Tag: free food

  • ಒಂದು ಫೋನ್ ಕಾಲ್‌- ಇದ್ದಲ್ಲಿಗೆ ಬರುತ್ತೆ ಶುಚಿ ರುಚಿ ಊಟ, ಶುದ್ಧ ನೀರು

    ಒಂದು ಫೋನ್ ಕಾಲ್‌- ಇದ್ದಲ್ಲಿಗೆ ಬರುತ್ತೆ ಶುಚಿ ರುಚಿ ಊಟ, ಶುದ್ಧ ನೀರು

    – ಯುವಕರ ಕಾರ್ಯಕ್ಕೆ ಜನರ ಮೆಚ್ಚುಗೆ

    ಯಾದಗಿರಿ: ಕೊರೊನಾ ವೈರಸ್‍ನಿಂದಾಗಿ ಘೋಷಣೆಯಾಗಿರುವ ಲಾಕ್‍ಡೌನ್‍ನಿಂದಾಗಿ ಜನ ತುತ್ತು ಅನ್ನಕ್ಕೂ ಸಹ ಪರದಾಡುವಂತಾಗಿದೆ. ಬಡವರಿಗೆ ನಿರ್ಗತಿಕರಿಗೆ ವಿವಿಧ ಸಂಘ ಸಂಸ್ಥೆಗಳು ಉಚಿತ ಊಟದ ವ್ಯವಸ್ಥೆ ಸಹ ಮಾಡಿವೆ. ಯಾದಗಿರಿಯ ಸತೀಶ್ ಕಂದಕೂರ ಅಭಿಮಾನಿಗಳ ಬಳಗ ಮತ್ತು ವೀರಶೈವ ಮಹಾಸಭಾದ ಕೆಲ ಯುವಕರು ಒಂದು ವಿಭಿನ್ನ ರೀತಿಯಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

    ಒಂದು ಫೋನ್ ಕಾಲ್ ಮಾಡಿದ್ರೆ ಸಾಕು ಇದ್ದಲ್ಲಿಗೆ ಶುಚಿ ರುಚಿ ಊಟ ಹಾಗೂ ಶುದ್ಧ ಕುಡಿಯುವ ನೀರಿನ ಕೊಡುವ ವ್ಯವಸ್ಥೆಯನ್ನು ಯುವಕರು ಮಾಡಿದ್ದಾರೆ. ಕಳೆದ 25 ದಿನಗಳಿಂದ ಸಮಾಜ ಸೇವಕ ಸತೀಶ್ ಅಭಿಮಾನಿ ಬಳಗದ ಯುವಕರು ನಗರದ ಬಡವರಿಗೆ ಮೂರು ಹೊತ್ತು ಉಚಿತ ಊಟ ನೀಡುತ್ತಿದ್ದಾರೆ. ಇದರ ಜೊತೆ ಜಿಲ್ಲಾಧಿಕಾರಿ ಕಚೇರಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಹ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ಯಾದಗಿರಿಯ ವಿವಿಧ ಕಚೇರಿಗಳಿಗೆ ಮಧ್ಯಾಹ್ನ ಸ್ವತಃ ಯುವಕರೇ ಊಟವನ್ನು ತಲುಪಿಸುತ್ತಾರೆ. ಆಹಾರ ತಯಾರಿಸುವಾಗ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಈ ಯುವ ಪಡೆ, ವಿವಿಧ ಇಲಾಖೆಗಳ ಸಿಬ್ಬಂದಿ ಕರೆ ಮಾಡಿ ಅವರ ಊಟದ ಬಗ್ಗೆ ವಿಚಾರಸಿ ಆಹಾರ ತಲುಪಲಿಸುವ ಕೆಲಸ ಮಾಡುತ್ತಿದ್ದಾರೆ.

    ಯುವಕರ ಈ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುತ್ತಿರುವ ಯುವಕರಿಗೆ ಅನೇಕರು ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ.

