Tag: france

  • ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

    ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

    ಪ್ಯಾರಿಸ್: ಆನ್‍ಲೈನ್ ಜಾಹಿರಾತುಗಳ ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಅಮೆರಿಕದ ಗೂಗಲ್ ಕಂಪನಿ ಮೇಲೆ ಫ್ರಾನ್ಸ್ 220 ದಶಲಕ್ಷ ಯೂರೋ(ಅಂದಾಜು 1948 ಕೋಟಿ ರೂ.) ದಂಡವನ್ನು ವಿಧಿಸಿದೆ.

    ಫ್ರಾನ್ಸ್‍ನ ಸ್ಪರ್ಧಾ ನಿಯಂತ್ರಕವು ಈ ದಂಡವನ್ನು ವಿಧಿಸಿದ್ದು, ಮುಂದಿನ ದಿನಗಳಲ್ಲಿ ತನ್ನ ಆನ್‍ಲೈನ್ ಜಾಹೀರಾತಿನಲ್ಲಿ ಬದಲಾವಣೆ ಮಾಡಲಾಗುವುದು ಎಂದು ಗೂಗಲ್ ಕಂಪನಿ ತಿಳಿಸಿದೆ.

    ಗೂಗಲ್ ಕೆಲವು ಸಾಧನಗಳು ದೊಡ್ಡ ಪ್ರಕಾಶಕರಿಗೆ ಬಹುತೇಕ ಅವಶ್ಯಕವಾಗಿದೆ. ಆದರೆ ಗೂಗಲ್ ತನ್ನ ಮಾರುಕಟ್ಟೆಯನ್ನು ದುರುಪಯೋಗಪಡಿಸಿರುವುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ದಂಡವನ್ನು ಹೇರಲಾಗಿದೆ. ಇದನ್ನೂ ಓದಿ: ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಮೂರು ಮಾಧ್ಯಮ ಕಂಪನಿಗಳಾದ ನ್ಯೂಸ್ ಕಾರ್ಪೋರೇಷನ್, ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್‍ ಗೂಗಲ್ ಇಂಟರ್ನೆಟ್ ಜಾಹೀರಾತು ಮಾರಾಟವನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.

    ಗೂಗಲ್ ಜಾಹೀರಾತುಗಳು ಬಳಸುವ ವಿಧಾನಗಳು ಅಪಾರದರ್ಶಕವಾಗಿದೆ ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಇದು ಅಸಮಾನತೆಯಿಂದ ಕೂಡಿದ್ದು ಅನಿಯಂತ್ರಿತ ರೀತಿಯಲ್ಲಿದೆ ಎಂದು ಹೇಳಿ ಫ್ರಾನ್ಸ್ ಸ್ಪರ್ಧಾ ನಿಯಂತ್ರಕ  2019ರಲ್ಲಿ 150 ದಶಲಕ್ಷ ಯುರೋ(1,327 ಕೋಟಿ ರೂ.) ದಂಡವನ್ನು ವಿಧಿಸಿತ್ತು. ಇದನ್ನೂ ಓದಿ: ಸಿಸ್ಕೋ, ಅಮೆಜಾನ್‌ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?

  • ಭಾರತದ ಸೈನ್ಯ ಸೇರಿದ 5ನೇ ಬ್ಯಾಚ್ ರಫೇಲ್ ಯುದ್ಧ ವಿಮಾನ

    ಭಾರತದ ಸೈನ್ಯ ಸೇರಿದ 5ನೇ ಬ್ಯಾಚ್ ರಫೇಲ್ ಯುದ್ಧ ವಿಮಾನ

    ನವದೆಹಲಿ: ಭಾರತದ ವಾಯು ಸೇನೆಗೆ ಫ್ರಾನ್ಸ್ ನಿಂದ 5ನೇ ಬ್ಯಾಚ್‍ನ ರಫೇಲ್ ಯುದ್ಧ ವಿಮಾನ ಬಂದು ತಲುಪಿದೆ. ಈ ಮೂಲಕ ಭಾರತೀಯ ವಾಯು ಸೇನೆ ಮತ್ತಷ್ಟು ಬಲಿಷ್ಠಗೊಂಡಿದೆ.

    5ನೇ ಬ್ಯಾಚ್‍ನ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಸುಮಾರು 8000 ಕಿಲೋ ಮೀಟರ್ ಹಾರಿ ಬಂದು ಭಾರತಕ್ಕೆ ತಲುಪಿದೆ. ಆದರೆ ಎಷ್ಟು ವಿಮಾನಗಳು ಬಂದಿದೆ ಎಂದು ಸ್ಪಷ್ಟಪಡಿಸಿಲ್ಲ. ಕೆಲ ಮೂಲಗಳ ಮಾಹಿತಿ ಪ್ರಕಾರ 4 ರಫೇಲ್ ವಿಮಾನಗಳು ಬಂದಿದೆ ಎಂದು ವರದಿಯಾಗಿದೆ.

    ಭಾರತದ ವಾಯುಸೇನೆಯ ಸಿಬ್ಬಂದಿ ಮುಖ್ಯಸ್ಥ ಏರ್‍ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಅವರು ಫ್ರಾನ್ಸ್ ಪ್ರವಾಸದಲ್ಲಿದ್ದು, ಅವರು ಫ್ರಾನ್ಸ್ ನ ಮೆರಿಗ್ಯ್ನಾಕ್ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟರು ಎಂದು ವರದಿಯಾಗಿದೆ.

    ಏರ್‍ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಅವರು ಫ್ರಾನ್ಸ್ ಪ್ರವಾಸದಲ್ಲಿದ್ದು, ಅವರು ಫ್ರಾನ್ಸ್ ನ ಮೆರಿಗ್ಯ್ನಾಕ್ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಾರ್ಗ ಮಧ್ಯದಲ್ಲಿ ಫ್ರಾನ್ಸ್ ಮತ್ತು ಯುಎಇ ವಾಯು ಪಡೆ ರೀಫ್ಯೂಲಿಂಗ್ ಮಾಡಿ ವಿಮಾನವನ್ನು ಸರಿಯಾದ ಸಮಯಕ್ಕೆ ಕಳುಹಿಸಿ ಕೊಟ್ಟಿದ್ದೀರಿ, ಇದಕ್ಕೆ ಧನ್ಯವಾದಗಳು ಎಂದು ಭಾರತದ ರಾಯಭಾರಿ ಕಚೇರಿ ಟ್ವಿಟ್ಟರ್‍ ನಲ್ಲಿ ಹಾಕಿಕೊಂಡಿದೆ.

