Tag: freebies

  • ಉಚಿತ ಯೋಜನೆಗಳಿಂದ ಜನ ಕಷ್ಟಪಟ್ಟು ಕೆಲಸ ಮಾಡ್ತಿಲ್ಲ – ಸುಪ್ರೀಂ ಅಸಮಾಧಾನ

    ನವದೆಹಲಿ: ಚುನಾವಣೆಗೆ (Election) ಮುಂಚಿತವಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು (Freebies) ಘೋಷಿಸುವ ಪದ್ಧತಿಯಿಂದ ನಾವು ʻಪರಾವಲಂಬಿಗಳ ವರ್ಗʼ ಸೃಷ್ಟಿಸುತ್ತಿಲ್ಲವೇ ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದೆ.

    ನಗರ ಪ್ರದೇಶಗಳಲ್ಲಿ ನಿರಾಶ್ರಿತ ವ್ಯಕ್ತಿಗಳ ಆಶ್ರಯ ಹಕ್ಕಿನ ಕುರಿತಾದ ವಿಷಯವನ್ನು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಎ.ಜಿ. ಮಸಿಹ್ ಅವರಿದ್ದ ದ್ವಿಸದಸ್ಯ ಪೀಠ ಆಲಿಸಿತು. ಈ ವೇಳೆ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯ ಭಾಗವಾಗಲು ಉತ್ತೇಜಿಸುವ ಬದಲು, ನಾವು ಪರಾವಲಂಬಿಗಳ ವರ್ಗವನ್ನು ಸೃಷ್ಟಿಸುತ್ತಿಲ್ಲವೇ ಎಂದು ಪ್ರಶ್ನಿಸಿತು.

    ಮಹಾರಾಷ್ಟ್ರದ ‘ಲಡ್ಕಿ ಬಹಿನ್’ ಯೋಜನೆಯನ್ನು ಉಲ್ಲೇಖಿಸಿ, ಇದರ ಅಡಿಯಲ್ಲಿ ವಾರ್ಷಿಕ ಕುಟುಂಬ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಮತ್ತು ಇತರ ರಾಜ್ಯಗಳಲ್ಲಿ ಆಡಳಿತ ಪಕ್ಷಗಳು ನಡೆಸುವ ಇದೇ ರೀತಿಯ ಕಾರ್ಯಕ್ರಮಗಳಿಂದ ಜನರು ಕೆಲಸ ಮಾಡಲು ಸಿದ್ಧರಿಲ್ಲ. ಅವರು ಯಾವುದೇ ಕೆಲಸ ಮಾಡದೆ ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು,.

    ಬಡವರ ಬಗ್ಗೆ ಸರ್ಕಾರಗಳ ಕಾಳಜಿಯನ್ನು ನಾವು ತುಂಬಾ ಪ್ರಶಂಸಿಸುತ್ತೇವೆ. ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಯ ಭಾಗವನ್ನಾಗಿ ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ನೀಡುವುದು ಉತ್ತಮವಲ್ಲವೇ ಎಂದು ಪೀಠ ಪ್ರಶ್ನಿಸಿತು.

    ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ದೇಶದಲ್ಲಿ ಕೆಲಸ ಸಿಕ್ಕರೆ ಮಾಡಲು ಇಷ್ಟಪಡದವರು ಯಾರೂ ಇಲ್ಲ ಎಂದು ಹೇಳಿದರು. ಈ ವೇಳೆ ನ್ಯಾಯಮೂರ್ತಿ ಗವಾಯಿ ಅವರು ನಿಮಗೆ ಏಕಪಕ್ಷೀಯ ಜ್ಞಾನವಿರಬೇಕು, ನಾನು ಕೃಷಿ ಕುಟುಂಬದಿಂದ ಬಂದಿದ್ದೇನೆ. ಚುನಾವಣೆಗೆ ಸ್ವಲ್ಪ ಮೊದಲು ಮಹಾರಾಷ್ಟ್ರದಲ್ಲಿ ಘೋಷಿಸಿದ ಉಚಿತ ಕೊಡುಗೆಗಳಿಂದಾಗಿ, ರೈತರಿಗೆ ಕಾರ್ಮಿಕರೇ ಸಿಗುತ್ತಿಲ್ಲ ಎಂದು ಉದಾಹರಣೆ ನೀಡಿದರು.