  • ಹಸಿದವರಿಗೆ ಉಚಿತ ಊಟ ನೀಡಲು ಡಿಕೆಶಿ ಸಂಚಾರಿ ಕ್ಯಾಂಟೀನ್ ಚಾಲನೆ

    ಹಸಿದವರಿಗೆ ಉಚಿತ ಊಟ ನೀಡಲು ಡಿಕೆಶಿ ಸಂಚಾರಿ ಕ್ಯಾಂಟೀನ್ ಚಾಲನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಬಳಗದ ಸದಸ್ಯರು ಹಸಿದವರಿಗೆ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

    ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ. ಶಿವಕುಮಾರ್ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದ್ದು, ಈ ಸಂಚಾರಿ ಕ್ಯಾಂಟೀನ್‍ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದು ಚಾಲನೆ ನೀಡಿದರು. ಈ ಸಂಚಾರಿ ಕ್ಯಾಂಟೀನ್ ನಗರದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸ್ಟಾಪ್, ನರ್ಸ್, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ನೋಡಿಕೊಳ್ಳುವ ಅಟೆಂಡರ್ ಹಾಗೂ ನಗರದಲ್ಲಿ ಆಹಾರಕ್ಕಾಗಿ ಪರಿತಪಿಸುತ್ತಿರುವ ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ.ಶಿ. ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದೆ.

    ಪ್ರತಿ ದಿನಕ್ಕೆ 500 ರಿಂದ 600 ಜನರಿಗೆ ಉಪಹಾರ ನೀಡುವ ಯೋಜನೆ ಇದಾಗಿದ್ದು, ಹಸಿದವರಿಗೆ ಈ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಸೇವೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಉಪಹಾರದ ಜೊತೆಗೆ ನೀರಿನ ಬಾಟಲಿಯನ್ನು ಕೂಡ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿದೆ.

    ಈ ಕ್ಯಾಂಟೀನ್ ಫೋನ್ ನಂ.ಗೆ ಒಂದು ಕರೆ ಮಾಡಿದರೆ ಸಾಕು ಉಚಿತವಾಗಿ, ಆಹಾರ ಮತ್ತು ನೀರನ್ನು ಒದಗಿಸುವ ಸೇವೆ ಇಂದಿನಿಂದ ಆರಂಭಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಮುಖಂಡ ದೇವೆಂದ್ರಪ್ಪ ನೇತೃತ್ವದಲ್ಲಿ ಈ ಸಂಚಾರಿ ಕ್ಯಾಂಟೀನ್ ಇಂದಿನಿಂದ ಆರಂಭಗೊಂಡಿದೆ.

  • ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟದ ಸಮಸ್ಯೆ- ಬಿಸ್ಕೆಟ್ ತಿಂದು ದಿನ ದೂಡುತ್ತಿರುವ ಸಹಾಯಕರು

    ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟದ ಸಮಸ್ಯೆ- ಬಿಸ್ಕೆಟ್ ತಿಂದು ದಿನ ದೂಡುತ್ತಿರುವ ಸಹಾಯಕರು

    – ರಾಯಚೂರಿನಲ್ಲಿ ಉಚಿತವಾಗಿ ಊಟ ನೀಡಲು ಮುಂದಾದ ಸಂಘ-ಸಂಸ್ಥೆಗಳು

    ರಾಯಚೂರು: ಇಡೀ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಬಹಳಷ್ಟು ಜನರಿಗೆ ಊಟದ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಯಚೂರಿನಲ್ಲಿ ಕೆಲ ಯುವಕರು ಹಾಗೂ ಕೆಲ ಸಂಘ ಸಂಸ್ಥೆಗಳು ಉಚಿತವಾಗಿ ಊಟವನ್ನು ನೀಡಲು ಮುಂದಾಗಿವೆ.

    ರಸ್ತೆ ಬದಿಯ ಭಿಕ್ಷುಕರು, ನಿರ್ಗತಿಕರಿಗೆ ಊಟ ನೀಡಲಾಗುತ್ತಿದೆ. ಅಲ್ಲದೆ ಕರ್ತವ್ಯದ ಹಿನ್ನೆಲೆ ಸದಾ ಹೊರಗಡೆಯಿರುವ ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ರೋಗಿಗಳಿಗು ಊಟವನ್ನು ಪ್ಯಾಕೇಟ್ ಮೂಲಕ ನೀಡಲಾಗುತ್ತಿದೆ. ಕೆಲ ಹೋಟೆಲ್ ಮಾಲೀಕರು, ಯುವಕರು ಕೈ ಜೋಡಿಸಿ ಊಟವನ್ನು ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಯ್ದುಕೊಂಡು ಊಟದ ಪ್ಯಾಕೇಟ್‍ಗಳನ್ನ ವಿತರಿಸಲಾಗುತ್ತಿದೆ.