    ಭಾರತ 2016ರ ಸೆಪ್ಟೆಂಬರ್ ತಿಂಗಳಲ್ಲಿ ಫ್ರಾನ್ಸ್ ನೊಂದಿಗೆ 58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್‍ಗಳನ್ನು ಖರೀದಿಸಲು ಭಾರತ ಅಂತರ್-ಸರ್ಕಾರಿ ಒಪ್ಪಂದ ಮಾಡಿಕೊಂಡಿತ್ತು, ಇದರಂತೆ ಈಗಾಗಲೇ ಭಾರತದಲ್ಲಿ 14 ರಫೇಲ್ ಯುದ್ಧ ವಿಮಾನಗಳು ಕಾರ್ಯಾಚರಿಸುತ್ತಿದೆ. ಇದೀಗ ಮತ್ತೆ ನಾಲ್ಕು ವಿಮಾನಗಳು ಸೇರ್ಪಡೆಯೊಂದಿಗೆ ಇದರ ಸಂಖ್ಯೆ 18ಕ್ಕೆ ಏರಿಕೆ ಕಂಡಿದೆ.

    ಕಳೆದ ವರ್ಷ ಜುಲೈ 28 ರಂದು ಐದು ಯುದ್ಧ ವಿಮಾನಗಳು ಬಂದಿಳಿದ್ದವು. ಆ ಬಳಿಕ 4 ಹಂತಗಳಲ್ಲಿ ಭಾರತಕ್ಕೆ ರಫೇಲ್ ಯುದ್ಧ ವಿಮಾನ ಬಂದಿಳಿದ್ದಿತ್ತು. ಇದೀಗ 5ನೇ ಹಂತದಲ್ಲಿ ಮತ್ತೆ ರಫೇಲ್ ಬಲ ಹೆಚ್ಚಿದೆ. 2023ರ ವೇಳೆಗೆ ಒಪ್ಪಂದದಂತೆ ಎಲ್ಲಾ 36 ರಫೇಲ್ ವಿಮಾನಗಳು ಭಾರತದಲ್ಲಿರಲಿದೆ.

  • ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್ ಲಸಿಕೆ ತಯಾರಿ- ಅಶ್ವತ್ಥನಾರಾಯಣ

    ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್ ಲಸಿಕೆ ತಯಾರಿ- ಅಶ್ವತ್ಥನಾರಾಯಣ

    – ಆವಿಷ್ಕಾರ, ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ
    – ಫ್ರಾನ್ಸ್ ನಡುವೆ ಮಹತ್ವದ ಒಪ್ಪಂದ
    – ಫ್ರೆಂಚ್ ವಿದೇಶಾಂಗ ಸಚಿವರ ಜೊತೆ ಡಿಸಿಎಂ ಮಾತುಕತೆ

    ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ನಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳಲು ಭಾರತವು ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನು ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಲಸಿಕೆಗಳನ್ನು ಉತ್ಪಾದನೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS) ಮತ್ತು ಇಂಡೋ- ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದದ ವೇಳೆ ಮಾತನಾಡಿದ ಅಶ್ವತ್ಥನಾರಾಯಣ ಅವರು, “ಸದ್ಯಕ್ಕೆ ಮಾಸಿಕ 7 ಕೋಟಿ ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಇದಕ್ಕೆ ಇನ್ನೂ 10 ಕೋಟಿ ಲಸಿಕೆ ಸೇರಲಿದೆ. ತದ ನಂತರ ಕರ್ನಾಟಕವೂ ಸೇರಿ ದೇಶಾದ್ಯಂತ ಲಸಿಕೆ ಅಭಿಯಾನ ಮತ್ತಷ್ಟು ವೇಗಗೊಳ್ಳಲಿದೆ. ಇದರ ಜತೆ ಮತ್ತಷ್ಟು ಹೊಸ ಲಸಿಕೆಗಳು ಕೂಡ ಬರಲಿವೆ. ಅವು ರಾಜ್ಯಕ್ಕೂ ಲಭ್ಯವಾಗಲಿವೆ” ಎಂದರು.

    ಕೋವಿಡ್ ಮತ್ತಿತರೆ ಜಾಗತಿಕ ಸವಾಲುಗಳ ನಡುವೆಯೂ ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಮೇಲ್ಮುಖವಾಗಿಯೇ ಇದೆ. ಅದಕ್ಕೂ ಮೊದಲು, ಅಂದರೆ, 2000ರಿಂದ 2019ರವರೆಗೆ ರಾಜ್ಯಕ್ಕೆ 49.7 ಶತಕೋಟಿ ಡಾಲರ್ ವಿದೇಶಿ ಹೂಡಿಕೆ ಹರಿದುಬಂದಿದೆ. ವಿದೇಶಿ ಹೂಡಿಕೆ ಒಳಹರಿವಿನಲ್ಲಿ ರಾಜ್ಯವು ಮಹಾರಾಷ್ಟ್ರ ಮತ್ತು ನವದೆಹಲಿಯ ನಂತರ ಮೂರನೇ ಅಗ್ರರಾಜ್ಯವಾಗಿದೆ. ಕೋವಿಡ್‍ಗೂ ಮೊದಲು ಕರ್ನಾಟಕ ಹೂಡಿಕೆ ಅತ್ಯುತ್ತಮ ತಾಣವಾಗಿತ್ತು. ಅದೇ ರೀತಿ ಕೋವಿಡ್ಡೋತ್ತರ ಕಾಲದಲ್ಲಿಯೂ ಹೂಡಿಕೆಗೆ ಪ್ರಶಸ್ತ್ಯ ನೆಲೆಯಾಗಿದೆ ಎಂದು ನುಡಿದರು.

    ಮಾಹಿತಿ ತಂತ್ರಜ್ಞಾನ (ಐಟಿ) ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಕರ್ನಾಟಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಐಟಿ ರಫ್ತಿಗೆ ಕರ್ನಾಟಕ ಅತಿದೊಡ್ಡ ಕೊಡುಗೆ ಶೇ.40ರಷ್ಟಿ ಇದೆ. ಇದು ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ಹೆಚ್ಚು ಹಾಗೂ ಅದರಲ್ಲಿ ಕರ್ನಾಟಕ ಮತ್ತಿತರೆ ರಾಜ್ಯಗಳ ನಡುವೆ ಭಾರೀ ಅಂತರವಿದೆ. ಕೈಗಾರಿಕೆ, ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ನಾಟಕವು ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಒಟ್ಟು ದೇಶಿಯ ಉತ್ಪನ್ನದಲ್ಲಿ (GSDP) 220 ಶತಕೋಟಿ ಡಾಲರ್ ಹೊಂದಿದೆ. ಮುಖ್ಯವಾಗಿ ಐಟಿ, ಬಿಟಿ, ಇಎಸ್‍ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ) ಮತ್ತು ಎವಿಜಿಸಿ (ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಮುಂತಾದ ಕ್ಷೇತ್ರಗಳಿಗಾಗಿ ಪ್ರತ್ಯೇಕ ನೀತಿಗಳನ್ನೂ ರೂಪಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ತಿಳಿಸಿದರು.