    ಆರು ವಾರಗಳ ನಂತರ ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

    ದೆಹಲಿ ಹೈಕೋರ್ಟ್ ನಿರಾಕರಣೆ: ಫೆ.5 ರಂದು ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿ ಭರವಸೆ ನೀಡಿದ ಉಚಿತ ಕೊಡುಗೆಗಳ ವಿರುದ್ಧ ಮಾಜಿ ನ್ಯಾಯಾಧೀಶರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.

  • ಚುನಾವಣೆ ಉಚಿತ ಭರವಸೆಗಳನ್ನು ನಿರ್ಬಂಧಿಸುವಂತೆ ಅರ್ಜಿ – ಕೇಂದ್ರ, ಆಯೋಗಕ್ಕೆ ಸುಪ್ರೀಂನಿಂದ ನೋಟಿಸ್‌

    ನವದೆಹಲಿ: ಚುನಾವಣಾ (Election) ಸಮಯದಲ್ಲಿ ರಾಜಕೀಯ ಪಕ್ಷಗಳು (Political Parties) ಘೋಷಿಸುವ ಉಚಿತ ಭರವಸೆಗಳಿಗೆ (Freebies) ನಿರ್ಬಂಧ ಹೇರುವಂತೆ ಸಲ್ಲಿಸಿದ್ದ ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿದೆ.

    ಬೆಂಗಳೂರಿನ ನಿವಾಸಿ ಶಶಾಂಕ್ ಜೆ ಶ್ರೀಧರ್‌ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ನೋಟಿಸ್‌ ಜಾರಿ ಮಾಡಿ ಅಭಿಪ್ರಾಯ ಸೂಚಿಸುವಂತೆ ತಿಳಿಸಿದೆ.

     

    ಉಚಿತ ಕೊಡುಗೆಗಳ ಭರವಸೆಯಿಂದ ಸಾರ್ವಜನಿಕ ಖಜಾನೆಯ ಮೇಲೆ ಗಮನಾರ್ಹ ಮತ್ತು ಲೆಕ್ಕಿಸಲಾದ ಆರ್ಥಿಕ ಹೊರೆಯ ಬೀಳುತ್ತದೆ. ಅಷ್ಟೇ ಅಲ್ಲದೇ ಚುನಾವಣಾ ಪೂರ್ವ ಭರವಸೆಗಳ ಈಡೇರಿಕೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಕಾರ್ಯವಿಧಾನವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆಗಳನ್ನು ನೀಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.

     

  • ರಾಜಕೀಯ ಪಕ್ಷಗಳಿಂದ ಉಚಿತ ಯೋಜನೆಗಳ ಭರವಸೆ – ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಕೆ, ಚು.ಆಯೋಗಕ್ಕೆ ನೋಟಿಸ್

    ರಾಜಕೀಯ ಪಕ್ಷಗಳಿಂದ ಉಚಿತ ಯೋಜನೆಗಳ ಭರವಸೆ – ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಕೆ, ಚು.ಆಯೋಗಕ್ಕೆ ನೋಟಿಸ್

    ನವದೆಹಲಿ: ಚುನಾವಣೆ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ನೀಡುವ ಭರಪೂರ ಆಶ್ವಾಸನೆಗಳು, ಉಚಿತ ಯೋಜನೆಗಳ ವಿರುದ್ಧ ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದಾರೆ.