    ಹೀಗಿರುವಾಗ ಜಿಲ್ಲೆಯ ಕೆಲ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ರೋಗಿಗಳ ಜೊತೆಗೆ ಬಂದ ಸಹಾಯಕರು ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ಊಟವಿಲ್ಲದೆ ಬಿಸ್ಕೆಟ್ ತಿಂದು ದಿನ ಕಳೆಯುತ್ತಿದ್ದಾರೆ. ಲಾಕ್‍ಡೌನ್ ಇರುವುದರಿಂದ ಊಟಕ್ಕೆ ಜಿಲ್ಲಾಡಳಿತವೇ ವ್ಯವಸ್ಥೆ ಮಾಡಬೇಕು ಎಂದು ರೋಗಿಗಳ ಕಡೆಯವರು ಕೇಳುತ್ತಿದ್ದಾರೆ. ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತೆ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.

  • ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    – ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ
    – ಊಟಕ್ಕೆ ಪ್ರತಿನಿತ್ಯ 20,000 ರೂ. ಖರ್ಚು

    ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯ ವ್ಯಕ್ತಿಯೊಬ್ಬರು ಪ್ರತಿದಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ರೋಗಿಯ ಕುಟುಂಬಸ್ಥರಿಗೆ ಉಚಿತ ಊಟ ನೀಡುತ್ತಿದ್ದಾರೆ.

    ರವೀಂದ್ರ ಕುಮಾರ್ ಪ್ರತಿದಿನ ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ಬಡರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆಹಾರ ನೀಡುತ್ತಿದ್ದಾರೆ. ಈ ಕೆಲಸವನ್ನು ಅವರು ಸುಮಾರು 29 ವರ್ಷಗಳಿಂದ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಅವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪುತ್ತಾರೆ. ಬಳಿಕ ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಬಿಸಿಬಿಸಿ ತಿಂಡಿ ನೀಡುತ್ತಾರೆ. ಮಧ್ಯಾಹ್ನ 1 ಗಂಟೆ ಊಟ ನೀಡುತ್ತಾರೆ. ಸಂಜೆ 7 ಗಂಟೆಯಿಂದ 8 ಗಂಟೆವರೆಗೂ ರಾತ್ರಿಯ ಊಟ ನೀಡುತ್ತಾರೆ. ಇದನ್ನೂ ಓದಿ: ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    1990ರಲ್ಲಿ ರವೀಂದ್ರ ಅವರ ತಂದೆ ವಿ. ಗೋವಿಂದರಾಜು ಅವರು ಈ ಕೆಲಸವನ್ನು ಶುರು ಮಾಡಿದ್ದರು. ನನ್ನ ತಂದೆ ಯಾವಾಗಲೂ ಸಮಾಜ ಸೇವೆ ಮಾಡಬೇಕು ಎಂದುಕೊಳ್ಳುತ್ತಿದ್ದರು. ಅವರು ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ತಲುಪಿದಾಗ ಬಡ ರೋಗಿಗಳನ್ನು ಹಾಗೂ ಅವರ ಕುಟುಂಬದವರನ್ನು ನೋಡಿ ತುಂಬಾ ದುಃಖ ಪಡುತ್ತಿದ್ದರು. ಆಗ ಅವರು ಜನರಿಗೆ ಕೇವಲ ಬಿಸಿ ನೀರು ನೀಡಲು ಶುರು ಮಾಡಿದ್ದರು. ಬಳಿಕ ಗಂಜಿ ನೀಡಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಕಾಲೇಜಿಗೆ ಹೋಗಿ ಕನಸು ನನಸು ಮಾಡಿಕೊಳ್ಳಲು ಕ್ಯಾಬ್ ಚಲಾಯಿಸುತ್ತಿದ್ದಾಳೆ 19ರ ಯುವತಿ