    ಈ ಒಪ್ಪಂದ ಬಹಳ ಮಹತ್ವದ್ದು:
    ಮೊದಲಿನಿಂದಲೂ ಭಾರತ ಮತ್ತು ಫ್ರಾನ್ಸ್ ಸಹಜ ಪಾಲುದಾರ ದೇಶಗಳಾಗಿವೆಯಲ್ಲದೆ ಸಾಂಸ್ಕೃತಿಕ, ಆರ್ಥಿಕ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳು ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಫ್ರಾನ್ಸ್ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS)ಮತ್ತು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಒಪ್ಪಂದದ ಮೂಲಕ ಭಾರತ ಮತ್ತು ಫ್ರಾನ್ಸ್ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಕರ್ನಾಟಕದ ಪಾತ್ರ ಮುನ್ನೆಲೆಗೆ ಬಂದಂತೆ ಆಗಿದೆ. ತಂತ್ರಜ್ಞಾನ, ಸ್ಟಾರ್ಟ್ ಆಪ್ ಇನ್ನಿತರೆ ಕ್ಷೇತ್ರಗಳಲ್ಲಿ ರಾಜ್ಯವು ಫ್ರಾನ್ಸ್ ಜತೆ ಮತ್ತಷ್ಟು ನಿಕಟವಾಗಿ ಕೆಲಸ ಮಾಡಲಿದೆ. ಒಪ್ಪಂದವು ಎರಡೂ ದೇಶಗಳ ನಡುವಿನ ನಾವೀನ್ಯತಾ ಸಹಯೋಗದ ಬೆಳವಣಿಗೆಗೆ ಪ್ರಮುಖ ಮೈಲಿಗಲ್ಲು. ಈ ಒಪ್ಪಂದವು ಎರಡೂ ದೇಶಗಳ ಉದ್ಯಮಶೀಲತೆ ಮತ್ತು ಆವಿಷ್ಕಾರದ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.

    ಒಪ್ಪಂದಕ್ಕೆ ಐಟಿ ಇಲಾಖೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಯಹೋನನ್ ಸ್ಯಾಮ್ಯುಯಲ್ ಅಂಕಿತ ಹಾಕಿದರು. ಒಪ್ಪಂದ ಏರ್ಪಡುವುದಕ್ಕೂ ಮುನ್ನ ಡಿಸಿಎಂ ಡಾ.ಅಶ್ವತ್ಥನಾರಾಯಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು ಫ್ರಾನ್ಸ್ ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೀನ್ ವಿಯಾಸ್ ಲೆ ಡ್ರಿಯಾನ್ ಹಾಗೂ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯಲ್ ಲೆನಿಯಾನ್, ಬೆಂಗಳೂರು ಫ್ರಾನ್ಸ್ ರಾಯಭಾರ ಕಚೇರಿಯ ಕಾನ್ಸುಲೇಟ್ ಜನರಲ್ ಮಾರ್ಜೋರಿ ವ್ಯಾನ್‍ಬೆಲಿಂಗ್ಹೆಮ್ ಜತೆ ಮಾತುಕತೆ ನಡೆಸಿದರು. ಕಾರ್ಯಕ್ರಮದಲ್ಲಿ ಐಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಚಂಪಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    – ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪಂಚ ಸವಾಲು
    – 1.1 ಮಿಲಿಯನ್ ಯುರೋ ಗಿಫ್ಟ್

    ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದ ಹೊಸ ತಿರುವು ಪಡೆದುಕೊಂಡಿದೆ. ಫ್ರಾನ್ಸ್ ದೇಶದ ಪಬ್ಲಿಕೇಷನ್ ಮೀಡಿಯಾಪಾರ್ಟ್ ವರದಿ ಪ್ರಕಾರ, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ. 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನ ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ.

    ಮೀಡಿಯಾಪಾರ್ಟ್ ವರದಿಯನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಮತ್ತೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನ ಮಾಡಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ ಬಿಜೆಪಿಗೆ ಐದು ಪ್ರಶ್ನೆಗಳನ್ನ ಕೇಳಿದ್ದಾರೆ.

    ಗಿಫ್ಟ್ ಟು ಕ್ಲೈಂಟ್: ಈ ಸಂಪೂರ್ಣ ವ್ಯವಹಾರಕ್ಕೆ ಗ್ರಾಹಕರಿಗೆ ಕಾಣಿಕೆ ಶೀರ್ಷಿಕೆಯನ್ನ ನೀಡಲಾಗಿದೆ. ಇದೊಂದು ಪಾರದರ್ಶಕ ವ್ಯವಹಾರವಾಗಿದ್ರೆ ಗಿಫ್ಟ್ ಹೆಸರು ಹೇಳಿದ್ಯಾಕೆ? ಬಹುಶಃ ಇದು ಮುಚ್ಚಿಟ್ಟ ವ್ಯವಹಾರನಾ ಎಂದು ಸುರ್ಜೆವಾಲಾ ಶಂಕೆ ವ್ಯಕ್ತಪಡಿಸಿದ್ದಾರೆ. 60 ಸಾವಿರ ಕೋಟಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಸತ್ಯ ಹೊರ ಬಂದಿದೆ. ಈ ಮಾತನ್ನ ನಾವು ಹೇಳುತ್ತಿಲ್ಲ. ಇದು ಫ್ರಾನ್ಸ್ ಏಜೆನ್ಸಿ ವರದಿಯಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ನಿಮಗೆ ಎಷ್ಟು ಕಮೀಷನ್ ಸಿಕ್ಕಿದೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

