: ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ ಐವರು ಗೆಳೆಯರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಅಸ್ಸಾಂ ರಾಜ್ಯದ ಕಮಪುರ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ ಯುವಕನ ಶವ ಪತ್ತೆಯಾಗಿದೆ.

    ಖೇಮಪುರದ ಠಾಣಾ ವ್ಯಾಪ್ತಿಯ ಅಂತರ್ಗತ ತೆತಲಿಸಾರಾ ಗ್ರಾಮದ ದೇವಾಶೀಷ ಮೃತ ಯುವಕ. ಸೆಪ್ಟೆಂಬರ್ 12ರಂದು ದೇವಾಶೀಷ ನಾಪತ್ತೆಯಾಗಿದ್ದನು. ಪೊಲೀಸರ ತಂಡ ಸೆಪ್ಟೆಂಬರ್ 12ರಿಂದ ದೇವಾಶೀಷ ಮತ್ತು ಆತನ ನಾಲ್ವರು ಗೆಳೆಯರನ್ನ ಹಿಂಬಾಲಿಸುತ್ತಿದ್ದರು. ದೇವಾಶೀಷ ಮತ್ತು ಆತನ ಗೆಳೆಯರು ದೇವಸ್ಥಾನದಲ್ಲಿ ನಶೆ ಪದಾರ್ಥ ಸೇವಿಸುತ್ತಿದ್ದರು.

    ಪೊಲೀಸರು ಬರುತ್ತಿರುವ ವಿಷಯ ತಿಳಿದು ದೇವಾಶೀಷ ಹಾಗೂ ಗೆಳೆಯರು ನಶೆಯಲ್ಲಿ ನದಿಗೆ ಧಮುಕಿದ್ದಾರೆ. ನಾಲ್ವರು ದಡ ಸೇರುವಲ್ಲಿ ಯಶಸ್ವಿಯಾದ್ರೆ, ದೇವಾಶೀಷ ಈಜಲು ಆಗದೇ ಮುಳುಗಿದ್ದಾನೆ. ಸೋಮವಾರ ಎಸ್‍ಡಿಆರ್‍ಎಫ್ ತಂಡ ದೇವಾಶೀಷ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಗಿದೆ. ದೇವಾಲಯದಲ್ಲಿ ಯುವಕರನ್ನು ಪೊಲೀಸರು ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಹುಟ್ಟುಹಬ್ಬದ ದಿನವೇ ಕೊಲೆ – ವಿಶ್ ಮಾಡೋ ನೆಪದಲ್ಲಿ ಚಾಕುವಿನಿಂದ ಇರಿದ್ರು

    ಹುಟ್ಟುಹಬ್ಬದ ದಿನವೇ ಕೊಲೆ – ವಿಶ್ ಮಾಡೋ ನೆಪದಲ್ಲಿ ಚಾಕುವಿನಿಂದ ಇರಿದ್ರು

    ತುಮಕೂರು: ಹುಟ್ಟುಹಬ್ಬದ ದಿನವೇ ಯುವಕನನ್ನು ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಎನ್.ಆರ್.ಕಾಲೋನಿ ಬಳಿ ನಡೆದಿದೆ.

    ಅನುಕುಮಾರ್ (22) ಕೊಲೆಯಾದ ಯುವಕ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರಾಜು ಹಾಗೂ ರಾಜುವಿನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಗುರುವಾರ ಮೃತ ಅನುಕುಮಾರ್ ಹುಟ್ಟುಹಬ್ಬ ಇತ್ತು. ತಡರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಅನುಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ನೆಪದಲ್ಲಿ ರಾಜು ಹಾಗೂ ರಾಜುವಿನ ಸ್ನೇಹಿತರು ಬಂದಿದ್ದಾರೆ. ನಂತರ ಅನುಕುಮಾರ್‌ಗೆ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

    ರಾಜು ಹಾಗೂ ಅನುಕುಮಾರ್ ನಡುವೆ ಜಗಳ ನಡೆದಿತ್ತು. ಹೀಗಾಗಿ ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರಾಜು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ. ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.