    ರವೀಂದ್ರ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡುತ್ತಾರೆ. ರವೀಂದ್ರ ಹಾಗೂ ಅವರ ಪತ್ನಿ ಮನೆಯಲ್ಲಿಯೇ ಊಟ ತಯಾರಿಸುತ್ತಾರೆ. ಪ್ರತಿದಿನ ಮುಂಜಾನೆ 3.30ಕ್ಕೆ ಎದ್ದು ಅಡುಗೆ ಕೆಲಸವನ್ನು ಶುರು ಮಾಡುತ್ತಾರೆ. ಬೆಳಗ್ಗಿನ ತಿಂಡಿಗಾಗಿ ಗಂಜಿ ಅಥವಾ ಪೊಂಗಲ್ ನೀಡುತ್ತಾರೆ. ಮಧ್ಯಾಹ್ನ ಅನ್ನದ ಜೊತೆ ಸಾಂಬಾರ್, ರಸಂ ಹಾಗೂ ಮೊಸರು ನೀಡುತ್ತಾರೆ. ಬೆಳಗ್ಗಿನ ತಿಂಡಿ ರವೀಂದ್ರಕುಮಾರ್ ಅವರು ತಯಾರಿಸಿದರೆ ಅವರ ಪತ್ನಿ ಮಧ್ಯಾಹ್ನದ ಹಾಗೂ ರಾತ್ರಿಯ ಊಟವನ್ನು ತಯಾರಿಸುತ್ತಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ಈ ಕೆಲಸಕ್ಕಾಗಿ ರವೀಂದ್ರ ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದಾರೆ. ಅವರ ಜೊತೆ ಸ್ವಯಂ ಸೇವಕರಿದ್ದು, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ರವೀಂದ್ರ ಅವರ ಟ್ರಸ್ಟ್ ಇದ್ದು, ಹಲವು ಮಂದಿ ಧನಸಹಾಯ ಮಾಡುತ್ತಾರೆ. ಪ್ರತಿದಿನ ಜನರಿಗೆ ಊಟ ಹಾಕಲು 20 ಸಾವಿರ ರೂ. ಖರ್ಚು ಆಗುತ್ತಿದೆ. ರವೀಂದ್ರ ಸ್ಟೀಲ್ ಪ್ಲೇಟಿನಲ್ಲಿ ಊಟ ನೀಡುತ್ತಿದ್ದು, ಅದನ್ನು ಸೇವಿಸಿದ ಬಳಿಕ ಜನರೇ ತೊಳೆಯಬೇಕು. ಊಟವನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವವರು ಅವರೇ ಪಾತ್ರೆಗಳನ್ನು ತರಬೇಕು. ಇದನ್ನೂ ಓದಿ: ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ನನ್ನ ಪತಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರವೀಂದ್ರ ಅವರ ಊಟ ನಮ್ಮ ಪಾಲಿಗೆ ಆಶೀರ್ವಾದ. ನಾನು ಈ ಊಟವನ್ನು ಮಾಡುತ್ತೇನೆ ಹಾಗೂ ನನ್ನ ಪತಿಗೂ ನೀಡುತ್ತೇನೆ ಎಂದು ರೋಗಿಯ ಪತ್ನಿ ಪ್ರೇಮ ತಿಳಿಸಿದ್ದಾರೆ. ಇನ್ನು ರವೀಂದ್ರ ಅವರು ಪ್ರತಿಕ್ರಿಯಿಸಿ, ಹಸಿದಿರುವ ವ್ಯಕ್ತಿಗೆ ಊಟ ನೀಡುವುದರಿಂದ ಸಿಗುವ ನೆಮ್ಮದಿ ಬೇರೆ ಕೆಲಸದಿಂದ ಸಿಗುವುದಿಲ್ಲ. ನಾನು ನನ್ನ ತಂದೆ ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ಜನರು ಊಟ ಮಾಡುವಾಗ ನನಗೆ ಅವರ ಕಣ್ಣಿನಲ್ಲಿ ದೇವರು ಕಾಣಿಸುತ್ತಾನೆ ಎಂದು ಹೇಳಿದ್ದಾರೆ.

  • ದೇಶದ ಮೊದಲ ‘ಗಾರ್ಬೇಜ್ ಕೆಫೆ’- ಪ್ಲಾಸ್ಟಿಕ್ ತ್ಯಾಜ್ಯ ಕೊಟ್ರೆ ಊಟ ಫ್ರೀ

    ದೇಶದ ಮೊದಲ ‘ಗಾರ್ಬೇಜ್ ಕೆಫೆ’- ಪ್ಲಾಸ್ಟಿಕ್ ತ್ಯಾಜ್ಯ ಕೊಟ್ರೆ ಊಟ ಫ್ರೀ

    ರಾಯ್ಪುರ್: ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಹಾನಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಆಗದಿದ್ದರೂ ಅಲ್ಪ ಪ್ರಮಾಣದಲ್ಲಿ ಪರಿಸರವನ್ನು ಉಳಿಸಲು ಛತ್ತೀಸ್‍ಗಢದ ಅಂಬಿಕಾಪುರ ಮಹಾನಗರ ಪಾಲಿಕೆ ಹೊಸ ಉಪಾಯ ಮಾಡಿದೆ.