    ಕಾಂಗ್ರೆಸ್ ‘ಪಂಚ’ ಸವಾಲು
    1. 1.1 ಮಿಲಿಯನ್ ಯುರೋ ಗ್ರಾಹಕರಿಗೆ ಗಿಫ್ಟ್ ಎಂದು ಡಸಾಲ್ಟ್ ಅಡಿಟ್ ನಲ್ಲಿ ದಾಖಲಿಸಲಾಗಿದೆ. ಮಧ್ಯಂತರ ವ್ಯಕ್ತಿಗೆ ಕಮೀಷನ್ ನೀಡುವ ಮೂಲಕ ರಫೇಲ್ ಒಪ್ಪಂದ ಆಗಿತ್ತಾ?
    2. ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ದೇಶಗಳ ನಡುವೆ ಒಪ್ಪಂದವಾದಾಗ ಮಧ್ಯಂತರ ಅಥವಾ ಏಜೆಂಟ್ ಹೇಗೆ ಭಾಗಿ ಆಗ್ತಾರೆ?
    3. ಈ ವರದಿ ರಫೇಲ್ ಒಪ್ಪಂದದ ಪಾರದರ್ಶಕತೆಯನ್ನ ಪ್ರಶ್ನೆ ಮಾಡಲ್ವಾ?
    4. ಈ ಡೀಲ್ ಯಾರಿಗೆ, ಎಷ್ಟು ಹಣ ಸಿಕ್ಕಿದೆ ಎಂಬುವುದು ತಿಳಿದುಕೊಳ್ಳಲು ತನಿಖೆಗೆ ಅವಶ್ಯಕತೆ ಇದೆ ಅಲ್ವಾ?
    5. ಪ್ರಧಾನ ಮಂತ್ರಿಗಳು ಈ ಬಗ್ಗೆ ಉತ್ತರ ನೀಡ್ತಾರಾ?

    ಏನಿದು ರಫೇಲ್ ಡೀಲ್?:
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಮೋದಿ ವಿರುದ್ಧ ರಫೇಲ್ ಆರೋಪಗಳೇನು?
    ಏಪ್ರಿಲ್ 10, 2015ರಲ್ಲಿ ಪ್ರಧಾನಿ ಮೋದಿ ರಫೆಲ್ ಒಪ್ಪಂದವನ್ನ ಘೋಷಿಸಿದ್ದರು. ಬಳಿಕ ಹೆಚ್‍ಎಎಲ್ ಪಾಲಾಗಬೇಕಿದ್ದ ರಫೇಲ್ ಯುದ್ಧ ವಿಮಾನ ಉತ್ಪಾದನೆ ವ್ಯವಹಾರ ಅನಿಲ್ ಅಂಬಾನಿಗೆ ವಹಿಸಿದ್ದರು. ಇದು ಸಾಕಷ್ಟು ವ್ಯವಹಾರಗಳಲ್ಲಿ ಕೈ ಸುಟ್ಟುಕೊಂಡು ಸಾಲದ ಹೊರೆಯಲ್ಲಿರುವ ಅಂಬಾನಿಗೆ ಮೋದಿಗೆ ವರದಾನ ನೀಡಿದೆ. ರಫೇಲ್ ವ್ಯವಹಾರ ಘೋಷಿಸುವ ವೇಳೆ ಯಾವುದೇ ರಕ್ಷಣಾ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ಪ್ರಧಾನಿ ಏಕಪಕ್ಷೀಯವಾಗಿಯೇ ವ್ಯವಹಾರ ಘೋಷಿಸಿದ್ದಾರೆ. ರಕ್ಷಣಾ ಸಚಿವರೂ, ಸಮಿತಿಗೂ ಮಾಹಿತಿ ಇಲ್ಲ. 36 ವಿಮಾನಗಳ ಖರೀದಿಗೆ ಈ ಹಿಂದೆ ಯುಪಿಎ ಒಪ್ಪಿಕೊಂಡಿದ್ದ ಬೆಲೆಗಿಂತಲೂ ಹೆಚ್ಚು ಹಣ ಸಂದಾಯ ಮಾಡಲಾಗಿದೆ. ರಫೇಲ್ ವ್ಯವಹಾರ ಘೋಷಣೆಯಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ಕಂಪನಿಯೇ ಅಸ್ತಿತ್ವದಲ್ಲಿ ಇರಲಿಲ್ಲ. ರಫೇಲ್ ಡೀಲ್ ಸಿಕ್ಕ ಕೆಲ ದಿನಗಳ ಬಳಿಕವಷ್ಟೇ ಅನಿಲ್ ಅಂಬಾನಿ ವಿಮಾನ ಉತ್ಪಾದನೆಗಾಗಿ ಪ್ರತ್ಯೇಕ ಕಂಪನಿ ಸ್ಥಾಪಿಸಿದ್ದರು. 126 ವಿಮಾನಗಳಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳ ಖರೀದಿ ಮಾಡಲಾಗಿದೆ. 108 ವಿಮಾನಗಳನ್ನು `ಭಾರತದಲ್ಲೇ ಉತ್ಪಾದಿಸಿ’ ಸಹಭಾಗಿತ್ವದಲ್ಲಿ ಭಾರತದಲ್ಲೇ ಉತ್ಪಾದನೆಗೆ ಒಪ್ಪಿಗೆ ನೀಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿತ್ತು. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ಮೋದಿ ಅನಿಲ್ ಅಂಬಾನಿಯ ದಲ್ಲಾಳಿ: ರಾಹುಲ್ ಗಾಂಧಿ ಆರೋಪ

  • ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

    ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

    ನವದೆಹಲಿ: ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್‍ಡೌನ್ ಆರಂಭವಾಗಿದೆ.

    ಯೂರೋಪ್ ರಾಷ್ಟ್ರಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದ್ದು, ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್‍ಡೌನ್ ಘೋಷಣೆಯಾದರೆ, ಫ್ರಾನ್ಸ್ ನಲ್ಲೂ ಮಾರ್ಚ್ 17 ರಿಂದಲೂ ಲಾಕ್‍ಡೌನ್ ಮಾಡಲಾಗುವುದು ಎಂಬ ನಿರ್ಧಾರ ಹೊರಬಿದ್ದಿದೆ.

    ಜರ್ಮನಿಯಲ್ಲೂ ಕೊರೊನಾ ಅಲೆ ಜೋರಾಗುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸೀಮಿತ ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲು ಜರ್ಮನಿ ನಿರ್ಧರಿಸಿದೆ, ಹಂಗೇರಿಯಲ್ಲಿ ನೈಟ್ ಕಫ್ರ್ಯೂ ಮಾಡಲು ಕ್ರಮ ಕೈಗೊಂಡರೆ, ಪೋಲ್ಯಾಂಡ್‍ನಲ್ಲಿ ಥಿಯೇಟರ್, ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಮತ್ತೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.