    SUPREME COURT

    ಅರ್ಜಿಯಲ್ಲಿ ಅವರು, ತರ್ಕಬದ್ಧವಲ್ಲದ ಉಚಿತ ಯೋಜನೆಗಳನ್ನು ಘೋಷಿಸಿರುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾ.ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಚು.ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ

    ವಿಚಾರಣೆ ವೇಳೆ ‘ಇದೊಂದು ಗಂಭೀರ ಸಮಸ್ಯೆಯಾಗಿದೆ, ಉಚಿತ ಬಜೆಟ್ ಸಾಮಾನ್ಯ ಬಜೆಟ್ ಅನ್ನು ಮೀರಿಸಿದೆ. ಇದು ಭ್ರಷ್ಟಾಚಾರವಲ್ಲದಿದ್ದರೂ, ಸರಿಯಾದ ಅಭ್ಯಾಸವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ ಅರ್ಜಿದಾರರು ಕೇವಲ ಎರಡು ಪಕ್ಷವನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವುದನ್ನು ಪ್ರಶ್ನೆ ಮಾಡಿತು.

    ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರೂ. ನೀಡುವ ಭರವಸೆ ನೀಡಿದೆ. ಶಿರೋಮಣಿ ಅಕಾಲಿ ದಳ (ಎಸ್‍ಎಡಿ) ಪ್ರತಿ ಮಹಿಳೆಗೆ ಆಮಿಷ ಒಡ್ಡಲು 2000 ರೂ. ಘೋಷಿಸಿದೆ. ಕಾಂಗ್ರೆಸ್ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2000 ರೂ., ವರ್ಷಕ್ಕೆ ಎಂಟು ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದಲ್ಲದೆ, ಕಾಲೇಜು ವಿದ್ಯಾರ್ಥಿನಿಯರಿಗೆ ಸ್ಕೂಟಿ, 12ನೇ ತರಗತಿ ಪಾಸಾದ ನಂತರ 20,000 ರೂ., 10ನೇ ತರಗತಿ ಪಾಸಾದ ನಂತರ 15,000 ರೂ., 8ನೇ ತರಗತಿ ಪಾಸಾದ ನಂತರ 10,000 ರೂ. ಮತ್ತು 5ನೇ ತೇರ್ಗಡೆಯಾದ ನಂತರ 5,000 ರೂ. ನೀಡುವುದಾಗಿ ಹೇಳಿದೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್, ಪದವಿ ಓದುತ್ತಿರುವ ಪ್ರತಿ ಹುಡುಗಿಗೆ ಸ್ಕೂಟಿ, ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆ, ಪ್ರತಿ ಗೃಹಿಣಿಯರಿಗೆ ವರ್ಷಕ್ಕೆ ಎಂಟು ಉಚಿತ ಗ್ಯಾಸ್ ಸಿಲಿಂಡರ್, ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದೆ ಎಂದು ವಕೀಲ ಅಶ್ವಿನಿ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಅಶ್ವಿನಿ ಉಪಾಧ್ಯಾಯ ಈ ಹಿಂದೆ ಅಭ್ಯರ್ಥಿಗಳ ಅಪರಾಧ ಪ್ರಕಣಗಳು ಮತ್ತು ಚುನಾವಣೆಗೆ ಟಿಕೆಟ್ ನೀಡಿದ ಕಾರಣಗಳನ್ನು ರಾಜಕೀಯ ಪಕ್ಷಗಳು, ಪಕ್ಷದ ವೆಬ್‍ಸೈಟ್ ಮುಖಪುಟದಲ್ಲಿ ಪ್ರಕಟಿಸಲು ಕೋರಿ ಅರ್ಜಿ ಸಲ್ಲಿಸಿದರು. ನಿಯಮ ಪಾಲಿಸದ ಪಕ್ಷಗಳ ನೋಂದಣಿ ರದ್ದು ಮಾಡುವಂತೆ ಮನವಿ ಮಾಡಿದರು. ಈ ಅರ್ಜಿ ವಿಚಾರಣೆ ಹಂತದಲ್ಲಿದೆ.