    ಅಂಬಿಕಾಪುರ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಡಿ ಗಾರ್ಬೇಜ್ ಕೆಫೆ ತೆರೆಯುವ ಪ್ರಯತ್ನಕ್ಕೆ ಕೈಹಾಕಿದೆ. ಪ್ಲಾಸ್ಟಿಕ್ ಚಿಂದಿ ಆಯುವ ನಿರಾಶ್ರಿತರಿಗೆ ‘ಗಾರ್ಬೇಜ್ ಕೆಫೆ’ ಹೆಸರಿನಲ್ಲಿ ಹೋಟೆಲ್ ತೆರೆಯಲು ಅಂಬಿಕಾಪುರ ಮಹಾನಗರ ಪಾಲಿಕೆ ನಿರ್ಧರಿಸಿದೆ.

    ಈ ಹೋಟೆಲ್ ಬಡ ಜನರಿಗೆ ಕೂಡ ಅನುಕೂಲವಾಗಲಿದೆ. ಅಲ್ಲದೆ ಈ ಹೋಟೆಲ್‍ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟರೆ ಉಪಹಾರ, ಊಟವನ್ನು ಉಚಿತವಾಗಿ ಕೊಡಲಾಗುತ್ತದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಒಂದೆಡೆ ಸಂಗ್ರಹವಾಗುತ್ತದೆ. ಇದರಿಂದ ನಗರದ ರಸ್ತೆಗಳು ಪ್ಲಾಸ್ಟಿಕ್ ಮುಕ್ತ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

    ಗಾರ್ಬೇಜ್ ಕೆಫೆಯಲ್ಲಿ ಒಂದು ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಊಟ ಹಾಗೂ ಅರ್ಧ ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಉಪಾಹಾರ ನೀಡಲಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಈ ಗಾರ್ಬೆಜ್ ಕೆಫೆ ಒಂದು ವಿನೂತನ ಪ್ರಯತ್ನವಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಈ ರೀತಿ ಗಾರ್ಬೆಜ್ ಕೆಫೆ ನಿರ್ಮಾಣವಾಗಲಿದೆ.

    ಚಿಂದಿ ಆಯುವವರ ಹೊಟ್ಟೆ ತುಂಬಿಸುವುದೇ ಈ ವಿನೂತನ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟರೆ ಪಾಲಿಕೆ ವತಿಯಿಂದ ಉಚಿತ ಊಟ, ಉಪಾಹಾರ ನೀಡಲಾಗುತ್ತದೆ. ಕೆಫೆಯಲ್ಲಿ ಸಂಗ್ರಹಿಸಲಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣ ಕಾರ್ಯಕ್ಕೆ ಬಳಸಲು ಪಾಲಿಕೆ ಚಿಂತನೆ ನಡೆಸಿದೆ.

    ಈ ‘ಗಾರ್ಬೇಜ್ ಕೆಫೆ’ ಯೋಜನೆಗಾಗಿ ಅಂಬಿಕಾಪುರ ಮಹಾನಗರ ಪಾಲಿಕೆ ಕಡೆಯಿಂದ ವರ್ಷಕ್ಕೆ 5 ಲಕ್ಷ ರೂ. ಅನುದಾನವನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಅಲ್ಲದೆ ಈ ಯೋಜನೆಯನ್ನು ವಿಸ್ತರಿಸಲು ಪಾಲಿಕೆ ಯೋಚಿಸುತ್ತಿದೆ. ಮುಂದೆ ಅದು ಕಾರ್ಯರೂಪಕ್ಕೆ ಬಂದರೆ ಪ್ಲಾಸ್ಟಿಕ್ ಸಂಗ್ರಹಿಸಿ ತಂದು ಕೊಟ್ಟರೆ ಪಾಲಿಕೆ ವತಿಯಿಂದ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡುವುದಾಗಿ ತೀಳಿಸಿದೆ.

    ಸದ್ಯ ಸ್ವಚ್ಛತಾ ಅಭಿಯಾನದ ಪಟ್ಟಿಯಲ್ಲಿ ಇಂಧೋರ್ ಬಳಿಕ ಛತ್ತೀಸ್‍ಗಢದ ಅಂಬಿಕಾನಗರ ಈಗ 2ನೇ ಸ್ವಚ್ಛ ನಗರವಾಗಿದೆ. ಅಲ್ಲದೆ ಈಗಾಗಲೇ ನಗರದ ಕೆಲವು ರಸ್ತೆಗಳನ್ನು ಡಾಂಬರು ಹಾಗೂ 8 ಲಕ್ಷ ಪ್ಲಾಸ್ಟಿಕ್ ಚೀಲಗಳ ಮೂಲಕ ನಿರ್ಮಿಸಲಾಗಿದೆ.