    ಯೂರೋಪ್ ರಾಷ್ಟ್ರಗಳಂತೆ ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೀಮಿತ ಪ್ರದೇಶಗಳ ಲಾಕ್ ಡೌನ್ ಪ್ರಕ್ರಿಯೆ ಆರಂಭವಾಗಿದೆ. ಹಾಗೆ ಕರ್ನಾಟಕದಲ್ಲಿ ಕಳೆದ ಒಂದೇ ದಿನದಲ್ಲಿ 1488 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 925 ಪ್ರಕರಣ ಪತ್ತೆಯಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

  • ಚಳಿಗಾಲದಲ್ಲಿ ಕೊರೊನಾ ಎರಡನೇ ಅಲೆ – ಯಾವ ದೇಶದಲ್ಲಿ ಲಾಕ್‌ಡೌನ್‌, ನಿರ್ಬಂಧ ಹೇರಲಾಗಿದೆ?

    ಚಳಿಗಾಲದಲ್ಲಿ ಕೊರೊನಾ ಎರಡನೇ ಅಲೆ – ಯಾವ ದೇಶದಲ್ಲಿ ಲಾಕ್‌ಡೌನ್‌, ನಿರ್ಬಂಧ ಹೇರಲಾಗಿದೆ?

    ಪ್ಯಾರಿಸ್‌: ಚಳಿಗಾಲ ಬರುತ್ತಿದ್ದಂತೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಭಾರತದಂತೆಯೇ ಯೂರೋಪ್‍ನಲ್ಲೂ ಚಳಿಗಾಲ ಘನಘೋರ ಸ್ಥಿತಿ ನಿರ್ಮಿಸುವ ಸಾಧ್ಯತೆ ಇದೆ.

    ಈ ವಿಚಾರ ಮನಗಂಡಿರುವ ಫ್ರಾನ್ಸ್, ಜರ್ಮನಿ ಸೇರಿದಂತೆ ಆದರೆ, ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ 2ನೇ ಅಲೆ ಕಂಪನ ಎಬ್ಬಿಸಿಬಿಟ್ಟಿದೆ. ಹಾಗಾಗಿ 2ನೇ ಹಂತದ ಲಾಕ್‍ಡೌನ್, ಜನತಾ ಕರ್ಫ್ಯೂ ಹೇರಿಕೊಂಡಿವೆ.

    ಯಾವ ದೇಶದಲ್ಲಿ ಏನು?
    ಫ್ರಾನ್ಸ್‌:
    2ನೇ ಹಂತದ ಲಾಕ್‍ಡೌನ್ ಫ್ರಾನ್ಸ್‌ನಲ್ಲಿ ಘೋಷಣೆಯಾಗಿದೆ. ಅ.6ರಿಂದ 4 ವಾರ ಲಾಕ್‍ಡೌನ್ ಆಗಲಿದೆ. ಫ್ರಾನ್ಸಿನಲ್ಲಿ 12.35 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ಒಟ್ಟು 35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

    ಜರ್ಮನಿ:
    2ನೇ ಹಂತದ ಲಾಕ್‍ಡೌನ್ ನವೆಂಬರ್‌ 2 ರಿಂದ 30ರ ವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಇರಲಿದೆ. 4.81 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲಿ 16ನೇ ಸ್ಥಾನದಲ್ಲಿದೆ. ಒಟ್ಟು 10,359 ಮಂದಿ ಸಾವನ್ನಪ್ಪಿದ್ದಾರೆ.

    ಇಸ್ರೇಲ್:
    2ನೇ ಹಂತದ ಲಾಕ್‍ಡೌನ್ 3 ವಾರ ಕಾಲ ಇರಲಿದೆ. 3.12 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲಿ 28ನೇ ಸ್ಥಾನದಲ್ಲಿದೆ. 2,494 ಮಂದಿ ಸಾವನ್ನಪ್ಪಿದ್ದಾರೆ,

    ಅಮೆರಿಕ:
    ಲಾಕ್‍ಡೌನ್ ಘೋಷಣೆಯಾಗಿಲ್ಲ. ತೆರೆಯಲಾಗಿದ್ದ ಶಾಲಾ-ಕಾಲೇಜ್ ಮತ್ತೆ ಬಂದ್ ಮಾಡಲಾಗಿದೆ . 91.21 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 2.33 ಲಕ್ಷ ಮಂದಿ ಮೃತಪಟ್ಟಿದ್ದಾರೆ.

    ಸ್ಪೇನ್
    9 ನಗರಗಳಲ್ಲಿ ಜನತಾ ಕರ್ಫ್ಯೂ ಘೋಷಣೆಯಾಗಿದೆ. 11.91 ಲಕ್ಷ ಮಂದಿಗೆ ಸೋಂಕು ಬಂದಿದ್ದು 6ನೇ ಸ್ಥಾನದಲ್ಲಿದೆ. 35,785 ಮಂದಿ ಬಲಿಯಾಗಿದ್ದಾರೆ.

    ನೆದರ್‌ಲ್ಯಾಂಡ್‌:
    ಜನತಾ ಕರ್ಫ್ಯೂ ಹೇರಲಾಗಿದ್ದು 3.19 ಲಕ್ಷ ಮಂದಿಗೆ ಸೋಂಕು ಬಂದಿದೆ. ವಿಶ್ವದಲ್ಲೇ 26ನೇ ಸ್ಥಾನದಲ್ಲಿದ್ದು, 7,202 ಮಂದಿ ಬಲಿಯಾಗಿದ್ದಾರೆ.

    ಇಟಲಿ:
    ನೈಟ್‍ಕ್ಲಬ್‍ಗಳನ್ನು ಮುಚ್ಚಲಾಗಿದ್ದು 5.89 ಲಕ್ಷ ಮಂದಿಗೆ ಸೋಂಕು ಬಂದಿದೆ. 13ನೇ ಸ್ಥಾನದಲ್ಲಿರುವ ಇಟಲಿಯಲ್ಲಿ 37,905 ಮಂದಿ ಮೃತಪಟ್ಟಿದ್ದಾರೆ.

  • ಕೊರೊನಾ 2ನೇ ಅಲೆ- ಫ್ರಾನ್ಸ್, ಜರ್ಮನಿಯಲ್ಲಿ ಮತ್ತೆ ಲಾಕ್‍ಡೌನ್

    ಕೊರೊನಾ 2ನೇ ಅಲೆ- ಫ್ರಾನ್ಸ್, ಜರ್ಮನಿಯಲ್ಲಿ ಮತ್ತೆ ಲಾಕ್‍ಡೌನ್

    ಬರ್ಲಿನ್/ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ ದೇಶದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ. ಚಳಿಗಾಲದಲ್ಲಿ ಕೊರೊನಾ ವೈರಸ್ ಇನ್‍ಫೆಕ್ಷನ್ ಅಥವಾ ಸೋಂಕು ಹರಡುವಿಕೆ ವೇಗ ಪಡೆದುಕೊಳ್ಳುವ ಆತಂಕದಿಂದ ಸರ್ಕಾರಗಳು ಈ ನಿರ್ಧಾರ ಪ್ರಕಟಿಸಿವೆ. ಫ್ರಾನ್ಸ್ ಇಡೀ ದೇಶವೇ ಲಾಕ್ ಆಗಲಿದೆ. ಇತ್ತ ಜರ್ಮನಿ ನಾಲ್ಕು ವಾರದ ಅವಧಿಗೆ ಲಾಕ್‍ಡೌನ್ ಅಂತ ಆದೇಶಿಸಿದೆ.

    ಕಳೆದ ಒಂದು ವಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಡೀರ್ ಅಂತ ಹೆಚ್ಚಳವಾಗುತ್ತಿರುವ ಹಿನ್ನೆಲೆ ಪ್ರಾನ್ಸ್ ಮತ್ತು ಜರ್ಮನಿ ಮತ್ತೆ ಲಾಕ್‍ಡೌನ್ ತಂತ್ರವನ್ನ ಪ್ರಯೋಗಿಸಿವೆ. ಕಳೆದ ವಾರ ಇಡೀ ವಿಶ್ವದಲ್ಲಿ 20.8 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಯುರೋಪಿನ ರಷ್ಯಾ, ಟರ್ಕಿ, ಇಜರಾಲ್ ಮತ್ತು ಮಧ್ಯ ಏಷ್ಯಾಗಳಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗಿವೆ.

    ಯುರೋಪ್ ರಾಷ್ಟ್ರಗಳಲ್ಲಿ ಕಳೆದ ವಾರ ಸೋಂಕಿತರ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿದೆ. ಯುರೋಪಿ ಒಕ್ಕೂಟದ ರಾಷ್ಟ್ರಗಳು, ಬ್ರಿಟನ್, ನಾರ್ವೆ, ಸ್ವಿಟ್ಜರ್‍ಲ್ಯಾಂಡ್ ದೇಶಗಳಲ್ಲಿ ಏಳು ದಿನಗಳೊಳಗೆ ಅಂದಾಜು 10 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮುಂದಿನ ಎರಡ್ಮೂರು ವಾರಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಗಳು ದಟ್ಟವಾಗಿವೆ.

    ಲಾಕ್‍ಡೌನ್ ಘೋಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಏಂಜೆಲಾ ಮೆರ್ಕೆಲ್, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ತಡೆಗಾಗಿ ಲಾಕ್‍ಡೌನ್ ಮಾಡಲಾಗಿದೆ. ಬಾರ್, ಸಿನಿಮಾ ಥಿಯೇಟರ್, ರೆಸ್ಟೋರೆಂಟ್ ಸೇರಿದಂತೆ ಅತಿಹೆಚ್ಚು ಜನ ಸೇರುವ ಪ್ರದೇಶಗಳು ಮುಂದಿನ ನಾಲ್ಕು ವಾರ ಬಂದ್ ಆಗಲಿವೆ ಎಂದು ತಿಳಿಸಿದ್ದಾರೆ. ಆದೇಶಕ್ಕೂ ಮುನ್ನ ಮೆರ್ಕೆಲ್ 16 ರಾಜ್ಯಗಳ ಗವರ್ನರ್ ಗಳ ಜೊತೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸುದೀರ್ಘ ಸಭೆ ನಡೆಸಿದ್ದರು. ಎಲ್ಲ ಗವರ್ನರ್, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಆರ್ಥಿಕ- ವೈದ್ಯಕೀಯ ತಜ್ಞರ ಜೊತೆ ಚರ್ಚಿಸಿ ಲಾಕ್‍ಡೌನ್ ವಿಧಿಸುವ ಬಗ್ಗೆ ನಿರ್ಧರಿಸಿದ್ದಾರೆ. ನವೆಂಬರ್ ಅಂತ್ಯದವರೆಗೂ ಜರ್ಮನಿ ಲಾಕ್ ಆಗಲಿದೆ.

  • ಬೀಚಿನಿಂದ 2 ಕೆಜಿ ಮರಳು ಕದ್ದಿದ್ದಕ್ಕೆ ಪ್ರವಾಸಿಗನಿಗೆ 86 ಸಾವಿರ ರೂ. ದಂಡ

    ಬೀಚಿನಿಂದ 2 ಕೆಜಿ ಮರಳು ಕದ್ದಿದ್ದಕ್ಕೆ ಪ್ರವಾಸಿಗನಿಗೆ 86 ಸಾವಿರ ರೂ. ದಂಡ

    ರೋಮ್‌: ಎರಡು ಕೆಜಿ ಮರಳನ್ನು ಕದ್ದಿದ್ದಕ್ಕೆ ಫ್ರಾನ್ಸ್‌ ಪ್ರವಾಸಿಯೊಬ್ಬರಿಗೆ 890 ಪೌಂಡ್‌ (ಅಂದಾಜು 86,633 ರೂ.) ದಂಡ ವಿಧಿಸಲಾಗಿದೆ.

    ಸಾರ್ಡಿನಿಯಾ ಮೆಡಿಟರೇನಿಯನ್‌ ಸಮುದ್ರದಲ್ಲಿ ಇಟಲಿ ದೇಶಕ್ಕೆ ಸೇರಿದ್ದ ದೊಡ್ಡ ದ್ವೀಪವಾಗಿದೆ. ಪ್ರವಾಸಿಗನ ಬಳಿಯಿದ್ದ ಬ್ಯಾಗಿನಲ್ಲಿ 2 ಕೆಜಿ ತೂಕದ ಮರಳು ಇದ್ದ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ.

    ಸಾರ್ಡಿನಿಯನ್ ಅಧಿಕಾರಿಗಳು ಈ ಬೀಚ್‌ ರಕ್ಷಣೆಯ ಹೊಣೆಯನ್ನು ಹೊತ್ತಿದ್ದಾರೆ. ಇಲ್ಲಿರುವ ಬಿಳಿ ಮರಳು ವಿಶಿಷ್ಟವಾಗಿದ್ದು ಸಂರಕ್ಷಣೆ ಮಾಡಲಾಗುತ್ತಿದೆ. ಪ್ರವಾಸಿಗರು ಸ್ವಲ್ಪ ಪ್ರಮಾಣದಲ್ಲಿ ಮರಳನ್ನು ಕಳ್ಳಸಾಗಣೆ ಮಾಡಿದರೂ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ. ದಂಡಗಳಲ್ಲಿ ಒಂದರಿಂದ ಆರು ವರ್ಷಗಳ ಜೈಲು ಶಿಕ್ಷೆ ಸೇರಿದೆ.

    ದ್ವೀಪದಲ್ಲಿರುವ ಸುಂದರವಾದ ಕಡಲತೀರಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತವೆ. ಈ ಕಾರಣಕ್ಕೆ ಭಾರೀ ಸಂಖ್ಯೆಯ ಪ್ರವಾಸಿಗರು ಈ ದ್ವೀಪಕ್ಕೆ ಆಗಮಿಸುತ್ತಾರೆ.

    ಮರಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸುತ್ತಿರುವುದು ಇದೇ ಮೊದಲೆನಲ್ಲ. ಕಳೆದ ವರ್ಷ ಫ್ರೆಂಚ್ ದಂಪತಿ 14 ಬಾಟಲಿಯಲ್ಲಿ ಮರಳನ್ನು ಸಂಗ್ರಹಿಸಿದ್ದರು. ಒಟ್ಟು ತೂಕ ಮಾಡುವಾಗ 40 ಕೆಜಿ ಮರಳು ಬಾಟಲಿಯಲ್ಲಿತ್ತು. ವಿಚಾರಣೆಯ ಸಂದರ್ಭದಲ್ಲಿ ನಮಗೆ ಇಲ್ಲಿ ಮರಳು ಸಂಗ್ರಹಿಸುವುದು ಅಪರಾಧ ಎಂಬ ವಿಚಾರ ಗೊತ್ತಿರಲಿಲ್ಲ ಎಂದು ತಿಳಿಸಿದ್ದರು. ಸಾರ್ಡಿನಿಯನ್ ಕಡಲತೀರಗಳಿಂದ ಮರಳು, ಬೆಣಚುಕಲ್ಲುಗಳನ್ನು ಸಾಗಿಸುವುದು ಕಾನೂನುಬಾಹಿರ ಎಂದು 2017ರಲ್ಲಿ ಘೋಷಿಸಲಾಗಿದೆ.

    ಮರಳನ್ನು ಸಾಗಾಟಕ್ಕೆ ನಿರ್ಬಂಧ ಇಟಲಿ ಮಾತ್ರ ಇಲ್ಲದೇ ಹಲವು ಕಡೆ ಜಾರಿಯಲ್ಲಿದೆ. ಹವಾಯಿಯಲ್ಲಿ ಕಡಲತೀರದಿಂದ ಮರಳನ್ನು ತೆಗೆಯುವುದು ಅಪರಾಧವಾಗಿದೆ. ಮರಳು ತೆಗೆದರೆ 1 ಲಕ್ಷ ಡಾಲರ್‌(73.24 ಲಕ್ಷ ರೂ.) ದಂಡ ವಿಧಿಸಲಾಗುತ್ತದೆ.. 1947ರ ಕರಾವಳಿ ಸಂರಕ್ಷಣಾ ಕಾಯ್ದೆಯ ಅಡಿ ಇಂಗ್ಲೆಂಡಿನಲ್ಲಿ1 ಸಾವಿರ ಪೌಂಡ್‌( ಅಂದಾಜು 97 ಸಾವಿರ ರೂ.) ದಂಡ ಹಾಕಲಾಗುತ್ತದೆ.

  • ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

    ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

    ಅಂಬಾಲ: ವಾಯು ಸೇನೆಗೆ ಬಲ ತುಂಬಬಲ್ಲ ಅತ್ಯಾಧುನಿಕ ಗೇಮ್‌ ಚೇಂಜರ್‌ ಯುದ್ಧ ವಿಮಾನ ರಫೇಲ್‌ ಭಾರತದಲ್ಲಿ ಲ್ಯಾಂಡ್‌ ಆಗಿದೆ. 5 ರಫೇಲ್‌ ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಮಧ್ಯಾಹ್ನ 3.10ರ ವೇಳೆಗೆ ಲ್ಯಾಂಡ್‌ ಆಯ್ತು.

    ಯುದ್ಧ ವಿಮಾನಗಳು ಆಗಮಿಸುವ ಹಿನ್ನೆಲೆ ಇವುಗಳ ಸ್ವಾಗತಕ್ಕೆ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆ ಮೊದಲೇ ಸಜ್ಜುಗೊಂಡಿತ್ತು. ರಫೇಲ್‌ ಭಾರತದ ವಾಯುಸೀಮೆಯನ್ನು ಪ್ರವೇಶಿಸುತ್ತಿದ್ದಂತೆ ಎರಡು ಸುಖೋಯ್‌ ವಿಮಾನಗಳು ಸ್ವಾಗತಿಸಿ ಬೆಂಗಾವಲಾಗಿ ಅಂಬಾಲಕ್ಕೆ ಕರೆದುಕೊಂಡು ಬಂದಿತ್ತು.

    ಕೊರೊನಾ ಇರುವುದರಿಂದ ಹಾಗೂ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಅಂಬಾಲದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಂಬಾಲ ವಾಯುನೆಲೆಗೆ ಹೊಂದಿಕೊಂಡಿರುವ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್‌ 144 ಜಾರಿಗೊಂಡಿದೆ.

    ಮನೆಯ ಮೇಲ್ಛಾವಣೆಯಲ್ಲಿ ಸೇರುವುದು ಹಾಗೂ ಯುದ್ಧ ವಿಮಾನಗಳ ಫೋಟೋ ತೆಗೆಯುವುದನ್ನ ಈ ಸುತ್ತ ಮುತ್ತಲ ಪ್ರದೇಶದಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ಭಾರತ ಫ್ರಾನ್ಸ್‌ನ ಡಸಾಲ್ಟ್‌ ಸಂಸ್ಥೆ ಜೊತೆ ಒಟ್ಟು 36 ರಫೇಲ್‌ ಯುದ್ಧ ವಿಮಾನಗಳ ಖರೀದಿಸುವ ಸಂಬಂಧ ಒಪ್ಪಂದ ನಡೆದಿತ್ತು. ಇದೀಗ ಈ ಪೈಕಿ ಮೊದಲ ಬ್ಯಾಚ್‌ನ ಐದು ವಿಮಾನಗಳು ಸೋಮವಾರ ಫ್ರಾನ್ಸ್‌ನಿಂದ ಟೇಕಾಫ್‌ ಆಗಿ ಮಂಗಳವಾರ ಯುಎಇಯಲ್ಲಿರುವ ದಫ್ರಾ ವಾಯುನೆಲೆಯಲ್ಲಿ ಲ್ಯಾಂಡ್‌ ಆಗಿತ್ತು. ಅಲ್ಲಿಂದ ಹೊರಟ ವಿಮಾನ ಈಗ ಭಾರತದಲ್ಲಿ ಲ್ಯಾಂಡ್‌ ಆಗಿದೆ.

    ಸ್ವದೇಶಿ ಐಎನ್‌ಎಸ್‌ ನೌಕೆ ರಫೇಲ್‌ ಲೀಡರ್‌ಗೆ ಭಾರತಕ್ಕೆ ಸ್ವಾಗತ ಎಂದು ಹೇಳಿ ಹ್ಯಾಪಿ ಲ್ಯಾಂಡಿಂಗ್‌ ಸಂದೇಶ ಕಳುಹಿಸಿತು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಿಡಿಯೋ ಟ್ವೀಟ್‌ ಮಾಡಿ ಸ್ವಾಗತ ಕೋರಿದ್ದರು. ಇದನ್ನೂ ಓದಿ: ರಫೇಲ್‌ ಲ್ಯಾಂಡ್‌ ಆಗಿದ್ದ ವಾಯುನೆಲೆಯ ಸಮೀಪವೇ ಬಿತ್ತು ಇರಾನ್‌ ಕ್ಷಿಪಣಿ

    2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು(28 ಸಿಂಗಲ್‌ ಸೀಟರ್‌, 8 ಡಬಲ್‌ ಸೀಟರ್‌) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್‌ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್‌ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ  ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್‌ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

  • ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ನವದೆಹಲಿ: ಇಂದು ಭಾರತಕ್ಕೆ 5 ರಫೇಲ್‌ ಯುದ್ಧ ವಿಮಾನಗಳು ಲ್ಯಾಂಡ್‌ ಆಗಲಿದೆ. ಈ ರಫೇಲ್‌ ವಿಮಾನಗಳು ಭಾರತಕ್ಕೆ ಬರುವಲ್ಲಿ ಜಮ್ಮು ಕಾಶ್ಮೀರ ಮೂಲದ ವಾಯುಸೇನೆಯ ಅಧಿಕಾರಿ ಹಿಲಾಲ್‌ ಅಹ್ಮದ್‌ ಪ್ರಮುಖ ಪಾತ್ರವಹಿಸಿದ್ದಾರೆ.

    ಕಳೆದ ಒಂದು ವರ್ಷದಿಂದ ಫ್ರಾನ್ಸ್‌ನಲ್ಲಿರುವ ಏರ್‌ ಕಮಾಂಡರ್‌ ಹಿಲಾಲ್‌ ಅಹ್ಮದ್‌ ಭಾರತದ ಬೇಡಿಕೆಗೆ ಅನುಗುಣವಾಗಿ ಡಸಾಲ್ಡ್‌ ಕಂಪನಿಯ ಜೊತೆ ಸಂವಹನ ನಡೆಸಿ ರಫೇಲ್‌ ವಿಮಾನವನ್ನು ರೂಪಿಸಿದ್ದಾರೆ.

    52 ವರ್ಷದ ಹಿಲಾಲ್‌ ಅನಂತ್‌ನಾಗ್‌ ಜಿಲ್ಲೆ ಭಕ್ಷಿಬಾದ್‌ ನಗರದಲ್ಲಿ ಜನಿಸಿದ್ದು, ಇವರ ತಂದೆ ದಿವಂಗತ ಮೊಹಮ್ಮದ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

    1988ರ ಡಿಸೆಂಬರ್‌ 17 ರಂದು ವಾಯುಸೇನೆಗೆ ಪೈಲಟ್‌ ಆಗಿ ಸೇರ್ಪಡೆಗೊಂಡ ಇವರು 1993ರಲ್ಲಿ ಫೈಲ್ಡ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡರು. 2004ರಲ್ಲಿ ವಿಂಗ್‌ ಕಮಾಂಡರ್‌, 2016ರಲ್ಲಿ ಗ್ರೂಪ್‌ ಕ್ಯಾಪ್ಟನ್‌, 2016ರಲ್ಲಿ ಏರ್‌ ಕಮಾಂಡರ್‌ ಹುದ್ದೆ ಸಿಕ್ಕಿತ್ತು.

    ಹಿಲಾಲ್ ಜಮ್ಮು ಜಿಲ್ಲೆಯ ನಾಗ್ರೋಟಾ ಪಟ್ಟಣದ ಸೈನಿಕ್ ಶಾಲೆಯಲ್ಲಿ ಓದಿದ್ದಾರೆ. ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್‌ ಕಾಲೇಜಿನಲ್ಲಿ ಪದವಿ ಪಡೆದ ಇವರು ಅಮೆರಿಕದಲ್ಲಿರುವ ಏರ್‌ ವಾರ್‌ ಕಾಲೇಜಿನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿ ತೇರ್ಗಡೆಯಾಗಿದ್ದರು. ವಾಯು ಸೇನಾ ಮೆಡಲ್‌ ಮತ್ತು ವಿಶಿಷ್ಟ ಸೇವಾ ಮೆಡಲ್‌ ಸಹ ಇವರಿಗೆ ಸಿಕ್ಕಿದೆ.

    ಮೀರಾಜ್‌ -2000, ಮಿಗ್‌ 21, ಕಿರಣ್‌ ವಿಮಾನವನ್ನು ಅಪಘಾತ ರಹಿತವಾಗಿ ಚಲಾಯಿಸಿದ ಅನುಭವ ಇವರಿಗೆ ಇದೆ. 3 ಸಾವಿರ ಕಿ.ಮೀ ಹಾರಾಟದ ಅನುಭವ ಹೊಂದಿದ್ದ ಕಾರಣ  ಹಿಲಾಲ್‌ ಅಹ್ಮದ್ ಅವರಿಗೆ ರಫೇಲ್‌ ಉಸ್ತುವಾರಿಯನ್ನು ನೀಡಲಾಗಿತ್ತು.

    ಮೊದಲ ಬ್ಯಾಚ್‌ನ 10 ಯುದ್ಧ ವಿಮಾನಗಳ ಪೈಕಿ 5 ಯುದ್ಧ ವಿಮಾನಗಳು ಇಂದು ಭಾರತಕ್ಕೆ ಬರುತ್ತಿದ್ದು ಹರ್ಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ವಿಮಾನಗಳು ನಿಯೋಜನೆಗೊಳ್ಳಲಿವೆ.

    2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು(28 ಸಿಂಗಲ್‌ ಸೀಟರ್‌, 8 ಡಬಲ್‌ ಸೀಟರ್‌) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್‌ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್‌ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್‌ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

    ರಫೇಲ್ ವಿಶೇಷತೆ ಏನು?
    ರಫೇಲ್‌ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮೀ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ಭಾರತದ ಬೇಡಿಕೆ ಏನಿತ್ತು?
    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿತ್ತು.